ಹೆದ್ದಾರಿ ಭಾಗ ೧೭
೧೫/೫/೨೦೨೦
ಸತೀಶನ ಕಾಲೇಜು ಶಿಕ್ಷಣ
ನಲವತ್ತು ವರ್ಷವಾದರೂ ಮುಖದಲ್ಲಿ ಕಾಂತಿ ಕುಗ್ಗಿರಲಿಲ್ಲ ,ಕೆಂಪಗೆ ತೊಂಡೆ ಹಣ್ಣಿನಂತಹ ಬಣ್ಣದ, ಗುಂಡು ಗುಂಡು ಮುಖ, ಅರು ಅಡಿ ಎತ್ತರದ ಆಜಾನುಬಾಹು, ನಲವತ್ತರಲ್ಲೂ ಇಪ್ಪತ್ತರ ಯುವಕನಂತೆ ಕಾಣುವ ಇವರನ್ನು ನೋಡುವ ಮಹಿಳೆಯರು ಮತ್ತೊಮ್ಮೆ ತಿರುಗಿ ನೋಡಲು ಮರೆಯುತ್ತಿರಲಿಲ್ಲ,ಇಸ್ತ್ರಿ ಮಾಡಿದ ಬಿಳಿ ಮರಸೈಜ್ ಪಂಚೆ,ಬಿಳಿ ಅಂಗಿ ತೊಟ್ಟು ಕಾಲಿನಲ್ಲಿ ಆನೆಗಳಿದ್ದರೂ ಆ ಕಡೆ ಈ ಕಡೆ ಕಾಲು ಹೊರಳಿಸಿ ನಡೆಯುವದೂ ಒಂದು ರೀತಿ ವಿಭಿನ್ನವಾಗಿತ್ತು ,ಆ ಊರಿನ ಪಡ್ಡೆ ಹುಡುಗರು ಅದನ್ನೇ ಸ್ಟೈಲ್ ಎನ್ನುತ್ತಿದ್ದರು . ಸೂರ್ಯ ನೆತ್ತಿಯ ಮೇಲಿಂದ ಪಶ್ಚಿಮದ ಕಡೆ ತಿರುಗಿ ಎರಡು ಗಂಟೆಯಾಗಿ ಸೂರ್ಯನ ಪ್ರಖರತೆ ಕಡಿಮೆಯಾಗುತ್ತಾ ಬಂದರೂ ಮುಕುಂದಯ್ಯ ಉಟ್ಟ ಉಡುಪಿನ ಹೊಳಪು ,ಅವರ ಮುಖದಲ್ಲಿ ಸಂತಸದ ಕಾಂತಿ ಕಡಿಮೆಯಾಗಿರಲಿಲ್ಲ .ಅಳಿಯ ಇಡೀ ತಾಲೂಕಿಗೆ ಅತಿಹೆಚ್ಚಿನ ಅಂಕ ಗಳಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದು ಇನ್ನೂ ಎದೆಯುಬ್ಬಿಸಿ ಊರಮುಂದೆ ನಡೆಯುತ್ತಿದ್ದರು ಮುಕುಂದಯ್ಯ.
ಏನಣ್ಣ ನಿಮ್ ಅಳಿಯ ಒಳ್ಳೆ ನಂಬರ್ ತಗ್ದು ಪಾಸಾಗವ್ನೆ? ಬಾಳ ಸಂತೋಸ ಪಾಪ ತಂದೆ ಇಲ್ದಿರೋ ಮಗುನ ನೀವು ಸೆನ್ನಾಗಿ ಓದಿಸಿದಿರಿ ಕಣಣ್ಣ ಅಕ್ಕನ ಕ್ರಿಯಾ ಇಡಿದ್ರಿ ಮಾರಮ್ಮ ನಿಮ್ಮನ್ನು ಕಾಪಾಡ್ತಾಳೆ ಬಿಡಣ್ಣ " ಈಗೆ ಅಳಿಯನ ಬಗ್ಗೆ ,ತನ್ನ ಬಗ್ಗೆ ಮೂಡಲಪ್ಪ ಹೊಗಳುವುದಕ್ಕೆ ಮನದಲ್ಲೇ ಸಂತಸ ಪಟ್ಟರೂ
" ಅಯ್ಯೋ ನಮ್ಮದೇನಿದೆ ಅದರಲ್ಲಿ ಡೊಡ್ಡಸ್ತಿಕೆ ? ಅವ್ನು ಸೆನಾಗಿ ಓದಿದ ನಾವು ಸ್ವಲ್ಪ ಸಪೋರ್ಟ್ ಮಾಡಿದ್ವಿ ಅಷ್ಟೇ ಬಾ ಟೀ ಕುಡಿ " ಎಂದು ಬ್ರಮ್ಮಿ ಹೋಟೆಲ್ ಕಡೆ ಇಬ್ಬರೂ ಹೊರಟರು.
" ಬ್ರಮ್ಮಿ ಎರಡು ಟೀ ಕೊಡಪ್ಪ"
"ಆತಣ್ಣ ಏನಣ್ಣ ನಿಮ್ ಹುಡ್ಗ ಚೆನಗ್ ನಂಬರ್ ತಕ್ಕಂಡದನಂತೆ ಮದ್ಯಾನ್ದಿಂದ ನಮ್ ಹೋಟಲ್ನಲ್ಲಿ ಅದೇ ಮಾತು"
" ಊಂಕಣ ಇಡೀ ತಾಲೂಕಿಗೆ ಫಸ್ಟ್ ಬಂದವ್ನೆ ನಾಡಿದ್ದು ಬಿ ಇ ಓ ಕರಿಸಿ ಸನ್ಮಾನ ಮಾಡ್ತಾರಂತೆ "ಎಂದು ಬೀಗಿದರು ಮುಕುಂದಯ್ಯ .
"ಏ ಮುಕುಂದ ಎಲ್ಲಲೆ ಸ್ವೀಟ್ " ಗೆಳೆಯ ರಾಮಣ್ಣ ಕೇಳಿದ
" ಬಾರಲೆ ಟೀ ಕುಡಿ ಬ್ರಮ್ಮಿ ಇವನಿಗೂ ಟೀ ಕೊಡಪ್ಪ "
" ಬರೀ ಟೀನಲ್ಲೆ ಮುಗುಸ್ತಿಯಾ ಮಗನೆ"
" ಮತ್ತೇನು ನಮ್ಮೂರಲ್ಲಿ ಬೇಕರಿ ಐತೇನಲ ಹಿರಿಯೂರಿಗೆ ಹೋದಾಗ ಕೊಡುಸ್ತಿನಿ ಈಗ ಬೇಕಾದರೆ ತಿಂಡಿ ತಿಂದು ಮುಚ್ಕೆಂಡು ಟೀ ಕುಡಿ"
"ಅದ್ಯಂಗ್ ಮುಚ್ಕೊಂಡು ಟೀ ಕುಡಿಯಾಕ್ ಆಗುತ್ತಲೆ"
ಸ್ನೇಹಿತರ ಆತ್ಮಿಯ ಮಾತು ಕೇಳಿ "ನೀವಿಬ್ಬರೂ ಹೋಟೆಲ್ಗೆ ಬಂದರೆ ಬೇಜಾರನೆ ಇರಲ್ಲ ಕಣಣ್ಣ" ಅಂದ ಬ್ರಮ್ಮಿ
"ಆತೇಳಪ್ಪ ಮಾಡಾ ಕೆಲ್ಸ ಬಿಟ್ಟು ನಾಳೆಯಿಂದ ಇಲ್ಲೇ ಕತುಕಮ್ತೀವಿ"
ಹೊಟೆಲ್ ಒಳಗಿರುವ ಇತರೆ ಗಿರಾಕಿಗಳು ನಕ್ಕರು.
"ಹುಡುಗ ಚೆನಾಗ್ ಓದಂಗವ್ನೆ ನಮ್ಮೂರು ಕಾಲೇಜ್ ಬ್ಯಾಡ ಇಲ್ಲಿ ಬರೀ ಆರ್ಟ್ಸ್, ಕಾಮರ್ಸ್ ಮಾತ್ರ ಇರೋದು ,ಆರ್ಟ್ಸ್ ಓದಿ ನಮ್ಮಂಗೆ ನೇಗ್ಲು ಹಿಡಿಯಾದ್ ಬ್ಯಾಡ, ಅವ್ನ ಹಿರಿಯೂರು ಜ್ಯೂನಿಯರ್ ಕಾಲೇಜಿಗೆ ಸೇರಿಸಿ ಸೈನ್ಸ್ ಕೊಡುಸು " ಟೀ ಕುಡಿಯುತ್ತಾ ಸ್ನೇಹಿತನಿಗೆ ಸಲಹೆ ನೀಡಿದರು ರಾಮಣ್ಣ
" ನಾನು ಅಂಗೆ ಅಂದ್ಕಂಡಿದಿನಿ,ಸೈನ್ಸ್ ಓದಿಸಿ ಡಾಕ್ಟೋ ,ಇಂಜಿನಿಯರೊ ಓದ್ಸಣಾ
ಕೊನೆ ಪಕ್ಸ ಬಿಎಸ್ಸಿ ಎಜಿ ನಾದರೂ ಮಾಡ್ಸಣ "
"ಆತು ಅಂಗೆ ಮಾಡು ನಮ್ಮನು ಎಸ್ಸೆಸ್ಸೆಲ್ಸಿ ನೆ ಪಾಸ್ ಮಾಡ್ಲಿಲ್ಲ ಕಳ್ ನನ್ ಮಗ ನಾನು ಅವನ್ ಇಂಜಿನಿಯರ್ ಓದ್ಲಿ ಅಂತ ಆಸೆ ಇತ್ತು"
" ಅವನು ನಿನ್ ಮಗ ಅಲ್ವೇನಲ ,ನೀನು ಎಸ್ಸೆಸ್ಸೆಲ್ಸಿ ನಾಕು ಸತಿ ಡುಂಕಿ ಹೊಡಿಲಿಲ್ವೆ."
" ಸುಮ್ಕಿರಲೆ ನಿಮ್ಮಜ್ಜಿ ,ಮಾರ್ಯಾದೆ ಕಳಿಬ್ಯಾಡ ,ಎಮ್ಮೆ ಹಾಲ್ಕರಿಬೇಕು ನಾ ಬತ್ತಿನಿ ಸೋಮವಾರ ಹಿರಿಯೂರಿಗೆ ಕರ್ಕೊಂಡು ಹೋಗಿ ಸ್ವೀಟ್ ಕೊಡಿಸ್ಬೇಕು ಮರಿಬ್ಯಾಡಲೆ" ಎನ್ನುತ್ತಾ ಮನೆ ಕಡೆ ಹೊರಟರು ರಾಮಣ್ಣ.
ಹೀಗೆ ಅಂದು ಹೋಟೆಲ್ಗೆ ಬಂದವರಿಗೆಲ್ಲ ಅವರಿಗೆ ಗೊತ್ತಿಲ್ಲದಿದ್ರೂ ಸತೀಶನ ರಿಸಲ್ಟ್ ಅನ್ನು ಬ್ರಮ್ಮಿ ಜ್ಞಾಪಿಸಿ ಅವರಿಗೆ ತಿಂಡಿ ಟೀ ಕೊಡುತ್ತಿದ್ದ ,ಇದಕ್ಕೆ ಸಿದ್ದರಾಗೆ ಜೇಬಿನಲ್ಲಿ ದುಡ್ಡು ತಂದಿದ್ದರು ಮುಕುಂದಯ್ಯ. ಸಂಜೆ ಬುಡ್ಡಿ ಹಚ್ಚುವ ವೇಳೆಗೆ
"ಎಷ್ಟಾತಪ್ಪ ಬಿಲ್ಲು " ಕೇಳಿದರು ಮುಕುಂದಯ್ಯ
" ಅಣ್ಣ ಮುನ್ನೂರಾ ಅರವತ್ತೆರಡು" ಅಂದ ಬ್ರಮ್ಮಿ
ಮುನ್ನೂರ ಅರವತ್ತೈದು ರುಪಾಯಿ ಕೊಟ್ಟು, ಚಿಲ್ಲರೆ ನೀನೆ ಇಟ್ಕ ಅಂದು ಮನೆ ಕಡೆ ಹೊರಟರು ಮುಕುಂದಯ್ಯ .
"ಏನ್ ಬ್ರಮ್ಮಿ ಬಾಳ ಖುಷಿಯಿಂದ ಇದಿಯಾ ಲಾಟರಿ ಹೊಡಿತಾ" ಆಗ ತಾನೆ ಬಂದ ಗಿರೀಶ ಕೇಳಿದ
"ಈ ವಾರವೆಲ್ಲ ಮುನ್ನೂರು ರುಪಾಯಿ ವ್ಯಾಪಾರ ಆಗಿರ್ಲಿಲ್ಲ ಇವತ್ತೊಂದೆ ದಿನ ಇಷ್ಟು ವ್ಯಾಪಾರ ಆತು ಚೆನ್ನಾಗ್ ನಂಬರ್ ಬಂದು ಆ ಹುಡ್ಗನ್ ಮುಂದಿನ ವಿದ್ಯಾಭ್ಯಾಸ ಚೆನ್ನಾಗಿರಲಿ" ಎಂದು ಹರಸಿದ ಬ್ರಮ್ಮಿ, ಬಹುಶಃ ಆಗ ಅಶ್ವಿನಿ ದೇವತೆಗಳು ತಥಾಸ್ತು ಅನ್ನಲಿಲ್ಲ ಅನಿಸುತ್ತದೆ.
" ಹೋ ಎಸ್ಸೆಸ್ಸೆಲ್ಸಿ ಪಾಸ್ ಆಗಿಬಿಟ್ರೆ ಹೀರೊ ಆಗಲ್ಲ ಮುಂದೆ ಇರಾದು, ಪಿ ಯು ಸಿ ನಲ್ಲ ಡುಂಕಿ ಹೊಡೆದ್ ಬಿಟ್ರೆ" ಎಂದು ಇನ್ನೂ ಮಾತು ಮುಗಿಸಿರಲಿಲ್ಲ ಬಾಗಿಲ ಬಳಿ ಹಲ್ಲಿ ಲೊಚ್ ಲೊಚ್ ಎಂದು ಲೊಚಗುಟ್ಟಿತು.
ಇದರಿಂದ ಬೇಸರಗೊಂಡಂತೆ ಕಂಡ ಬ್ರಮ್ಮಿ " ಹುಂ ಏನ್ ಕೊಡಾನಪ್ಪ"
" ಒಂದ್ ಪ್ಲೇಟ್ ಕಾರ ಮಂಡಕ್ಕಿ ಟೀ" ಕೊಡು
"ಹಳೆ ಬಾಕಿ ಕೊಡಲಿಲ್ಲ ನೀವು" ಮುಖ ಗಂಟಿಕ್ಕಿ ಕೇಳಿದ ಬ್ರಮ್ಮಿ
" ಏ ನಾನೇನ್ ಓಡೋಗಲ್ಲ ಇರಾ ಮಾರಾಯ ಕಡ್ಲೇ ಕಾಯಿ ಮಾರಿಲ್ಲ ಮುಂದ್ಲು ವಾರ ಕೊಡ್ತಿನಿ"ಗಿರೀಶ ಹೇಳಿದ
"ಈ ಮೂರ್ತಿಂಗಳು ಬರೀ ಇದೇ ಹೇಳ್ತಿಯಲ್ಲ ನಾವ್ ಎಂಗ ಹೋಟೆಲ್ ನಡೆಸ್ಯಾದು ನೀನೆ ಹೇಳಪ್ಪ"
"ಆತು ಬಿಡಪ್ಪ ನಾಳೆ ಕೊಡ್ತಿನಿ ಟೀ ಕೊಡು" ಎತ್ತರದ ಧ್ವನಿಯಲ್ಲಿ ಕೇಳಿದ ಗಿರೀಶ
ಅವನು ಟೀ ಕುಡಿದು ಸಂಜೆಗತ್ತಲಲ್ಲಿ ಮಾಯವಾದರೂ ಬ್ರಮ್ಮಿ ಏನೋನೋ ಗೊನಗುತ್ತಾ ಟೀ ಲೋಟ ತೊಳೆಯಲು ಶುರುಮಾಡಿದ.
ಸತೀಶನನ್ನು ಹಿರಿಯೂರಿನ ಪದವಿ ಪೂರ್ವ ಕಾಲೇಜಿಗೆ ಸೇರಿಸಲು ತೀರ್ಮಾನ ಮಾಡಿರುವುದಾಗಿ ಅಮ್ಮನಿಗೆ ವರದಿ ಒಪ್ಪಿಸಿದರು ಮುಕುಂದಯ್ಯ.
" ಏನೋ ಓದಾ ಇಸ್ಯಾದಾಗ ನಂಗೇನು ಗೊತ್ತಾಗಲ್ಲ ಒಟ್ನಲ್ಲಿ ಈ ಹುಡುಗ ಸೆಂದಾಗಿ ಓದಿ ಕೆಲ್ಸ ಕ್ಕೆ ಸೇರಿ ಅವರಮ್ಮನ್ ಸೆನ್ನಾಗಿ ನೋಡ್ಕಂಡ್ರೆ ಅಷ್ಟೇ ಸಾಕು.ಪಾಪ...ಅವ್ಳು ಪಡೋ ಕಷ್ಟ ನೋಡಾಕಾಗಲ್ಲ" ಎಂದರು ಸರಸ್ವತಜ್ಜಿ
"ನಾಳೆ ಬುಧವಾರ ದಿನ ಚೆನ್ನಾಗೈತಂತೆ ಆಯತಾರಪ್ಪ ಹೇಳೆದಾರೆ ನಾಳೆ ಹೋಗಿ ಇವ್ನ ಕಾಲೇಜ್ ಗೆ ಸೇರಿಸ್ಬತ್ತಿನಿ"
"ಅತು ಅಂಗೆ ಮಾಡಪ್ಪ" . ಕುಟ್ನಿ ಪಕ್ಕದಲ್ಲಿ ಇಟ್ಟು ಮಲಗಲು ಹಾಸಿಗೆಗೆ ಹೋದರು ಸರಸ್ವತಜ್ಜಿ.
ಮೊದಲ ಬಾರಿಗೆ ತನಗಾಗೆ ಹೊಲಿಸಿದ ನೀಲಿ ಬಣ್ಣದ ಪ್ಯಾಂಟ್ ಧರಿಸಿ ಸ್ವಲ್ಪ ಉದ್ದವಾದರೂ ಕೆಳಗೆ ಮಡಿಚಿಕೊಂಡ ,ಈ ಮೊದಲು ಪ್ಯಾಂಟ್ ಧರಿಸಿದ್ದರೂ ಅದು ಮುರಾರಿಯ ಹಳೆ ಪ್ಯಾಂಟ್ ಅದನ್ನು ಹಾಕಿಕೊಂಡರೆ ಗೆಳೆಯರು" ಏನಪ್ಪ ಮಾವನ್ ಪ್ಯಾಂಟ್ ಹಾಕ್ಕೊಂಡಾ ,ನಾಳೆ ಮಾವನ್ ಪಂಚೆ ಉಟ್ಕಂಡ್ ಬರಬ್ಯಾಡೊ" ಎಂದು ಹಂಗಿಸುತ್ತಿದ್ದರು.ಅವರಿಗೆಲ್ಲ ಒಂದು ಸಾರಿ ನನ್ನ ಹೊಸ ಪ್ಯಾಂಟ್ ತೋರಿಸಿ ಬರಬೇಕು ಎನಿಸಿತು ,ಬ್ಯಾಡ ಮಾವ ಬೆಳಿಗ್ಗೆ ಏಳು ಗಂಟೆಗೆ ಜೈರಾಂ ಬಸ್ ಗೆ ಹೋಗ್ಬೇಕು ಅಂದಿದಾರೆ ಈಗಾಗಲೇ ಆರುಕಾಲು, ಇನ್ನೂ ಮೊಸರನ್ನ ತಿಂದು ಹೊರಡಬೇಕು ಎಂದು ಕನ್ನಡಿ ಮುಂದೆ ನಿಂತ .ನಾನು ಸ್ವಲ್ಪ ಉದ್ದ ಹಾಗಿದಿನಾ? ಅವನೆ ಪ್ರಶ್ನೆ ಹಾಕಿಕೊಂಡ ,ಏ ಎರಡು ತಿಂಗಳಿಗೆ ಉದ್ದ ಆಗ್ತಾರಾ? ನನಗೆ ಎಸ್ಸೆಸ್ಸೆಲ್ಸಿ ಚೆನ್ನಾಗಿ ನಂಬರ್ ಬಂದಿದ್ದ ಕ್ಕೆ ನನಗೇನಾದರೂ ಜಂಭ ಬಂತ? ಏ ಎಂತದು ಇಲ್ಲ ಇದೆಲ್ಲಾ ಯಾಕೆ ನನಗೆ ಇವತ್ತು ಇಂಗೆ ತಲೆಗೆ ಬರೊತ್ತೋ ಎಂದು ದೇವರ ಮನೆಗೆ ಹೋಗಿ ಹಣೆಗೆ ತಿರುಪತಿಯಿಂದ ತಂದ ವೆಂಕಟರಮಣಸ್ವಾಮಿಯ ಬಿಳಿ ನಾಮ ತೇದು ಹಣೆಗೆ ಹಚ್ಚಿಕೊಂಡು ಅದರ ಮೇಲೆ
ಮಾರಮ್ಮನ ಗುಡಿಯಿಂದ ತಂದ ಅರಿಶಿಣ ಭಂಡಾರ ಹಚ್ಚಿಕೊಂಡು ಹೊರಬಂದ.
" ಅನ್ನ ಮೊಸರು ತಟ್ಟೆಗೆ ಹಾಕಿದಿನಿ ಬಾರೊ ಸತೀಶ ತಿನ್ನು" ತಿಮ್ಮಕ್ಕ ಕೂಗಿದರು
ಬೆಳಿಗ್ಗೆ ಬೆಳಿಗ್ಗೆ ಅನ್ನ ಮೊಸರು ತಿನ್ನಲು ಮನಸಿಲ್ಲದಿದ್ದರೂ ತಿನ್ನಲೇಬೇಕು .ಸದ್ಯ ಇವನ ಪುಣ್ಯ ಬಿಸಿ ಅನ್ನ ಮೊಸರು ಸಿಗುತ್ತಿದೆ. ಕೆಲವೊಮ್ಮೆ ಬೆಳಿಗ್ಗೆ ಮುಕುಂದಯ್ಯ ಮತ್ತು ಇತರರು ಯಾವುದಾದರೂ ಊರಿಗೆ ಹೋಗಬೇಕಾದರೆ ,ಬಿಳಿಯಪ್ಪ ಬೆಳಿಗ್ಗೆ ಬೇಸಾಯಕ್ಕೆ ಹೊರಟರೆ ರಾತ್ರಿ ಉಳಿದ ಮುದ್ದೆಯನ್ನು ಮೊಸರಲ್ಲಿ ಹಾಕಿ ಅದನ್ನು ಕಿವುಚಿಕೊಂಡು ತಿಂದು ಹೋಗುತ್ತಿದ್ದರು .ಅವರಿಗೆ ಅನ್ನದ ಬಗ್ಗೆ ಅಷ್ಟು ಗೌರವ ಒಮ್ಮೆ ಸತೀಶ ಸಾರು ಚೆನ್ನಾಗಿಲ್ಲ ಎಂದು ತಟ್ಟೆಯಲ್ಲಿ ಸ್ವಲ್ಪ ಮುದ್ದೆ ಬಿಟ್ಟು ಅದನ್ನು ಕಲ್ಲ ಮುಸುರೆ ಬಾನಿಗೆ ಹಾಕುವುದ ನೋಡಿದ ಮುಕುಂದಯ್ಯ
" ಏನಪ್ಪ ಸಾವ್ಕಾರ ಮುದ್ದೆ ಅಂಗ್ ಬಿಸಾಕ್ತಿಯಲ್ಲ ಅನ್ನದ ಬೆಲೆ ಗೊತ್ತೇನೊ ನಿಂಗೆ ಒಂದ್ ಸೇರು ರಾಗಿ ಬೆಳಿಯಾಕ್ ನಾವು ಎಷ್ಟ್ ಕಷ್ಟ ಪಡ್ತಿವಿ ಗೊತ್ತೇನಪ್ಪ ?ಇವತ್ತೂ ನಮ್ಮೂರು ಹಟ್ಯಾಗೆ ಎಷ್ಟೋ ಜನ ಒಂದತ್ತು ಊಟ ಇಲ್ದೆ ಬರೀ ನೀರ್ಕುಡ್ದು ಮಕ್ಕಂತಾರೆ ಗೊತ್ತ ನಿನಗೆ? ಅಷ್ಟೇ ಯಾಕೆ ನಮ್ಮಕ್ಕ ಅಂದರೆ ನಿಮ್ಮಮ್ಮ ಒಂದು ತುತ್ತುಗೋಸ್ಕರ ಎಷ್ಟು ಕಷ್ಟ ಪಡ್ತಾಳೆ ಗೊತ್ತೇನಪ್ಪ ನಿನಗೆ? ನೀನು ಇಂಗೆ ತಿನ್ನಾ ಅನ್ನ ಪೋಲು ಮಾಡಿದ್ರೆ ಮುಂದೆ ನಿನಗ್ ಒಂದು ತುತ್ತು ಅನ್ನ ಸಿಗಲ್ಲ, ಮೈಮೇಲೆ ಪ್ರಜ್ಞೆ ಇರಲಿ" ಈಗೆ ಸುದೀರ್ಘವಾದ ತಿಳುವಳಿಕೆ ಹೇಳಿದರು.
ಅಂದಿನಿಂದ ಸತೀಶ ಊಟ ಮಾಡಿದ ತಟ್ಟೆ ತೊಳೆಯಲು ತಿಮ್ಮಕ್ಕನಿಗೆ ಬಹಳ ಸುಲಭವಾಗಿತ್ತು.
"ಇನ್ನೊಂದು ಸ್ವಲ್ಪ ಅನ್ನ ಹಾಕನೇನಾ? ಅನ್ನ ಬೆಣ್ಣೆ ತಿನ್ನು ಸೆನ್ನಗಿರುತ್ತೆ". ಎಂದು ಬಡಿಸಿದರು ತಿಮ್ಮಕ್ಕ.
ಊಟ ಮಾಡಿ ಕೈತೊಳೆದುಕೊಂಡು ವಲ್ಲೀಬಟ್ಟೆಯಲ್ಲಿ ಕೈ ಕರೆಸಿಕೊಂಡು ಮತ್ತೊಮ್ಮೆ ದೇವರಿಗೆ ಕೈಮುಗಿದು ಅಜ್ಜಿ ಕಾಲಿಗೆ ಬಿದ್ದಾಗ
" ಸೆನ್ನಾಗಿ ಓದಪ್ಪ ಆ ದೇವಿ ನಿನಿಗೆ ಒಳ್ಳೆದು ಮಾಡಲಿ ಎಂದು ಬೊಚ್ಚು ಬಾಯಲ್ಲಿ ಆಶೀರ್ವದಿಸಿದಾಗ ಎಲೆಅಡಿಕೆಯ ಹನಿಗಳು ಅಜ್ಜಿಯ ಬಾಯಿಂದ ಮೊಮ್ಮಗನ ಮೇಲೆ ತೀರ್ಥದಂತೆ ಬಿದ್ದವು.
ಮಾವನ ಜೊತೆ ಮನೆಯಿಂದ ಬಸ್ಟಾಂಡ್ ಗೆ ಬೀದಿಯಲ್ಲಿ ನಡೆಯುವಾಗ ಏನೊ ಖುಷಿ , ಮಾವ ಮುಕುಂದಯ್ಯ ಸಹ ಹೆಮ್ಮೆಯಿಂದ ಅಳಿಯನ ಕರೆದುಕೊಂಡು ಬೀದಿಯಲ್ಲಿ ಹೋಗುವಾಗ ಕೆಲವರು ಸಂತಸಪಟ್ಟರೆ ಕೆಲವರು ಇಳಗೊಳಗೆ ಉರಿದುಕೊಳ್ಳುತ್ತಿದ್ದರು.
ಹಿರಿಯೂರಿಗೆ ಮೂರ್ನಾಲ್ಕು ಬಾರಿ ಮಾವಂದಿರ ಜೊತೆ ಹೋಗಿ ಬಂದಿದ್ದ ಸತೀಶ ಈ ಬಾರಿ ಹೋಗುತ್ತಿರುವುದೂ ಮಾವನ ಜೊತೆಗಾದರೂ ಮನದಲ್ಲೇ ಒಂದು ಸಂತಸ, ಒಂದು ಕಾತರ, ಒಂದು ರೀತಿಯ ಅವ್ಯಕ್ತ ಭಯ ,ಕಾಲೇಜು ಯಾವ ರೀತಿಯಲ್ಲಿ ಇರಬಹುದು, ಸ್ನೇಹಿತರು ಎಂತವರು ಸಿಗುವರೋ? ಎಂತಹವರು ಇದ್ದರೇನು? ಸದ್ಯ ನನಗೆ ಬೇಕಾದವರು ಒಬ್ಬರು ಇರ್ತಾರಲ್ಲ?! ಅಷ್ಟೇ ಸಾಕು. ಎಂದು ಯೋಚಿಸುತ್ತಾ ಬಸ್ಸಿನಲ್ಲಿ ನಿಂತಿದ್ದ. ಬಸ್ ತುಂಬಾ ಹಾಲು ಮೊಸರು ಮಾರಲು ಯರಬಳ್ಳಿಯ ಗೊಲ್ಲರಹಟ್ಟಿಯಿಂದ ಜೈರಾಂ ಬಸ್ಸಿಗೆ ಬರುತ್ತಿದ್ದರು. ಅವರಿಂದಾಗಿ ಇಡೀ ಬಸ್ ನಲ್ಲಿ ಹಾಲು ಮೊಸರಿನ ವಾಸನೆ ,ಶನಿವಾರ ಆದರೆ ಕುರಿಮಾರ್ಕೆಟ್ ಇರುವ ಕಾರಣ ಬಸ್ನಲ್ಲಿ ಕುರಿಗಳ್ಯಾರೊ ಮನುಷ್ಯರ್ಯಾರೋ ಎಂದು ಹುಡುಕುವುದು ಕಷ್ಟವಾಗುತ್ತದೆ . ಬಸ್ ಒಳಗೆ ನಿಲ್ಲಲು ಜಾಗ ಸಾಲದೆ ಬಸ್ ಮೇಲೆ ಹತ್ತಿ ಪ್ರಯಾಣ ಮಾಡುವದು ಅಲ್ಲಿಯ ಜನರಿಗೆ ಮಾಮೂಲಾಗಿದೆ.
ಅಂದು ಬುಧವಾರವಾದ್ದರಿಂದ ಅಂತ ರಷ್ ಇರಲಿಲ್ಲ
" ನೀನು ಭೂದೇವಮ್ಮನ ಮಗ ಅಲ್ವೇನಪ್ಪ ನಿಂದು ಸೆನ್ನಾಗಿ ನಂಬರ್ ಬಂದೈತಂತೆ ನಮ್ಮ ಹಟ್ಟೀಲಿ ಜನ ಮಾತಡ್ತಿದ್ದರು ಕಣಪ್ಪ ನಿಮ್ಮವ್ವ ನಾನು ಚಿಕ್ಕವ್ರಾಗಿದ್ದಾಗ ಜೊತೆಗೆ ಆಡ್ತಿದ್ವಿ, ನಿಮ್ಮವ್ವ ಬಾಳ ಒಳ್ಳೇಳು ಕಣಪ್ಪ ,ಪಾಪ ನಿಮ್ಮಪ್ಪ ಸಿಕ್ಕ ವಯಸ್ಗೆ ಸತ್ತು ಹೋಗಿಬಿಟ್ರು, ಏನೋ ನಿಮ್ ಮಾವರು ಓದಸ್ತಾರೆ ಸೆನ್ನಾಗಿ ಓದಿ ನಿಮ್ಮವ್ವನ ಸಾಕಪ್ಪ" ಎಂದರು ಗೊಲ್ಲರ ಹಾಲು ಮಾರುವ ಹೆಂಗಸು ಎಲ್ಲೋ ನೋಡಿದ ನೆನಪು ಸತೀಶನಿಗೆ ನೆನಪಾಗಲಿಲ್ಲ
"ಆತು ಕಣಕ " ಅಂದು ಸುಮ್ಮನಾದ.
ಬಸ್ ಹರ್ತಿಕೋಟೆ ದಾಟಿ ನಮೂಜಿ ದಿನ್ನೆ ಹತ್ತುವಾಗ ವರ್ರೋ.... ವರ್ರೋ... ಎನ್ನುತ್ತಾ ತಗ್ಗು ಇದ್ದಾಗ ನಾ ಇಂಗೆ ಜೋರಾಗಿ ಹೋಗೋದ್ ಅಂತ ,ಹರ್ತಿಕೋಟೆ ದಾಟಿ ಚನ್ನಮ್ಮನಹಳ್ಳಿ ಗೇಟ್ ನಲ್ಲಿ ಬಸ್ ನಿಂತಿತು. ಉದ್ದನೆಯ ಲೇಖಕ್ ನೋಟ್ಬುಕ್ ಹಿಡಿದು ಲಂಗ ದಾವಣಿ ಹಾಕಿದ ಒಂದು ಹುಡುಗಿ ಬಸ್ ಹತ್ತಿ ಒಳಗೆ ಹೆಚ್ಚು ರಷ್ ಇದ್ದದರಿಂದ ಅಲ್ಲೆ ಮೆಟ್ಟಿಲ ಬಳಿ ಒಂದು ಕೈಯಲ್ಲಿ ನೋಟ್ ಬುಕ್ ಒಂದು ಕೈಯಲ್ಲಿ ಕಂಬಿಹಿಡಿದು ನಿಂತಳು.ಸತೀಶ ಅಕಸ್ಮಾತ್ ಆಗಿ ಅವಳ ನೋಡಿದಾಗ ಇದ್ದಕ್ಕಿದ್ದಂತೆ ಸುಜಾತಳ ನೆನಪಾಯಿತು.
ಮೊನ್ನೆ ಮ್ಯಾಗಳ ಮನೆ ಸೇದೋ ಬಾವಿಯ ಹತ್ತಿರ ನೀರು ಸೇದೋವಾಗ ಸಿಕ್ಕಿದ್ದ ಅವಳು ಬೇಕಂತಲೆ ರಾಟೆಯಿಂದ ಹಗ್ಗ ಕೆಳಗೆ ಜಾರಿಸಿ ಇದನ್ನು ಹಾಕ್ಕೊಡು ಬಾರ ಸತೀಶ ಎಂದು ಮಾತಿಗೆಳೆದು ನಾನು ಹಿರಿಯೂರು ಕಾಲೇಜ್ ಗೆ ಸೇರುವೆ ಎಂದಿದ್ದಳು ಆಗಿನಿಂದ ಅವನಲ್ಲಿ ಏನೋ ಸಂತೋಷ ಅಂತೂ ನಮ್ ಹುಡ್ಗಿ ಹಿರಿಯೂರು ಕಾಲೇಜ್ ಸೇರ್ತಾಳೆ ನಮ್ಮ ಮಾವನು ಸಹ ಅಲ್ಲಿಗೆ ಸೇರಿಸ್ತಾರೆ ಸ್ವರ್ಗಕ್ಕೆ ಮೂರೇ ಗೇಣು ಎಂದು ನೀರು ತಂದು ಮನೆಗೆ ಇಟ್ಟು ರೇಡಿಯೋದಲ್ಲಿ "ಯೋಗಾ....ಯೋಗಾ....ಯೋಗ ಯೋಗ ....ನಾನು ನೀನು ಸೇರೊ ಯೋಗ ..ಈಗ..." ಹಾಡು ಬರುತ್ತಿತ್ತು ಅದರ ಸೌಂಡ್ ನಾಬ್ ಎಷ್ಟಿದೆಯೋ ಅಷ್ಟು ಸೌಂಡ್ ಕೊಟ್ಟು ಕುಣಿಯಲಾರಂಬಿಸಿದ ಅಡಿಗೆ ಮನೆಯಿಂದ ಬಂದು ಸೌಂಡ್ ಕಡಿಮೆ ಮಾಡಿ "ಕಿವಿ ಏನಾಗ್ ಬೇಕು ಕಿರ್ರೋ ಅನ್ನುತ್ತೆ ಏನಾಗೈತೆ ನಿನಿಗೆ"ಎಂದರು ತಿಮ್ಮಕ್ಕ
" ಏ ಏನೂ ಇಲ್ಲ ಕಣಕ್ಕ ಸುಮ್ಮನೆ " ಅಂದಿದ್ದ ಸತೀಶ
" ಏ ಹುಡುಗ ಮುಂದಕ್ ಜರ್ಗೋ ಇಲ್ಲಿ ಹೆಣ್ಮಕ್ಕಳು ಬಸ್ ಬಾಗ್ಲಲ್ಲಿ ಅದಾರೆ"
ಎಂದು ಕಂಡಕ್ಟರ್ ಕೂಗಿದಾಗ ವಾಸ್ತವಕ್ಕೆ ಬಂದ ಸತೀಶ
" ಸುಜಾತ ನಿನ್ನೆ ನೀರ್ ಸೇದಾಕೆ ಬರ್ಲಿಲ್ಲ ಏನಾದರೂ ನಿನ್ನೆ ಕಾಲೇಜಿಗೆ ಸೇರಿ ಬಿಟ್ಟಳಾ ? ಅಥವಾ ಅವಳು ಇವತ್ತೆ ಬತ್ತಾಳೋ ? ಅವಳು ಬರದಿದ್ದರೆ? ಯಾಕ ಬರಲ್ಲ ಬಂದೆ ಬತ್ತಾಳೆ ,ಅವಳು ಸೈನ್ಸ್ ಓದಾದು ಅಂದಿದ್ಲು ಯರಬಳ್ಳಿನಾಗೆ ಎಲೈತೆ ಸೈನ್ಸ್? ಎಂದು ತಾನೆ ಅಂದುಕೊಂಡ .
ಬಸ್ ಬಾಲೇನಳ್ಳಿ ಬಿಟ್ಟು ,ನೂರಾಮೂರು ಗೇಟ್ ಬಳಿ ಜನರಿದ್ದರೂ ರಷ್ ಇರುವ ಕಾರಣ ಬಸ್ ನಿಲ್ಲಿಸದೇ ಕರೆಂಟ್ ಆಪೀಸ್ ದಾಟಿ ಹಿರಿಯೂರಿನ ಕಡೆ ಹೊರಟಿತು.
ಅಂತೂ ಹದಿನೇಳು ಕಿಲೋಮೀಟರ್ ದಾರಿಯನ್ನು ಬರೋಬ್ಬರಿ ಒಂದು ಗಂಟೆಯ ಕಾಲ ಸವೆಸಿ ಟಿ ಬಿ ಸರ್ಕಲ್ ,ತಾಲೂಕ್ ಆಪೀಸ್ ದಾಟಿ ಹಿರಿಯೂರು ತಲುಪಿದಾಗ ಎಂಟು ಗಂಟೆಯಾಗಿತ್ತು.
ಕಣಿವೆ ಮಾರಮ್ಮನ ಗುಡಿ ಬಸ್ಟಾಂಡ್ ಹತ್ತಿರ ಬಹುತೇಕ ಹಾಲು ಮಾರುವವರು ಬಸ್ ಇಳಿದರು ಸತೀಶನು ಇಳಿಯಲು ಸಿದ್ದನಾದ ಬಸ್ಸಿನ ಹಿಂಭಾಗದಲ್ಲಿ ಇದ್ದ ಮುಕುಂದಯ್ಯ ಬೇಡ ಎಂಬಂತೆ ಸನ್ನೆ ಮಾಡಿದರು.
ತಾಲೂಕು ಆಸ್ಪತ್ರೆ ಸ್ಟಾಪ್ ಬಳಿ ಇಳಿದು ದಕ್ಷಿಣ ದಿಕ್ಕಿನ ಕಡೆ ನೂರು ಹೆಜ್ಜೆ ನಡೆದ ಮಾವ ಅಳಿಯಂದಿರನ್ನು" ಸರ್ಕಾರಿ ಪದವಿ ಪೂರ್ವ ಕಾಲೇಜು ಹಿರಿಯೂರು"ಎಂಬ ಬೋರ್ಡ್ ಸ್ವಾಗತಿಸಿತು.
ಕಾಲೇಜು ಮುಂದೆ ಕಾಲೇಜು ಸೇರಲು ಅರ್ಜಿ ಪಡೆಯಲು ಒಂದು ಕ್ಯೂ ,ಅಡ್ಮಿಷನ್ ಆಗಲು ಮತ್ತೊಂದು ಕ್ಯೂ ಇತ್ತು ಮುಕುಂದಯ್ಯ ಕ್ಯೂ ನಲ್ಲಿ ನಿಂತು ಅರ್ಜಿ ಪಡೆದು ತುಂಬಿ ,
ಪೀಸ್ ಕಟ್ಟಿ ಅಡ್ಮಿಷನ್ ಮಾಡಿಸಿ, ಮುಕುಂದಯ್ಯ ನಾಳೆಯಿಂದ ಕಾಲೇಜಿಗೆ ಕಳಿಸುವೆ ಎಂದು ಪ್ರಾಂಶುಪಾಲರಿಗೆ ಹೇಳಿ ಸತೀಶನನ್ನು ಕರೆದುಕೊಂಡು ಕಾಲೇಜಿನಿಂದ ಹೊರಬಂದು ಕೈಯಲ್ಲಿ ಕಟ್ಟಿದ್ದ ಹೆಚ್ಚೆಮ್ಟಿ ಗಡಿಯಾರ ನೋಡಿದಾಗ ಮದ್ಯಾಹ್ನ ಒಂದೂವರೆಯಾಗಿತ್ತು, ಆಗಲೆ ಮುಕುಂದಯ್ಯನಿಗೆ ಆಯ್ತಾರಪ್ಪ ಹೇಳಿದ ಮಾತು ನೆನಪಾಗಿದ್ದು. " ಹನ್ನೆರಡು ಗಂಟೆ ಒಳಗೆ ಕಾಲೇಜಿಗೆ ಸೇರುಸ್ಬೇಕು. ಹನ್ನೆರಡು ಗಂಟೆ ಮೇಲೆ ರಾಹು ಕಾಲ ಶುರುವಾಗುತ್ತೆ"
"ಈಗ ನಾನು ಕಾಲೇಜಿಗೆ ಸೇರಿಸಿದ್ದು ಯಾವ ಕಾಲ ?" ಎಂದು ತಮಗೆ ಪ್ರಶ್ನೆ ಕೇಳಿಕೊಂಡರು ಮುಕುಂದಯ್ಯ.
ಬೆಳಿಗ್ಗೆ ಮೊಸರನ್ನ ತಿಂದಿದ್ದು ಬಸ್ಸಿನ ಕುಲುಕಾಟ , ಕಾಲೇಜ ಬಳಿ ಕ್ಯೂ ನಲ್ಲಿ ನಿಂತಾಗ ಯಾವಾಗ ಕರಗಿತೋ ತಿಳಿಯಲಿಲ್ಲ .
" ಬಾರೋ ಇಲ್ಲೇ ರಾಘವೇಂದ್ರ ಹೋಟೆಲ್ ನಲ್ಲಿ ಮಸಾಲೆ ದೋಸೆ ತಿಂದ್ ಹೋಗಾನ " ಎಂದು ಮುಕುಂದಯ್ಯ ಹೇಳುತ್ತಲೆ ಸತೀಶನಿಗೆ ನಾನು ಬಯಸಿದ್ದು ಮಸಾಲೆ ದೋಸೆ ಮಾವ ಹೇಳಿದ್ದು ಮಸಾಲೆ ದೋಸೆ ಎಂಬಂತೆ ಹಿರಿಹಿರಿ ಹಿಗ್ಗಿದ ,ಮೊದಲೆ ದೋಸೆ ಎಂದರೆ ಅವನಿಗೆ ಬಹಳ ಇಷ್ಟ ಅದರಲ್ಲೂ ಮಸಾಲೆ ದೋಸೆ ಎಂದರೆ ಇನ್ನೂ ಇಷ್ಟ, ಒಂದು ಬಾರಿ ಚಿಕ್ಕವನಿದ್ದಾಗ ಅಮ್ಮನ ಜೊತೆ ಹೊಳಲ್ಕೆರೆ ಯಲ್ಲಿ ಗಣೇಶ ಹೋಟೆಲ್ ನಲ್ಲಿ ತಿಂದಿದ್ದ,ರುಚಿ ಚೆನ್ನಾಗಿದ್ದರಿಂದ ಮತ್ತೊಂದು ದೋಸೆ ಕೊಡಿಸು ಎಂದು ಅಮ್ಮನಿಗೆ ದುಂಬಾಲು ಬಿದ್ದಿದ್ದ, ಬಸ್ಚಾರ್ಜಿಗೆ ಮಾತ್ರ ದುಡ್ ಸರಿಯಾಗಿದೆ ಇನ್ನೊಂದು ಸಲ ಕೊಡಿಸ್ತೀನಿ ಬಾ ಎಂದು ಅಮ್ಮ ಸಮಾಧಾನ ಮಾಡಿ ಊರಿಗೆ ಕರೆದುಕೊಂಡು ಹೋಗಿದ್ದು ಸತೀಶನಿಗೆ ನೆನಪಾಯಿತು.
ಇವೆಲ್ಲಕ್ಕಿಂತ ಮಿಗಿಲಾಗಿ ಹಿರಿಯೂರಿನ ದೋಸೆ ತಿನ್ನುವ ಆಸೆ ಹೆಚ್ಚಾಗಲು ಕಾರಣ ಮಹೇಶ್.
ಶಾಲೆಯಲ್ಲಿ ಸಮಯ ಸಿಕ್ಕಾಗಲೆಲ್ಲ " ಲೇ ನಾನು ನಮ್ಮಪ್ಪನ ಜೊತೆ ಹಿರಿಯೂರಿಗೆ ಹೋಗಿದ್ದೆ ,ರಾಘವೇಂದ್ರ ಹೋಟೆಲ್ ನಲ್ಲ ಮಸಾಲೆ ದೋಸೆ ತಿಂದೆ, ಎಂಗಿತ್ತು ಗೊತ್ತಾ ಇಷ್ಟುದ್ದ ಎಂದು ಮಾರು ತೋರಿಸುತ್ತಿದ್ದ, ಇದು ಎಷ್ಟು ಅತಿಯಾಯಿತು ಎಂದರೆ ಹಿರಿಯೂರು,ಮಸಾಲೆ ಎಂದು ಮಹೇಶ್ ಮಾತನಾಡಲು ಶುರು ಮಾಡಿದರೆ ಎಲ್ಲರೂ ಅವನಿಂದ ಓಡುತ್ತಿದ್ದರು. ಅಂದೇ ಸತೀಶನಿಗೆ ನಾನೆ ಒಂದು ದಿನ ಹಿರಿಯೂರಿನ ರಾಘವೇಂದ್ರ ಹೋಟೆಲ್ ನಲ್ಲಿ ಮಸಾಲೆ ದೋಸೆ ತಿನ್ನಬೇಕು ಅಂತ.
ಸತೀಶನ ಬಹುದಿನಗಳ ಆಸೆ ಇಂದು ನೆರವೇರಿತು ಎರಡು ದೊಡ್ಡ ಪ್ಲೇಟ್ಗಳಲ್ಲಿ ದೋಸೆ ತಂದ ಸಪ್ಲೈಯರ್ ಮುಕುಂದಯ್ಯ ಮತ ಸತೀಶನ ಮುಂದೆ ಇಟ್ಟು ಹೋದ ,ಆಗ ಸತೀಶ ಮಹೇಶ್ ಅಷ್ಟೇನೂ ಸುಳ್ಳು ಹೇಳಲಿಲ್ಲ ಈ ದೋಸೆ ಒಂದು ಮಾರಿಗಿಂತ ಸ್ವಲ್ಪ ಕಡಿಮೆ ಎಂದುಕೊಳ್ಳುತ್ತಾ ತಿಂದು ಮುಗಿಸಿದ
" ಇನ್ನೊಂದು ಬೇಕೇನೊ ದೋಸೆ " ಎಂದರು ಮುಕುಂದಯ್ಯ.
"ಉಹುಂ ಬೇಡ ಎಂದ ಸತೀಶ
" ಎರಡು ಟೀ ಕೊಡಪ್ಪ "
ಟೀ ಕುಡಿದು ಎರಡೂವರೆಗೆ ಯರಬಳ್ಳಿಗೆ ಹಿಂತಿರುಗಲು ಬಸ್ ನಿಲ್ದಾಣಕ್ಕೆ ಬಂದಾಗ
ಜನರು ಗುಂಪಾಗಿ ಏನೋ ಮಾತನಾಡುತ್ತಿದ್ದರು.ಏನೆಂದು ಮುಕುಂದಯ್ಯ ವಿಚಾರಿಸಿದಾಗ ಚಳ್ಳಕೆರೆ ಕಡೆಯಿಂದ ಹಿರಿಯೂರು ಕಡೆ ಬರುವ ರೆಡಿ ಬಸ್ ಹರ್ತಿಕೋಟೆ ಬಳಿ ಆಕ್ಸಿಡೆಂಟ್ ಆಗಿದೆಯಂತೆ ಯಾರೋ ಒಬ್ಬರು ಸ್ಪಾಟ್ನಲ್ಲಿ ಸತ್ತರಂತೆ ಒಂದು ಹುಡುಗಿಗೆ ಗಾಯ ಆಗೈತಂತೆ ಆ ಹುಡುಗಿ ಕೈಯಲ್ಲಿ ನೋಟ್ ಬುಕ್ ಇತ್ತಂತೆ ಎಂದು ಹೇಳಿದ್ದನ್ನು ಸತೀಶನೂ ಕೇಳಿಸಿಕೊಂಡು ಗಾಬರಿಯಾಗಿ ಅಲ್ಲೇ ನಿಲ್ದಾಣದ ಬಳಿ ಇರುವ ಕಣಿವೆ ಮಾರಮ್ಮನ ದೇವಸ್ಥಾನಕ್ಕೆ ಹೋಗಿ " ದೇವರೇ ಆ ಹುಡುಗಿ ಸುಜಾತ ಅಗಿರದಿರಲಿ " ಎಂದು ಮನದಲ್ಲೇ ಬೇಡಿಕೊಂಡ
" ಬಸ್ ಬಂತು ಬಾರಲೆ ಕೈ ಮುಗಿದದ್ ಸಾಕು" ಎಂದರು ಮುಕುಂದಯ್ಯ
ಮುಂದುವರೆಯುವುದು
ಸಿ ಜಿ ವೆಂಕಟೇಶ್ವರ.
No comments:
Post a Comment