ಹೆದ್ದಾರಿ ೧೯
ದಲಿತರ ಗುಡಿ ಪ್ರವೇಶ
" ಪ್ರತಿ ವರ್ಸದಂತೆ ಈ ವರ್ಸ ಅಮ್ಮನ್ ಜಾತ್ರೆ ಮಾಡೋಕೆ ನಾವೆಲ್ಲ ಇವತ್ತು ಗುಡಿ ಹತ್ರ ಸೇರೆದಿವಿ" ಎನ್ನತ್ತಾ ಚೂಪಾದ ಪರಕೆ ಕಡ್ಡಿಯಿಂದ ಎಡಭಾಗ ದವಡೆಯ ಹಲ್ಲಿನಲ್ಲಿ ಸಿಕ್ಕಿಹಾಕಿಕೊಂಡಿರುವ ಅಡಿಕೆ ಮತ್ತು ಹೊಗೆಸೊಪ್ಪು ತೆಗೆಯಲು ದವಡೆ ಭಾಗಕ್ಕೆ ಚುಚ್ಚುತ್ತಿದ್ದರು ಗುಡಿ ಗೌಡರು.
"ಏ ಬಿಸಾಕ ಮಾರಾಯ ಯಾವಾಗಲೂ ಆ ಕಡ್ಡಿ ಇಕ್ಕೆಂಡು ಏನ್ ದೊಗಿತಿಯಾ" ಎಂದ ಸಿದ್ದಮಲ್ಲನಾಯ್ಕ.
" ಅಯ್ಯೋ ನೀನಂತುನುನು ,ನಿನ್ಗೇನು ಬಾದೆ ?ನನ್ ಕಡ್ಡಿ ನನ್ ಹಲ್ಲು " ಗುಡಿ ಗೌಡರು ಎದಿರೇಟು ನೀಡಿದರು.
" ಏ ಬರೆ ಕೆಲ್ಸಕ್ಕೆ ಬರದಿರೋ ಮಾತಾಡ್ತಿರಾ? ಇಲ್ಲ ಜಾತ್ರೆ ಬಗ್ಗೆ ಮಾತಾಡ್ತಿರೊ? ,ನಮ್ಗೇನು ಬ್ಯಾರೆ ವಗುತ್ನ ಇಲ್ವಾ?, ನಾವು ಬತ್ತೀವಿ ಅದೇನ್ ಮಾತಡ್ಕೆಳ್ಲಿ ,ಹಲ್ಲು ಮೂಗು, ಕಿವಿ ,ಕಡ್ಡಿ ,ಹಾಳು ಮೂಳು" ಎಂದು ಟವಲ್ ಕೊಡವಿಕೊಂಡು ಎದ್ದನು ಬಸವರಾಜ.
" ಏ ಕುತ್ಕಳಲೆ ಹೋಗಾನ ,ಗೌಡ್ರೆ ಜಾತ್ರೆ ಬಗ್ಗೆ ಸುರು ಮಾಡಿ " ಅಂದ ಮಡಿವಾಳ ಶಿವಣ್ಣ.
" ಪ್ರತಿ ಸಲ ಮಾಡ್ದಂಗೆ ಈ ವರ್ಸನೂ ಹದಿನೈದ್ ದಿನದ ಸಾರು ಹಾಕಿ ಅಮ್ಮನ ಜಾತ್ರೆ ಮಾಡಾನಾ ಏನ್ರಪ್ಪಾ ಎಲ್ಲರಿಗೂ ಒಪ್ಪಿಗೇನಾ"
" ಗೌಡ್ರೆ ಪ್ರತಿ ಸಲ ಜಾತ್ರೆನೆ ಬೇರೆ , ಈ ಸಲದ ಜಾತ್ರೆನೆ ಬೇರೆ , ಈ ಸಲ ಕೆಲವು ಬದ್ಲಾವಣೆ ಆಗ್ಬೇಕು." ಗುಡಿಯಿಂದ ಮಾರು ದೂರದಲ್ಲಿ ಕುಂತ ಕೆಳಗಿನ ಕೇರಿಯ ಯುವಕ ಕೃಷ್ಣ ಜೋರಾಗಿ ಎಲ್ಲರಿಗೂ ಕೇಳುವಂತೆ ಹೇಳಿದ .
" ಅದೇನ್ ಬದ್ಲಾವಣೆನಪ್ಪ ನೀನಂತುನುನು ,ಹೇಳು ಆದರೆ ಮಾಡಾನಾ" .
" ಈ ವರ್ಸದಿಂದ ನಮ್ಮ ಜನ ಮಾರಮ್ಮನ ಗುಡಿ ಒಳಗೆ ಬಂದು ಪೂಜೆ ಮಾಡಾಕೆ ಅವಕಾಶ ಕೊಡ್ಬೇಕು, ಜೊತೆಗೆ ಈ ವರ್ಸದಿಂದ ನಮ್ಮ ಜನಾನೇ ಮಾರಮ್ಮನ ಪೂಜೆ ಮಾಡಬೇಕು" .
ಕೃಷ್ಣನ ಮಾತು ಕೇಳಿ ನೆರೆದ ಜನ ತಮ್ಮಲ್ಲೆ ಗೊನ ,ಗೊನ,ಗುಸು ಗುಸು ಸದ್ದು ಮಾಡಲು ಶುರು ಮಾಡಿದರು.
" ಏನ್ ಅಂತ ಮಾತಾಡ್ತಿಯಲಾ , ನಾವೆಲ್ಲಾದ್ರೂ ಅಮ್ಮನ ಗುಡಿ ಒಳಕೆ ಹೋದ್ರೆ , ಸುಟ್ ಭಸ್ಮ ಆಗ್ತಿವಿ ಸುಮ್ಕೆ ಬಿದ್ದಿರು" .
ಲೈಟಾಗಿ ಹೆಂಡದ ನಶೆ ಇದ್ದರೂ, ಸ್ವಲ್ಪ ತೊದಲುವ ಧ್ವನಿಯಲ್ಲಿ ಮಗನನ್ನು ಗದರಿಸಿದರು ಮಾರಪ್ಪ.
" ನೀನಾದ್ರೂ ಹೇಳಲ ಮಾರ ನಿನ್ ಮಗ ಏನ್ ಇಂಗ ಮಾತಾಡ್ತಾನೆ ನಿನ್ನಂಗೆ ಅವನೇನು ಕುಡಿದಿಲ್ಲ ತಾನೆ?"
ಗೌಡರು ಪ್ರಶ್ನೆ ಮಾಡಿದರು.
" ಗೌಡರೆ ನಮ್ ಜಾತಿ ಅಂದರೆ ಬರೀ ಕುಡಿಯೋರು, ಮಾಂಸ ತಿನ್ನೋರು ಅಂತ ನಿಮ್ಮಂತೋರು ಅಂದ್ಕಡಿದಾರೆ,ಬರ್ರಿ ತೋಪಿನ ಅಂಗಡಿ ಹತ್ರ ಹೋಗಾನ ನಿಮ್ಮೋರು ಎಷ್ಟ್ ಜನ ಐದಾರೆ ಅಂತ ತೋರಿಸ್ತೀನಿ, ಗೌಡ್ರೆ ನಿಮ್ ಬಗ್ಗೆ ನನಗೆ ಗೌರವ ಇದೆ ,ಆದರೆ ಈ ಸತಿಯಿಂದ ಬದಲಾವಣೆ ಆಗಲೇಬೇಕು" ಪಟ್ಟು ಹಿಡಿದ ಕೃಷ್ಣ.
"ಏನಲ ಬದ್ಲಾವಣೆ ನಿಮ್ ಜಾತಿ ನೆಳ್ಳು ಬೀಳಿಸ್ಕೊಳ್ಳತಿರಲಿಲ್ಲ ನಮ್ಮ ತಾತ ಮುತ್ತಾತ ,ಏನೋ ನಾವು ನಿಮ್ಮನ್ನು ಗುಡಿ ಹತ್ರ ಬಿಟ್ಕಂಡಿದಿವಿ ಅದೇ ನಿಮ್ ಪುಣ್ಯ , ಇನ್ನೂ ಏನಾ ಬದ್ಲಾವಣೆ ಬೇಕಂತೆ ,ಸಾಕ್ ಸುಮ್ಮನೆ ಕುಕ್ಕುರ್ಸಲೆ , ನಮ್ ಹಿರೀಕರು ಹೇಳ್ತಿದ್ರು ಈ ಜಾತಿ ಎಲ್ಲಿ ಇಡ್ಬೇಕೋ ಅಲ್ಲಿಡ್ಬೇಕಂತ ನಾವೆ ಸ್ವಲ್ಪ ಲೂಸ್ ಬಿಟ್ವಿ , ಈಗ ಈ ತರ ಮಾತಾಡಂಗಾಗಿದಿರಾ". ದರ್ಪದಿಂದ ನುಡಿದ ಕೆ ಎಚ್ ರಂಗಸ್ವಾಮಿ.
" ರಂಗಣ್ಣ ಜಾತಿ ಬಗ್ಗೆ ಮಾತಾಡ್ಬೇಡ ನಮಗೂ ಸ್ವಲ್ಪ ತಿಳುವಳಿಕೆ ಐತೆ ಹಿಂದಿನ ಕಾಲದಲ್ಲಿ ಅಂದರೆ ಈ ಗುಡಿ ಕಟ್ಟಿ ನೂರಾರು ವರ್ಸ ಆಗಿರ್ಬೋದು. ಆ ಕಾಲದಲ್ಲಿ ನಮ್ ಜನ ನಿಮ್ ಜನ ಎಲ್ಲಾ ಒಂದಾಗಿ ಸೇರಿ ಗುಡಿಕಟ್ಟಿ ಎಲ್ಲಾ ಒಂದಾಗಿ ಸೇರಿ ಜಾತ್ರೆ, ಹಬ್ಬ ಮಾಡ್ತಾ ಇದ್ದರಂತೆ ಎಲ್ಲೋ ಮಧ್ಯದಲ್ಲಿ ಈ ತರ ಜಾತಿ ಭೇದ ಸುರು ಆದಂಗೆ ಕಾಣುತ್ತೆ. ಅದಕ್ಕೆ ಇನ್ ಮೇಲೆ ನಾವು ನೀವು ಅಮ್ಮನ ಪೂಜೆ ಮಾಡಾನ ನಮ್ ಜಾತಿ ಬಗ್ಗೆ ಕೀಳಾಗಿ ಯಾರೂ ಮಾತಾಡೋದು ಬ್ಯಾಡ" ಎಂದು ನುಡಿದ ಕೃಷ್ಣನ ಗೆಳೆಯ ಮಹಂತೇಶ.
" ಜಾತಿ ಬಗ್ಗೆನೇ ಕೆಟ್ಟದಾಗಿ ಮಾತಾಡ್ತಿನಿ , ಏನ್ಲಾ ಕಡಿತಿಯೇನಲೆ ? ಬಾರ್ಲ" ಟವಲ್ ಕೊಡವಿಕೊಂಡು ,ತೋಳೇರಿಸಿಕೊಂಡು ಮಹಾಂತೇಶನ ಕಡೆ ಹೊರಟ ರಂಗಸ್ವಾಮಿ.
ಕೆಲವರು ರಂಗಸ್ವಾಮಿಯನ್ನು ತಡೆದು ಕೂರಿಸಿದರು.
ಅವರ ಕಡೆ , ಇವರ ಕಡೆ , ಏರು ಧ್ವನಿಯಲ್ಲಿ ಯಾರು ಏನು ಮಾತನಾಡುವರು ಎಂದು ಗೊತ್ತಾಗದೆ , ಗದ್ದಲ ಏರ್ಪಟ್ಟಿತು. ಇದೇ ಮೊದಲ ಬಾರಿಗೆ ಜಾತ್ರೆ ಬಗ್ಗೆ ಮಾತನಾಡಲು ಕಲೆತಾಗ ಆದ ಇಂತಹ ಗದ್ದಲವನ್ನು ದೂರದಿಂದ ನೋಡುವ ಮಹಿಳೆಯರು , ಎಂದೂ ಇಂಗಾಗಿರ್ಲಿಲ್ಲ , ಊರ್ಗೆ ಏನೋ ಕೇಡ್ಗಾಲ ಬಂದೈತೆ ,ಇವು ಇಂಗೆ ಹೊಡ್ದಾಡ್ಕೆಂಡು ಜಾತ್ರೆ ಮಾಡಿದ್ರೆ ಅಮ್ಮ ರಾಂಗ್ ಆಗಿ ಏನ್ ಮಾಡ್ತಾಳೋ ? ಎಂದು ಅವರವರೆ ಮಾತಾಡಿಕೊಳ್ಳುತ್ತಿದ್ದರು.
ಕೃಷ್ಣ ಮತ್ತು ಮಹಾಂತೇಶನ ಜೊತೆಗೆ ಹಟ್ಟಿಯ ಇನ್ನೂ ಐದಾರು ಹುಡುಗರು ಜೋರಾಗಿ ಮಾತನಾಡುವುದನ್ನು ಕಂಡ ರಂಗಸ್ವಾಮಿ
"ಹೊ....ಹೊ.... ಈ ನನ್ ಮಕ್ಕಳು ಜಾತ್ರೆ ಕೆಡಿಸ್ಬೇಕು ಅಂತಲೇ ಪ್ಲಾನ್ ಮಾಡ್ಕಂಡು ಬಂದು ಇಂಗಾಡ್ತಾರೆ , ಯಾವ ವರ್ಸ ಇಲ್ದಿದ್ದು ಈ ವರ್ಸನೆ ತರ್ಲೆ ಯಾಕೆ? ಜಾತ್ರೆ ಆಗ್ದಿದ್ದರೂ ಸೈ ಈ ನನ್ ಮಕ್ಕಳ ಕಡ್ದು ಜೈಲಿಗ್ ಹೋಗ್ತೀನಿ ಏನ್ ಕೊಬ್ಬು ಇವರಿಗೆ ," ಎಂದು ಮತ್ತೆ ತೋಳೇರಿಸಿ ಹೊರಟ ರಂಗಸ್ವಾಮಿ.
" ಏ ಕುತ್ಕಳ ರಂಗ , ಏನ್ ಜಗಳ ಆಡಾಕೆ ಕಾಯ್ತಾ ಇರ್ತಿಯಾ, ಸುಮ್ನಿರು ನೀನಂತುನುನು " ಗದರಿದರು ಗೌಡರು.
"ಅಲ್ಲ ಗೌಡರೆ ಆ ನನ್ ಮಕ್ಳ ದಿಮಾಕ......"
" ಸಾಕು ಸುಮ್ನಿರೋ" ಮತ್ತೆ ಗದರಿದರು.
ಗುಡಿಯ ಒಳಗೆ ಅಕ್ಕ ಪಕ್ಕ ಮುಂದೆ ನಿಶ್ಯಬ್ದ ವಾತಾವರಣದಲ್ಲಿ ಗೌಡರೆ ಶುರುಮಾಡಿದರು.
" ಅಲ್ಲಪ್ಪ ಕೃಷ್ಣ , ಇಷ್ಟ್ ದಿವಸ ಇಲ್ಲದ ಈ ಆಸೆ ಈಗ್ಯಾಕೆ ?,ಅದು ನಿಮ್ ಬೇಡಿಕೆ ನಿಮ್ಗೆ ಸರಿ ಅನ್ಸುತ್ತಾ? ಗುಡಿ ಒಳಕ್ಕೆ ಬಿಟ್ಕಂಡರೆ ಮೈಲಿಗೆ ಆಗಲ್ವ ? ನಾವೆಲ್ಲ ಗುಡಿಗೆ ಎಂಗ್ ಬರಾಕಾಗುತ್ತೆ? ಅದೂ ಅಲ್ದೇ ಪೂಜಾರಿಕೆ ಬ್ಯಾರೆ ಬೇಕು ಅಂತ ಕೇಳ್ತಿರಲ್ಲಪ್ಪ ,ಇದೆಲ್ಲ ಆಗಲ್ಲ ಸುಮ್ಮನಿದ್ದು ಬಿಡಿ"
" ನೆಟ್ಟಗೆ ಗಂಟೆ ಇಡ್ಕಳ್ಳಕೆ ಬರುತ್ತೇನೋ ಕೇಳ್ರಿ , ಮೂಳೆ ಕಡಿಯಾದ್ ಬಿಟ್ ಪೂಜೆ ಮಾಡ್ತಾರಂತೆ ,ಸ್ನಾನ ಮಾಡಿ ಏಸ್ ದಿನ ಆತೋ " ಮತ್ತೆ ಹಂಗಿಸಿದ ರಂಗಸ್ವಾಮಿ.
" ಏ ನೆಟ್ಟಗ್ ಮಾತಾಡು, ನೀನು ಪೂಜೆ ಮಾಡಾದ ನಾನು ಕಂಡಿದಿನಿ" ಮಹಾಂತೇಶ ಏಕವಚನದಲ್ಲೇ ಬೈಯ್ದ.
" ಗೌಡ ,ಸಾವ್ಕಾರ ಅಂತ ಕರೆಯೋ ನನ್ ಮಕ್ಕಳು ಇವತ್ತು ಏಕವಚನದಲ್ಲಿ ಮಾತಾಡ್ತೀರ ಹುಟ್ಟಿಲ್ಲ ಅನ್ನಿಸ್ಬಿಡ್ತೀನಿ"
ಜೋರಾಗಿ ಹೋಗಿ ಮಹಂತೇಶನ ತಳ್ಳಿದ ,ತಳ್ಳಿದ ರಭಸಕ್ಕೆ ಮಹಂತೇಶನ ತಲೆ ಪೌಳಿಯ ಕಲ್ಲಿಗೆ ಬಿದ್ದು ರಕ್ತ ಚಿಮ್ಮಿತು.
ಮೇಲ್ವರ್ಗದ ಮತ್ತು ಕೆಳವರ್ಗದ ಬಿಸಿರಕ್ತದ ಯುವಕರು ಕೈ ಕೈ ಮಿಲಾಯಿಸಿದರು.ಹಿರಿಯರು ಸಮಾಧಾನ ಮಾಡಿದರು .
ಕೆಲವರು ಮಹಾಂತೇಶನ ಆಸ್ಪತ್ರೆಗೆ ಕರೆದುಕೊಂಡು ಹೋದರು .
" ಎಲ್ಲಾ ಮನೆಗ್ ನಡೀರಪ್ಪ ಯಾವ ಮಾತುಕತೆ ಬೇಡ ,ಏನೂ ಬೇಡ ,ಸುಮ್ಮನೆ ಯಾಕೆ ಗಲಾಟೆ ಇವತ್ತು ಯಾಕೋ ಟೈಮ್ ಸರಿಯಿಲ್ಲ ಇನ್ನೊಂದು ದಿನ ಸೇರನ ನಡೀರಪ್ಪ " ಎಂದು ಟವಲ್ ಕೊಡವಿಕೊಂಡು ಹೆಗಲ ಮೇಲೆ ಹಾಕಿಕೊಂಡು ಮನೆಯ ಕಡೆ ಹೊರಟರು
ಗುಡಿಗೌಡ್ರು.
***************************
ಮಾರಮ್ಮನ ತೋಪಿನ ಮೇಲಿನಿಂದ ರವಿರಾಯ ನಿಧಾನವಾಗಿ ಕೆಂಬಣ್ಣ ಸೂಸಿ ಮೇಲೇರುತ್ತಿದ್ದ , ತಮ್ಮ ತಿಪ್ಪೆಗಳ ಕಡೆಗೆ ಸಗಣಿ ಹೊತ್ತ ಹುಡುಗರು ಹೊರಟಿದ್ದರು,ಜೈರಾಂ ಬಸ್ ಗೆ ಹಾಲು ಮೊಸರು ಮಾರಲು ಹೊರಟ ಗೊಲ್ಲರ ಹೆಣ್ಣುಮಕ್ಕಳು ಮಾರಮ್ಮನ ಗುಡಿ ಮುಂದೆ ನಿಂತಲ್ಲೆ ಚಪ್ಪಲಿ ಬಿಟ್ಟು , ಕೈಮುಗಿದು , ಬಸ್ ನಿಲ್ದಾಣದ ಕಡೆ ಹೊರಡುತ್ತಿದ್ದರು.ಜೈರಾಂ ಬಸ್ ದೊಡ್ಡ ಸೇತುವೆ ದಾಟಿ ಹೋದ ನಂತರ ಐಮಂಗಳದ ಕಡೆಯಿಂದ ಪೊಲೀಸ್ ಜೀಪ್ ಬಂದು ಮಾರಮ್ಮನ ಗುಡಿಯ ಮುಂದೆ ನಿಂತಿತು !
ದಪ್ಪನೆಯ ಮೀಸೆಯ, ದಪ್ಪ ಹೊಟ್ಟೆಯ ,ಕಪ್ಪನೆಯ ಪೊಲೀಸಪ್ಪ ಜೀಪಿನ ಮುಂದಿನ ಸೀಟಿನಲ್ಲೆ ಕುಳಿತಿದ್ದರು.ಜೀಪಿನ ಹಿಂದಿನ ಸೀಟಿನಿಂದ ನಾಲ್ಕು ಜನ ಪೊಲೀಸರು ಲಾಟಿಯೊಂದಿಗೆ ಇಳಿದರು . ಮುಂದೆ ಜೀಪಲ್ಲೇ ಕುಳಿತ ಪೊಲೀಸ್ ಜೊತೆಗೆ ನಾಲ್ವರು ಏನೋ ಮಾತನಾಡುತ್ತಾ ಒಂದು ಬಿಳಿ ಕಾಗದ ತೋರಿಸಿ ಏನೇನೋ ಮಾತಾಡಿಕೊಂಡರು ,ದೂರದಿಂದ ಇದನ್ನು ಗಮನಿಸಿದ ನಾಲ್ಕೈದು ಜನ ಇದು ರಾತ್ರಿ ನಡೆದ ಘಟನೆಗೆ ಸಂಭಂದಿಸಿರೋ ಹಾಗಿದೆ , ಎಂದು ಮುಂದಾಲೋಚನೆ ಮಾಡುತ್ತಾ ಹತ್ತಿರ ಹೋಗಲು ಭಯ ಪಟ್ಟು ಸುಮ್ಮನೆ ದೂರದಿಂದ ನೋಡುತ್ತಾ ನಿಂತರು, ಕೆಳಗಿನ ಮನೆ ನರೇಶ ಓಡಿ ಹೋಗಿ, ಗುಡಿ ಗೌಡರಿಗೆ ಸುದ್ದಿ ಮುಟ್ಟಿಸಿದ.
" ಏ ಪಟಾಪಟಿ ನಿಕ್ಕರ್..... ನೀನೇ ಬಾ .. ಎಂದರು ಒಬ್ಬ ಪೊಲೀಸ್.
"ನಾನಾ ಸ್ವಾಮಿ" ಅಚ್ಚರಿ ಮತ್ತು ಭಯದಿಂದ ಕೇಳಿದ ಪಾತಲಿಂಗಪ್ಪ.
" ಊಂಕಣಯ್ಯ ನೀನೇ ಬಾ "
ಹತ್ತಿರ ಬಂದು ಎರಡೂ ಕೈಗಳನ್ನು ಎದೆಯ ಮೇಲೆ ತಂದು ಒಂದರ ಮೇಲೋಂದು ಕೈಯನ್ನು ಬಿಗಿಯಾಗಿ ಹಿಡಿದು ,ಭಯದಿಂದ ನಡುಗತ್ತಾ ನಿಂತ ಪಾತಲಿಂಗಪ್ಪ ನ ನೋಡಿ
" ಅದ್ಯಾಕೆ ಅಂಗ್ ನಡುಗ್ತಿಯ, ಸಾಹೇಬರು ಕರೀತಾರೆ ನೋಡು ಅದೇನ್ ಕೇಳು" ಗತ್ತಿನಿಂದ ಗದರಿತು ಪೊಲೀಸ್ ಧ್ವನಿ.
" ಏಯ್.. ಇಲ್ಲಿ ರಂಗಸ್ವಾಮಿ ಮನೆ ಎಲ್ಲಿ ಬರುತ್ತೆ?
" ಮೀಸೆಯ ಪೊಲೀಸ್ ಕೇಳಿದರು.
" ಯಾವ್ ರಂಗಸ್ವಾಮಿ ? ಸ್ವಾಮಿ, ನಮ್ಮೂರ್ ತುಂಬಾ ರಂಗಸ್ವಾಮಿಗಳೆ , ನಮ್ಮ ಹಟ್ಟಿ ತುಂಬಾ ಎಲ್ಲಾ ಮಾರಮ್ಮ ,ರಂಗಮ್ಮ ಗಳೆ ,"
" ಏ ತಲೆ ಹರಟೆ ಮಾಡ್ತಿಯಾ ಬೋ... ಮಗನೆ ಒದ್ದು ಒಳಗೆ ಹಾಕಿ ಏರೋಪ್ಲೇನ್ ಹತ್ತಿಸ್ಬಿಡ್ತೀನಿ ಹುಷಾರ್"
" ಅಲ್ಲಾ ಸ್ವಾಮಿ ,ನಮ್ಮ ಊರಲ್ಲಿ ಬಾಳ ಜನ ರಂಗಸ್ವಾಮಿಗಳು ಇದಾರೆ ಅದ್ಕೆ ಅಂಗಂದೆ ಬುದ್ದಿ, ಮ್ಯಾಗಳ ಮನೆ ರಂಗಸ್ವಾಮಿ, ಓದೋ ರಂಗಸ್ವಾಮಿ, ಗುಂಡ್ರಂಗಪ್ಪರ ರಂಗಸ್ವಾಮಿ, ಛೇರ್ಮನ್ ರಂಗಸ್ವಾಮಿ ಗುಡಿಗೌಡ್ರು ರಂಗಸ್ವಾಮಿ,ಅಗ , ಅವ್ರೇ ಬಂದ್ರು ನೋಡ್ರಿ " .
ಎಂದು ದೂರ ನಿಂತ .
" ಸ್ವಾಮಿ ನಮಸ್ಕಾರ ನಾನು ಈ ಊರಿನ ಗುಡಿಗೌಡ ರಂಗಸ್ವಾಮಿ ಏನ್ ವಿಷ್ಯ ಸ್ವಾಮಿ ಬಂದಿದ್ದು "
ಜೀಪಿನಿಂದ ಇಳಿದ ಇನ್ಸ್ಪೆಕ್ಟರ್ ಜಬಿಉಲ್ಲಾ .
" ಏನಿಲ್ಲಾ ಗೌಡರೆ ನಿನ್ನೆ ರಾತ್ರಿ ನಿಮ್ ಊರಿನಿಂದ ಒಂದ್ ಕಂಪ್ಲೇಂಟ್ ಬಂದಿದೆ . ಆರು ಜನರ ಮೇಲೆ ಅಟ್ರಾಸಿಟಿ, ೩೦೭ ಅಟೆಂಪ್ಟ್ ಟು ಮರ್ಡರ್ ಕೇಸ್ ಹಾಕಿದಾರೆ.
ಅವರನ್ನು ಕರ್ಕೊಂಡು ಹೋಗಾಕ್ ಬಂದಿದಿವಿ" ಎಂದು ಆರು ಜನರ ಲಿಸ್ಟ್ ಗೌಡರ ಕೈಗೆ ಕೊಟ್ಟರು .
ನಿರೀಕ್ಷಿತ ಎಂದು ಗೌಡರು ಆ ಲಿಸ್ಟ್ ಕಡೆ ಕಣ್ಣಾಡಿಸಿದಾಗ ಮೊದಲ ಹೆಸರೆ ಕೆ .ಹೆಚ್. ರಂಗಸ್ವಾಮಿ. ನಂತರ. ನರೇಶ. ಓಂಕಾರ, ಕುಮಾರ ,ಅಚ್ಚರಿ ಎಂಬಂತೆ ನಿನ್ನೆ ಗಲಾಟೆ
ಆದಾಗ ಅಲ್ಲಿಲ್ಲದಿದ್ದರೂ ಬಿಳಿಯಪ್ಪನ ಹೆಸರು ಸೇರಿಸಿದ್ದರು .ಗೌಡರಿಗೆ ಈಗ ಅರ್ಥವಾಯಿತು ಕಳೆದ ವರ್ಷ ಗುರುಸಿದ್ದನಿಗೆ ಬಾಸುಂಡೆ ಬರುವಂತೆ ಹೊಡೆದಾಗ ಕೆಲವರು ಇದನ್ನು ವಿರೋಧಿಸಿ ಕಂಪ್ಲೇಂಟ್ ಕೊಡ್ತೀವಿ ಅಂದಿದ್ದರು ಆದರೆ ಗೌಡರು ಸಮಾಧಾನ ಮಾಡಿದ್ದರು.
" ಏನ್ ಗೌಡ್ರೆ ನೀವೆ ಇವರೆಲ್ಲರನ್ನು ಕರೆಸ್ತಿರಾ ಅಥವಾ ನಾವೇ ಅವರ ಮನೇಗ್ ಹೋಗಿ ಅರೆಸ್ಟ್ ಮಾಡ್ಲ"
" ಏ ಬ್ಯಾಡ ಸಾ , ನಾನೇ ಕರೆಸ್ತೀನಿ ,ಏ ಪಾತಲಿಂಗ ಪಾಕ್ಷಪ್ಪರ ಅಂಗಡಿತಾಕೆ ಹೋಗಿ ,ಕುರ್ಚಿ ಇಸ್ಕಾಂಬಾ ,ನಾನ್ ಹೇಳ್ದೆ ಅಂತ ಹೇಳು , ಏ ರಮೇಶ ಬ್ರಮ್ಮಿ ಹೋಟೆಲ್ ಗೆ ಹೋಗಿ ಸಾಹೇಬ್ರಿಗೆ ಕುಡಿಯಾಕ್ ಏನಾರಾ ತಂದು ಕೊಡು, ಏ ಗೋಪಾಲ ಈ ಚೀಟಿಯಾಗಿರೋರ್ನ ಕರ್ಕಂಬಾ " ಎಂದು ಹೆಸರು ಓದಿದರು ಗೌಡ್ರು.
" ಅದೆಲ್ಲ ಏನೂ ಬ್ಯಾಡ ಗೌಡ್ರೆ ,ಅವರನ್ನು ಕರೆಸಿ ನಾವು ಹೊರಡ್ತೀವಿ"
" ಅಂಗಂದ್ರೆ ಎಂಗೆ ಸಾ, ಕುತ್ಕಳಿ "ಎಂದು ಪಾತಲಿಂಗಪ್ಪ ತಂದ ಕುರ್ಚಿಯನ್ನು ತಾವೆ ಹಾಕಿ, ಮಾರಮ್ಮನ ಬೇವಿನ ಮರದ ಕೆಳಗೆ ಕುಳಿತುಕೊಳ್ಳಲು ಅಧಿಕಾರಿಗಳನ್ನು ವಿನಂತಿಸಿಕೊಂಡರು.
ಅದೂ ಇದೂ ಮಾತಾನಾಡುವ ವೇಳೆಗೆ ವಿಷಯ ತಿಳಿದು ಮತ್ತೆ ಮಾರಮ್ಮನ ಗುಡಿ ಮುಂದೆ ಜನ ಜಮಾವಣೆ ಆಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಯಿತು. ಪೊಲೀಸರಲ್ಲಿ ಒಬ್ಬ ಬಂದು , ಜನರನ್ನು ಸರಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಗೋಪಾಲನ ಜೊತೆ ಕೆ ಹೆಚ್ ರಂಗಸ್ವಾಮಿ ಸೇರಿ ನಾಲ್ಕು ಜನ ಬಂದರು
" ಸ್ವಾಮಿ ಇನ್ನೊಬ್ಬ ಬರ್ಬೇಕು ಬತ್ತಾನೆ ,ತಮ್ಮಲ್ಲಿ ಒಂದು ಮಾತು, ಇದುವರೆಗು ಅಮ್ಮನ ಕೃಪೆಯಿಂದ ನಮ್ಮೂರಿಂದ ಯಾರನ್ನು ಪೋಲಿಸರು ಕರ್ಕೊಂಡು ಹೋಗಿ ಟೇಶನ್ಗೆ ಹಾಕಿಲ್ಲ "
ಮಧ್ಯದಲ್ಲೇ ಬಾಯಿ ಹಾಕಿದ ಇನ್ಸ್ಪೆಕ್ಟರ್
" ಈಗ್ಲೂ ನಾವೇನು ನಾವಾಗೆ ಬಂದು ನಿಮ್ಮನ್ನು ಸ್ಟೇಷನ್ ಗೆ ಕರೀತಿಲ್ಲ ,ನಿಮ್ ಊರ್ನೊರೆ ಕಂಪ್ಲೇಂಟ್ ಕೊಟ್ಟರು ಬಂದಿದಿವೆ , ಈಗಲೂ ಅವರು ಕಂಪ್ಲೇಂಟ್ ವಾಪಾಸ್ ತಗಂಡ್ರೆ ನಾವು ಹೊರ್ಡತೀವಿ"
"ಆಗಲಿ ಸ್ವಾಮಿ ಅವರ್ನ ಕರೆಸಿ ಮಾತಾಡ್ತಿವಿ"
" ಬೇಗ ಆಗ್ಬೇಕು ನಮ್ಗೆ ಬ್ಯಾರೆ ಕೆಲ್ಸ ಇದೆ " ಎಂದರು ಇನ್ಸ್ಪೆಕ್ಟರ್
ಗೌಡರ ಸೂಚನೆ ಮೇರೆಗೆ ಪಾತಲಿಂಗಪ್ಪ ಹೋಗಿ ಕೃಷ್ಣ ಮತ್ತು ಮಹಾಂತೇಶನನ್ನು ಕರೆದುಕೊಂಡು ಗುಡಿಯ ಬಳಿ ಬಂದರು .
" ಏನ್ರಪ್ಪಾ ಊರು ಅಂದ್ರೆ ಒಂದ್ ಮಾತ್ ಬರುತ್ತೆ ಒಂದ್ ಮಾತ್ ಹೋಗುತ್ತೆ ಅಷ್ಟಕ್ಕೇ ಟೇಶನ್ ಗೆ ಹೋಗೋದೆ ? ಕಂಪ್ಲೇಂಟ್ ವಾಪಸ್ ತಗಾಳ್ರಿ , ಸಾಹೇಬ್ರು ಹೋದಮ್ಯಲೆ ನಾವ್ ಕೂತು ಮಾತಾಡಾನಾ"
"ಮಾತಾಡಾಕೇನು ಇಲ್ಲ ಗೌಡರೆ ,ನಮ್ಮ ಮೇಲೆ ಕೈ ಮಾಡಿರೋರಿಗೆ ಶಿಕ್ಷೆ ಆಗಬೇಕು ,ಗುಡಿ ಒಳಕೆ ನಾವು ಬರ್ಬೇಕು , ಅಮ್ಮನಿಗೆ ನಾವೇ ಪೂಜೆ ಮಾಡಬೇಕು ,
ಇದೆಲ್ಲ ಆಗುತ್ತಾ?
"ಅಲ್ಲಪಾ ನಿಮಗೂ ಹಟ್ಟಿಲಿ ಒಂದು ಮಾರಮ್ಮನ ಗುಡಿ ಕಟ್ಟಿಸಿದಿವಿ, ಅಲ್ಲಿ ನೀವೆ ಪೂಜಾರ್ರು ಆದರೂ...."
"ಆದರೂ ಯಾಕೆ ... ಈ ಗುಡಿಗೆ ಯಾಕ್ ನಾವ್ ಬರ್ಬಾರ್ದು ,ಬಾಬಾಸಾಹೇಬ್ ಅಂಬೇಡ್ಕರ್ ರವರು ನೂರಾರು ವರ್ಷದ ಹಿಂದೆ ಮಹದ್ ಮತ್ತು ಕಲರಾಂ ಚಳುವಳಿಯ ಮೂಲಕ ಅಸ್ಪೃಶ್ಯತೆಯ ವಿರುದ್ದ ಹೋರಾಟ ಮಾಡಿದ್ದಾರೆ. ನಮ್ಮ ಜನಾಂಗದ ಮೇಲೆ ನೀವು ಮಾಡೋ ಅನ್ಯಾಯ ತಡೆಯೋಕೆ ನಮ್ಮ ಸಂವಿಧಾನದಲ್ಲಿ ಶೋಷಣೆಯ ವಿರುದ್ಧದ ಹಕ್ಕು ನೀಡಿದ್ದಾರೆ, ಆದರೆ ನೀವು ನಮಗೆ ಅನ್ಯಾಯ ಮಾಡ್ತಾನೆ ಇದಿರಾ. ನೀವು ಇನ್ನೂ ನಮ್ಮನ್ನ ಎಷ್ಟು ದಿನ ಹೊರಗಿಡ್ತಿರಿ?
ನಾವು ಮನುಷ್ಯರೆ, ನೀವೂ ಮನುಷ್ಯರೆ ಅದ್ಯಾಕೆ ಇಂಗೆ ಭೇದಭಾವ ಮಾಡ್ತಿರಾ? ನಮ್ಮ ಹಕ್ಕು ಕೇಳಿದರೆ ಜಾತಿ ಹಿಡ್ದು ಬೈತೀರಾ, ಅದಕ್ಕೆ ಕೆಲವರಿಗೆ ಶಿಕ್ಷೆ ಆಗಲಿ ಆಗ ಗೊತ್ತಾಗುತ್ತದೆ ".
ಸುಧೀರ್ಘವಾಗಿ ಆತ್ಮವಿಶ್ವಾಸದಿಂದ ಮಾತನಾಡಿದ ಕೃಷ್ಣ.
ಅದಕ್ಕೆ ಹೇಳೋದು ಶಿಕ್ಷಣ ಮನುಷ್ಯರ ಆತ್ಮವಿಶ್ವಾಸ ಹೆಚ್ಚಿಸುತ್ತದೆ, ಸಂಘಟನೆ ಮಾಡುತ್ತದೆ ,ಮತ್ತು ಬೆಳಕು ನೀಡುತ್ತದೆ.
ಕೃಷ್ಣನ ಮಾತು ಕೇಳಿದ ಹಟ್ಟಿ ಜನರೆಲ್ಲಾ "ಹೌದು ನಮ್ಮ ಕೃಷ್ಣ ಹೇಳಿದ್ದು ಸರಿ
ನಮ್ಮ ಹಕ್ಕು ನಮಗೆ ಬೇಕು " ಎಂದು ಗಟ್ಟಿಯಾದ ಧ್ವನಿಯಲ್ಲಿ ಕೂಗಿದರು .
ಇದನ್ನು ಸವರ್ಣಿಯರು ನಿರೀಕ್ಷೆ ಮಾಡಿರಲಿಲ್ಲ .
ಪೊಲೀಸರು ಎಲ್ಲರನ್ನೂ ಸುಮ್ಮನಿರಿಸಿದರು ಈ ಮಧ್ಯೆ ಗೌಡರು ಮತ್ತು ಛೇರ್ಮನ್ ರಂಗಸ್ವಾಮಿ ಏನೋ ಮಾತಾಡಿಕೊಂಡರು.
" ನೋಡ್ರಪ ನಾವು ಅಮ್ಮನಿಗೆ ಎದುರೋ ಜನ ,ನೀವು ಅಮ್ಮನ ಗುಡಿ ಒಳಗೆ ಬಂದ್ರೆ ನಿಮಗೆ ತೊಂದರೆ ಅಂತ ತಿಳ್ಕಂಡು ನಿಮ್ಮನ್ನು ಬಿಟ್ಟಿರಲಿಲ್ಲ ,ಈಗ ನೀವೆ ಇಷ್ಟ ಪಟ್ಟು ಬತ್ತೀವಿ ಅಂತೀರಾ ಬರ್ರಿ. ಆದರೆ ಪೂಜೆ ಇಷ್ಯದಾಗೆ ಈಗಲೆ ತೀರ್ಮಾನ ತಕಾಳಾದ್ ಬ್ಯಾಡ ,ಮುಂದೆ ಯಾವಾಗಾದ್ರೂ ನಾವೆ ಕುತ್ಕಂಡು ಮಾತಾಡಾನಾ , ಏನ್ರಪ? ಏನಂತಿರಿ?"
ಕೆಲ ಸವರ್ಣಿಯರು ಇದಕ್ಕೆ ವಿರೋಧ ಮಾಡಲು ಹೊರಟರು ಅವರ ಅಕ್ಕಪಕ್ಕಗಳಲ್ಲಿ ಇದ್ದವರು ಪೊಲೀಸ್ ಇರುವುದು ಮತ್ತು ಸಮಸ್ಯೆ ಬಗ್ಗೆ ತಿಳಿಹೇಳಿ ಸುಮ್ಮನಿರಿಸಿದರು .
"ಆಗಲಿ ನಾವು ಕಂಪ್ಲೇಂಟ್ ವಾಪಸ್ ತಗೋತಿವಿ ಆದರೆ ಇವತ್ತೇ ನಾವು ಗುಡಿ ಒಳಗೆ ಬರ್ತಿವಿ" ಪಟ್ಟು ಹಿಡಿದ ಕೃಷ್ಣ
ವಿಧಿಯಿಲ್ಲದೆ ಒಪ್ಪಿದರು ಗೌಡರು .
"ಸಾರ್ ನಾನು ಕಂಪ್ಲೇಂಟ್ ವಾಪಾಸ್ ಪಡೀತಿನಿ " ಎಂದ ಕೃಷ್ಣ
"ಓಕೆ ಮತ್ತೆ ಸಣ್ಣ ಪುಟ್ಟದ್ದಕೆಲ್ಲ ಸ್ಟೇಷನ್ ಕಡೆ ಬರ್ಬೇಡಿ ಜಗಳ ಆಡ್ಬೇಡಿ ಶಾಂತಿ ಸುವ್ಯವಸ್ಥೆ ಕಾಪಾಡಿ ,ಎಂದು ಟೀ ಲೋಟ ಕೆಳಗಿಟ್ಟು ಬರ್ತೀವ್ರಿ ಗೌಡರೆ, ತೆಗಿಯಪ್ಪ ಗಾಡಿ" ಎಂದು ಜೀಪ್ ಹತ್ತಿದರು ಇನ್ಸ್ಪೆಕ್ಟರ್.
ಜೀಪ್ ಇಂಜಿನ್ ಬಿಸಿಯಾಗಿ ಬುರು....ಬುರು.... ಎಂದು ಐಮಂಗಲ ಕಡೆ ಮುಖಮಾಡಿದರೆ , ಹಟ್ಟಿಯವರು ಮಾರಮ್ಮನ ಗುಡಿಯ ಒಳಗೆ ಪ್ರವೇಶ ಮಾಡುವಾಗ ಸವರ್ಣಿಯರು ಬುರು...ಬುರು... ಎನ್ನುತ್ತಾ ಮುಖ ಗಂಟಿಕ್ಕಿಕೊಂಡು ನೋಡುತ್ತಾ, ನಿಂತರು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
9900925529.
No comments:
Post a Comment