07 June 2020

ಕಾಲಯ ತಸ್ಮೈ ನಮಃ ( ಚಿಕ್ಕ ಕತೆ)


ಚಿಕ್ಕ ಕಥೆ

*ಕಾಲಾಯ ತಸ್ಮೈ ನಮಃ*

‌"ಯಾವಾಗಲೋ ಹೈಸ್ಕೂಲಿನಲ್ಲಿ ಪ್ರೀತಿ ಮಾಡಿದ ಹುಡುಗನ ನೆನೆದು ಹೀಗೆ ಚಿಂತೆ ಮಾಡಬೇಡ ಕಣೇ ಸುಜಾತ , ನೀನೀಗ ಬೆಂಗಳೂರಿನಲ್ಲಿ ಇದೀಯಾ , ಡಿಗ್ರಿ ತೆಗೊಂಡಿದಿಯಾ, ಆದ್ರೂ ಅದೆಲ್ಲಿ ಇದಾನೋ ನಿನ್ ರೋಮಿಯೋ ? ಅವನ್ನ ನೆನೆದು, ನಿನ್ನ ಯೌವನ ಮತ್ತು ಸಮಯ ಹಾಳು ಮಾಡ್ಕೊತಾ ಇದಿಯಾ, ನನ್ ನೋಡು ಬಿಂದಾಸ್ ಆಗಿದಿನಿ , ಈಗ ನನ್ ನಾಲ್ಕನೇ ಬಾಯ್ ಪ್ರೆಂಡ್ ಬುಲೆಟ್ ತರ್ತಾನೆ ಜಮ್ ಅನ್ನೊ ಅಂಗೆ ಲಾಂಗ್‌ ಡ್ರೈವ್ ಹೋಗ್ತಿವಿ, ಅಮೇಲೆ ಈಟಿಂಗ್   ಡೇಟಿಂಗ್ ಎಕ್ಸೆಟ್ರಾ ಎಕ್ಸೆಟ್ರಾ......."

" ಸಂಜನಾ ನೀನು ನನ್ನ ಹೊಟ್ಟೆ ಉರಿಸಲು ಈ ರೀತಿ ಮಾತನಾಡುವೆ ಅಂತ ನನಗೆ ಗೊತ್ತು ,ನಾನು ಏನೂ ಅಂತನೂ ನಿನಗೆ ಗೊತ್ತು , ನಿಷ್ಕಲ್ಮಶ ಪ್ರೀತಿಗೆ ಕಾಯುವ, ತಾಳ್ಮೆ ಇರುತ್ತದೆ, ಪ್ರೀತಿ ಇನ್ಸ್ಟಂಟ್ ಕಾಫಿ, ಟೀ ಮಾಡ್ದಾಂಗೆ ಅಲ್ಲ, ಪ್ರೀತಿ ಪವಿತ್ರ, ಪ್ರೀತಿ ಅಮರ, ಪ್ರೀತಿಗೆ ಎಕ್ಸಪೈರಿ ಡೇಟ್ ಇಲ್ಲ, ನಿನ್ನಂತವರು ಆತುರಕ್ಕೆ ಬಿದ್ದು ಪ್ರೀತಿಗೆ ಒಂದು ಟೈಮ್ , ಒಂದು ಆತುರತೆ, ಒಂದು ದೈಹಿಕ ಸಂಬಂಧದ ಅರ್ಥ ಕೊಡುತ್ತೀರಿ , ನನ್ ಪ್ರಕಾರ ಅದು ಪ್ರೀತಿನೆ ಅಲ್ಲ ."
" ಆಯ್ತು ಮಾರಾಯ್ತಿ , ನಿನ್ ಪುರಾಣ ಸಾಕು, ಅಗೋ ನನ್ ಪ್ರೆಂಡ್ ಅರ್ಜುನ್ ಬುಲೆಟ್ ನಲ್ಲಿ ಬಂದ , ಬಾಯ್" ಎಂದು ಹೊರಟೇ ಬಿಟ್ಟಳು ಸಂಜನಾ.

ನಾಲ್ಕು ತಿಂಗಳ ನಂತರ ಪಾರ್ಕ್ ನಲ್ಲಿ  ಸಂಜನಾ ಅಳುತ್ತಾ ಕುಳಿತಿದ್ದಳು  ,ಸುಜಾತಳ ನೋಡಿ ಬಿಕ್ಕಿ ಬಿಕ್ಕಿ ಅಳಲಾರಂಬಿಸಿದಳು .
" ಸುಜಾತ ಇಂದು ಮಧ್ಯಾಹ್ನ ಡಾಕ್ಟರ್ "ಟೈಮ್ " ಕೊಟ್ಟಿದ್ದಾರೆ‌ , ಅವನು ತೆಗೆಸೋದಕ್ಕೆ ಹೇಳಿದ, ಯಾಕೋ ಯಾತನೆ ಆಗ್ತಾ ಇದೆ ಸುಜಾತ........" ಸಂಜನಾ ಅಳು ನಿಲ್ಲಲಿಲ್ಲ.

"ಕಾಲಯಾ ತಸ್ಮೈ ನಮಃ , ಅಳಬೇಡ ಸಮಾಧಾನ ಮಾಡಿಕೋ " ಎಂದು  ಸಂಜನಾಳ    ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು , ತಾಯಿಯಂತೆ ತಲೆ  ನೇವರಿಸುತ್ತಾ, ಧೈರ್ಯ ಹೇಳುತ್ತಿದ್ದರೆ ,ಸಂಜಾನಳ ಮನಸ್ಸು ಆಸ್ಪತ್ರೆಯಲ್ಲಿ ಮಧ್ಯಾಹ್ನ ನಡೆಯಬಹುದಾದ ಬಲಿ ಕುರಿತು ದೀರ್ಘವಾಗಿ ಯೋಚಿಸುತ್ತಿತ್ತು.....

*ಸಿ ಜಿ ವೆಂಕಟೇಶ್ವರ*
*ತುಮಕೂರು*

No comments: