17 June 2020

ಸದುಪಯೋಗ?( ನ್ಯಾನೋ ಕತೆ)


*ಸದುಪಯೋಗ?*

ನ್ಯಾನೋ ಕಥೆ

" ಏ ನೀನೇನು ನಿಮ್ಮಪ್ಪನ ಮನೆಯಿಂದ ತಂದಿಲ್ಲ ಕೊಡೊಲೆ ,ಯಾರೋ ಕೊಟ್ಟಿರೋ ಅರ್ದ ಲೀಟರ್ ಹಾಲು ಉಚಿತವಾಗಿ ಹಂಚೋಕೆ ಇಷ್ಟು ಧಿಮಾಕು,  ಅಷ್ಟು ಪೋಸು ಕೊಡ್ತಿಯಾ" ಕಿರುಚಿದ ದಿವಾಕರ.
" ನೀನು ಏನು ಎಗಾರಾಡ್ಬೇಡ, ನೀನು ಪುಕ್ಸಟ್ಟೆ ಸಿಗೋ ಹಾಲು ತಗೊಂಡೋಗಾಕೆ ಬಂದಿರೋದು ,ಸುಮ್ಮನೆ ಲೈನ್ ನಲ್ಲಿ ನಿಂತ್ಕೊಂಡು ಬಾರಪ್ಪ ,ಇಲ್ಲದ್ ಗಾಂಚಾಲಿ ಮಾಡಬೇಡ" ಎಂದ ಜಗದೀಶ .
ಮಾತಿಗೆ ಮಾತು ಬೆಳೆದು, ಇಬ್ಬರೂ ಕೈ ಕೈ ಮಿಲಾಯಿಸಿ, ಕರೋನ ಪ್ರಯುಕ್ತ ಉಚಿತವಾಗಿ ಹಂಚಲು ತಂದಿದ್ದ ಹಾಲಿನ ಪಾಕೆಟ್ಗಳು ಇರುವ  ಟ್ರೇ ಕೆಳಗೆ ಬಿದ್ದಿತು. ಜನರ ಕಾಲ್ತುಳತಕ್ಕೆ ಎಲ್ಲಾ ಪಾಕೆಟ್ ಗಳು ಒಡೆದು ಹಾಲೆಲ್ಲ ಮಣ್ಣು ಪಾಲಾಯಿತು.
ಒಬ್ಬರಿಗೊಬ್ಬರು ಬೈಯ್ದುಕೊಂಡು ಅವರವರ ಮನೆ ಸೇರಿದರು.
ಮನೆಗೆ ಬಂದರೂ ಅದೇ ಸಿಟ್ಟಿನಿಂದ ದಿವಾಕರ ಬೈಯ್ದು ಕೊಳ್ಳುತ್ತಿದ್ದ "ಆ ಜಗದೀಶ ಏನ್ ಅವ್ನೆ ಹಾಲು ಕೊಟ್ಟಂಗೆ ಪೋಸ್ ಕೊಡಾಕೆ ಬಂದ ,ಎಲ್ಲಾ ಹಾಲು ಮಣ್ಣು ಪಾಲಾಯ್ತು , ಅಂಗೆ ಆಗಲಿ " ಎಂದು ಶಾಪ ಹಾಕಿದ.
ಈ ಮಾತು ಕೇಳಿದ ದಿವಾಕರನ ಮಗಳು ಸುಲೋಚನ ಮನದಲ್ಲೇ ನೊಂದುಕೊಂಡಳು " ನಾನು ಕೂಡಿಟ್ಟ ಐನೂರು ರೂಪಾಯಿ ಹಣವನ್ನು ಬಡವರಿಗೆ ಹಾಲು ಕೊಡಿಸಿ  ಎಂದು   ಜಗದೀಶ್ ಅಂಕಲ್ ಗೆ ಕೊಟ್ಟಿದ್ದು ಸದುಪಯೋಗ ಆಗಲಿಲ್ಲವಲ್ಲ "ಎಂದು ಕೊರಗಿದಳು.
*ಸಿ ಜಿ ವೆಂಕಟೇಶ್ವರ*

No comments: