ಶಾಲೆಯಿಂದ ಬೀಳ್ಕೊಡುಗೆ
ಒಂದೆಡೆ ಸಂತಸ ,ಒಂದೆಡೆ ತುಮುಲ , ಒಂದೆಡೆ ಏನೋ ಕಳೆದುಕೊಳ್ಳುವ ಅನುಭವ , ಒಂದೆಡೆ ಒಂದು ಮೆಟ್ಟಿಲು ಹತ್ತುವ ಕಾತುರ , ಮತ್ತೊಂದೆಡೆ ಈಗಿರುವ ಮೆಟ್ಟಿಲ ನೆನದು ದುಗುಡ, ಒಂದೆಡೆ ಮುಂದೆ ಕಾಲೇಜಿಗೆ ಹೋಗುವೆ ಎಂಬ ಆಸೆಗಂಗಳು , ಇನ್ನೊಂದೆಡೆ ಜೀವದ ಗೆಳೆಯರ ಇಷ್ಟದ ಶಿಕ್ಷಕರ ಬಿಟ್ಟು ಹೋಗಲು ಬೇಸರ , ಸತೀಶನ ಮನಸ್ಸು ಎರಡೂ ರೀತಿಯಲ್ಲಿ ಯೋಚಿಸುತ್ತಾ ಲಹರಿ ಇನ್ನೆಲ್ಲೋ ಹರಿಯುತ್ತಿತ್ತು
" ಹೇ ಸತೀಶ ದಾರಕ್ಕೆ ಕಲರ್ ಪೇಪರ್ ಅಂಟಿಸು ಅಂದರೆ ಏನು ಆ ಕಡೆ ಹುಣಸೆ ಮರ ನೋಡ್ತಿಯ? ಏನ್ ಮಾರಾಯಾ ನೀನು ಸಾಯಿಂಕಾಲ ಮೂರೂವರೆಗೆ ಶಾರದಾ ಪೂಜೆ ಇರೋದು , ನೀವೆಲ್ಲ ಇಂಗೆ ಲೇಟ್ ಮಾಡಿದರೆ ಸಾಯಂಕಾಲದ ಆರೂವರೆ ಆಗುತ್ತೆ .
ಏ ಚಿದಾನಂದ್ ಆ ಬಾಳೆ ಕಂದು ಅಲ್ಲಿ ಕಟ್ಟು ,ಮಹೇಶ್ ಗೆ ಸ್ಕೂಲ್ ಮುಂದೆ ಮಾವಿನ ಸೊಪ್ಪು ಕಟ್ಟಾಕೆ ಹೇಳು" ಒಂದೇ ಸಮನೆ ತಾನು ಕೆಲಸ ಮಾಡುತ್ತಾ ಇತರರಿಗೂ ಒಂದಲ್ಲ ಒಂದು ಕೆಲಸ ಹೇಳುತ್ತಲೆ ಇದ್ದ ವೆಂಕಟೇಶ್ . ಓದುವುದರಲ್ಲಿ ಅಷ್ಟಕ್ಕಷ್ಟೆ ಆದರೂ ಶಾಲೆಯ ಸ್ವಚ್ಚತೆ ,ಗಿಡಗಳಿಗೆ ನೀರುಣಿಸುವುದು, ಶಾಲೆಯ ಅಲಂಕಾರ ಮಾಡುವುದೆಂದರೆ ದಿಢೀರ್ ವೆಂಕಟೇಶ್ ನೆನಪಾಗುತ್ತಿದ್ದ .
ಅಂದು ಯರಬಳ್ಳಿ ಜೂನಿಯರ್ ಕಾಲೇಜು ಆ ವರ್ಷ ಎರಡನೇ ಬಾರಿಗೆ ಶೃಂಗಾರಗೊಂಡ ವಧುವಿನಂತೆ ಕಂಗೊಳಿಸುತ್ತಿತ್ತು .ಯೂನಿಯನ್ ಡೇ ಮಾಡಿದಾಗ ಮೊದಲ ಅಲಂಕಾರ ಮುಗಿದಿತ್ತು.
ರಸ್ತೆಯಿಂದ ಶಾಲೆಯ ಕಡೆಗೆ ಹೋಗುವ ಕಡೆ ಎರಡೂ ಕಡೆ ಗೂಟ ನಿಲ್ಲಿಸಿ , ಅವಕ್ಕೊಂದೊಂದು ದೊಡ್ಡ ಬಾಳೆ ಕಂದು ಕಟ್ಟಲಾಗಿತ್ತು . ಮೇಲಿನಿಂದ ಎರಡೂ ಕಂಬಗಳಿಗೆ ಮಾವಿನ ಸೊಪ್ಪಿನ ತೋರಣ ಕಟ್ಟಲಾಗಿತ್ತು . ರಸ್ತೆಯಿಂದ ಶಾಲೆಯವರೆಗೆ ಬಣ್ಣ ಬಣ್ಣದ ತ್ರಿಕೋನಾಕಾರದ ಕಾಗದಗಳನ್ನು ಟ್ವೈನ್ ದಾರಕ್ಕೆ ಅಂಟಿಸಿ ಕಟ್ಟಿದ್ದರು . ಗಾಳಿ ಬೀಸಿದಾಗ ಅದರಿಂದ ಒಂದು ರೀತಿಯ ವಿಚಿತ್ರ ಸದ್ದು ಬರುವುದನ್ನು ಕೇಳಲು ಮಕ್ಕಳಿಗೆ ಏನೋ ಸಂಭ್ರಮ.
ಪೂಜೆ ನಡೆವ ಹತ್ತನೆ ತರಗತಿಯ ಕೋಣೆಯಲ್ಲಿ ಅಲಂಕಾರ ಇನ್ನೂ ಜಗಮಗಿಸುತ್ತಿತ್ತು . ವಿವಿಧ ಬಣ್ಣದ ಬಲೂನುಗಳು ,ಸೇವಂತಿಗೆ, ಮಲ್ಲಿಗೆ,ಕನಕಾಂಬರ,ಚೆಂಡು ಹೂಗಳ ಹಾರಗಳನ್ನು ಅಲ್ಲಲ್ಲಿ ತೂಗು ಹಾಕಿದ್ದರು .ಶಾರದಾ ಮಾತೆಯ ಪೋಟೋಗೆ ಸುಗಂಧರಾಜ ಹೂವಿನ ಹಾರ ,ಜೊತೆಗೆ ಅಡಿಕೆಯ ಹೊಂಬಾಳೆಯ ಅಲಂಕಾರ ನೋಡಲು ಎರಡು ಕಣ್ಣು ಸಾಲದಾಗಿತ್ತು .
"ಇಂತ ಕೆಲ್ಸನೆಲ್ಲ ಚೆನ್ನಾಗಿ ಮಾಡ್ತೀರಾ ನೀವು ಕಳ್ನನ್ ಮಕ್ಳು" ನಗುತ್ತಲೇ ಮೆಚ್ಚುಗೆ ನುಡಿಯೆಂಬಂತೆ ಪ್ರೀತಿಯಿಂದ ಬೈದಿದ್ದರು ಕಾಡಪ್ಪ ಮೇಷ್ಟ್ರು.
ಹೇ ಇವಳೇನೋ ನಮ್ಮ ಪಕ್ಕದ್ಮನೆ ತಿಪ್ಪಕ್ಕ?!
ಎತ್ಲಗೋ ಇದ್ದಂಗಿದ್ಲಲ್ಲೊ ಸೀರೆಯಲ್ಲಿ ದೊಡ್ ಹೆಂಗ್ಸು ಆಗಿದಾಳಲ್ಲೋ?! ಮೂರ್ನಾಕು ಸಾರಿ ಅವಳೆ ಬಂದು, ಮೇಲೆ ಬಿದ್ದು ಮಾತನಾಡಿಸಿದರೂ ಮಾತಾಡಿರಲಿಲ್ಲ ನಾನು, ಅವತ್ತು ಇವಳು ಇಂಗೆ ಇರಲಿಲ್ಲ " ಎಂದು ಚಿದಾನಂದ್ ವೆಂಕಟೇಶ್ಗೆ ಅಚ್ಚರಿ ,ಬೇಸರ, ಉದ್ವೇಗದಿಂದ ಹೇಳುತ್ತಿದ್ದರೆ ವೆಂಕಟೇಶ್ ಮಾತ್ರ
"ಹೇ ನನಗೂ ಇಂತಹ ಅನುಭವ ಆಗಿದೆ ಕಣೊ ,ಜಾತ್ರೆಯಲ್ಲಿ, ಮದುವೆಯಲ್ಲಿ ಅಲಂಕಾರ ಮಾಡಿಕೊಂಡ ಹುಡುಗೀರು ನೋಡಿದಾಗ ,ಎಕ್ಸಾಮ್ನಲ್ಲಿ ಕೊಷ್ಚನ್ ಪೇಪರ್ ನೋಡಿದಾಗ ,ತಕ್ಷಣ ನನಗನಿಸೋದು " ಇಷ್ಟ್ ದಿವ್ಸ ಎಲ್ಲಿದ್ದವೊ ಇವು?! "
ಇನ್ನೂ ವೆಂಕಟೇಶ್ ಮಾತು ಮುಗಿಸಿರಲಿಲ್ಲ ಇಡೀ ಹುಡುಗರ ಗುಂಪು ಗೊಳ್ಳೆಂದಿತು .ತಿಪ್ಪಕ್ಕ ಅಳುಕಿನಿಂದ ನಾಚಿ ಗೆಳತಿಯರ ಸೇರಿದಳು.
ಸತೀಶ ಅತ್ತಿಂದಿತ್ತ ಇತ್ತಿಂದತ್ತ ಚಡಪಡಿಸೊದನ್ನು ನೋಡಿ " ಅವ್ನಾಕೆ ಒಳ್ಳೆ ಈದ ಬೆಕ್ ಆಡ್ದಾಡ್ದಂಗೆ ಆಡ್ತಾನೆ ನೋಡೋ " ಎಂದು ಚುಚ್ಚಿದ ಮಹೇಶ್
" ಬತ್ತಾಳೆ ಬಿಡೋ ಬಿಡೊ ಸುಜಾತ , ಅದ್ಯಾಕಂಗೆ ಆಡ್ತಿಯಾ ಎಂದು ರವಿ ಹೇಳುವುದಕ್ಕೂ ಸುಜಾತ ರಸ್ತೆ ದಾಟಿ ಶಾಲಾ ಕಾಂಪೌಂಡ್ ದಾಟಿ ಬರುವಾಗ, ಹಂಸ ರಸ್ತೆಯಲ್ಲಿ ನಡೆದು ಬರುತ್ತಿದೆಯೇನೋ? ಎಂದು ಭಾಸವಾಗುತ್ತಿತ್ತು .ಹಚ್ಚ ಬಿಳುಪಿನ ಸೀರೆಯನ್ನು ಉಟ್ಟಿದ್ದಳು ,ಆಗ ತಾನೆ ಸ್ನಾನ ಮಾಡಿದಂತೆ ಹೆರಳನ್ನು ಕೆಂಪನೆಯ ಕುಪ್ಪಸದ ಮೇಲೆ ಕಂಡರೂ ಕಾಣದಂತೆ ಹರಡಿಕೊಂಡಿದ್ದಳು ,ಕೊರಳಲ್ಲಿ ಬಂಗಾರದಂತಹ ಸರ, ಸೊಂಟದಲ್ಲಿ ಡಾಬು ಬಂಗಾರದ್ದು ಇರಬಹುದಾ ಗೊತ್ತಿಲ್ಲ .ಬಿಡಿಯಾಗಿ ಬಿಟ್ಟ ಕೂದಲಲಿ ಒಂದು ಮೊಳ ಮಲ್ಲೆ ಹೂ ಇಣುಕಿ ನೋಡುತ್ತಿದ್ದವು. ಕಿವಿಯೋಲೆಗಳು ಅವಳು ನಡೆದಂತೆ ತಾಳ ಬದ್ದವಾಗಿ ಕುಣಿಯುತ್ತಿದ್ದವು. ಹುಡುಗರು ಕಾಣ್ಬಿಟ್ಟು ನೋಡುತ್ತಿರುವಾಗ ಹತ್ತಿರ ಬಂದವಳೆ ಸತೀಶನ ಬಳಿ ಬಂದು , ಹೂನಗೆ ಬೀರುತ್ತಾ , ತನ್ನೆರಡು ಹುಬ್ಬು ಮೇಲಕ್ಕೆ ಹಾರಿಸಿದಳು .ಇವನು ಹೆಬ್ಬೆರಳು ತೋರ್ಬೆರಳು ಸೇರಿಸಿ ತೋರಿಸುತ್ತಾ , ನಗಲಾರಂಬಿಸಿದ ಉಳಿದ ಹುಡುಗರ ಹೊಟ್ಟೆಯಲ್ಲಿ ಬೆಂಕಿ ಬಿದ್ದಿದ್ದೆ ಆಗ.
ಮಧ್ಯಾಹ್ನದ ಊಟ ಮುಗಿದ ಮೇಲೆ ಶಾರದಾ ಪೂಜೆಗೆ ಸಿದ್ದತೆ ನಡೆದಿತ್ತು . ಕಾರ್ಯ ಕ್ರಮದ ಪಟ್ಟಿ ಹಿಡಿದು ಬಂದ ಎಸ್ಸೆಮ್ಮೆಸ್ ಮೇಷ್ಟ್ರ , ಪ್ರಾರ್ಥನೆ ಮಾಡಲು ರೂಪಾಳನ್ನು ಕರೆದರು. ನೋಡಲು ತೆಳ್ಳಗೆ ಬೆಳ್ಳಗಿದ್ದ ರೂಪ ಅಂದು ನೀಲಿ ಬಾರ್ಡರ್ ಇರುವ ಕೆಂಪನೆಯ ಸೀರೆಯುಟ್ಟು ಇನ್ನೂ ರಂಗು ರಂಗಾಗಿ ಕಾಣುತ್ತಿದ್ದಳು . ಎಂದೂ ಹಾಡದ ರೂಪ ಯಾವ ರೀತಿ ಹಾಡುವಳೋ ಎಂದು ಎಲ್ಲರೂ ನಿರೀಕ್ಷೆ ಮಾಡುವಾಗ
"ನೀ..... ನಮ್ಮ ಗೆಲುವಾಗಿ ಬಾ.....ಗಜಮುಖನೆ ನೀ... ನಮ್ಮ ಗೆಲುವಾಗಿ.....ಬಾ". ಎಂದು ಎಸ್ ಜಾನಕಿಯೇ ಹಾಡಿದಂತೆ ಹಾಡಿ ಮುಗಿಸಿದಾಗ ಎಲ್ಲರ ಕೈಗಳು ತಮಗರಿವಿಲ್ಲದೆ ಚಪ್ಪಾಳೆ ತಟ್ಟುತ್ತಿದ್ದವು.
ವಿದ್ಯಾರ್ಥಿಗಳ ಅನಿಸಿಕೆ ಹೇಳಲು ಬಂದ ಸತೀಶ
" ಈ ಮೂರು ವರ್ಷಗಳಲ್ಲಿ ನಮ್ಮ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದಿದ್ದೇವೆ ,ನಾವು ದಾರಿ ತಪ್ಪಿದಾಗ ನಮ್ಮ ಮಖ್ಯಶಿಕ್ಷಕರು ಸೇರಿ ನಮಗೆ ಉತ್ತಮ ರೀತಿಯಲ್ಲಿ ಬುದ್ದಿ ಹೇಳಿದ್ದಾರೆ, ಎಂದು ಸುಜಾತಳ ಕಡೆಗೊಮ್ಮೆ ಹೆಚ್ಚೆಮ್ ಕಡೆಗೊಮ್ಮೆ ನೋಡಿ ಪ್ರೇಮ ಪತ್ರ ಪ್ರಕರಣ ನೆನೆದು , ಕಣ್ಣಲ್ಲಿ ಗೊತ್ತಿಲ್ಲದೇ ನೀರು ಜಿನುಗಿದವು . ಸುಜಾತ ತಲೆತಗ್ಗಿಸಿದರೆ ಮುಖ್ಯ ಶಿಕ್ಷಕರು
"ಏ ಸತೀಶ ಅದೆಲ್ಲಾ ಯಾಕೋ ಈಗ ಬಿಡು"
ಅಂದರು ಮುಂದೆ ಸತೀಶನಿಗೆ ಮಾತನಾಡಲಾಗಲಿಲ್ಲ ಹೋಗಿ ಕುಳಿತು ಬಿಟ್ಟ. ಇಡೀ ಸಂಭ್ರಮದ ಕೊಠಡಿಯಲ್ಲಿ ನೀರವ ಮೌನ .ಬಳಿಕ ಕಾಡಪ್ಪ ಶಿಕ್ಷಕರು ಮಾತನಾಡಿ ನೀವು ಜೀವನದಲ್ಲಿ ಶಿಸ್ತು ರೂಢಿಸಿಕೊಂಡು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕೊನೆಯದಾಗಿ ಎಂಬಂತೆ ಮತ್ತೆ ಬುದ್ದಿವಾದ ಹೇಳಿದರು.
ಶಾರದಾ ಮಾತೆಯ ಪೋಟೋ ಮುಂದೆ ಇರುವ ಹಾಲ್ಟಿಕೇಟ್ ಒಂದೊಂದೆ ತೆಗೆದು , ಮಕ್ಕಳಿಗೆ ಕೊಟ್ಟು ಮುಖ್ಯ ಶಿಕ್ಷಕರು ಪರೀಕ್ಷೆ ಬಗ್ಗೆ ಕೆಲ ಸೂಚನೆಗಳನ್ನು ನೀಡಿ ಎಲ್ಲರಿಗೂ ಸಿಹಿ ನೀಡಿ ಮನೆಗೆ ತೆರಳಲು ಹೇಳಿದರು .ಅಲ್ಲಿಯವರೆಗೂ ಸಂಭ್ರಮದಲ್ಲಿದ್ದ ಮಕ್ಕಳಿಗೆ ಯಾವುದೋ ಅವ್ಯಕ್ತ ನೋವು ,ಬೇಸರದಿಂದ ,ಒಮ್ಮೆಲೆ ಕೆಲವರ ಕಣ್ಣಲ್ಲಿ ನೀರು. ಅವರೇ ಒಬ್ಬರಿಗೊಬ್ಬರು ಸಾಂತ್ವನ ಹೇಳಿಕೊಂಡು ಶಿಕ್ಷಕರಿಗೆ ವಂದಿಸಿ ಮತ್ತೊಮ್ಮೆ ಮಗದೊಮ್ಮೆ ಶಾಲೆಯನ್ನು ತಿರು ತಿರುಗಿ ನೋಡಿ ಮನೆಗಳತ್ತ ಭಾರವಾದ ಹೆಜ್ಹೆ ಹಾಕುತ್ತಾ ಸಾಗಿದರು.......
ಮುಂದುವರೆಯುವುದು....
ಸಿ ಜಿ ವೆಂಕಟೇಶ್ವರ
No comments:
Post a Comment