ಎನಗಿಂತ ಕಿರಿಯರಿಲ್ಲ.
ಕಾರ್ಯಕ್ರಮ ಆಯೋಜಕರಿಗೆ ಎರಡು ಪತ್ರಗಳು ಬಂದವು. ಮೊದಲನೇ ಪತ್ರದಲ್ಲಿ " ನಾನು ಐದು ಪುಸ್ತಕಗಳನ್ನು ಬರೆದು ಪ್ರಕಟಿಸಿರುವೆ. ಬಹುತೇಕ ಕಡೆ ನನಗೆ ಕಾರ್ಯಕ್ರಮದ ಅಧ್ಯಕ್ಷತೆ ನೀಡಿ ಗೌರವಿಸಿದ್ದಾರೆ .ನೀವು ನನಗೆ ಮುಖ್ಯ ಅತಿಥಿಗಳ ಸ್ಥಾನ ನೀಡಿ ನನಗೆ ಅವಮಾನ ಮಾಡಿರುವಿರಿ. ನಾನು ನಿಮ್ಮ ಕಾರ್ಯಕ್ರಮಕ್ಕೆ ಬರುವುದಿಲ್ಲ." ಎಂದು ಆಕ್ರೋಶದ ಮಾತುಗಳನ್ನು ಓದಿ ಮತ್ತೊಂದು ಪತ್ರ ಕೈಗೆತ್ತಿಕೊಂಡರು
" ನಮಸ್ಕಾರ... ನಿಮ್ಮ ಅಭಿಮಾನಕ್ಕೆ ಶರಣು .ನನ್ನನ್ನು ನಿಮ್ಮ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸುವಂತೆ ಕೋರಿದ್ದೀರಿ .ದಯವಿಟ್ಟು ಕ್ಷಮಿಸಿ ನಾನು ಕಾರ್ಯಕ್ರಮಕ್ಕೆ ಸಾಮಾನ್ಯ ಪ್ರೇಕ್ಷಕನಾಗಿ ಬರುವೆ . ಅಧ್ಯಕ್ಷತೆಯನ್ನು ಬೇರೆಯವರಿಗೆ ನೀಡಿ" ಈ ಪತ್ರ ಓದಿದ ಕಾರ್ಯಕ್ರಮ ಆಯೋಜಕರಿಗೆ ಅಚ್ಚರಿಯ ಜೊತೆಗೆ ಆ ಹಿರಿಯರ ಬಗ್ಗೆ ಇರುವ ಗೌರವ ಇನ್ನೂ ಹೆಚ್ಚಾಯಿತು. ಅವರು ಮನದಲ್ಲೇ ಅಂದುಕೊಂಡರು " ಇನ್ನೂರಕ್ಕೂ ಹೆಚ್ಚು ಪುಸ್ತಕಗಳ ಬರೆದಿರುವ ತೊಂಭತ್ತು ದಾಟಿದ ಇಂತಹ ವ್ಯಕ್ತಿಗಳು ಈ ಪರಿ ಜ್ಞಾನವಂತರಾದರೂ ಕಿಂಚಿತ್ತೂ ಅಹಂಕಾರ ಇರದಿರುವುದಕ್ಕೆ ಎನಗಿಂತ ಕಿರಿಯರಿಲ್ಲ ಎಂಬ ಭಾವವೇ ಕಾರಣ ".
ಎನಗಿಂತ ಕಿರಿಯರಿಲ್ಲ ಎಂಬ ಭಾವವು ನಮ್ಮಲ್ಲಿ ಮೂಡಿದರೆ ನಮ್ಮ ಅಹಂ ಕಡಿಮೆಯಾಗಿ ವಿಧೇಯತೆ ಬೆಳೆಯುತ್ತದೆ .ಅದರ ಜೊತೆಯಲ್ಲಿ ನಮ್ಮ ವ್ಯಕ್ತಿತ್ವ ಶೋಭಿಸುವುದು.
ಸರ್ವರನೂ ಗೌರವಿಸುತಾ ಸರ್ವರೊಳಗೊಂದು ಒಳ್ಳೆಯ ಗುಣ ಪಡೆದು, ಪರಮಾತ್ಮನ ಚರಣದಲಿ ನಿಶ್ಕಲ್ಮಶ ಮನದಿಂದ ಶರಣಾಗಿ ,ನಮ್ಮ ಪಾಲಿನ ಕರ್ತವ್ಯವನ್ನು ನಿರ್ವಂಚನೆಯಿಂದ ಮಾಡಿದರೆ ನೆಮ್ಮದಿಯ ಬದುಕು ನಮ್ಮದಾಗುವುದರಲ್ಲಿ ಸಂದೇಹವಿಲ್ಲ.
ನನಗೇನು ತಿಳಿದಿಲ್ಲ
ನಾನೇನು ದೊಡ್ಡವನಲ್ಲ
ನನ್ನ ಸಂಪಾದನೆಯೇನು ಹೆಚ್ಚಿಲ್ಲ
ಭಗವಂತನ ಅಂಶ ನನ್ನೆದುರಿಗಿರುವವರೆಲ್ಲ.
ಎನಗಿಂತ ಕಿರಿಯರು ಇಲ್ಲವೇ ಇಲ್ಲ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment