ಪ್ರಶಂಸಿಸೋಣ.
ಪ್ರಶಂಸೆ ಮತ್ತು ಶಿಕ್ಷೆ ಶಿಕ್ಷಣದ ಅವಿಭಾಜ್ಯ ಅಂಗಗಳು .ಇದು ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾದ ಸಂಕುಚಿತವಾದ ಅರ್ಥದಲ್ಲಿದೆ ಎಂದು ಭಾವಿಸಬೇಕಿಲ್ಲ. ಎಲ್ಲಾ ಕಾಲಕ್ಕೂ ಎಲ್ಲಾ ವಯೋಮಾನದವರೂ ಅಪೇಕ್ಷಿಸುವ ಪ್ರಶಂಸೆ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಸ್ಥಾನ ವಹಿಸುತ್ತದೆ. ಪುಟ್ಟ ಪ್ರಶಂಸೆ ಮುಂದೊಂದು ದಿನ ದೊಡ್ಡ ಆಟಗಾರನ ಹುಟ್ಟಿಗೆ ಕಾರಣವಾಗಬಹುದು, ಕವಿಯ ಉದಯವಾಗಬಹುದು, ನಟನು ಬೆಳಕಿಗೆ ಬರಬಹುದು. ಹಾಗಾಗಿ ಸೂಕ್ತ ಸಂದರ್ಭದಲ್ಲಿ ಸಣ್ಣದೊಂದು ಪ್ರಶಂಸೆ ಕೊಟ್ಟರೆ ನಾವು ಕಳೆದುಕೊಳ್ಳುವುದೇನೂ ಇಲ್ಲ ಬದಲಿಗೆ ನಮ್ಮೆದುರಿಗೆ ಇರುವವರ ಮುಖಚಹರೆಯಲ್ಲಿ ಕಾಣುವ ಆನಂದದ ಗೆರೆಗಳು ಸ್ಪಷ್ಟವಾಗಿ ಗೋಚರಿಸಿ ನಾವೂ ನಮಗರಿವಿಲ್ಲದೇ ಸಂತೋಷಪಡುತ್ತೇವೆ.
ನನಗೆ ಒಮ್ಮೆ ಒಂದು ಪೋನ್ ಬಂತು ಆ ಕಡೆಯಿಂದ " ಸಾರ್ ನಾನು ನಿಮ್ಮ ಸ್ಟೂಡೆಂಟ್ ಸರ್. ನಾನೀಗ ಗೌರ್ಮೆಂಟ್ ಡಿಗ್ರಿ ಕಾಲೇಜ್ ನಲ್ಲಿ ಪ್ರೊಫೆಸರ್ ಆಗಿ ಕೆಲ್ಸ ಮಾಡ್ತಾ ಇದಿನಿ. ಅದಕ್ಕೆ ಕಾರಣ ನೀವು ಅಂದು ಕೊಟ್ಟ ಪ್ರೋತ್ಸಾಹವೇ ಕಾರಣ ಸರ್. ನಾನು ಟೆಂಥ್ ನಲ್ಲಿ ಇದ್ದಾಗ ನನಗೆ ಸೋಷಿಯಲ್ ಸೈನ್ಸ್ ಸೆಮಿನಾರ್ ಮಾಡಲು ಅವಕಾಶ ಕೊಟ್ರಿ .ನಾನು ಸೆಮಿನಾರ್ ಮಾಡಿದ ಮೇಲೆ ನನ್ನ ಬೆನ್ನು ತಟ್ಟಿ ವೆರಿ ಗುಡ್ ಅಂದಿರಿ .ಜೊತೆಗೆ ನನ್ನ ಗೆಳೆಯರಿಗೆ ಚಪ್ಪಾಳೆ ತಟ್ಟಲು ಹೇಳಿದಿರಿ. ಅಂದು ನಾನು ಟೀಚರ್ ಆಗಲು ನಿರ್ಧಾರ ಮಾಡಿದೆ ಸರ್ " ಎಂದು ಒಂದೇ ಸಮನೆ ಸಂತಸದಿಂದ ಹೇಳುತ್ತಿದ್ದ .ನನಗೂ ಬಹಳ ಖುಷಿಯಾಗಿ ಪೋನ್ ನಲ್ಲೇ ಅವನನ್ನು ಹರಸಿದೆ.
ಈ ರೀತಿಯಲ್ಲಿ ನೀಡಿದ ಸಣ್ಣ ಪ್ರಶಂಸೆಗಳು ಮತ್ತೊಬ್ಬರ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳನ್ನು ತರಬಹುದು.
ಈ ವರ್ಷ ಎಂಟನೆ ತರಗತಿ ಓದುವ ವಿದ್ಯಾರ್ಥಿಗಳಿಗೆ ಒಂದು ಶಾಲಾ ಗೋಡೆ ಪತ್ರಿಕೆ ಮಾಡಿ ಎಂದು ಮಾರ್ಗದರ್ಶನ ಮಾಡಿದೆ.ಮಕ್ಕಳೇ ಒಂದು ಡ್ರಾಯಿಂಗ್ ಶೀಟ್ ತಂದು ಬಾರ್ಡರ್ ಹಾಕಿ ವಿವಿಧ ಸುದ್ದಿಗಳ ಪತ್ರಿಕೆ ಸಿದ್ಧಪಡಿಸಿದರು ಅದಕ್ಕೆ ಸಣ್ಣ ಪ್ರಶಂಸೆ ನೀಡಿದೆ. ನಮ್ಮ ಶಾಲೆಯ ಮುಖ್ಯ ಶಿಕ್ಷಕಿ ರವರು ಮತ್ತು ಶಿಕ್ಷಕರೂ ಸಹ ಪ್ರೋತ್ಸಾಹ ನೀಡಿದರು ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದಾಗ ಮೆಚ್ಚುಗೆ ಸೂಚಿಸಿ ಕೆಲ ತಪ್ಪುಗಳನ್ನು ತಿದ್ದಿಕೊಳ್ಳಲು ಸಲಹೆ ನೀಡಿದರು. ಈಗ ಪ್ರತಿ ಸೋಮವಾರ ನಮ್ಮ ಶಾಲೆಯಲ್ಲಿ ಒಂದು ಸುಂದರ ಗೋಡೆ ಪತ್ರಿಕೆ ಸಿದ್ದವಾಗುತ್ತದೆ .ಅದರಲ್ಲಿ ನಮ್ಮ ಮಕ್ಕಳ ಕವನ, ಕಥೆ ,ಡ್ರಾಯಿಂಗ್ ಇತ್ಯಾದಿ ಪ್ರಕಟವಾಗುತ್ತವೆ. ಇದರಿಂದ ಉತ್ತೇಜಿತರಾದ ನಮ್ಮ ಮಕ್ಕಳು ರಾಜ್ಯ ಮಟ್ಟದ ಪತ್ರಿಕೆಗಳಿಗೆ ತಮ್ಮ ಕಥೆ ಕವನ ಕಳಿಸಿದರು .ಅವು ಪತ್ರಿಕೆಗಳಲ್ಲಿ ಪ್ರಕಟವೂ ಆಗಿವೆ .ಆಗ ಆ ಮಕ್ಕಳ ಕಣ್ಣಲ್ಲಿ ಕಂಡ ಆನಂದವನ್ನು ನಾನು ನೋಡಿ ಪುಳಕಿತನಾಗಿದ್ದೇನೆ.
ಹೀಗೆ ಒಂದೊಂದು ಸಣ್ಣ ಪ್ರಶಂಸೆ, ಮತ್ತು ಸರಿಯಾದ ಮಾರ್ಗದರ್ಶನ ವ್ಯಕ್ತಿತ್ವ ರೂಪಿಸಬಹುದು. ಇನ್ನೇಕೆ ತಡ ಯಾರಾದರೂ ಚಿಕ್ಕದಾದ ಉತ್ತಮ ಕೆಲಸ ಮಾಡಿದರೆ ಒಂದು ಪ್ರಶಂಸೆ ನೀಡೋಣ. ಹೀಗೆ ಮಾಡುವುದರಿಂದ ಅಷ್ಟಕ್ಕೂ ನಾವೇನೂ ಕಳೆದುಕೊಳ್ಳುವುದಿಲ್ಲವಲ್ಲ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ತುಮಕೂರು.
No comments:
Post a Comment