31 December 2017

ಚಿತ್ರ ಹನಿಗವನ

ಚಿತ್ರ ಹನಿಗವನ

*ಬಾಂಧವ್ಯ*

ವರುಣನಾಗಮನ ನನಗೆ ಸಂತಸ
ನನ್ನ  ಕೋಳಿಮರಿಗಳಿಗೆ ಸಂಕಟ
ನೆನೆಯುತಿಹವು ಮಳೆಹನಿಗೆ
ತಂದಿಹೆನು ಎಲೆಯ ರಕ್ಷಣೆಗೆ
ನಾನು ನೆನೆದರೆ ಚಿಂತೆಯಿಲ್ಲ
ನಿಮಗೊಂದು  ಸೂಕ್ತ ಸೂರಿಲ್ಲ
ನಿಮ್ಮ ರಕ್ಷಣೆ ನನ್ನ ಕರ್ತವ್ಯ
ಇರಲಿ ಈಗೆ ನಮ್ಮ ಬಾಂಧವ್ಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೨೦ (ಇದು ಹೊಸ ವರ್ಷ)ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಬಳಗದ ಸ್ಪರ್ಧೆಯಲ್ಲಿ ಅತ್ಯುತ್ತಮ ಎಂದು ಪುರಸ್ಕಾರ ಪಡೆದ ಗಜ಼ಲ್

 
*ಗಜ಼ಲ್ ೨೦*

ಹುಚ್ಚು ಕೇಕೆ ಗದ್ದಲ ಪ್ರದರ್ಶನ  ಇದು ಹೊಸವರ್ಷ ?
ವಸಂತನಾಗಮನದಿ ಪ್ರಕೃತಿ ನರ್ತನ  ಇದು  ಹೊಸವರ್ಷ.

ಕಂಠಪೂರ್ತಿ ಎಣ್ಣೆ ಕುಡಿದು ವಾಂತಿ ಮಾಡಿ ಬಿದ್ದು ಒದ್ದಾಡುವರು .
ಎಣ್ಣೆ ಅಭ್ಯಂಜನ ಸ್ನಾನದ ತಂಪಿಗೆ ಹೂವಾದ ಮೈಮನ ಇದು ಹೊಸ ವರ್ಷ.

ಕೇಕು ಬಾಕುಗಳ ದರ್ಬಾರು ಪಿಜಾ ಬರ್ಗರುಗಳ  ಕಾರಬಾರು.
ಬೇವು ಬೆಲ್ಲವ ಹಂಚಿ ನೋವು ನಲಿವಿನ ಆಹ್ವಾನ ಇದು ಹೊಸ ವರ್ಷ.

ಮದ್ಯರಾತ್ರಿಯ ಅಬ್ಬರ ಊರ ಜನಕೆ ಉಪದ್ರವ ನೀಡುವರು.
ಹಗಲಿನಲಿ ಮನೆ ಮಂದಿ ನಲಿವ ಸಹಜೀವನ ಇದು ಹೊಸ ವರ್ಷ.

ಕರ್ಕಶ ಗಾನ ಅಸಭ್ಯ ಅಶ್ಲೀಲ  ಉಡುಗೆಗಳ  ಗಲಾಟೆಗಳ ಅಬ್ಬರ.
ವೆಂಕಟೇಶನ ಧ್ಯಾನ ಮಾಡಿ ಮಾಡುವ ನಮನ ಇದು ಹೊಸ ವರ್ಷ.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೧೯(ನೋಡಿಲ್ಲಿ)

*ಗಜ಼ಲ್ ೧೯(ನೋಡಿಲ್ಲಿ)

ಮೂರು ದಿನದ ಸಂತೆಯಲಿ ನೂರಾರು ತಕಾರಾರು ನೋಡಿಲ್ಲಿ
ನಾಲ್ಕು ದಿನದ ಜಾತ್ರೆಗೆ ಸಾವಿರಾರು ಪುಕಾರು ನೋಡಿಲ್ಲಿ

ಚೆಂಡು ಬಲೂನು ವಾಚು ಬೇಕು ಬಾಲ್ಯದ ಜೀವಕೆ
ಸರ ಬಳೆ ಬಿಂದಿ ಯೌವನದ ಬೇಡಿಕೆ ನೂರಾರು ನೋಡಿಲ್ಲಿ

ಬೆಂಡು ಬತ್ತಾಸು ಸಿಹಿಯ ಪುಳಕ ಸವಿಯ ಜಳಕ
ಕಾರಾ ಬೂಂದಿಯ ಕಾರಕೆ ನಾಲಿಗೆ ಚುರು ಚುರು ನೋಡಿಲ್ಲಿ


ಹೂವಿನ ಪಲ್ಲಕ್ಕಿ ತೇರುಗಳ ನೈವೇದ್ಯ ಹಣ್ಣು ಕಾಯಿ
ಬಾಯಿಗೆ ಬೀಗ ಹಾಕಿ ನೆನಪುಗಳ ಕಾರುಬಾರು ನೋಡಿಲ್ಲಿ

ಮೆರವಣಿಗೆಯಲಿ ಜನಜಂಗುಳಿ ಎಲ್ಲೆಡೆ ಭಕ್ತರು
ಸೀಜೀವಿಯು ಹೊರಟಾಗ ಬರಲಿಲ್ಲ ನೆಂಟರು ನೋಡಿಲ್ಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 December 2017

ಎರಡು ಶಾಯಿರಿಗಳು

ಶಾಯಿರಿಗಳು

*೧*

*ಮನವಿ*

ನೀ ನನ್ನ ತೊರೆದಾಗ
ನನ್ನ ಹೃದಯದ ಪಾಡು
ಗೆಳತಿ ಕೇಳಬೇಡ
ಕೃಪೆ ಮಾಡಿ ಬೇರೆಯವರ
ಹೃದಯಕ್ಕೆ ಹೋಗಬೇಡ
ಅವರಿಗೂ ನೋವ
ನೀಡಬೇಡ

*೨*

*ಹೃದಯ*

ನನ್ನ ಖಾಲಿ ಹೃದಯದಿ
ನೀ ಬಂದು ನೆಲೆಸಿದೆ
ತುಂಬಿರುವ ಈ
ತುಳುಕದು ನೀನಿರುವವರೆಗೆ
ನೋವಿಗೆ ಜಾಗವಿರದು
ನಲಿವೇ ಎಲ್ಲೆಲ್ಲೂ



*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಚಿತ್ರ ಹನಿಗವನ

ಚಿತ್ರ ಹನಿಗವನ

*ದೇಶಭಕ್ತಿ*

ನಾವೆಂದಿಗೂ ಅಲ್ಲ  ಅನಾಥರು
ನಾವೇ ಭಾರತ ಭಾಗ್ಯವಿಧಾತರು
ನಮಗೆ ಮೈತುಂಬ ಬಟ್ಟೆಯಿಲ್ಲ
ನಮ್ಮ ದೇಶ ಭಕ್ತಿಗೆ ಕೊರತೆಯಿಲ್ಲ
ಹಾಡುವೆವು ಜನಗಣ ಮನದುಂಬಿ
ಗೌರವ ತೋರುವೆವು ಹೃದಯದುಂಬಿ

*ಸಿ.ಜಿ. ವೆಂಕಟೇಶ್ವರ*
*ಗೌರಿಬಿದನೂರು*

ಚಿತ್ರ ಹನಿಗವನ

ಏಕಾಂತ

ಕೆಳಗಡೆ ಹೊಳೆಯ ನೀರಿನ ಸೆಳೆತ
ಹೃದಯದಿ ಭಾವನೆಗಳ ಮೊರೆತ
ಇನಿಯನ ನಿರೀಕ್ಷೆಯಲಿ ನಾನು
ಮೈಮರೆತಿರುವೆ ಬರುವನವನು
ಬೇಸರವಾಗಿದೆ ಈ ಏಕಾಂತ
ಎಂದು‌ ಬರುವೆ ನೀ ಕಾಂತ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

ಕನ್ನಡ ನಾಡು (ಭಾವಗೀತೆ)



ಭಾವಗೀತೆ

*ಕನ್ನಡ ನಾಡು*

ನೋಡು ಬಾ ಯಾತ್ರಿಕ ನಮ್ಮ ನಾಡಸಿರಿಯ
ಸುಂದರ ಮನೋಹರ  ಕರುನಾಡ  ಸಿರಿಯ

ಗಂಗ ಕದಂಬ ರಾಷ್ಟ್ರಕೂಟರು ಆಳಿದ ನಾಡು
ಸಂಗೀತ ನಾಟ್ಯ  ಸಾಹಿತ್ಯ ಕಲೆಗಳ ನೆಲೆವೀಡು
ಕಲೆ  ನಾಟಕ ಶಿಲ್ಪಕಲೆಗಳ ತವರೂರು ಇದು
ಆದಿಪಂಪ ಕುಮಾರವ್ಯಾಸರುದಿಸುದ ನಾಡಿದು

ಕೃಷ್ಣ ತುಂಗೆ ಕಾವೇರಿ ನೇತ್ರಾವತಿಯರ ತಾಣ
ತೇಗ ಹೊನ್ನೆ ಬೀಟೆ  ಗಂಧದ ಮರಗಳ ವನ
ನವಿಲು ಸಾರಂಗ ಹುಲಿ ಕರಡಿಯ ನೋಡಿ
ಸಹ್ಯಾದ್ರಿಯ ಸೊಬಗಿನ ಸುಂದರ ಮೋಡಿ

ಹಕ್ಕ ಬುಕ್ಕ ಕೃಷ್ಣದೇವರಾಯರಾಳಿದ ನಾಡು
ಕನಕ ಪುರಂದರ ದಾಸರ ಪದಗಳ ನೆಲೆವೀಡು
ಶಾಸ್ತ್ರೀಯ ನುಡಿ ಕನ್ನಡ ಭಾಷೆಯ ತವರೂರು
ದಾನಧರ್ಮಗಳಿಗೆ ಹೆಸರಾದ ಹಿರಿಯೂರು

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 December 2017

ಹನಿಗವನಗಳು (ಜೀವನ. ಕುವೆಂಪು ರವರಿಗೆ ಸಮರ್ಪಣೆ)


ಹನಿಗವನಗಳು

*೧*

*ಸೂತ್ರಧಾರ*

ಜೀವನವೊಂದು ನಾಟಕ ರಂಗ
ನಾವೆಲ್ಲ ಪಾತ್ರ ದಾರಿಗಳು
ಭಗವಂತ ಸೂತ್ರಧಾರ
ಸೂತ್ರ ಹರಿದರೆ
ಹೊಲಿಯಲು
ಉಪಯೋಗಕ್ಕೆ ಬರುವುದಿಲ್ಲ
ನಮ್ಮ ಸೂಜಿದಾರ

*೨*

*ದಾರಿ*

ಒಳ್ಳೆಯ ಮಾರ್ಗದಿ ನಡೆ
ಜೀವನ ಉತ್ತಮವಾಗುವುದು
ಎಂದು ಬುದ್ದಿಹೇಳಿದೆ
ಸಾರಿ ಸಾರಿ
ಕೇಳಲಿಲ್ಲ ಹಿಡಿದ ಅಡ್ಡದಾರಿ
ಪರಿಣಾಮ ಭಗವಂತ
ಬೇಗ  ತೋರಿದ
ಯಮಪುರಕ್ಕೆ ದಾರಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*



ರಸ ಋಷಿಗೆ ನಮನ ( ಕುವೆಂಪುರವರು ಹುಟ್ಟು ಹಬ್ಬದ ಮತ್ತು ನನ್ನ ಬ್ಲಾಗ್ನ 20೦ ನೇ ಪೋಸ್ಟ್ ಸಂಭ್ರಮ)

*ರಸ ಋಷಿಗೆ ನಮನ*

ರಸಋಷಿಗೆ ನಮನ  ಕವಿರಾಜ ಇದೋ
ನಿಮ್ಮಾತ್ಮಕೆ ಸವಿಯ ನಮನ

ಕುಪ್ಪಳ್ಳಿ ನೆಲದಿ  ನಲಿಯುತಲಿ ಉದಿಸಿ
ಸಾಹಿತ್ಯದ ಸುಧೆಯ ನೀಡಿ
ಸಮರಸದ ಕವನ ಪ್ರಕೃತಿಯ ಶಿವನ
ವರ್ಣಿಸಿದೆ ಕಾಲ ಕಾಲಕೆ

ಬೋಧಕರ ಕಾರ್ಯ ಕವಿತೆಗಳ ರಚನೆ
ಎಡೆಬಿಡದೆ ಮಾಡುತ ನೀವು
ರಚಿಸಿದಿರಿ ಕಾವ್ಯ ಸೃಜಿಸಿದಿರಿ ನಾಟಕ
ಕಾದಂಬರಿ ಕತೃವು  ನೀವೆ

ಮಲೆನಾಡ ಕವಿಯೆ ಮದುಮಗಳ ಬರೆದೆ
ಮಹಾಕವಿ ರಾಮನ ನೆನೆದು
ತೇಜಸ್ವಿ ಪಿತನೆ ಓಜಸ್ಸು ಪಡೆದ
ಕನ್ನಡದ ಆಸ್ತಿ ನೀವು

ಯುಗದಕವಿ ತಾವು ಜಗದಕವಿ ನೀವು
ಅನಿಕೇತನ ಸಂದೇಶ ಕೊಟ್ಟು
ಜ್ಞಾನ ಪೀಠವ ಪಡೆದ ಜ್ಞಾನಿಗಳು ನೀವು
ವಿಶ್ವಮಾನವ ಸಂದೇಶ ಕೊಟ್ಟಿರಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




28 December 2017

ಜಲವೆಲ್ಲಿ?(ಹನಿಗವನ)

ಜಲವೆಲ್ಲಿ
ನೀರಿಲ್ಲ ಊರಿನಲಿ ಹೇಗಿರಲಿ ನಾ
ಹೊರಟಿರುವೆ ಹಿಡಿದು ಕೊಡಪಾನಾ
ವರತೆಯಲಿ ನೀರಿದ್ದ ಕಾಲವೊಂದಿತ್ತು
ಸಕಲಜೀವಿಗಳು ನಲಿದಾಡುತಿತ್ತು
ಅಂತರ್ಜಲವಿಂದು ಪಾತಾಳ ಸೇರಿದೆ
ಹಗ್ಗವಿಡಿದು ನೀರ ತರಲು ನಾ ಸಾಗಿದೆ

ಸಿ.ಜಿ ವೆಂಕಟೇಶ್ವರ
ಗೌರಿಬಿದನೂರು
9900925529

ಹನಿಗವನ

ಹನಿಗವನ

*ಬೇಡಿಕೆ*

ಒಡಲ ಕೊಟ್ಟೆ  ನೀ ನನಗೆ ದೇವ
ಅನ್ನ ನೀಡದೆ ಕೊಟ್ಟೇಕೆ  ನೋವ
ನಾಯೀಗೀವ ಆಹಾರ  ನನಗಿಲ್ಲ
ಹಸುವಿನ  ಅನ್ನ ನನ್ನ ಹಸಿವಿಗಿಲ್ಲ
ನರರು ನನ್ನಸಿವ  ಹಂಗಿಸುತಿಹರು
ಸುರರು ನನಗೆಂದು ಅನ್ನವೀವರು?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
೯೯೦೦೯೨೫೫೨೯
Venkatesh.c.g9@gmail. Com

ಮೂರು ಶಾಯಿರಿಗಳು


ಶಾಯಿರಿಗಳು

*೧*

*ಕಾರಣ*

ಮನಸೇ ಏಕೆ ಅಳುವೆ
ಸುಮ್ಮನಿರು
ನನ್ನರಸಿ ನನ್ನ ಬಿಟ್ಟು ಹೋಗಿರುವುದು
ನನಗೆ ನೋವು ನೀಡಲು ಅಲ್ಲ
ಬದಲಿಗೆ ನೋವುಂಡ ಹೃದಯಕೆ
ಮುಲಾಮು ತರಲು

*೨*

*ಫಸಲು*

ನೀನು ಹೋದ ಮೇಲೆ
ನನ್ನ ಬದುಕು ಹದಗೆಟ್ಟಿದೆ
ಗೆಳತಿ
ಮುಂಗಾರು ಮಳೆಯಂತೆ
ಬಂದು ನನ್ನದೆಯ ಹದಗೊಳಿಸು
ಬೆಳೆವ ನಾವು  ಪ್ರೀತಿ ಪ್ರೇಮದ
ಫಸಲು‌

*೩*

*ನಗು*


ತರಬೇಡ ಗೆಳತಿ ನೀನು
ಸೂಜಿದಾರ ಹೊಲಿಯಲು
ನನ್ನ ಹರಿದ ಹೃದಯ
ಮರಿಬೇಡ ಗೆಳತಿ ನೀನು
ಬೀರಲು ಮುಗಳ್ನಗೆಯ
ಅದೇ ನಲಿವಲಿ ಮರೆವೆ
ನನ್ನ ಹೃದಯದ ಗಾಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 December 2017

ಮೂರು ಹನಿಗವನಗಳು

*ಹನಿಗವನಗಳು*
*೧*

*ಆಕರ್ಷಣೆ*

ನಾನವಳಿಗಂದೆ
ನಿನ್ನ ತುಂಟ ಕಣ್ಗಳ
ಆಕರ್ಷಣೆಗೆ ನಿನ್ನನ್ನು
ಹಿಂಬಾಲಿಸುತ್ತಿರುವೆ
ಅವಳೆಂದಳು ಹೀಗೆ
ಹೌದು ಹಿಂದೆ ನೋಡು
ನಮ್ಮಪ್ಪನೂ ನಿನ್ನನ್ನೇ
ಹಿಂಬಾಲಿಸುತ್ತಿರುವ

*೨*

*ಜಟಾಪಟಿ*

ಮದುವೆಯ ಮೊದಲು
ಅವಳು ಕೋಮಲೆ  ತುಂಟಿ
ಮದುವೆಯ ನಂತರ
ಅವಳು ಜಗಳಗಂಟಿ
ನಿಲ್ಲುತ್ತಿಲ್ಲ ನಮ್ಮ ಜಾಟಾಪಟಿ


*೩*

*ಪ್ರಶ್ನೆ*

ಅವನಂದ ಈ ತುಂಟ ಮಕ್ಕಳ
ನೋಡಿಕೊಳ್ಳಲು
ನನಗಾಗುವುದಿಲ್ಲ.
ಅವಳೆಂದಳು ಈ ಮಾತನ್ನು
ನಾನು ಏಕಾಂತ ದಲ್ಲಿ ಇದ್ದಾಗ
ನನ್ನೊಂದಿಗೆ ತುಂಟಾಟ ಆಡುವಾಗ
ಏಕೆ ಹೇಳಲಿಲ್ಲ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕಣ್ಣುಗಳು (ಕವನ)

*ಕಣ್ಣುಗಳು*

ನನ್ನ ಮಕ್ಕಳ ಹೊತ್ತು ಹೊರಟಿರುವೆ
ಜೀವನದ ಬಟ್ಟೆಯನರಸಿ ನಡೆದಿರುವೆ
ಅಡ್ಡೆಯಲಿಹವು ನನ್ನಯ  ಕುಡಿಗಳು
ಅವುಗಳು ನನ್ನ ಬಾಳಿನ ಕಣ್ಣುಗಳು

ನನ್ನ ಕಂದಮ್ಮಗಳು ನನಗೆ ಭಾರವೆ
ಏರುಪೇರುಗಳಿರಲಿ ಸಲಹಿ ತೋರುವೆ
ಬಡತನ ಸಿರಿತನ ಕಂಡಿರುವೆ ನಾನು
ನಿಮಗೆ ಕಷ್ಟ ತಿಳಿಯದ ಹಾಗೆ ಸಾಕುವೆನು

ಹೆಣ್ಣು ನಾನೆಂಬ ಕೀಳರಿಮೆ ನನಗಿಲ್ಲ
ನನ್ನ ಕಂದಗಳ ಸಾಕಿ ತೋರಿಸುವೆನಿಲ್ಲಿ
ಜನರ ಅನುಕಂಪ ನನಗೆ ಬೇಕಿಲ್ಲ
ಪ್ರೋತ್ಸಾಹದ ಮಾತೆರಡು ಸಾಕಲ್ಲ

ಆಧುನಿಕ ಶ್ರವಣಕುಮಾರ ನಾನಲ್ಲ
ನನ್ನ ಮಕ್ಕಳ ಪೊರೆವುದ ನಿಲಿಸಲ್ಲ
ಬಾಳಿ ತೋರುವೆ ನಾನು ಜಗದಿ
ತಾಳಿ ಬದುಕುವೆ ಎಂದು ಮುದದಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 December 2017

ನಾಲ್ಕು ಹನಿಗವನಗಳು

*ಹನಿಗವನಗಳು*

*೧*

*ಆಟಿಕೆಗಳು*

ಆಟಿಕೆ ಕೊಳ್ಳಲು ಅಂಗಡಿಗೋದೆ
ಯಾವುದು ಕೊಳ್ಳಲು ತಿಳಿಯದಾದೆ
ಟೋಪಿ‌ ಕನ್ನಡಕ  ಬೊಂಬೆಗಳು
ಸಾಲದಾಗಿವೆ ನೋಡಲೆನ್ನ  ಕಂಗಳು
ಕೇಳಿ ಅವುಗಳ  ಬೆಲೆಗಳ ಹೌಹಾರಿದೆ
ಮುಂದೆ ಕೊಳ್ಳುಲು ತೀರ್ಮಾನಿಸಿದೆ

*೨*
*ನಲ್ಲ*

ನೀನು ಅನುಮತಿಸಿದರೆ
ಈಗಲೇ ಆಗುವೆನು
ನಾನು ನಿನ್ನ ನಲ್ಲ
ಅವಳಂದಳು
ನೀನವನಲ್ಲ


*೩*

*ಬೇಡಿಕೆ*

ಬಟ್ಟೆ ಒಗೆವ ಯಂತ್ರ ಕೊಡಿಸಲೇಬೇಕು
ಎಂದು ಕೇಳಿದಳು ನನ್ನವಳು
ತೊರುತ್ತಾ ಆವೇಗ
ನಾನು ಶಾಂತವಾಗಿ ಉತ್ತರಿಸಿದೆ
ಖಂಡಿತ  ಕೊಡಿಸುವೆ ಜಾರಿಯಾಗಲಿ
ವೇತನ ಆಯೋಗ

*೪*

*ಪ್ರೀತಿ*

ಚಳಿಯಿರಲಿ ಮಳೆಯಿರಲಿ
ನಿನ್ನೆ ಪ್ರೀತಿಸುವೆ
ಅವಳೆಂದಳು
ರವಿಯೂ ಇರಲಿ ಶಶಿಯೂ ಇರಲಿ
ನಿನ್ನನೂ ಪ್ರೀತಿಸುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 December 2017

ಹನಿಗವನ (ಭಾರತ ಮಾರ್ಗ ವಿಧಾತ) ವಾಜಪೇಯಿ ಅವರ ಜನ್ಮದಿನದ ನೆನಪಿಗಾಗಿ

*ಭಾರತಮಾರ್ಗ ವಿಧಾತ*

ಗೊತ್ತಿಲ್ಲದ ಇಂಗ್ಲೆಂಡ್ ನವನಿಗೆ
ರಾಷ್ಟಗೀತೆಯಲ್ಲಿ  ಹೇಳುವೆವು
ಭಾರತ ಭಾಗ್ಯವಿಧಾತ
ಸುವರ್ಣ ಚತುಷ್ಪತ ರಸ್ತೆ ಕೊಟ್ಟ
ನಮ್ಮ ವಾಜಪೇಯಿ ಯವರಿಗೆ
ಹೇಳಲು ಮರೆತಿರುವೆವು
ಭಾರತ ಮಾರ್ಗ ವಿಧಾತ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಎ.ಬಿ.ವಾಜಪೇಯಿ ರವರ ಸ್ಮರಣಾರ್ಥವಾಗಿ

ಹನಿಗವನ

*ಆಶಯ*

ನಿಲ್ಲಮ್ಮ ಮುಳ್ಳು ಕೀಳುವೆನು
ನಿನ್ನ   ನೋವ  ನೀಗುವೆನು
ಹೊತ್ತಿರುವೆ ಸಂಸಾರದ ನೊಗ
ಇಳಿಸುವೆ ಭಾರ ನಾ ನಿನ್ನ ಮಗ
ಬೆಳೆಸುವೆ ನನ್ನ ಮುದ್ದು  ತಂಗಿಯ
ಹಂಚುವೆ ನಮ್ಮವರಿಗೆ ಪ್ರೀತಿಯ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

23 December 2017

ಅನ್ನದಾತಗೆ ನಮಿಸೋಣ (ರೈತ ದಿನಾಚರಣೆಯ ಪ್ರಯುಕ್ತ ಕವನ)

*ಅನ್ನದಾತಗೆ ನಮಿಸೋಣ*

ಇವನೆ ನೋಡು ನಮ್ಮ ರೈತ ಅನ್ನ ನೀಡ್ವನು
ಬಿಸಿಲು ಮಳೆ ಲೆಕ್ಕಿಸದೆ ಹೊಲದಿ ದುಡಿವನು
ಹಿಗ್ಗದೇ ಜಗ್ಗದೇ ಮುಂದೆ ನುಗ್ಗಿ   ನಡೆವನು
ಯೋಗಿಯಾಗಿ ತ್ಯಾಗಿಯಾಗಿ ಬಾಳುತಿರುವನು

ಅವನ ಬೆಳೆಗೆ ಬೆಲೆಯು ಇಲ್ಲ ಸಾಲದಲಿರುವನು
ಮಧ್ಯವರ್ತಿ ಶೋಷಣೆ ಯಲಿ ನಲುಗುತಿರುವನು
ಅಂತರ್ಜಲ ಕಡಿಮೆಯಾಗಿ‌ ಕೊರಗುತಿರುವನು
ಎಲ್ಲರ ಸೇವೆಗೈದು ನರಳಿ  ಬಳಲುತಿರುವನು

ಒಳ್ಳೆಯ ಬೆಲೆ ಅವನ  ಬೆಳೆಗೆ ನಾವು ನೀಡೋಣ
ಗೌರವದಿ  ನಮಿಸಿ ಜೈ ಕಿಸಾನ್ ಎಂದು ಹೇಳೊಣ
ಕೃಷಿಯ ದೇಶದ ಬೆನ್ನೆಲುಬೆಂದು ಸಾರೋಣ
ನಮ್ಮ ರೈತ ನಮ್ಮ ಗೆಳೆಯ ಇವಗೆ ನಮಿಸೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 December 2017

ಗಜ಼ಲ್ ೧೮ (ಯಾರಿಗೇಳಲಿ? ವಿಜಯಪುರ ಬಾಲಕಿ ಮೇಲಿನ ದೌರ್ಜನ್ಯ ದಿಂದ ಮನನೊಂದು ಬರೆದ ಗಜ಼ಲ್)

*ಗಜ಼ಲ್ ೧೮*

ದೇವಿ ನೆಲೆಸಿದ ನಾಡಲಿ ದಾನವರು ಮೆರೆಯುತಿರೆ ಯಾರಿಗೇಳಲಿ?
ದುಷ್ಟಶಕ್ತಿಗಳು ಅಟ್ಟಹಾಸದಿ ಪಟ್ಟವೇರುತಿರೆ  ಯಾರಿಗೇಳಲಿ?

ಆದಿಶಕ್ತಿ ಕ್ಷಮಯಾಧರಿತ್ರಿಯೆಂದು ಪೂಜಿಸುವರು
ನಿರ್ಧಯದಿ ಕಟುಕರಂತೆ ಎರಗಿ ಕೊಲ್ಲುತಿರೆ  ಯಾರಿಗೇಳಲಿ?

ಕಾನೂನು ಕಟ್ಟಳೆಗಳ ನ್ಯಾಯದ ಬಲ ನಾರಿಗಿರುವುದು
ನರಿಬುದ್ದಿಯ ನರರು ಅನಾಚಾರಗಳೆಸಗುತಿರೆ ಯಾರಿಗೇಳಲಿ?

ರಾಮ ಕೃಷ್ಣ, ಬಸವ ಬುಧ್ಧರ ಕಂಡ  ನಾಡು ನಮ್ಮದು
ಕೀಚಕ ಕಂಸರದಂಡು ಅಟ್ಟಹಾಸ ಮೆರೆಯುತಿರೆ ಯಾರಿಗೇಳಲಿ?

ಸೀಜೀವಿಯ ಮನ ನಾರಿಯ ಪೂಜಿಸು ಎಂದಿತು
ಕಡುಪಾಪಿಗಳು ದುಷ್ಟಕಾರ್ಯದಿ ಮುಳುಗಿರೆ ಯಾರಿಗೇಳಲಿ?

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

21 December 2017

ಗಜ಼ಲ್ ೧೭ (ಏಕೆ?)

*ಗಜ಼ಲ್೧೭*

ಅವಿನಾಭಾವ ಸಂಬಂಧದಿ ಬಳಿಸಾರಿದೆ ಏಕೆ ?
ಕರುಳುಹಿಂಡಿ ನಿರ್ಧಯದಿ ನನ್ನ ತೊರೆದೆ ಏಕೆ?


ಸಂಗೀತ ಸರಸ್ವತಿಯಾಗಿ ನನ್ನ ಬಾಳಲ್ಲಿ ಬಂದೆ
ಅಪಸ್ವರಗಳ ನುಡಿಸಿ ಗದ್ದಲವೆಬ್ಬಿಸಿದೆ ಏಕೆ?

ನಟರಾಜನ ತಕಿಟ ತದಿಮಿ ತಾಳದಿ ನರ್ತಿಸಿದೆ
ಎದೆಯ ಮೇಲೆ ದೊಂಬರಾಟವಾಡಿದೆ ಏಕೆ?

ತಂಗಾಳಿಯಂತೆ ನನ್ನ ಬಾಳಲಿ ಬಂದು ಮುದಗೊಳಿಸಿದೆ
ಬಿರುಗಾಳಿಯೆಬ್ಬಿಸಿ ಎದೆಗೆ ಬೆಂಕಿ ಹಚ್ಚಿದೆ ಏಕೆ?

ಸೀಜೀವಿಯ ಬದುಕಲಿ ಮಕರಂದ ತಂದಿಟ್ಟೆ ನೀನು
ಸವಿಯುವ ಮುನ್ನ ಮಣ್ಣು ಪಾಲು ಮಾಡಿದೆ ಏಕೆ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ಮತಯಂತ್ರ.ಮಹಾದಾಯಿ)

*ಹನಿಗವನ*

*೧*
*ಮಹಾ ತಾಯಿ*

ಸಾವಿರಾರು ಪ್ರತಿಭಟನೆಗಳು
ನೂರಾರು ಮನವಿಗಳಿಗೆ
ನೆನಪಿಗೆ ಬರಲಿಲ್ಲ
ನಮ್ಮ ಮಹಾದಾಯಿ
ಈಗ ಎಲ್ಲರಿಗೆ ನೆನಪಾಗಿದ್ದಾಳೆ
ಕಾರಣ ಚುನಾವಣೆ
ಎಂಬ ಮಹಾತಾಯಿ

*೨*

*ದೇವರು*

ಚುನಾವಣೆಯಲ್ಲಿ ಪದೇ ಪದೇ
ಬೇರೆ ಪಕ್ಷಗಳು ಗೆದ್ದರೆ ಸರಿಇಲ್ಲ
ಮತಯಂತ್ರಗಳು
ನಾವು ಗೆದ್ದರೆ ಮತಯಂತ್ರಗಳೇ
ನಮ್ಮ ಪಾಲಿನ
ದೇವಾನುದೇವತೆಗಳು


*ಸಿ.ಜಿ.ವೆಂಕಟೇಶ್ವರ*
 *ಗೌರಿಬಿದನೂರು*

20 December 2017

*ಶಿಕ್ಷಕ ವೃತ್ತಿಯಲ್ಲಿ ತಂತ್ರಜ್ಞಾನದ ಪಾತ್ರ* (ಲೇಖನ)

*ಲೇಖನ*

*ಶಿಕ್ಷಕ ವೃತ್ತಿಯಲ್ಲಿ ತಂತ್ರಜ್ಞಾನದ ಪಾತ್ರ*

ಗುರುಬ್ರಹ್ಮ ಗುರು ವಿಷ್ಣು ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೆ ನಮಃ ಎಂಬ ಮಾತಿನಂತೆ. ಗುರುತಿಸಲ್ಪಡುವ ಗುರು ಅಥವಾ ಶಿಕ್ಷಕರು ತಮ್ಮದೇ ಅದ ಪಾವಿತ್ರತೆ ಪಡೆದು ಸಮಾಜ ತಿದ್ದುವ ಮತ್ತು ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಡಾ ರಾಧಾಕೃಷ್ಣನ್ ರವರು ಹೇಳುವಂತೆ ಶಿಕ್ಷಕ ವೃತ್ತಿಯನ್ನು ಪ್ರಪಂಚದ ಅತ್ಯುತ್ತಮ ಹುದ್ದೆ ಎಂಬುದು ಇಂದಿಗೂ  ಪ್ರಸ್ತುತ.

 ಬದಲಾದ ಕಾಲಘಟ್ಟದಲ್ಲಿ ಕೇವಲ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡಿಸಿ ಜೀವನದ ಮೂಲಭೂತ ಅವಶ್ಯಕತೆ ಇರುವ ಜೀವನ ಕೌಶಲಗಳನ್ನು ಕಲಿಸಿ,ಕೆಲ ವೇದೋಕ್ತ ಮಂತ್ರಗಳನ್ನು ಕಲಿಸಿದರೆ .ಇಂದಿನ ಶಿಕ್ಷಣ ವ್ಯವಸ್ಥೆ ಪೂರ್ಣಗೊಳ್ಳುವುದಿಲ್ಲ

ಇಂದಿನ ಮಕ್ಕಳು ವಿಜ್ಞಾನ ತಂತ್ರಜ್ಞಾನದ ಆವಿಷ್ಕಾರಗಳ ಬಗ್ಗೆ ತಿಳಿದು ಆಧುನಿಕ ಶಿಕ್ಷಣ ಪಡೆಯಲು ಕಾತರರಾಗಿರುತ್ತಾರೆ ಅಂತಹ ಮಕ್ಕಳಿಗೆ ಬೋಧನೆ ಮಾಡುವ ಶಿಕ್ಷಕರು ಸಹ ಒಬಿರಾಯನ ಕಾಲದ ವಿಧಾನ ತಂತ್ರ ಬಳಸಿ ಕಲಿಸುವುದು ಸಮಂಜಸವಾದ ಕ್ರಮವಾಗಲಾರದು .ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಅಂಗಸಂಸ್ಥೆಗಳು ಪಠ್ಯಕ್ರಮವನ್ನು ಬದಲಾವಣೆ ಮಾಡಿ ಶಿಶುಕೇಂದ್ರಿತ ತಂತ್ರಜ್ಞಾನದ ಆಧಾರಿತ ಕಲಿಕೆಗೆ ಒತ್ತು ನೀಡಿವೆ .

ಶಿಕ್ಷಕ ವೃತ್ತಿಯಲ್ಲಿ ತಂತ್ರಜ್ಞಾನದ ಮಹತ್ವ

೧ ಕಲಿಕೆ ಆಸಕ್ತಿ ಹೆಚ್ಚಿಸಲು

ಕಲಿಕೆ ಸುಲಭವಾಗಿ ಆಸಕ್ತಿಯನ್ನು ಉಂಟುಮಾಡಿಸಿ ಕಲಿಸಲು ತಂತ್ರಜ್ಞಾನ ಶಿಕ್ಷಕರು ಮತ್ತು ಮಕ್ಕಳಿಗೆ ಬಹಳ ಅನುಕೂಲ ಮಾಡಿಕೊಡುತ್ತದೆ

೨ ಮೂರ್ತ ಕಲಿಕೆಗೆ ಒತ್ತು

ಸಮುದ್ರ, ಬೆಟ್ಟ, ಬೇರೆ ದೇಶಗಳ ವಾಯುಗುಣ, ಅಂತರಿಕ್ಷ, ವಿಜ್ಞಾನ ದ ತತ್ವ ಮುಂತಾದ ಅಮೂರ್ತ ಕಲ್ಪನೆಯನ್ನು ಮಕ್ಕಳಿಗೆ ಮೂರ್ತ ರೂಪದಲ್ಲಿ ನೀಡಲು ನಾವು ವೀಡಿಯೋ ಪಾಠಗಳನ್ನು. ಮತ್ತು ವರ್ಚುಯಲ್ ರಿಯಾಲಿಟಿ ಪಾಠಗಳನ್ನು ನೀಡಿ ಕಲಿಯಬಹುದು ಮತ್ತು ಕಲಿಸಬಹುದು.

೩ ಶಿಕ್ಷಕ ಮತ್ತು ಮಕ್ಕಳ ಬಾಂದವ್ಯ ವೃದ್ದಿ

ತಂತ್ರಜ್ಞಾನದ ಬಳಕೆಯಿಂದ ಕ್ಲಿಷ್ಟಕರವಾದ ಪರಿಕಲ್ಪನೆಯನ್ನು ಸುಲಭವಾಗಿ ಹೇಳಿಕೊಟ್ಟ ಶಿಕ್ಷಕರ ಬಗ್ಗೆ ಮಕ್ಕಳಿಗೆ ಒಂದು ಅವ್ಯಕ್ತ ಅಭಿಮಾನ ಪ್ರೀತಿ ಬೆಳೆದು ಅನ್ಯೋನ್ಯತೆ ಬೆಳೆದು ಅವರ ಕಲಿಕೆ ಇಮ್ಮಡಿ ಆಗಲು ಪೂರಕವಾಗುತ್ತದೆ .

೪ ದೂರಶಿಕ್ಷಣಕ್ಕೆ ಪೂರಕ

ಮದ್ಯದಲ್ಲಿ ಶಾಲೆ ತೊರೆದ ಮಕ್ಕಳನ್ನು ಪುನಃ ಕಲಿಕೆಯಲ್ಲಿ ತೊಡಗಿಸಿ ಅವರಿಗೆ ದೂರ ಶಿಕ್ಷಣ ನೀಡುವಲ್ಲಿ ಆನ್ಲೈನ್ ವೀಡಿಯೋ ಪಾಠಗಳನ್ನು ಮಾಡಲು ಈ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡಬಹುದು.


ಈ ನಿಟ್ಟಿನಲ್ಲಿ ಸರ್ಕಾರ ಮತ ಸಂಘ ಸಂಸ್ಥೆಗಳು, ಕೆಲಸ್ಬಯಂ ಸೇವಾ ಸಂಸ್ಥೆಗಳು, ಮತ್ತು ಕಾರ್ಪೊರೇಟ್ ಕಂಪನಿಗಳು. ಶಾಲೆಯಲ್ಲಿ ವಿಜ್ಞಾನ ತಂತ್ರಜ್ಞಾನ ಅಳವಡಿಕೆಯ ಕಲಿಕೆಗೆ ಕ್ರಮವಹಿಸಿವೆ ‌.

ಸರ್ಕಾರದ ಎಜುಸ್ಯಾಟ್ ,ಬಾನುಲಿ ಕೇಳಿ ಕಲಿ ಮುಂತಾದ ಕಾರ್ಯಗಳನ್ನು ಹಮ್ಮಿಕೊಂಡು ಸಿ.ಇ.ಟಿ.ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯನ್ನು ನೀಡುತ್ತಿದೆ.
ಇನ್ಫೋಸಿಸ್, ವಿಪ್ರೋ,ಮುಂತಾದ ಕಾರ್ಪೊರೇಟ್ ಕಂಪನಿಗಳು ಕೆಲ ಸರ್ಕಾರಿ ಶಾಲೆಯಲ್ಲಿ ದತ್ತು ತೆಗೆದುಕೊಂಡು ಆ ಶಾಲೆಗಳ ಬೌತಿಕ ಮತ್ತು ಅವಶ್ಯಕ ತಂತ್ರಜ್ಞಾನದ ತರಬೇತಿಯನ್ನು ನೀಡಿ ಶಿಕ್ಷಣ ನೀಡಲು ತಮ್ಮದೇ ಆದ ಸಹಾಯಹಸ್ತ ಚಾಚಿವೆ

ಶಿಕ್ಷಕರ ತಂತ್ರಜ್ಞಾನದ ಬಳಕೆ ಮತ್ತು ಸಾಮಾಜಿಕ ಮಾದ್ಯಮಗಳು

ಈಗಿನ ಮಾಹಿತಿ ಯುಗದಲ್ಲಿ ಸಾಮಾಜಿಕ ಮಾದ್ಯಮ ಗಳಾದ ಫೇಸ್ಬುಕ್, ವಾಟ್ಸಪ್, ಹೈಕ್,ಟೆಲಿಗ್ರಾಂ ಬ್ಲಾಗ್, ಅಪ್ಲಿಕೇಷನ್, ಇತ್ಯಾದಿ ಗಳು ಬಹುತೇಕ ಜನರ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು.
ಇಂತಹ ಸಾಮಾಜಿಕ ಮಾದ್ಯಮ ಗಳನ್ನು ನಮ್ಮ ಶಿಕ್ಷಕರು ಬಳಸಿಕೊಂಡು ಮಕ್ಕಳ ಕಲಿಕೆ ಸರಲ ಮಾಡಿದ ಯಶೋಗಥೆಗಳು ನಮ್ಮ ಕಣ್ ಮುಂದಿವೆ .

ವಾಟ್ಸಪ್ ಗುಂಪುಗಳು

ವಿಷಯವಾರು ಶಿಕ್ಷಕರ ವಾಟ್ಸಪ್ ಗುಂಪಿನಲ್ಲಿ ಇಂದು ವಿಷಯಗಳ ಚರ್ಚೆ, ವಿಷಯಗಳ ವಿನಿಮಯದ ಜೊತೆಗೆ ಪರಸ್ಪರ ಅನಮಾನ ಬಗೆಹರಿಸಲು ಈ ಗುಂಪಿನಲ್ಲಿ ಅವಕಾಶವಿದೆ .ಇದರ ಜೊತೆಗೆ ವಿದ್ಯಾರ್ಥಿಗಳ ವಾಟ್ಸಪ್ ಗುಂಪು ಮಾಡಿ ಪಠ್ಯ ಮತ್ತು ಸಹ ಪಠ್ಯ ವಿಷಯಗಳ ಮಾರ್ಗದರ್ಶನ ನೀಡಲು ಬಳಸಲಾಗುತ್ತದೆ.

ಹೈಕ್ ಗುಂಪುಗಳು

ನಮ್ಮ ರಾಜ್ಯದ ಸಮಾಹ ವಿಜ್ಞಾನ ಶಿಕ್ಷಕರ ಹೈಕ್ ಗುಂಪು ಈಗ ಚಾಲ್ತಿಯಲ್ಲಿದೆ ಅದರಲ್ಲಿ ಸಾವಿರಕ್ಕೂ ಹೆಚ್ಚು ಸದಸ್ಯರು ಸಕ್ರಿಯವಾಗಿ ಶಾಲಾಮಕ್ಕಳ ಕಲಿಕೆ ಸುಲಭವಾಗಿ ಮಾಡಲು ,ಪಿ.ಪಿ.ಟಿ  ವಿಡಿಯೋ, ಮುಂತಾದ ಸಂಪನ್ಮೂಲಗಳ ತಯಾರಿಸಲು ಮತ್ತು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮ ವನ್ನು .ರಾಮಚಂದ್ರ. ಸಂತೋಷ ಕುಮಾರ್. ನಾಗಣ್ಣ ಶಹಬಾದ್ ,ವಾಸು ಶ್ಯಾಗೊಟಿ,ರವಿ ಅಹೇರಿ, ರಮೇಶ್,ದಾನಮ್ಮ ಝಳಕಿ ಮುಂತಾದ  ಶಿಕ್ಷಕರು ಮಾಡುತ್ತಾ ಬಂದಿದ್ದಾರೆ. ಈ ಸಂಪನ್ಮೂಲಗಳನ್ನು ಹಲವಾರು ಶಾಲೆಗಳ ಮೂಲಕ ಮಕ್ಕಳು ಬಳಸಿರುವುದು ಶ್ಲಾಘನೀಯ.
ಇದೇ ರೀತಿಯಲ್ಲಿ ವಿವಿಧ ವಿಷಯಗಳ ಹೈಕ್ ಗುಂಪುಗಳು ಮಕ್ಕಳ ಕಲಿಕೆಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರಿವೆ

ಬ್ಲಾಗ್ ಗಳು

ಹೈಕ್ ಮೂಲಕ ಸಂಪನ್ಮೂಲಗಳ ಹಂಚಿಕೊಳ್ಳಲು ಮತ್ತು ಪರಸ್ಪರ ಸಮಸ್ಯೆಯನ್ನು ಬಗೆಹರಿಸಲು ಪ್ರಾರಂಭಿಸಿದ ಸಮಾಜ ವಿಜ್ಞಾನ ಶಿಕ್ಷಕರ ಗುಂಪು ತಮ್ಮದೇ ಆದ " ಸೋಷಿಯಲ್‌ ಸೈನ್ಸ್‌ ಡಿಜಿಟಲ್ ಗ್ರೂಪ್ " ಎಂಬ ತಮ್ಮದೇ ಆದ ಬ್ಲಾಗ್ ಒಂದು ಸಿದ್ದಪಡಿಸಿ ಉಚಿತವಾಗಿ ಬೋಧನ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡಿ ದೇಶಾದ್ಯಂತ ಮನೆಮಾತಾಗಿದೆ ಜೊತೆಗೆ ಇದು ಲಕ್ಷಾಂತರ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸಹ ಈ ಬ್ಲಾಗ್ ಭೇಟಿ ನೀಡಿ ಉಪಯೋಗ ಪಡೆದಿದ್ದಾರೆ.
ಇದೇ ರೀತಿ ವಿಜ್ಞಾನ.ಗಣಿತ ಕನ್ನಡ ಇಂಗ್ಲಿಷ್ ಈಗೆ ವಿವಿಧ ವಿಷಯಗಳ ಬ್ಲಾಗ್ ಗಳು ಶಿಕ್ಷಕರ ಮತ್ತು ಮಕ್ಕಳ ಕಲಿಕೆ ಸುಲಭವಾಗಿ ನಡೆಯಲು ಸಹಕಾರಿ ಆಗಿದೆ

ಶಿಕ್ಷಣ ಅಪ್ಲಿಕೇಶನ್ ಗಳು

ಒಂದು ಪ್ಲೇಸ್ಟೊರ್ ನಲ್ಲಿ ಎಲ್ಲಾ ವಿಷಯಗಳ ವಿವಿಧ ಅಪ್ಲಿಕೇಶನ್ ಗಳು ಲಭ್ಯವಿದ್ದು ಶಿಕ್ಷಕರ ವೃತ್ತಿಪರ ತರಭೇತಿ ಗೆ ಮತ್ತು ಮಕ್ಕಳ ಕಲಿಕೆಯ ಸುಲಭವಾಗಿ ಮಾಡಲು ಸಹಾಯಕ ಅಗಿವೆ

ಉಪಸಂಹಾರ

ಈ ರೀತಿಯಲ್ಲಿ ಶಿಕ್ಷಕರು ಇಂದು ಸಮಾಜದಲ್ಲಿ ದೊರೆಯುವ ವಿವಿಧ ವಿಜ್ಞಾನ ತಂತ್ರಜ್ಞಾನ ದ ಉತ್ಪನ್ನಗಳ ಬಳಕೆಯಿಂದ ನಮ್ಮ ಮಕ್ಕಳ ಕಲಿಕೆಯ ಸುಧಾರಿಸಿ ಅವರನ್ನು ಇಪ್ಪತ್ತೊಂದನೇ ಶತಮಾನದಲ್ಲಿ ನಮ್ಮ ಮಕ್ಕಳು ಸ್ಪರ್ಧಾತ್ಮಕ ಮತ್ತು ಸಶಕ್ತ ವಿಶ್ವ ಮಾನವ ನನ್ನ ಮಾಡುವ ಮಹತ್ತರ ಜವಾಬ್ದಾರಿ ಹೊರಬೇಕಾಗಿದೆ .
ಈ ನಿಟ್ಟಿನಲ್ಲಿ ಪ್ರತಿ ಶಿಕ್ಷಕ ತಂತ್ರಜ್ಞಾನದ ಮಹತ್ವ ಅರಿತು ಶಿಕ್ಷಕ ವೃತ್ತಿಯನ್ನು ಮಾಡುವುದು ಇಂದಿನ ಬಹುಮುಖ್ಯ ಅವಶ್ಯಕತೆ ಎಂದರೆ ತಪ್ಪಾಗಲಾರದು.

*ಸಿ.ಜಿ.ವೆಂಕಟೇಶ್ವರ*
*ಸಮಾಜ ವಿಜ್ಞಾನ ಶಿಕ್ಷಕರು*
*ಗೌರಿಬಿದನೂರು*

ಗಜ಼ಲ್ ೧೬(ದೇವರೇ ಎಲ್ಲಿರುವೆ ನೀನು)

*ಗಜ಼ಲ್ ೧೬*

ವಿಧ ವಿಧದಿ ಹುಡುಕುತಿಹರು ಎಲ್ಲಿರುವೆ ನೀನು
ಕಲಿಯಗದ ಜನ ನೋಡಿ ಮೂಕಾವಾಗಿರುವೆ  ನೀನು.

ಮಂದಿರ ಮಸೀದಿ ಬಸದಿಗಳಲಿ ಹುಡಕಿ ಬಳಲಿದರು
ಕಣ್ಣಾಮುಚ್ಚಾಲೆಯಾಡುತ ಸತಾಯಿಸುತಿರುವೆ ನೀನು .

ವೃತ ಪೂಜೆ,ಜಾತ್ರೆ,ದೊಂಬರಾಟ ನಿನ್ನ ಹೆಸರಲಿ
ಅತೃಪ್ತ ಆತ್ಮಗಳು ಕಪಟಿಗಳ ನೋಡಿರುವೆ  ನೀನು .

ಹಾವು ಮುಂಗುಸಿಯಂತೆ ಕಚ್ಚಾಟ ನಿನ್ನ ಪೂಜಿಸಲು
ಅನ್ನಕ್ಕಾಗ ಹಾಹಾಕಾರ ಏಕೆ ಸುಮ್ಮನಿರುವೆ ನೀನು.

ಸೀಜೀವಿಗೂ ನಿನ್ನ ಕಾಣುವ ಉತ್ಕಟ ಬಯಕೆ
ನೀನೇಳಿದಂತೆ ಬಾಳುವೆ ನನಗೆಂದು ಕಾಣಿಸುವೆ ನೀನು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 December 2017

ಗಜ಼ಲ್ ೧೫ (ಮರುಗುತಿದೆ ಮನ)

*ಗಜ಼ಲ್ ೧೫*

ಭೌತಿಕ ಅಭಿವೃದ್ಧಿ  ಕಂಡು ಸಂತಸವಾಗಿದೆ ಮನ
ಮಾಲಿನ್ಯಗೊಂಡ ನೆಲ ಜಲಕೆ ಕೊರಗಿದೆ  ಮನ

ಜೀವಿಗಳ ಕೊಲ್ಲುತಿದೆ ರಾಸಾಯನಿಕ ವಿಷಗಾಳಿ
ಮಣ್ಣಮಲಿನ ಮಾಡುವರ ನೋಡಿ ಮುದುಡಿದೆ ಮನ

ಗಂಗೆಗೆ ವಿಶಪ್ರಾಶನ ಮಾಡಿ ಡೋಂಗಿ ಪೂಜೆ
ಮೂಟೆಗಟ್ಟಲೆ ಕಸ ನೋಡಿ ಮರುಗುತಿದೆ ಮನ

ಕಿವಿಗಡಚಿಕ್ಕುವ ಸದ್ದು ಮೈಕಾಸುರನ ಹಾವಳಿ
ಜೀವಿಗಳ ಚಡಪಡಿಕೆ ಕಂಡು ಸೊರಗುತಿದೆ ಮನ


ಮರಗಿಡಗಳ ಮಾರಣಹೋಮ ಪರಿಸರ ನಾಶ
ಸೀಜೀವಿಯ ಸ್ವಚ್ಛ ಭಾರತಕೆ ಹಾತೊರೆಯುತಿದೆ ಮನ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

18 December 2017

ಹನಿಗವನ (ಹೋಲಿಕೆ)

*ಹನಿಗವನ *

*ಹೋಲಿಕೆ*

ನೋಡು ತಂಗಿ ಆ ಕಡೆಯ ಜನರ
ಬಂದಿಯಾಗಿಹರು ಕೆಡಿಸಿ ಪರಿಸರ
ಪರಿಸರದೊಂದಿಗೆ ಬದುಕು ನಮ್ಮದು
ಮಾಲಿನ್ಯಕಾರಕ  ಜೀವನ ಅವರದು
ನೆಮ್ಮದಿಯ ತೃಪ್ತಿಯ ಬಾಳು ನಮ್ಮದು
ಅತೃಪ್ತ ಸ್ವಾರ್ಥ ಆತ್ಮಗಳು ಅವರದು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೧೪ (ಏಕೆ)

*ಗಜ಼ಲ್ ೧೪*

ಬಾಳದೋಣಿಯ ಪಯಣದ ಮಧ್ಯದಲಿ ಬಿಟ್ಟೆ ಏಕೆ?
ನಡುನೀರಿನಲಿ ಒಬ್ಬನನೆ ತೊರೆದು ಕೈಕೊಟ್ಟೆ    ಏಕೆ ?


ಜಕ್ಕವಕ್ಕಿಯ ಹಾಗೆ ಮಧುರ ಮಿಲನದಿ ಸುಖಿಸಿ
ಮಲ್ಲಿಗೆಯ ಸುಗಂಧ ಸವಿದು ಕನಸುಗಳ ಪೇರಿಸಿಟ್ಟೆ ಏಕೆ ?

ಚಳಿಗಾಲದಲ್ಲಿ ಮೈಬಿಸಿಯ ಶಾಖ ಸೋಕಿಸಿ ಬೆಚ್ಚನೆಯ
ನೆನಪುಗಳ ನೀಡಿ ನನ್ನಲ್ಲಿ ಹುಸಿ ಕನಸುಗಳ ನೆಟ್ಟೆ ಏಕೆ?

ಅಮರ ,ನಿಷ್ಕಲ್ಮಷ,  ನನ್ನ  ವಾಸ್ತವ ಪ್ರೀತಿಯ
ತೊರೆದು ಬಿಸಿಲುಗುದುರೆಯ ಹಿಂದೆ ಓಡಿಬಿಟ್ಟೆ ಏಕೆ?


ಹೂವಿಂದ ಹೂವಿಗೆ ಹಾರದ ದುಂಬಿ ನಾನು
ಮಧುರ ಮನಸಿನ ಸೀಜೀವಿಯ ಬಿಟ್ಟು ಕೆಟ್ಟೆ ಏಕೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನಿರೀಕ್ಷೆ (ಕವನ)


*ನಿರೀಕ್ಷೆ*

ಮುಸ್ಸಂಜೆ ತಂಪಿಗೆ ಹೂಗುಚ್ಚ ಕಳೆಗಟ್ಟಿದೆ
ನನ್ನವಳಿಗರ್ಪಿಸಲು ಮನ ತವಕದಿ ಕಾದಿದೆ
ರವಿಮಾಮ ನಿಲ್ಲು ಅರೆ ಕ್ಷಣ ಚಲಿಸದೇ
ಬೀಳ್ಕೊಡುವೆ ನಿನ್ನ ಅವಳು ಬಂದರೆಕ್ಷಣದೇ ||

ದಿನವೂ ಬರುತಿದ್ದಳು ಸರಿಯಾದ ಸಮಯಕೆ
ಸರಿಯದೀಗ ಸಮಯ ವಿಳಂಬಿಸಿದಳು ಏತಕೆ
ಸವಿದಿದ್ದೆ ಸಿಹಿ ಮುತ್ತು ನಿನ್ನೆ ಇದೇ ತಾಣದಲಿ
ಅದೇ ಕೊನೆಯಾಗುವ ಆತಂಕವೀಗ  ಮನದಲಿ||

ಬಾರೆ ನನ  ಗೆಳತಿ ಹೂ ಬಾಡುವ ಮೊದಲು
ಸೂರ್ಯ ಮುಳುಗಿ ಕತ್ತಲಾಗುವ ಮೊದಲು
ಮಾತಾಡದಿದ್ದರೂ ಬಂದು ಕಣ್ಮುಂದೆ ನಿಲ್ಲು
ನಾ ತಪ್ಪು ಮಾಡಿದ್ದರೆ ನಿನ್ನ  ಕಣ್ಗಳಲೆ  ಕೊಲ್ಲು||

ಮರೆತಿರಬಹುದೆ ನನ್ನನು  ಅವಳು ಇಂದು
ಛೆ ಮರೆಯಲಾಗದ ಸಂಭಂದ ನಮ್ಮದು
ಇಂದೇಕೋ ಕಾರ್ಯನಿಮಿತ್ತ ಬರದಿರಬಹುದು
ನಾಳೆ ತಪ್ಪಿಸಳು ನನ್ನ  ಮನ ಹೇಳುತಿಹುದು||

*ಸಿ. ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 December 2017

ಹನಿಗವನ

*ಥಟ್ ಅಂತ ಹನಿಗವನ*

*ನಗುತಿಹಳು ಶರದಿ*

ಚಂದಮಾಮನ ಕರೆದು ಬಸವಳಿದೆ
ಸಳ್ಳು ಹೇಳಿದ  ನಾಳೆ ಬರುವೆನೆಂದೆ
ಪೋರಿ ನಾನೆಂಬ ತಾತ್ಸಾರ ಅವನಿಗೆ
ಹಿಡಿವೆ ಚಂದಿರನೆಂದು ಹೇಳಿದೆ ಗೆಳತಿಗೆ
ತಿಂಗಳಿನಿಂದ ಕಟ್ಟಿರುವೆ ಇವನ ಹಗ್ಗದಿಂದ
ನಗುತಿಹಳು ಶರಧಿ ನೋಡಿ ಕುತೂಹಲದಿಂದ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಸೂತ್ರಧಾರ (ಭಾವಗೀತೆ.ಕನ್ನಡ ಸಾಹಿತ್ಯ ಬಳಗ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕವನ)



*ಭಾವಗೀತೆ*

*ಸೂತ್ರಧಾರ*


ಜೀವನವೆಂಬುದು ಒಂದು ನಾಟಕ
ಇಲ್ಲೇ ಇರುವುದು  ನರಕ ನಾಕ

ಸೂತ್ರದ ಬೊಂಬೆಗಳು ನಾವು
ಸಾಮಾನ್ಯ ಇಲ್ಲಿ ನಲಿವು ನೋವು
ಮೇಲಿರುವ ಸೂತ್ರದಾರ ಅವನು
ಸದಾ ನಮ್ಮ ಪಾಲಿಸುತಿಹನು

ನ್ಯಾಯ ಸಲ್ಲಿಸಬೇಕು ನಮ್ಮ ಪಾತ್ರಕೆ
ಬದ್ದರಾಗಿರಬೇಕು ಅವನ ಸೂತ್ರಕೆ
ನಾವಂದು ಕೊಂಡಂತೆ  ಏನೂ ಆಗದಿಲ್ಲಿ
ಅವನಾಡಿಸಿದಂತೆ ಆಡುವೆವು ನಾವಿಲ್ಲಿ

ನಾವಿರುವೆವು ಇಲ್ಲಿ ನಾಲ್ಕು ದಿನ
ತೀರಿಸಬೇಕು ಈ ನೆಲದ ಋಣ
ಅವನಾಡಿಸಿದಂತೆ ಆಡಬೇಕು
ಕರೆ ಬಂದಾಗ ಹೋಗುತಿರಬೇಕು

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೧೩ (ಕೊನೆಯೆಲ್ಲಿ)

ಗಜ಼ಲ್ ೧೩ (ಕೊನೆಯೆಲ್ಲಿ)

ಸ್ವಾರ್ಥವಿರದ ಕೇಡಿರದ ನಮ್ಮ ಸ್ನೇಹಕೆ ಕೊನೆಯೆಲ್ಲಿ
ಚಿರಸ್ಥಾಯಿ ಚಿರನೂತನ ನಿರಂತರ ಗೆಳತನಕೆ ಕೊನಯೆಲ್ಲಿ

ಹಗಲಿನಲಿ ಇಳೆಗೆ ದಿನಕರನ ಗೆಣೆತನ ಇರುಳತಮಕೆ
ಧರಣಿಗೆ ತಿಂಗಳ ಬೆಳಕಿನ ಜೊತೆ ಇರುವ ಬಂಧಕೆ ಕೊನೆಯೆಲ್ಲಿ

ಹನಿ ಹನಿಗಳ ಕೂಡಿ ಹಳ್ಳವಾಗುವ ಹಾಗೆ ನದಿಗೆ ಸಾಗರ
ಸೇರುವ ತವಕ ಇವೆಲ್ಲದರ ಮೂಲ ಮುಗಿಲಿನ ಮೂಲಕೆ ಕೊನೆಯೆಲ್ಲಿ


ಹಸುವಿಗೆ ಕರುವಿನ ಮೇಲೆ ಮಮತೆ ತಾಯಿಗೆ ಮಡಿಲ ಕಂದನ
ಮೇಲೆ ಪ್ರೀತಿಯು ಇವರ ಮುಗಿಯದ  ಬಾಂಧವ್ಯಕೆ ಕೊನೆಯೆಲ್ಲಿ

ಜಗದಿ ಇರುವ ಸಕಲಚರಾಚರ ಜೀವಿಗಳ
ಮೇಲೆ ಸೀಜೀವಿಗಿರುವ ಅನುಬಂಧಕೆ ಕೊನೆಯೆಲ್ಲಿ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

16 December 2017

ಹನಿಗವನಗಳು (ಪಂಜರ ಮತ್ತು ಜೀವನ)

ಹನಿಗವನಗಳು

*೧*

*ಇಳಿ*

ನನ್ನವಳು ಹೇಳಿದಳು
 ನನಗೆ ಸ್ವತಂತ್ರ ಇಲ್ಲ
ನಾನು ಪಂಜರದ ಗಿಳಿ
ನಾನಂದೆ ನೀನು ನನ್ನ
ತಲೆಯ ಮೇಲೆ ಕುಳಿತಿರುವೆ
ಮೊದಲು ಇಳಿ

*೨*

ಮದುವೆ

ಜೀವನದಲ್ಲಿ ನಾನು ಪಂಜರದಲಿ
ಸಿಲುಕಿಲ್ಲ ಎನ್ನುವವರು ಇಲ್ಲ
ಏಕೆಂದರೆ ಬಹುತೇಕರಿಗೆ
ಮದುವೆಯಾಗಿದೆಯಲ್ಲ

*೩*
*ಮಾಲೆ*

ಜೀವನದಲಿ ಇದ್ದಿದ್ದೇ
 ಏಳು ಬೀಳಬೀಳುಗಳ
ಸರಮಾಲೆ
ಅದಕ್ಕೆ ಉದಾಹರಣೆ
ಮದುವೆಯ ದಿನ
ನನ್ನವಳಿಗೆ ಹಾಕಿದ
ಮಾಲೆ

*೪*

*ಅನ್ಯೋನ್ಯತೆ*

ದಾಂಪತ್ಯ ಜೀವನ ಸುಗಮವಾಗಿರಲು
ಅನ್ಯೋನ್ಯತೆ ಇರಬೇಕು ಪರಸ್ಪರ
ಇಲ್ಲದಿದ್ದರೆ ತಪ್ಪಿದ್ದಲ್ಲ
ಕರೆದುಕೊಳ್ಳುವುದು ಪರಪರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ಹೊಸ ವರ್ಷದ ನಿರ್ಧಾರಗಳು(ಲೇಖನ)

ಹೊಸ ವರ್ಷದ ನಿರ್ಧಾರಗಳು

೨೦೧೮ ರ ಹೊಸ ವರ್ಷದ ನನ್ನ ನಿರ್ದಾರಗಳು ಈ ಕೆಳಗಿನಂತಿವೆ

೧ ಶಿಕ್ಷಕನಾದ ನಾನು ಈ ವರ್ಷ ಬರುವ ವಿವಿಧ ಹೊಸ ತಂತ್ರಜ್ಞಾನದ ಮೂಲಕ ,ಹಾಗೂ ಹೊಸ ವಿಷಯಗಳ ಕಲಿತು ,ನನ್ನ ಮಕ್ಕಳ ಕಲಿಕೆಯಲ್ಲಿ ಗುಣಾತ್ಮಕ ಕಲಿಕೆ ಉಂಟುಮಾಡಲು ಮತ್ತು ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನ ಮಾಡುವ  ನಿರ್ದಾರ ಕೈಗೊಳ್ಳುವೆ .

೨ ನನ್ನ ಶಾಲೆಯ ಸಹಪಠ್ಯ ಚಟುವಟಿಕೆಗಳಲ್ಲಿ ಎಲ್ಲಾ ಮಕ್ಕಳು ಪಾಲ್ಗೊಳ್ಳಲು ಪ್ರೇರಣೆ ನೀಡಿ ಎಲ್ಲಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಣ ತೊಡುವೆನು

೩ ವೈಯಕ್ತಿಕ ವಾಗಿ ನನ್ನ ಹವ್ಯಾಸಗಳಾದ ಕವನ ,ಹನಿಗವನ, ಲೇಖನ, ಬರೆಯುವ ಮೂಲಕ ಸಾಹಿತ್ಯ ಚಟುವಟಿಕೆಗಳ ಮೂಲಕ ವಿರಾಮ ಕಾಲ ಸದುಪಯೋಗ ಪಡಿಸಿಕೊಂಡು ಕನಿಷ್ಟ ಒಂದು ಕವನ ಸಂಕಲನ ಬಿಡುಗಡೆ ಮಾಡುವ ಗುರಿ ಹೊಂದಿರವೆ .

೪ ಇನ್ನೂ ನನ್ನ ಕುಟುಂಬದ ವಿಷಯಕ್ಕೆ ಬಂದರೆ ನನ್ನ ಹೆಂಡತಿ. ಮಕ್ಕಳು. ಮತ್ತು ಸಂಬಂದಿಕರೊಂದಿಗೆ ಗುಣಮಟ್ಟದ ಹೆಚ್ಚು ಸಮಯ ಕಳೆದು ನನ್ನ ಇರುವಿಕೆ ಮಹತ್ವದ ಬಗ್ಗೆ ಅರಿಯುವೆನು

೫ ಸಮಾಜದಲ್ಲಿ ನಡೆವ ವಿವಿಧ ಕಾರ್ಯಕ್ರಮ ಗಳಲ್ಲಿ ಸಕ್ರೀಯ ವಾಗಿ ಪಾಲ್ಗೊಂಡು ಸಹಬಾಳ್ವೆ, ಸಹಕಾರ,, ಸಹಾಯ ಮುಂತಾದವುಗಳ ಬೆಳವಣಿಗಗೆ ಮತ್ತು ನಮ್ಮ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಪಣ ತೊಡುವೆ .

*ಸಿ.ಜಿ‌ ವೆಂಕಟೇಶ್ವರ*
*ಗೌರಿಬಿದನೂರು*

ಒಂದು‌ ಕೋಟಿ‌ಹಣ ಸಿಕ್ಕರೆ(ಲೇಖನ)

ಒಂದು‌ ಕೋಟಿ‌ಹಣ ಸಿಕ್ಕರೆ*

ನನಗೆ ಒಂದು ಕೋಟಿ ಹಣ ಸಿಕ್ಕರೆ ಸ್ವಲ್ಪ ಹಣದಲ್ಲಿ ಮನೆಯಿಲ್ಲದ ಕೆಲವರು ಈ ಚಳಿಗಾಲದಲ್ಲಿ ರಾತ್ರಿ ಚಳಿಯಿಂದ ನರಳುವವರಿಗೆ ಉಚಿತವಾಗಿ ಬೆಚ್ಚನೆಯ ರಗ್ಗುಗಳ ವಿತರಿಸುವೆ . ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಡಿಮೆ ಬೆಲೆಗೆ ತಾವು ಬೆಳೆದ  ವಸ್ತುಗಳ ಮಾರಾಟ ಮಾಡುವರು ಇದರಿಂದ ಅವರಿಗೆ ನಷ್ಟ ಆಗುತ್ತದೆ, ಅಂತಹ ಕಡೆ "ಆಹಾರ ಸಂರಕ್ಷಣಾ ಘಟಕಗಳ" ಆರಂಭಿಸಿ ಮೌಲ್ಯವರ್ದನೆ ಕಾರ್ಯ ಮಾಡಿ ಬೇರೆಯವರಿಗೆ ಸ್ಪರ್ತಿಯಾಗುವೆನು. ಕೆಲ ಭಾಗ ಹಣವನ್ನು ವಿಶೇಷ ಚೇತನ ರ ಸಬಲೀಕರಣಕ್ಕೆ ಮೀಸಲಿಡುವೆನು  ದೇಶ ಕಾಯುವ ಯೋಧನ ಒಳಿತಿಗೆ ಸ್ವಲ್ಪ ಹಣ ನೀಡುವೆನು .ಉಳಿದ ಹಣವನ್ನು ಸರ್ಕಾರಿ ಶಾಲೆಗಳ ಬಲವರ್ಧನೆ ಮಾಡಲು ಆಧುನಿಕ ರೀತಿಯ ಕಲಿಕೆ ಉತ್ತೇಜಿಸಲು ಸೂಕ್ತ ಸಾಮಗ್ರಿಗಳಾದ ಕಂಪ್ಯೂಟರ್, ಪ್ರೊಜೆಕ್ಟರ್ ಮುಂತಾದ ಪರಿಕರಗಳನ್ನು ಕೊಳ್ಳಲು ಬಳಸಿ ಆ ಶಾಲೆಗಳ ಮೇಲ್ದರ್ಜೆಗೆ ಏರಿಸಲು ಪ್ರಯತ್ನ ಮಾಡುವೆ .ಕನ್ನಡ ಭಾಷೆಯ ಪ್ರೋತ್ಸಾಹ ಮಾಡಲು ಉತ್ತಮ ಕನ್ನಡದ ಸೇವೆ ಮಾಡಿದ ವ್ಯಕ್ತಿಗಳ ಗುರ್ತಿಸಿ ಹಳ್ಳಿ. ಹೋಬಳಿ,ತಾಲ್ಲೂಕು ಮಟ್ಟದಲ್ಲಿ "ನಮ್ಮ ಕನ್ನಡಿಗ " ಪ್ರಶಸ್ತಿ ನೀಡಲು ಯೋಜನೆ ರೂಪಿಸುವೆನು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 December 2017

ಹನಿಗವನಗಳು(ಕಲ್ಪನೆ)

*ಹನಿಗವನಗಳು*

*೧*

*ಪ್ರಶ್ನೆ*

ಅವಳಂದಳು
ಕೈತುಂಬ ಹಣ
ಮೈತುಂಬ ಒಡವೆ
ಹಾಕಿಕೊಂಡ ಕಲ್ಪನೆ
ಸುಂದರವಲ್ಲವೆ ?
ಅವನುತ್ತರಿಸಿದ
ಮಲಗು ಸಾಕು ರಾತ್ರಿ
ಹನ್ನೆರಡಾಗಿಲ್ಲವೆ ?

*೨*

*ಸಾದ್ಯತೆ*

ನನ್ನವಳೆಂದಳು ರೀಹಾಗೇ ಕಲ್ಪಿಸಿಕೊಳ್ಳಿ
ನಾವೊಂದು ಬಂಗಲೆ ಕಟ್ಟಿಸಿದ್ದೇವೆಂದು
ನಾನು ಶಾಂತವಾಗಿ ಉತ್ತರಿಸಿದೆ
ಹೌದು ಹಾಗೆಯೇ ಕಲ್ಪಿಸಿಕೊಳ್ಳೋಣ
ನಮ್ಮ ಮಾವ ಕಟ್ಟಿಸಿಕೊಟ್ಟರೆಂದು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಸಂಬಂಧಗಳಲ್ಲಿ ಮೇಲುಗೈ ಸಾಧಿಸುವ ಚಿಹ್ನೆಗಳು(ಲೇಖನ)

ಸಂಬಂಧಗಳಲ್ಲಿ ಮೇಲುಗೈ ಸಾಧಿಸುವ ಚಿಹ್ನೆಗಳು

ಯಾವುದೇ ಸಂಬಂಧಗಳು ಪರಸ್ಪರ ನಂಬಿಕೆ, ಗೌರವ ,ಪ್ರೀತಿ ಮತ್ತು ವಿಶ್ವಾಸಗಳಿಂದ ಗಟ್ಟಿಯಾಗಿ ಮುಂದುವರೆಯುತ್ತವೆ .ಪ್ರೀತಿಯ ಕೊಡು ಕೊಳ್ಳುವ ಮೂಲಕ ಸಂಬಂಧಗಳು ಗಟ್ಟಿಯಾಗಿ ನಮ್ಮಲ್ಲಿ ನಂಬಿಕೆ ಬೆಳೆದು ಅದು ಮುಂದಿನ ನಮ್ಮ ಜೀವನದ ಭದ್ರ ಬುನಾದಿಯಾಗುತ್ತದೆ .ಆದರೆ ಕೆಲವೊಮ್ಮೆ ನಮ್ಮ ದೇಶದ ಪುರುಷ ಪ್ರಧಾನ ಕುಟುಂಬದ ಮುಂದುವರೆದ ಭಾಗವಾಗಿ ಕೆಲ ಹುಡುಗರು ಹುಡುಗಿಯರ ಅರಿವಿಗೆ ಬಾರದೇ ಅವರ ಮೇಲೆ ಹಿಡಿತ ಸಾಧಿಸಿ ನಿಯಂತ್ರಿಸುವ ಪ್ರಯತ್ನ ಮಾಡುವರು .
ನಿಮ್ಮ ಸಂಬಂಧಗಳಲ್ಲಿ ನಿಮ್ಮ ಗೆಳೆಯ ಈ ಕೆಳಗಿನಂತೆ ವರ್ತಿಸಿದಾಗ ಅವನು ನಿಮ್ಮ ಮೇಲೆ ನಿಯಂತ್ರಣ ಮಾಡುವ ಕಾರ್ಯ ಮಾಡುತ್ತಿದ್ದಾನೆ ಎಂದು ತಿಳಿಯಬಹುದು.

1 ಮೇಲುಗೈ ಸಾಧಿಸಲು ಯತ್ನ

ಕೆಲ ವಿಚಾರದಲ್ಲಿ ಅಭಿಪ್ರಾಯ ತಿಳಿಸಿ ನಿಮ್ಮ ಅಭಿಪ್ರಾಯ ಹೇಳುವ ಮೊದಲೆ ಅವನ ಎತ್ತರದ ದ್ವನಿ ಮತ್ತು ಕಣ್ಣಿನ ತೀಕ್ಷ್ಣ ನೋಟದ ಮೂಲಕ ನೀವು ಅವನು ಹೇಳಿದ ವಿಚಾರಗಳನ್ನು ನಿಮಗಿಷ್ಟವಿಲ್ಲದಿದ್ದರೂ ಒಪ್ಪುವಂತಹ ಪರಿಸ್ಥಿತಿಯನ್ನು ಸೃಷ್ಟಿ ಮಾಡುವನು ಈ ರೀತಿ ಪದೇ ಪದೇ ಆದರೆ ನಿಮ್ಮ ಮೇಲೆ ನಿಮ್ಮ ಹುಡುಗ ನಿಮಗರಿವಿಲ್ಲದೇ ಮೇಲುಗೈ ಸಾಧಿಸಿರುತ್ತಾನೆ .

2,ಅಪರಾಧಿ ಭಾವ ಕಾಡುವಂತೆ ಮಾಡುವುದು

ಕೆಲವೊಮ್ಮೆ ನೀವು ತಪ್ಪು ಮಾಡದಿದ್ದರೂ ಪದೇ ಪದೇ ನೀವು ತಪ್ಪು ಮಾಡಿರುವಿ ರೆಂದು ಬಿಂಬಿಸಿ ನಿಮ್ಮನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ನಿಮಗೆ ನೀವೇ ತಪ್ಪಿತಸ್ಥರೆಂದು ಸಾಬೀತುಪಡಿಸಲು ಕೆಲ ಹುಡುಗರು ಪ್ರಯತ್ನ ಮಾಡುವರು .

3 ನಿಮ್ಮನ್ನು ನೀವೇ ಅನುಮಾನಿಸುವಿಕೆ

ಮೊದಲಿಗೆ ನೀವು ಆತ್ಮವಿಶ್ವಾಸವನ್ನು ಹೊಂದಿದ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವ ಗುಣ ಹೊಂದಿರುವಿರಿ , ಕ್ರಮೇಣ  ನಿಮ್ಮ ಚಿಕ್ಕ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ನೀವು ಅನವಶ್ಯಕವಾಗಿ ನಿಮ್ಮ ಹುಡುಗನ ಮೇಲೆ ಅವಲಂಬಿತವಾದರೆ ಇದು ಸಹ ನಿಮ್ಮ ಮೇಲೆ ನಿಮ್ಮ ಹುಡುಗನ ಮೇಲುಗೈ ಸಾಧಿಸುವ ಲಕ್ಷಣವಾಗಿರಬಹುದು

4 ಅವಕಾಶವಾದಿತನ

ನಿಮಗೆ ನಿಮ್ಮ ಕುಟುಂಬದ, ಮತ್ತು ಸ್ನೇಹಿತರ ಜೊತೆಗೆ ಬಹುಮುಖ್ಯ ಕೆಲಸ ಕಾರ್ಯ ಇದ್ದಾಗ ನಿಮ್ಮ ಹುಡುಗ ನಿಮ್ಮ ಉಪಸ್ಥಿತಿಯನ್ನು ಬಲವಂತ ಪಡಿಸುವದು,ಇದಕ್ಕೆ ತದ್ವಿರುದ್ಧವಾಗಿ ಅವನ ಮನೆಯ ಕೆಲಸ,ಸ್ನೇಹಿತರ ಕಾರ್ಯದಲ್ಲಿ ನಿಮಗೆ ತಿಳಿಸದೇ ಅನವಶ್ಯಕ ಕಾಯಿಸುವುದು ಇವು ಆ ಹುಡುಗ ಮೇಲುಗೈ ಸಾಧಿಸುವ ಸೂಚನೆ.

5 ಬಲಿಪಶು ನಾಟಕ

ಕೆಲ ವಿಷಯಗಳಲ್ಲಿ ಅನವಶ್ಯಕ ವಾಗಿ ಗೊಂದಲ ಉಂಟಾದಾಗ ಎಲ್ಲಾ ಸಮಯದಲ್ಲಿ ಹುಡುಗ ನಾನು ನಿನಗಾಗಿ ಎಲ್ಲಾ ತ್ಯಾಗ ಮಾಡಿದ್ದೇನೆ, ನನ್ನ ಎಲ್ಲಾ ನೋವುಗಳಿಗೆ ನೀನು ಹಾಗೂ ನಿನ್ನ ಪ್ರೀತಿಯೇ ಕಾರಣ ಎಂದು ಪದೇ ಪದೇ ಹೇಳುತ್ತಿದ್ದರೆ ಹಾಗೂ  ಹುಡುಗಿ ಕ್ಷಮೆ ಕೇಳುವಂತೆ ಮಾಡುವ ಮೂಲಕ ನೀವು ಅವರ ನಾಟಕಕ್ಕೆ ಮನ್ನಣೆ ನೀಡಿದರೆ ಹುಡಗನ ಮೇಲುಗೈ ಒಪ್ಪಿಕೊಂಡಂತೆಯೇ ಸರಿ .

 ,6 ಎಮೋಷನಲ್ ಬ್ಲಾಕ್‌ ಮೇಲ್

ಹುಡುಗ ಪದೇ ಪದೇ "ನೀನಿಲ್ಲದಿದ್ದರೆ ನಾನು ಬದುಕುವುದಿಲ್ಲ, ಸಾಯತ್ತೇನೆ" "ನನ್ನ ಕೈ ಕೊಯ್ದು ಕೊಳ್ಳವೆ" ಇತ್ಯಾದಿ ಮಾತುಗಳನ್ನು ಹೇಳುತ್ತಿದ್ದರೆ ಅವನಿಗೆ ನಿನ್ನ ಪ್ರೀತಿಯ ಬದಲಾಗಿ ನಿನ್ನನ್ನು ಭಾವನಾತ್ಮಕವಾಗಿ ಕರುಣೆ ಗಿಟ್ಟಿಸಿ ಎಮೋಷನಲ್ ಬ್ಲಾಕ್‌ ಮೆಲ್ ಮಾಡುವನು ಆಗ ಅವನು ಹೇಳಿದಂತೆ ಕೇಳಲು ನಿಮ್ಮನ್ನು  ಅಣಿಗೊಳಿಸುವನು.


ಈಗೆ ಸಂಬಂಧಗಳು ಪರಸ್ಪರ ನಂಬಿಕೆ. ಮೆಚ್ಚುಗೆ, ಗೌರವ ಹೊಂದಿ ಮುಂದುವರೆಯಬೇಕು ಇಲ್ಲಿ ಯಾರೂ ಮೇಲಲ್ಲ  ಯಾರೂ  ಕೀಳಲ್ಲ ಕೆಲವೊಮ್ಮೆ ಈ ಮೇಲ್ಕಂಡ ಕಾರಣದಿಂದಾಗಿ ಯಾರೇ ಸಂಬಂಧಗಳಲ್ಲಿ ಮೇಲುಗೈ ಸಾಧಿಸಲು ಪ್ರಯತ್ನ ಪಟ್ಟರೆ ಅಂತಹ ಸಂಬಂದದಿಂದ ಹೊರ ಬರುವ ಸ್ವಾತಂತ್ರ್ಯ ನಿಮ್ಮದಾಗಿರಬೇಕು ಏಕೆಂದರೆ ನಿಮ್ಮ ಸುಂದರ ಜೀವನ ನಿಮ್ಮ ಕೈಯಲ್ಲಿದೆ ಅಲ್ಲವೇ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

14 December 2017

ಕಿರುಗಥೆ (ಸಂಬಂಧಗಳು)

ಕಿರುಗಥೆ
,ಸಂಬಂಧಗಳು

ಸಾಹುಕಾರ್ ತಿಮ್ಮಯ್ಯ ವಯೋಸಹಜ ಖಾಯಿಲೆಯಿಂದ ಮರಣಹೊಂದಿದಾಗ ಅವರ ಇಬ್ಬರು ಹೆಂಡತಿಯರು ಮತ್ತು ಮಕ್ಕಳು ಅವರ ಕೋಟಿಗಟ್ಟಲೆ  ಆಸ್ತಿಯ ಹಂಚಿಕೊಳ್ಳಲು ಶವ ಮುಂದಿಟ್ಟುಕೊಂಡು ರಾದ್ದಾಂತ ಮಾಡುತ್ತಿದ್ದ ಕಂಡು ಊರ ಹಿರಿಯ ಜುಂಜಣ್ಣ " ಇದು ಕಿತ್ತಾಡುವ ಸಮಯವೆ ? ಮೊದಲು ಕಾರ್ಯ ಮಾಡಿ ಆಮೇಲೆ ನಿಮ್ಮ ವ್ಯವಹಾರ" ಎಂದು ಗದರಿದಾಗ ಅಂತ್ಯ ಸಂಸ್ಕಾರಕ್ಕೆ ಮುಂದಾದರು.
ಒಂದು ವಾರದ ಬಳಿಕ ರಾಜಿ ಪಂಚಾಯತಿ ಬಳಿಕ ಉಭಯ ಪತ್ನಿ ಮತ್ತು ಮಕ್ಕಳು ಸಂತಸದಿಂದ ತಿಮ್ಮಯ್ಯನವರ ಮರೆತು ಆನಂದದಿಂದ ಮೈಮರೆತಿದ್ದರು. ನಾಲ್ಕು ವರ್ಷದ "ರವಿ ಅಮ್ನ ಈ ನಾಯಿ ಏನೂ ತಿನ್ನುತ್ತಿಲ್ಲ" ಎಂದಾಗ ಅವರ ಗಮನಕ್ಕೆ ಬಂದಿದ್ದು. ವಾರದಿಂದ ಆ ನಾಯಿ ತನ್ನ ಮಾಲಿಕನ ನೆನೆದು ಕಣ್ಣೀರುಡುತ್ತ ಆಹಾರ ನೀರು ಸೇವಿಸದೇ ಒಂದು ಮೂಲೆಯಲ್ಲಿ ಮುದುರಿತ್ತು .

ಹನಿಗವನಗಳು (ದಾರಿ)

*ಹನಿಗವನಗಳು*

*೧*
*ಮನೆ*

ದಿಡೀರ್ ಶ್ರೀಮಂತ ರಾಗಲು
ಹಿಡಿವರು ಅಡ್ಡದಾರಿ ನೂರಾರು
ಕಟ್ಟಿಸುವರು ಮಹಾಮನೆ
ಕೊನೆಗೆ ಇವರ ಕೈ ಬೀಸಿ
ಕರೆವುದು ಸೆರೆಮನೆ !

*೨*

*ಮಾರಿ*

ನನ್ನವಳೆಂದಳು ಕಟ್ಟಿ ಒಂದು
ನಮ್ಮದೇ ಸ್ವಂತ ಮನೆ
ಹಿಡಿಯದೇ ಯಾವುದೇ
ಅಡ್ಡದಾರಿ
ನಾನಂದೇ ಕಟ್ಟುವೆ ಮನೆ
ನಿನ್ನ ಒಡವೆಗಳ
ಮಾರಿ !

*೩*

*ಹಾರ*

ಇವರು ಮಹಾನ್ ವ್ಯಕ್ತಿ!
ಹೋದಲ್ಲೆಲ್ಲಾ ಸನ್ಮಾನ
ಹೂವಿನ ಹಾರ
ಇವರ ಘನಂದಾರಿ ಕೆಲಸಕ್ಕೆ
ಇವರ ಕೈಬೀಸಿ ಕರೆದಿದೆ
ಪರಪ್ಪನ ಅಗ್ರಹಾರ!

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 December 2017

*ದೇವರು ನನ್ನ ಅನಿಸಿಕೆ*(ಲೇಖನ)

*ದೇವರು ನನ್ನ ಅನಿಸಿಕೆ*

ಪ್ರಪಂಚದ ಎಲ್ಲಾ ಕಾರ್ಯಗಳು ಒಂದು ಅಗೋಚರ ಶಕ್ತಿ ಯ ನಿಯಮಕ್ಕೆ ಮತ್ತು ನಿಯಂತ್ರಣ ಕ್ಕೆ ಒಳಪಟ್ಟಿರುವುದು ಸುಳ್ಳಲ್ಲ ಈ ವಿಶೇಷವಾದ ಶಕ್ತಿಯನ್ನು ಕೆಲವರು ಕೆಲವೊಂದು ಹೆಸರಿನಲ್ಲಿ ಕರೆದುಕೊಂಡಿದ್ದರೆ ಬಹುತೇಕರು ಹೇಳುವ ಹೆಸರೆ *ದೇವರು*
ದೇವರನ್ನು ವಿವಿಧ ಧರ್ಮದ ಆಧಾರದ ಮೇಲೆ ವಿವಿಧ ಹೆಸರುಗಳಿಂದ ಕರೆದರೂ ನಮ್ಮ ಅನುಕೂಲಕ್ಕೆ ಸಂಭೋದಿಸಿದರೂ ದೇವನೊಬ್ಬ ನಾಮ ಹಲವು ಎಂಬುದು ಸರ್ವವೇದ್ಯ
"ರಘುಪತಿ ರಾಘವ ರಾಜಾರಾಂ ,ಪತಿತಪಾವನ ಸೀತಾರಾಂ, ಈಶ್ವರ ಅಲ್ಲಾ, ತೇರೆ ನಾಮ್, ಸಬ್ ಕೋ ಸನ್ಮತಿ ದೇ ಭಗವಾನ್" ಎಂದು ಗಾಂಧೀಜಿಯವರು ದೇವರ ವಿವಿದ ನಾಮಾವಳಿ ಬೇರೆ ಇದ್ದರೂ ಪರಮಾತ್ಮ ಒಬ್ಬನೇ ಎಂದು ಪ್ರತಿಪಾದಿಸಿದರು. ದೇವರು ಕೇವಲ ಮಂದಿರ ಮಸೀದಿಗಳಲ್ಲಿ ಇಲ್ಲ ಬದಲಾಗಿ ನಾವು ಮಾಡುವ ಕಾರ್ಯ ದಲ್ಲಿ ದೇವರಿದ್ದಾನೆ "ದಿನಗಟ್ಟಲೆ ಮಂತ್ರ ಹೇಳುವ ,ಜಪತಪ ಮಾಡುವ ಕೋಣೆಯಲ್ಲಿ ದೇವರಿಲ್ಲ, ಬದಲಿಗೆ ಹರಿದ ಬಟ್ಟೆಗಳನ್ನು ಧರಿಸಿ ಹೊಲದಲ್ಲಿ ಹೂಳುವ ರೈತನ ಬಳಿ ,ಮಾಸಿದ ಅಂಗಿ ಧರಿಸಿ ರಸ್ತೆ ಕೆಲಸ ಮಾಡುವವನ ಬಳಿ ದೇವನಿರುವನು" ಎಂದು ನಮ್ಮ ಕವಿ ರವೀಂದ್ರ ನಾಥ್ ಠಾಕೂರ್ ರವರು ಹೇಳಿದಂತೆ ದೇವರನ್ನು ನಮ್ಮ ಕ್ರಮದಲ್ಲಿ ಕಾಣಬೇಕು ಇದನ್ನೇ ಭಗವದ್ಗೀತೆಯ*ಕರ್ಮ ಮಾರ್ಗ* ಎಂದಿರುವುದು .ಭಕ್ತಿಭಂಡಾರಿ ಬಸವಣ್ಣ ನವರು ಇದೇ ಅರ್ಥ ದಲ್ಲಿ‌"ಕಾಯಕವೇ ಕೈಲಾಸ" ಎಂದರು.  ಆಡಂಬರದ ಭಕ್ತಿ ಯನ್ನು ದೇವರು ಒಪ್ಪುವುದಿಲ್ಲ ಸ್ವಾಮಿ ವಿವೇಕಾನಂದರು ಹೇಳುವಂತೆ" ಜನತಾ ಸೇವೆಯೇ ಜನಾರ್ದನ ಸೇವೆ " ನಮ್ಮ ಶುದ್ದಮನಸ್ಸಿನಲ್ಲಿ ದೇವರ ಸ್ಮರಿಸಿ ಬೇಡಿದೊಡೆ ಅವ ನಮ್ಮ ಕೈಬಿಡಲಾರ ಅದಕ್ಕೆ ಉದಾಹರಣೆಗೆ ಬೇಡರ ಕಣಣಯ, ಭಕ್ತ ಸಿರಿಯಾಳ ಇತ್ಯಾದಿ ಉದಾಹರಣೆ ನೀಡಬಹುದು. ಇನ್ನೂ ಕೆಲ ಕವಿ ವಾಣಿ ಹೇಳಿದಂತೆ " ಮನೆಯೇ ಮಂತ್ರಾಲಯ ,ಮನಸೇ ದೇವಾಲಯ, ದೇವರೆಂದು ಪ್ರೇಮ ಸ್ವರೂಪ, " ಎಂಬಂತೆ ದೇವರು ಸದಾ ನಮ ಮೇಲೆ ದಯೆ ತೋರುವನು
ಹಿಂದೆ ಕೆಲ ಯೋಗಿಗಳು ಸಾಧು ಪುರುಷರು ಸಿದ್ದಿಯಿಂದ ದೇವರ ಸ್ಥಾನ ಪಡೆದು ಹರಸಿದ್ದರು ಇದನ್ನು ಬಂಡವಾಳ ಮಾಡಿಕೊಂಡ ಕೆಲ ಡೊಂಗಿ ಬಾಬಾ ಗಳನ್ನು ಜನರು ಕುರುಡರಂತೆ ಹಿಂಬಾಲಿಸುತ್ತಿರುವುದು ವಿಪರ್ಯಾಸ .ದೇವರ ಹೆಸರಲ್ಲಿ ನಮ್ಮ ನಮ್ಮಲ್ಲಿ ಜಗಳ ಆಡುವುದು ಸರಿಯಲ್ಲ . ನಾವೆಲ್ಲರೂ ಒಂದೆ ದೇವರ ಆರಾಧನೆ ಮಾಡಲು ವಿವಿಧ ಮಾರ್ಗ ಅನುಸರಿಸಿದರೂ ಅವನ ಕರುಣೆ ಎಲ್ಲರ ಮೇಲಿರಲಿದೆ
ಇನ್ನು ಮುಂದಾದರು ಪ್ರಬುದ್ಧ ರಾಗೋಣ
ದೇವರ ದಯೆ ಪಡೆಯೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ಆರಾಧನೆ)

*ಹನಿಗವನಗಳು*

*೧*

*ರೋದಿಸುತ್ತಾರೆ*

ನಮ್ಮ ಜನ ಸಿನಿಮಾ ತಾರೆಯರು,
ಪತ್ರಕರ್ತರು, ಆಟಗಾರರ ಕುರುಡಾಗಿ
ಆರಾಧಿಸುತ್ತಾರೆ
ಅವರ ನಿಜ ಬಣ್ಣ ಬಯಲಾಗಿ
ಜೈಲು ಸೇರಿದಾಗ ಸುಮ್ಮನೇ
ರೋದಿಸುತ್ತಾರೆ


*೨*

*ಕಾಳಿಯಾಗುತ್ತಾಳೆ*

ನನ್ನವಳ ಬಂಗಾರ ,ಬೆಳ್ಳಿ.ವಜ್ರದ
ಆಭರಣಗಳಿಂದ ಅಲಂಕರಿಸಿ
ಆರಾಧನೆ ಮಾಡಿದರೆ
ಶ್ರೀದೇವಿಯಾಗುತ್ತಾಳೆ
ಬರೀ ಹೂಗಳು, ಅರಿಷಿಣ ,ಕುಂಕುಮ
ಇವುಗಳಿಂದ ಸರಳವಾಗಿ
ಆರಾಧಿಸಿದರೆ ಭದ್ರ
ಕಾಳಿಯಾಗುತ್ತಾಳೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

12 December 2017

ನನ್ನ ಖುಷಿ (ಶಿಶು ಗೀತೆ)

*ನನ್ನ ಖುಷಿ*

ನೀರು ಬೇಕು ನನಗೆ ಈಗ
ದಾಹ ನೀಗಲು
ಕುಡಿಯಬೇಕು ನಳದ ನೀರು
ಮನವ ತಣಿಯಲು

ಬಾಟಲಿಯ ನೀರು ಮುಚ್ಚಿ
ಚೀಲದಲಿಡುವೆನು
ಅಮ್ಮನ ಕಣ್ಣ ತಪ್ಪಿಸಿ  ನಳದ
ನೀರು ಕುಡಿವೆನು

ಬಿಸಿಯೊ ತಂಪೋ ನೀರ ಬಗ್ಗೆ
ನಾನು ಅರಿಯೆನು
ರಭಸದಿಂದ ಬರುವ ನೀರಿಗೆ
ಬೊಗಸೆ ಒಡ್ಡುವೆನು

ಯಾರು ಏನು ನೋಡುವರೆಂಬ
ಪರಿವೆ ನನಗಿಲ್ಲ
ನನ್ನ ಖುಷಿಯ ಅನುಭವಿಸುವೆ
ಎಂದು ಬಿಡಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (೪ನಲಿವಿನ ಹನಿಗಳು)

*೧*
*ವಜ್ರದುಂಗುರ*


ನಲಿಯುತ ನನ್ನ ಬಳಿ ಬಂದವಳು
ಕೇಳಿದಳು ವಜ್ರದುಂಗುರ
ನಾನು ಕೊಡಿಸದಿದ್ದಾಗ
ಉಲಿದಳು ಆಕೆ   ನಾನೊಬ್ಬ
ಪ್ರೀತಿಯ ಬೆಲೆ ತಿಳಿಯದ ಗಮಾರ

*೨*

*ನಲ್ಲ*

ನೋವು ನಲಿವಿನಲಿ ಜೊತೆಗಿರುವೆ
ಎಂದಿದ್ದ ನನ್ನ ನಲ್ಲ
ಮದುವೆಯಾಗು ಎಂದಾಕ್ಷಣ
ಕಾಣಿಸದೇ ಮರೆಯಾಗಿ
ಕೈ ಕೊಟ್ಟನಲ್ಲ !

*೩*

*ಸುಲಿಯುತಿಹಳು*

ಮದುವೆಗೆ ಮೊದಲು ನನ್ನವಳು
ನುಲಿಯುತ್ತಿದ್ಸಳು
ಮದುವೆಯಾದ ಹೊಸದರಲ್ಲಿ
ನಲಿಯುತ್ತಿದ್ದಳು
ಈಗ ಕೊಳ್ಳುಬಾಕಳಾಗಿ ನನ್ನ ಜೇಬ
ಸುಲಿಯುತಿಹಳು !

*೪*

*ಸಮ್ಮಿಶ್ರ ಸರ್ಕಾರ*

ಕೈಯಲಿ ಕಮಲ  ಹಿಡಿದ ಹುಡುಗ
ನಾನು ಬಿ.ಜೆ ಪಿ ಯವನು ನನ್ನ
ಮದುವೆಯಾಗೆಂದ ಅವಳ ಬಳಿಸಾರಿದ
ಸರಸರ
ನಾನು ಕಾಂಗ್ರೆಸ್ ನವಳು ಆಗುವುದಿಲ್ಲ
ಎಂದು ಅವಳು ತೋರಿದಳು ನಕಾರದ
ಕರ
ಪವಾಡ ಎಂಬಂತೆ ಈಗ ನಡೆಯುತ್ತಿದೆ
ಅವರಿಬ್ಬರ ಸಂಸಾರದ ಸಮ್ಮಿಶ್ರ
ಸರ್ಕಾರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

11 December 2017

ಸಾಧಿಸಿ ತೋರುವೆ (ಹನಿ)

ಕತ್ತಲು ಬೆಳಕಿನ ಜೀವನ ನನದು
ಬೆಳಕು ಕಂಡಿಲ್ಲ  ಮೋಡ ಕವಿದು
ನಿನ್ನೆ ಇದ್ದ ನೌಕರಿ ಇಂದು ಇಲ್ಲ
ಕೈ ಹಿಡಿದ ‌ನಲ್ಲೆಯ ಸುಳಿವಿಲ್ಲ
ಆದರೂ ನಾನು ದೃತಿಗೆಟ್ಟಿಲ್ಲ
ಬರುವುದು ಒಳ್ಳೆ ದಿನ ಸುಳ್ಳಲ್ಲ
ಸಾಧಿಸಿ ತೋರುವೆ ಜಗಕ್ಕೆಲ್ಲಾ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನ

ಹನಿಗವನ

ಬಾಳುವೆ

ಕರದಲ್ಲಿರುವುದು ನನ್ನ ಕೂಸು
ಬೆಳಗಿ ನನ್ನೆದೆಗೆ ಆನಂದ ಸೂಸು
ಮರಳು ಕೊಚ್ಚಿಹೋಗದಿರಲಿ
ಮರುಳು ಮಾಡದಿರಲಿ ಸಲಿಲ
ಕರಗತವಾಗಬೇಕಿದೆ ಬಾಳುವೆ
ನಾನು ನಿನ್ನೊಂದಿಗೆ  ಬಾಳುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ನೋವು)

*ಹನಿಗವನಗಳು*

*೧*

*ನನ್ನವಳು*

ನಮ್ಮ ಜೀವನದಲ್ಲಿ ಸಹಜ
ನಲಿವು ನೋವುಗಳು
ಮೊದಲನೆಯದು ನಾನು
ಎರಡನೆಯದು
ನನ್ನವಳು !

*೨*

*ಹಬ್ಬ*

ಈ ರಾಜಕಾರಣಿಗಳ ಆಟಗಳಿಗೆ
ಜನರು ಅನುಭವಿಸಿದ ನೋವುಗಳು
ಒಂದೇ ಎರಡೆ......ಅಬ್ಬಾ
ಇವರಿಗಿದೆ ಬರುವ ಚುನಾವಣೆಯಲಿ
ಮಾರಿ ಹಬ್ಬ .!

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 December 2017

ಹನಿಗವನಗಳು (ಹೂ)



*ಹನಿಗವನಗಳು*
*೧*
*ಹುಡುಕಾಟ*

ಹೂ ನಗೆ ಬೀರಿ ಕರೆದವಳೆ
ಮುಗುಳ್ನಗೆ ತೋರಿ ನಲಿದವಳೆ
ಈಗೆಲ್ಲಿರುವೆ ?
ಅವಳಂದಳು
ದೊಡ್ಡ ಶ್ರೀಮಂತ ನ
ಹುಡುಕಾಟದಲ್ಲಿರುವೆ

*೨*
*ತೂಕ*

ಮೊದಲು ನನ್ನವಳು
ಮಲ್ಲಿಗೆ ಹೂವಿನ
ತೂಕದವಳು
ಈಗ
ಕ್ವಿಂಟಲ್ ಗಟ್ಟಲೆ
ತೂಗುವವಳು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 December 2017

ನನ್ನ ಕನ್ನಡ ಮೇಷ್ಟ್ರು ( ಲೇಖನ)

ನನ್ನ ಕನ್ನಡ ಮೇಷ್ಟ್ರು

ನನ್ನ ಪ್ರಾಥಮಿಕ ಶಾಲಾ ಶಿಕ್ಷಕರಾದ ಟಿ.ಎನ್ ತಿಪ್ಪೇಸ್ವಾಮಿ ಸರ್ ರವರು ಅಂದು ನಮಗೆ ಕನ್ನಡ ಪದ್ಯಗಳನ್ನು ಪ್ರತಿ  ಶನಿವಾರ  ರಾಗವಾಗಿ "ವಸಂತ     ಬಂದ. ಋತುಗಳ ರಾಜ..." ಕನ್ನಡಕೆ ಹೋರಾಡು ಕನ್ನಡದ ಕಂದ ......." ಈಗೆ  ಹಾಡಿ ನಮಗೂ ಹೇಳಿಕೊಡುವ ರೀತಿ ಹಾಗೂ ನಮಗೆ ಅವರು ಮಾಡುವ ರೀತಿ ಆಸಕ್ತಿ ಕೆರಳಿಸುವ ಬೋಧನ ಕ್ರಮ ನೋಡಿ ಅಂದೆ ನಾನು ಶಿಕ್ಷಕನಾಗಲು ತೀರ್ಮಾನಕ್ಕೆ ಬಂದೆ ಗುರುಗಳ ಆಶೀಉರ್ವಾದದಿಂದ ಇಂದು ನಾನು ಸರ್ಕಾರಿ ಪ್ರೌಢಶಾಲಾ ಶಿಕ್ಷನಾಗಿ ಹದಿನೆಂಟು ವರ್ಷದಿಂದ ಸೇವೆ  ಸಲ್ಲಿಸುತ್ತಿದ್ದೇನೆ .ನಾನು ಕನ್ನಡದಲ್ಲಿ ಪ್ರಬಂಧ, ಪತ್ರಲೇಖನ ದಿನಚರಿ ಬರೆಯಲು ಅಂದು ಪ್ರೇರೇಪಣೆ ನೀಡಿದ್ದರಿಂದ ಇಂದು ಕವನ‌,ಕಥೆ,ಲೇಖನ ಬರೆಯುತ್ತಿದ್ದೇನೆ ಈಗಾಗಲೇ ಒಂದು ಕವನ  ಸಂಕಲನ ಬಿಡುಗಡೆಯಾಯಿತು ಮತ್ತೋಂದರ ಬಿಡುಗಡೆಗೆ ಸಿದ್ದತೆ ಆರಂಭವಾಗಿದೆ . ನಾನು ಈ ಮಟ್ಟಿಗೆ ಬೆಳೆಯಲು ಸಾದ್ಯವಾದ ಹೊಳಲ್ಕೆರೆ ತಾಲ್ಲೂಕಿನ ಚೌಡಗೋಂಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ  ಶಾಲೆ ಹಾಗೂ ಗುರುಗಳಾದ ಟಿ
ಎನ್ ತಿಪ್ಪೇಸ್ವಾಮಿ ಸರ್ ರವರನ್ನು ಹೇಗೆ ಮರೆಯಲಿ?

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

04 December 2017

ಅಕ್ಷರ ರಾಮಾಯಣ (ಸಂಗ್ರಹ ಲೇಖನ)

Great Ramayana composer using
Kannada Akshara

Jai Shri Sita Rama Lakshmana Bharata Shatrugnya Hanuman parivar ki


*ಅಕ್ಷರ ರಾಮಾಯಣ*

*ಅ*ಯೋಧ್ಯೆಯರಸನು ದಶರಥನು
*ಆ*ತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು
*ಇ*ಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ
*ಈ*ಶ್ವರ ಕೃಪೆಯಲಿ ದೊರೆಯಿತು ಪಾಯಸವು
*ಉ*ದಾತ್ತ ದೊರೆಯಿತ್ತನು ಮೂವರು ಸತಿಯರಿಗೆ
*ಊ*ಟವ ಮಾಡಲು ಪಡೆದರು ನಾಲ್ವರನು
*ಋ*ಷಿವರ ವಿಶ್ವಾಮಿತ್ರರು ಕೇಳಿದರು ಕಳಿಸು
*ೠ*ಕ್ಷ ಜನರನು ಶಿಕ್ಷಿಸಲು ರಾಮನನು
*ಎ*ಸುಳೆಗಳೊಂದಿಗೆ ದಂಡಕಾರಣ್ಯಕೆ
*ಏ*ಳಿಗೆ ಋಷಿಜನಕೆಂದು ಜತೆಯಲಿ ಲಕ್ಷ್ಮಣನು
*ಒ*ಮ್ಮೆಲೆ ಖರದೂಷಣರ ಬಡಿದು ಜನಕಪುರಕೆ
*ಓ*ಲಗದಲಿ ರಾಮನು ಶಿವಧನುವ ಮುರಿದು
*ಔ*ತ್ಸುಕತೆಯಲಿ ಸೀತಾಮಾಲೆಗೆ ಕೊರಳೊಡ್ಡಿ
*ಅಂ*ಬಾ ಸೀತಾ ಸ್ವಯಂವರ ಸಂಭ್ರಮವು
*ಅಃ*ಅಃ ಶ್ರೀರಾಮ ಸೀತಾ ವಿವಾಹ ವೈಭವವು

*ಕ*ಟುವರ ಬೇಡಿದಳು ಕೈಕೇಯಿ ದಶರಥನ
*ಖ*ತಿಗೊಳ್ಳದೆ ಸೀತಾಲಕ್ಷ್ಮಣರೊಡನೆ
*ಗ*ಮನ ಕಾನನಕೆ ಉಟ್ಟು ನಾರುಮಡಿ
*ಘ*ಟಸಂಭವನಿತ್ತನು ಹರಿಚಾಪವನು
*ಙ* ಙ ಅನ್ನುತ ಪ್ರಾಣಿಗಳೊಡನಾಡಿದಳು ಸೀತೆ

*ಚ*ಳಿಗಾಳಿ ಉರಿಬಿಸಿಲ ಸಹಿಸುತ ರಾಘವನು
*ಛ*ವಿಗುಂದದೆ ಕಾಡಲಿ ಕಾಲವ ಕಳೆಯುತಲಿರಲು
*ಜ*ಯಜಯ ರಾಘವ ಎನ್ನುತ ಭರತನು ಬಂದು
*ಝ*ಗಮಗಿಸುವ ರಾಮಪಾದುಕೆಗಳ ಪಡೆಯಲು
*ಜ್ಞಾ*ನಿವರೇಣ್ಯ ರಘುಕುಲತಿಲಕ ತಮ್ಮನ ತಬ್ಬಿದನು

*ಟ*ವುಳಿಯಾಡದೆ ರಾಜ್ಯವ ನೀಯುವೆನು
*ಠ*ಕ್ಕೆಯ ಹಾರಿಸುವೆ ಎನೆ ರಾಮನು ಖಂಡಿಸಿದ
*ಡ*ನಿಯುಳಿಯಲು ಪಾದುಕೆಗಳ ಕೈಗೊಂಡು
*ಢ*ಕ್ಕೆಯ ಬಾರಿಸುವನೆ ಭರತನು
*ಣ*ಣ ಣಣ ಶಬ್ದವು ಎಲ್ಲೆಡೆ ಕೇಳಿಸಿತು

*ತ*ರುಣಿಯ ಮಾತನು ಲೆಕ್ಕಿಸಿ ರಾಘವ
*ಥ*ಳಥಳಿಪ ಜಿಂಕೆಯ ಹಿಂದೋಡಿದನು
*ದ*ನಿರಾಮದೆನುತ ಅತ್ತ ತೆರಳಿದ ಲಕ್ಷ್ಮಣನು
*ಧ*ಣಿಗಳಾಶ್ರಮ ಸೇರುವ ಮೊದಲೆ
*ನ*ಲ್ಲೆಯನಪಹರಿಸಿದ ದಶಶಿರ ರಾವಣನು

*ಪ*ತ್ನಿಯ ಕದ್ದ ಲಂಕಾಪತಿ ಕೊಂದು ಸೀತಾ
*ಫ*ಲ ಪಡೆಯಲು ಸುಗ್ರೀವ ಗೆಳೆತನ ರಾಮನಿಗೆ
*ಬ*ಲಿಷ್ಟ ಜಟಾಯುವಿಂದ ಉಪಕೃತ ರಾಘವ
*ಭ*ವಭಾದೆಯ ಕಳೆಯಲು ಹರಸಿದನು
*ಮ*ರ್ಕಟವೀರ ಹನುಮನ ಮೈತ್ರಿಯ ಬೆಳೆಸಿದನು

*ಯ*ಮಪುರಿಗಟ್ಟಿದ ರಾಮನು ವಾಲಿಯನು
*ರ*ಮಣೀಯ ವಾರ್ತೆ ತಂದನು ಮಾರುತಿಯು
*ಲ*ವಣಾಂಬುಧಿಗೈ ತಂದರು ವಾನರರು
*ವ*ತ್ಸಲನಾಶ್ರಯವಿತ್ತು ವಿಭೀಷಣನಿಗೆ
*ಶ*ರಧಿಯ ದಾಟಿ ಯುದ್ದವ ಹೂಡಿದರು
*ಷ*ಡ್ಗುಣ ಸಹಿತನು ರಾವಣನ ಕೊಂದು
*ಸ*ತಿಯೊಡಗೂಡಿ ಅಯೋಧ್ಯೆಗೆ ಹೊರಡಲು
*ಹ*ನುಮನು ಭರತಗೆ ವಿಷಯವ ತಿಳುಹಿದನು
*ಳ*ಕ್ಷ್ಮೀವಲ್ಲಭನು ಚಂದದಿ ರಾಜ್ಯವನಾಳಿದನು
*ಕ್ಷ*ಮಾಪೂರ್ಣ ರಾಮಚಂದ್ರನು ಎಲ್ಲರನ್ನೂ ಕಾಪಾಡಲಿ...

(ಇಷ್ಟು ಸುಂದರವಾದ "ಅಕ್ಷರ ರಾಮಾಯಣ"ವನ್ನು ರಚಿಸಿದ ಕವಿ ಅಜ್ಞಾತ. ಕವಿಗೆ ಗೌರವ ಪೂರ್ವಕ ನಮಸ್ಕಾರಗಳು. ನಿಮಗೆ ಗೊತ್ತಿದ್ದರೆ ತಿಳಿಸಿ. ೧೯೫೮-೫೯ರ ಪತ್ರಿಕೆಯಿಂದ ಸಂಗ್ರಹ.

03 December 2017

ಹನಿಗವನ

 ಹನಿಗವನ

*ಜೋಡಿ*

ನಡೆಯೋಣ ನಾವು ಆಯತಪ್ಪದೇ
ನಗುತಿರೋಣ ಎಂದು ದುಃಖ ಪಡೆದೆ
ಮರಗಿಡಗಳಲಿ ಹಸಿರು ಬಣ್ಣವಿಲ್ಲ
ನಮ್ಮ ಬಾಳಿದೆ  ವಿವಿಧ ಬಣ್ಣಗಳಲಿ
ನಮ್ಮ ಜೋಡಿಗೆ ಸರಿಸಮರಾರಿಲ್ಲ
ನಮ್ಮಯ ಮೋಡಿ ನೋಡಿ ನೀವೆಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*