27 June 2020

ಪೇರ್ ಅಂಡ್ ಲವ್ಲಿ

ಪೇರ್ ಅಂಡ್ ಲೈವ್ಲಿ

ಈಗ ಜ್ಞಾನೋದಯವಾಗಿ
ಹೆಸರು ಬದಲಾಯಿಸುವುದಂತೆ
ಪೇರ್ ಅಂಡ್ ಲವ್ಲಿ|
ಮುಖದ ಬಣ್ಣದಲಿಲ್ಲ ಸೌಂದರ್ಯ
ಆಂತರಿಕ ಸೌಂದರ್ಯವಿರುವವರು
ಸದಾ ಕಾಲ ಜೀವಿಸುವರು  ಲೈವ್ಲಿ ||

ಸಿ ಜಿ ವೆಂಕಟೇಶ್ವರ



26 June 2020

ಸಿಹಿಜೀವಿಯ ಹನಿಗಳು ( ವಿಶ್ವ ಮಾದಕವಸ್ತುಗಳ ವಿರೋಧಿ ದಿನ)

*ಸಿಹಿಜೀವಿಯ ಹನಿಗಳು*

(ಇಂದು ವಿಶ್ವ ಮಾದಕ ವಸ್ತುಗಳ ವಿರೋಧಿ ದಿನ)



*ನಗೆ*

ಏಕೆ ಬೇಕು ಪ್ರಿಯೆ ?
ಆರೋಗ್ಯಕ್ಕೆ ಮಾರಕ
ಬೀಡಿ ಸಿಗರೇಟು  ಹೊಗೆ |
ನನ್ನ ಆರೋಗ್ಯಕ್ಕೆ ಪೂರಕ
ಸಾಕು ನಿನ್ನ ಹೂ ನಗೆ||



*ತಿಂಗಳು*

ಒಮ್ಮೆ ನೋಡಿದರೆ ಸಾಕು
ನಿನ್ನ ಮಾದಕ ಕಂಗಳು|
ಅದೇ ನಶೆಯಲಿ ನಾನು
ತೇಲುವೆನು ತಿಂಗಳು ||




*ನತ್ತು*

ನಿನ್ನೆಲ್ಲಾ ಅಂಗಗಳ
ನೋಡಿದರೆ ಒಂದಲ್ಲ
ಒಂದು ಬಾರಿ
ಏರುವುದು ಮತ್ತು|
ಆ ಅವಯವಕ್ಕೆಲ್ಲಾ
ಪೈಪೋಟಿ ನೀಡಿದೆ
ನಿನ್ನ ಮೂಗು ನತ್ತು||



*ಮುತ್ತಿಗೆ*

ಯಾವ ಮಾದಕ
ವಸ್ತುಗಳು ಬೇಕಿಲ್ಲ
ಪ್ರಿಯೆ ನನ್ನ ಮತ್ತಿಗೆ|
ಗಗನದಲಿ ತೇಲಾಡಿಸುವ
ಶಕ್ತಿ ಇದೆ ನಿನ್ನ ಮುತ್ತಿಗೆ||



*ಧರ್ಮ_ಯಮಧರ್ಮ*

ಮಾದಕ ವಸ್ತುಗಳ
ಸೇವಿಸಿದರೆ ಒಳಿತಲ್ಲ
ಎಂದು ಹೇಳುವುದು
ನನ್ನ ಧರ್ಮ|
ಕೇಳದಿದ್ದರೆ ನಿಮ್ಮ ಕರ್ಮ
ಬೇಗ ಹುಡುಕಿ ಬರುವ
ಯಮ ಧರ್ಮ||

*ಸಿ ಜಿ ವೆಂಕಟೇಶ್ವರ*



24 June 2020

ಉದಕದೊಳಗಿನ ಕಿಚ್ಚು ೯



ಶಾಲೆಯಿಂದ ಬೀಳ್ಕೊಡುಗೆ

ಒಂದೆಡೆ ಸಂತಸ ,ಒಂದೆಡೆ ತುಮುಲ , ಒಂದೆಡೆ ಏನೋ ಕಳೆದುಕೊಳ್ಳುವ ಅನುಭವ , ಒಂದೆಡೆ ಒಂದು ಮೆಟ್ಟಿಲು ಹತ್ತುವ ಕಾತುರ , ಮತ್ತೊಂದೆಡೆ ಈಗಿರುವ ಮೆಟ್ಟಿಲ ನೆನದು ದುಗುಡ, ಒಂದೆಡೆ ಮುಂದೆ ಕಾಲೇಜಿಗೆ ಹೋಗುವೆ ಎಂಬ ಆಸೆಗಂಗಳು , ಇನ್ನೊಂದೆಡೆ ಜೀವದ ಗೆಳೆಯರ ಇಷ್ಟದ ಶಿಕ್ಷಕರ ಬಿಟ್ಟು ಹೋಗಲು ಬೇಸರ  , ಸತೀಶನ ಮನಸ್ಸು ಎರಡೂ ರೀತಿಯಲ್ಲಿ ಯೋಚಿಸುತ್ತಾ ಲಹರಿ ಇನ್ನೆಲ್ಲೋ ಹರಿಯುತ್ತಿತ್ತು
 " ಹೇ ಸತೀಶ ದಾರಕ್ಕೆ ಕಲರ್ ಪೇಪರ್ ಅಂಟಿಸು ಅಂದರೆ ಏನು ಆ ಕಡೆ ಹುಣಸೆ ಮರ ನೋಡ್ತಿಯ? ಏನ್ ಮಾರಾಯಾ ನೀನು ಸಾಯಿಂಕಾಲ ಮೂರೂವರೆಗೆ ಶಾರದಾ ಪೂಜೆ ಇರೋದು , ನೀವೆಲ್ಲ ಇಂಗೆ ಲೇಟ್ ಮಾಡಿದರೆ ಸಾಯಂಕಾಲದ ಆರೂವರೆ ಆಗುತ್ತೆ .
 ಏ ಚಿದಾನಂದ್ ಆ  ಬಾಳೆ ಕಂದು ಅಲ್ಲಿ ಕಟ್ಟು ,ಮಹೇಶ್ ಗೆ ಸ್ಕೂಲ್ ಮುಂದೆ ಮಾವಿನ ಸೊಪ್ಪು ಕಟ್ಟಾಕೆ ಹೇಳು" ಒಂದೇ ಸಮನೆ ತಾನು ಕೆಲಸ ಮಾಡುತ್ತಾ ಇತರರಿಗೂ ಒಂದಲ್ಲ ಒಂದು ಕೆಲಸ ಹೇಳುತ್ತಲೆ ಇದ್ದ  ವೆಂಕಟೇಶ್ . ಓದುವುದರಲ್ಲಿ ಅಷ್ಟಕ್ಕಷ್ಟೆ ಆದರೂ ಶಾಲೆಯ ಸ್ವಚ್ಚತೆ  ,ಗಿಡಗಳಿಗೆ ನೀರುಣಿಸುವುದು, ಶಾಲೆಯ ಅಲಂಕಾರ ಮಾಡುವುದೆಂದರೆ ದಿಢೀರ್ ವೆಂಕಟೇಶ್ ನೆನಪಾಗುತ್ತಿದ್ದ .

ಅಂದು ಯರಬಳ್ಳಿ ಜೂನಿಯರ್ ಕಾಲೇಜು ಆ ವರ್ಷ ಎರಡನೇ ಬಾರಿಗೆ ಶೃಂಗಾರಗೊಂಡ ವಧುವಿನಂತೆ ಕಂಗೊಳಿಸುತ್ತಿತ್ತು .ಯೂನಿಯನ್ ಡೇ ಮಾಡಿದಾಗ ಮೊದಲ ಅಲಂಕಾರ ಮುಗಿದಿತ್ತು.
ರಸ್ತೆಯಿಂದ ಶಾಲೆಯ ಕಡೆಗೆ ಹೋಗುವ ಕಡೆ ಎರಡೂ ಕಡೆ ಗೂಟ ನಿಲ್ಲಿಸಿ , ಅವಕ್ಕೊಂದೊಂದು ದೊಡ್ಡ ಬಾಳೆ ಕಂದು  ಕಟ್ಟಲಾಗಿತ್ತು .  ಮೇಲಿನಿಂದ ಎರಡೂ ಕಂಬಗಳಿಗೆ ಮಾವಿನ ಸೊಪ್ಪಿನ ತೋರಣ ಕಟ್ಟಲಾಗಿತ್ತು . ರಸ್ತೆಯಿಂದ ಶಾಲೆಯವರೆಗೆ ಬಣ್ಣ ಬಣ್ಣದ ತ್ರಿಕೋನಾಕಾರದ ಕಾಗದಗಳನ್ನು ಟ್ವೈನ್ ದಾರಕ್ಕೆ ಅಂಟಿಸಿ ಕಟ್ಟಿದ್ದರು  . ಗಾಳಿ ಬೀಸಿದಾಗ ಅದರಿಂದ ಒಂದು ರೀತಿಯ ವಿಚಿತ್ರ ಸದ್ದು ಬರುವುದನ್ನು ಕೇಳಲು  ಮಕ್ಕಳಿಗೆ ಏನೋ  ಸಂಭ್ರಮ.

ಪೂಜೆ ನಡೆವ ಹತ್ತನೆ ತರಗತಿಯ ಕೋಣೆಯಲ್ಲಿ ಅಲಂಕಾರ ಇನ್ನೂ ಜಗಮಗಿಸುತ್ತಿತ್ತು . ವಿವಿಧ ಬಣ್ಣದ ಬಲೂನುಗಳು ,ಸೇವಂತಿಗೆ, ಮಲ್ಲಿಗೆ,ಕನಕಾಂಬರ,ಚೆಂಡು ಹೂಗಳ ಹಾರಗಳನ್ನು ಅಲ್ಲಲ್ಲಿ ತೂಗು ಹಾಕಿದ್ದರು .ಶಾರದಾ ಮಾತೆಯ ಪೋಟೋಗೆ ಸುಗಂಧರಾಜ ಹೂವಿನ ಹಾರ ,ಜೊತೆಗೆ ಅಡಿಕೆಯ ಹೊಂಬಾಳೆಯ ಅಲಂಕಾರ ನೋಡಲು  ಎರಡು ಕಣ್ಣು ಸಾಲದಾಗಿತ್ತು .
"ಇಂತ ಕೆಲ್ಸನೆಲ್ಲ ಚೆನ್ನಾಗಿ ಮಾಡ್ತೀರಾ ನೀವು ಕಳ್ನನ್ ಮಕ್ಳು"  ನಗುತ್ತಲೇ ಮೆಚ್ಚುಗೆ ನುಡಿಯೆಂಬಂತೆ ಪ್ರೀತಿಯಿಂದ ಬೈದಿದ್ದರು ಕಾಡಪ್ಪ ಮೇಷ್ಟ್ರು.

ಹೇ ಇವಳೇನೋ ನಮ್ಮ ಪಕ್ಕದ್ಮನೆ ತಿಪ್ಪಕ್ಕ?!
 ಎತ್ಲಗೋ ಇದ್ದಂಗಿದ್ಲಲ್ಲೊ ಸೀರೆಯಲ್ಲಿ ದೊಡ್ ಹೆಂಗ್ಸು ಆಗಿದಾಳಲ್ಲೋ?! ಮೂರ್ನಾಕು ಸಾರಿ ಅವಳೆ ಬಂದು, ಮೇಲೆ ಬಿದ್ದು ಮಾತನಾಡಿಸಿದರೂ ಮಾತಾಡಿರಲಿಲ್ಲ ನಾನು, ಅವತ್ತು ಇವಳು  ಇಂಗೆ ಇರಲಿಲ್ಲ  " ಎಂದು ಚಿದಾನಂದ್ ವೆಂಕಟೇಶ್ಗೆ ಅಚ್ಚರಿ ,ಬೇಸರ, ಉದ್ವೇಗದಿಂದ ಹೇಳುತ್ತಿದ್ದರೆ ವೆಂಕಟೇಶ್ ಮಾತ್ರ
"ಹೇ ನನಗೂ  ಇಂತಹ ಅನುಭವ ಆಗಿದೆ ಕಣೊ  ,ಜಾತ್ರೆಯಲ್ಲಿ, ಮದುವೆಯಲ್ಲಿ ಅಲಂಕಾರ ಮಾಡಿಕೊಂಡ ಹುಡುಗೀರು ನೋಡಿದಾಗ ,ಎಕ್ಸಾಮ್ನಲ್ಲಿ ಕೊಷ್ಚನ್ ಪೇಪರ್ ನೋಡಿದಾಗ ,ತಕ್ಷಣ ನನಗನಿಸೋದು " ಇಷ್ಟ್ ದಿವ್ಸ ಎಲ್ಲಿದ್ದವೊ ಇವು?! "
ಇನ್ನೂ ವೆಂಕಟೇಶ್   ಮಾತು ಮುಗಿಸಿರಲಿಲ್ಲ  ಇಡೀ ಹುಡುಗರ ಗುಂಪು ಗೊಳ್ಳೆಂದಿತು .ತಿಪ್ಪಕ್ಕ ಅಳುಕಿನಿಂದ ನಾಚಿ ಗೆಳತಿಯರ ಸೇರಿದಳು.

ಸತೀಶ ಅತ್ತಿಂದಿತ್ತ ಇತ್ತಿಂದತ್ತ ಚಡಪಡಿಸೊದನ್ನು ನೋಡಿ " ಅವ್ನಾಕೆ ಒಳ್ಳೆ ಈದ ಬೆಕ್ ಆಡ್ದಾಡ್ದಂಗೆ ಆಡ್ತಾನೆ ನೋಡೋ " ಎಂದು ಚುಚ್ಚಿದ ಮಹೇಶ್
 " ಬತ್ತಾಳೆ ಬಿಡೋ ಬಿಡೊ ಸುಜಾತ , ಅದ್ಯಾಕಂಗೆ ಆಡ್ತಿಯಾ ಎಂದು ರವಿ ಹೇಳುವುದಕ್ಕೂ ಸುಜಾತ ರಸ್ತೆ ದಾಟಿ ಶಾಲಾ ಕಾಂಪೌಂಡ್ ದಾಟಿ ಬರುವಾಗ, ಹಂಸ  ರಸ್ತೆಯಲ್ಲಿ ನಡೆದು ಬರುತ್ತಿದೆಯೇನೋ? ಎಂದು ಭಾಸವಾಗುತ್ತಿತ್ತು .ಹಚ್ಚ ಬಿಳುಪಿನ ಸೀರೆಯನ್ನು ಉಟ್ಟಿದ್ದಳು ,ಆಗ ತಾನೆ ಸ್ನಾನ ಮಾಡಿದಂತೆ ಹೆರಳನ್ನು ಕೆಂಪನೆಯ ಕುಪ್ಪಸದ ಮೇಲೆ ಕಂಡರೂ ಕಾಣದಂತೆ ಹರಡಿಕೊಂಡಿದ್ದಳು ,ಕೊರಳಲ್ಲಿ ಬಂಗಾರದಂತಹ ಸರ, ಸೊಂಟದಲ್ಲಿ ಡಾಬು ಬಂಗಾರದ್ದು ಇರಬಹುದಾ ಗೊತ್ತಿಲ್ಲ .ಬಿಡಿಯಾಗಿ ಬಿಟ್ಟ ಕೂದಲಲಿ ಒಂದು ಮೊಳ ಮಲ್ಲೆ ಹೂ ಇಣುಕಿ ನೋಡುತ್ತಿದ್ದವು. ಕಿವಿಯೋಲೆಗಳು ಅವಳು ನಡೆದಂತೆ ತಾಳ ಬದ್ದವಾಗಿ ಕುಣಿಯುತ್ತಿದ್ದವು. ಹುಡುಗರು ಕಾಣ್ಬಿಟ್ಟು ನೋಡುತ್ತಿರುವಾಗ ಹತ್ತಿರ ಬಂದವಳೆ ಸತೀಶನ ಬಳಿ ಬಂದು  , ಹೂನಗೆ ಬೀರುತ್ತಾ , ತನ್ನೆರಡು ಹುಬ್ಬು ಮೇಲಕ್ಕೆ ಹಾರಿಸಿದಳು .ಇವನು ಹೆಬ್ಬೆರಳು ತೋರ್ಬೆರಳು ಸೇರಿಸಿ ತೋರಿಸುತ್ತಾ , ನಗಲಾರಂಬಿಸಿದ ಉಳಿದ ಹುಡುಗರ ಹೊಟ್ಟೆಯಲ್ಲಿ ಬೆಂಕಿ ಬಿದ್ದಿದ್ದೆ ಆಗ.

ಮಧ್ಯಾಹ್ನದ ಊಟ ಮುಗಿದ ಮೇಲೆ ಶಾರದಾ ಪೂಜೆಗೆ ಸಿದ್ದತೆ ನಡೆದಿತ್ತು . ಕಾರ್ಯ ಕ್ರಮದ ಪಟ್ಟಿ ಹಿಡಿದು ಬಂದ ಎಸ್ಸೆಮ್ಮೆಸ್ ಮೇಷ್ಟ್ರ ,   ಪ್ರಾರ್ಥನೆ ಮಾಡಲು ರೂಪಾಳನ್ನು  ಕರೆದರು. ನೋಡಲು ತೆಳ್ಳಗೆ ಬೆಳ್ಳಗಿದ್ದ ರೂಪ ಅಂದು ನೀಲಿ ಬಾರ್ಡರ್ ಇರುವ ಕೆಂಪನೆಯ ಸೀರೆಯುಟ್ಟು ಇನ್ನೂ ರಂಗು ರಂಗಾಗಿ ಕಾಣುತ್ತಿದ್ದಳು . ಎಂದೂ ಹಾಡದ ರೂಪ ಯಾವ ‌ರೀತಿ ಹಾಡುವಳೋ ಎಂದು ಎಲ್ಲರೂ ನಿರೀಕ್ಷೆ ಮಾಡುವಾಗ
"ನೀ..... ನಮ್ಮ ಗೆಲುವಾಗಿ ಬಾ.....ಗಜಮುಖನೆ ನೀ... ನಮ್ಮ ಗೆಲುವಾಗಿ.....ಬಾ". ಎಂದು ಎಸ್ ಜಾನಕಿಯೇ ಹಾಡಿದಂತೆ ಹಾಡಿ ಮುಗಿಸಿದಾಗ ಎಲ್ಲರ ಕೈಗಳು ತಮಗರಿವಿಲ್ಲದೆ  ಚಪ್ಪಾಳೆ ತಟ್ಟುತ್ತಿದ್ದವು.
ವಿದ್ಯಾರ್ಥಿಗಳ ಅನಿಸಿಕೆ ಹೇಳಲು ಬಂದ ಸತೀಶ 
" ಈ ಮೂರು ವರ್ಷಗಳಲ್ಲಿ ನಮ್ಮ ಶಾಲೆಯಲ್ಲಿ ‌ಉತ್ತಮ ವಿದ್ಯಾಭ್ಯಾಸ ಪಡೆದಿದ್ದೇವೆ ,ನಾವು ದಾರಿ ತಪ್ಪಿದಾಗ ನಮ್ಮ ಮಖ್ಯಶಿಕ್ಷಕರು ಸೇರಿ ನಮಗೆ ಉತ್ತಮ ರೀತಿಯಲ್ಲಿ ಬುದ್ದಿ ಹೇಳಿದ್ದಾರೆ, ಎಂದು ಸುಜಾತಳ ಕಡೆಗೊಮ್ಮೆ ಹೆಚ್ಚೆಮ್ ಕಡೆಗೊಮ್ಮೆ ನೋಡಿ ಪ್ರೇಮ ಪತ್ರ ಪ್ರಕರಣ ನೆನೆದು , ಕಣ್ಣಲ್ಲಿ ಗೊತ್ತಿಲ್ಲದೇ ನೀರು ಜಿನುಗಿದವು . ಸುಜಾತ ತಲೆತಗ್ಗಿಸಿದರೆ  ಮುಖ್ಯ ಶಿಕ್ಷಕರು
 "ಏ ಸತೀಶ ಅದೆಲ್ಲಾ ಯಾಕೋ ಈಗ ಬಿಡು"
 ಅಂದರು ಮುಂದೆ ಸತೀಶನಿಗೆ ಮಾತನಾಡಲಾಗಲಿಲ್ಲ ಹೋಗಿ ಕುಳಿತು ಬಿಟ್ಟ. ಇಡೀ ಸಂಭ್ರಮದ ಕೊಠಡಿಯಲ್ಲಿ ನೀರವ ಮೌನ .ಬಳಿಕ ಕಾಡಪ್ಪ ಶಿಕ್ಷಕರು ಮಾತನಾಡಿ ನೀವು ಜೀವನದಲ್ಲಿ ಶಿಸ್ತು ರೂಢಿಸಿಕೊಂಡು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕೊನೆಯದಾಗಿ ಎಂಬಂತೆ ಮತ್ತೆ ಬುದ್ದಿವಾದ ಹೇಳಿದರು.

ಶಾರದಾ ಮಾತೆಯ ಪೋಟೋ ಮುಂದೆ ಇರುವ ಹಾಲ್ಟಿಕೇಟ್ ಒಂದೊಂದೆ ತೆಗೆದು , ಮಕ್ಕಳಿಗೆ ಕೊಟ್ಟು ಮುಖ್ಯ ಶಿಕ್ಷಕರು ಪರೀಕ್ಷೆ ಬಗ್ಗೆ ಕೆಲ ಸೂಚನೆಗಳನ್ನು ನೀಡಿ ಎಲ್ಲರಿಗೂ ಸಿಹಿ ನೀಡಿ ಮನೆಗೆ ತೆರಳಲು ಹೇಳಿದರು .ಅಲ್ಲಿಯವರೆಗೂ ಸಂಭ್ರಮದಲ್ಲಿದ್ದ ಮಕ್ಕಳಿಗೆ ಯಾವುದೋ ಅವ್ಯಕ್ತ ನೋವು ,ಬೇಸರದಿಂದ ,ಒಮ್ಮೆಲೆ ಕೆಲವರ ಕಣ್ಣಲ್ಲಿ ನೀರು. ಅವರೇ ಒಬ್ಬರಿಗೊಬ್ಬರು ಸಾಂತ್ವನ ಹೇಳಿಕೊಂಡು ಶಿಕ್ಷಕರಿಗೆ ವಂದಿಸಿ ಮತ್ತೊಮ್ಮೆ ಮಗದೊಮ್ಮೆ ಶಾಲೆಯನ್ನು ತಿರು ತಿರುಗಿ ನೋಡಿ ಮನೆಗಳತ್ತ ಭಾರವಾದ ಹೆಜ್ಹೆ ಹಾಕುತ್ತಾ ಸಾಗಿದರು.......

ಮುಂದುವರೆಯುವುದು....

ಸಿ ಜಿ ವೆಂಕಟೇಶ್ವರ

23 June 2020

abjivruddi


ಸಿಹಿಜೀವಿಯ ಹಾಯ್ಕುಗಳು







ಸಿಹಿಜೀವಿಯ ಹಾಯ್ಕುಗಳು*


೬೩

ಭಾಷಣವೀರ
ಒಂದಿನಿತು ಕಾಣದು
ಸಹಾನುಭೂತಿ

೬೪

ಹೇಳಲು ಮಾತ್ರ
ವಸುಧೈವಕುಟುಂಬ
ಆಚಾರವೆಲ್ಲಿ?

೬೫

ಹಂಸನ ವಾಣಿ
ಕೇಕೇತಕೆ ನಮಗೆ
ಕೇಕೆಯೇ ಸಾಕು.

೬೬
ಚಂದನವನ
ನಾದಬ್ರಹ್ಮನಿದ್ದರೆ
ಸಂಗೀತಮಯ

*ಸಿ ಜಿ ವೆಂಕಟೇಶ್ವರ*

21 June 2020

ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ "ಕಾಲಾಯ ತಸ್ಮೈ ನಮಃ


ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ "ಬಿಡುಗಡೆ "

ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕಥೆ "ಬಿಡುಗಡೆ "

ಸಿಹಿಜೀವಿಯ ಹಾಯ್ಕುಗಳು


*ಸಿಹಿಜೀವಿಯ ಹಾಯ್ಕುಗಳು*

(ಇಂದು ವಿಶ್ವ ಅಪ್ಪಂದಿರ ದಿನ, ವಿಶ್ವ ಸಂಗೀತ ದಿನ , ಅಂತರ ರಾಷ್ಟ್ರೀಯ ಯೋಗ ದಿನ, ಹಾಗೂ ಸೂರ್ಯ ಗ್ರಹಣ)

೫೧
ನೋಡೋಣ ಇಂದು
ಆಗಸದ ಕೌತುಕ
ಸೂರ್ಯಗ್ರಹಣ

೫೨

ಆಸನ ಬೇಕು
ಯೋಗದಿನವು ಇಂದು
ಯೋಗಿಗಳು ನಾವು

೫೩

ಮಾಡೋಣ ಯೋಗ
ಜೀವನವೆಲ್ಲ ಯೋಗ
ರೋಗವು ದೂರ

೫೪

ಬಾನ ವಿಸ್ಮಯ
ನೆರಳು ಬೆಳಕಿನಾಟ
ಸೂರ್ಯ ಗ್ರಹಣ

೫೫

ಜನ್ಮದಾತನು
ಬಾಲ್ಯದಲ್ಲೇ ಹೊರಟ
ಅಮ್ಮನೇ ಅಪ್ಪ

೫೬

ಜೀವನವೆಲ್ಲ
ಸರಿಗಮದ ಪಥ
ಸಂಗೀತಮಯ

೫೭

ತಂದೆಯೇ ಇಲ್ಲ
ಸಕಲವೂ ತಾಯಿ
ಮಾತೆ ಜೀವಾಳ

೫೮

ಸಂಗೀತ ಸವಿ
ಲೋಕವೆಲ್ಲಾ ಸಂಗೀತ
ಪರಮಾನಂದ

೫೯

ಕಲೆಗೆ ಬೆಲೆ
ಕಿವಿಗಳಿಗೆ ಇಂಪು
ವಾದ್ಯ ಸಂಗೀತ

೬೦

ಕಣ್ಣಿಲ್ಲದವ
ಮನತುಂಬಿ ಹಾಡಿದ
ಕರ್ಣಾನಂದವು.

೬೧

ಮುತ್ತಿನ ಹಾರ
ಭಾಸ್ಕರ ಅಲಂಕೃತ
ಕಂಕಣ ಸೂರ್ಯ

*ಸಿ ಜಿ ವೆಂಕಟೇಶ್ವರ*

19 June 2020

ಸಿಹಿಜೀವಿಯ ರುಬಾಯಿಗಳು

*ಸಿಹಿಜೀವಿಯ*
*ರುಬಾಯಿಗಳು*

*೧*

ಯುದ್ದ ಭೂಮಿಯಲ್ಲಾಗು ಮಹಾರತಿ
ಅವಕಾಶವಿದ್ದರೆ ನೀನಾಗು ಸಾರಥಿ
ಧರಣಿಯ ಸಕಲ ಜೀವಗಳ ಕಾಪಾಡು
ಎಂದಿಗೂ ನೀನಾಗಲೇಬೇಡ ಸ್ವಾರ್ಥಿ.

*೨*

ಪುಣ್ಯ ಮಾಡಿದರೆ ಪುಣ್ಯಾತ್ಮ
ಮಾಹತ್ತು ಸಾಧಿಸೆ ಮಹಾತ್ಮ
ನೀ ಯಾರಾದರೂ ಆಗಿರು
ಮರೆಯದಿರು ಅಂತರಾತ್ಮ

*ಸಿ ಜಿ ವೆಂಕಟೇಶ್ವರ*
*ತುಮಕೂರು*

18 June 2020

ಗಜ಼ಲ್ ೬೭

*ಗಜ಼ಲ್೬೭*

ಸಂಸಾರದ ನೊಗವನೊತ್ತ ಜೋಡೆತ್ತುಗಳು ನಾವು
ನಮಗೆ ನಾವೇ ಧಣಿಗಳು ದಣಿವರಿಯದ ಜೀವಗಳು ನಾವು.

ತುಂಬಿದ ಬಂಡಿಗೆ ಆಧಾರ ಕಣಿಗೆ ಕಡಾಣಿಗಳು
ಕೋಟಲೆಗಳಿದ್ದರೂ ನಗುವ ಮುಳ್ಳಿನ ಮೇಲಿನ ಸುಮಗಳು ನಾವು.

ಕೃಷಿ ಮಾಡುತಾ ಕೃಶವಾದರೂ ಖುಷಿಯಲ್ಲಿರುವೆವು
ಕಾಯಕವೇ ಕೈಲಾಸವೆಂಬ ಧಣಿವರಿಯದ ಜೀವಗಳು ನಾವು .

ಸಾಸಿರ ನೋವುಗಳಿದ್ದರೂ ಅನ್ನ ನೀಡುವ ಅನ್ನದಾತರು
ಬತ್ತ ಬೆಳೆಯುತಲಿ ಬತ್ತದ ವಿಶ್ವಾಸವಿರುವ ಜೀವಿಗಳು ನಾವು.

ಬೇಸರವಿಲ್ಲದೆ ಬೇಸಾಯವ ಮಾಡುತ ಬಾಳುವೆವು
ಬಾಳ ಬಂಡಿಯನು ಎಳೆಯುವ ಸಿಹಿಜೀವಿಗಳು ನಾವು.

*ಸಿ ಜಿ ವೆಂಕಟೇಶ್ವರ*

ಕಡಾಣಿ= ಗಾಡಿಯ ಚಕ್ರಕ್ಕೆ ಸಿಕ್ಕಿಸುವ ಕಬ್ಬಿಣದ ಸರಳು.
ಕಣಿಗೆ= ಎತ್ತನ ಗಾಡಿಗೆ ಸಿಗಿಸುವ ಕಟ್ಟಿಗೆ.

17 June 2020

ಸದುಪಯೋಗ?( ನ್ಯಾನೋ ಕತೆ)


*ಸದುಪಯೋಗ?*

ನ್ಯಾನೋ ಕಥೆ

" ಏ ನೀನೇನು ನಿಮ್ಮಪ್ಪನ ಮನೆಯಿಂದ ತಂದಿಲ್ಲ ಕೊಡೊಲೆ ,ಯಾರೋ ಕೊಟ್ಟಿರೋ ಅರ್ದ ಲೀಟರ್ ಹಾಲು ಉಚಿತವಾಗಿ ಹಂಚೋಕೆ ಇಷ್ಟು ಧಿಮಾಕು,  ಅಷ್ಟು ಪೋಸು ಕೊಡ್ತಿಯಾ" ಕಿರುಚಿದ ದಿವಾಕರ.
" ನೀನು ಏನು ಎಗಾರಾಡ್ಬೇಡ, ನೀನು ಪುಕ್ಸಟ್ಟೆ ಸಿಗೋ ಹಾಲು ತಗೊಂಡೋಗಾಕೆ ಬಂದಿರೋದು ,ಸುಮ್ಮನೆ ಲೈನ್ ನಲ್ಲಿ ನಿಂತ್ಕೊಂಡು ಬಾರಪ್ಪ ,ಇಲ್ಲದ್ ಗಾಂಚಾಲಿ ಮಾಡಬೇಡ" ಎಂದ ಜಗದೀಶ .
ಮಾತಿಗೆ ಮಾತು ಬೆಳೆದು, ಇಬ್ಬರೂ ಕೈ ಕೈ ಮಿಲಾಯಿಸಿ, ಕರೋನ ಪ್ರಯುಕ್ತ ಉಚಿತವಾಗಿ ಹಂಚಲು ತಂದಿದ್ದ ಹಾಲಿನ ಪಾಕೆಟ್ಗಳು ಇರುವ  ಟ್ರೇ ಕೆಳಗೆ ಬಿದ್ದಿತು. ಜನರ ಕಾಲ್ತುಳತಕ್ಕೆ ಎಲ್ಲಾ ಪಾಕೆಟ್ ಗಳು ಒಡೆದು ಹಾಲೆಲ್ಲ ಮಣ್ಣು ಪಾಲಾಯಿತು.
ಒಬ್ಬರಿಗೊಬ್ಬರು ಬೈಯ್ದುಕೊಂಡು ಅವರವರ ಮನೆ ಸೇರಿದರು.
ಮನೆಗೆ ಬಂದರೂ ಅದೇ ಸಿಟ್ಟಿನಿಂದ ದಿವಾಕರ ಬೈಯ್ದು ಕೊಳ್ಳುತ್ತಿದ್ದ "ಆ ಜಗದೀಶ ಏನ್ ಅವ್ನೆ ಹಾಲು ಕೊಟ್ಟಂಗೆ ಪೋಸ್ ಕೊಡಾಕೆ ಬಂದ ,ಎಲ್ಲಾ ಹಾಲು ಮಣ್ಣು ಪಾಲಾಯ್ತು , ಅಂಗೆ ಆಗಲಿ " ಎಂದು ಶಾಪ ಹಾಕಿದ.
ಈ ಮಾತು ಕೇಳಿದ ದಿವಾಕರನ ಮಗಳು ಸುಲೋಚನ ಮನದಲ್ಲೇ ನೊಂದುಕೊಂಡಳು " ನಾನು ಕೂಡಿಟ್ಟ ಐನೂರು ರೂಪಾಯಿ ಹಣವನ್ನು ಬಡವರಿಗೆ ಹಾಲು ಕೊಡಿಸಿ  ಎಂದು   ಜಗದೀಶ್ ಅಂಕಲ್ ಗೆ ಕೊಟ್ಟಿದ್ದು ಸದುಪಯೋಗ ಆಗಲಿಲ್ಲವಲ್ಲ "ಎಂದು ಕೊರಗಿದಳು.
*ಸಿ ಜಿ ವೆಂಕಟೇಶ್ವರ*

ಸನ್ಮಾರ್ಗ ಭಾಗ ೮



ಸನ್ಮಾರ್ಗ ಭಾಗ ೮

ಜೀತದ ನೋವು

"ಅಣ್ಣ ಬ್ಯಾಡಣ್ಣ ಬಿಟ್ ಬಿಡಣ್ಣ ಹೋಗ್ತಿನಣ್ಣ ಅಣ್ಣ ಉರಿಯುತ್ತೆ ಬಿಡಣ್ಣ ಅಣ್ಣ.. ನಿನ್ ಕೈಮುಗಿತಿನಿ ಬಿಡಣ್ಣ, ಕಾಲಿಗ್ ಬೀಳ್ತಿನಿ ಬಿಡಣ್ಣ,, ಅಣ್ಣ ಹೋಗ್ತಿನಣ್ಣ,ಈಗಲೆ ಹೋಗ್ತಿನಣ್ಣ " ಎಂದು ಗುರುಸಿದ್ದ ದೈನೇಶಿಯಾಗಿ ಅಳುತ್ತಾ ಬೇಡುತ್ತಿದ್ದರೂ ಕರುಣೆಯಿಲ್ಲದೆ, ನಿರ್ಧಯಿಯಾಗಿ ಹಸಿ ಕೋಲಿನಿಂದ ಬಾಯಲ್ಲಿ ಟವಲ್ ಕೊಚ್ಚಿಕೊಂಡು ಒಂದು ಕೈಯಲ್ಲಿ ಗುರುಸಿದ್ದನ ಕೈಹಿಡಿದು ಮತ್ತೊಂದು ಕೈಯಲ್ಲಿ ಶಕ್ತಿಮೀರಿ ಆ ಹುಡುಗನ ಮೇಲೆ ಒಂದೇ ಸಮನೆ ಬಾರಿಸುತ್ತಿದ್ದ ಬಿಳಿಯಪ್ಪ . ಆ ಹುಡುಗನ ಅರಚಾಟ ಕೇಳಿ ಹೊರಬಂದ ಪಕ್ಕದ ಮನೆಯ ಈರಮ್ಮ ಹೇ ಬಿಡೋ  ಬಿಳಿಯಣ್ಣ ಆ ಮಗಿನ್ಯಾಕೆ ಅಂಗೆ  ಹೊಡಿತಿಯಾ? ಎಂದಾಗ "ನಿನ್ಗೇನು ಬೇಕು ಸುಮ್ನೆ ಹೋಗಮ್ಮ ಎಂದಾಗ " ನೀನು ಸೀಮ್ಯಾಗಿಲ್ದಾನು ಬಿಡಪ್ಪ"
ಎನ್ನತ್ತಾ ಒಳಗೆ ಹೋದರು ಈರಮ್ಮ .
ಅಷ್ಟಕ್ಕೂ ಆ ಹುಡುಗ ಮಾಡಿದ ಅಪರಾಧವಾದರೂ ಏನು ? ವಯಸ್ಸಿನಲ್ಲಿ ಹನ್ನೆರಡೋ ಹದಿನಾಲ್ಕೊ ವರ್ಷ ಇರಬಹುದು,   ತೂಕಹಾಕಿದರೂ ಮೂರು ಕೆಜಿ ಮಾಂಸ ಇರಬಹುದು, ಗಾಳಿ ಬಂದರೆ ತೂರಿಕೊಂಡು ಹೋಗೋ ತರ ಇದಾನೆ ,ಕರಿಬಣ್ಣದ ಮೂರೂವರೆ ಅಡಿ ಎತ್ತರದ ಈ ಹುಡುಗ ಅವರಪ್ಪ ದೊಡ್ಡಪ್ಪಗಳ ಹತ್ತಿರ ಸಾಲ ಮಾಡಿ ತೀರಿಸಿ ತೀರಿಕೊಂಡಿದ್ದರೆ ತನ್ನಷ್ಟೆ ವಯಸ್ಕ ಮಕ್ಕಳೊಂದಿಗೆ ‌ಆಟವಾಡುತ್ತಾ ನಲಿಯುತ್ತಿದ್ದ ,ಶಾಲೆಗೆ ಹೋಗಿ ನಾಲ್ಕಕ್ಷರ ಕಲಿಯುತ್ತಿದ್ದ ,ಅವರಪ್ಪನ ಕುಡಿತದ ಚಟಕ್ಕೆ ಮಾಡಿದ ಸಾಲಕ್ಕೆ ಮಗ ಇಂದು ಇವರ ಮನೆಯಲ್ಲಿ ಸಂಬಳ ( ಜೀತ) ಇರಬೇಕಾಗಿದೆ .
ಬೆಳಗಿನ ಕೋಳಿಕೂಗಿದಾಗ ಆರಂಭವಾಗುವ ಇವನ ದಿನಚರಿ ರಾತ್ರಿ ಒಂಭತ್ತೂವರೆವರೆಗೂ  ಮುಂದುವರೆದು .ಅಲ್ಲೇ ಮೂಲೆಯಲ್ಲಿ ಹರಿದ ಕಂಬಳಿ ಹಾಕಿಕೊಂಡು ಅದನ್ನೇ ಹೊದ್ದು ಕಾಲು ಮುದುರಿ  ಮಲಗಿದರೆ ಯಾರೂ ನನ್ನ ಬೆಳಿಗ್ಗೆವರೆಗೆ ಏಳಿಸದಿದ್ದರೆ ಸಾಕು ದೇವರೆ ಎಂದು ಕೈಕಾಲು ಒಂದೆಡೆ ಮಾಡಿ ಮುದುರಿಕೊಂಡು ಮಲಗುತ್ತಿದ್ದ.
ಮನದಲ್ಲಿ ದುಗುಡವಿದ್ದರೂ ನಗುತ್ತಲೆ ಇರುತ್ತಿದ್ದ ಗುರುಸಿದ್ದ ಬೆಳಿಗ್ಗೆ ಎದ್ದಕೂಡಲೆ ತಲೆಗೊಂದು ಹಳೆಯ ಟವಲ್ನಿಂದ ಪೇಟ ಸುತ್ತಿಕೊಂಡು ,ಒಂದು ಈಚಲಮರದ ತಟ್ಟಿಯನ್ನು ತೆಗೆದುಕೊಂಡು ಅದರಲ್ಲಿಸಗಣಿ ಅಂಟದಿರಲು ಸ್ವಲ್ಪ ಹುಲ್ಲು ಅಥವಾ ಸ್ವಲ್ಪ ಸೊಪ್ಪು ಹಾಕಿ ಸಗಣಿ ತುಂಬಿ ಸತೀಶನನ್ನು ಕರೆದು ತಲೆಮೇಲೆ ಅದನ್ನು ಇಟ್ಟು ಕೊಳ್ಳಲು ಅವನಿಂದ ಸಹಾಯ ಪಡೆದು ಸುಮಾರು ೨೦೦ ಮೀಟರ್ ಇರುವ ತಿಪ್ಪೆಗೆ ಹಾಕಿ ಬರುತ್ತಿದ್ದ . ನಂತರ ದನಗಳ ಗಂಜಲ ಒಂದು ಮೂಲೆಯಲ್ಲಿ ಸಂಗ್ರಹವಾಗಿ ಅಸಹ್ಯವಾದ ವಾಸನೆ ಬರುತ್ತಿತ್ತು ,ಅದಕ್ಕಾಗಿಯೆ ಇದ್ದ ಒಂದು ಗಡಿಗೆ ತೆಗೆದುಕೊಂಡು ಅದರ ಜೊತೆಗೆ ಒಂದು ತೂತಿಲ್ಲದ ತೆಂಗಿನ ಚಿಪ್ಪು  ತೆಗೆದುಕೊಂಡು ಅದರ ಸಹಾಯದಿಂದ ಕಮಟು ವಾಸನೆ ಬರುವ ಆ ದ್ರವವನ್ನು ಗಡಿಗೆಯಲ್ಲಿ ತುಂಬಿ ತಲೆಯ ಮೇಲಿಟ್ಟು ತಿಪ್ಪೆಗೆ ಸಾಗಿಸುತ್ತಿದ್ದ .ಮತ್ತೆ ಹಿಂದಿರುಗಿ ಬಂದು ತೆಂಗಿನ ಗರಿಯಿಂದ ಮಾಡಿದ ಪೊರಕೆಯನ್ನು ತೆಗೆದುಕೊಂಡು ಚೆನ್ನಾಗಿ ಕಸ ಹೊಡೆದು ಅದನ್ನೂ ತಟ್ಟಿಯಲ್ಲಿ  ತುಂಬಿ ತಿಪ್ಪೆಗೆ ಹಾಕುತ್ತಿದ್ದ .ಕೆಲವೊಮ್ಮೆ ಈ ಕೆಲಸಕ್ಕೆ ಸತೀಶ ಸಹಾಯ ಮಾಡುತ್ತಿದ್ದ . ಸತೀಶನ ಶಾಲೆಯ ಪರೀಕ್ಷೆಯ ದಿನಗಳಲ್ಲಿ ಅದೂ ಸಾದ್ಯವಾಗುತ್ತಿರಲಿಲ್ಲ . ಇಷ್ಟು ಕೆಲಸ ಮಾಡುವ ಹೊತ್ತಿಗೆ ಮೂಡಣದಲ್ಲಿ ರವಿರಾಯ ಮಾರಮ್ಮನ ದೇವಸ್ಥಾನದ ಮೇಲಿನಿಂದ ನಿಧಾನವಾಗಿ ಮೇಲಿರುತ್ತಿದ್ದ. ಆಗ ತಿಮ್ಮಕ್ಕ ಗುರುಸಿದ್ದನಿಗೆ ಅವನಿಗೆ ನಿಗಧಿಯಾದ ಅಲ್ಯೂಮಿನಿಯಂ ಲೋಟದಲ್ಲಿ ಮೇಲಿನಿಂದ  ಕಾಪಿ ಒಯ್ಯುತ್ತಿದ್ದರು. ಎಷ್ಟೇ ಬಿಸಿಯಿದ್ದರೂ ಮೇಲಿಂದ ಸುರಿಯುವ ರಭಸಕ್ಕೆ ಬಿಸಿ ಕಡಿಮೆಯಾಗಿ ಎರಡೇ ಸಲಕ್ಕೆ ಸೊರ್....., ಎಂದು ಸದ್ದು ಮಾಡಿ ಕಾಪಿ ಕುಡಿದ ಶಾಸ್ತ್ರ ಮಾಡಿ .ಎಮ್ಮೆ ಕರುಗಳಿಗೆ ಹಸಿ ಹುಲ್ಲು ತರಲು ಕುಡುಗೋಲು, ಹಗ್ಗ , ತೆಗೆದುಕೊಂಡು ಹೊಲಕ್ಕೆ ಹೊರಟೇ ಬಿಡುತ್ತಿದ್ದ . ಬಿಸಿಲು ಬಲಿಯುವ ಮೊದಲು ಹುಲ್ಲಿನ ಹೊರೆಯೊಂದಿಗೆ ಹಿಂತಿರುಗಿ ಅವನದೇ ನಜ್ಜುಗುಜ್ಜಾದ, ಅಲ್ಯುಮಿನಿಯಮ್ ತಟ್ಟೆಯಲ್ಲಿ ಆರಿದ ಮುದ್ದೆ ಮತ್ತು ಸಾರು ಉಂಡು ,ದನಗಳ ಕಣ್ಣಿ ಬಿಚ್ಚಿ ಕೈಯಲ್ಲೊಂದು ಕೋಲಿಡಿದು  "ಉಯ್ಯ... ...ಆ ....ಎಮ್ಮಿಗೇನು ಪ್ರಜ್ಞೆ ಇಲ್ಲ ಎತ್ಲಗೋತ್ತದು ಹೇ ಬಿಡ್ತಿನ್ನೋಡು ಈಗ " ಎಂದು ಆ ಮೂಕ ಪ್ರಾಣಿಗಳ ಜೊತೆಗೆ ಅವನದೇ ಭಾಷೆಯಲ್ಲಿ ಮಾತನಾಡುತ್ತ ಊರ ಬಾಗಿಲು ದಾಟಿ ಪ್ರಾಣಿಗಳ ಜೊತೆ ನಾನೂ ಮಾತನಾಡುವ ಪ್ರಾಣಿ ಎಂಬಂತೆ ನಿಧಾನವಾಗಿ ಊರಿನಿಂದ  ಮರೆಯಾಗುತ್ತಿದ್ದ.
ದಿನವೂ ಅದೇ ದಿನಚರಿ ಯಾಂತ್ರಿಕವಾಗಿ ನಡೆದಿತ್ತು .ಆದರೆ ಅಂದು ಮಾತ್ರ ಯಡವಟ್ಟಾಗಿತ್ತು ಹೊಲದಿಂದ ಹಸಿರು ಮೇವು ತರುವಾಗ ರಸ್ತೆಯ ಪಕ್ಕದಲ್ಲಿ ಜನ‌ ಗುಂಪುಗೂಡಿದ್ದರು ಉರುಮೆಯ ಸದ್ದು ಕೇಳುತ್ತಿತ್ತು ಹುಲ್ಲು ಹೊರೆ ಅಲ್ಲೇ ಇಳಿಸಿ  ಗುಂಪಿನ ಕಡೆ ಹೋದ . ಇವನಿಗಿಂತ ಚಿಕ್ಕ ವಯಸ್ಸಿನ ಹುಡುಗಿ ಚಿಕ್ಕ ಬಳೆಯಲ್ಲಿ ಇಡೀ ದೇಹ ಸೇರಿಸುವುದು , ಬಳೆಯಿಂದ ಬಿಡಿಸಿಕೊಳ್ಳುವುದು ಹೀಗೆ ಕಸರತ್ತು ಮಾಡುತ್ತಿತ್ತು ಅದಕ್ಕೆ ತಂದೆ ಮಾರ್ಗದರ್ಶನ ನೀಡುತ್ತಿದ್ದರು, ಇದನ್ನು ನೋಡಿದ  ಜನರು ಚಪ್ಪಾಳೆ ,ಶಿಳ್ಳೆ ಹೊಡೆಯುತ್ತಿದ್ದರು.
ಗುರುಸಿದ್ದನಿಗೆ ಈ ಚಮತ್ಕಾರ   ನೋಡುತ್ತಾ ,ಸಮಯದ ಪರಿವೆಯಿಲ್ಲದೆ ನಿಂತ ,ಎಡಕ್ಕೆ ತಿರುಗಿ ನೋಡಿದರೆ ಪೂಜಾರ ಮನೆ ಎಮ್ಮೆ ಮೇಯಲು ಹೊಲದ ಕಡೆ ಗೊರಟಿದ್ದವು "ಏನಾ ಗುರುಸಿದ್ದ ಬರಲ್ಲೇನಾ ಎಮ್ಮೆ ಮೇಸಾಕೆ ? " ಕೇಳಿದ ತನಗಿಂತ ಒಂದು ವರ್ಷ ದೊಡ್ಡ ವಯಸ್ಸಿನ ರವಿ ಅವನೂ ಪೂಜಾರ ಮನೆಯಲ್ಲಿ ಸಂಬಳಕ್ಕಿದ್ದ.
ಅಯ್ಯೋ....  ಕೆಟ್ಟೆ ಎಂದು ದಿಗಿಲಾಗಿ ದೊಡ್ಡಪ್ಪಗಳ ಮನೆಯ ಕಡೆ ಬಂದ, ಆಗಲೆ ಬಿಳಿಯಣ್ಣನ ರೌದ್ರಾವತಾರ ಬಯಲಾದದ್ದು .ಬಿಸಿಲಿನಲ್ಲಿ ಎಮ್ಮೆ ಹಸುಗಳು ಏದುಸಿರು ಬಿಡುವದು ಕಂಡು ಹಸಿಯ  ಬರಲು ತೆಗೆದುಕೊಂಡು ಗುರುಸಿದ್ದನಿಗೆ ಬಾರಿಸಿಯೇ ಬಿಟ್ಟಿದ್ದ ಬಿಳಿಯಪ್ಪ.
ಬೆಳಗಿನ  ಊಟ ಮಾಡದೆ ಅಳುತ್ತಲೆ ದನಗಳ ಹೊಡೆದು ಕೊಂಡು ಹೋದ ಅವನೂ ಹಸಿದಿದ್ದ ದನಗಳೂ ದನಗಳಾದರೂ ಹೊಲದಲ್ಲಿ ಮೇದು ಹೊಟ್ಟೆ ತುಂಬಿಸಿಕೊಳ್ಳುವ ಆಶಾಭಾವದಿಂದ ಸರಸರನೆ ನಡೆದರೆ ,ಆ ಹುಡುಗ ಬಾಸುಂಡೆ ಬಂದ ಕಡೆ ಕೈಯಲ್ಲಿ ತಡವಿಕೊಂಡು ನೋಡಿಕೊಳ್ಳತ್ತಾ, ಕೊಳಕಾದ ಟವಲಿನಿಂದ ಕಣ್ಣೀರ ವರಸಿಕೊಳ್ಳುತ್ತಾ, ಬಿಕ್ಕಿ ಬಿಕ್ಕಿ ಅಳುತ್ತಾ ಸಾಗುವಾಗ ಊರ ಕೆಲವರು ಕಾರಣ ಕೇಳಿದರೂ , ಯಾರಲ್ಲೂ ಮಾತನಾಡದೆ ಮುಂದೆ ಹೋದ .
ಅವನನ್ನು ಕಾಡಿದ ಒಂದೇ ಪ್ರಶ್ನೆ ನನಗೇಕೆ ಈ ಶಿಕ್ಷೆ? ಇದಕ್ಕೆ ಕಾರಣ ಕೆಲ ಕಾಲ ಮೈ ಮರೆತು ಕಸರತ್ತು ನೋಡಿದ ನಾನ?  ಕುಡಿಯಲು ಸಾಲ ಮಾಡಿ ಸತ್ತ  ನಮ್ಮಪ್ಪನಾ? ನಿರ್ದಯವಾಗಿ ನನ್ನ ಸಂಬಳಕ್ಕೆ ಬಿಟ್ಟು ಹೋದ ಅವ್ವಾನಾ? ಮನುಷ್ಯತ್ವ ಇಲ್ಲದೆ ಮೃಗದಂತೆ ವರ್ತಿಸಿದ ಬಿಳಿಯಪ್ಪ ನಾ? ಈಗೇ ನೂರಾರು ಪ್ರಶ್ನೆಗಳು ಮನದಲ್ಲಿ ಮೂಡುತ್ತಾ ನಿಸ್ತೇಜನಾಗಿ ನಡೆಯುವಾಗ "ಹೇ ಕಡ್ಲೇಕಾಯಿ ಹೊಲ್ದಾಗೆ ಎಮ್ಮೆ ಮೇದ್ರು ಏನ್ ಮಾಡ್ತಿಯೋ ಕತ್ತೆ ಬಡವ ಹೊಡ್ಕಳ ಅದನ್ನ ,ಒಕ್ಕಲ್ತನ ಮಾಡಿದ್ದರೆ ಗೊತ್ತಗಿರೋದು ನಿಮ್ಮ ಜಾತಿಗೇನು ಗೊತ್ತಾಗುತ್ತೆ ಬೇಸಾಯ ಮಾಡೋರ್ ಕಷ್ಟ"
ಬೈಯುತ್ತಲೇ ಇದ್ದ  ಹೇಮಣ್ಣ ಮತ್ತೆ ದುಃಖ ಒತ್ತರಿಸಿ ಬಂದು ಮತ್ತೆ ಪ್ರಶ್ನೆಗಳೇಳತೊಡಗಿದವು.
ಅದೇ ಕಾಲಕ್ಕೆ ಊರಲ್ಲಿ  ಈರಮ್ಮನ ಮನದಲ್ಲೂ ಅದೆ ಪ್ರಶ್ನೆಗಳು ????.
ಅಷ್ಟಕ್ಕೂ ಆ ಹುಡುಗ ಮಾಡಿದ ತಪ್ಪಾದರೂ ಏನು? ಕೀಳು ಜಾತಿಯಲ್ಲಿ ಹುಟ್ಟಿದ್ದೆ ತಪ್ಪಾ? ಎಲ್ಲಿದೆ  ಮೇಲು ಜಾತಿ? ದೇವರ ಮುಂದೆ ಎಲ್ಲಾ ಒಂದೆ ಅಲ್ಲವೇ? ಬದುಕಿದ್ದಾಗ  ಸತ್ತಾಗ ಎಲ್ಲರಿಗೂ ಒಂದೇ ಮಣ್ಣಲ್ಲವೆ? ಸೂರ್ಯನ ಬೆಳಕು, ಗಾಳಿ , ಮಳೆ ಎಂದಾದರೂ ಬೇಧ ಮಾಡುವುದೆ ? ಏನೂ ಅರಿಯದ ಆ ಹುಡುಗನ ಆ ರೀತಿ ಹೊಡೆದ ಬಿಳಿಯಪ್ಪ ಮುನುಷ್ಯನೇ ಎಂದು ಬೇಸರಪಡುತ್ತಲೆ ಬೂದಿ ಹಾಕಿ ಪಾತ್ರೆಗಳನ್ನು ತೊಳೆಯತೊಡಗಿದಳು.ಎಷ್ಟೇ ತಿಕ್ಕಿ ತೊಳೆದರೂ ಪಾತ್ರೆಗಳು ಯಾಕೋ ಸಂಪೂರ್ಣವಾಗಿ  ಸ್ವಚ್ಚವಾದಂತೆ ಕಾಣಲಿಲ್ಲ .... ಮನುಷ್ಯರ ಮನಸ್ಸು ಸ್ವಚ್ಛವಾಗಲು ಇನ್ನೂ ಎಷ್ಟು ದಿನ‌ವಾದರೂ ಆಗಲಿಲ್ಲ , ಈ ಪಾತ್ರೆಗಳದು ಯಾವ ಲೆಕ್ಕ..
ಎಂದು ಯೋಚಿಸುತ್ತಾ ಪಾತ್ರೆಗಳನ್ನು ತೆಗೆದುಕೊಂಡು ಮನೆಯ ಅಡುಗೆ ಮನೆ ಕಡೆ ಹೊರಟರು...
ಮುಂದುವರೆಯುವುದು.
ಸಿ‌ ಜಿ ವೆಂಕಟೇಶ್ವರ

ಗಜ಼ಲ್ ೬೬ ( ರಂಗೋಲಿ)


*ಗಜ಼ಲ್೬೬*

ದಿನವೂ ನಾನು ಹಾಕುವೆ ಅಂಗಳದಲೆಲ್ಲಾ ರಂಗೋಲಿ
ನನ್ನವನು ಮಾಡಿರುವ ನನ್ನ ಬಾಳೆಲ್ಲಾ ರಂಗೋಲಿ

ಮುತ್ತುಗಳ ಮಳೆಗರೆದು ನನಗೆರಡು ಮುತ್ತುಗಳ ನೀಡಿದ
ಅವರಾಡುವ ಬಾಲಲೀಲೆಗಳಿಗೆ ಮನೆಯಲೆಲ್ಲಾ ರಂಗೋಲಿ

ಮುದ್ದಾಡಲು ಶುರು ಮಾಡಿದರೆ ರಸಿಕರಂಗನವನು
ಮೈಮುರಿದೆದ್ದಾಗ  ಹಾಸಿಗೆಯ ಮಡಿಕೆಯಲೆಲ್ಲಾ ರಂಗೋಲಿ

ದಾಂಪತ್ಯ ಜೀವನದಲ್ಲಿದೆ ಸವಿನೆನಪಿನ ಬುತ್ತಿ
ನನ್ನರಸ ನುಡಿಯುತಿರೆ ಹೃದಯದಲೆಲ್ಲಾ ರಂಗೋಲಿ

ಇನಿಯನಿರದಿರೆ ಮಲ್ಲಿಗೆ ಸಂಪಿಗೆಗೂ ವಾಸನೆಯಿಲ್ಲ
ಸಿಹಿಜೀವಿಯು ಬಳಿಯಿದ್ದರೆ ಮನದಲೆಲ್ಲಾ ರಂಗೋಲಿ

*ಸಿ ಜಿ ವೆಂಕಟೇಶ್ವರ*
.

16 June 2020

ಎದುರಿಸುವೆವು ( ಹನಿಗವನ)

*ಎದುರಿಸುವೆವು*

ನಾಚಿಕೆಯಾಗಬೇಕು ಛೆ.
ಅಂದು ನಿನ್ನ ಗಡಿಯಾಚೆ
ಕಳಿಸಿದೆ ವೈರಾಣು ಕರೋನ
ಇಂದು ನಮ್ಮ ಗಡಿಯಲ್ಲಿ
ಗಡಿಬಿಡಿ ಮಾಡುವ ಚೀನಾ
ಖಂಡಿತ ಎದುರಿಸುವೆವು ನಿನ್ನ
ಗಡಿಯಲ್ಲಿ ಆಸರೆ ವೀರ ಸೈನಿಕರು
ಗಡಿಯೊಳಗೆ ಕರೋನ ರಕ್ಷಕರು.

*ಸಿ ಜಿ ವೆಂಕಟೇಶ್ವರ*.ತ

ಪುಟ್ಟನ ಮೀನುಗಳು ( ಶಿಶುಗೀತೆ)



*ಪುಟ್ಟನ ಮೀನುಗಳು*

ಬೆಟ್ಟ ಗುಡ್ಡಗಳ ದಾಟುತ
ಕೋಳದ ಬಳಿ ಪುಟ್ಟ ನಡೆದನು
ಟಾಮಿಯ ಸಂಗಡ ಮೀನಿಗೆ
ಗಾಳ ಹಾಕಿ ಕುಳಿತನು.

ಒಂದು ಎರಡು ಮೀನು
ಹಿಡಿದು ಬುಟ್ಟಿಗೆ ಹಾಕಿದ
ಹಿಂದೆ ಕುಳಿತ ಟಾಮಿ
ಅವನು ಹೊಟ್ಟೆಗೆ ಇಳಿಸಿದ.

ಗಾಳ ಹಾಕಿ ಪುಟ್ಟನು  ಪ್ರಕೃತಿ
ಸೌಂದರ್ಯವನು ಸವಿದ
ಹಿಂದೆ ಕುಳಿತ ಟಾಮಿ
ಮೀನ ರುಚಿಯ ನೋಡಿದ

ಕೊಳದ ಬಳಿಯ ಗುಡಿಸಲಲ್ಲಿ
ಮೀನು ಸುಡಲು ಆಸೆ ಪಟ್ಟನು
ಒಂದೊಂದೆ ಮೀನು ತಿಂದ
ಟಾಮಿ ಡರ್.. ಎಂದು ತೇಗಿದನು.

ಖಾಲಿಬುಟ್ಟಿಯನ್ನು ನೋಡಿ ಪುಟ್ಟ
ಸಿಟ್ಟಿನಿಂದ ಕೋಲು‌ ಎತ್ತಿದ
ಕುಯ್ ..ಗುಡುತ ಟಾಮಿ
ಬಾಲ ಎತ್ತಿ ದೂರಕೆ ಓಡಿದ.

*ಸಿ ಜಿ ವೆಂಕಟೇಶ್ವರ*
*ತುಮಕೂರು*






ಗಜ಼ಲ್ ೬೫


ಗಜ಼ಲ್ ೬೫

ಗಿರಿಯು ಬರಸೆಳೆದು ಆಗಸವನು ತಬ್ಬಿದೆ
ನಾನಿಂದು  ಇನಿಯಳ ತನುವನು ತಬ್ಬಿದೆ

ಸಲಿಲಕೂ ಭುವಿಗೂ ಮುಗಿಯದ ಬಂಧ
ಸುಲಲಿತವಾಗಿ ಅರಿವ ಮನವನು ತಬ್ಬಿದೆ

ನೀನಿದ್ದರೆ ನನ್ನ ಬದುಕೆಲ್ಲ ಬಂಗಾರ
ನಮಗಾಗಿ ನಮ್ಮಿಬ್ಬರ ಗೆಲುವನು ತಬ್ಬಿದೆ

ನೀನಿರದೆ ಬಲಹೀನನು‌ ನೀನೆನಗೆ ಬಲ
ನನ್ನೊಲವ ನೂರಾನೆಯ ಬಲವನು ತಬ್ಬಿದೆ

ಕಾಮನೆಗಳಿಗೆ ಸಾವಿರಾರು ರಂಗುಗಳು
ಹೊಂಬಣ್ಣ ಸಿಹಿಜೀವಿಯ ಒಲವನು ತಬ್ಬಿದೆ

*ಸಿ ಜಿ ವೆಂಕಟೇಶ್ವರ*

15 June 2020

ಗಜ಼ಲ್ (ಕಟುಕರಿರುವರು)


ಗಜ಼ಲ್

ಚಿಗುರುವ ಮುನ್ನವೇ ಕತ್ತರಿಸುವ ಕಟುಕರಿರುವರು
ಹೆಣ್ಣು ಅಬಲೆಯೆಂದು  ಅಪಹರಿಸುವ ಕಟುಕರಿರುವರು.

ಹಸುಳೆ ಮುದುಕಿಯರೆಂದು ನೋಡದೆ
ಎರಗುವರು
ಮನೆಯ ಒಳಗೂ ಹೊರಗೂ ಹಿಂಸಿಸುವ ಕಟುಕರಿರುವರು.

ಅಬಲೆಯರ ಕಣ್ಣೀರ ಕೋಡಿಗೆ ಕೊನೆಯೆಂದು?
ಕೋಮಲೆಯರ ಶೀಲಹರಣ ಮಾಡಿ ಸಂಭ್ರಮಿಸುವ ಕಟುಕರಿರುವರು.

ಬೇಲಿಯೇ ಎದ್ದು ಹೊಲವ ಮೇಯುಲು ಕಾಯುವರಾರು?
ಕಾಯಬೇಕಾದ ಸಂಬಂಧಿಕರೆ ಕೊಂದು ಮುಗಿಸುವ ಕಟುಕರಿರುವರು.

"ಸಿಹಿಜೀವಿ"ಯಗಳಿಗೆ ಕಹಿ ಗುಳಿಗೆಗಳೆ ಎಲ್ಲಾಕಡೆ
ಗಳಿಗೆಗೊಬ್ಬರಂತೆ ಕೋಮಲೆಯರ ಮುಗಿಸುವ ಕಟುಕರಿರುವರು.

*ಸಿ ಜಿ ವೆಂಕಟೇಶ್ವರ*

14 June 2020

ಸ್ವಾಮಿ ಪುರುಷೋತ್ತಮಾನಂದಜಿ ಅವರ ನೆನಪಿಗಾಗಿ ಹಾಯ್ಕುಗಳು

ವಿವೇಕ ಕಿಡಿ
ಪುರುಷೋತ್ತಮಾನಂದ
ಸವಿನೆನಪು.

೪೭

ಸಂತ ಜೀವನ
ಪುರಷರಲಿ ಮೇಲು
ಪುರೋಷೋತ್ತಮ .

೪೮

ವಿವೇಕ ಪಥ
ಸ್ವಾಮೀಜಿಯ ಬೋಧನೆ
ಆನಂದವಿದೆ

೪೯

ಪುರುಷ ಸಿಂಹ
ಪುರ ಜನರ ಗುರು
ಪುರುಷೋತ್ತಮ

೫೦

ವಿವೇಕಾನಂದ
ರಾಮಕೃಷ್ಣ ಶಾರದೆ
ಮೊತ್ತ ಸ್ವಾಮೀಜಿ


ಸಿ ಜಿ ವೆಂಕಟೇಶ್ವರ


ಸಿಹಿಜೀವಿಯ ಹಾಯ್ಕುಗಳು (ರಕ್ತ ದಾನ ದಿನ)

ಸಿಹಿಜೀವಿಯ ಹಾಯ್ಕುಗಳು

೪೪


ಜೀವ ಅಮೂಲ್ಯ
ರಕ್ತದಾನ ಮಾಡುವ
ನಾವೆಲ್ಲ ಒಂದೆ

೪೫

ಜೀವ ಉಳಿಸಿ
ಮಾಡೋಣ ರಕ್ತ ದಾನ
ಕರ್ಣರಾಗುವ 

11 June 2020

ಸಿಹಿಜೀವಿಯ ಹನಿ (ಎದ್ದಳು)

*ಎದ್ದಳು*

ಕಣ್ಣೋಟದಲ್ಲೆ
ನನ್ನ ಹೃದಯ ಕದ್ದಳು
ಅಂದಿನಿಂದ ನನ್ನ
ಹೃದಯದಲ್ಲೇ ಇದ್ದಳು
ನನಗಿಂತ ಶ್ರೀಮಂತ
ಸಿಕ್ಕ ಮೇಲೆ ಎದ್ದಳು

*ಸಿ ಜಿ ವೆಂಕಟೇಶ್ವರ*

ಸಿಹಿಜೀವಿಯ ಚುಟುಕುಗಳು



ಚುಟುಕು ೧

*ಅಪಥ್ಯ*

ಬರೀ ಗಂಡು ಮಗುವೆ
ಬೇಕು ಇವರಿಗೆ ಹೆಣ್ಣು
ಮಕ್ಕಳಾದರೆ ಅಪಥ್ಯ.
ಪರಿಣಾಮವಾಗಿ ಇಂದು
ಅವ್ಯಾಹತವಾಗಿ ನಡೆದಿದೆ
ಹೆಣ್ಣು ಭ್ರೂಣದ ಹತ್ಯೆ .

ಚುಟುಕು ೨

*ಮಾನವ ಸಂಪನ್ಮೂಲ*

*ಮಾನವ ಸಂಪನ್ಮೂಲ*
ನಾವು ಹೇಳದಿರೋಣ
ಜನಸಂಖ್ಯೆಯೇ ಎಲ್ಲಾ
ಸಮಸ್ಯೆಗಳ ಮೂಲ
ಬದಲಾಯಿಸಲು ಆಗೋಣ
ನಾವೆಲ್ಲರೂ ಅಮೂಲ್ಯ
ಮಾನವ ಸಂಪನ್ಮೂಲ.

*ಸಿ ಜಿ ವೆಂಕಟೇಶ್ವರ*
*ತುಮಕೂರು*




10 June 2020

ಸನ್ಮಾರ್ಗ ಭಾಗ ೭


ಸನ್ಮಾರ್ಗ

ಭಾಗ ೭


ಯರಬಳ್ಳಿಮಾರಮ್ಮ ಗ್ರಾಮ ದೇವತೆಯಾದ ಕಾರಣ ಊರಿನ ಸಕಲ ಜನರ ಆರಾಧ್ಯ ದೈವವಾಗಿ ಭಕ್ತರ ಸಕಲ ಇಷ್ಟಾರ್ಥಗಳ ಈಡೇರಿಸುತ್ತಿದ್ದಳು. ಗುಡಿಯ ಪೂರ್ವದಿಂದ ಐಮಂಗಲ ರಸ್ತೆಯವರೆಗೆ ಬಹುತೇಕ ನಾಯಕರ ಮನೆಗಳು, ಬಹಳ ಮನೆಗಳು ಜಂತೆ ಮನೆಗಳು ,ಕೆಲ‌ ತೆಂಗಿನ ಗರಿಯ ಗುಡಿಸಲು, ಇನ್ನೂ ಕೆಲವು ಕಡಪ ಕಲ್ಲಿನ ತಾರಸಿ ಮನೆಗಳು ಅವುಗಳ ಮುಂದೆ ಬಾಗಿದಂತೆ ಚಪ್ಪರ ಎಲ್ಲಾ ಮನೆಗಳಲ್ಲಿ ‌ಸಮಾನ್ಯ .ಕೆಲ ಮನೆಗಳ ಮುಂದೆ ಮೇಕೆ ಕುರಿಗಳನ್ನು ಕಟ್ಟಿ ಅವುಗಳ ಮುಂದೆ ಸುಬಾಬುಲ್ ,ಹುಣಸೆ ಮುಂತಾದ ಸೊಪ್ಪು ಗಳನ್ನು ಕಟ್ಟಲಾಗಿತ್ತು.
ನಾಯಕರ ಮನೆಯ ಮಧ್ಯ ಅಲ್ಲಲ್ಲಿ‌ ಚದುರಿದಂತೆ  ಅಗಸರ, ಊರುಗೊಲ್ಲರ,ಒಡ್ಡರ  ಮನೆಗಳಿದ್ದವು‌ .
ಮಾರಮ್ಮನ ಗುಡಿಯ ಹಿಂಬಾಗದಲ್ಲಿ ಕೆಲ ಕುರುಬರ ಮನೆಗಳು, ಹೆಚ್ಚಾಗಿ ಒಕ್ಕಲಿಗರ ಮನೆಗಳಿದ್ದವು .ಗುಡಿಯ ಬಲಭಾಗದ ಊರ ಭಾಗಿಲಿನ ಬಲಕ್ಕೆ ಮಾದರ, ಕ್ಷೌರದವರ ಮನೆಗಳು . ಬಹಳ  ಮಾದರ ಮನೆಗಳು ಗುಡಿಸಲು ಮನೆಗಳು ಒಂದೊ ಎರಡೂ ಗ್ರಾಂಟಿನ ಮನೆಗಳು ಅವುಗಳ ಹೊರ ಮತ್ತು ಒಳಗೆ ಸಿಮೆಂಟಿನ ಸ್ಪರ್ಶ ಇಲ್ಲ. ಒಳಗೆ ವಾರಕ್ಕೊಮ್ಮೆ ದೇವರ ಪೂಜೆ ಮಾಡಲು ಸಗಣಿಯಿಂದ ಸಾರಿಸಿ ಸ್ವಚ್ಛ ಮಾಡಿದರೆ ಹೊರಗೆ ವರ್ಷಕ್ಕೆ ಒಮ್ಮೆ ಹೆಚ್ಚೆಂದರೆ ಎರಡು ಬಾರಿ ಮಾತ್ರ ಉಗಾದಿ ಹಬ್ಬಕ್ಕೆ ,ಜಾತ್ರೆಗೆ ಅಲ್ಪ ಸ್ವಲ್ಪ ಮಣ್ಣಮೆತ್ತಿ ಸಗಣಿಯ ಗಬ್ಬಡ ಕದರಿ ಈಚಲ ಮರದ ಎಲೆಯ ಪೊರಕೆಯಲ್ಲಿ  ಸಗಣಿ ಬಳಿದರೆ ಅದೇ ಮನೆಯ ಕಳೆ ಹೆಚ್ಚಿಸಿದಂತೆ .ಸಗಣಿ ಬಳಿದ ಮೊದಲೆರಡು ವಾರ ಏನೊ ಒಂದು ರೀತಿಯ ಅಸಹನೀಯ ವಾಸನೆ ಆದರೂ ಕ್ರಮೇಣ ಅದು ಅವರಿಗೆ ಒಗ್ಗಿ ಹೋಗುತ್ತಿತ್ತು.ಬಹುತೇಕ ಒಕ್ಕಲು ಕುಟುಂಬದ ಮನೆಗಳು ಕಟ್ಟಿಗೆಯ ಮತ್ತು ಮಣ್ಣಿನ ಮೇಲ್ಚಾವಣಿಯ ಮನೆಗಳು, ಮುಂದೆ ದನ ಎತ್ತುಗಳನ್ನು ಕಟ್ಟಲು ಚಿಕ್ಕ ಗುಡಿಸಲು ಅಥವಾ ಸಿಮೆಂಟ್ ಶೆಡ್ ಕಟ್ಟಿಸಿದ್ದರು .ಒಂದೆರಡು ಸಾಬರ ಮನೆಗಳು ಮೊದಲು ‌ಇದ್ದವು ಈಗ ಕೆಲವರ್ಷಗಳ ಹಿಂದೆ ಹರ್ತಿಕೋಟೆ ಮತ್ತು ಹಿರಿಯೂರಿಗೆ ಹೋಗಿ ಸೆಟ್ಲ್ ಆಗಿದ್ದರು.
ಒಟ್ಟಿನಲ್ಲಿ ಎಲ್ಲಾ ಜಾತಿಗಳ ಜನರು ಸಮಾನತೆ ಇಲ್ಲದಿದ್ದರೂ ಅನ್ಯೋನ್ಯತೆಯಿಂದ ಬದುಕುತ್ತಿದ್ದರು. ಮಾರಮ್ಮನ ಕೃಪೆಯಿಂದ ಗುಡಿಯಿಂದ ದೂರದಿಂದ ನಮಿಸಿದರೂ ಕೆಳ ವರ್ಗದ ಜನರೂ ಕ್ರಮೇಣ ಆಯುರಾರೋಗ್ಯ ಆನಂದಗಳು ಹೆಚ್ಚಾಗುವುದು ಅವರ ಗಮನಕ್ಕೆ ಬರತೊಡಗಿದವು. ಇನ್ನೂ ಒಕ್ಕಲಿಗರ ಮತ್ತು ನಾಯಕರ ಮನೆಗಳು ಕ್ರಮೇಣ ಅಭಿವೃದ್ಧಿಯ ಹಾದಿ ಹಿಡಿದವು.
"ಶ್ರೀದೇವಿ ಮಹಾತ್ಮೆ " ಪುಸ್ತಕ ಓದಿಸಿ ಮನೆಯಲ್ಲಿ ಒಳ್ಳೆಯದು ಕಂಡವರು ಬೀರೇನಹಳ್ಳಿ ಗೌಡರು "ನೀನೂ ಯಾಕೆ ದೇವಿ ಮಹಾತ್ಮೆ ಪುಸ್ತಕ ನಿಮ್ಮನೇಲಿ ಓದಿಸಬಾರದು" ಎಂದು ಕಂಬಣ್ಣ ಮುಕುಂದಯ್ಯನಿಗೆ ಕೇಳಿದ "ಆಗಲೇಳು ಓದಸಾಣ ತಾಯಿ ನಮಗೆ ಒಳ್ಳೆದು ಮಾಡ್ತಾಳೆ ಅಂದರೆ ಬ್ಯಾಡ ಅನ್ನಕಾಗುತ್ತಾ?" ಖುಷಿಯಿಂದ ನುಡಿದರು ಮುಕುಂದಯ್ಯ.
ಅದು ಚಿದಾನಂದಾವದೂತರು ರಚಿಸಿದ ಭಾಮಿನಿ ಷಟ್ಪದಿಯಲ್ಲಿ ಇರುವ ಹದಿನೆಂಟು ಅಧ್ಯಾಯಗಳ ಭಕ್ತಿ ಪ್ರಧಾನ ಪುಸ್ತಕ " ಪರಮ ಪರತರ ಪರಮ ಮಂಗಳ ....."ಎಂದು ಆರಂಭವಾಗುವ ಆ  ದೈವಿಕ ಗ್ರಂಥವು ."ಜಯಮಂಗಳಂ ನಿತ್ಯ ಶುಭ ಮಂಗಳಂ" ಎಂಬ ಮಂಗಳ ಗೀತೆಯೊಂದಿಗೆ ಮುಕ್ತಾಯವಾಗುತ್ತದೆ.
ಭಾರತೀಯ ಸನಾತನ ಸಂಸ್ಕೃತಿಯ ಪ್ರಭಾವವವೋ, ಹೆಚ್ಚಿರುವ ಆಸ್ತಿಕರ ಸಂಖ್ಯೆಯೊ, ಜನರ ಅತಿಯಾಸೆಗಳು ಹೆಚ್ಚಾಗಿ ಕಷ್ಟಗಳು ಬಂದು ದೇವರಮೊರೆ ಹೋಗುವ ಪರಿಣಾಮವೋ, ಹಳ್ಳಿಯ ಮುಗ್ದ ಜನರ ನಿಷ್ಕಲ್ಮಶ  ಮನಸೋ, ದೇವರ ಕಾರ್ಯ ದೈವಪುಸ್ತಕ‌ಪಾರಾಯಣ ಎಂದರೆ ಎಲ್ಲಿಲ್ಲದ ಆಸಕ್ತಿ ಅದರಲ್ಲಿ ಮುಕುಂದಯ್ಯ ಮತ್ತು ಸರಸ್ವತಜ್ಜಿ ಒಂದು ಹೆಜ್ಜೆ ಮುಂದೆ ಎಂದು ಹೇಳಬಹುದು.
ಕವ್ವೆಂಬ ಕತ್ತಲೆ ಎಲ್ಲೋ ದೂರದಲ್ಲಿ ನಾಯಿ ಊಳಿಡುವ ಸದ್ದು.ಅಂದು ತಡರಾತ್ರಿ ಬಿರುಸಾದ ಮಳೆ ಬಿದ್ದ ಪರಿಣಾಮವಾಗಿ ಜಿದ್ದಿಗೆ ಬಿದ್ದವರಂತೆ ಕಪ್ಪೆಗಳು ವಟರ್ ವಟರ್.. ಸದ್ದು ಎಲ್ಲೋ ಕ್ರೀಚ್ ಕ್ರೀಚ್ ಎಂಬ ಸದ್ದು ಮಾಡುವ ರಾತ್ರಿ ಹುಳು .ಇಡೀ ಊರೇ ನಿದ್ರಿಸುವ ಸಮಯದಲ್ಲಿ ಸರಸ್ವತಜ್ಜಿದು ಒಂದೇ ಪ್ರಶ್ನೆ  ಇನ್ನೂ ಯಾಕೆ ಕೋಳಿ ಕೂಗಲಿಲ್ಲ? ವಯಸ್ಸಾದಂತೆ  ನಿದ್ದೆ ಬರಲ್ಲವಂತೆ ಅದಕ್ಕೆ ಅಜ್ಜಿ ಕಣ್ಣ ಮುಚ್ಚಿಕೊಂಡೆ ಕಿವಿಯಗಲಮಾಡಿ ಊರಿನ ಎಲ್ಲಾ ಶಬ್ದಗಳನ್ನು ಆಲಿಸುತ್ತಿದ್ದರು.ಕೊ..ಕ್ಕೋ...ಕ್ಕೂ ಎಂಬ ಶಬ್ದ ಅಜ್ಜಿ ಕವಿಗೆ ಬಿದ್ದ ಕೂಡಲೆ"
"ಏ ತಿಮ್ಮಕ್ಕ ಎದ್ದಾಳು ಇವತ್ತು ಜಲ್ದಿ ಎದ್ದು ವಾರ ವಂಜನೆ ಮಾಡಿ ಮೈ ತೊಳಕಂಡು ಅಡಿಗೆ ಮಾಡು ದೇವಿ ಪುರಾಣ ಓದಬೇಕು.ನೀನು ಎದ್ದಾಳ ಮುಕುಂದ,ಸೇದಾಬಾವ್ಯಾಗೆ ನೀರು ಸೇದಿ ತಂದು ಮೀಸಲು ನೀರಲ್ಲಿ ದ್ಯಾವರ ಕೋಣೆ ತೊಳ್ದು ಪೂಜೆಗೆ ರೆಡಿ ಮಾಡು ,ಹೇ ಮುರಾರಿ ಎದ್ದು ಹೊಲ್ದಕೆ ಹೋಗಿ ಬಿಲ್ಪತ್ರೆ,ಕಣಗಲ ಹೂ, ಶಮಿಪತ್ರೆ ಎಲ್ಲಾ ತರ ಹೂಗಳನ್ನು ತಾಂಬ , ಹೇ ಬಿಳಿಯ ಇವನೊಬ್ಬ ಸೋಮಾರಿ ಏಳಾ ಮ್ಯಾಕೆ ,ಏ ಎದ್ದೇನೋ ಗುರುಸಿದ್ದ ಸಗಣಿ ಬಾಸೋ" ಎಂದು ಒಂದೇ ಸಮನೆ ಎಲ್ಲರನ್ನೂ  ಎಬ್ಬಿಸೋದ ನೋಡಿ ಸತೀಶ ಇನ್ನೂ ಮುಂದಿನ ಹೆಸರು ನಂದೇ ಅಂತ ಅರ್ಥ ಮಾಡಿಕೊಳ್ಳಲು ಕಷ್ಟವಾಗಲಿಲ್ಲ ಎದ್ದು ದುಪ್ಪಡಿ ಮಡಿಚಿ ಕೈಕಾಲು ಮುಖ ತೊಳೆದುಕೊಂಡು ಇಂಗ್ಲೀಷ್ ನೋಟ್ಸ್ ತೆಗೆದು ಓದಲು ಆರಂಬಿಸಿದ .
"ಅಷ್ಟೇ ಕಣ್ರಲ ಅದೇನು ಮಹಾ ಅಲ್ಲ, ಕಲಿಯೋ ವರೆಗೂ ಬ್ರಹ್ಮ ವಿದ್ಯೆ ,ಕಲ್ತ್ ಮ್ಯಾಲೆ ಕೋತಿ ವಿದ್ಯೆ, ಇನ್ನ ನೀವೆ ಬ್ಯಾರೆ ಜನಕ್ಕೆ ಹೇಳಿ ಕೊಡ್ತಿರಾ ತಗ ಓದು ಈ ಮುಂದಿನ ಅಧ್ಯಾಯ" ಎಂದು ಮುಕುಂದಯ್ಯ ನಿಗೆ ದೇವಿ ಪುಸ್ತಕ ಕೊಟ್ಟು ಹೇ ಮುರಾರಿ ನೀನು ಪ್ರತಿ ಅದ್ಯಾಯ ಮುಗಿತಂಗೆ ತೆಂಗಿನಕಾಯಿ ಹೊಡಿ" ಹೇಳಿಕೊಡುತ್ತಿದ್ದರು ಜಲ್ದಪ್ಪ.
ಜಲ್ದಪ್ಪ ಬೆಳಿಗ್ಗೆ ಒಂಬತ್ತು ಗಂಟೆಗೆ ಬಂದು ದೇವಿಮಹಾತ್ಮೆ ಓದೋ ರೀತಿ ರಾಗ ,ಉಸಿರು ‌ಹಿಡಿಯುವುದು, ಧ್ವನಿಯಲ್ಲಿ ಏರಿಳಿತ , ಹಳಗನ್ನಡ ಅಕ್ಷರಗಳನ್ನು ತಪ್ಪಿಲ್ಲದಂತೆ ಓದುವುದನ್ನು ಮುಕುಂದಯ್ಯ ಮತ್ತು ಮುರಾರಿಯನ್ನು ಅಕ್ಕ ಪಕ್ಕದಲ್ಲಿ ಕೂರಿಸಿಕೊಂಡು ಒಂದೆರಡು ಅಧ್ಯಾಯ ಓದಿದ್ದರು .
ಅಂದು ಸಂಜೆ ಆರು ಗಂಟೆಗೆ ಪೂರ್ತಿ ದೇವಿ ಮಹಾತ್ಮೆ ಪಾರಾಯಣ ಮುಗಿದು ಊರಿನ ಪ್ರಮುಖರು ಅತ್ಮೀಯರು  ಸೇರಿದಾಗ ಮಂಗಳಾರತಿ ಅಯಿತು .ನಂತರ ತೀರ್ಥ, ಪಂಚಾಮೃತ ಮತ್ತು ಮಂಡಕ್ಕಿ ಕಾಯಿತುರಿ,ಬೆಲ್ಲ ,ಬಾಳೆ ಹಣ್ಣು, ತಂಬಿಟ್ಟು ಇವನ್ನೆಲ್ಲಾ ಕಲೆಸಿ ಮಾಡಿದ ಪಳಾರವನ್ನು ಎಲ್ಲರಿಗೂ ನೀಡಿದರು.ಗೋವಿಂದ..... ಎಂಬ ಶಾಸ್ತ್ರ ಮಾಡಿ ನೆರೆದ ಜನರಿಗೆ ಅನ್ನಸಂತರ್ಪಣೆ ಮಾಡಿದರು ಊಟ ಮಾಡಿದವರು ಬಾಳೆ ಹಣ್ಣು ತಿಂದು "ಅನ್ನದಾತ ಸುಖೀಭವ" ಎಂದು ಹರಸುತ್ತಾ ಅವರ ಮನೆ ಸೇರಿದರು.
ಸಂತೆಯ ನೆಲವಳಿ ಎತ್ತುವ ಹರಾಜಿನಲ್ಲಿ ಮುಕುಂದಯ್ಯ ಅತಿ ಹೆಚ್ಚು ಬಿಡ್ ಕೂಗಿ "ಈ ವರ್ಷ ನೆಲವಳಿ ಎತ್ತುವ ಕಾರ್ಯ ಮುಕುಂದಯ್ಯ ಅವರಿಗೆ ಹೋಗಿದೆ" ಎಂದು ಪಂಚಾಯಿತಿಯ ಮಂಜಣ್ಣ ಘೋಷಣೆ ಮಾಡಿ "ಬಾರಣ್ಣ ಒಂದು ಸೈನ್ ಮಾಡು" ಎಂದು ಕರೆದು ಪೆನ್ನು ಕೊಟ್ಟ.
ಅಣ್ಣನ ಜೊತೆಗಿದ್ದ ಮುರಾರಿ ಸ್ವಲ್ಪ ಅಸಮಾಧಾನಗೊಂಡರೂ ತೋರುಗೊಡದೆ 'ಅಲ್ಲ ನಮ್ಮಣ್ಣನಿಗೆ ಬುದ್ದಿ ಇದೆಯಾ? ಇಷ್ಟೊಂದು ದೊಡ್ಡ ಮೊತ್ತಕ್ಕೆ ಹರಾಜು ಕೂಗುವ ಅಗತ್ಯ ಇತ್ತೆ? ಮ್ಯಾಗಳ ಮನೆ ರಂಗಸ್ವಾಮಿ ಮೂರು ಸಾವಿರಕ್ಕೆ ಕೂಗಿ ಸುಮ್ಮನಾದಾಗ  ಇದ್ದಕ್ಕಿದ್ದಂತೆ ಐದುಸಾವಿರ ಎಂದು ಯಾಕೆ ಕೂಗಬೇಕಿತ್ತು ? ಮೂರುವರೆ ಅಂದರು ನಮಗೆ ಆಗಿರೋದು .ನಮ್ಮೂರು ಸಂತೆ ಏನು ಹಿರಿಯೂರು ಚಳ್ಳಕೆರೆಯಂತಾ ದೊಡ್ಡ ಸಂತೇನಾ?" ಎಂದು ಮನದಲ್ಲಿ ಸಾವಿರಾರು ಪ್ರಶ್ನೆಗಳು ಇದ್ದರೂ ಹಿರಿಯೂರಿನ ಸಕ್ಕರೆ ಕಾರ್ಖಾನೆ ಮುಚ್ಚಿ ಕೆಲಸ ಕಳೆದುಕೊಂಡ ನಂತರ ಅಣ್ಣ ಹೇಳಿದ ಕೆಲಸ ಮಾತ್ರ ಮಾಡಿಕೊಂಡು ಸಾಗುತ್ತಿದ್ದ ,ಮುರಾರಿ ಅಣ್ಣನನ್ನು ಹಿಂಬಾಲಿಸಿದ.
ಮಾರಮ್ಮನ ಗುಡಿಯ ಮುಂದಿನ ಡಾಂಬರು ರಸ್ತೆ ದಾಟಿ ಮುಂದೆ ಸಾಗಿದರೆ ಊರ ಮುಂದಿನ ತೊಪಿನಲ್ಲಿ ಪ್ರತಿ ಶುಕ್ರವಾರ ನೆರೆದ ಜನರ ನೋಡುವುದೇ ಸಡಗರ . ಉದ್ದನೆಯ ಸಾಲಿನ ಎದುರು ಬದುರು ಹಗ್ಗದಿಂದ ಡೇರೆ ಹೊಡೆದು ನೆರಳುಮಾಡಿಕೊಂಡು ಬದನೆಕಾಯಿ, ಉರುಳಿಕಾಯಿ,ಆಲೂಗಡ್ಡೆ, ಮುಂತಾದ ತರಕಾರಿಗಳಿಂದ ಹಿಡಿದು ಎಲೆ ಅಡಿಕೆ, ಮನೆ ಸಾಮಾನುಗಳ ಏನುಂಟು ಏನಿಲ್ಲ. "ಹತ್ ರುಪಾಯಿಗೊಂದ್ ಕೆಜಿ......" ಎಂದು ಒಂದು ಧ್ವನಿ ಕೂಗಿದರೆ" ಡಜನ್ ಮೂರು ರುಪಾಯಿ......"ಎಂದು  ಮತ್ತೊಂದು ಧ್ವನಿ."ಐದು ರುಪಾಯಿಗೆ ಕಾಲ್ಕೇಜಿ ...."ಎಂದು ಹೆಣ್ಣು ಧ್ವನಿ ಕೂಗಿದರೆ ."ಒಂದಕ್ಕೊಂದು ಪ್ರೀ ..."ಎಂದು ಗಂಡು ಧ್ವನಿ ಕೂಗುತ್ತಿತ್ತು ಸೂರ್ಯ ನೆತ್ತಿಯ ಮೇಲೆ ಬಂದಂತೆ ತರಕಾರಿಯ ಮೇಲಿನ ಡೇರೆಗಳು ಕಾವಲಿಯಂತೆ ಬಿಸಿ ಏರಿದರೆ, ಕೂಗುವವರ ಸ್ವರ  ಇಳಿದಿತ್ತು .
ಅದು ಯರಬಳ್ಳಿ ಸಂತೆ . ಪ್ರತಿ ವ್ಯಾಪಾರಮಾಡುವವರೊಂದಿಗೆ ಇಂತಿಷ್ಟು ಹಣ ಎಂದು ನಿಗದಿ ಮಾಡಿ ವಸೂಲು ಮಾಡಿದ ಮುಕುಂದಯ್ಯ ಸಹೋದರರು  ಸಂಜೆ  ಮನೆಗೆ ಬಂದು ನೆಲವಳಿ ಹಣ ಎಣಿಕೆ ಮಾಡಿದರು ಮೊದಲ ವಾರವೇ ಬರೊಬ್ಬರಿ ೮೯೩ ರೂ ಬಂದಿತ್ತು ಅಣ್ಣನೆಡೆಗೆ ಮೆಚ್ಚುಗೆಯ ನೋಟ ಬೀರಿದ ಮುರಾರಿ ,ಸರಸ್ವತಜ್ಜಿ ಇದೆಲ್ಲಾ ಆ ದೇವಿ ಮಹಿಮೆ ಕಣ್ರಪ್ಪ ಎಂದು ಲೈಟ್ ಹಾಕಿ ದೀಪ ಬೆಳಗಿಸಲು ದೇವರ ಮನೆ ಕಡೆ ಹೆಜ್ಜೆ ಹಾಕಿದರು.
ಮುಂದುವರೆಯುವುದು....
ಸಿ ಜಿ ವೆಂಕಟೇಶ್ವರ

09 June 2020

ಸಂಕಷ್ಟ ಹರ ಗಣಪನ ಕೃಪೆ(ಕಥೆ)


ಕಥೆ
ಸಂಕಷ್ಟ ಹರ ಗಣಪನ ಕೃಪೆ

ಲಕ್ಷಾಂತರ ಕಾಂಕ್ರೀಟ್ ಕಟ್ಟಡಗಳು ಗಗನ ಚುಂಬಿಗಳಾಗಿ ಬೆಂಗಳೂರು ಕಾಂಕ್ರೀಟ್ ಸಿಟಿ ಎಂದು ಕರೆದರೂ,ಬೆಂಗಳೂರು ಗಾರ್ಡನ್ ಸಿಟಿ ಎಂದು ಪರಿಚಿತವಾಗಿದೆ.
ಅದಕ್ಕೆ ಕಾರಣ ಕಬ್ಬನ್ ಪಾರ್ಕ್, ಲಾಲ್ ಬಾಗ್ ಪ್ರಮುಖವಾದ ಕಾರಣವಾದರೂ ವಿವಿಧ ಬಡಾವಣೆಗಳ  ಗಿಡ ಮರಗಳ ಕೊಡುಗೆಯೂ ಕಡಿಮೆಯೇನಲ್ಲ.

ವಿಜಯ ನಗರದ ಮೂರನೆಯ ಮುಖ್ಯರಸ್ತೆಯ, ಐದನೆಯ ಅಡ್ಡರಸ್ತೆಯಲ್ಲಿ  ಬಹಳ ಹಳೆಯ ಕಾಲದ ಅಶ್ವಥ್ಥ ವೃಕ್ಷ  ಇಡೀ ವಿಜಯ ನಗರಕ್ಕೆ ಸೌಂದರ್ಯ ಮತ್ತು ಧಾರ್ಮಿಕ, ಮತ್ತು ಸಂಸ್ಕೃತಿಯ  ಪ್ರತೀಕವಾಗಿತ್ತು. ವೈಜ್ಞಾನಿಕ ಚಿಂತಕರಿಗೆ ಈ ಮರ ಆಮ್ಲಜನಕ ನೀಡುವ ಸಾಗರವೆಂದು ಗೌರವವಿದ್ದರೆ, ಆಸ್ತಿಕರಿಗೆ ಈ ಮರ ಬ್ರಹ್ಮ, ವಿಷ್ಣು ಮಹೇಶ್ವರ ಮೂರು ದೇವರು ಒಂದೆಡೆ ಸೇರಿದ ದೈವ ಸ್ವರೂಪದ ಮರ , ಎಂದು ಪೂಜ್ಯ ಭಾವನೆ ಹೊಂದಿದ್ದರು.

ಅಂದು ಸಂಕಷ್ಠಿ ಗಣಪತಿ ಪೂಜೆ ಮಾಡಲು  ನಿರ್ಧಾರ  ಮಾಡಿದ  ಸುಜಾತ ಬೆಳಗಿನ ಜಾವ ಬೇಗನೆ ಎದ್ದು ಸ್ನಾನ ಮಾಡಿ , ಅವಳಿಗೆ ಇಷ್ಟವಾದ ಹಳದಿ ಬಣ್ಣದ ರೇಷ್ಮೆ ಲಂಗ , ಕೆಂಪುಬಣ್ಣದ ದಾವಣಿ ಧರಿಸಿಕೊಂಡು ಭಾವ ತಂದಿದ್ದ ಎರಡು ಮೊಳ ಹೂ ಮುಡಿದು, ಸೀರೆಗೆ ಮ್ಯಾಚಿಂಗ್ ಆಗುವ ಕೆಂಪು ಹಳದಿ ಬಳೆಗಳ ತೊಟ್ಟು, ಕನ್ನಡಿಯಲ್ಲಿ ನೋಡಿಕೊಂಡು   ಹಣೆಗೆ ಕುಂಕುಮವನ್ನು ಇಟ್ಟುಕೊಂಡು, ತನ್ನ ಸೌಂದರ್ಯವನ್ನು ತಾನೇ ನೋಡಿಕೊಂಡು ಸಂತಸದಿಂದ, ದೇವರಿಗೆ ಹೂ , ಹಣ್ಣು  , ಕಾಯಿ ತೆಗೆದುಕೊಳ್ಳಲು ದೇವರ ಕೋಣೆಯ ಕಡೆ ನಡೆದಳು
" ಅಕ್ಕಾ, ಬರೀ ಬಿಡಿ ಹೂ ಇದ್ದಾವೆ, ಕಟ್ಟಿರೋ ಹೂ ಇಲ್ವಾ? ನಾನೀಗ ಅಶ್ವಥ್ ಮರದ ಗಣಪ ಪೂಜೆ ಮಾಡೋಕೆ ಹೋಗ್ಬೇಕು"
" ನಿನ್ನೆ ಕಟ್ಬೇಕು ಅಂದ್ಕೊಂಡೆ ,ಬೇರೆ ಕೆಲ್ಸ ಜಾಸ್ತಿ ಆಗಿ ,ಕಟ್ಲಿಲ್ಲ ಕಣೇ ಸುಜು, ಅಲ್ಲೆ ಮರದತ್ರ ಕಟ್ಟಿ , ದೇವರಿಗೆ ಹಾಕ್ಬಿಡಪ್ಪ"
" ಆಯ್ತಕ್ಕ  ಅಂಗೆ ಮಾಡ್ತಿನಿ"
ಎಂದು ದೇವರ ಪೂಜೆ ಸಾಮಾನುಗಳಿರುವ ಬುಟ್ಟಿ ತೆಗೆದುಕೊಂಡು ಅಶ್ವಥ್ ಗಣೇಶ ಮರದ ಕಡೆಗೆ ಹೊರಟಳು ಸುಜಾತ .

ಈಗಾಗಲೇ ಯಾರೋ ಗಣೇಶನ ಪೂಜೆ ಮಾಡಿ ಹೂ ಅಲಂಕಾರ ಮಾಡಿದ್ದರು.  ಮರದ ಕೆಳಗೆ ಬಂದು , ದೇವರಿಗೆ ಮತ್ತು ಮರಕ್ಕೆ ಕೈ ಮುಗಿದು, ಆಶ್ವಥ ಕಟ್ಟೆಯ ಮೇಲೆ ಕುಳಿತು , ಬುಟ್ಟಿಯಲ್ಲಿ ತಂದ ಬಿಡಿ ಹೂ ಮತ್ತು ದಾರ ತೆಗೆದುಕೊಂಡು ,ಹೂ ಕಟ್ಟಲು ಶುರಮಾಡಿದಳು,  ಅದೇ ಜಾಗಕ್ಕೆ ಎರಡು ಪಾರಿವಾಳಗಳು ಹಾರಿ ಬಂದು  , ಗಣಪತಿಯ ಬಲಭಾಗದಲ್ಲಿ ನಿಂತು ದೇವರ ಆಶೀರ್ವಾದ ಪಡೆದ ದೃಶ್ಯ ನೋಡಿದ  ಸುಜಾತ ಮನದಲ್ಲೇ ಅಂದುಕೊಂಡಳು,
"ಭಗವಂತ ನಾನು ಮತ್ತು ಸತೀಶ ಎಂದು ಈ ಪಕ್ಷಿಗಳ ರೀತಿಯಲ್ಲಿ ಬಂದು ನಿನ್ನ ಆಶೀರ್ವಾದ ಪಡೆವೆವು ಸ್ವಾಮಿ "ಎಂದುಕೊಂಡು ಹೂಕಟ್ಟಿ ಗಣಪತಿಯ ಪೂಜೆ ಮಾಡುವಾಗ
ದೇವರ ಬಲಭಾಗದಿಂದ ಹೂ ಬಿತ್ತು, ಅದನ್ನು ನೋಡಿ ಬಹಳ ಆನಂದಿಂದ ತೆಗೆದುಕೊಂಡು ಕಣ್ಣಿಗೊತ್ತಿಕೊಂಡು ,
" ನನ್ನ ಸತೀಶ ಸಿಗುವ  , ಓ ದೇವ ಧನ್ಯವಾದಗಳು "
ಎಂದು ಅಡ್ಡ ಬಿದ್ದು ,
ಮನೆ ಕಡೆ ಹೊರಟಳು .

ತಿಂಡಿ ತಿಂದು ಪುಸ್ತಕಗಳನ್ನು ತೆಗೆದುಕೊಂಡು, ಕಾಲೇಜಿಗೆ ಹೊರಟಳು ಸುಜಾತ .
" ನಿಮ್ಮ ಊರಿಂದ ನಿನಗೆ ಪತ್ರ ಬಂದಿದೆ ನೋಡೆ ಸುಜಾತ " ಎಂದು  ಗೆಳತಿ ಸಂಜನಾ   ಪತ್ರವನ್ನು ಕೈಗಿತ್ತಳು.

" ಆತ್ಮೀಯ ಸುಜಾತಳಿಗೆ ಚಿದಾನಂದ್ ಮಾಡುವ ನಮಸ್ಕಾರಗಳು  ಒಂದು ಸಿಹಿ ಸುದ್ದಿ ನಿನ್ನ ಸತೀಶನನ್ನು ದೇವೇಂದ್ರಪ್ಪ ತುಮಕೂರಿನಲ್ಲಿ ನೋಡಿದರಂತೆ, ಮುಂದಿನ ಮಾಹಿತಿ ನಂತರ ತಿಳಿಸುವೆ"
ಪತ್ರ ಓದಿದ್ದೇ ತಡ ಕಾಲೇಜಿನ ಕಾರೀಡಾರ್ ನಲ್ಲೇ ಸಂಜನಾಳನ್ನು ತಬ್ಬಿಕೊಂಡು ಖುಷಿ ಪಟ್ಟಳು.
" ಏ ಕೂಲ್ ಬೇಬಿ ವಾಟ್ ಹಾಪಂಡ್ ಎನಿ ಸ್ವೀಟ್ ನ್ಯೂಸ್?
" ನನ್ ಸತೀಶ ಸಿಕ್ಕನಂತೆ, ನನ್ ಸತೀಶ ನನಗೆ ಸಿಕ್ಕೇ ಸಿಕ್ತಾನೆ , ಎಲ್ಲಾ ಸಂಕಷ್ಟ ಹರ ಗಣಪನ ಮಹಿಮೆ, ....."
ಕಾಲೇಜಿನ ಕಾರಿಡಾರ್ ನಲ್ಲಿ
ಹೀಗೆ ಸಂತಸದಲ್ಲಿ ಮೈಮರೆತ ಸುಜಾತಾಳು ಮಾತನಾಡುವಾಗ  ಪ್ರಿನ್ಸಿಪಾಲ್ ,
"ಏ ಏನಮ್ಮ ಅದು ಅಂಗೆ ಕಿರುಚ್ತಾ ಇದಿಯಾ? ಆಮೇಲೆ ನನ್ ಚೇಂಬರ್ ಗೆ ಬಾ.... ಅಂದರು.

*ಸಿ ಜಿ ವೆಂಕಟೇಶ್ವರ*
*ತುಮಕೂರು*


08 June 2020

ವಿಘ್ನ ನಿವಾರಕ



*ವಿಘ್ನ ನಿವಾರಕ*

ಪೂಜೆಗೆ ಬಂದಿಹೆ
ವರವನು ಕರುಣಿಸೋ
ಮೊರದಗಲ ಕಿವಿಯ
ವಿನಾಯಕನೆ.

ಹೂಮಾಲೆ ಕಟ್ಟಿ
ಗಂಧ ,ಧೂಪದಿ
ಅರ್ಚಿಸುವೆ ಕಾಪಾಡೋ
ವಕ್ರತುಂಡನೆ.

ಪಾರಿವಾಳದ ಪರಿವಾರ
ಬಂದಿದೆ ನೋಡಿಲ್ಲಿ
ಪ್ರಾಣಿ ಪಕ್ಷಿಗಳ ರಕ್ಷಿಸು
ಲಂಬೋದರನೆ.

ಜಗವು ನಡುಗುತಿದೆ
ಅಗೋಚರ ಜೀವಿಗೆ
ಕಾಪಾಡು ನಮ್ಮನ್ನು
ವಿಘ್ನನಿವಾರಕನೆ.

*ಸಿ ಜಿ ವೆಂಕಟೇಶ್ವರ*

07 June 2020

ಇಂದು ವಿಶ್ವ ಆಹಾರ ಸುರಕ್ಷತಾ ದಿನದ ಪ್ರಯುಕ್ತ ಸಿಹಿಜೀವಿಯ ಹಾಯ್ಕುಗಳು

ಸಿಹಿಜೀವಿಯ ಹಾಯ್ಕುಗಳು

(ಇಂದು ವಿಶ್ವ ಆಹಾರ ಸುರಕ್ಷತಾ ದಿನ )

೪೧

ಸೇವಿಸಿದರೆ
ಕಲಬೆರೆಕೆ ಆಹಾರ
ಕಾಪಾಡೋ ಹರ

೪೨

ಕಲಬೆರಕೆ
ಆಹಾರ ಸುರಕ್ಷತೆ
ಕನಸ ಮಾತು

೪೩

ಕಲಬೆರಕೆ
ದೇಹವ ಸೇರುತಿದೆ
ರಾಸಾಯನಿಕ

 ಸಿ‌ ಜಿ ವೆಂಕಟೇಶ್ವರ

ಮುಖವೇ ಕನ್ನಡಿ ( ಚುಟುಕು)

*ಮುಖವೆ ಕನ್ನಡಿ* ಚುಟುಕು

ಪ್ರಿಯೆ ಮೋಸ ಮಾಡಲು ಏನೋನೋ
ಸಮಜಾಯಿಷಿ ಕೊಡಲು ಹಾಕದಿರು ಮುನ್ನುಡಿ.
ಮರೆಮಾಚಲಾಗದು ನಿನ್ನ ದುರುಳತನ
ಪ್ರತಿಫಲನ ಮಾಡುತಿಹುದು ನಿನ್ನ ಮುಖದ ಕನ್ನಡಿ.

ಸಿ ಜಿ ವೆಂಕಟೇಶ್ವರ
ತುಮಕೂರು

ಕಾಲಯ ತಸ್ಮೈ ನಮಃ ( ಚಿಕ್ಕ ಕತೆ)


ಚಿಕ್ಕ ಕಥೆ

*ಕಾಲಾಯ ತಸ್ಮೈ ನಮಃ*

‌"ಯಾವಾಗಲೋ ಹೈಸ್ಕೂಲಿನಲ್ಲಿ ಪ್ರೀತಿ ಮಾಡಿದ ಹುಡುಗನ ನೆನೆದು ಹೀಗೆ ಚಿಂತೆ ಮಾಡಬೇಡ ಕಣೇ ಸುಜಾತ , ನೀನೀಗ ಬೆಂಗಳೂರಿನಲ್ಲಿ ಇದೀಯಾ , ಡಿಗ್ರಿ ತೆಗೊಂಡಿದಿಯಾ, ಆದ್ರೂ ಅದೆಲ್ಲಿ ಇದಾನೋ ನಿನ್ ರೋಮಿಯೋ ? ಅವನ್ನ ನೆನೆದು, ನಿನ್ನ ಯೌವನ ಮತ್ತು ಸಮಯ ಹಾಳು ಮಾಡ್ಕೊತಾ ಇದಿಯಾ, ನನ್ ನೋಡು ಬಿಂದಾಸ್ ಆಗಿದಿನಿ , ಈಗ ನನ್ ನಾಲ್ಕನೇ ಬಾಯ್ ಪ್ರೆಂಡ್ ಬುಲೆಟ್ ತರ್ತಾನೆ ಜಮ್ ಅನ್ನೊ ಅಂಗೆ ಲಾಂಗ್‌ ಡ್ರೈವ್ ಹೋಗ್ತಿವಿ, ಅಮೇಲೆ ಈಟಿಂಗ್   ಡೇಟಿಂಗ್ ಎಕ್ಸೆಟ್ರಾ ಎಕ್ಸೆಟ್ರಾ......."

" ಸಂಜನಾ ನೀನು ನನ್ನ ಹೊಟ್ಟೆ ಉರಿಸಲು ಈ ರೀತಿ ಮಾತನಾಡುವೆ ಅಂತ ನನಗೆ ಗೊತ್ತು ,ನಾನು ಏನೂ ಅಂತನೂ ನಿನಗೆ ಗೊತ್ತು , ನಿಷ್ಕಲ್ಮಶ ಪ್ರೀತಿಗೆ ಕಾಯುವ, ತಾಳ್ಮೆ ಇರುತ್ತದೆ, ಪ್ರೀತಿ ಇನ್ಸ್ಟಂಟ್ ಕಾಫಿ, ಟೀ ಮಾಡ್ದಾಂಗೆ ಅಲ್ಲ, ಪ್ರೀತಿ ಪವಿತ್ರ, ಪ್ರೀತಿ ಅಮರ, ಪ್ರೀತಿಗೆ ಎಕ್ಸಪೈರಿ ಡೇಟ್ ಇಲ್ಲ, ನಿನ್ನಂತವರು ಆತುರಕ್ಕೆ ಬಿದ್ದು ಪ್ರೀತಿಗೆ ಒಂದು ಟೈಮ್ , ಒಂದು ಆತುರತೆ, ಒಂದು ದೈಹಿಕ ಸಂಬಂಧದ ಅರ್ಥ ಕೊಡುತ್ತೀರಿ , ನನ್ ಪ್ರಕಾರ ಅದು ಪ್ರೀತಿನೆ ಅಲ್ಲ ."
" ಆಯ್ತು ಮಾರಾಯ್ತಿ , ನಿನ್ ಪುರಾಣ ಸಾಕು, ಅಗೋ ನನ್ ಪ್ರೆಂಡ್ ಅರ್ಜುನ್ ಬುಲೆಟ್ ನಲ್ಲಿ ಬಂದ , ಬಾಯ್" ಎಂದು ಹೊರಟೇ ಬಿಟ್ಟಳು ಸಂಜನಾ.

ನಾಲ್ಕು ತಿಂಗಳ ನಂತರ ಪಾರ್ಕ್ ನಲ್ಲಿ  ಸಂಜನಾ ಅಳುತ್ತಾ ಕುಳಿತಿದ್ದಳು  ,ಸುಜಾತಳ ನೋಡಿ ಬಿಕ್ಕಿ ಬಿಕ್ಕಿ ಅಳಲಾರಂಬಿಸಿದಳು .
" ಸುಜಾತ ಇಂದು ಮಧ್ಯಾಹ್ನ ಡಾಕ್ಟರ್ "ಟೈಮ್ " ಕೊಟ್ಟಿದ್ದಾರೆ‌ , ಅವನು ತೆಗೆಸೋದಕ್ಕೆ ಹೇಳಿದ, ಯಾಕೋ ಯಾತನೆ ಆಗ್ತಾ ಇದೆ ಸುಜಾತ........" ಸಂಜನಾ ಅಳು ನಿಲ್ಲಲಿಲ್ಲ.

"ಕಾಲಯಾ ತಸ್ಮೈ ನಮಃ , ಅಳಬೇಡ ಸಮಾಧಾನ ಮಾಡಿಕೋ " ಎಂದು  ಸಂಜನಾಳ    ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು , ತಾಯಿಯಂತೆ ತಲೆ  ನೇವರಿಸುತ್ತಾ, ಧೈರ್ಯ ಹೇಳುತ್ತಿದ್ದರೆ ,ಸಂಜಾನಳ ಮನಸ್ಸು ಆಸ್ಪತ್ರೆಯಲ್ಲಿ ಮಧ್ಯಾಹ್ನ ನಡೆಯಬಹುದಾದ ಬಲಿ ಕುರಿತು ದೀರ್ಘವಾಗಿ ಯೋಚಿಸುತ್ತಿತ್ತು.....

*ಸಿ ಜಿ ವೆಂಕಟೇಶ್ವರ*
*ತುಮಕೂರು*

ಸಿಹಿಜೀವಿಯ ಹನಿ

ಸಿಹಿಜೀವಿಯ ಹನಿ

ಕೆನ್ನೆಗೆ ಹೊಡೆತ

ಮೂರ್ಖರೊಂದಿಗೆ
ವಾದ ಮಾಡುವುದು
ನಿಮ್ಮ ಕೆನ್ನೆ ಮೇಲೆ
ಕುಳಿತ ಸೊಳ್ಳೆ
ಸಾಯಿಸಲು ಪಣ
ತೊಟ್ಟಂತೆ ತಿಳಿಯಿರಿ|
ಸೊಳ್ಳೆ ಸಾಯಲಿ
ಬಿಡಲಿ ನಿಮ್ಮ
ಕೆನ್ನೆಗೆ ನೀವೇ
ಹೊಡೆದುಕೊಳ್ಳುವಿರಿ||

*ಸಿ ಜಿ ವೆಂಕಟೇಶ್ವರ*

06 June 2020

ಸಿಹಿಜೀವಿಯ ಹಾಯ್ಕುಗಳು ( ಹೆಚ್ ಎನ್ ನೆನಪಲ್ಲಿ)


*ಸಿಹಿಜೀವಿಯ
ಹಾಯ್ಕುಗಳು* ೪೧ ರಿಂದ ೪೪
೪೧

ಸರಳತೆಗೆ
ಶತಮಾನ ಸಂಭ್ರಮ
ನರಸಿಂಹಯ್ಯ.

೪೨

ವಿದ್ಯಾದೇಗುಲ
ನ್ಯಾಷನಲ್ ಕಾಲೇಜು
ಹೆಚ್ಚೆನ್ ಕೂಸು.

೪೩

ಹೆಚ್ಚೆನ್ ಮೇಷ್ಟ್ರು
ನಡೆ, ನುಡಿ, ವಿಚಾರ
ನೇರ ,ಸರಳ .

೪೪

ಸ್ವಾತಂತ್ರ್ಯ ವೀರ
ಗಾಂಧೀವಾದಿ ಚಿಂತಕ
ನಮ್ಮಯ ಮೇಷ್ಟ್ರು.

*ಸಿ ಜಿ‌ ವೆಂಕಟೇಶ್ವರ*

ಹೆಮ್ಮೆಯ ಭಾರತೀಯರು ( ದೇಶ ಭಕ್ತಿ ಗೀತೆ)

*ಹೆಮ್ಮೆಯ ಭಾರತೀಯರು*

ಜಗಕೆ ಮಾದರಿ ಇಂದು
ನನ್ನಯ ಭಾರತ
ಯುಗದ ಹಿರಿಮೆಯ
ಕಂಡಿದೆ ಇದು ನನ್ನ ಭಾರತ

ಸುತ್ತಲ ಶತೃಗಳ
ಎದೆಗಳ ನಡುಗಿಸಿದೆ
ಕೊತ್ತಲ ಕೋಟೆಗಳಿಲ್ಲದೆ
ಜನರಿಗೆ ರಕ್ಷಣೆ ನೀಡಿದೆ.

ಜ್ಞಾನದಲಿ ವಿಜ್ಞಾನದಿ
ಅಪರಿಮಿತ ಸಾಧನೆ ತೋರಿದೆ
ದಾಸ್ಯ ಸಂಕೋಲೆಯ ಕಳಚಿ
ಸ್ವಾಭಿಮಾನದ ಬಾಳು ನೀಡಿದೆ.

ಕೃಷಿಯು, ಉದ್ದಿಮೆ, ಸೇವೆಗೆ
ಭಾರತ ಹೆಸರುವಾಸಿ ಆಗುತಿದೆ
ಪ್ರಗತಿಯ ಪಥದಲಿ ನಾವೇ
ಮುಂದು ಎಂದು ಸಾಗುತಿದೆ.

ಗುರಿ ಇರುವ ಜನರಿಹರು
ಗುರುವಾಗಿ ಬೆಳೆಯುವರು
ವಿಶ್ವ ಗುರು ನಮ್ಮಮ್ಮ
ಎಂದು ಘರ್ಜಿಸುವರು.

ಸಿ ಜಿ ವೆಂಕಟೇಶ್ವರ
ತುಮಕೂರು




05 June 2020

ಸಿಹಿಜೀವಿಯ ಹಾಯ್ಕುಗಳು_೩೧ ರಿಂದ ೪೦( ಇಂದು ವಿಶ್ವ ಪರಿಸರ ದಿನ)

*ಸಿಹಿಜೀವಿಯ ಹಾಯ್ಕುಗಳು*

(ಇಂದು ವಿಶ್ವ ಪರಿಸರ ದಿನ)

೩೧

ಗಿಡವ ನೆಡು
ಶುಧ್ದ ಗಾಳಿಯ ಪಡೆ
ಜಗದುಳಿವು.

೩೨

ಇಂದಿಗಾದರೂ
ಒಂದು ಗಿಡ ನೆಡುವ
ನಮ್ಮೊಳಿತಿಗೆ.

೩೩

ಉಳಿಸಿದರೆ
ಜಲ,ನೆಲ,ಪವನ
ನೀನೇ ಪಾವನ.

೩೪

ನನಗೆ ಗೊತ್ತು
ಈ ಭೂಮಿ ನನದಲ್ಲ
ಮಗುವ ಕಡ .

೩೫

ಪರಿಸರದ
ಮಲಿನ ಮಾಡಿದರೆ
ನೆಮ್ಮದಿ ಏಲ್ಲಿ?

೩೬

ನಮ್ಮದಾಗಲಿ
ಗಿಡ ಮರ ನೆಡುವ
ಹಸಿರ ಹಾದಿ.

೩೭

ಅಸಡ್ಡೆ ಬೇಡ
ಇರುವುದೊಂದೆ ಭೂಮಿ
ಸಂರಕ್ಷಿಸೋಣ.

೩೮

ನಮಗೇತಕೆ
ಪಳೆಯುಳಿಕೆ ಇಂಧನ
ಸೂರ್ಯನೇ ಶಕ್ತಿ.

೩೯

ಘನ ತ್ಯಾಜ್ಯವ
ಮರುಬಳಕೆಯ ಮಾಡಿ
ಘನ ಕೆಲಸ .

೪೦

ಕಾನನ ಬೇಕು
ತಡೆಯೋಣ ನಾವೆಲ್ಲ
ಕಾಡಿನ ನಾಶ.

ಸಿ ಜಿ ವೆಂಕಟೇಶ್ವರ

03 June 2020

ಸಿಹಿಜೀವಿಯ ಮೂವತ್ತು ಹಾಯ್ಕುಗಳು

ಸಿಹಿಜೀವಿಯ ಮೂವತ್ತು ಹಾಯ್ಕುಗಳು



*ತಮ*

ಮಹಾ ಗೌತಮ
ಆದರ್ಶವಾಗಿದ್ದರೆ
ಎಲ್ಲಿದೆ ತಮ.



*ಸುಜ್ಞಾನ*

ಚರ್ಚೆ ಮಾಡಲು
ವಿಚಾರಗಳು ಬಂದು
ಸುಜ್ಞಾನ ಸಿರಿ.



*ಜೋಡಿ*

ವಾಗ್ವಾದ ಮಾಡು
ಅಹಂಕಾರ ಜೊತೆಗೆ
ಅಜ್ಞಾನ ಜೋಡಿ



*ಕರುಣಾಮೂರ್ತಿ*

ಕರುಣಾಮೂರ್ತಿ
ಸಹನೆಯ ಕಡಲು
ನಮ್ಮಯ ತಾಯಿ.



*ಮಾತೆ*

ದೇವರು ಇಲ್ಲಿ
ಕಣ್ಣಿಗೆ ಕಾಣುವಳು
ಅವಳೇ ಮಾತೆ .




ಕವಿತೆಗಳು
ಹೃದಯದ ಆಳದ
ಭಾವನೆಗಳು



ಮಳೆಯಾಗಿದೆ
ಒಳಿತಿಗಿಂತ ಹೆಚ್ಚು
ಕೊಚ್ಚಿಹೋಗಿದೆ


ಬಡಿದಾಡುವೆ
ಇಲ್ಲಿರುವೆ ಕೇವಲ
ಮೂರುದಿವಸ



ನಾನೆನ್ನದಿರು
ಹಮ್ಮಿನಲಿ‌ ಏನಿದೆ?
ನಾವೆಂದುನೋಡು

೧೦
ಮೊದಲಿದ್ದವು
ಕಡಲಿನಾಳದಲಿ
ಕೆನ್ನೆಸೇರಿವೆ



೧೧
ಕೀರುತಿಗೊಬ್ಬ
ಬೇಕೆಂದು ಕೊರಗುವೆ
ಆರತಿಗೊಬ್ಬಳು?

೧೨

ಕ್ರಾಂತಿಯ ಕಿಡಿ
ಈಗಲೂ ಹರಿದಿದೆ
ವೀರಸಾವರ್ಕರ್

೧೩

ಉರಿಯಲಾಸೆ
ಇಂಧನ ತರಬೇಕು
ಅವನಿಗೀಗ


೧೪

ದಾನಕೆ ಮುಂದು
ಕಲಿಯುಗದ ಕರ್ಣ
ನೆನೆಪು ಇಂದು.

೧೫.

ಯಾರೇನೆಂದರು
ನೆನೆಯುವುದು ಮನ
ಅಂಬರೀಶನ .

೧೬

ಅಮರವಾದೆ
ಕಲಿಯುಗದ ಕರ್ಣ
ರೆಬಲ್ ಸ್ಟಾರ್.

೧೭


ಮಾತು ಒರಟು
ನೇರ ನುಡಿಯ ಧೀರ
ಅಂಬರೀಷಣ್ಣ.


೧೮

ಅಮರನಾಥ.
ಸುಮಗಳಲಿ ಇಂದು
ಅಭಿಷೇಕವೆ?

೧೯

ಮೊದಲು ಮಿಂಚು
ಅನಂತರ ಗುಡುಗು
ಮಳೆಯೋ ಮಳೆ

೨೦

ಮಕ್ಕಳಿಗಲ್ಲ
ಎಲ್ಲರಿಗೂ ಪರೀಕ್ಷೆ
ಪಾಸಾಗೋಣವೆ?

೨೧

ಹೊಸ ಸೇರ್ಪಡೆ
ಚಳಿ ಮಳೆ ಬೇಸಗೆ
ಕರೋನ ಕಾಲ


೨೨

ರೂಪದರ್ಶಿಗೆ
ಸಾವಿರದ ಶರಣು
ಅಭಿನಂದನೆ.

೨೩

ಪ್ರೇಮಲೋಕದ
ಹಠವಾದಿ ನಾಯಕ
ಕನಸುಗಾರ

೨೪

ರವಿ ಚಂದಿರ
ಒಂದೆಡೆಯೆ ಇದ್ದರೆ
ರವಿಚಂದ್ರನ್


೨೫


ಚಿತ್ರಗಳಲ್ಲಿ
ಹಂಸ ರವಿಯ ಮಿಲನ
ಸಂಗೀತೋತ್ಸವ



೨೬

ಚಂಡಮಾರುತ
"ನಿಸರ್ಗದ ಮುನಿಸು"
ರೌದ್ರಾವತಾರ.


೨೭

ಮಾರುತ ಮಳೆ
ಜೋಡಿ ಅನಾಹುತ
ಚಂಡಮಾರುತ

೨೮

ತೂಕ ಇಳಿಸು
ದಢೂತಿ ದೇಹವೇಕೆ?
ಸೈಕಲ್ ಹೊಡಿ

೨೯

ಸೈಕಲ್ ತುಳಿ
ಶ್ವಾಸಕೋಶಕ್ಕೆ ಬಲ
ಸ್ವಾಸ್ಥ್ಯ ಜೀವನ

೩೦

ಮಾಲಿನ್ಯವಿಲ್ಲ
ಇಂಧನವು ಬೇಕಿಲ್ಲ
ಸೈಕಲ್ ಸರಿ



ಸಿ‌ ಜಿ ವೆಂಕಟೇಶ್ವರ
ತುಮಕೂರು


ಸೈಕಲ್ ಹಾಯ್ಕುಗಳು

೨೮

ತೂಕ ಇಳಿಸು
ದಢೂತಿ ದೇಹವೇಕೆ?
ಸೈಕಲ್ ಹೊಡಿ

೨೯

ಸೈಕಲ್ ತುಳಿ
ಶ್ವಾಸಕೋಶಕ್ಕೆ ಬಲ
ಸ್ವಾಸ್ಥ್ಯ ಜೀವನ

೩೦

ಮಾಲಿನ್ಯವಿಲ್ಲ
ಇಂಧನವು ಬೇಕಿಲ್ಲ
ಸೈಕಲ್ ಸರಿ


ಸನ್ಮಾರ್ಗ ಭಾಗ _೬



ಹೆದ್ದಾರಿ ಭಾಗ ೬

ಭಾಗ ೬ ಪ್ರೀತಿ ನಿವೇದನೆ

"ನನಗೇಕೆ ಈಗೀಗ ಹೀಗಾಗುತ್ತಿದೆ? ಮನೆಯಲ್ಲಿ ನನಗೆ ಇಷ್ಟ ಎಂದು ತಿಮ್ಮಕ್ಕ ಸಜ್ಜೆ ರೊಟ್ಟಿ ಮಾಡಿ ಅದರ ಮೇಲೆ ಆಗ ತಾನೆ ಕಡೆದ ಇಡಿಯಷ್ಟು ಬೆಣ್ಣೆಯನ್ನು ಹಾಕಿ ಕೊಟ್ಟರು ಮೊದಲಾಗಿದ್ದರೆ ಬಾಯಿಚಪ್ಪರಿಸುತ್ತಾ ಅಕ್ಕ ಇನ್ನೊಂದು ರೊಟ್ಟಿ ಸ್ವಲ್ಪ ಕರಂ ಕರಂ ಅನ್ನಂಗಿರಲಿ ಎಂದು ಮಜ್ಜಿಗೆ ಸ್ವಾರೆಯಿಂದ ಮತ್ತೆ ಬೆಣ್ಣೆಯನ್ನು ಹಾಕಿಕೊಳ್ಳುವುದನ್ನು ನೋಡಿ ಏ ಒಂದು ಆಳ್ತಕ್ಕಿರು. ಅತೀಯಾಗಿ ಬೆಣ್ಣೆ ತಿಂದರೆ ಗಣೇಶಪ್ಪ ಆಗ್ತೀಯ ಎಂದು ಪ್ರೀತಿಯಿಂದ ಗದರುತ್ತಿದ್ದರು. ಆದರೆ ಇಂದು ಯಾಕೋ ಸಜ್ಜೆ ರೊಟ್ಟಿ ಎಂಬೋ ಸಜ್ಜೆ ರೊಟ್ಟಿನೆ ರುಚಿಸ್ತಿಲ್ಲ ಯಾಕೆ? ಮೊದಲಾಗಿದ್ದರೆ ಮುಕುಂದ ಮಾಮ ಬೈಯ್ದರೂ ರೇಡಿಯೋ ಕೈಗೆಟುಕದಿದ್ದರೂ ಮರದ ಕುರ್ಚಿ ಹಾಕಿ ಹತ್ತಿ ಕನ್ನಡ ಅಲ್ಲದಿದ್ದರೂ ಯಾವ ಭಾಷೆ ಹಾಡು ಬಂದರೂ ಕೇಳಿ ನಲಿಯುತ್ತಿದ್ದೆ ಇಂದು ನನ್ನ ಇಷ್ಟದ "ಶಿಲೆಗಳು ಸಂಗೀತವ ಹಾಡಿವೆ .... " ಹಾಡು ಬರುತ್ತಿದ್ದರೂ ಯಾಕೋ ಸಂಗೀತದಂತಹ ಸಂಗಿತದ ಮೇಲೆ ಒಲವಿಲ್ಲ ಯಾಕೆ ಹೀಗೆ ?  "ಮೈನ್ ಎಕ್ಸಾಂ ಇನ್ನು ಒಂದೂವರೆ ತಿಂಗಳೈತೆ ಚೆನ್ನಾಗಿ ಓದಬೇಕು ಈ ವರ್ಷ ನಿನ್ನ ಮೇಲೆ ನಾವು ಬಾಳ ಆಸೆ ಇಟ್ಕಂಡಿದಿವಿ" ಎಂದು ಮೊನ್ನೆ ಹೆಡ್ ಮಾಸ್ಟರ್ ಕರೆದು ಹೇಳಿದರು, ಓದಲು ಕುಳಿತರೆ ಓದಲಾಗುತ್ತಿಲ್ಲ ಯಾಕೆ ? ಕೊಟಗೇಣಿಯಲ್ಲಿ ಅಮ್ಮ ಕಷ್ಟ ಪಡುತ್ತಾ ನನ್ನ ಓದಿನ ಬಗ್ಗೆ ದೊಡ್ಡ ಆಶಾಗೋಪುರ ಕಟ್ಟಿಕೊಂಡಿದ್ದಾಳೆ ನಾನು ನೋಡಿದರೆ ಸರಿಯಾಗಿ ಓದುವುದು ಬಿಟ್ಟು ಹದಿನೈದು ದಿನಗಳಾದವಲ್ಲ ಯಾಕೆ? ಹೀಗೆ ಪ್ರಶ್ನೆಗಳ ಮಧ್ಯ ಉತ್ತರವಾಗಿ ಸ್ಮೃತಿಪಟಲದ ಮೇಲೆ ಬೇಡವೆಂದರೂ ಅವಳ ಪೋಟೋ ಬಂದೇ ಬಿಟ್ಟಿತು.ಅವಳೇ ಬೀರಪ್ಪ ಮೇಷ್ಟ್ರು ಮಗಳು ಸರೋಜ . ಇದಕ್ಕೆಲ್ಲ ಒಂದು ಇತಿ ಹಾಡಲೇ ಬೇಕು ನಾನು ಅವಳಿಗೆ ನನ್ನ ಪ್ರೀತಿಯನ್ನು ನಾಳೆಯೇ ಹೇಳಬೇಕು ನಂತರ ಮನಸ್ಸು ನಿರಾಳವಾಗುವುದು ,ಆಗ ಓದಬೇಕು ಮುಂದೆ ದೊಡ್ಡವನಾದಮೇಲೆ ಅವಳನ್ನೇ ಮದುವೆಯಾಗಬೇಕು"ಎಂದು ಸತೀಶ ಸುದೀರ್ಘವಾದ ಕನಸೊಂದನು ಕಾಣುತ್ತಿದ್ದ. "ಪುಸ್ತಕ ಇಡಕೊಂಡು ಏನಲ ಅದು ಅಂಗೆ ಜಂತೆ ನೋಡ್ತಿಯ? ಜಂತೆಗೇನು ಕೋತಿ ಕುಣಿತೈತಾ? ಪುಸ್ತಕ ನೋಡಿ ಓದು ಅಂದಾಗ "ಅದು ಅಲ್ಲಿ ಹಲ್ಲಿ " ಎಂದು ತಡವರಿಸಿದ್ದ ಕಂಡು" ಹಲ್ಲಿ ಇಲ್ಲ ಪಲ್ಲಿ ಇಲ್ಲ ಓದು "ಎಂದು ಗದರಿ ಮಾವ ದೇವರ ಕೋಣೆಗೆ ಹೋದರು.
ಇತ್ತೀಚೆಗೆ ಸುಜಾತ ಶಾಲೆಯಲ್ಲಿ, ಮನೆಗೆ ನಡೆದುಕೊಂಡು ಬರುವಾಗ ನನ್ನ ನೋಡಿ ನಗುವುದು, ನಾನು ಅವಳನ್ನು ನೋಡಿ ನಗುವುದನ್ನು ನನ್ನ ಗೆಳೆಯರು ಗಮನಿಸಿಲ್ಲ ಅಂದುಕೊಂಡಿದ್ದ ಸತೀಶ " ಏನಪ್ಪ‌  ಹೀರೋ ಎಲ್ಲಿಗೆ ಬಂತು ನಿನ್ನ ಲವ್ ಸ್ಟೋರಿ" ಎಂದು ಚಿದಾನಂದ ಕೇಳುತ್ತಿದ್ದಂತೆ ಎದೆ ಧಸಕ್ಕೆಂದ ಅನುಭವ "ಯಾವ ಲವ್ ಯಾರ ಸ್ಟೋರಿ "ಎಂದ ಸತೀಶ  ಬೆಕ್ಕು ಕಣ್ಣುಮುಚ್ಚಿ ಹಾಲು ಕುಡುದ್ರೆ ಯಾರಿಗೂ ಕಾಣಲ್ಲ ಅಲ್ವೇನೊ? ನಿನ್ನ ಮತ್ತು ಸುಜಾತಳ ಬಗ್ಗೆ ಸ್ಕೂಲಲ್ಲೆಲ್ಲ ಮಾತಾಡ್ತಾರೆ ಮುಚ್ಕೊಂಡು ಹೇಳಮ್ಮ ಕಂಡಿದಿನಿ " ಅಂದೇ ಬಿಟ್ಟ ಚಿದಾನಂದ್
ಅಂದು ತರಗತಿಯಲ್ಲಿ ಐದಾರು ಬಾರಿ ಸತೀಶ ನೋಡಿ ನಕ್ಕಿದ್ದಳು ಅವನೂ ಸಹ .
ಅದೇ ಧೈರ್ಯದಿಂದ ಮನೆಗೆ ಬಂದವನೆ ಗುರುಸಿದ್ದನಿಗೆ ಇಂದು ಹೋಮ್ ವರ್ಕ್ ಜಾಸ್ತಿ ಐತೆ ನಾನು ಹುಲ್ಲು ತರಲು ರೊಪ್ಪಕ್ಕೆ ಬರಲ್ಲ ನೀನೆ ಹೋಗಿ ಬಾ" ಎಂದು ಹೇಳಿ ಕೈ ಕಾಲು ಮುಖ ತೊಳೆದುಕೊಂಡು  ಕುಳಿತು  ಮೊದಲ ಪ್ರೇಮಪತ್ರ ಬರೆಯಲು ಕುಳಿತೇ ಬಿಟ್ಟ ಸತೀಶ . ಹೇಗೆ ಶುರು‌ ಮಾಡಬೇಕು ಎಂದು ತೋಚದೆ ಚಡಪಡಿಸಿದ ಇದುವರೆಗೆ ಪರೀಕ್ಷೆಗಳಲ್ಲಿ ತಂದೆಗೆ ಪತ್ರ ಬರೆಯಿರಿ, ಶಿಕ್ಷಕರಿಗೆ ,ಸಂಪಾದಕರಿಗೆ ಪತ್ರ ಬರೆಯಿರಿ ಎಂದು ಕೇಳಿದ ಪ್ರಶ್ನೆಗಳಿಗೆ ಪಟ ಪಟ ಬರೆದು ಅಂಕಗಳನ್ನು ಪಡೆದ ಸತೀಶನಿಗೆ ಮೊದಲ ಬಾರಿಗೆ ಪತ್ರ ಬರಯಲು , ಅದೂ ಪ್ರೇಮಪತ್ರ ಬರೆಯಲು ಪೆನ್ನೇ ಓಡುತ್ತಿಲ್ಲ ಅಲ್ಲ ಅವನು ಬರೆಯುತ್ತಿಲ್ಲ ಇಷ್ಟು ದಿನ ಇಲ್ಲದ ಒಂದು ಅನುಮಾನ ಈಗ ಅವನ ಕಾಡಲಾರಂಬಿಸಿತು ಅದು ಸುಜಾತ ನನ್ನ ಪ್ರೀತಿ ಮಾಡ್ತಾಳ ? ಅಥವಾ ಸುಮ್ನೆ ನಕ್ತಾಳ ? ನನ್ನ ಪ್ರೀತಿ ನಿರಾಕರಿಸಿದರೆ ಏನು ಮಾಡಲಿ? ಅವಮಾನ ಅಲ್ಲವೆ? ಇಲ್ಲ ಅವಳು ನನ್ನ ಪ್ರೀತಿ ಮಾಡೇ ಮಾಡ್ತಾಳೆ . ಏನೆ ಆಗಲಿ ಪತ್ರ ಬರೆಯುವೆ ಎಂದು ಧೈರ್ಯ ಮಾಡಿ ಪತ್ರ ಬರೆಯಲು ಶುರು ಮಾಡಿದ ಮೊದಲ ಸಾಲು ಶುರು ಮಾಡಲು ಜಂತೆಯ ಮನೆ ಆಗ ತಾನೆ ಚಿಗುರು ಬೇಸಿಗೆ ಶುರುವಾಗಿದ್ದು ಆ ಮನೆಗೆ ಕಿಟಕಿ ಇಲ್ಲದಿರುವುದು ಎಲ್ಲಕ್ಕಿಂತ ಮುಖ್ಯವಾಗಿ ಪ್ರೇಮಪತ್ರದ ಕಾವು ಬೆವರು ಶುರುವಾಯಿತು. " ಯಾಕಲಾ ಅಂಗೆ ಬೆವರ್ತಿಯಾ ಹೊರಗೆ ಹೋಗು ಅಲ್ಲೂ ಲೈಟ್ ಐತಲ್ಲ. ಅಲ್ಲೇ ಓದ್ಕ ,ಬರ್ಕ, ಎನಾದ್ರೂ ಡೌಟ್ ಐತಾ ಹೇಳ್ಕೊಡಲಾ? ಎಂದು ಮುರಾರಿ ಅಂದಾಗ ಅಡುಗೆ ಮನೇಲಿ ಅಡುಗೆ ಮಾಡೋ ತಿಮ್ಮಕ್ಕ "ಓ  ನೀವ್ ಎಸ್ಸೆಲ್ಸಿ ಓದಿ ಹತ್ತೊರ್ಸ ಆತು ನಿಮ್ಗೇನು ಹೇಳ್ಕೊಡಾಕೆ ಬರುತ್ತೆ " ಗೊಣಗಿದರು
"  ಆತು ಬಿಡಮ್ಮ ನನಿಗೆ ಹೇಳ್ಕೊಡಾಕೆ ಬರಲ್ಲ ನೀನು ಏಳನೇ ಕ್ಲಾಸ್ ಪೇಲಾಗಿದಿಯಲ್ಲ ಬಾ ಹೇಳ್ಕೊಡು " ಅಂದದ್ದು ಕೇಳಿ ತಿಮ್ಮಕ್ಕ
"ನಾನು ಏಳನೇ ಕ್ಲಾಸ್ ಪಾಸಾಗಿದ್ರೆ ಈ ಮನೆಲ್ಯಾಕೆ ರೊಟ್ಟಿ  ಬಡಿತಿದ್ದೆ" ಎಂದು ಜೋರಾಗಿಯೇ ರೊಟ್ಟಿ ಬಡಿಯಲು ಆರಂಬಿಸಿದಳು
" ಸಾಕು ನಿಮ್ಮ ಮಾತು ಆ ಹುಡ್ಗುಗೆ ಪರೀಕ್ಷೆ ಹತ್ರ ಬಂತು ಓದ್ಲಿ ಸುಮ್ನಿರಿ" ಅಜ್ಜಿ ಆದೇಶ ಮಾಡಿದಾಗ  ಮಾತು ಇರಲಿಲ್ಲ. ಆದರೆ ಅಡುಗೆ ಮನೆಯಲ್ಲಿ ರೊಟ್ಟಿ ಬಡಿಯುವ ಸದ್ದು ಹೆಚ್ಚಾಗಿತ್ತು. ಒಲೆಯಲ್ಲಿ ಬೆಂಕಿ ಜೋರಿತ್ತು.
ಗಾಳಿಗೆ ಹೊರಗೆ ಬಂದು ಕುಳಿತರೂ ಸತೀಶ ಬರೆಯಬೇಕಾದ ಪತ್ರ ಅವನಿಗೆ ವಿಶೇಷವಾದದ್ದು ಅಲ್ಲಿಯೂ ಬೆವರುವುದ ಕಂಡ ಕಿರಿಯ ಮಾವ ಬಿಳಿಯಪ್ಪ "ಅದ್ಯಾವ ಸೀಮೆ ಓದಪ್ಪ ನಿಂದು ಇಷ್ಟ್  ಗಾಳಿ ಇದ್ದರೂ ಬೆವುರ್ತಾ ಇದಿಯಾ" ನಗುತ್ತಲೇ ಕೇಳಿದ
ಮೊದಲಿಬ್ಬರು ಮಾವಂದಿರ ಕಂಡರೆ ಭಯವವಿರುವ ಸತೀಶಗೆ ಬಿಳಿಯಪ್ಪ ಕಂಡರೆ ಎನೊ ಪ್ರೀತಿ ತುಂಬಿದ ಸದರ "ಮಾಮೋ ನಿನಗೇನ್ ಗೊತ್ತು ಒದೋದು ಸುಮ್ನಿರು ನೀನು ಓದಿದ್ರೆ ಗೊತ್ತಾಗಿರೋದು". ಅಂದಾಗ ಬಿಳಿಯಪ್ಪ ಓ ಇದ್ಯಾಕೋ ನಮ್ಮ ಬುಡಕ್ಜೆ ಬರೋ ತರ ಇದೆ  ಎಂದು ಸುಮ್ಮನಾದ.
ಅಡಿಗೆ ಮನೆಯಿಂದ
"ಬರ್ರಿ ರೊಟ್ಟಿ ಆಗೈತೆ ತಿನ್ರಿ" ಎಂದು ತಿಮ್ಮಕ್ಕ ಕರೆದಾಗ ಅಯ್ಯೋ ಒಂದು ಅಕ್ಷರನೂ ಪ್ರೇಮ ಪತ್ರ ಬರೆಯೋಕಾಗಲಿಲ್ಲ  ಅಂತ ಬೇಸರದಿಂದಲೆ ತಟ್ಟೆ ತೆಗೆದುಕೊಂಡು ರೊಟ್ಟಿ ಹಾಕಿಕೊಂಡು ತಿಂದು ಮತ್ತೆ ಕುಳಿತು ಬರೆಯಲು ಶುರು ಮಾಡಿದ ಸತೀಶ.
"ಪ್ರೀತಿಯ  ಸುಜಾತ ನಿನ್ನ ನಗು, ನಿನ್ನ ಗುಣ ನೋಡಿದ ನನಗೆ ನಿನ್ನ ಮೇಲಿನ ಗೌರವ ಹೆಚ್ಚಾಗಿದೆ ಪ್ರತಿ ದಿನ ನೀನು ನನ್ನ ನೋಡಿ ನಕ್ಕಾಗ ಮನದಲ್ಲೇನೋ ಪುಳಕ ,ಹೋದ ವಾರ ಎರಡು ದಿನ ನೀನು ಸ್ಕೂಲ್ಗೆ ಬಂದಿರಲಿಲ್ಲ ಅಂದು ನನಗೆ ಈ ಸ್ಕೂಲ್ ಆದ್ರೂ ಯಾಕಿದೆಯೋ ಅನಿಸಿತು. ಮತ್ತೆ ಮೂರನೆ ದಿನ ನಿನ್ನ ನೋಡಿದಾಗ ನನಗೆ ಜೀವ ಬಂತು .ಸುಜಾತ ಸುತ್ತಿ ಬಳಸಿ ಹೇಳಲ್ಲ ವಿಷಯಕ್ಕೆ ಬರ್ತಿನಿ ಐ ಲವ್ ಯು
ಮುಂದೆ ನೀನೇ ನನ್ನ ಹೆಂಡತಿ ಆಗಬೇಕು ಅಂತ ನನ್ನ ಆಸೆ  ಸದ್ಯಕ್ಕೆ ಇಷ್ಟು ಸಾಕು. ನಿನ್ನ ಉತ್ತರಕ್ಕೆ ‌ಕಾಯುತಿರುವೆ .
ಇಂತಿ ನಿನ್ನ ಪ್ರೀತಿಯ"
ಸತೀಶ
ಎಂದು ಬರೆದು ನಿಟ್ಟುಸಿರಿಟ್ಟಾಗ ರಾತ್ರಿ ಗಂಟೆ ಎರಡು ಒಡೆದಿತ್ತು.
ಜೋಪಾನವಾಗಿ ಚೀಟಿಯನ್ನು ಎತ್ತಿಟ್ಟುಕೊಂಡು ನಾಳೆ ಇದನ್ನು ಸುಜಾತಳಿಗೆ ತಲುಪಿಸುವುದು ಹೇಗೆ  ಎಂದು ಯೋಚಿಸುತ್ತಾ ಮಲಗಿದವನಿಗೆ ನಿದ್ದೆ ಯಾವಾಗ ಬಂತೋ ಗೊತ್ತಾಗಲಿಲ್ಲ
" ಸತೀಶಣ್ಣ ಸಗಣಿ ತಟ್ಟಿ ಹೊರಸು ಬಾ ತಿಪ್ಪೆಗೆ ಹಾಕಿ ಬತ್ತಿನಿ " ಎಂದು ಗುರುಸಿದ್ದ ಕೂಗಿದಾಗ ಬೆಳಗಿನ ಜಾವ ಐದೂವರೆ. ಎಲ್ಲರೂ ಮಲಗಿರುವದನ್ನು ನೋಡಿ ಗುರುಸಿದ್ದನಿಗೆ ಬೈಯ್ಯಬೇಕು ಎಂದು ಬಾಯಿಗೆ ಬಂದರೂ ಅವನ ಅಮಾಯಕ ನಿಷ್ಕಲ್ಮಶ ಹಿ ...ಹಿ... ಹಿ ...ಎಂಬ ಮುಗ್ದ ನಗು ನೋಡಿ ಬೈಯಲಿಲ್ಲ ಗೋಣಿ ಚೀಲವನ್ನು ತಲೆಯಮೇಲೆ ಹಾಕಿಕೊಂಡು ಕೊಪ್ಪೆ ಮಾಡಿಕೊಂಡು ಸಗಣಿ ತಟ್ಟಿಯನ್ನು ಹೊತ್ತುಕೊಳ್ಳುವಾಗ ಅವನ ದೇಹದಿಂದ ಬರುವ ದುರ್ಗಂಧ ಮತ್ತು ಸಗಣಿ ಇವರೆಡರಲ್ಲಿ ಯಾವುದು ಹೆಚ್ಚು ವಾಸನೆ ಎಂದು ತಿಳಿಯದಾಯಿತು. ಅವನು ಸ್ನಾನ ಮಾಡಿ ಎಷ್ಟು ದಿನವಾಗಿತ್ತೋ ?
ಆಗಲೇ  ಇಂದು ನಾನೂ ಸ್ನಾನ ಮಡಬೇಕು ಎಂದೆನಿಸಿದ್ದು ಸತೀಶನಿಗೆ. ಸಾಮಾನ್ಯವಾಗಿ ಸತೀಶ ವಾರಕ್ಕೊಮ್ಮೆ ಮಾತ್ರ ಅದು ಶನಿವಾರದಂದು ಮಾತ್ರ ಸ್ನಾನ ಮಾಡುವುದು ಅಲಿಖಿತ ನಿಯಮವಾಗಿತ್ತು .ಅಂದು ಬುಧವಾರವಾದರೂ ಸ್ನಾನ ಮಾಡಬೇಕೆಂಬ ಆಸೆ ಚಿಗುರೊಡೆದಿತ್ತು ಕಾರಣ ಮೊದಲ ಪ್ರೇಮ ಪತ್ರ ಎಂದು ಬಿಡಿಸಿ ಹೇಳ ಬೇಕಾಗಿರಲಿಲ್ಲ.
"ಅಕ್ಕ ಎದ್ದಾಳು ಆರು ಗಂಟೆ ಆತು ಕಾಪಿ ಕಾಸು" ಎಂದು ತಿಮ್ಮಕ್ಕನ‌ನ್ನು ಎಬ್ಬಿಸಿದ ಇವನಿಗೆ ಕಾಫಿ ಕುಡಿಯಲು ಆಸೆ ಇಲ್ಲದಿದ್ದರೂ ಕಾಫಿ ಕಾಸುವಾಗ ಎಡ್ಲಿ ಒಲೆ ( ಒಲೆಗೆ ಹೊಂದಿಕೊಂಡಂತೆ  ನೀರು ಕಾಯಲು ಇಟ್ಟಿರುವ ಮಣ್ಣಿನ ಅಥವಾ ಹಿತ್ತಾಳೆಯ ಪಾತ್ರೆ) ನಲ್ಲಿ ನೀರು ಕಾದರೆ ಸ್ನಾನ ಮಾಡಬಹುದು ಎಂಬ ಆಸೆ .
ಎಂಟುಗಂಟೆಗೆ ಬಕೀಟು ತಂದು ಎಡ್ಲಿಯಿಂದ ಚೆಂಬಿನಲ್ಲಿ ನೀರು ತೋಡುವುದನ್ನು ನೋಡಿದ ತಿಮ್ಮಕ್ಕ ಅಚ್ಚರಿಯಿಂದ
"ಏನು ಇವತ್ತು ಸಾಹೇಬರು ಸ್ನಾನ ಮಾಡ್ತಾ ಇದಾರೆ ಏನ್ ವಿಶೇಷ" ಕೇಳಿಯೇ ಬಿಟ್ಟರು
"ಏನೂ ಇಲ್ಲಕ್ಕ ಸುಮ್ಮನೆ "ಅಂದ ಸತೀಶ

ಅಡಿಗೆ ಮನೆಯಲ್ಲೇ ಎತ್ತರದ ಭಾಗದಲ್ಲಿ ಸ್ನಾನದ ಕೊಠಡಿ ಎಂಬಂತಹ ಪ್ರದೇಶ. ಅದಕ್ಕೆ ಬಾಗಿಲು ಕಿಟಕಿ ಏನೂ ಇಲ್ಲ. ಗಂಡಸರು ಸ್ನಾನ ಮಾಡುವಾಗ ತೊಂದರೆಯಿಲ್ಲ ಹೆಂಗಸರು ಸ್ನಾನ ಮಾಡುವಾಗ ಅಡುಗೆ ಕೋಣೆ ಕಂ ಸ್ನಾನದ ಕೋಣೆಗೆ ಪ್ರವೇಶ ನಿಷಿದ್ದ .ಅಷ್ಟಕ್ಕೂ ಆ ಮನೆಯಲ್ಲಿ ಇದ್ದ ಹೆಂಗಸರು ಇಬ್ಬರೆ ತಾನೆ, ಅವರೂ ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಮೂರು ಸಲ ಸ್ನಾನ ಮಾಡುವವರಲ್ಲವೇ ?
ಸತೀಶ ಸ್ನಾನ  ಮಾಡಲು ಲೈಪ್ ಬಾಯ್ ಸೋಪ್ ಹಾಕಿಕೊಂಡು ಇಂದು ಶಾಲೆಯಲ್ಲಿ ಏನೋ ಪವಾಡ ಸಂಭವಿಸಲಿದೆ  ಎಂಬ ಅವ್ಯಕ್ತ ಸಂತಸದಿಂದ ಸ್ನಾನ ಮಾಡುವಾಗ ನೀರು ಅಡುಗೆ ಮಾಡುವ ತಿಮ್ಮಕ್ಕನಿಗೆ ಸಿಡಿಯಿತು.
" ಮೆಲ್ಲಕ್ಕೆ ನೀರ್ ಹೊಯ್ಕಳಪ್ಪ ಸಾವ್ಕಾರ" ಎಂದು ನಿಧಾನವಾಗಿ ಗದರಿದರು ಆದರೂ ಸತೀಶನನ್ನು ಕಂಡರೆ ತಿಮ್ಮಕ್ಕನಿಗೆ ಸ್ವಂತ ತಮ್ಮನಂತಹ ಅಕ್ಕರೆ 
" ಅಕ್ಕಾ  ಬೆನ್ನು ಉಜ್ಜು ಬಾರಕ್ಕ " ಎಂದು ದೀನನಾಗಿ ಕೇಳಿದ್ದಕ್ಕೆ ಕರಗಿದ ತಿಮ್ಮಕ್ಕ
" ನಿದೊಳ್ಳೆ ಕತೆ ಆತು ಕಣಲ ನಾನು ಅಡಿಗೆ ಮಾಡಾದು ಯಾವಾಗ ಹೊಲಕ್ಕೆ ಇವತ್ತು ಬಿಳಿಯಣ್ಣ ಮಡಕೆ ಹೊಡ್ಯಾಕೋಗೈತೆ ಬುತ್ತಿ ಬ್ಯಾರೆ ತಗಂಡೋಗ್ಬೇಕು "ಎಂದು ಗೊನಗುತ್ತಲೇ ಬೆನ್ನಜ್ಜಿ  ಊದೋಕೊಳವೆಯಿಂದ ಬಾಯಲ್ಲಿ ಊದಿ ಆರಿದ ಒಲೆಯಲ್ಲಿ ಬೆಂಕಿ ಬರುವಂತೆ ಮಾಡಿ ಅಡುಗೆ ಮಾಡುವಲ್ಲಿ ತಲ್ಲೀನರಾದರು ತಿಮ್ಮಕ್ಕ.
"ಈ ಚೀಟೀನಾ ಹೆಂಗಾರ ಮಾಡಿ ಅವ್ಳಿಗೆ ಕೊಡು ನೀನು ನನ್ನ ಬೆಸ್ಟ್ ಪ್ರೆಂಡ್ ಅಲ್ವಾ" ಎಂದು ಶಾಲೆಯ ಕಡೆಗೆ ಹೋಗುವಾಗ ಚಿದಾನಂದ್ ಗೆ ಹೇಳಿದಾಗ ಚಿದಾನಂದ್ ಎಲ್ಲ ಅರ್ಥವಾದವನಂತೆ ಚೀಟಿ ತೆಗೆದುಕೊಂಡು ಶರ್ಟ್ ಜೇಬಿನಲ್ಲಿ ಇಟ್ಟುಕೊಂಡ .
" ಹೇ ಮೇಲಿನ ಜೋಬು ಬ್ಯಾಡ ನಿಕ್ಕರ್ ಜೋಬಲ್ಲಿ ಇಟ್ಕ ಯಾರಿಗೂ ತೋರಿಸಬೇಡ ಅವಳಿಗೆ ಮಾತ್ರ ಕೊಡಬೇಕು"
ಒತ್ತಿ ಒತ್ತಿ ಎರಡೆರಡು ಬಾರಿ ಹೇಳಿದ್ದು ಕೇಳಿದ ಚಿದಾನಂದ್
"ಅಮಿಕ್ಕಂಡಿರಪ್ಪ ನಾನೇನು ಚಿಕ್ಕ ಮಗೂನ  ಇನ್ನ್ ಮೂರು ತಿಂಗಳ ಕಳೆದರೆ ಕಾಲೇಜು ಹುಡ್ಗ ನಾನು "ಎಂದು ಸಿಟ್ಟಾದ
ಆದರೆ ಇದೇ ಉಡಾಪೆ ಮತ್ತು ಓವರ್ ಕಾನ್ಪಿಡೆನ್ಸು  ಮುಂದೆ ಎಡವಟ್ಟು ಮಾಡಬಹುದು ಎಂದು ಇಬ್ಬರೂ ಊಹಿಸಿರಲಿಲ್ಲ.
ಶಾಲೆಯ ಒಳಗೆ ಹೋಗುವ ದಾರಿಯಲ್ಲಿ ಎಡಕ್ಕೆ ಇರುವ ಜಗ್ಗುವ ನಲ್ಲಿ ನೋಡಿದ  ಮಹೇಶನಿಗೆ ನೀರು ಕುಡಿವ ಆಸೆಯಾಗಿ "ಚಿದಾನಂದ್ ನಮ್ಮ ಮನೇಲಿ ಇವತ್ತು ಉಪ್ಪಿಟ್ಟು ಮಾಡಿದ್ರು ತಿಂದು  ಎಷ್ಟ್ ನೀರು ಕುಡಿದರೂ ಬಾಯರಿಕೆ ಹೋಗ್ತಾ ಇಲ್ಲ ಬಾರೋ ನಲ್ಲಿ ಜಗ್ಗು ನೀರ್ ಕುಡಿತೀನಿ" ಅಂದ  ನಲ್ಲಿ ಜಗ್ಗುವುದೆಂದರೆ ಚಿದಾನಂದ್ ಗೆ ಆಟದಷ್ಟೇ ಖುಷಿ ಸಾಕು ಬಿಡು ಎಂದರೂ ಬಿಡದೆ ಎಗರಿ ಎಗರಿ ನಲ್ಲಿ ಜಗ್ಗಿದ ಆಗ ನಿಕ್ಕರ್ ಜೇಬಿನಿಂದ ಚೀಟಿಯೊಂದು ಬಿದ್ದದ್ದನ್ನು ಮಹೇಶ್ ಗಮನಿಸಿದ ಚಿದಾನಂದ್ ಗೆ ಗೊತ್ತಾಗಲಿಲ್ಲ .
ಮುಂದೆ ಹೋಗಿ ಹಿಂದೆ ಬಂದ ಮಹೇಶ್ ಚೀಟಿ ತೆಗೆದುಕೊಂಡು ಯಾರೂ ಕಾಣದ ಹಾಗೆ ತೆರೆದು ನೋಡಿದ " ಸತೀಶನ ಪ್ರೇಮಪತ್ರ" ಒಂದೆಡೆ ಸಿಟ್ಟು ಮತ್ತೊಂದೆಡೆ ಸಂತೋಷ ಮಹೇಶನಿಗೆ ಸುಜಾತ ಬಗ್ಗೆ ಅಂತಹ ಆಸಕ್ತಿ ಇಲ್ಲದಿದ್ದರೂ ಸತೀಶ ನನಗಿಂತ ಹೆಚ್ಚಾಗಿ ಅಂಕ ಗಳಿಸುತ್ತಾ ನನ್ನ ಮೊದಲ ಸ್ಥಾನಕ್ಕೆ ಸಂಚಕಾರ ತಂದ ವಿಷಯದಲ್ಲಿ ಮೊದಲಿನಿಂದಲೂ ಅವನ ವಿರುದ್ಧ ಕತ್ತಿ ಮಸೆಯುತ್ತಿದ್ದ ಮನಸಲ್ಲೆ
" ಸರಿಯಾಗಿ ಸಿಕ್ಹಾಕ್ಕೊಂಡೆ ಸತೀಶ ನಿನಗೈತೆ ಮಾರಿಹಬ್ಬ " ಎಂದು ಸೀದಾ ಹೆಡ್ ಮಾಸ್ಟರ್ ರೂಂ ಕಡೆ ನಡೆದ.
ಪ್ಯೂನ್ ಸಿದ್ದಾನಾಯ್ಕ ಬಂದು "ಸತೀಶ್ ಹೆಡ್ ಮಾಷ್ಟು ಕರೆತಾರೆ ಬರಬೇಕಂತೆ"  ಅಂದಾಗ ಎಸ್ಸೆಮ್ಮಸ್ ಮೇಷ್ಟ್ರು ಹೋಗಪ್ಪ ಎಂದು ಕಳಿಸಿದರು .ಅದಾಗಿ ಎರಡು ನಿಮಿಷಕ್ಕೆ "ಸುಜಾತಾ ಬರಬೇಕಂತೆ ಬಾರಮ್ಮ "  ಎಂದಾಗ ಎಲ್ಲಾ ವಿಧ್ಯಾರ್ಥಿಗಳಿಗೆ ಇವರಿಬ್ಬರನ್ನೇ ಯಾಕೆ ಹೆಡ್ ಮಾಸ್ಟರ್ ಕರೆದರು ಎಂಬ ಕಡೆಗೆ ಗಮನ ಹರಿದು ತರಗತಿಯಲ್ಲಿ ಶಿಕ್ಷಕರು ಬಹಳ ರಸವತ್ತಾದ ಪಾಠ ಮಾಡುತ್ತಿದ್ದರೂ  ಎಲ್ಲರ ಚಿತ್ತ ಅವರಿಗರಿವಿಲ್ಲದೇ ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಕಡೆ ಊಹೆಗಳು ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಶುರುವಾಗಿದ್ದವು.
ಚಿದಾನಂದ್ ನಿದಾನವಾಗಿ ನಿಕ್ಕರ್ ಜೇಬಿಗೆ ಕೈ ಹಾಕಿ ನೋಡಿದ ಅದು ಅಲ್ಲಿರಲಿಲ್ಲ ಆಗಬಾರದ ಎಡವಟ್ಟಾಗಿ ಸೇರಬಾರದವರ ಕೈ ಸೇರಿತ್ತು ಪ್ರೇಮಪತ್ರ. ಮಹೇಶನ ಮುಖದಲ್ಲಿ ಮಾತ್ರ ಏನೋ ದೊಡ್ಡ ಪರಾಕ್ರಮ  ಸಾಧಿಸಿದ  ಅವ್ಯಕ್ತ ಸಂತಸ ಮೊಗದಲ್ಲಿ ಮನೆಮಾಡಿತ್ತು.
"ಏನಪ್ಪ ಸತೀಶ ಏನು ಇದೆಲ್ಲ ಈ ವಯಸ್ಸಿಗೆ ನಿನಗೆ ಪ್ರೀತಿ ಬೇಕಾ ? ಪ್ರೀತಿ ಅಂದರೆ ಏನಪ್ಪ ಅರ್ಥ ಗೊತ್ತಾ ನಿನಗೆ ?" ಎಂದು ಪ್ರಶ್ನಿಸುತ್ತಲೇ  ಸಮಾಧಾನವಾಗಿಯೇ ಬುದ್ದಿ ಮಾತು ಹೇಳಲು‌ ಶುರುಮಾಡಿದರು ಹೆಡ್ ಮಾಸ್ಟರ್ ಅದಕ್ಕೆ ಸತೀಶ ಇದುವರೆಗೆ ಯಾವುದೇ ತಪ್ಪು ಮಾಡದಿರುವುದು ಮತ್ತು ಆ ಶಾಲೆಗೆ ಮುಂದೆ ಕೀರ್ತಿ ತರುವ ವಿದ್ಯಾರ್ಥಿ ಅವನೇ ಎಂಬ ಬಲವಾದ ನಂಬಿಕೆ ಶಾಂತರಾಜು ಅವರದು.
"ನೋಡಯ್ಯ ನಿನ್ನ ವಯಸ್ಸು ಈಗ  ಹದಿನಾರು ಇದು ಹುಚ್ಚುಕೋಡಿ ಮನಸ್ಸು ಇರುವ ವಯಸ್ಸು, ಇದನ್ನು ಇಂಗ್ಲಿಷ್‌ನಲ್ಲಿ ಟೀನೇಜ್ ಅಂತಾರೆ ,ಹಳ್ಳಿ ಕಡೆ ಇದನ್ನು ಮೀಸೆ ಬಂದವರಿಗೆ ದೇಶ ಕಾಣಲ್ಲ ಇನ್ನೋನೋ  ಬಂದವರಿಗೆ ನೆಲ ಕಾಣಲ್ಲ ಅಂತಾರೆ ,ನಿನಗೆ ಮೀಸೆ ಚಿಗುರೋ ಕಾಲ ಒಂದು ಕರೆಂಟಿನ ಕಂಬಕ್ಕೆ ಸೀರೆ ಉಡಿಸಿದರೂ ನಿನ್ನಲ್ಲೇನೋ ಆಸೆ ಹುಟ್ಟತ್ತೆ ಅಲ್ವೇನೋ? " ಎಂದಾಗಲೂ ಸತೀಶ ತಲೆ ಎತ್ತಲಿಲ್ಲ  ಮುಂದುವರೆದ ಶಾಂತರಾಜು ರವರು ."ನೋಡಪ್ಪ ಈ ವಯಸ್ಸಿನಲ್ಲಿ ಒಂದು ಹುಡುಗ ಒಂದು ಹುಡುಗಿ ಕಡೆ ಆಕರ್ಷಣೆ ಆಗೋದು ಸಹಜ ಅದನ್ನು infatuation ಅಂತಾರೆ ಬಹುಶಃ ನಿ‌ನಗೆ ಇವಳ ಮೇಲೆ  ಅದೇ ಆಗಿರಬಹುದು .ಅಥವಾ ನಿನಗೆ ನಿಜವಾಗಿಯೂ ಇವಳ ಮೇಲೆ ಪ್ರೀತಿ ಅಂತ ಇದ್ದರೆ ಇನ್ನಾರು ತಿಂಗಳು ವರ್ಷದಿಂದ ಇದೇ ಭಾವನೆ ಇರುತ್ತದೆ ಅಷ್ಟರಲ್ಲಿ ನೀನು ಇವಳನ್ನು ಮರೆತರೆ ಅದು ನಿಜವಾಗಿಯೂ ಕ್ರಷ್ ಮತ್ತು ಇನಪ್ಯಾಚುಯೇಶನ್. ಈ ಪರೀಕ್ಷೆ ಟೈಮಲ್ಲಿ ಇದೆಲ್ಲಾ ಬೇಕಾ? ಏನಮ್ಮ ನಿನಗೆ ಇವನ ಮೇಲೆ ಪ್ರೀತಿ ಇದೆಯಾ ? ಇಷ್ಟೊತ್ತು ಹೇಳಿದ್ದು ಅವನಿಗೆ ಮಾತ್ರ ಅಲ್ಲ ನಿನಗೂ ಇದರಲ್ಲಿ ನಿನ್ನ ತಪ್ಪು ಇರದಿರಬಹುದು ಆದರೆ ನೀನು ಸಹ ಈಗ ಪ್ರೀತಿ ಗೀತಿ ಅಂತ ಯೋಚನೆ ಮಾಡೋ ಹಾಗಿಲ್ಲ .ಈ ರೂಮಲ್ಲಿ ಏನೂ ಆಗಿಲ್ಲ ಈಗ ಕ್ಲಾಸ್ ರೂಂಗೆ ಹೋಗಿ ಓದೋ ಕಡೆ ಮಾತ್ರ ಗಮನ ಕೊಡಿ ನಡಿರಿ"
ಎಂದು ಹೇಳಿ ಕಳಿಸಿದಾಗ ಅಪ್ಪ ಮಕ್ಕಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಬುದ್ದಿವಾದ ಹೇಳಿದಂತಿತ್ತು  ಈ ಮಧ್ಯ ಹೆಡ್ಮಾಸ್ಟರ್ ಬುದ್ದಿ ಹೇಳುವಾಗ ಎರಡು ಬಾರಿ ಸತೀಶ ಸುಜಾತಳ ಮುಖ ಗಮನಿಸಿದ ಅವಳ ಮುಖದಲ್ಲಿ ಆತಂಕವಿಲ್ಲ ಅಳುವ ಸೂಚನೆ ಇಲ್ಲದ್ದನ್ನು ಗಮನಿಸಿ ಇದು ನನ್ನ ಪ್ರೀತಿಗೆ ಅವಳ ಪರೋಕ್ಷ ಒಪ್ಪಿಗೆ ಎಂದು ತಿಳಿದು , ಇನ್ನೂ ಮುಂದೆ ಓದುವ ಕಡೆ ಗಮನಹರಿಸಲು ತೀರ್ಮಾನಿಸಿ ತರಗತಿಯ ಕಡೆ ನಡೆದರು ಏನೂ ಆಗಿಲ್ಲವೆಂಬಂತೆ ಪಾಠಗಳನ್ನು ಕೇಳಿದರು.
ಈ ವಿಷಯ ಇವರಿಬ್ಬರಿಗಲ್ಲದೆ   ಚಿದಾನಂದ್, ಮಹೇಶ್ ಗೆ ಮಾತ್ರ ಗೊತ್ತಿತ್ತು ಮುಂದೆ ಸುಜಾತಳ ಅಪ್ಪನಿಗೆ ತಿಳಿದು ರಾದ್ದಾಂತವಾಗುತ್ತದೆ ಎಂದು ಯಾರಿಗೂ ಗೊತ್ತಿರಲಿಲ್ಲ.
ಮುಂದುವರೆಯುವುದು
ಸಿ ಜಿ ವೆಂಕಟೇಶ್ವರ

ಸೈಕಲ್ ಹೊಡೆಯೋಣ (ಇಂದು ವಿಶ್ವ ಸೈಕಲ್ ದಿನ)

*ಸೈಕಲ್ ಹೊಡೆಯೋಣ*

(ಇಂದು ವಿಶ್ವ ಸೈಕಲ್ ದಿನ )

ಹೊಡೆಯೋಣ ಸೈಕಲ್‌
ಗಟ್ಟಿಯಾಗಿಸೋಣ ಕೈಕಾಲ್

ಇಂದೇ ಸೈಕಲ್ ಹತ್ತಿಬಿಡೋಣ
ಅತಿಯಾದ ತೂಕವ
ಇಳಿಸಲು ಪಣ ತೊಡೋಣ

ನಮ್ಮಯ ಬಲವೆ ಇಂಧನ
ಸ್ನಾಯುಬಲ  ಹೆಚ್ಚಿಸಿಕೊಳ್ಳಲು
ಇಂದೇ ಸೈಕಲ್ ತುಳಿಯೋಣ

ಸೈಕಲ್ ಬೇಕು ನಮಗೆ
ಮನದ ಉಲ್ಲಾಸಕೆ ಮೆದಳಿನ
ಚುರುಕಿಗೆ ಸೈಕಲ್ ಹೊಡೆಯೋಣ.

ಶ್ವಾಸಕೋಶ ಬಲಗೊಳ್ಳಲು
ದೇಶವ ಸುತ್ತಲು ಮನವನು
ತಣಿಸಲು ಸೈಕಲ್ ಹೊಂದೋಣ

ಪರಿಸರ ಉಳಿಸಲು 
ಮಲಿನತೆತೊಡೆಯಲು
ಜಾಗೃತರಾಲು ಸೈಕಲ್ ಕೊಳ್ಳೋಣ

*ಸಿ ಜಿ ವೆಂಕಟೇಶ್ವರ*

*ಇಂದಿನ #ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಪ್ರಕಟವಾದ ನನ್ನ #ಶೈಕ್ಷಣಿಕ_ಅಂಕಣ_ಬರಹ #ಕಲಿಕೆಗೆ_ಹೊಸ_ದಿಕ್ಕು_ತೋರುವ_ದೀಕ್ಷಾ_ಆಪ್"

*ಇಂದಿನ #ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ಪ್ರಕಟವಾದ ನನ್ನ #ಶೈಕ್ಷಣಿಕ_ಅಂಕಣ_ಬರಹ
#ಕಲಿಕೆಗೆ_ಹೊಸ_ದಿಕ್ಕು_ತೋರುವ_ದೀಕ್ಷಾ_ಆಪ್"

02 June 2020

ನೀವೂ ಸುರಕ್ಷಿತ ( ಹನಿಗವನ)

*ನೀವೂ ಸುರಕ್ಷಿತ*

ಆಗಸದಲ್ಲಿ ಮಿಡತೆ ಹಾರಾಡಿದರೂ
ಭೂಮಿಯಲ್ಲಿ ಕರೋನ ಅಬ್ಬರಿಸಿದರೂ
ಸಮುದ್ರದಲ್ಲಿ ಸೈಕ್ಲೋನ್ ಬುಸುಗುಟ್ಟಿದರೂ
ಮನೆಯಲ್ಲಿ ಹೆಂಡತಿ ಎಗರಾಡಿದರೂ
ಆರೋಗ್ಯ ಸೇತು
ಹೇಳುವುದು ಇಂದು
ನೀವು ಸುರಕ್ಷಿತವೆಂದು

ಸಿ ಜಿ ವೆಂಕಟೇಶ್ವರ