07 February 2022

ತಿರುಕನ ದರ್ಶನ .


 


ತಿರುಕನ ದರ್ಶನ ಮಾಡಿಸಿದ ಶಾಂತಮ್ಮ.


ಅವರು ಶಾಂತಮ್ಮ .ಸುಮಾರು ಐವತ್ತು ವರ್ಷ ವಯಸ್ಸಿನ ,ಕೂದಲು ಬೆಳ್ಳಗಿರುವ ,ಸಾಧಾರಣ ಮೈಕಟ್ಟಿನ , ಮಹಿಳೆ. ಮುಂದಿನ ನಾಲ್ಕೈದು ಹಲ್ಲುಗಳು ಉದುರಿದ್ದರೂ ಸ್ಪಷ್ಟವಾಗಿ ಮಾತನಾಡುತ್ತಿದ್ದರು .ಅದರೆ ನಮ್ಮ ಕೊಟಗೇಣಿಯ ಜನರಿಗೆ ಅವರ ಮಾತು ಸರಿಯಾಗಿ ಅರ್ಥವಾಗದೇ ಬಾಯಿ ತೆರೆದುಕೊಂಡು ಅವರನ್ನೆ ನೋಡುತ್ತಿದ್ದರು. ಕಾರಣ ಅವರು ಉತ್ತರ ಕರ್ನಾಟಕದ ಕನ್ನಡ ಮಾತನಾಡುತ್ತಿದ್ದರು . 

ನಾನು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ನಮ್ಮ ಊರಿಗೆ ಅಂಗನವಾಡಿ ಸಹಾಯಕಿಯಾಗಿ ಬಂದ ನಂತರ ಗೊತ್ತಾಗಿದ್ದು ಅವರದು ಒಂಟಿ ಜೀವನ ಎಂದು! ಇರಲು ಬಾಡಿಗೆ ಮನೆಯ ಹುಡುಕಾಟ ನಡೆಸಿದಾಗ ನಮ್ಮ ಊರಿನ ಪಾರ್ಥಲಿಂಗೇಶ್ವರ ಯುವಕ ಸಂಘದ ಮನೆಯಲ್ಲಿ ಇರುವಂತೆ ಊರವರು ಹೇಳಿದರು . ಅದರಂತೆಯೇ ಶಾಂತಮ್ಮ ಸಂಘದ ಮನೆಯಲ್ಲಿ ವಾಸ ಆರಂಭಿಸಿದರು. ಹೊಸ ಜಾಗ ,ಹೊಸ ಮನೆಯಲ್ಲಿ ಇರಲು ಸ್ವಲ್ಪ ಭಯಗೊಂಡವರಂತೆ ಕಂಡ ಶಾಂತಮ್ಮ ನಮ್ಮ ಅಮ್ಮನ ಬಳಿ ಬಂದು " ನಿಮ್ ವೆಂಕಟೇಶ್ ಸಂಜೀ ಹೊತ್ತು ನನ್ನ ಸಂಗಡ ಮಲ್ಗಾಕ ಕಳುಸು, ಅವಂಗೆ ನಾ ಬೇಕಾದರೆ ಒದಾದು ಬರ್ಯಾದು ಹೇಳ್ಕೊಡ್ತೇನೆ" ಎಂದಾಗ ಅಮ್ಮ ಒಪ್ಪಿದರು. ನನ್ನ ಜೊತೆಗೆ ನನಗಿಂತ ಐದಾರು ವರ್ಷ ಹಿರಿಯರಾದ ಗೊಲ್ಲರ ಹಟ್ಟಿಯ  ಗಾಯತ್ರಕ್ಕ ಸಹ  ಜೊತೆಯಾದರು. ಶಾಂತಮ್ಮನವರ ಸಂಘದ ಮನೆಯಲ್ಲಿ ರಾತ್ರಿಯ ವೇಳೆಯಲ್ಲಿ ಓದಿ, ಬರೆದುಕೊಂಡು ಅಲ್ಲೇ ಮಲಗಿ ಬೆಳಿಗ್ಗೆ ಎದ್ದು ನಮ್ಮ ಮನೆಗೆ ಹೋಗುತ್ತಿದ್ದೆವು. ಕ್ರಮೇಣವಾಗಿ ನಾನು ಮತ್ತು ಗಾಯತ್ರಕ್ಕ ಇಬ್ಬರೂ ಶಾಂತಮ್ಮನವರ ಸಾಕು ಮಕ್ಕಳು ಎಂದು ಊರವರೇ ಪಟ್ಟ ಕಟ್ಟಿದರು. ಕೆಲವೊಮ್ಮೆ ಶಾಂತಮ್ಮ ರಾತ್ರಿ ವೇಳೆ ನಮಗೆ ಪಕೋಡ, ಬೋಂಡಾ, ರೊಟ್ಟಿ, ಚಕ್ಕುಲಿ ಮಾಡಿಕೊಡುತ್ತಿದ್ದರು ಆ ರುಚಿಯಾದ ತಿಂಡಿ ತಿನಿಸು ತಿಂದ ಕೆಲ ದಿನ ಓದು ಬರಹ ಸೊನ್ನೆಯಾಗಿದ್ದೂ ಉಂಟು...


ಶಾಂತಮ್ಮ ನಮ್ಮ ಊರಿಂದ ಎಲ್ಲೇ ಹೊರಟರೂ ನಾನು ಮತ್ತು ಗಾಯಕ್ಕ ಖಾಯಂ ಆಗಿ ಅವರ ಜೊತೆಗೆ ಹೋಗಲೇಬೇಕೆಂಬ ಅಲಿಖಿತ ನಿಯಮ ಜಾರಿಯಲ್ಲಿತ್ತು ಇದನ್ನು ಮನಗಂಡು ಭಾನುವಾರ ಮತ್ತು ರಜಾದಿನಗಳಲ್ಲಿ ದುರ್ಗ ,ಹೊಳಲ್ಕೆರೆ, ಹೊರಕೆರೆದೇವರಪುರ ಹೀಗೆ ನಮ್ಮ ಪಯಣ ಸಾಗುತ್ತಿತ್ತು.

ಮೊದಲ ಬಾರಿಗೆ ನಮಗೆ ಹೊಳಲ್ಕೆರೆ ಬಳಿಯಿರುವ ಅರೇಹಳ್ಳಿಗೆ ಕರೆದುಕೊಂಡು ಹೋಗಿ ರೈಲಿನ ದರ್ಶನ ಮಾಡಿಸಿದ್ದರು. ರಾಮಗಿರಿ ಬೆಟ್ಟ ಹತ್ತಿಸಿದ್ದರು. ಟೆಂಟ್ ನಲ್ಲಿ ಡ್ಯಾನ್ಸ್ ರಾಜಾ ಡ್ಯಾನ್ಸ್ ಸಿ‌ನಿಮಾ ತೋರಿಸಿದ್ದರು. ಒಮ್ಮೆ ಮಲ್ಲಾಡಿಹಳ್ಳಿಯ ಆಶ್ರಮಕ್ಕೆ ಕರೆದುಕೊಂಡು ಹೋಗಿ ಆಶ್ರಮದಲ್ಲಿ ತಿರುಕ ಎಂದೇ ಖ್ಯಾತರಾದ ಯೋಗ ಗುರುಗಳಾದ ರಾಘವೇಂದ್ರ ಸ್ವಾಮೀಜಿಗಳ ದರ್ಶನ ಮಾಡಿಸಿದ್ದರು. ಶಾಂತಮ್ಮನವರ ಒತ್ತಾಯದ ಮೇರೆಗೆ  ಸ್ವಾಮೀಜಿಯವರು ನೆಲಮಹಡಿಯ ಅವರ ಧ್ಯಾನದ ಕೋಣೆಗೆ ಕರೆದುಕೊಂಡು ಹೋಗಿ ಆ ಕೋಣೆಯ ದರ್ಶನ ಮಾಡಿಸಿದ್ದರು. ಆಗ ನಮಗೆ ಸ್ವಾಮೀಜಿಯವರ ಬಗ್ಗೆ  ಅಷ್ಟಾಗಿ ತಿಳಿದಿರಲಿಲ್ಲ. ಕ್ರಮೇಣವಾಗಿ ನಾವು ಬೆಳೆದಂತೆ ಪತ್ರಿಕೆಯಲ್ಲಿ, ಟೀವಿಗಳಲ್ಲಿ ಅವರ ವಿಷಯ ಮತ್ತು ಸೇವಾಮನೋಭಾವ  ತಿಳಿದು .ಅವರ ದರ್ಶನ ಭಾಗ್ಯ ಪಡೆದ ನಾವೆಷ್ಟು ಪುನೀತರು ಎಂದು ಅರ್ಥವಾಯಿತು .ಈಗ ಶಾಂತಮ್ಮ ನವರೂ ನಮ್ಮೊಂದಿಗಿಲ್ಲ ಪೂಜ್ಯ ಸ್ವಾಮೀಜಿಯವರು ಸಹ .ಆದರೆ ಅವರಿಬ್ಬರೂ ನನ್ನ ಜೀವನದಲ್ಲಿ ಪ್ರಮುಖಪಾತ್ರ ವಹಿಸಿದ ಪ್ರಾತಃ ಸ್ಮರಣೀಯರು. ಅವರ  ನೆನೆದರೆ ಮನದಲೇನೋ ಗೌರವ, ಸಮಾಧಾನ ಭಾವ ಉಂಟಾಗುತ್ತದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು.

No comments: