09 February 2022

"ರಂಗಸಿರಿ ಕಥಾ ಐಸಿರಿ " ಪುಸ್ತಕ ವಿಮರ್ಶೆ.


 

"ರಂಗಸಿರಿ ಕಥಾ ಐಸಿರಿ " ಪುಸ್ತಕ ವಿಮರ್ಶೆ.

"ರಂಗಸಿರಿ ಕಥಾ ಐಸಿರಿ " ಒಂದು ವಿಭಿನ್ನವಾದ ನಾಟಕ ಪ್ರದರ್ಶನಗಳ ವಿಮರ್ಶಾ ಕೃತಿಯಾಗಿ ಗಮನಸೆಳೆಯುತ್ತದೆ. ಇದರ ಕೃತಿಕಾರರಾದ ಗೊರೂರು ಅನಂತರಾಜು ರವರು ನಿಜವಾಗಿಯೂ ಅಭಿನಂದನಾರ್ಹರು.

ಕಳೆದ ಮೂರು ವರ್ಷಗಳಿಂದ ನಾನು ಗಮನಿಸಿದ ಹಾಗೆ ಶ್ರೀ ಗೊರೂರು ಅನಂತರಾಜು ರವರು ಕನ್ನಡದ ಬಹುತೇಕ ಪತ್ರಿಕೆಯಲ್ಲಿ ಬರಹ ಲೋಕದಲ್ಲಿ ವೈವಿಧ್ಯಮಯ ಬರವಣಿಗೆಯ ಮೂಲಕ ಗುರ್ತಿಸಿಕೊಂಡವರು.  ಸರಳ ಸಜ್ಜನಿಕೆಯ ಹೆಚ್ಚಿನದೇನನ್ನೂ ನಿರೀಕ್ಷಿಸದ  ಬರಹದ ಜೊತೆಯಲ್ಲಿ   ಕಲೆ, ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆಗಳ ಸಂಘಟಿಸಿದ ಬಹುಮುಖ ಪ್ರತಿಭೆ.ಓದಿನ ದಿನಗಳಲ್ಲೇ ಸಾಹಿತ್ಯ ಓದುವ ಹವ್ಯಾಸ ರೂಢಿಸಿಕೊಂಡು, ಸಾಹಿತಿಗಳು ಮತ್ತು ಕಲಾವಿದರುಗಳ ಬಗ್ಗೆ ಪ್ರೀತಿ ಅಭಿಮಾನ ಬೆಳೆಸಿಕೊಂಡು, ಹಾಗೂ ಓರ್ವ ಸಾಹಿತಿಯಾಗಿ ಸಮಾಜದಲ್ಲಿ ಗುರ್ತಿಸಿಕೊಳ್ಳಬೇಕೆಂಬ ಹಂಬಲ ಹೊಂದಿ: ಈ ದಿಶೆಯಲ್ಲಿ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಬೆಳೆಯುತ್ತಾ ಬಂದವರು.
ಹಲವಾರು ಸಂಘಟನೆಯ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಸಾಹಿತ್ಯ ಸಾಂಸ್ಕೃತಿಕ, ಸಮಾಜ ಸೇವೆಯಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸಿದ್ದಾರೆ. ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ತಾಲ್ಲೂಕು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಊರಿನಲ್ಲಿ ಕನ್ನಡ ಕಲಾಸಾಹಿತ್ಯ ವೇದಿಕೆ ಸಂಸ್ಥೆ ಸ್ಥಾಪಿಸಿ ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿ ನಡೆಸಿಕೊಟ್ಟಿದ್ದಾರೆ: ಭಾರತ ಜ್ಞಾನ ವಿಜ್ಞಾನ ಸಮಿತಿಯಲ್ಲಿ ಜನಾರೋಗ್ಯ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆನಂತರ ಸಾಕ್ಷರತಾ ಆಂದೋಲನ ಜಾಥಾದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಸ್ವತಃ ಕಲಾವಿದರಾದ ಅನಂತರಾಜುರವರು ತಾವು ನೋಡಿದ ನಾಟಕಗಳನ್ನು ವಿಮರ್ಶೆ ಮಾಡಿದ ಪರಿ ಅನನ್ಯ. "ರಂಗಸಿರಿ ಕಥಾ ಐಸಿರಿ" ಕೃತಿಯಲ್ಲಿ ನಾಟಕಗಳ ಕಥೆಗಳನ್ನು ಸಂಕ್ಷಿಪ್ತವಾಗಿ ಹೇಳುವ ಮೂಲಕ ವಿಮರ್ಶೆ ಮಾಡಿರುವ ರೀತಿ ನನಗೆ ಬಹಳ ಮೆಚ್ಚುಗೆಯಾಯಿತು.ನಾನು ಕೂಡಾ ಹವ್ಯಾಸಿ ರಂಗಭೂಮಿಯ ಕಲಾವಿದನಾಗಿರುವುದರಿಂದ ನಾನು ನೋಡಿದ ಕೆಲ ನಾಟಕಗಳ ವಿಮರ್ಶೆ ಓದುವಾಗ ನಾಟಕಗಳು ಪುನಃ ನನ್ನ ಸ್ಮೃತಿ ಪಠಲದಲ್ಲಿ ಹಾದು ಹೋದವು .
ನಾನು ನೋಡದ ನಾಟಕಗಳು ನನ್ನ  ಕಣ್ಮುಂದೆ ನಡೆಯುತ್ತಿವೆಯೇನೋ ಎಂಬಂತೆ ಕಥೆಯ ಮೂಲಕ ವಿಮರ್ಶೆ ಮಾಡಿರುವ ರೀತಿ ಚೆನ್ನಾಗಿದೆ. 

'ರಂಗಸಿರಿ ಕಥಾ ಐಸಿರಿ' ಕೃತಿ ರಂಗಪ್ರಯೋಗಗಳ ವಿಮರ್ಶೆಗಳ ಸಂಕಲನವಾಗಿದೆ. ಲೇಖಕರು ಹಾಸನದಲ್ಲಿ ನೋಡಿದ ನಾಟಕಗಳ ವಿಮರ್ಶೆ ಇವಾಗಿವೆ. ಪ್ರಸಿದ್ಧ ಕತೆಗಾರರು ಮತ್ತು ಕಾದಂಬರಿಕಾರರ ಕತೆ ,ಕಾದಂಬರಿಗಳು ರಂಗರೂಪಾಂತರಗೊಂಡು ಸೃಜನಶೀಲ ನಿರ್ದೇಶಕರ ಮೂಲಕ ರಂಗದ ಮೇಲೆ ಯಶಸ್ವಿ ಪ್ರಯೋಗಗೊಂಡಿರುವ ನಾಟಕ ವಿಮರ್ಶೆಯಾಗಿರುವುದು ವಿಶೇಷವಾಗಿದೆ. 

ಕೃತಿಯಲ್ಲಿ ವಿಮರ್ಶೆಗೆ ಒಳಪಡಿಸಿದ ನಾಟಕಗಳಲ್ಲಿ ಪ್ರಮುಖವಾದವುಗಳು
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕಥೆ ಆಧಾರಿತ ನಾಲ್ಕು ನಾಟಕಗಳು, ಕರ್ವಾಲೊ, ಅಣ್ಣನ ನೆನಪು ಕಿರಗೂರಿನ ಗಯ್ಯಾಳಿಗಳು, ಕೃಷ್ಣಗೌಡನ ಆನೆ,
ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ನಾಟಕ ಮೂಕಜ್ಜಿಯ ಕನಸುಗಳು, ಪಿ. ಲಂಕೇಶ್ರವರ ಕಥೆ ಆಧಾರಿತ ನಿವೃತ್ತರು,
ಡಾ. ಚಂದ್ರಶೇಖರ್ ಪಾಟೀಲ್ ರವರ ಕೊಡುಗೆಗಳು,ರಾಜಶೇಖರ್ ಮಠಪತಿ ರವರ ಗಾಂಧಿಯ ಅಂತಿಮ ದಿನಗಳು, ಚಂದ್ರಕಾಂತ ಕುಸನೂರು-ದಿಂಡಿ,
ಮಂಜುನಾಥ ಬೆಳಕೆರೆ ನನ್ನೊಳು ನೀ ನಿನ್ನೊಳು ನಾ,ವಿವೇಕ ಶಾನಭಾಗ್ ರವರ ಕಥೆಯಾಧಾರಿತ-ಕಂತು,
ಶರದ ಉಪಾಧೆ (ಮರಾಠಿ)-ರಾಶಿಚಕ್ರ, ಕೇದಾರಶಿಂದ-ಸಹಿರೀ ಸಹಿ,
ಸಚಿನ ಮೋಟೆ - ಒಂದ ಆಟ ಭಟ್ಟರದು, ಅಗ್ರಹಾರ ಕೃಷ್ಣಮೂರ್ತಿ - ದಾರಶುಕೊ ,ಸಾಣೇಹಳ್ಳಿ ಶ್ರೀ ಪಂಡಿತಾರಾದ್ಯ ಶಿವಾಚಾರ ಮಹಸ್ವಾಮಿ ರವರ ಯುಗಾಚಾರ್ಯ,
ದು.ಸರಸ್ವತಿ-ಬದುಕು ಬಯಲು ಎ. ರೇವತಿ (ತಮಿಳು) ಆತ್ಮಕಥೆ ,
ಯಶವಂತ್ ಮನೋಹರ್ ರ ಮಾಯಿ, ಡಾ|| ಚಂದ್ರಶೇಖರ್ ಕಂಬಾರ  ರವರ ಶಿವರಾತ್ರಿ,
ಬಸವಣ್ಣನವರ ವಚನಗಳನ್ನಾಧರಿಸಿದ ಕೂಡಲ ಸಂಗಮ,ನಂಜುಂಡ ಮೈಮ್ ರವರ  ವಿಕೇಂದ್ರೀಕರಣ,ಎನ್. ಎಸ್. ರಾವ್ ರವರ ವಿಷ ಜ್ವಾಲೆ , ತೋರಣಗಲ್ ರಾಜರಾವ್ ರವರ ಸುಭದ್ರ ಕಲ್ಯಾಣ,
ಬೆಳ್ಳಾವೆ ನರಹರಿಶಾಸ್ತ್ರಿ ರವರ  ಶ್ರೀಕೃಷ್ಣಗಾರುಡಿ,
ಕಂಗಲ್ ಹನುಮತ ರಾಯ ಅವರ ರಕ್ತರಾತ್ರಿ,ಬೆಳ್ಳಾವೆ ನರಹರಿ ಶಾಸ್ತ್ರಿ ರವರ ಸಂಪೂರ್ಣ ರಾಮಾಯಣ 3 ಪ್ರಯೋಗಗಳು,
ಪುಟ್ಟಸ್ವಾಮಯ್ಯ ರವರ ಕುರುಕ್ಷೇತ್ರದ  ಪ್ರಯೋಗಗಳು, ಹೊಂಡರಬಾಳು ಎಸ್. ಲಿಂಗರಾಜೇ ಅರಸ್ ರವರ ದಕ್ಷಯಜ್ಞ,ದೇವಿ ಮಹಾತ್ಮ  ನಿರ್ದೇಶನ ಎ. ಸಿ. ರಾಜು,
ರಾಜಕವಿ ಪಂಡಿತ ತಿರುಮಲೆ ಶ್ರೀನಿವಾಸ ಅಯ್ಯಂಗಾರ್ ರವರ
ಭಕ್ತ ಪ್ರಹ್ಲಾದ 2 ಪ್ರಯೋಗಗಳು , ಶ್ರೀಕೃಷ್ಣ ತುಲಾಭಾರ, ಸತಿ ಸಾವಿತ್ರಿ ಸೀತಾಲಕ್ಷ್ಮೀ ಸತ್ಯಮೂರ್ತಿ,
ಎಚ್. ಬಿ. ರಮೇಶ್ ರವರ ನಾಟ್ಯ ರಾಣಿ ಶಾಂತಲಾ, ರಾಜ ಸತ್ಯವ್ರತ - ನಿರ್ದೇಶನ ಸೀಗೆನಾಡು ಪಾಲಾಕಾಚಾರ್,ಅಂತಿಗೊನೆ : ಗ್ರೀಕ್ಮೂಲ ಸಾಫೋಕ್ಲೀಸ್ ಕನ್ನಡಕ್ಕೆ
ಪಿ. ಲಂಕೇಶ್, ಚಂದ್ರಮಂಡಲ - ಪ್ರಾಸಾದ್ ರಕಿತ್, ಲೀಲಾಂತ್ಯ - ಎನ್. ಸುದರ್ಶನ,ಬುಗುರಿ - ಮೊಗಳ್ಳಿ ಗಣೇಶ್,ಊರುಕೇರಿ - ಡಾ|| ಸಿದ್ಧಲಿಂಗಯ್ಯ,ಲಂಕೇಶ್ವರ - ಡಾ|| ಮಳಲಿ ವಸಂತಕುಮಾರ್

ಈ ಮೇಲಿನ ಎಲ್ಲಾ ನಾಟಕಗಳ ಸಂಕ್ಷಿಪ್ತವಾದ ವಿವರಣೆಯ ನೀಡುವ ಮೂಲಕ ಉತ್ತಮವಾದ ವಿಮರ್ಶೆ ಮಾಡಿದ್ದಾರೆ ಗೊರೂರು ಅನಂತರಾಜು ರವರು. ಅವರು ಕನ್ನಡ  ಸಾರಸ್ವತ ಲೋಕಕ್ಕೆ ಇನ್ನೂ ಹೆಚ್ಚಿನ ಕೃತಿಗಳನ್ನು ನೀಡಲಿ ಎಂದು ಹಾರೈಸುತ್ತೇನೆ .
ಪುಸ್ತಕದ ಹೆಸರು:  "ರಂಗಸಿರಿ ಕಥಾ ಐಸಿರಿ "
ಲೇಖಕರು: ಗೊರೂರು ಅನಂತರಾಜು
ಪ್ರಕಾಶನ: ಗೊರೂರು ಅನಂತರಾಜು
ಬೆಲೆ: ೧೪೦.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529


No comments: