ಗಾಚಾರ ಬಿಡಿಸಿಬಿಡ್ತೀನಿ...
ಇಪ್ಪತ್ತೆರಡು ವರ್ಷಗಳ ನನ್ನ ಶಿಕ್ಷಕ ವೃತ್ತಿಯಲ್ಲಿ ಹಲವಾರು ಸಹೋದ್ಯೋಗಿಗಳು ನನಗೆ ಸಲಹೆ ಮಾರ್ಗದರ್ಶನ ಸಹಕಾರ ನೀಡಿರುವರು ಅವರೆಲ್ಲರನ್ನೂ ನೆನಯುತ್ತಾ ಅವರಿಗೆ ಧನ್ಯವಾದಗಳನ್ನು ಹೇಳುತ್ತಾ ಅವರೊಂದಿಗೆ ಇದ್ದ ಸಮಯದಲ್ಲಿ ಅವರ ಹಾವಭಾವ, ಭಾಷೆ ಮುಂತಾದವುಗಳು ಇತರರಿಗಿಂತ ಭಿನ್ನವಾಗಿ ಎಲ್ಲರನ್ನೂ ಸೆಳೆಯುತ್ತಿದ್ದವು .ಅವು ಈಗಲೂ ನನ್ನ ಕಣ್ಣ ಮುಂದೆ ಬರುತ್ತವೆ . ಅಂತಹ ಕೆಲ ಸಹೋದ್ಯೋಗಿ ಮಿತ್ರರ ಕುರಿತಾದ ಕೆಲ ಮಾತುಗಳು.
ಹಿರಿಯರಾದ ಕೆಂಚವೀರ್ ಸರ್ ರವರು ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿದ್ದಾರೆ. ಅವರು ಶಾಲೆಯಲ್ಲಿ ಮಕ್ಕಳ ಮುಂದೆ ಪದೇ ಪದೇ" ಗಾಚಾರ ಬಿಡಿಸಿಬಿಡ್ತೀನಿ ನೋಡು" ಎಂದು ಬೈಯುತ್ತಿದ್ದರು. ಶಾಲೆಯ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳ ಮುಂದೆ ಆ ಶಿಕ್ಷಕರು ಗಾಚಾರ.... ಅಂದ ತಕ್ಷಣ " ಬಿಡಿಸಿಬಿಡ್ತೀನಿ......ಎಂದು ಮಕ್ಕಳು ಮೆಲುದನಿಯಲ್ಲಿ ಹೇಳುವ ಪರಿಪಾಠ ವಾಗಿತ್ತು. ಇದು ಕೆಲವೊಮ್ಮೆ ಅವರಿಗೂ ಕೇಳಿ ಇನ್ನೂ ಜೋರಾಗಿ ಗಾಚಾರ ....... ಎಂದು ಮೈಕ್ ನಲ್ಲಿ ಬೈಯಲು ಶುರುಮಾಡುತ್ತಿದ್ದರು.ಇದನ್ನು ಕೇಳಿ ಮಕ್ಕಳು ಮುಸಿ ಮುಸಿ ನಗುತ್ತಿದ್ದರು .ಶಿಕ್ಷಕರೂ ನಗು ತಡೆಯದೇ ನಕ್ಕುಬಿಡುತ್ತಿದ್ದೆವು .ನಮ್ಮ ಕಡೆಗೆ ತಿರುಗಿದ ಅವರು " ಏನ್ ಸಾರ್ ನೀವು ನಗ್ತೀರಾ?" ಎಂದು ರೇಗಿ ಏಕ್ ಸಾತ್.... ರಾಷ್ಟ್ರಗೀತ್ ಶುರೂಕಾರ್.... ಎನ್ನುವ ಬದಲು...
ಏಕ್ ಸಾತ್ ಗಾಚಾರ.... ಎಂದರು. ಮತ್ತೆ ಎಲ್ಲರೂ ಗೊಳ್ ಎಂದು ನಕ್ಕರು. ಅವರೂ ನಗುತ್ತಾ ತಲೆ ಕೆರೆದುಕೊಂಡು ಏಕ್ ಸಾತ್ ರಾಷ್ಟ್ರಗೀತ್ ಶುರುಕಾರ್ .....ಎಂದರು.
ಇಂತಹ ಸವಿನೆನಪುಗಳ ನೀಡಿದ ಕೆಂಚವೀರ್ ಸರ್ ಬಹಳ ಒಳ್ಳೆಯ ಶಿಕ್ಷಕರು. ಸ್ವಲ್ಪ ಕೋಪ ಬಿಟ್ಟರೆ ಮಕ್ಕಳ ಬಗ್ಗೆ ಅಪಾರ ಕಾಳಜಿಯ ಶಿಕ್ಷಕರು.
ಅವರ ನಿವೃತ್ತಿ ಜೀವನ ಸುಖಕರವಾಗಿರಲಿ. ಕೆಂಚವೀರ್ ಸರ್ ನಿಮ್ಮ ಜೊತೆಯಲ್ಲಿ ಸಹೋದ್ಯೋಗಿಯಾಗಿ ಕೆಲಸ ಮಾಡಿದ್ದು ಬಹಳ ಖುಷಿ ನೀಡಿದೆ.ನಿಮಗೆ ಶುಭವಾಗಲಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment