03 June 2020

ಸನ್ಮಾರ್ಗ ಭಾಗ _೬



ಹೆದ್ದಾರಿ ಭಾಗ ೬

ಭಾಗ ೬ ಪ್ರೀತಿ ನಿವೇದನೆ

"ನನಗೇಕೆ ಈಗೀಗ ಹೀಗಾಗುತ್ತಿದೆ? ಮನೆಯಲ್ಲಿ ನನಗೆ ಇಷ್ಟ ಎಂದು ತಿಮ್ಮಕ್ಕ ಸಜ್ಜೆ ರೊಟ್ಟಿ ಮಾಡಿ ಅದರ ಮೇಲೆ ಆಗ ತಾನೆ ಕಡೆದ ಇಡಿಯಷ್ಟು ಬೆಣ್ಣೆಯನ್ನು ಹಾಕಿ ಕೊಟ್ಟರು ಮೊದಲಾಗಿದ್ದರೆ ಬಾಯಿಚಪ್ಪರಿಸುತ್ತಾ ಅಕ್ಕ ಇನ್ನೊಂದು ರೊಟ್ಟಿ ಸ್ವಲ್ಪ ಕರಂ ಕರಂ ಅನ್ನಂಗಿರಲಿ ಎಂದು ಮಜ್ಜಿಗೆ ಸ್ವಾರೆಯಿಂದ ಮತ್ತೆ ಬೆಣ್ಣೆಯನ್ನು ಹಾಕಿಕೊಳ್ಳುವುದನ್ನು ನೋಡಿ ಏ ಒಂದು ಆಳ್ತಕ್ಕಿರು. ಅತೀಯಾಗಿ ಬೆಣ್ಣೆ ತಿಂದರೆ ಗಣೇಶಪ್ಪ ಆಗ್ತೀಯ ಎಂದು ಪ್ರೀತಿಯಿಂದ ಗದರುತ್ತಿದ್ದರು. ಆದರೆ ಇಂದು ಯಾಕೋ ಸಜ್ಜೆ ರೊಟ್ಟಿ ಎಂಬೋ ಸಜ್ಜೆ ರೊಟ್ಟಿನೆ ರುಚಿಸ್ತಿಲ್ಲ ಯಾಕೆ? ಮೊದಲಾಗಿದ್ದರೆ ಮುಕುಂದ ಮಾಮ ಬೈಯ್ದರೂ ರೇಡಿಯೋ ಕೈಗೆಟುಕದಿದ್ದರೂ ಮರದ ಕುರ್ಚಿ ಹಾಕಿ ಹತ್ತಿ ಕನ್ನಡ ಅಲ್ಲದಿದ್ದರೂ ಯಾವ ಭಾಷೆ ಹಾಡು ಬಂದರೂ ಕೇಳಿ ನಲಿಯುತ್ತಿದ್ದೆ ಇಂದು ನನ್ನ ಇಷ್ಟದ "ಶಿಲೆಗಳು ಸಂಗೀತವ ಹಾಡಿವೆ .... " ಹಾಡು ಬರುತ್ತಿದ್ದರೂ ಯಾಕೋ ಸಂಗೀತದಂತಹ ಸಂಗಿತದ ಮೇಲೆ ಒಲವಿಲ್ಲ ಯಾಕೆ ಹೀಗೆ ?  "ಮೈನ್ ಎಕ್ಸಾಂ ಇನ್ನು ಒಂದೂವರೆ ತಿಂಗಳೈತೆ ಚೆನ್ನಾಗಿ ಓದಬೇಕು ಈ ವರ್ಷ ನಿನ್ನ ಮೇಲೆ ನಾವು ಬಾಳ ಆಸೆ ಇಟ್ಕಂಡಿದಿವಿ" ಎಂದು ಮೊನ್ನೆ ಹೆಡ್ ಮಾಸ್ಟರ್ ಕರೆದು ಹೇಳಿದರು, ಓದಲು ಕುಳಿತರೆ ಓದಲಾಗುತ್ತಿಲ್ಲ ಯಾಕೆ ? ಕೊಟಗೇಣಿಯಲ್ಲಿ ಅಮ್ಮ ಕಷ್ಟ ಪಡುತ್ತಾ ನನ್ನ ಓದಿನ ಬಗ್ಗೆ ದೊಡ್ಡ ಆಶಾಗೋಪುರ ಕಟ್ಟಿಕೊಂಡಿದ್ದಾಳೆ ನಾನು ನೋಡಿದರೆ ಸರಿಯಾಗಿ ಓದುವುದು ಬಿಟ್ಟು ಹದಿನೈದು ದಿನಗಳಾದವಲ್ಲ ಯಾಕೆ? ಹೀಗೆ ಪ್ರಶ್ನೆಗಳ ಮಧ್ಯ ಉತ್ತರವಾಗಿ ಸ್ಮೃತಿಪಟಲದ ಮೇಲೆ ಬೇಡವೆಂದರೂ ಅವಳ ಪೋಟೋ ಬಂದೇ ಬಿಟ್ಟಿತು.ಅವಳೇ ಬೀರಪ್ಪ ಮೇಷ್ಟ್ರು ಮಗಳು ಸರೋಜ . ಇದಕ್ಕೆಲ್ಲ ಒಂದು ಇತಿ ಹಾಡಲೇ ಬೇಕು ನಾನು ಅವಳಿಗೆ ನನ್ನ ಪ್ರೀತಿಯನ್ನು ನಾಳೆಯೇ ಹೇಳಬೇಕು ನಂತರ ಮನಸ್ಸು ನಿರಾಳವಾಗುವುದು ,ಆಗ ಓದಬೇಕು ಮುಂದೆ ದೊಡ್ಡವನಾದಮೇಲೆ ಅವಳನ್ನೇ ಮದುವೆಯಾಗಬೇಕು"ಎಂದು ಸತೀಶ ಸುದೀರ್ಘವಾದ ಕನಸೊಂದನು ಕಾಣುತ್ತಿದ್ದ. "ಪುಸ್ತಕ ಇಡಕೊಂಡು ಏನಲ ಅದು ಅಂಗೆ ಜಂತೆ ನೋಡ್ತಿಯ? ಜಂತೆಗೇನು ಕೋತಿ ಕುಣಿತೈತಾ? ಪುಸ್ತಕ ನೋಡಿ ಓದು ಅಂದಾಗ "ಅದು ಅಲ್ಲಿ ಹಲ್ಲಿ " ಎಂದು ತಡವರಿಸಿದ್ದ ಕಂಡು" ಹಲ್ಲಿ ಇಲ್ಲ ಪಲ್ಲಿ ಇಲ್ಲ ಓದು "ಎಂದು ಗದರಿ ಮಾವ ದೇವರ ಕೋಣೆಗೆ ಹೋದರು.
ಇತ್ತೀಚೆಗೆ ಸುಜಾತ ಶಾಲೆಯಲ್ಲಿ, ಮನೆಗೆ ನಡೆದುಕೊಂಡು ಬರುವಾಗ ನನ್ನ ನೋಡಿ ನಗುವುದು, ನಾನು ಅವಳನ್ನು ನೋಡಿ ನಗುವುದನ್ನು ನನ್ನ ಗೆಳೆಯರು ಗಮನಿಸಿಲ್ಲ ಅಂದುಕೊಂಡಿದ್ದ ಸತೀಶ " ಏನಪ್ಪ‌  ಹೀರೋ ಎಲ್ಲಿಗೆ ಬಂತು ನಿನ್ನ ಲವ್ ಸ್ಟೋರಿ" ಎಂದು ಚಿದಾನಂದ ಕೇಳುತ್ತಿದ್ದಂತೆ ಎದೆ ಧಸಕ್ಕೆಂದ ಅನುಭವ "ಯಾವ ಲವ್ ಯಾರ ಸ್ಟೋರಿ "ಎಂದ ಸತೀಶ  ಬೆಕ್ಕು ಕಣ್ಣುಮುಚ್ಚಿ ಹಾಲು ಕುಡುದ್ರೆ ಯಾರಿಗೂ ಕಾಣಲ್ಲ ಅಲ್ವೇನೊ? ನಿನ್ನ ಮತ್ತು ಸುಜಾತಳ ಬಗ್ಗೆ ಸ್ಕೂಲಲ್ಲೆಲ್ಲ ಮಾತಾಡ್ತಾರೆ ಮುಚ್ಕೊಂಡು ಹೇಳಮ್ಮ ಕಂಡಿದಿನಿ " ಅಂದೇ ಬಿಟ್ಟ ಚಿದಾನಂದ್
ಅಂದು ತರಗತಿಯಲ್ಲಿ ಐದಾರು ಬಾರಿ ಸತೀಶ ನೋಡಿ ನಕ್ಕಿದ್ದಳು ಅವನೂ ಸಹ .
ಅದೇ ಧೈರ್ಯದಿಂದ ಮನೆಗೆ ಬಂದವನೆ ಗುರುಸಿದ್ದನಿಗೆ ಇಂದು ಹೋಮ್ ವರ್ಕ್ ಜಾಸ್ತಿ ಐತೆ ನಾನು ಹುಲ್ಲು ತರಲು ರೊಪ್ಪಕ್ಕೆ ಬರಲ್ಲ ನೀನೆ ಹೋಗಿ ಬಾ" ಎಂದು ಹೇಳಿ ಕೈ ಕಾಲು ಮುಖ ತೊಳೆದುಕೊಂಡು  ಕುಳಿತು  ಮೊದಲ ಪ್ರೇಮಪತ್ರ ಬರೆಯಲು ಕುಳಿತೇ ಬಿಟ್ಟ ಸತೀಶ . ಹೇಗೆ ಶುರು‌ ಮಾಡಬೇಕು ಎಂದು ತೋಚದೆ ಚಡಪಡಿಸಿದ ಇದುವರೆಗೆ ಪರೀಕ್ಷೆಗಳಲ್ಲಿ ತಂದೆಗೆ ಪತ್ರ ಬರೆಯಿರಿ, ಶಿಕ್ಷಕರಿಗೆ ,ಸಂಪಾದಕರಿಗೆ ಪತ್ರ ಬರೆಯಿರಿ ಎಂದು ಕೇಳಿದ ಪ್ರಶ್ನೆಗಳಿಗೆ ಪಟ ಪಟ ಬರೆದು ಅಂಕಗಳನ್ನು ಪಡೆದ ಸತೀಶನಿಗೆ ಮೊದಲ ಬಾರಿಗೆ ಪತ್ರ ಬರಯಲು , ಅದೂ ಪ್ರೇಮಪತ್ರ ಬರೆಯಲು ಪೆನ್ನೇ ಓಡುತ್ತಿಲ್ಲ ಅಲ್ಲ ಅವನು ಬರೆಯುತ್ತಿಲ್ಲ ಇಷ್ಟು ದಿನ ಇಲ್ಲದ ಒಂದು ಅನುಮಾನ ಈಗ ಅವನ ಕಾಡಲಾರಂಬಿಸಿತು ಅದು ಸುಜಾತ ನನ್ನ ಪ್ರೀತಿ ಮಾಡ್ತಾಳ ? ಅಥವಾ ಸುಮ್ನೆ ನಕ್ತಾಳ ? ನನ್ನ ಪ್ರೀತಿ ನಿರಾಕರಿಸಿದರೆ ಏನು ಮಾಡಲಿ? ಅವಮಾನ ಅಲ್ಲವೆ? ಇಲ್ಲ ಅವಳು ನನ್ನ ಪ್ರೀತಿ ಮಾಡೇ ಮಾಡ್ತಾಳೆ . ಏನೆ ಆಗಲಿ ಪತ್ರ ಬರೆಯುವೆ ಎಂದು ಧೈರ್ಯ ಮಾಡಿ ಪತ್ರ ಬರೆಯಲು ಶುರು ಮಾಡಿದ ಮೊದಲ ಸಾಲು ಶುರು ಮಾಡಲು ಜಂತೆಯ ಮನೆ ಆಗ ತಾನೆ ಚಿಗುರು ಬೇಸಿಗೆ ಶುರುವಾಗಿದ್ದು ಆ ಮನೆಗೆ ಕಿಟಕಿ ಇಲ್ಲದಿರುವುದು ಎಲ್ಲಕ್ಕಿಂತ ಮುಖ್ಯವಾಗಿ ಪ್ರೇಮಪತ್ರದ ಕಾವು ಬೆವರು ಶುರುವಾಯಿತು. " ಯಾಕಲಾ ಅಂಗೆ ಬೆವರ್ತಿಯಾ ಹೊರಗೆ ಹೋಗು ಅಲ್ಲೂ ಲೈಟ್ ಐತಲ್ಲ. ಅಲ್ಲೇ ಓದ್ಕ ,ಬರ್ಕ, ಎನಾದ್ರೂ ಡೌಟ್ ಐತಾ ಹೇಳ್ಕೊಡಲಾ? ಎಂದು ಮುರಾರಿ ಅಂದಾಗ ಅಡುಗೆ ಮನೇಲಿ ಅಡುಗೆ ಮಾಡೋ ತಿಮ್ಮಕ್ಕ "ಓ  ನೀವ್ ಎಸ್ಸೆಲ್ಸಿ ಓದಿ ಹತ್ತೊರ್ಸ ಆತು ನಿಮ್ಗೇನು ಹೇಳ್ಕೊಡಾಕೆ ಬರುತ್ತೆ " ಗೊಣಗಿದರು
"  ಆತು ಬಿಡಮ್ಮ ನನಿಗೆ ಹೇಳ್ಕೊಡಾಕೆ ಬರಲ್ಲ ನೀನು ಏಳನೇ ಕ್ಲಾಸ್ ಪೇಲಾಗಿದಿಯಲ್ಲ ಬಾ ಹೇಳ್ಕೊಡು " ಅಂದದ್ದು ಕೇಳಿ ತಿಮ್ಮಕ್ಕ
"ನಾನು ಏಳನೇ ಕ್ಲಾಸ್ ಪಾಸಾಗಿದ್ರೆ ಈ ಮನೆಲ್ಯಾಕೆ ರೊಟ್ಟಿ  ಬಡಿತಿದ್ದೆ" ಎಂದು ಜೋರಾಗಿಯೇ ರೊಟ್ಟಿ ಬಡಿಯಲು ಆರಂಬಿಸಿದಳು
" ಸಾಕು ನಿಮ್ಮ ಮಾತು ಆ ಹುಡ್ಗುಗೆ ಪರೀಕ್ಷೆ ಹತ್ರ ಬಂತು ಓದ್ಲಿ ಸುಮ್ನಿರಿ" ಅಜ್ಜಿ ಆದೇಶ ಮಾಡಿದಾಗ  ಮಾತು ಇರಲಿಲ್ಲ. ಆದರೆ ಅಡುಗೆ ಮನೆಯಲ್ಲಿ ರೊಟ್ಟಿ ಬಡಿಯುವ ಸದ್ದು ಹೆಚ್ಚಾಗಿತ್ತು. ಒಲೆಯಲ್ಲಿ ಬೆಂಕಿ ಜೋರಿತ್ತು.
ಗಾಳಿಗೆ ಹೊರಗೆ ಬಂದು ಕುಳಿತರೂ ಸತೀಶ ಬರೆಯಬೇಕಾದ ಪತ್ರ ಅವನಿಗೆ ವಿಶೇಷವಾದದ್ದು ಅಲ್ಲಿಯೂ ಬೆವರುವುದ ಕಂಡ ಕಿರಿಯ ಮಾವ ಬಿಳಿಯಪ್ಪ "ಅದ್ಯಾವ ಸೀಮೆ ಓದಪ್ಪ ನಿಂದು ಇಷ್ಟ್  ಗಾಳಿ ಇದ್ದರೂ ಬೆವುರ್ತಾ ಇದಿಯಾ" ನಗುತ್ತಲೇ ಕೇಳಿದ
ಮೊದಲಿಬ್ಬರು ಮಾವಂದಿರ ಕಂಡರೆ ಭಯವವಿರುವ ಸತೀಶಗೆ ಬಿಳಿಯಪ್ಪ ಕಂಡರೆ ಎನೊ ಪ್ರೀತಿ ತುಂಬಿದ ಸದರ "ಮಾಮೋ ನಿನಗೇನ್ ಗೊತ್ತು ಒದೋದು ಸುಮ್ನಿರು ನೀನು ಓದಿದ್ರೆ ಗೊತ್ತಾಗಿರೋದು". ಅಂದಾಗ ಬಿಳಿಯಪ್ಪ ಓ ಇದ್ಯಾಕೋ ನಮ್ಮ ಬುಡಕ್ಜೆ ಬರೋ ತರ ಇದೆ  ಎಂದು ಸುಮ್ಮನಾದ.
ಅಡಿಗೆ ಮನೆಯಿಂದ
"ಬರ್ರಿ ರೊಟ್ಟಿ ಆಗೈತೆ ತಿನ್ರಿ" ಎಂದು ತಿಮ್ಮಕ್ಕ ಕರೆದಾಗ ಅಯ್ಯೋ ಒಂದು ಅಕ್ಷರನೂ ಪ್ರೇಮ ಪತ್ರ ಬರೆಯೋಕಾಗಲಿಲ್ಲ  ಅಂತ ಬೇಸರದಿಂದಲೆ ತಟ್ಟೆ ತೆಗೆದುಕೊಂಡು ರೊಟ್ಟಿ ಹಾಕಿಕೊಂಡು ತಿಂದು ಮತ್ತೆ ಕುಳಿತು ಬರೆಯಲು ಶುರು ಮಾಡಿದ ಸತೀಶ.
"ಪ್ರೀತಿಯ  ಸುಜಾತ ನಿನ್ನ ನಗು, ನಿನ್ನ ಗುಣ ನೋಡಿದ ನನಗೆ ನಿನ್ನ ಮೇಲಿನ ಗೌರವ ಹೆಚ್ಚಾಗಿದೆ ಪ್ರತಿ ದಿನ ನೀನು ನನ್ನ ನೋಡಿ ನಕ್ಕಾಗ ಮನದಲ್ಲೇನೋ ಪುಳಕ ,ಹೋದ ವಾರ ಎರಡು ದಿನ ನೀನು ಸ್ಕೂಲ್ಗೆ ಬಂದಿರಲಿಲ್ಲ ಅಂದು ನನಗೆ ಈ ಸ್ಕೂಲ್ ಆದ್ರೂ ಯಾಕಿದೆಯೋ ಅನಿಸಿತು. ಮತ್ತೆ ಮೂರನೆ ದಿನ ನಿನ್ನ ನೋಡಿದಾಗ ನನಗೆ ಜೀವ ಬಂತು .ಸುಜಾತ ಸುತ್ತಿ ಬಳಸಿ ಹೇಳಲ್ಲ ವಿಷಯಕ್ಕೆ ಬರ್ತಿನಿ ಐ ಲವ್ ಯು
ಮುಂದೆ ನೀನೇ ನನ್ನ ಹೆಂಡತಿ ಆಗಬೇಕು ಅಂತ ನನ್ನ ಆಸೆ  ಸದ್ಯಕ್ಕೆ ಇಷ್ಟು ಸಾಕು. ನಿನ್ನ ಉತ್ತರಕ್ಕೆ ‌ಕಾಯುತಿರುವೆ .
ಇಂತಿ ನಿನ್ನ ಪ್ರೀತಿಯ"
ಸತೀಶ
ಎಂದು ಬರೆದು ನಿಟ್ಟುಸಿರಿಟ್ಟಾಗ ರಾತ್ರಿ ಗಂಟೆ ಎರಡು ಒಡೆದಿತ್ತು.
ಜೋಪಾನವಾಗಿ ಚೀಟಿಯನ್ನು ಎತ್ತಿಟ್ಟುಕೊಂಡು ನಾಳೆ ಇದನ್ನು ಸುಜಾತಳಿಗೆ ತಲುಪಿಸುವುದು ಹೇಗೆ  ಎಂದು ಯೋಚಿಸುತ್ತಾ ಮಲಗಿದವನಿಗೆ ನಿದ್ದೆ ಯಾವಾಗ ಬಂತೋ ಗೊತ್ತಾಗಲಿಲ್ಲ
" ಸತೀಶಣ್ಣ ಸಗಣಿ ತಟ್ಟಿ ಹೊರಸು ಬಾ ತಿಪ್ಪೆಗೆ ಹಾಕಿ ಬತ್ತಿನಿ " ಎಂದು ಗುರುಸಿದ್ದ ಕೂಗಿದಾಗ ಬೆಳಗಿನ ಜಾವ ಐದೂವರೆ. ಎಲ್ಲರೂ ಮಲಗಿರುವದನ್ನು ನೋಡಿ ಗುರುಸಿದ್ದನಿಗೆ ಬೈಯ್ಯಬೇಕು ಎಂದು ಬಾಯಿಗೆ ಬಂದರೂ ಅವನ ಅಮಾಯಕ ನಿಷ್ಕಲ್ಮಶ ಹಿ ...ಹಿ... ಹಿ ...ಎಂಬ ಮುಗ್ದ ನಗು ನೋಡಿ ಬೈಯಲಿಲ್ಲ ಗೋಣಿ ಚೀಲವನ್ನು ತಲೆಯಮೇಲೆ ಹಾಕಿಕೊಂಡು ಕೊಪ್ಪೆ ಮಾಡಿಕೊಂಡು ಸಗಣಿ ತಟ್ಟಿಯನ್ನು ಹೊತ್ತುಕೊಳ್ಳುವಾಗ ಅವನ ದೇಹದಿಂದ ಬರುವ ದುರ್ಗಂಧ ಮತ್ತು ಸಗಣಿ ಇವರೆಡರಲ್ಲಿ ಯಾವುದು ಹೆಚ್ಚು ವಾಸನೆ ಎಂದು ತಿಳಿಯದಾಯಿತು. ಅವನು ಸ್ನಾನ ಮಾಡಿ ಎಷ್ಟು ದಿನವಾಗಿತ್ತೋ ?
ಆಗಲೇ  ಇಂದು ನಾನೂ ಸ್ನಾನ ಮಡಬೇಕು ಎಂದೆನಿಸಿದ್ದು ಸತೀಶನಿಗೆ. ಸಾಮಾನ್ಯವಾಗಿ ಸತೀಶ ವಾರಕ್ಕೊಮ್ಮೆ ಮಾತ್ರ ಅದು ಶನಿವಾರದಂದು ಮಾತ್ರ ಸ್ನಾನ ಮಾಡುವುದು ಅಲಿಖಿತ ನಿಯಮವಾಗಿತ್ತು .ಅಂದು ಬುಧವಾರವಾದರೂ ಸ್ನಾನ ಮಾಡಬೇಕೆಂಬ ಆಸೆ ಚಿಗುರೊಡೆದಿತ್ತು ಕಾರಣ ಮೊದಲ ಪ್ರೇಮ ಪತ್ರ ಎಂದು ಬಿಡಿಸಿ ಹೇಳ ಬೇಕಾಗಿರಲಿಲ್ಲ.
"ಅಕ್ಕ ಎದ್ದಾಳು ಆರು ಗಂಟೆ ಆತು ಕಾಪಿ ಕಾಸು" ಎಂದು ತಿಮ್ಮಕ್ಕನ‌ನ್ನು ಎಬ್ಬಿಸಿದ ಇವನಿಗೆ ಕಾಫಿ ಕುಡಿಯಲು ಆಸೆ ಇಲ್ಲದಿದ್ದರೂ ಕಾಫಿ ಕಾಸುವಾಗ ಎಡ್ಲಿ ಒಲೆ ( ಒಲೆಗೆ ಹೊಂದಿಕೊಂಡಂತೆ  ನೀರು ಕಾಯಲು ಇಟ್ಟಿರುವ ಮಣ್ಣಿನ ಅಥವಾ ಹಿತ್ತಾಳೆಯ ಪಾತ್ರೆ) ನಲ್ಲಿ ನೀರು ಕಾದರೆ ಸ್ನಾನ ಮಾಡಬಹುದು ಎಂಬ ಆಸೆ .
ಎಂಟುಗಂಟೆಗೆ ಬಕೀಟು ತಂದು ಎಡ್ಲಿಯಿಂದ ಚೆಂಬಿನಲ್ಲಿ ನೀರು ತೋಡುವುದನ್ನು ನೋಡಿದ ತಿಮ್ಮಕ್ಕ ಅಚ್ಚರಿಯಿಂದ
"ಏನು ಇವತ್ತು ಸಾಹೇಬರು ಸ್ನಾನ ಮಾಡ್ತಾ ಇದಾರೆ ಏನ್ ವಿಶೇಷ" ಕೇಳಿಯೇ ಬಿಟ್ಟರು
"ಏನೂ ಇಲ್ಲಕ್ಕ ಸುಮ್ಮನೆ "ಅಂದ ಸತೀಶ

ಅಡಿಗೆ ಮನೆಯಲ್ಲೇ ಎತ್ತರದ ಭಾಗದಲ್ಲಿ ಸ್ನಾನದ ಕೊಠಡಿ ಎಂಬಂತಹ ಪ್ರದೇಶ. ಅದಕ್ಕೆ ಬಾಗಿಲು ಕಿಟಕಿ ಏನೂ ಇಲ್ಲ. ಗಂಡಸರು ಸ್ನಾನ ಮಾಡುವಾಗ ತೊಂದರೆಯಿಲ್ಲ ಹೆಂಗಸರು ಸ್ನಾನ ಮಾಡುವಾಗ ಅಡುಗೆ ಕೋಣೆ ಕಂ ಸ್ನಾನದ ಕೋಣೆಗೆ ಪ್ರವೇಶ ನಿಷಿದ್ದ .ಅಷ್ಟಕ್ಕೂ ಆ ಮನೆಯಲ್ಲಿ ಇದ್ದ ಹೆಂಗಸರು ಇಬ್ಬರೆ ತಾನೆ, ಅವರೂ ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಮೂರು ಸಲ ಸ್ನಾನ ಮಾಡುವವರಲ್ಲವೇ ?
ಸತೀಶ ಸ್ನಾನ  ಮಾಡಲು ಲೈಪ್ ಬಾಯ್ ಸೋಪ್ ಹಾಕಿಕೊಂಡು ಇಂದು ಶಾಲೆಯಲ್ಲಿ ಏನೋ ಪವಾಡ ಸಂಭವಿಸಲಿದೆ  ಎಂಬ ಅವ್ಯಕ್ತ ಸಂತಸದಿಂದ ಸ್ನಾನ ಮಾಡುವಾಗ ನೀರು ಅಡುಗೆ ಮಾಡುವ ತಿಮ್ಮಕ್ಕನಿಗೆ ಸಿಡಿಯಿತು.
" ಮೆಲ್ಲಕ್ಕೆ ನೀರ್ ಹೊಯ್ಕಳಪ್ಪ ಸಾವ್ಕಾರ" ಎಂದು ನಿಧಾನವಾಗಿ ಗದರಿದರು ಆದರೂ ಸತೀಶನನ್ನು ಕಂಡರೆ ತಿಮ್ಮಕ್ಕನಿಗೆ ಸ್ವಂತ ತಮ್ಮನಂತಹ ಅಕ್ಕರೆ 
" ಅಕ್ಕಾ  ಬೆನ್ನು ಉಜ್ಜು ಬಾರಕ್ಕ " ಎಂದು ದೀನನಾಗಿ ಕೇಳಿದ್ದಕ್ಕೆ ಕರಗಿದ ತಿಮ್ಮಕ್ಕ
" ನಿದೊಳ್ಳೆ ಕತೆ ಆತು ಕಣಲ ನಾನು ಅಡಿಗೆ ಮಾಡಾದು ಯಾವಾಗ ಹೊಲಕ್ಕೆ ಇವತ್ತು ಬಿಳಿಯಣ್ಣ ಮಡಕೆ ಹೊಡ್ಯಾಕೋಗೈತೆ ಬುತ್ತಿ ಬ್ಯಾರೆ ತಗಂಡೋಗ್ಬೇಕು "ಎಂದು ಗೊನಗುತ್ತಲೇ ಬೆನ್ನಜ್ಜಿ  ಊದೋಕೊಳವೆಯಿಂದ ಬಾಯಲ್ಲಿ ಊದಿ ಆರಿದ ಒಲೆಯಲ್ಲಿ ಬೆಂಕಿ ಬರುವಂತೆ ಮಾಡಿ ಅಡುಗೆ ಮಾಡುವಲ್ಲಿ ತಲ್ಲೀನರಾದರು ತಿಮ್ಮಕ್ಕ.
"ಈ ಚೀಟೀನಾ ಹೆಂಗಾರ ಮಾಡಿ ಅವ್ಳಿಗೆ ಕೊಡು ನೀನು ನನ್ನ ಬೆಸ್ಟ್ ಪ್ರೆಂಡ್ ಅಲ್ವಾ" ಎಂದು ಶಾಲೆಯ ಕಡೆಗೆ ಹೋಗುವಾಗ ಚಿದಾನಂದ್ ಗೆ ಹೇಳಿದಾಗ ಚಿದಾನಂದ್ ಎಲ್ಲ ಅರ್ಥವಾದವನಂತೆ ಚೀಟಿ ತೆಗೆದುಕೊಂಡು ಶರ್ಟ್ ಜೇಬಿನಲ್ಲಿ ಇಟ್ಟುಕೊಂಡ .
" ಹೇ ಮೇಲಿನ ಜೋಬು ಬ್ಯಾಡ ನಿಕ್ಕರ್ ಜೋಬಲ್ಲಿ ಇಟ್ಕ ಯಾರಿಗೂ ತೋರಿಸಬೇಡ ಅವಳಿಗೆ ಮಾತ್ರ ಕೊಡಬೇಕು"
ಒತ್ತಿ ಒತ್ತಿ ಎರಡೆರಡು ಬಾರಿ ಹೇಳಿದ್ದು ಕೇಳಿದ ಚಿದಾನಂದ್
"ಅಮಿಕ್ಕಂಡಿರಪ್ಪ ನಾನೇನು ಚಿಕ್ಕ ಮಗೂನ  ಇನ್ನ್ ಮೂರು ತಿಂಗಳ ಕಳೆದರೆ ಕಾಲೇಜು ಹುಡ್ಗ ನಾನು "ಎಂದು ಸಿಟ್ಟಾದ
ಆದರೆ ಇದೇ ಉಡಾಪೆ ಮತ್ತು ಓವರ್ ಕಾನ್ಪಿಡೆನ್ಸು  ಮುಂದೆ ಎಡವಟ್ಟು ಮಾಡಬಹುದು ಎಂದು ಇಬ್ಬರೂ ಊಹಿಸಿರಲಿಲ್ಲ.
ಶಾಲೆಯ ಒಳಗೆ ಹೋಗುವ ದಾರಿಯಲ್ಲಿ ಎಡಕ್ಕೆ ಇರುವ ಜಗ್ಗುವ ನಲ್ಲಿ ನೋಡಿದ  ಮಹೇಶನಿಗೆ ನೀರು ಕುಡಿವ ಆಸೆಯಾಗಿ "ಚಿದಾನಂದ್ ನಮ್ಮ ಮನೇಲಿ ಇವತ್ತು ಉಪ್ಪಿಟ್ಟು ಮಾಡಿದ್ರು ತಿಂದು  ಎಷ್ಟ್ ನೀರು ಕುಡಿದರೂ ಬಾಯರಿಕೆ ಹೋಗ್ತಾ ಇಲ್ಲ ಬಾರೋ ನಲ್ಲಿ ಜಗ್ಗು ನೀರ್ ಕುಡಿತೀನಿ" ಅಂದ  ನಲ್ಲಿ ಜಗ್ಗುವುದೆಂದರೆ ಚಿದಾನಂದ್ ಗೆ ಆಟದಷ್ಟೇ ಖುಷಿ ಸಾಕು ಬಿಡು ಎಂದರೂ ಬಿಡದೆ ಎಗರಿ ಎಗರಿ ನಲ್ಲಿ ಜಗ್ಗಿದ ಆಗ ನಿಕ್ಕರ್ ಜೇಬಿನಿಂದ ಚೀಟಿಯೊಂದು ಬಿದ್ದದ್ದನ್ನು ಮಹೇಶ್ ಗಮನಿಸಿದ ಚಿದಾನಂದ್ ಗೆ ಗೊತ್ತಾಗಲಿಲ್ಲ .
ಮುಂದೆ ಹೋಗಿ ಹಿಂದೆ ಬಂದ ಮಹೇಶ್ ಚೀಟಿ ತೆಗೆದುಕೊಂಡು ಯಾರೂ ಕಾಣದ ಹಾಗೆ ತೆರೆದು ನೋಡಿದ " ಸತೀಶನ ಪ್ರೇಮಪತ್ರ" ಒಂದೆಡೆ ಸಿಟ್ಟು ಮತ್ತೊಂದೆಡೆ ಸಂತೋಷ ಮಹೇಶನಿಗೆ ಸುಜಾತ ಬಗ್ಗೆ ಅಂತಹ ಆಸಕ್ತಿ ಇಲ್ಲದಿದ್ದರೂ ಸತೀಶ ನನಗಿಂತ ಹೆಚ್ಚಾಗಿ ಅಂಕ ಗಳಿಸುತ್ತಾ ನನ್ನ ಮೊದಲ ಸ್ಥಾನಕ್ಕೆ ಸಂಚಕಾರ ತಂದ ವಿಷಯದಲ್ಲಿ ಮೊದಲಿನಿಂದಲೂ ಅವನ ವಿರುದ್ಧ ಕತ್ತಿ ಮಸೆಯುತ್ತಿದ್ದ ಮನಸಲ್ಲೆ
" ಸರಿಯಾಗಿ ಸಿಕ್ಹಾಕ್ಕೊಂಡೆ ಸತೀಶ ನಿನಗೈತೆ ಮಾರಿಹಬ್ಬ " ಎಂದು ಸೀದಾ ಹೆಡ್ ಮಾಸ್ಟರ್ ರೂಂ ಕಡೆ ನಡೆದ.
ಪ್ಯೂನ್ ಸಿದ್ದಾನಾಯ್ಕ ಬಂದು "ಸತೀಶ್ ಹೆಡ್ ಮಾಷ್ಟು ಕರೆತಾರೆ ಬರಬೇಕಂತೆ"  ಅಂದಾಗ ಎಸ್ಸೆಮ್ಮಸ್ ಮೇಷ್ಟ್ರು ಹೋಗಪ್ಪ ಎಂದು ಕಳಿಸಿದರು .ಅದಾಗಿ ಎರಡು ನಿಮಿಷಕ್ಕೆ "ಸುಜಾತಾ ಬರಬೇಕಂತೆ ಬಾರಮ್ಮ "  ಎಂದಾಗ ಎಲ್ಲಾ ವಿಧ್ಯಾರ್ಥಿಗಳಿಗೆ ಇವರಿಬ್ಬರನ್ನೇ ಯಾಕೆ ಹೆಡ್ ಮಾಸ್ಟರ್ ಕರೆದರು ಎಂಬ ಕಡೆಗೆ ಗಮನ ಹರಿದು ತರಗತಿಯಲ್ಲಿ ಶಿಕ್ಷಕರು ಬಹಳ ರಸವತ್ತಾದ ಪಾಠ ಮಾಡುತ್ತಿದ್ದರೂ  ಎಲ್ಲರ ಚಿತ್ತ ಅವರಿಗರಿವಿಲ್ಲದೇ ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಕಡೆ ಊಹೆಗಳು ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಶುರುವಾಗಿದ್ದವು.
ಚಿದಾನಂದ್ ನಿದಾನವಾಗಿ ನಿಕ್ಕರ್ ಜೇಬಿಗೆ ಕೈ ಹಾಕಿ ನೋಡಿದ ಅದು ಅಲ್ಲಿರಲಿಲ್ಲ ಆಗಬಾರದ ಎಡವಟ್ಟಾಗಿ ಸೇರಬಾರದವರ ಕೈ ಸೇರಿತ್ತು ಪ್ರೇಮಪತ್ರ. ಮಹೇಶನ ಮುಖದಲ್ಲಿ ಮಾತ್ರ ಏನೋ ದೊಡ್ಡ ಪರಾಕ್ರಮ  ಸಾಧಿಸಿದ  ಅವ್ಯಕ್ತ ಸಂತಸ ಮೊಗದಲ್ಲಿ ಮನೆಮಾಡಿತ್ತು.
"ಏನಪ್ಪ ಸತೀಶ ಏನು ಇದೆಲ್ಲ ಈ ವಯಸ್ಸಿಗೆ ನಿನಗೆ ಪ್ರೀತಿ ಬೇಕಾ ? ಪ್ರೀತಿ ಅಂದರೆ ಏನಪ್ಪ ಅರ್ಥ ಗೊತ್ತಾ ನಿನಗೆ ?" ಎಂದು ಪ್ರಶ್ನಿಸುತ್ತಲೇ  ಸಮಾಧಾನವಾಗಿಯೇ ಬುದ್ದಿ ಮಾತು ಹೇಳಲು‌ ಶುರುಮಾಡಿದರು ಹೆಡ್ ಮಾಸ್ಟರ್ ಅದಕ್ಕೆ ಸತೀಶ ಇದುವರೆಗೆ ಯಾವುದೇ ತಪ್ಪು ಮಾಡದಿರುವುದು ಮತ್ತು ಆ ಶಾಲೆಗೆ ಮುಂದೆ ಕೀರ್ತಿ ತರುವ ವಿದ್ಯಾರ್ಥಿ ಅವನೇ ಎಂಬ ಬಲವಾದ ನಂಬಿಕೆ ಶಾಂತರಾಜು ಅವರದು.
"ನೋಡಯ್ಯ ನಿನ್ನ ವಯಸ್ಸು ಈಗ  ಹದಿನಾರು ಇದು ಹುಚ್ಚುಕೋಡಿ ಮನಸ್ಸು ಇರುವ ವಯಸ್ಸು, ಇದನ್ನು ಇಂಗ್ಲಿಷ್‌ನಲ್ಲಿ ಟೀನೇಜ್ ಅಂತಾರೆ ,ಹಳ್ಳಿ ಕಡೆ ಇದನ್ನು ಮೀಸೆ ಬಂದವರಿಗೆ ದೇಶ ಕಾಣಲ್ಲ ಇನ್ನೋನೋ  ಬಂದವರಿಗೆ ನೆಲ ಕಾಣಲ್ಲ ಅಂತಾರೆ ,ನಿನಗೆ ಮೀಸೆ ಚಿಗುರೋ ಕಾಲ ಒಂದು ಕರೆಂಟಿನ ಕಂಬಕ್ಕೆ ಸೀರೆ ಉಡಿಸಿದರೂ ನಿನ್ನಲ್ಲೇನೋ ಆಸೆ ಹುಟ್ಟತ್ತೆ ಅಲ್ವೇನೋ? " ಎಂದಾಗಲೂ ಸತೀಶ ತಲೆ ಎತ್ತಲಿಲ್ಲ  ಮುಂದುವರೆದ ಶಾಂತರಾಜು ರವರು ."ನೋಡಪ್ಪ ಈ ವಯಸ್ಸಿನಲ್ಲಿ ಒಂದು ಹುಡುಗ ಒಂದು ಹುಡುಗಿ ಕಡೆ ಆಕರ್ಷಣೆ ಆಗೋದು ಸಹಜ ಅದನ್ನು infatuation ಅಂತಾರೆ ಬಹುಶಃ ನಿ‌ನಗೆ ಇವಳ ಮೇಲೆ  ಅದೇ ಆಗಿರಬಹುದು .ಅಥವಾ ನಿನಗೆ ನಿಜವಾಗಿಯೂ ಇವಳ ಮೇಲೆ ಪ್ರೀತಿ ಅಂತ ಇದ್ದರೆ ಇನ್ನಾರು ತಿಂಗಳು ವರ್ಷದಿಂದ ಇದೇ ಭಾವನೆ ಇರುತ್ತದೆ ಅಷ್ಟರಲ್ಲಿ ನೀನು ಇವಳನ್ನು ಮರೆತರೆ ಅದು ನಿಜವಾಗಿಯೂ ಕ್ರಷ್ ಮತ್ತು ಇನಪ್ಯಾಚುಯೇಶನ್. ಈ ಪರೀಕ್ಷೆ ಟೈಮಲ್ಲಿ ಇದೆಲ್ಲಾ ಬೇಕಾ? ಏನಮ್ಮ ನಿನಗೆ ಇವನ ಮೇಲೆ ಪ್ರೀತಿ ಇದೆಯಾ ? ಇಷ್ಟೊತ್ತು ಹೇಳಿದ್ದು ಅವನಿಗೆ ಮಾತ್ರ ಅಲ್ಲ ನಿನಗೂ ಇದರಲ್ಲಿ ನಿನ್ನ ತಪ್ಪು ಇರದಿರಬಹುದು ಆದರೆ ನೀನು ಸಹ ಈಗ ಪ್ರೀತಿ ಗೀತಿ ಅಂತ ಯೋಚನೆ ಮಾಡೋ ಹಾಗಿಲ್ಲ .ಈ ರೂಮಲ್ಲಿ ಏನೂ ಆಗಿಲ್ಲ ಈಗ ಕ್ಲಾಸ್ ರೂಂಗೆ ಹೋಗಿ ಓದೋ ಕಡೆ ಮಾತ್ರ ಗಮನ ಕೊಡಿ ನಡಿರಿ"
ಎಂದು ಹೇಳಿ ಕಳಿಸಿದಾಗ ಅಪ್ಪ ಮಕ್ಕಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಬುದ್ದಿವಾದ ಹೇಳಿದಂತಿತ್ತು  ಈ ಮಧ್ಯ ಹೆಡ್ಮಾಸ್ಟರ್ ಬುದ್ದಿ ಹೇಳುವಾಗ ಎರಡು ಬಾರಿ ಸತೀಶ ಸುಜಾತಳ ಮುಖ ಗಮನಿಸಿದ ಅವಳ ಮುಖದಲ್ಲಿ ಆತಂಕವಿಲ್ಲ ಅಳುವ ಸೂಚನೆ ಇಲ್ಲದ್ದನ್ನು ಗಮನಿಸಿ ಇದು ನನ್ನ ಪ್ರೀತಿಗೆ ಅವಳ ಪರೋಕ್ಷ ಒಪ್ಪಿಗೆ ಎಂದು ತಿಳಿದು , ಇನ್ನೂ ಮುಂದೆ ಓದುವ ಕಡೆ ಗಮನಹರಿಸಲು ತೀರ್ಮಾನಿಸಿ ತರಗತಿಯ ಕಡೆ ನಡೆದರು ಏನೂ ಆಗಿಲ್ಲವೆಂಬಂತೆ ಪಾಠಗಳನ್ನು ಕೇಳಿದರು.
ಈ ವಿಷಯ ಇವರಿಬ್ಬರಿಗಲ್ಲದೆ   ಚಿದಾನಂದ್, ಮಹೇಶ್ ಗೆ ಮಾತ್ರ ಗೊತ್ತಿತ್ತು ಮುಂದೆ ಸುಜಾತಳ ಅಪ್ಪನಿಗೆ ತಿಳಿದು ರಾದ್ದಾಂತವಾಗುತ್ತದೆ ಎಂದು ಯಾರಿಗೂ ಗೊತ್ತಿರಲಿಲ್ಲ.
ಮುಂದುವರೆಯುವುದು
ಸಿ ಜಿ ವೆಂಕಟೇಶ್ವರ

No comments: