30 November 2017

ಗಗನಯಾನ (ಲೇಖನ)


*ಗಗನಯಾನ*

ನಾನು ನಾಸಾ ಸಂಸ್ಥೆಯವರು ಏರ್ಪಡಿಸಿದ್ದ "ಮಂಗಳನ ಅಂಗಳಕ್ಕೆ ಮಾನವ" ಎಂಬ ಯೋಜನೆಯ ಜಾಹಿರಾತನ್ನು ಪತ್ರಿಕೆಯಲ್ಲಿ ನೋಡಿ ಅರ್ಜಿ ಹಾಕಿ ಮೂರು ತಿಂಗಳಾಗಿತ್ತು .ಸರ್ ನಿಮಗೊಂದು ಕೊರಿಯರ್ ಇದೆ ಎಂದು ಕೊರಿಯರ್ ಬಾಯ್ ಲೆಟರ್ ಕೈಗಿತ್ತು ಹೋದ .ನಾನು ನಾಸಾ ಸಂಸ್ಥೆಯ ಯೋಜನೆಗೆ ಪ್ರಾಥಮಿಕ ಆಯ್ಕೆ ಪ್ರಕ್ರಿಯೆಗೆ ಅಯ್ಕೆಯಾಗಿ ಬೆಂಗಳೂರಿನಲ್ಲಿ ಇಸ್ರೋ ಕಛೇರಿಗೆ ಬರಲು ತಿಳಿಸಿದ್ದರು .ಅಂದು ಬೆಳಿಗ್ಗೆ ೧೦.೩೦ ಕಚೇರಿ ತಲುಪಿದ ನನಗೆ ಇಂಗ್ಲೀಷ್ ನಲ್ಲಿ ಸಂದರ್ಶನ ಮಾಡಿ ನೀವು ಆರ್ಟ್ಸ್ ಓದಿ ವಿಜ್ಞಾನ ಸಂಬಂದಿಸಿದ ವಿಷಯಗಳ ಮೇಲೆ ಆಸಕ್ತಿಯನ್ನು ಬೆಳೆಸಿಕೊಂಡಿರುವಿರಿ ಹೇಗೆ ಎಂದರು. ನಾನು ಸಮಾಜ ವಿಜ್ಞಾನದ ಶಿಕ್ಷಕ ಎಂದೆ .
ಕಛೇರಿಯ ಹೊರಗೆ ಸಂಜೆ ೫.೩೦ ಕ್ಕೆ ೧೦೦ ಜನ ಸಂದರ್ಶಿತರಲ್ಲಿ ಇಬ್ಬರನ್ನು ಮಾತ್ರ ಯೋಜನೆಗೆ ಆಯ್ಕೆ ಮಾಡುವ ಆಯ್ಕೆ ಪಟ್ಟಿ ಪ್ರಕಟಿಸಲು ಸಿದ್ದತೆ ನಡೆದಿತ್ತು. ಇಸ್ರೋ .ಐ ಐ ಎಸ್ಸಿ ವಿಜ್ಞಾನಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು ಮಾನಸಿಕವಾಗಿ ನಾನು ಆಯ್ಕೆ ಆಗಿಲ್ಲ ಎಂದು ಹೊರಡಲು ಸಿದ್ದನಾದೆ .ಮೈಕಿನಲ್ಲಿ  ಸತೀಶ್ ಧವನ್ ಮತ್ತು ಸಿ.ಜಿ.ವೆಂಕಟೇಶ್ವರ ಎಂದು ಕರೆದಾಗ ನನ್ನ ಕಿವಿ ನಾನೇ ನಂಬದೇ ಇದು ಕನಸೋ ನನಸೋ ಎಂದು ಮೈಮುಟ್ಟಿ ನೋಡಿಕೊಂಡೆ ಎಲ್ಲ ವಿಜ್ಞಾನಿಗಳು ಬಂದು ಅಭಿನಂದಿಸಿದರು .ಆಯ್ಕೆ ಪತ್ರ ನೀಡಿ ಮುಂದಿನ ತಿಂಗಳು ಅಮೆರಿಕದ ನಾಸಾದಲ್ಲಿ ತರಬೇತಿಯನ್ನು ನೀಡಲಾಗುತ್ತದೆ ಅಲ್ಲಿಗೆ ಬರಲು‌ನಿಮಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿಹೊರಟರು.ದೇಶ ಬಿಟ್ಟು ಹೊರಗಡೆ ಕಾಲಿಟ್ಟಿರದ ನಾನು ಅಮೆರಿಕವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದೆ .ಮೊದಲ ವಾರ ಆಕಾಶಯಾನದ ಬಗ್ಗೆ ಮೂಲಭೂತ ವಿವರಣೆ ,ಅಂತರಿಕ್ಷದ ವಾತಾವರಣ, ಅಹಾರ ಮುಂತಾದ ವಿಷಯಗಳ ಬಗ್ಗೆ ಪ್ರಾಯೋಗಿಕ ತರಗತಿಯಲ್ಲಿ ಹೇಳಿಕೊಟ್ಟರು .ನಾಳೆಯಿಂದ ನಿಮ್ಮನ್ನು ರಾಕಟ್ನಲ್ಲಿ ಅಂತರಿಕ್ಷದಲಿ ಹಾರಿಸಿ ತರಬೇತಿ ನೀಡಲಾಗುತ್ತದೆ ಎಂದರು,ಆಗ ಒಂಥರ ಅವ್ಯಕ್ತ ಭಯ ಶುರುವಾಯಿತು. ಆದರೂ ದೈರ್ಯ ತೆಗೆದುಕೊಂಡು ಮಾರನೇದಿನ ಬೆಳಿಗ್ಗೆ ಭಾರತೀಯ ಕಾಲಮಾನ ೬.೩೦ ಕ್ಕೆ ಗಗನಯಾನಿ ದಿರಿಸಿನಲ್ಲಿ ಸಿದ್ದ ನಾಗಿ ರಾಕೆಟ್ ನಲ್ಲಿ ೭ ಜನ ಸಹ ಗಗನಯಾತ್ರಿಗಳ ಜೊತೆ ರಾಕೆಟ್ ಮೇಲೇರಿತು  ನನ್ನ ಮೈ ಜುಂ ಎಂದಿತು ರೋಮಾಂಚನಗೊಂಡು ಕಿರುಚಿದೆನು ."ರೀ ಯಾಕೆ ಕಿರಿಚುತೀರಿ ಇಗೋ ತಗೊಳ್ಳಿ ಕಾಫಿ "ಎಂದು ನನ್ನವಳು ಕಾಫಿ‌ಲೋಟ ಟೇಬಲ್ ಮೇಲಿಟ್ಟು ಅಡಿಗೆ ಮನೆಗೆ ನಡೆದಳು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ಹೂಗಳು) ಹನಿ ಹನಿ ಇಬ್ಬನಿ ವಾಟ್ಸಪ್ ತಂಡದಿಂದ ಬಹುಮಾನ ಪಡೆದ ಹನಿಗವನಗಳು

ಜನನ
ಹನಿಗವನಗಳುಗಮನ

*೧*
*ಕೇಳಬೇಡಿ*

ಉದ್ಯಾನವನದಲ್ಲಿತ್ತು ಬೋರ್ಡ್
ಹೂಗಳನ್ನು ಕೀಳಬೇಡಿ
ನನ್ನವಳು ಕಿತ್ತೇಬಿಟ್ಟಳು
ಮುಡಿಗೇರಿಸಿ ಅಂದಳು
ಏಕೆಂದು ನೀವು
ಕೇಳಬೇಡಿ

*೨*
*ಉದ್ಯಾನವನ*

ನನ್ನವಳು ಮುಡಿದಳು
ನಾನು ಕೊಟ್ಟ ವಿವಿಧ
ಜಾತಿಯ ಹೂಗಳನ
ನೋಡಿದರೆ ಅವಳ
ತುರುಬೇ ಉದ್ಯಾನವನ

*೩*

*ಮಕರಂದ*

ಪ್ರಿಯೆ ನಾ ದುಂಬಿಯಾಗಿ
ಹೀರಲೇ ಮಕರಂದ
ಅವಳೆಂದಳು ಮೊನ್ನೆ
ನಿತ್ಯಾನಂದ ಈಗೇ ಅಂದ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

29 November 2017

ಗಜ಼ಲ್ ೧೧ ಹನಿ ಹನಿ ಇಬ್ಬನಿ ಬಳಗದಿಂದ ಉತ್ತಮ ಗಜ಼ಲ್ ಬಹುಮಾನ ಪಡೆದ ಗಜ಼ಲ್. (ಮಧುರ) ನನ್ನ ಬ್ಲಾಗ್ ನ 150 ಪೋಸ್ಟ್ ಸಂಭ್ರಮ

*ಗಜ಼ಲ್  ೧೧*

ಬಾಲ್ಯದ ಮರೆಯಲಾಗದ  ಅವಿನಾಭಾವ ನೆನಪುಗಳು ಮಧುರ
ಮನದಲಿ ಬಂದು ಆಗಾಗ ಕಾಡುವ ಭಾವನೆಗಳು ಮಧುರ


ಎಮ್ಮೆಯೇರಿ ಯಮಧರ್ಮನಂತೆ ಹೆಮ್ಮೆಯ
ದನಕರು ಮೇಯಿಸಿದ ನೆನಪುಗಳು ಮಧುರ

ಮೇಲೀರಿದರೂ ಚಿಕ್ಕವನಾಗಿರು ಎಂಬ ತತ್ವ
ಸಾರಿದ ಗಾಳಿಪಟ ಹಾರಿಸಿದ ಆಟಗಳು ಮಧುರ

ಅಪ್ಪ ಅಮ್ಮನಾಟ, ನಾಟಕಗಳನ್ನು ಅಭಿನಯಿಸಿ
ಅವ್ಯಕ್ತ ಜವಾಬ್ದಾರಿ ಹೊತ್ತಿದ್ದ ಸಂಬಂಧಗಳು ಮಧುರ

ಕಾಡು ಮೇಡುಗಳಲೆದು ಹೆಜ್ಜೇನು ದಾಳಿಯಿಟ್ಟಾಗ
ಕುಗ್ಗದೆ ಜಗ್ಗದೆ ಪಶುಗಳಿಗೆ ಮೇವು ತಂದ ಕಷ್ಟಗಳು ಮಧುರ

ಸೀಜೀವಿ ತಣಿಸಿದ ಜೀರ್ಜಿಂಬೆ  ಗುಯ್ ಗುಡುವ ನಾದ
ಎಳೆಗರು,ಮಗುವಿನ ಅಳುವಿನ ಸಂಗೀತಗಳು ಮಧುರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

28 November 2017

ಹನಿಗವನಗಳು (ಸರಸ)

ಹನಿಗವನಗಳು
*೧*

*ವಿರಸ*

ನವರಸದಲಿ ಶೃಂಗಾರ
ಹೆಚ್ಚಾದರೆ ಖಂಡಿತ
ಸರಸ
ರೌದ್ರ ಅತಿಯಾದರೆ
ತಪ್ಪಿದ್ದಲ್ಲ
ವಿರಸ

*೨*

*ಬಿರಬಿರನೆ*


ನನ್ನವಳಿಗೆ ನಾನಂದೆ
ಸರಸಕೆ ಬಾರೆ
ಸರಸರನೆ
ಅವಳೆಂದಳು ,ಉಪ್ಪು
ಬೆಲ್ಲ,ಬೇಳೆ ಇಲ್ಲ
ಮೊದಲು ತನ್ನಿ
ಬಿರಬಿರನೆ

*೩*

 *ಮನೋರಮೆ*

ಸರಸ ಸಲ್ಲಾಪಕೆ ಮಾದರಿ
ಮುದ್ದಣ ಮನೋರಮೆ
ನಾವು ಈಗಲೇ
ಸರಸವಾಡೋಣವೇ ಅಂದೆ
ಸಿಡುಕಿನಿಂದ ಅವಳೆಂದಳು
ವತ್ತಾರೆ ಏನೂ ಇಲ್ವ
ನಿಮಗೆ ಕ್ಯಾಮೆ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 November 2017

ಪ್ರೇರಣೆ (ಕವನ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಧಾಟಿಯಲ್ಲಿ)

*೧*

*ಪ್ರೇರಣೆ*

(ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಧಾಟಿಯಲ್ಲಿ)

ಮನವು ಹೇಳುತೈತೆ ಮತ್ತೆ ಹೇಳುತೈತೆ
ನೀನೆ ಧನ್ಯನು ಎಂದು.||೨||

ಹನಿಯನು ಸೇರಿ ಮಾನವನು ತಣಿದು
ಹಿರಿಯರ ಸ್ನೇಹ ಪ್ರೀತಿಯ ಪಡೆದು
ಕಲಿಯುತಲಿರುವೆ ನಲಿಯುವತಲಿರುವೆ
ನಾನು ಧನ್ಯನು|
ಕವನಗಳೆ ಇರಲಿ ಗೀತೆಗಳೆ ಇರಲಿ
ಎಂದೂ ಬರೆವೆನು ನಾನು ಎಂದೂ ಬರೆವನು .|

|ಮನವು ಹೇಳುತೈತೆ|

ಗೀತೆಯ ಹೇಳಿದ ಕೃಷ್ಣನು ಇಲ್ಲಿ ಸಾರಥಿಯಾಗಿಯನು .
ನಮ್ಮ ಸ್ನೇಹಿತನಾಗಿಹನು
ತಂಪನ್ನೀವ ಚಂದಿರನಿಲ್ಲಿ ಬೆಳಕ ನೀಡುವನು
ನಮಗೆ ಬಲವ ನೀಡಿಹನು .
ಎಲ್ಲಾ ಸೇರಿ ಬಳಗ ಕಟ್ಟಿ ಸೇವೆಗೆ ನಿಂತಿಹರು
ತಾನು ಬೆಳೆದು ಇತರರು ಬೆಳೆಯಲು
ಪಣವ ತೊಟ್ಟಿಹರು
ಜೊತೆಗಿರಿ ನೀವು ಹಿರಿಯರ ಹಾಗೆ
ಬೆಳೆವೆವು ನಿಮ್ಮ ನೆರಳಲೆ ಹಾಗೆ ,
ಹನಿಯನು ಸೇರಿದ ನಾನು ಪುನೀತ ,
ಬರೆಯುವೆ ನಗು ನಗುತಾ ||

|ಮನವು ಹೇಳುತೈತೆ|

ತಾವು ಬರೆದು ಇತರರು ಬರೆಯಲು
ಸ್ಪೂರ್ತಿಯ ನೀಡಿಹರು .
ನಮಗೆ ಸ್ಪೂರ್ತಿಯಾಗಿಹರು.
ಚಿಂತಕರಿಂದ ಕೂಡಿರುವಂತಹ ಚಾವಡಿ ಇಲ್ಲಿದೆ
ಚಿಂತನ ಮಂತನ ನಡೆದಿದೆ .
ಒಂದು ಹನಿಯು ಮತ್ತೊಂದು ಹನಿಗೆ
ಪ್ರೇರಣೆ ನೀಡಿಹವು ,
ವಿವಿಧ ಪ್ರಕಾರದ ಸಾಹಿತ್ಯ ಕೃಷಿಯು ನಡೆದಿಹುದಿಲ್ಲಿ ,
ಹನಿಯನು ಅಂದು ಸೇರಿದೆ ನಾನು
ಮನದ ಭಾವನೆ ಹಂಚಿದೆ ಇಲ್ಲಿ
ಕೃಷ್ಣ, ಚಂದಿರ ಇರುವವರಗೆ ಹನಿಯನು ತೊರೆಯೆನು ನಾ
ಹನಿಹನಿಇಬ್ಬನಿ ತೊರೆಯನು ನಾ |

ಕವನಗಳೆ ಇರಲಿ ಗೀತೆಗಳೆ ಇರಲಿ
ಎಂದೂ ಬರೆವೆನು ನಾನು ಎಂದು ಬರೆವೆನು |

|ಮನವು ಹೇಳುತೈತೆ|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 November 2017

ಹನಿಗವನ (ಸಾಲುಮರದ ತಿಮ್ಮಕ್ಕ)

ಚಿತ್ರ ಹನಿಗವನ

*ಪೂಜೆ*

ಮಾಡೋಣ ಪೂಜೆ ಪರಿಸರ ಮಾತೆಗೆ
ತೋರೋಣ ಕಾಳಜಿ ಪ್ರತಿ  ಜೀವಿಗೆ
ಬರೀ ಮಾಡಿದರೆ ಸಾಲದು ಪೂಜೆ
ಆಗೋಣ ಪ್ರಜ್ಞಾವಂತ  ಪ್ರಜೆ
ಇಂದು ನಾವು ಸಸಿ ನೆಡೋಣ
ಮುಂದೆ ನಮ್ಮ ರಕ್ಷಿಸಿಕೊಳ್ಳೋಣ
ಕೇಳಿ ನಾ ಹೇಳುವೆ ನಿಮ್ಮಕ್ಕ
ನಿಮ್ಮ ಸಾಲುಮರದ ತಿಮ್ಮಕ್ಕ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ಹೆಜ್ಜೆ)

ಹನಿಗವನಗಳು
*೧*
*ಗಂಟು*

ನಮ್ಮ ಮದುವೆಯಲ್ಲಿ
ಏಳು ಹೆಜ್ಜೆ ಬೇಡ ನಲ್ಲೆ
ಏಳು ಬೀಳು
ಇರಲಿ ಎಂಟು
ಅವಳೆಂದಳು
ಬೇಡ ನನಗೆ ಎಂಟು
ನನಗೆ ಗೊತ್ತು ಯಾವಾಗಲೂ
ನಿಮ್ಮ ಮುಖ ಗಂಟು

*೨*
*ಗುಂಡು*

ತಿರುಪತಿಯಲ್ಲಿ ಹೆಜ್ಜೆ ಹೆಜ್ಜಗೆ
ಕಂಡಲ್ಲಿ ಗುಂಡು
ನಮ್ಮೂರ ದಾರಿಯಲೂ
ಎಡತಾಗುವನು
ಗುಂಡಿನ ಗಂಡು

*೩*
*ವಿಶ್ರಾಂತಿ*

ನಿಂತಹೆಜ್ಹೆಯಲಿ ನಿಂತಿರುವೆ
ಎಷ್ಟೋ ವರ್ಷಗಳಿಂದ
ಕುಳಿತುಕೊಂಡು ವಿಶ್ರಾಂತಿ
ತೆಗೆದುಕೊ ಗೋವಿಂದ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 November 2017

*ಕಿರು ಕಥೆ* ದಾನಿ (ನೈಜ ಘಟನೆ ಆದಾರಿತ)

*ಕಿರು ಕಥೆ*(ನೈಜ ಘಟನೆ ಆದಾರಿತ)

ರಾಜ್ಯದ ಆಗರ್ಭ ಶ್ರೀಮಂತರಾದ ಹನುಮಂತರಾಜು ಅವರು ದೇವಾಲಯಕ್ಕೆ ಬರುವ ಸುದ್ದಿ ತಿಳಿದು ದೇವಾಲಯದ ಆಡಳಿತ ಮಂಡಳಿಯ ಎಲ್ಲಾ ಪದಾದಿಕಾರಿಗಳು ಸಕಲ ಸಿದ್ದತೆ ಮಾಡಿಕೊಂಡು , ದೇವಾಲಯದ ಮುಂದಿರುವ ಭಿಕ್ಷುಕರು ,ಹಣ್ಣು,ಹೂ ಮಾರುವವರು ,ಎಲ್ಲರನ್ನೂ ಜಾಗ ಖಾಲಿ ಮಾಡಿಸಿ ಅತಿಥಿ ಆಗಮನಕ್ಕೆ ಕಾದರು.
ಪೂಜೆ ಮುಗಿದ ನಂತರ ಆಡಳಿತ ಮಂಡಳಿಯ ಸದಸ್ಯರು ದೇವಾಲಯದ ಜೀರ್ಣೋದ್ದಾರಕ್ಕೆ ಹನುಂತರಾಜು ಅವರಿಗೆ ಬೇಡಿಕೆ ಸಲ್ಲಿಸುತ್ತಾ "ದೇವಾಲಯದ ಗರ್ಭಗುಡಿಯು ಮಳೆ ಬಂದರೆ ಸೋರುತ್ತದೆ ಆದ್ದರಿಂದ ದಯಮಾಡಿ ಒಂದು ಲಕ್ಷ ನೆರವು ನೀಡಿದರೆ ಅನುಕೂಲಕರ ಆಗುವುದು" ಎಂದರು ಈ ಮಾತನ್ನು ಕೇಳಿ "ಆಯಿತು ನೋಡೋಣ "ಎಂದು ಕಾರು ಏರಿ ಹೊರಟೇ ಬಿಟ್ಟರು ಪುಣ್ಯಾತ್ಮರು.
ದೂರದಲ್ಲಿ ಇದನ್ನೆಲ್ಲಾ ಗಮನಿಸುತ್ತಿದ್ದ ಶ್ರೀದೇವಮ್ಮ ಎಂಬ ೮೦ ವರ್ಷದ ವೃದ್ದೆ ಒಂದು ತುಂಬಿದ ಗೋಣಿ ಚೀಲ ತಂದು ಆಡಳಿತ ಮಂಡಳಿಯ ಮುಂದಿಟ್ಟರು. ಇದನ್ನು ನೋಡಿ ಮುಖ ಸಿಂಡರಿಸಿಕೊಂಡ ಅವರು" ಏ ಮುದುಕಿ ಆಚೆ ಹೋಗು "ಎಂದು ಗದರಿದರು .ಆ ಮುದುಕಿ ವಿನಮ್ರತೆಯಿಂದ ಈ ಚೀಲದಲ್ಲಿ ಹಣವಿದೆ ಆಂಜನೇಯಸ್ವಾಮಿ ಗರ್ಭಗುಡಿಯ ರಿಪೇರಿ ಮಾಡಿಸಿ ಎಂದಾಗ ಎಲ್ಲಾ ತಬ್ಬಿಬ್ಬಾಗಿ ಆಶ್ಚರ್ಯಕರವಾಗಿ "ಈ ಭಿಕ್ಷುಕಿಯ ಬಳಿ ಎಷ್ಟು ಮಹಾ ಹಣವಿರಬಹುದು?" ಎಂದು ಮಾತಾಡಿಕೊಂಡು ಎಣಿಸಿದಾಗ ೨ಲಕ್ಷ ಆಗಿತ್ತು ಅದನ್ನು ದೇವಾಲಯಕ್ಕೆ ಸಮರ್ಪಿಸಿ ಧನ್ಯತಾ ಭಾವದಿಂದ ದೇವರ ಪ್ರಸಾದ ಸ್ಚೀಕರಿಸಿ ಹೊರನಡೆದಳು ಅಲ್ಲಿದ್ದವರು ಪ್ರಶ್ನಿಸಿ ಕೊಂಡರು "ಯಾರು ಭಿಕ್ಷುಕರು?" ಇದನ್ನು ನೋಡಿ ದೇವಾಲಯದಲ್ಲಿ ಆಂಜನೇಯಸ್ವಾಮಿ ನಸುನಕ್ಕರು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನ್ಯಾನೋ ಕಥೆ (ಮುಗುಳ್ನಗು)

*ನ್ಯಾನೋ ಕಥೆ*

*ಮುಗುಳ್ನಗು*

ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ಬುದ್ದಿ ಜೀವಿಯೊಬ್ಬರು "ದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆ ಇದೆ ನಾವೆಲ್ಲರೂ ಕಚ್ಚಾಡುತ್ತಿದ್ದೇವೆ...."ಹೀಗೆ ಒಂದು ಗಂಟೆ ಭಾಷಣ ಮಾಡಿದರು. ನಿರೂಪಕಿ "ಈಗ ವೇಷಭೂಷಣ ಸ್ಪರ್ಧೆ ಮೊದಲಿಗೆ ಶ್ರೀ ರಾಮನ ಪಾತ್ರದಲ್ಲಿ ಇಸ್ಮಾಯಿಲ್ ಜಬೀಉಲ್ಲಾ .ಎ.ಪಿ.ಜೆ ಅಬ್ದುಲ್ ಕಲಾಂ ಪಾತ್ರದಲ್ಲಿ ಸುರೇಶ್...."ಕೊನೆಯದಾಗಿ ಬಂದ ಗೌತಮ ಬುದ್ದನ ಪಾತ್ರದಾರಿಯು ಮುಗುಳ್ನಗುತ್ತಿದ್ದನು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

24 November 2017

ನಾವೂ ಸಾಧಿಸಬಹುದು ..!!(ಸಂಗ್ರಹ ಲೇಖನ)

ತಿಳಿದಿರಲಿ.

ಒಂದು ಯುದ್ಧದಿಂದಾಗಿ ತಿಮ್ಮಪ್ಪ ನಾಯಕ ಕನಕದಾಸನಾಗಿ ಬದಲಾದ....

ನಾರದನ ಭೇಟಿಯಿಂದ ಕ್ರೂರನಾಗಿದ್ದ ವ್ಯಕ್ತಿ ವಾಲ್ಮೀಕಿಯಾದ....

ಎಂಟನೆಯ ವಯಸ್ಸಿಗೆ ಉಪನಯನವನ್ನು ತಿರಸ್ಕರಿಸಿ ಬಸವಣ್ಣ ಜಗಜ್ಯೋತಿಯಾದ....

ಸತತ ಪ್ರಯತ್ನ ಪ್ರಾಮಾಣಿಕ ಪರಿಶ್ರಮದಿಂದ ಅಂಬೇಡ್ಕರ್ ಸಂವಿಧಾನ ಶಿಲ್ಪಿಯಾದ....

ತನ್ನ ಅದ್ಬುತ ವಿಚಾರದಾರೆಗಳಿಂದ ಜಗತ್ತನ್ನು ಗೆದ್ದ ನರೇಂದ್ರ ವಿವೇಕನಂದನಾದ....

ತನ್ನ ಮಗನಿಗೆ ಊಟ ಹಾಕಲಾಗದೆ ತನ್ನ ಮಗನನ್ನೇ ವಿಷ ಹಾಕಿ ಕೊಲ್ಲಲು ತಾಯಿ ನಿರ್ಧರಿಸಿದ್ದಳು.
ಅಂದು ಅಚಾನಕ್ ಬದುಕುಳಿದ ವ್ಯಕ್ತಿ ಇಂದು ಕನ್ನಡದ ಸೂಪರ್ ಸ್ಟಾರ್ ಉಪೇಂದ್ರನಾದ....

ತನ್ನ ಬಡತನ ಹಸಿವುಗಳನ್ನು ಮೆಟ್ಟಿ ನಿಂತು ಸತತ ಅಬ್ಯಾಸದಿಂದ ರವಿ ಚನ್ನಣ್ಣನವರ್ ಇಂದು ಐಪಿಎಸ್ ಅಧಿಕಾರಿಯಾದ....

ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗದೆ. ಎಸ್.ಆರ್.ಕಂಠಿಯವರು ಮುಖ್ಯಮಂತ್ರಿಯ ಸ್ಥಾನ ಬಿಟ್ಟು ಕೊಟ್ಟು ರಾಜಕೀಯದ ""ಭರತ"ನಾದ....

ಇಳಿವಯಸ್ಸಿನಲ್ಲಿಯೂ ಸರ್ಕಾರದ ತಪ್ಪು ನಿರ್ದಾರ, ಭ್ರಷ್ಟಾಚಾರದ ವಿರುದ್ಧ ಚಾಟಿ ಬೀಸಿ ಸತ್ಯಾಗ್ರಹ ನಡೆಸಿದ ಅಣ್ಣಾ ಹಜಾರೆ ಆಧುನಿಕ ಗಾಂಧಿಯಾದರು.....

ಬೀದಿ ದೀಪದಲ್ಲಿ ಓದಿದ ವಿಶ್ವೇಶ್ವರಯ್ಯ ಭಾರತ ರತ್ನನಾದ....

ಎಂಟನೇ ತರಗತಿ ಫೇಲ್ ಆದ ಸಚಿನ್ ಇಂದು ಕ್ರಿಕೇಟ್ ಲೋಕದ ದೇವರಾದ....

ಪೆಟ್ರೋಲ್ ಹಾಕುತ್ತಿದ್ದ ಮುಖೇಶ್ ಅಂಬಾನಿ ಇಂದು ಭಾರತದ ನಂಬರ್ ಒನ್ ಶ್ರೀಮಂತನಾದ.....

ಗೋಪಾಲ್ ಕೃಷ್ಣ ರೋಲಂಕಿ ಎಂಬ ಆಂಧ್ರದ ಯುವಕ ಇಂಗ್ಲಿಷ್ ಮತ್ತು
ಹಿಂದಿ ಬರದಿದ್ದರೂ ಐಎಎಸ್ ಪರೀಕ್ಷೆಯಲ್ಲಿ ಮೂರನೇ ರ್ಯಾಂಕ್ ಬಂದ....

ಚಪ್ಪಲಿ ಹೋಲಿಯುತ್ತಿದ್ದ ಕುಟುಂಬದಿಂದ ಬಂದ ಅಬ್ರಹಾಂ ಲಿಂಕನ್ ಸತತ ಸೋಲು ಕಂಡರು ಕೊನೆಗೆ ಅಮೆರಿಕದ ಅಧ್ಯಕ್ಷನಾದ....

ಎನ್. ಅಂಬಿಕಾ ಎಂಬ ಕಾನ್ಸ್ಟೇಬಲ್ ನ ಹೆಂಡತಿ ತನ್ನ ಗಂಡ ಐಪಿಎಸ್ ಅಧಿಕಾರಿಗೆ ಕೊಡುವ ಗೌರವವನ್ನು ಕಂಡು ತಾನು ಹಾಗೆಯೇ ಅಧಿಕಾರಿಯಾಗಬೇಕೆಂದು ಛಲಬಿಡದೆ ಗೆದ್ದ ಮಹಿಳೆ (ಈಕೆಯ ಬದುಕು ತುಂಬಾ ರೋಚಕವಾಗಿದೆ ಮಿಸ್ ಮಾಡದೆ ತಿಳಿದುಕೊಳ್ಳಿ).

ನಮ್ಮ ಜಿಲ್ಲೆಯವನೊಬ್ಬ
ಐಎಎಸ್ ಅಧಿಕಾರಿಯಾದ....
ನಮ್ಮ ತಾಲೂಕಿನವನೊಬ್ಬ
ಕೆ.ಎ.ಎಸ್ ಅಧಿಕಾರಿಯಾದ....
ನಮ್ಮ ಊರಿನವನೊಬ್ಬ
ಪಿ.ಎಸ್.ಐ. ಆದ.
ನಮ್ಮ ಓಣಿಯವನೊಬ್ಬ
ಎಫ್.ಡಿ.ಎ. ಆದ.
ನಮ್ಮ ಮನೆಯ ಪಕ್ಕದವನೊಬ್ಬ
ಎಸ್.ಡಿ.ಎ ಆದ.

ಇದೆಲ್ಲವನ್ನು ನೋಡಿದರೂ ನಾವು ಏನು ಆಗಲಿಲ್ಲ...??!! ಏಕೆಂದರೆ ನಮ್ಮಲ್ಲಿ ಸಾಧಿಸುವ ಛಲವೇ ಸತ್ತು ಹೋಗಿರಬಹುದೇನೋ ಅನ್ನಿಸುತ್ತಿದೆ ಮತ್ತೆ ಇನ್ನು ಮುಂದಾದರು ನಾವು ಓದಬೇಕೆನ್ನಿಸುತ್ತದೆ.

ಕಷ್ಟ ಯಾರಿಗಿಲ್ಲಾ...?
ಅವಮಾನ ಯಾರಿಗಾಗಿಲ್ಲ...??
ಸೊಲನ್ನ ಯಾರು ನೋಡಿಲ್ಲ...??

ಕಷ್ಟಗಳನ್ನ ಮನುಷ್ಯ ಮೌನವಾಗಿ ದಾಟಬೇಕು.
ಪರಿಶ್ರಮ ಸದ್ದಿಲ್ಲದೆ ಸಾಗುತ್ತಿರಬೇಕು.
ಆಗ ಸಿಗುವ ಯಶಸ್ಸಿನ ಫಲ ಜಗತ್ತಿಗೆ ಕೇಳಿಸುವಷ್ಟು ಜೊರಾಗಿರುತ್ತದೆ.
ಜಗತ್ತಿನಲ್ಲಿ ಯಾವುದು ಬೇಕಾದರು ಮೋಸ ಮಾಡಬಹುದು.
ಆದರೆ ಪುಸ್ತಕ ಎಂದಿಗೂ ಮಾಡಲಾರದು.

ಎದೆಗೆ ಬಿದ್ದ ಅಕ್ಷರ..
ಭೂಮಿಗೆ ಬಿದ್ದ ಬಿಜ..ಮುಂದೊಂದು ದಿನ ಫಲ ಕೊಡುವುದು ಎಂಬುವುದುಂಟು.

ಪುಸ್ತಕಗಳನ್ನ ಪ್ರೀತಿಸುವವನಿಗೆ ಸ್ನೇಹಿತರ ಅಗತ್ಯವಿಲ್ಲ.

ಕಠಿಣ ಪರಿಶ್ರಮ,ದೃಢ ಸಂಕಲ್ಪ,ತಾಳ್ಮೆಯೊಂದಿದ್ದರೆ ಏನನ್ನಾದರೂ ಸಾದಿಸಬಹುದು.

ಇಂತಹ ಸಂದೇಶಗಳು ಹಲವರಿಗೆ ಸ್ಫೂರ್ತಿಯಾಗಬಹುದು.
ಕೆಲವರಿಗೆ ಅಸಡ್ಡೆಯಾಗಿ ಕಾಣಬಹುದು..!!
ಆದರೆ..
ಸಾಧನೆ ಮಾಡುವವನಿಗೆ ಸಾಧಿಸುವ ಛಲ ಬೇಕು ಅಷ್ಟೇ.
ಭವಿಷ್ಯದ ಬಗ್ಗೆ ಚಿಂತಿಸದ್ದರೆ ನಿಮಗೆ ಭವಿಷ್ಯವೇ ಇರುವುದಿಲ್ಲ ಎಂದು ಗಾರ್ಲ ವರ್ದಿರವರು ಹೇಳುತ್ತಾರೆ.

*ಸಂಗ್ರಹ: ಸಿ.ಜಿ.ವೆಂಕಟೇಶ್ವರ*
ಕೃಪೆ: ವಾಟ್ಸಪ್

ಸವಾರಿ (ಕವನ)

*ಸವಾರಿ*

ಪ್ರಿಯೆ ಹೋಗೋಣ  ಸವಾರಿ
ನನ್ನ ಹೃದಯದಂಬಾರಿ ಏರಿ
ನನ್ನಂಬಾರಿಯಲಿ ಬಂಗಾರವಿಲ್ಲ
ಬೆಲೆಬಾಳುವ  ಮುತ್ತು ರತ್ನಗಳಿಲ್ಲ


ದುಬಾರಿ ಅಲಂಕಾರಗಳಿಲ್ಲ
ಸವಿಯಾದ  ಪ್ರೀತಿಗೆ ಬರವಿಲ್ಲ
ಆಡಂಬರದ ಅಲಂಕಾರ ಬೇಕಿಲ್ಲ
ಸಡಗರದ ಒಲುಮೆ ಸಾಕಲ್ಲ

ಮೇಲು ಕೀಳುಗಳ ಗೊಡವೆಯಿಲ್ಲ
ತಾಳ ಮೇಳಗಳಿಗೆ ಕೊನೆಯಿಲ್ಲ
ಕಪಟ ಕೇಡುಗಳಿಗೆ ಜಾಗವಿಲ್ಲ
ಹೃದಯದ ಭಾಷೆಗೆ ಮಿತಿಯಿಲ್ಲ

ಸಾಗುತ ಮುಂದೆ ಹೋಗೋಣ
ಪ್ರೀತಿಯ ಸಂದೇಶ ಸಾರೋಣ
ಪ್ರೀತಿಯ ರಾಯಬಾರಿಗಳಾಗೋಣ
ಪ್ರೀತಿಗೆ ಗೆಲುವು ಎನ್ನೋಣ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

23 November 2017

ಹನಿಗವನಗಳು (ಚಲುವೆ)

*ಹನಿಗವನಗಳು*
*೧*

*ವರದಕ್ಷಿಣೆ*

ಮದುವೆ ಆದ ನಂತರ
ನಾನೂ ಪಡೆದಿರುವೆ ವರದಕ್ಷಿಣೆ
ಚೆಲುವಾದ ಹೆಂಡತಿ ಚಿನ್ನ
ಮುದ್ದಾದ ಮುತ್ತಿ ನಂತಹ
ಎರಡು ಮಕ್ಕಳನ್ನ

*೨*

*ನಗಣ್ಯ*

ಅವನಿಗೆ ಮದುವೆಯಾಗಲು
ಹುಡುಗಿಯ ಚೆಲುವು
ನಗಣ್ಯ
ಕಾರಣ ಅವನಿಗೆ
ನಗವೇ ಗಣ್ಯ

*೩*
*ಬಿಲ್ಲು*
ಮದುವೆಯಾಗಲು ಹುಡುಗಿ
ಚೆಲುವೆಯೇ ಆಗಬೇಂದಿಲ್ಲ
ಕಟ್ಟಲು ಸಿದ್ದವಿರಬೇಕು
ಇವನ ಬಾರಿನ ಬಿಲ್ಲು

*೪*
*ಬರೆಯುವೆ*

ನಲ್ಲೆ ನಿನ್ನ ಚೆಲುವು
ಬಣ್ಣಿಸಲಸದಳ
ನಿನ್ನ ಮೇಲೆ ಕವಿತೆ
ಬರೆಯುವೆ
ಮುಚ್ಚು ಬಾಯಿ
ಮೊನ್ನೆ ಗೀತಾಗೂ ಹೀಗೇ
ಹೇಳಿರುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

22 November 2017

ಗಜ಼ಲ್ ೧೦(ನಿನ್ನ ಬಿಡೆನು)

*ಗಜ಼ಲ್೧೦*

ಆ ಬಾನು ಇಳೆಯ ಮೇಲೆ ಬಿದ್ದರೂ ನಿನ್ನ ಬಿಡೆನು
ಈ ಧರೆಯು ಇಲ್ಲೇ  ಬಾಯ್ತೆಗೆದರೂ ನಿನ್ನ ಬಿಡೆನು|

ಕಷ್ಟಗಳು ದಟೈಸಿ ಬಂದರೂ ಸಾಗರ ಬೋರ್ಗರೆದರೂ
ಸಹಸ್ರ ಅಪಾದನೆಗಳು ಬಂದರೂ ನಿನ್ನ ಬಿಡೆನು|

ರಂಭೆ ಊರ್ವಶಿ ಅಪ್ಸರೆಯರ ಚೆಲವು
 ಬೇಕಿಲ್ಲ
ಸಕಲ ಸಂಪತ್ತು ಐಶ್ವರ್ಯದ ಆಮಿಷವೊಡ್ಡಿದರೂ ನಿನ್ನ ಬಿಡೆನು|

ನಿನ್ನಧರದ ಸಿಹಿಜೇನ ಮರೆತಿಲ್ಲ ಸವಿನೆನಪು ಕಳೆದಿಲ್ಲ
ಎದುರಿಗಾವ ಸ್ವರ್ಗತಂದಿರಿಸಿದರೂ ನಿನ್ನ ಬೆಡೆನು|

ಸೀಜೀವಿಯ ಅಂತರಂಗದ ರಾಣಿ ಒಲವಿನ ವಾಣಿ
ಒಲ್ಲೆಯೆಂದು ನೀನನ್ನ ದೂರತಳ್ಳಿದರೂ ನಿನ್ನ ಬಿಡೆನು|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

21 November 2017

*ಕರ್ಮ* ಆದ್ಯಾತ್ಮ ಚಿತ್ರ ಕವನ

*ಕರ್ಮ* ಆದ್ಯಾತ್ಮ ಚಿತ್ರ ಕವನ

ಬೀಸಬೇಕು ನಾವೆಲ್ಲರು ರಾಗಿಯ
ಸೋಸಬೇಕು ಅನ್ಯ  ಕಸಕಡ್ಡಿಯ
ಕಾಯಕವೆ ಕೈಲಾಸ ಪಾಲಿಸಬೇಕು
ಪಾಯಸವು ಜೀವನ ಸವಿಯಬೇಕು

ಬೀಸು ಕಲ್ಲಿನಂತಹ ಜೀವನದಿ
ಬೀಸುತಿರಬೇಕು ನಿರಂತರ
ಈಸೀಸೇ ಧಾನ್ಯ ಹಾಕಬೇಕು
ಇಲ್ಲಿ ಮಿತ ಆಸೆಗಳಿರಬೇಕು

ತಾಳ್ಮೆಯಿಂದ ಏಕಾಗ್ರತೆಯಲಿ ಬೀಸಿದರೆ
ಬರುವುದು ಭಕ್ತಿ ಯೆಂಬ ಹಿಟ್ಟು
ಅದ ನೋಡಿ ನಮಗಾಗುವುದು
ಆತ್ಮಾನಂದ ಸ್ವಯಂ ತೃಪ್ತಿ

ನಮ್ಮ ಕರ್ಮ ನಾವು ಮಾಡಬೇಕು
ಫಲಾಫಲ  ಭಗವಂತಗೆ ಬಿಡಬೇಕು
ನಾಳಿನ ಕೂಳಿಗೆ ಇಂದು ದುಡಿಬೇಕು
ಕೊನೆಗೆ ಪರಮಾತ್ಮನಲಿ ಲೀನವಾಗಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ದೋಣಿ)

*ಹನಿಗವನಗಳು*

*೧*

*ಇಂದೇ*

ಅವಳ ಸೌಂದರ್ಯಕ್ಕೆ ಮರುಳಾಗಿ
ನನ್ನ ಬಾಳ ದೋಣಿಯ ಪಯಣಿಗಳಾಗುವೆಯಾ
ಅಂದೆ
ಅವಳೆಂದಳು ಕರೆದು ಕೊಂಡ ಬರಲೇ
ನನ್ನ ಗಂಡ ಮಕ್ಕಳನ್ನು
ಇಂದೇ ?

*೨*

*ಬೋಣಿ*

ನಾನಂದೆ ಪ್ರಿಯೆ ಬಾ ಹತ್ತು ನನ್ನ
ಜೀವನದ ದೋಣಿ
ಅವಳು ಮಾಡೇ ಬಿಟ್ಟಳು
ನನ್ನ ಕೆನ್ನೆಗೆ ಬೋಣಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

20 November 2017

ಸ್ವಗತ (ಕವನ)ಹನಿ ಹನಿ ಇಬ್ಬನಿ ಬಳಗದಿಂದ ಬಹುಮಾನಿತ ಕವನ



*ಸ್ವಗತ*

ಜೀವನದ ಯಾತ್ರೆಗೆ ನಾನು ಬಂದಿಹೆನಿಲ್ಲಿ
ನಾಲ್ಕು ದಿನದ ಜಾತ್ರೆಗೆ ಬಂದಿರುವೆನಿಲ್ಲಿ|

ಹಲವು ನಿಲ್ದಾಣ ತಲುಪಿ ತಂಗಿರುವೆ
ಕೆಲವು ಅನುಭವ ಅಲ್ಲಿ ಪಡೆದಿರುವೆ
ಪಯಣದಿ ಏರು ಪೇರು ನೋಡಿರುವೆ
ಹಿಗ್ಗದೇ ಕುಗ್ಗದೇ ಮುನ್ನುಗ್ಗುತಿರುವೆ ||

ಜೀವನ ಹಲವಾರು ಪಾಠ ಕಲಿಸಿದೆ
ಇನ್ನೂ ಕೆಲ ಅಧ್ಯಾಯ ಅರ್ಥವಾಗಬೇಕಿದೆ
ಮಿತ್ರರು ಶತೃಗಳಾದ ನೋವಿನ ನೆನಪಿದೆ
ಅಪರಿಚಿತರ ಸಹಾಯ ಪಡೆದ ಧನ್ಯತೆಯಿದೆ||

ಸಂಬಂಧಗಳಲಿ ಮುಖವಾಡ ಕಂಡೆನಿಲ್ಲಿ
ಹಣ ಅಂತಸ್ತಿಗೆ ಹೆಚ್ಚು ಬೆಲೆ ಇಲ್ಲಿ
ಬದಲಾಗಬೇಕೆ ನಾನು ಸಮಯಸಾಧಕರಂತೆ
ಮನಸು ಹೇಳುತಿದೆ ಬಾಳು ನೀ ಸಾಧಕರಂತೆ||

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 November 2017

ಹನಿಗವನಗಳು (ಭಗ್ನಪ್ತೇಮಿ)

ಹನಿಗವನಗಳು

*ಗಮಾರ*

ಮಧುಚಂದ್ರಕೆ ಬಂದೆ
ಮಧು ಹೋರಟುಹೋದಳು
ಬರೀ ಚಂದಿರ
ಅಣಕಿಸುತಿಹನು ಅವನು
ಎಲ್ಲಿ ಹೋಯಿತು ನಿನ್ನ ಪ್ರೀತಿ
ನಾ ಹೇಳಿದೆ
ಅವಳೊಂದು ಕೋತಿ
ಇಂದು ಈ ಮರ
ನಾಳೆ ಆ ಗಮಾರ

*ಕಾಯುತಿಹೆನು*

ನಾನೊಬ್ಬ ಭಗ್ನ ಪ್ರೇಮಿ
ಅವಳು ಕೇಳಿದಳು
ನಿನ್ನ ಕಾಯಕವೇನು
ನಾನು ಹೇಳಿದೆ
ಕವನ ಬರೆಯುವೆನು
ಹೇಳಿ ಹೋದಳು
ಈಗ ಬರುವೆನು
ಇಂದಿಗೂ ಬಂದಿಲ್ಲ
ಹಾಗೆಯೇ ಕಾಯುತಿಹೆನು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜ಼ಲ್ ೯(ಕವಿತೆ)

ಗಜ಼ಲ್ ೯

ಭಾವನೆಗಳ ವ್ಯಕ್ತ ಪಡಿಸಲು  ಬರೆಯುವೆ ಕವಿತೆ
ನನ್ನ ಆತ್ಮ ತೃಪ್ತಿಗಾಗಿ ಸೃಷ್ಟಿ ಮಾಡುವೆ   ಕವಿತೆ

ನವರಸಗಳ ಬಳಕೆಯಿಲ್ಲದಿದ್ದರೂ ರಸವತ್ತಾದ
ಸಮರಸ ತತ್ವ ಸಾರುವ ರಚನೆ ಅದುವೆ ಕವಿತೆ

ಭಾವನೆಗಳ ತಾಕಲಾಟ ಬರೆವ ಪೀಕಾಲಾಟ
ಮುಗಿಸಿ ಮಗು ಪಡೆವಂತೆ ಹಡೆಯುವೆ ಕವಿತೆ

ಪ್ರಾಸ ತ್ರಾಸಗಳ ಅರಿವಿಲ್ಲದ ನೋವು ನಲಿವ ಮರೆಯದ
ಸರಿ ತಪ್ಪುಗಳ ಸಂಘರ್ಷ ಮುಗಿಸಿ ಪಡೆಯುವೆ  ಕವಿತೆ

ಸೀಜೀವಿಯ ಹೃದಯ  ಭಾಷೆಯನು ಸಹೃದಯರಿಗೆ
ತಲುಪಿಸಲು  ಅನವರತ ನಾ ರಚಿಸುವೆ ಕವಿತೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



18 November 2017

ವೈದ್ಯರ ಮುಷ್ಕರ ಕುರಿತ ಹನಿಗವನಗಳು

ವೈದ್ಯರ ಮುಷ್ಕರ ಕುರಿತ ಹನಿಗವನಗಳು
*೧*

*ನಿಂತಿದೆ*

ಅಂತೂ ವೈದ್ಯರ ಮುಷ್ಕರ ನಿಂತಿದೆ
ಅದಕ್ಕೂ ಮದಲೇ ೬೬ ಅಮಯಕ
ಜನರ ಉಸಿರು ನಿಂತಿದೆ

*೨*

*ಹರೊಹರ*

ವೈದ್ಯರು ಮಾಡಿದರು ಮುಷ್ಕರ
ರೋಗಿಗಳ ಪಾಡು
ಹರೋಹರ

*೩*

*ನಡೆ*

ವೈದ್ಯರ ಮುಷ್ಕರ ಎಲ್ಲೆಡೆ
ಸರ್ಕಾರ, ವೈದ್ಯರು ನೀ ಕೊಡೆ, ನಾಬಿಡೆ
ಸರಿಯಲ್ಲ ಈ ನಡೆ
ಎಷ್ಟೋ ರೋಗಿಗಳಿಗೆ ಖಾತ್ರಿಯಾಯಿತು
ತಿಥಿ ವಡೆ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

ಕರ್ತವ್ಯ (ಕಿರುಗಥೆ)

ಕಿರು ಕಥೆ

*ಕರ್ತವ್ಯ*

ರವಿಗೆ ಮೈ ಸುಟ್ಟು ಹೋಗುವ ಜ್ವರ ಬಂದು ಜ್ವರದ ಬಾದೆಗೆ  ಏನೇನೋ ಮಾತನಾಡಿ ಅವನ ತಾಯಿಯನ್ನು ಮತ್ತು ಕುಟುಂಬ ಸದಸ್ಯರು ಗೊಂದಲಕ್ಕೀಡುಮಾಡಿ ಎಲ್ಲರಿಗೂ ಚಿಂತೆಯಾಯಿತು.ತನ್ನ ತಂದೆಯೇ ದೊಡ್ಡ ಖಾಸಗಿ ನರ್ಸಿಂಗ್ ಹೊಂ ಒಡೆಯನಾದರೂ ಇಂದು ಆಸ್ಪತ್ರೆಗೆ ಬೀಗ ಜಡಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ದೂರದ ನಗರದಲ್ಲಿ ಮುಷ್ಕರದಲ್ಲಿ ನಿರತರಾಗಿದ್ದಾರೆ. ಸಾಲದೆಂಬಂತೆ ಬೇರೆ ರೋಗಿಗಳು ತೊಂದರೆ ಕೊಡುವರೆಂದು ಮೊಬೈಲ್ ಸ್ವಿಚ್ ಆಪ್ ಮಾಡಿದ್ದಾರೆ. ಮನೆ ಮಂದಿ ಪ್ರಯತ್ನ ಪಟ್ಟು ಸರ್ಕಾರಿ ಆಸ್ಪತ್ರೆಗೆ ಹೋದರೆ ಕಾಲಿಡಲು ಜಾಗವಿಲ್ಲ .ಕೊನೆಗೆ ರವಿಯ ತಾಯಿ ೫ ರೂಪಾಯಿ ಪಡೆದು ಚಿಕಿತ್ಸೆ ನೀಡುವ ಸುರೇಶ್ ಡಾಕ್ಟರ್ ಹತ್ತಿರ ಮಗನನ್ನು ಕರೆದುಕೊಂಡು ಹೋಗಲು ನಿರ್ಧರಿಸಿದಳು ಅದರೆ ಮನಸು ಹಿಂಜರಿಕೆ ಮಾಡಿತು ಕಾರಣ ೩ ತಿಂಗಳ ಹಿಂದೆ ತನ್ನ ಪತಿ ಈ ಡಾಕ್ಟರ್ ಮೇಲೆ ರೌಡಿಗಳಿಂದ ಹಲ್ಲೆ ಮಾಡಿಸಿ ಪಟ್ಟಣದಿಂದ ಓಡಿಸಲು ಪ್ರಯತ್ನಿಸಿದರೂ ಜಗ್ಗದೇ ಅವರ ೫ ರೂ ವೈದ್ಯ ಸೇವೆ ಮುಂದುವರೆಸಿದ್ದರು  .ಕೊನೆಗೆ ಧೈರ್ಯ ಮಾಡಿ ಸುರೇಶ್ ಡಾಕ್ಟರ್ ಹತ್ತಿರ ಮಗನನ್ನು ಕರೆದುಕೊಂಡು ಹೋದಾಗ ಡಾಕ್ಟರ್ ಹಿಂದಿನದನ್ನು ಮರೆತು ರವಿಗೆ ಚಿಕಿತ್ಸೆ ನೀಡಿದರು.
ರವಿಯ ತಾಯಿಯ ಕಣ್ಣಲ್ಲಿ ನೀರು ಬಂದು ಡಾಕ್ಟರ್ ಗೆ ಧನ್ಯವಾದಗಳನ್ನು ಅರ್ಪಿಸಿ ನೀವು ನನ್ನ ಮಗನ ಪಾಲಿನ ದೇವರೆಂದರು .ಸುರೇಶ್ ಡಾಕ್ಟರ್ ಶಾಂತವಾಗಿ ನನ್ನ *ಕರ್ತವ್ಯ*ನಾನು ಮಾಡಿದ್ದೇನೆ ಎಂದರು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 November 2017

ಕವಿತೆ ನನ್ನ ದೃಷ್ಟಿಯಲ್ಲಿ (ಲೇಖನ)

*ಲೇಖನ*

*ಕವಿತೆ ನನ್ನ ದೃಷ್ಟಿಯಲ್ಲಿ*

 ಕವಿಯೊಬ್ಬನ  ಮನಸ್ಸಿನ ಭಾವನೆಗಳ ಕನ್ನಡಿಯೇ ಕವಿತೆ .ತನ್ನ ಮನದ ಭಾವನೆಗಳನ್ನು ಪದಗಳಲಿ ಅಭಿವ್ಯಕ್ತಿಸಿ ಸಹೃದಯನ ಓದಿಗೆ ನೀಡಿ ಓದಗರು ಅದನ್ನು ಆಸ್ವಾದಿಸಿ ಮೆಚ್ಚುಗೆ ಸೂಚಿಸಿದರೆ ಅದೇ ಕವಿಗೆ ನೊಬೆಲ್ ಪ್ರಶಸ್ತಿ.
ಕವಿತೆಯ ಇತಿಹಾಸ ನೋಡಿದರೆ ನಮ್ಮ ಬಹುತೇಕ ಪೂರ್ವಜರು ಕವಿತೆಗಳ ಬರೆವ ಕವಿಗಳೆ ಆಗಿದ್ದರು ಯಾಕಂದರೆ ನಮ್ಮ ಜಾನಪದರು ಅನಕ್ಷರಸ್ಥರಾದರೂ  ಯಾವ ಕವಿಗಳಿಗೆ  ಕಮ್ಮಿಯಿಲ್ಲದಂತೆ  ತಮ್ಮ ಜನಪದ ಕವನಗಳ ಮೂಲಕ ಗಮನ ಸೆಳೆದು ಇಂದಿಗೂ ಅವರ ಪ್ರತಿಭೆಯನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದೇವೆ.
ಕವಿ ಕವಿತೆ ಬರೆಯಲು ವಿಷಯ ಇದೇ ಅಗಬೆಕೆಂದೇನೂ ಇಲ್ಲ ಮಗುವಿನ ನಗು, ಸೂರ್ಯಕಾಂತಿ, ಚಂದ್ರ, ಪರಿಸರ, ಮಡದಿ,ಮಕ್ಕಳು, ಸಮಾಜ, ಶ್ರೀಮಂತ, ಬಡವ,ಜೀವರಾಶಿ, ನದಿ,ಸಮುದ್ರ,ಒಂದೇ ಎರಡೇ
ಸೂರ್ಯನ ಕೆಳಗಿರುವ ಎಲ್ಲಾ ವಸ್ತುಗಳು , ಅಂತರಿಕ್ಷ ದ ಎಲ್ಲಾ ಕಾಯಗಳು  ಮತ್ತು ಪಾತಾಳವೂ ಸೇರಿ ಕೆಲವು ಕಲ್ಪನೆ ವಸ್ತುಗಳೂ ಆದೀತು .
ನನ್ನ ದೃಷ್ಟಿಯಿಂದ ಕವಿತೆ ಮುಖ್ಯವಾಗಿ ಈ ಕಾರ್ಯ ಮಾಡುತ್ತದೆ ಒಂದು ಕವಿ ತಾನು ಸೃಷ್ಟಿ ಮಾಡಿದ ಕವಿತೆ ನೋಡಿ ಮೊದಲು ಕವಿ ಆನಂದಿಸಿ ನಂತರ ಓದುಗನ ಓದಿಗೆ ಪ್ರತಿಕ್ರಿಯೆಯಾಗಿ ಕಾಯುವನು ಅದು ವಿಮರ್ಶೆ ರೂಪದಲ್ಲಿಯೂ ಇರಬಹುದು.
ಇನ್ನು ಕವಿತೆ ಓದಿದ ಸಹೃದಯ ಎರಡು ರೀತಿಯಲ್ಲಿ ಕವಿತೆಯ ಪ್ರಯೋಜನ ಪಡೆಯಬಹುದು ,ವಿರಾಮಕಾಲದ ಸದುಪಯೋಗ, ಮತ್ತು ಕವಿತೆಯ ಆಶಯದೊಂದಿಗೆ ರಸಸ್ವಾದ ಅನುಭವಿಸಬಹುದು. ಕೆಲವು ಸಮಾಜದ ಓರೆ ಕೋರೆ ತಿದ್ದುವಂತಹ ಕವನಗಳನ್ನು ಓದಿ ಮನಪರಿವರ್ತನೆ ಆಗಿರುವ ಜನರೂ ಇದ್ದಾರೆ ಆ ಮಟ್ಟಿಗೆ ಕವಿತೆ ಸಮಾಜಮುಖಿ, ಇಂತಹ ಕವಿತೆಗಳು ಹೆಚ್ಚು ಬರಲಿ ಎಂಬುದು ನನ್ನ ಆಶಯ .ಹಾಗಂತ ನಾನು ಪರಿಸರ, ರೊಮ್ಯಾಂಟಿಕ್ ಕವನಗಳ ವಿರೋಧಿ ಅಲ್ಲ .ಅವುಗಳ ಓದುಗರು ಯಾವಾಗಲೂ ಹೆಚ್ಚು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ .
ಒಟ್ಟಾರೆ ಹೇಳುವುದಾದರೆ ಕವಿತೆಗಳು ಕವಿಗಳ ಹೃದಯದಿಂದ ಕವಿಮನಗಳಿಗೆ ತಲುಪಿಸುವ ಸಂದೇಶಗಳು ಎಂದರೆ ತಪ್ಪಾಗಲಾರದು. ಕವಿತೆಗಳೆಂದರೆ ಕೇವಲ ಪ್ರಾಸ,ನಿಯಮಗಳನ್ನು ಮಾತ್ರ ಪಾಲಿಸಿದರೆ ಸಾಲದು ಅದರ ಜೊತೆಯಲ್ಲಿ ಭಾವ ಮುಖ್ಯ, ಪರಿಸರ ಮುಖಿ ಸಮಾಜಮುಖಿ ಕವಿತೆಗಳು ಹೆಚ್ಚು ಬರಲಿ ಜೊತೆಗೆ ಕನ್ನಡ ಸಾಹಿತ್ಯ ಬೆಳೆಯಲಿ‌ ಎಂಬುದೇ ನನ್ನ ಆಶಯ .

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

16 November 2017

ಹನಿಗವನಗಳು (ಪ್ರತಿಬಿಂಬ)

ಹನಿಗವನಗಳು
*೧*

*ಪ್ರಶ್ನೆ*

ನಿರ್ದೇಶಕರ ಬಳಿ ಹೇಳಿದೆ ನಟನೆಯಲ್ಲಿ
ನನಗೆ ಆಸೆ ತುಂಬಾ
ಅವರು ಕೇಳಿದರು ಕನ್ನಡಿಯಲಿ ನೋಡಿದೆಯಾ
ನಿನ್ನ ಪ್ರತಿಬಿಂಬ ?

*೨*

*ಪರಿಣಾಮ*

ನನ್ನವಳು ನೋಡುತ್ತಿದ್ದರೆ ನೋಡುತ್ತಲೇ
ಇರಬೇಕು ಅವಳ ಬಿಂಬ
ಅದರ ಪರಿಣಾಮ ನಮಗೀಗ ಇಬ್ಬರು
ಮಕ್ಕಳು ನಮ್ಮ ಪ್ರತಿಬಿಂಬ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 November 2017

ಗಜ಼ಲ್ ೮(ಅರಿಯದಾದೆ)

*ಗಜಲ್೮*

ಒಲವ ಗೆಳತಿಯ ನಿಜ ಒಲವನು ಅರಿಯದಾದೆ |
ಚೆಲುವ ಪ್ರೇಯಸಿಯ ಮನವನು ಅರಿಯದಾದೆ |

ಸಹಾಯ ಬೇಡುವ ನೆಪದಿ ಬಂದು ಸಹವಾಸ ಬಯಸಿ|
ಸಹಚರ್ಯ ಬೇಡಿದ ನಿನ್ನ ಒಲುಮೆಯನು  ಅರಿಯದಾದೆ |


ನನ್ನ ಬಾಳ ಹಸನಾಗಿಸಲು ಬರುವನೆಂದು ಹೇಳಿದ|
ನಿನ್ನ ಕಣ್ಣುಗಳ ಪ್ರೀತಿಯ ಭಾಷೆಯನು ಅರಿಯದಾದೆ |

ಹಸನ್ಮುಖ ತೋರಿ ಆಂತರ್ಯ ತೋರ್ಪಡಿಸುವ|
ಮುಖಾರವಿಂದದ ಉತ್ಕಟ ಬಯಕೆಯನು ಅರಿಯದಾದೆ|

ಆಂಗಿಕ ಭಾಷೆಯ ಮೂಲಕ ಸೀಜೀವಿಯೊಂದಿಗೆ ಸಂಗಮವಾಗಲು|
ಬಯಸಿದ ನಿನ್ನ ಅಂತರಾತ್ಮವನು ಅರಿಯದಾದೆ |

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ಅಲೆಮಾರಿ) ಬಹುಮಾನ ಪಡೆದ ಹನಿಗವನಗಳು

*೧*

*ಚಿನ್ನ*

ನನ್ನ" ಚಿನ್ನ' ಸಿಗುವ ಮುನ್ನ ನಾನು
ಅಲೆಮಾರಿ
ಅವಳು ಸಿಕ್ಕ ಮೇಲೆ ಕೊಡಿಸಲೇಬೇಕು
ಚಿನ್ನ ಮನೆ ಮಠ ಮಾರಿ

*೨*
*ನಿರಂತರ*

ಉದರ ನಿಮಿತ್ತ ಬಹುಕೃತ ವೇಷ 
ಎದುರಿಸಬೇಕು ಹಲ ಸನ್ನಿವೇಶ
ಮುಖದ ಮೇಲೆ ಬಣ್ಣಗಳ ಚಿತ್ತಾರ
ಪ್ರತಿದಿನ ಈ ಬದುಕು ನಿರಂತರ
ಚಾಚಿಹೆನು ನಾಲಿಗೆಯ ಉದ್ದ
ನಾಳೆ ಮತ್ತೊಂದು ವೇಷಕೆ ಸಿದ್ದ



*೩*

*ಮುತ್ತು*

ಅಲೆಮಾರಿಗಳ ಜೀವನವೇ ಉತ್ತಮ
ಇಂದು ಈ ಊರು ನಾಳೆ ಮತ್ತೊಂದು
ನನ್ನದು ಅದೇ ಮನೆ ಅದೇ ಮುತ್ತು
ನನ್ನವಳು ಒಪ್ಪುವುದಿಲ್ಲ ಬೇರೆ
ಊರಗೆಳತಿಯ  ಮುತ್ತೊಂದು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

14 November 2017

ಪ್ರೇಮ ತೋರಣ (ಚಿತ್ರ ಕವನ)



*ಪ್ರೇಮ ತೋರಣ*

ಕುಣಿಯುತ  ನಲಿಯುವ ಬಾರೆ
 ನನ್ನೊಲವಿನ  ಸುಂದರ ನೀರೆ
ಜಗದ ಗೊಡವೆ ಮರೆಯೋಣ
ಇಬ್ಬರೂ ಒಂದಾಗಿ ನಲಿಯೋಣ/

ಮುಂದೆ ಬರದೀ ಶುಭ  ಘಳಿಗೆ
ಮಧುವ  ಸವಿಯೋಣ ಮೆಲ್ಲಗೆ
ಕತ್ತಲಾಗಲಿ ಬೇಗ ಎನ್ನೊಣ
ಬೆಳಕಾಗದಿರಲಿ ಕೆಡಿಸಲು ಮಿಲನ/

ರತಿ ಮನ್ಮಥರಾಗಿ ಸುಖಿಸೋಣ
ಸರಸದಿ ಶೃಂಗಾರ ರಸ ಸುರಿಸೋಣ
ಇಂದೇ ಕೊನೆಯಂತೆ ಬಾಳೋಣ
ಮೈಮನದ ಹಬ್ಬ ಮಾಡೋಣ/

ಮನದಣಿಯೆ ಕಣಿದು ನಲಿಯೋಣ
ಅನ್ಯೋನ್ಯತೆ ಪಾಠವ  ಸಾರೋಣ
ಪ್ರೇಮಿಗಳಿಗೆ ಮಾರ್ಗ ತೋರೋಣ
ಕಟ್ಟೋಣ ನಾವು ಪ್ರೇಮತೋರಣ/

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 November 2017

ನಾನೇಕೆ ಬರೆಯುತ್ತೇನೆ?(ಲೇಖನ)

ನಾನೇಕೆ ಬರೆಯುತ್ತೇನೆ

ಬರವಣಿಗೆಯು ಮಾನವನ ಅಭಿವ್ಯಕ್ತಿಯ ಮಾಧ್ಯಮ ಆಗಿರುವುದರಿಂದ ಹಲವರು ಈ ಮಾಧ್ಯಮದ ಮೂಲಕ ತಮ್ಮ ಅಭಿಪ್ರಾಯಗಳನ್ನು, ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬರವಣಿಗೆ ಸಹಕಾರಿ
ನಾನು ಬರವಣಿಗೆ ಆರಂಭಿಸಲು ಪರೋಕ್ಷವಾಗಿ ನನ್ನ ಪ್ರಾಥಮಿಕ ಶಾಲಾ ಶಿಕ್ಷಕರಾದ ಶ್ರೀಯುತ ಟಿ.ಎನ್ ತಿಪ್ಪೇಸ್ವಾಮಿ ರವರು ಕಾರಣ ನಾನು ನಾಲ್ಕನೇ ತರಗತಿ ಓದುತ್ತಿದ್ದಾಗಲೇ ನನಗೆ ದಿನಕ್ಕೊಂದು ಒಳ್ಳೆಯ ಕೆಲಸ ಮಾಡಿ ಅದನ್ನು ಪ್ರತ್ಯೇಕವಾದ ಪುಸ್ತಕ ಇಟ್ಟು ಬರೆಯಲು ಹೇಳಿದ್ದರು. ಆರಂಭದಲ್ಲಿ ಅವರನ್ನು ಬೈಯ್ದುಕೊಂಡು ಬರೆಯಲು ಆರಂಭ ಮಾಡಿದ ಆ ಕೆಲಸ ಕ್ರಮೇಣ ಇಚ್ಚೆ ಪಟ್ಟು ಒಳ್ಳೆಯ ಕಾರ್ಯ ಮಾಡುವ ಜೊತೆ ದಿನಚರಿಯ ಬರೆಯುವ ಅಭ್ಯಾಸ ಆಯಿತು.
ಮುಂದೆ ನಮ್ಮ ಗುರುಗಳು ನನಗೆ ಪತ್ರ ಬರೆಯಲು ಅವರ ಹಣದಲ್ಲಿ ಪೋಸ್ಟ್ ಕಾರ್ಡ್ ತಂದು ನಮ್ಮ ಸಂಬಂಧಿಗಳಿಗೆ ವಾರಕ್ಕೋಂದಾದರೂ ಪತ್ರ ಬರೆಸುತ್ತಿದ್ದರು ಈಗೆ ನನ್ನ ಮೊದಲ ಬರಹಗಳು ಆರಂಭವಾದರೆ
ಹೈಸ್ಕೂಲ್ ‌ಮತ್ತು ಪಿ.ಯು.ನಲ್ಲಿ ನನ್ನ ಬರಹ ಕಡಿಮೆಯಾಗಿ ಕೇವಲ ಪರೀಕ್ಷೆಗೆ ಸೀಮಿತವಾಗಿತ್ತು. ಪದವಿಯಲ್ಲಿ ವಿವಿಧ ಸಂಸ್ಥೆಯ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ನಂತರ ನನ್ನ ಬರವಣಿಗೆ ಪಯಣ ಮುಂದುವರೆಯಿತು .ಅಂದಿನ ಪ್ರಧಾನ ಮಂತ್ರಿಯಾದ ಮಾನ್ಯ ವಾಜಪೇಯಿ ಸರ್ ಬಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವಾಚಕರ ವಾಣಿಯ ಲ್ಲಿ ಮೊದಲಿಗೆ ನಾನು ಬರೆದ ಬರಹ ಪ್ರಕಟವಾದಾಗ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿ  ಬರೆಯಲು ಮುಂದುವರೆಸಿದೆ ಅದುಇಂದಿಗೂ ನಾಡಿನ ಬಹುತೇಕ ಪತ್ರಿಕೆಯಲ್ಲಿ ಮತ್ತು ನಿಯತಕಾಲಿಕಗಳಲ್ಲಿ  ನನ್ನ ಬರಹಗಳು ಪ್ರಕಟವಾಗುವ ಮೂಲಕ ಮುಂದುವರೆದಿದೆ

*ಅಷ್ಟಕ್ಕೂ ನಾನು ಏಕೆ ಬರೆಯುವೆ*
ನಾನು ಸಮಾಜದಲ್ಲಿ ಕಾಣುವ ಒಳ್ಳೆಯ ಮತ್ತು ಕೆಟ್ಟ ಅಂಶಗಳ ಆಧಾರದ ಮೇಲೆ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಬರವಣಿಗೆಯನ್ನು ಆರಂಬಿಸಿದೆ ಸರ್ಕಾರಿ ನೌಕರಿ ಸಿಗುವ ಮೊದಲು ಸರ್ಕಾರದ ತಪ್ಪು ನಿರ್ಧಾರಗಳನ್ನು ಮತ್ತು ರಾಜಕಾರಣಿಗಳ ಗುಣಾವಗುಣಗಳ ಬಗ್ಗೆ ಬರೆದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾದವು.
ಈಗ ನನ್ನ ಆತ್ಮ ಸಂತೋಷಕ್ಕಾಗಿ ಮತ್ತು ಸಹೃದಯರ ಓದಿಗಾಗಿ ಕವನ,ಹನಿಗವನ,ನ್ಯಾನೋ ಕಥೆ, ಗಜಲ್, ಮುಂತಾದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಬಿಡುವಿದ್ದಾಗ ನನ್ನ ಬರವಣಿಗೆಯನ್ನು ನಿಮ್ಮಂತಹ ಸಹೃದಯರೊಂದಿಗೆ ಹಂಚಿಕೊಂಡು ಸಲಹೆ ವಿಮರ್ಶೆ ಸ್ವೀಕರಿಸಿ ಬರವಣಿಗೆಯನ್ನು ಮುಂದುವರೆಸಿರುವೆನು.
ಒಟ್ಟಿನಲ್ಲಿ ಬರವಣಿಗೆ ನನಗೆ ಒಂದು ಆತ್ಮತೃಪ್ತಿ.ಆನಂದ ನೆಮ್ಮದಿ ನೀಡಿದೆ ಜೊತೆಗೆ ಓದುಗ ಮಿತ್ರರು ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿ ದಾಗ ಆಗುವ ಆನಂದ ವರ್ಣಿಸಲಸದಳ.
ಒಟ್ಟಿನಲ್ಲಿ ಬರವಣಿಗೆ ಈಗ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ ನನ್ನ ನೋಡಿ ನನ್ನ ಮಕ್ಕಳು ಬರೆಯಲು ಆರಂಬಿಸಿರಿವುದು ಮತ್ತೊಂದು ಸಂತೋಷ.
ವಂದನೆಗಳೊಂದಿಗೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 November 2017

ಗಜಲ್ ೭(ಹೇಗೆ ಮರೆಯಲಿ)

*ಗಜ಼ಲ್*

ಬಾಲ್ಯದ  ಲೀಲೆಗಳ ನೆನಪ ಹೇಗೆ ಮರೆಯಲಿ
ಆ ಬಂಗಾರದ ದಿನಗಳ ನೆನಪ  ಹೇಗೆ ಮರೆಯಲಿ

ಲಂಟಾನದ ಗಿಡದ ಅಂಟು ಜೇನ ಕೀಳಲು ಹೋಗಿ
ಎಂಟು ಕಡೆ ಕಚ್ಚಿಸಿಕೊಂಡರೂ ಸವಿಜೇನು ಸವಿದ ನೆನಪ ಹೇಗೆ ಮರೆಯಲಿ

ಸಲಿಲದಲಿ  ಗೆಳಯರೊಡನೆ ಈಜಾಡಿ
ಕದ್ದು  ಮಾವು ತಿಂದಾಗ ಸಿಟ್ಟಾದ  ಗೌಡರ ಪ್ರತಾಪ ಹೇಗೆ ಮರೆಯಲಿ

ಓತಿಕ್ಯಾತ ಹೊಡೆದು ಬಾಯಲಿ ಕಾಸಿಟ್ಟು
ಕಾಸು ಸಿಗುವುದೆಂದು ಹುಡುಕಿಹೊರಟ ಸವಿ ನೆನಪ ಹೇಗ ಮರೆಯಲಿ

ಬಣ್ಣದಲಿ ಕಪ್ಪಿದ್ದರೂ ಕಣ್ಣುಗಳಲೇ ಆಕರ್ಷಿಸಿದ
ಸುಲೋಚನೆಯ ಜೊತೆಯ ಸಲ್ಲಾಪ ಹೇಗೆ ಮರೆಯಲಿ

ಕೆರೆಯಮಣ್ಣಿನಿಂದ ಗಣಪನ ಮಾಡಿ ಪೂಜಿಸಿ
ಸೀಜೀವಿ ಜೊತೆ ಮೆರವಣಿಗೆ ಮಾಡಿದ ಭಕ್ತಿ  ನೆನಪ ಹೇಗೆ ಮರೆಯಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

11 November 2017

ಮಾದರಿ(ನ್ಯಾನೋ ಕಥೆ) ಕಿರು ಚಿತ್ರ ಆಗಲಿರುವ ಕಥೆ

*ನ್ಯಾನೋ ಕಥೆ*

ಸ್ವಚ್ಚಭಾರತ್ ಪ್ರಶಸ್ತಿ ಪುರಸ್ಕೃತ ಗ್ರಾಮ ಪಂಚಾಯತ್ ಅಧ್ಯಕ್ಷರು ,ಕಾರಿನಿಂದಿಳಿದು ಗುಟ್ಕಾ ಜಗಿದು ಪಂಚಾಯಿತಿ ಕಛೇರಿ ಕಾಂಪೌಂಡ್ ಗೋಡೆಗೆ ಉಗಿದು ಮುಂದೆ ಸಾಗಿ ,ಅಂದು ಸ್ವಚ್ಛತೆ ಬಗ್ಗೆ ವಿಶೇಷ ಉಪನ್ಯಾಸ ನೀಡಲು ಬಂದ ಸಂಪತ್ ಕುಮಾರ್ ಕೈ ಕುಲುಕಿದರು. ಸಂಪತ್ ಕುಮಾರ್ ರವರು ತಮ್ಮ ಬ್ಯಾಗ್ ನಲ್ಲಿನ ನೀರಿನ ಬಾಟಲ್ ತೆಗೆದು ಕುಡಿದು ಖಾಲಿ ಬಾಟಲ್ ನ್ನು ಅಲ್ಲೇ ಎಸೆದು ,ಉಪನ್ಯಾಸ ಮಾಡಲು ಹೊರಟರು. ಇದನ್ನು ಗಮನಿಸಿದ ಸುನೀತಾ ಎಂಬ ಆರನೇ ತರಗತಿ ವಿದ್ಯಾರ್ಥಿನಿ ,ಅಲ್ಲಿ ಬಿಸಾಡಿದ್ದ ಖಾಲಿ ಬಾಟಲ್ ತೆಗೆದುಕೊಂಡು. ಅದರಲ್ಲಿ ನೀರು ತಂದು ಅದ್ಯಕ್ಷರು ಉಗುಳಿದ್ದ ಗುಟ್ಕಾ ಕೊಳೆ ತೊಳೆದು ಖಾಲಿ ಬಾಟಲ್ ನ್ನು ಡಸ್ಟ್ ಬಿನ್ ಗೆ ಎಸೆದು ಶಾಲೆಯ ಕಡೆ ಹೆಜ್ಜೆ ಹಾಕಿದಳು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 November 2017

ಕಿರು ಕಥೆ ಜೀವನ ನಾವಂದುಕೊಂಡಂತಲ್ಲ

*ನ್ಯಾನೋ ಕಥೆ*
*ಜೀವನ ನಾವಂದುಕೊಂಡಂತಲ್ಲ*

ಪಟ್ಟಣದ ಜಂಜಡದ ಜೀವನಕ್ಕೆ ಒಗ್ಗಿ ಹೋಗಿದ್ದ ಸುರೇಶ ಹೊತ್ತು ಹೊತ್ತಿಗೆ ತುತ್ತಿನ ಚೀಲ ತುಂಬಿಸಲು ಆಟೋ ಓಡಿಸಿಕೊಂಡು ತನ್ನ ತಂದೆ ತಾಯಿಗಳ ಜೊತೆಗೆ ಜೀವನ ಸಾಗಿಸುತ್ತಿದ್ದನು.ನೀನು ಒಂದು ಮದುವೆ ಮಾಡಿಕೋ ನಮಗೂ ವಯಸ್ಸಾಯಿತು ಮೊಮ್ಮಕ್ಕಳ ನೋಡುವ ಸಆಸೆ ಎಂದು ಅವನ ಅಮ್ಮನ ಬೇಡಿಕೆಗೆ ನಗುತ್ತಲೇ ಕಾಲ ತಳ್ಳುತ್ತಿದ್ದ ಸುರೇಶನಿಗೆ ಒಳಗೊಳಗೇ ತನ್ನ ಅಕ್ಕನ ಮಗಳಾದ ದೀಪಾಳನ್ನು ಮದುವೆಯಾಗಲು ಆಸೆ ಪಟ್ಟಿದ್ದ ಆದರೆ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ.
ತನ್ನ ಅಕ್ಕ ಶಾರದಮ್ಮನನ್ನು ಮೈಸೂರಿನ ಒಂಟಿಕೊಪ್ಪಲ್ ನ  ರವಿಗೆ ಕೊಟ್ಟು ಮದವೆ ಮಾಡಿದ್ದರು ಚೆನ್ನಾಗಿ ದುಡಿಯುತ್ತಿದ್ದ ಭಾವ ದೀಪ ಒಂಬತ್ತನೇ ತರಗತಿಯಲ್ಲಿ ಓದುವಾಗ ಖಾಯಿಲೆಯಿಂದ ಮರಣಹೊಂದಿದರು. ಆ ಸಮಯದಲ್ಲಿ ಗಂಡನಮನೆಯ ಕಿರುಕುಳದಿಂದ ತಾಯಿಯ ಊರಿಗೆ ಬಂದರೂ ಸ್ವಾಭಿಮಾನಿ ಶಾರದಮ್ಮ ಟೈಲರಿಂಗ್ ಮಾಡಿ ಮಗಳನ್ನು ಬೆಂಗಳೂರಿನಲ್ಲಿ ಪದವಿ ಓದಿಸುತ್ತಿದ್ದಾಳೆ.
ಸುರೇಶ್ ನ ಪೋನ್ ರಿಂಗಾದಾಗ ಸುರೇಶ್ ಆಟೋ ರಸ್ತೆ ಬದಿಗೆ ನಿಲ್ಕಿಸಿದ ' ಸುರೇಶ ದೀಪಾ ಬೆಂಗಳೂರಿನಿಂದ ಬರ್ತಾ ಇದಾಳಂತೆ ಬಸ್ಟಾಂಡ್ಗೆ ಹೋಗಿ ಕರ್ಕೊಂಡು ಬಾರೋ' ಎಂದದ್ದೇ ತಡ ಆಯಿತು ಅಕ್ಕ ಎಂದು ಅತಿ ವೇಗವಾಗಿ ಆಟೋ ಬಸ್ಟಾಂಡ್ ಕಡೆಗೆ ಓಡಿಸಿದ .ಇವನಿಗಾಗಿಯೇ ಕಾಯುತ್ತಿದ್ದ ದೀಪಾ ಮುಗುಳ್ನಕ್ಕು ಆಟೋ ಏರಿ ಮನೆ ಸೇರಿದಳು .ಸುರೇಶ ಅಕ್ಕಾ ನಾನು ಬರುತ್ತೇನೆ ಎಂದು ಗೊರಡಲನುವಾದ ಆದರೆ ಶಾರದಮ್ಮ ಅವನನ್ನು ತಡೆದು 'ಟೀ ಕುಡಿದು ಹೋಗು "ಎಂದಳು .ಟೀ ಕುಡಿಯುತ್ತಾ ಮಗಳ ಮದುವೆಯ ಪ್ರಸ್ತಾಪವನ್ನು ಮಾಡಿ ತಮ್ಮನ ಮದುವೆಯಾಗಲು ಹೇಳಿದಾಗ ದೀಪ ಕಡ್ಡಿ ಮುರಿದಂತೆ ನಾನು ಆಟೋ ಒಡಿಸುವವನ ಮದುವೆಯಾಗಲ್ಲ ಎಂದಳು .ಸುರೇಶನ ಆಶಾಸೌಧ ಕುಸಿಯಿತು, ಶಾರದಮ್ಮನ ಕನಸು ಭಗ್ನವಾಯಿತು .
ಎಂಟು ವರ್ಷಗಳ ನಂತರ ಇಬ್ಬರು ದಂಪತಿಗಳು ಇದ್ದ ಕೆಲಸ ಕಳೆದುಕೊಂಡು ಬೆಂಗಳೂರಿನಲ್ಲಿ ಕೆಲಸ ಹುಡುಕಲು ಹೊರಟರೆ ಎಲ್ಲಾ ಕಡೆ ಕೆಲಸ ಖಾಲಿ ಇಲ್ಲ ಎಂಬ ಬೋರ್ಡ್ ನೋಡಿ ಬೇಸತ್ತರು ಕೊನೆಗೆ   ಟ್ರಾನ್ಸ್ ಪೋರ್ಟ್ ಕಂಪನಿಯಲ್ಲಿ ಕೆಲಸ ಕೇಳಿಕೊಂಡು ಬಂದರು ಅವರಿಗೆ ಕೆಲಸ ಖಚಿತವಾದಾಗ ಗೊತ್ತಾಗುತ್ತದೆ ಆ ಕಂಪನಿಯು ಮಾಲಿಕ ಸುರೇಶ ಎಂದು ಕೆಲಸ ಕೇಳಿ ಕೊಂಡು ಬಂದ ದಂಪತಿಗಳು ದೀಪಾ ಮತ್ತು ಅವಳ ಗಂಡ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

09 November 2017

ಹನಿಗವನಗಳು (ನಯನ)

ಹನಿಗವನಗಳು
*೧*
*ಹರೋಹರ*

ನನ್ನವಳು ಖುಷಿಯಾಗಿದ್ದಾಗ ನೋಡಲು
ನಯನಮನೋಹರ
ಸಿಟ್ಟುಬಂದಾಗ ಅವಳ ನೋಡಿದರೆ
ಹರೋಹರ
*೨*
*ಸಾಕ್ಷಿ*

ಅವಳ ಕಣ್ಣು ಮೀನಿನಂತೆ
ಅದಕೆ ಅವಳು
‌ಮೀನಾಕ್ಷಿ
ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದಕ್ಕೆ
ನನಗಿವೆ ಈಗ
ಎರಡು ಮಕ್ಕಳು ಸಾಕ್ಷಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 November 2017

ಕಸಬರಿಕೆ (ಲೇಖನ)

*ಕಸಬರಿಕೆ*
ಕಸಬರಿಕೆ ,ಪೊರಕೆ, ಪರಕೆ,ಪರಿಕೆ ಈಗೆ ನಾನಾ ಹೆಸರಿನಿಂದ ಕರೆಯಲ್ಪಡುವ ಈ ಸಾಧನ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಮನೆಯ ಸ್ವಚ್ಛತೆ ಯನ್ನು ಪೂರಕ ಇಲ್ಲದೆ ವಹಿಸಿಕೊಳ್ಳಲು ಅಸಾಧ್ಯ. ಹಳ್ಳಿಗಳಲ್ಲಿ ವಿವಿಧ ಬಗೆಯ  ವಸ್ತುಗಳಿಂದ ಪೊರಕೆಗಳನ್ನು ಮಾಡಿ ಉಪಯೋಗಿಸುವರು. ಈ ಪೊರೆಕೆಗಳು ನನ್ನನ್ನು ಬಾಲ್ಯದ ನೆನಪುಗಳಿಗೆ ಕೊಂಡೊಯ್ಯುತ್ತವೆ. ನಮ್ಮ ಊರಿನಲ್ಲಿ ವಿವಿಧ ರೀತಿಯ ಪೊರಕೆಯ ಬಳಕೆ ಇತ್ತು .ಮನೆಯ ಒಳಗಡೆ ಕಸ ಗುಡಿಸಲು ಎಳೆಯ ಈಚಲು ಮರದ ಎಲೆಗಳಿಂದ ಮಾಡಿದ ,ಹಾಗೂ ಮೃದುವಾದ ಒಣ  ಹುಲ್ಲಿನಪೊರಕೆ ಬಳಸುತ್ತಿದ್ದೆವು. ಮನೆಯ ಮುಂದಿನ ಅಂಗಳ ಗುಡಿಸಲು ಅಡಿಕೆ ಮರದ ಒಣಗಿದ ಎಲೆಗಳಿಂದ ಮಾಡಿದ ಪೊರಕೆಗಳನ್ನು ಉಪಯೋಗಿಸುತ್ತಿದ್ದೆವು.ಇನ್ನು ಕುರಿ ಹಟ್ಟಿ, ದನದ ಹಕ್ಕೆಗಳನ್ನು ಗುಡಿಸಲು "ಬಂದ್ರೆ"ಎಂಬ ಗಿಡದಿಂದ ತಯಾರಿಸಿದ ,ಹಾಗೂ ತೆಂಗಿನ ಗರಿಗಳಿಂದ ಮಾಡಿದ ಪೊರಕೆಗಳನ್ನು ಬಳಸುತ್ತಿದ್ದೆವು ಈ ಪೊರಕೆ ಗಳನ್ನು ಸ್ಥಳೀಯ ಸಸ್ಯ ಬಳಸಿ ಪರಿಸರಸ್ನೇಹಿ ಆಗಿ ಬಳಸುತ್ತಿದ್ದೆವು ಈಗ ಬದಲಾದ ಕಾಲದಲ್ಲಿ ಪ್ಲಾಸ್ಟಿಕ್, ಮುಂತಾದ ಪರಿಸರಕ್ಕೆ ಮಾರಕವಾದ ವಸ್ತುಗಳು ಹೆಚ್ಚಾಗಿ ಬಳಸುವದು ಹೆಚ್ಚಾಗಿದೆ. ನಾವೆಲ್ಲರೂ ಜಾಗೃತರಾಗಿ ಇನ್ನೂ ಮುಂದಾದರೂ ಪರಿಸರ ಪೂರಕ ಪೊರಕೆ ಬಳಸೋಣ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನೋಟ್ ಬ್ಯಾನ್ ಗೆ ವರ್ಷ...(ಲೇಖನ)

ನೋಟ್ ಬ್ಯಾನ್ ಒಂದು ಐತಿಹಾಸಿಕ ನಿರ್ಧಾರ ಇಂತಹ ದಿಟ್ಟ ನಿರ್ಧಾರವನ್ನು ಮುಂದಿನ ನೂರು ವರ್ಷಗಳ ಅಂತರದಲ್ಲಿ ಯಾವ ನಾಯಕನು ತೆಗೆದುಕೊಳ್ಳುವುದು ಅನುಮಾನ .
ನೋಟ್ ಬ್ಯಾನ್ ನಿಂದ ದೇಶದ ಅರ್ಥಿಕ ಪರಿಸ್ಥಿತಿ ತೊಂದರೆಗಳನ್ನು ಅನುಭವಿಸಿದೆ ಎಂದು ಬೊಬ್ಬೆ ಹೊಡೆಯುವವರು ಕೇವಲ ರಾಜಕೀಯ ಪ್ರೇರಿತ ಹೇಳಿಕೆ ಎಂಬುವುದು ಎಲ್ಲರಿಗೂ ತಿಳಿದ ವಿಷಯ .
ಈ ದಿಟ್ಟ ನಿರ್ಧಾರವನ್ನು ವಿಶ್ವಬ್ಯಾಂಕ್. ಐ.ಎಮ್ ಎಪ್ ನಂತಹ ಅಂತರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ಮುಕ್ತವಾಗಿ ಹೊಗಳಿದ್ದಾರೆ.
ಮತ್ತು ವಿಶ್ವದ ಹೂಡಿಕೆ ಸ್ನೇಹಿ ದೇಶಗಳ ಸೂಚ್ಯಾಂಕದಲ್ಲಿ ಭಾರತ ಕೇವಲ ಒಂದೇ ವರ್ಷದ ಅಂತರದಲ್ಲಿ 130 ನೇ ಸ್ಥಾನದಿಂದ100 ಸ್ಥಾನಕ್ಯ ಜಿಗಿದಿರುವುದು ನೋಟ್ ಬ್ಯಾನ್ ವಿರೋಧಿ ಪಡೆಗೆ ಕಾಣುವುದಿಲ್ಲವೆ .?
ಭಯೋತ್ಪಾದನೆ ಚಟುವಟಿಕೆಗಳನ್ನು ಮಟ್ಟಹಾಕಿರುವುದು,ಕಪ್ಪಹಣಕ್ಕೆ ಕಡಿವಾಣಹಾಕಿರುವುದು, ಅನವಶ್ಯಕ ಬೇನಾಮಿ ವ್ಯವಹಾರ ಕಡಿಮೆ ಆಗಿರುವುದು,ತೆರಿಗೆಗಳ್ಳರಿಗೆ ನಡುಕ ಹುಟ್ಟಿಸಿರವುದು.ಬಡ್ಡಿದರ ಇಳಿಕೆಆಗಿರುವುದು,ಗೃಹಖರೀದಿ ಅಗ್ಗವಾಗುರುವುದು ,ಈಗೆ ಒಂದೇ ಎರಡೆ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತದೆ.
ಇಂತಹ ದೃಢನಿರ್ಧಾರವನ್ನು ದೇಶದ75% ಜನ ಬೆಂಬಲಿಸಿದ್ದು ಒಳ್ಳೆಯದು ಜಯಿಸುತ್ತದೆ ಎಂಬುದಕ್ಕೆ ಸಾಕ್ಷಿ .
ಇಂತಹ ದಿಟ್ಟ ನಿರ್ಧಾರದ ಪ್ರತಿಫಲ ದಿಂದ ಕೆಲವೇ ವರ್ಷಗಳ ಅಂತರದಲ್ಲಿ ಭಾರತ ವಿಶ್ವದ ಬಲಿಷ್ಠ ಅರ್ಥವ್ಯವಸ್ಥೆ ಹೊಂದಲಿದೆ

*ಸಿ.ಜಿ.ವೆಂಕಟೇಶ್ವರ*
*ಶಿಕ್ಷಕರು*
*ಗೌರಿಬಿದನೂರು*

07 November 2017

ನಲ್ಲ (ಕವನ)

*ನಲ್ಲ*

ಕಾಲ್ತೆಗೆದು ಹೊರಟನಲ್ಲ ನಲ್ಲ
ಕಾಲ್ಗೆಜ್ಜೆಯ ದ್ವನಿಗೆ ಓಗೊಡಲಿಲ್ಲ
ಪರಿಪರಿಯ ಮನವಿಗೆ ಸ್ಪಂದಿಸಲಿಲ್ಲ
ನನಗಿನ್ನಾರೂ ಈಗ ಗತಿಯಿಲ್ಲ

ಉದಯಿಸಿದ ಪ್ರೀತಿ ಅಸ್ತಂಗತವಾಯಿತೇ
ನಾ ಕಂಡ ಸಾಗರದಷ್ಟು ಕನಸು ಕಮರಿತೇ
ಇನಿಯನ ಸನಿಹ ಬರೀ ಕನಸಾಯಿತೇ
ಕುಳಿತ ನೆಲ ಕಂಪಿಸುವಂತಾಯಿತೇ


ತೊರೆದು ಹೋಗದಿರು ಗೆಳೆಯ
ಬರಿದು ಮಾಡದಿರು ಒಲವ
ದಡವ ಸೇರಿಸು ಬಿಡದೆ ಇಲ್ಲೆ
ನನ್ನ ಮರೆತು ಹೇಗೆ ನೀನಿರಬಲ್ಲೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 November 2017

ವಿಪರ್ಯಾಸವೆಂದರೆ......(ಸಂಗ್ರಹ ಲೇಖನ)

ಮಾನವಾ,  ಹಣವಿಲ್ಲದಾಗ ನೀನುಮನೆಯಲ್ಲಿ ತರಕಾರಿಯನ್ನು ತಿನ್ನುತ್ತೀಯಾ...

✍ಆದರೆ ಹಣವಿದ್ದಾಗ ಅದೇ
ತರಕಾರಿಯನ್ನು ಐಶರಾಮಿ ಹೋಟೆಲ್ ನಲ್ಲಿ ತಿನ್ನುತ್ತೀಯಾ..

✍ಹಣವಿಲ್ಲದಾಗ ನೀನು
ಸೈಕಲ್ನ ನಲ್ಲಿ ತಿರುಗುತ್ತೀಯಾ...

✍ಆದರೆ ಹಣವಿದ್ದಾಗ ಅದೇ exercise ಮಾಡುವ cycle  ಯ೦ತ್ರದ ಮೇಲೆ ತಿರುಗುತ್ತಿಯಾ..

✍ಹಣವಿಲ್ಲದಾಗ ಆಹಾರ ಪಡೆಯಲು ನಡೆಯುತ್ತೀಯಾ,

✍ಹಣವಿದ್ದಾಗ ಕೊಬ್ಬನ್ನು ಕರಗಿಸಲು ನಡೆಯುತ್ತೀಯಾ..

✍ಓ.. ಮಾನವಾ, ನಿನ್ನನ್ನು ನೀನು ವ೦ಚಿಸಿ ಕೊಳ್ಳುತ್ತೀಯಾ ...

✍ ಹಣವಿಲ್ಲದಾಗ ಮದುವೆಯಾಗಲು ಇಚ್ಚಿಸುತ್ತೀಯಾ...

✍ಹಣವಿದ್ದಾಗ ವಿಚ್ಚೇದನ ಕೊಡಲು ಬಯಸುತ್ತೀಯಾ...

✍ಹಣವಿಲ್ಲದಾಗ ಹೆ೦ಡತಿಯೇ ನಿನಗೆ ಸೆಕ್ರೆಟರಿ..

✍ಹಣವಿದ್ದಾಗ ಸೆಕ್ರೆಟರಿಯೇ ನಿನಗೆ  ಹೆ೦ಡತಿ...

✍  ಹಣವಿಲ್ಲದಾಗ ಶ್ರೀಮಂತನ೦ತೆ
ಹಣವಿದ್ದಾಗ ಬಡವನ೦ತೆ ನಟಿಸುತ್ತಿಯಾ...

✍ಓ ಮಾನವಾ ಸುಲಭ ಸತ್ಯವನ್ನು
ನೀನೆ೦ದೂ ಹೇಳಲಾರೆ
ಶೇರ್ ಮಾಕೆ೯ಟ್ ಕೆಟ್ಟದ್ದೆ೦ದು
ಹೇಳುತ್ತಿಯಾ...

✍ಆದರೆ ಸದಾ ಅದರಲ್ಲಿ ವ್ಯವಹರಿಸುತ್ತಿಯಾ
ಹಣವೆ೦ಬುದೊ೦ದು ಪಿಡುಗು
ಅನ್ನುತ್ತಿಯಾ...

✍ಆದರೆ ಅದನ್ನು ಗಳಿಸಲು ಹರಸಾಹಸ ಪಡುತ್ತಿಯಾ
ದೊಡ್ಡಸ್ತಿಕೆ ಒ೦ದು ಏಕಾ೦ಗಿತನ
ಎನ್ನುತ್ತಿಯಾ....

✍ ಆದರೆ ಅದನ್ನು
ಸದಾ ಇಷ್ಟಪಡುತ್ತಿಯಾ...

✍ಕುಡಿತ ಮತ್ತು ಜೂಜಾಟ ಕೆಟ್ಟದ್ದು ಅನ್ನುತ್ತಿಯಾ...

✍ಆದರೆ ಸದಾ ಅದರ
ದಾಸನಾಗುತ್ತಿಯಾ...

✍ಓ ಮಾನವ ನೀ ಹೇಳುವುದರಲ್ಲಿ ಅಥ೯ ಇಲ್ಲ ....

✍ಆದರೆ ನೀ ಮಾಡುವುದರಲ್ಲಿ ಮಾತ್ರ ಅಥ೯ವಿದೆ...

✍ನೀನು ಇದುವರೆಗೆ ಏನು ಮಾಡಿಲ್ಲವೋ ಅದು ಜೀವನವಲ್ಲ...

✍ನೀನು ಇನ್ನು ಏನು ಮಾಡುವೆಯೋ ಅದೇ ಜೀವನ
ಕಾದು ನೋಡಬೇಡ...
ಪ್ರತಿದಿನವೂ ಅದ್ಬುತಗಳು
ನಡೆಯುತ್ತವೆ...

✍ಇಪ್ಪತ್ತು ರೂಪಾಯಿ ಓವ೯ ಬಿಕ್ಷುಕನಿಗೆ ಕೊಡಲು ಹಿ೦ಜರಿಯುತ್ತೇವೆ....

✍ಆದರೆ  ಇಪ್ಪತ್ತು ರೂ. ಹೋಟೆಲ್ ಸವ೯ರ ಗೆ ಟಿಪ್ಸ್ ಕೊಡಲು ಅಳುಕು ಇಲ್ಲ....

✍ಇಡೀ ದಿವಸ ದುಡಿದ ನ೦ತರ ಜಿಮ್ನಲ್ಲಿ ಮೂರು ಗ೦ಟೆ ಕಳೆಯಲು ನಿಮಗೆ ಸಮಯವಿದೆ...

✍ಆದರೆ ಸ್ವಲ್ಪ
ಸಮಯ ಅಡಿಗೆಕೋಣೆಯಲ್ಲಿ
ಅಮ್ಮನಿಗೆ ಸಹಾಯ ಮಾಡಲು ನಿಮಗೆ ಸಮಯವೇ ಇಲ್ಲ...

✍ಐದು ನಿಮಿಷ ಪ್ರಾಥ೯ನೆಗಾಗಿ
ಉಪಯೋಗಿಸುವುದು ನಿಮಗೆ
ತು೦ಬಾ ಕಷ್ಟ....

✍ಆದರೆ ಮೂರು ಗ೦ಟೆ ಸಿನಿಮಾದಲ್ಲಿ ಆರಾಮವಾಗಿ
ಕಳೆಯುತ್ತೀರಿ...

✍ಇಡೀ ವಷ೯ ಪ್ರೇಮಿಗಳ ದಿನಾಚರಣೆ ಗಾಗಿ ಕಾಯುತ್ತೀರಿ
(valantineday).

✍ಆದರೆ ಅಮ್ಮ೦ದಿರ ದಿನಾಚರಣೆ(mothers day) ನಿಮಗೆ ನೆನಪಾಗುವುದೇ ಇಲ್ಲ

✍ರಸ್ತೆ ಬದಿ ನರಳುತ್ತಿರುವ ಬಡಮಕ್ಕಳಿಗೆ ಒ೦ದು ತು೦ಡು
ಬ್ರೆಡ್ಡನ್ನು ಕೊಡಲಾರಿರಿ...

✍ಆದರೆ ಅವರ painting ಚಿತ್ರ
ಲಕ್ಷಗಟ್ಟಲೆ ಬೆಲೆಗೆ ಮಾರಾಟವಾಗುತ್ತವೆ...

✍ನಾವು ಜೋಕ್ ಗಳನ್ನು ಬೇಗ ಷೇರ್ ಮಾಡುತ್ತೇವೆ...

✍ ಆದರೆ ಇ೦ತಹ ಸ೦ದೇಶಗಳನ್ನು ಅಸಡ್ಡೆ ಮಾಡುತ್ತೇವೆ...

ಆಲೋಚಿಸಿರಿ, ಬದಲಾಗಿರಿ...👍   

ಕೃಪೆ: ವಾಟ್ಸಪ್

ನೀರೆಯ ಪ್ರತಿಮೆ (ಹನಿಗವನಗಳು)




*ಗಡಿಗೆ*

ಗಡಿಗೆ ಹೊತ್ತ ತರುಣಿಯ
ಪ್ರತಿಮೆ ಮಾಡುವೆ ನಾನು
ಅಡಿಗಡಿಗೆ
ಕೆಡಿಸದಿರಿ ಹೊಡೆದು
ಹಿಡಿದುಬಡಿಗೆ
ಬಣ್ಣ ಬಳಿಯುವೆ ನಾನು
ಅಡಿಯಿಂದ ಮುಡಿಗೆ
ಅಣ್ಣ ಸ್ವಲ್ಪ ಸರಿ ನೀ
ಆ ಕಡೆಗೆ


*ನೀರೆ*

ಮಾಡುವೆ ಪ್ರತಿಮೆಯ
ನೀರಹೊತ್ತ ನೀರೆಯ
ಬಣ್ಣ ಕುಂಚಗಳ ಬಳಸಿರುವೆ
ಓರೆಕೋರೆಗಳ ತಿದ್ದಿರುವೆ
ಬಗಲಲಿ ಹಿಡಿದಿಹಳು  ಗಡಿಗೆ
ಕೊಳ್ಳಬಹುದು ಕಾಸಿಗೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಮಗು (ಹನಿಗವನಗಳು)

*೧*
*ನಗು*

ನಿಮ್ಮ ನೋಡಿ ಆಕಳಿಸಿರುವೆನು
ನಗುವನೂ ಕಳಿಸಿರುವೆನು
ಶುಭ್ರವಸ್ತ್ರದ ನಿಷ್ಕಲ್ಮಶ ನಗು
ಸ್ವೀಕರಿಸಿ  ನೀನಾಗಿ ಮಗು .

*೨*
*ರಾಯಭಾರಿ*
ಕಣ್ಣು ಮೂಗು ಗಲ್ಲ
ಆಕಾರ ರಸಗುಲ್ಲ
ಬೊಚ್ಚುಬಾಯಿ ಸುಂದರ
ಸ್ವಚ್ಛ ಮನಸಿನ ಪೋರ
ಶುಭ್ರ ವಸ್ತ್ರಧಾರಿ
ನಗುವ ರಾಯಭಾರಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 November 2017

ಗಜಲ್ ೫(ತೊರೆದೆಯ)

ಗಜಲ್ ೫(ತೊರೆದೆಯ)

ಮುತ್ತಿನುಂಗುರಕೆ ಮರುಳಾಗಿ ಗೆಳೆಯನ ತೊರೆದೆಯ
ಮುತ್ತಿನಂತಹ ಮನಸುಳ್ಳ ಸ್ನೇಹಿತನ  ತೊರೆದೆಯ

ಮಂಜಿನಂತಹ ನನ್ನ ಹೃದಯಕ್ಕೆ ನಂಜು ಹಾಕಿ
ಸಂಜೆವೇಳೆ ಕೈಬಿಟ್ಟು ಸಹಚರನ   ತೊರೆದೆಯ

ಕಪ್ಪಗಿರುವ ನೇರಳೆ ಹಣ್ಣಂತಹ ನನ್ನ ಬಿಟ್ಟು
ಹತ್ತಿಯ ಹಣ್ಣಂತಹ  ಗೆಳೆಯ ಸಿಕ್ಕನೆಂದು ಒಳ್ಳೆಯವನ  ತೊರೆದೆಯ

ನೀನನ್ನ ಬಾಳಿನ ಸೊಡರಾಗುವೆ ಎಂದು ಬಯಸಿದ್ದೆ
ನನ್ನ ಹೃದಯಕ್ಕೆ ಕಿಚ್ಚು ಹಚ್ಚಿ ಇನಿಯನ   ತೊರೆದೆಯ

ತಿಂಗಳ ಬೆಳಕಿನಲಿ ನನಗೆ ಮಧುರ ಸಂಗವ ನೀಡಿ
ತಿಂಗಳಾಗುವ ಮೊದಲೆ ಮನ್ಮಥನ  ತೊರೆದೆಯ

ವಂಚಕಿ ಚಂಚಲೆಯೆಂದು ಗೆಳೆಯರು ನಿನ್ನ ನಿಂದಿಸಿದರೂ
ಒಪ್ಪದ "ಸೀಜೀವಿ"ಯೆಂಬ ಮುಗ್ಧ ನಂಬಿಕಸ್ಥನ ತೊರೆದೆಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

04 November 2017

ಕನಸು (ನ್ಯಾನೋ ಕಥೆ)

*ನ್ಯಾನೋ ಕಥೆ*

*ಕನಸು*

"ನಮ್ಮ ಮಗಳು  ನಮ್ಮಂತೆ ಕಟ್ಟಡ ಕೆಲಸಗಾರರಾಗದೇ ಇಂತಹ ದೊಡ್ಡ ಕಟ್ಟಡದ ಒಡತಿಯಾಗಬೇಕು ಇದು ನನ್ನ ಕನಸು" ಎಂದು ದೂರದ ಬಳ್ಳಾರಿಯಿಂದ ಬೆಂಗಳೂರಿನಲ್ಲಿ ಕಟ್ಟಡ ಕೆಲಸ ಮಾಡಲು ಬಂದ  ಮಾರಣ್ಣ ತನ್ನ ಶೆಡ್ ನಲ್ಲಿ  ಹೆಂಡತಿಗೆ ರಾತ್ರಿ ಊಟಮಾಡುವಾಗ ಹೇಳಿದನು .ಆಗ ಮಗುವು ತಣ್ಣಗೆ ನಿದ್ರಿಸುತ್ತಿತ್ತು
ಮಾರನೆಯ ದಿನ ತನ್ನ ಮಗುವನ್ನು  ಸೀರೆಯಿಂದಾದ ಜೋಲಿಯಲ್ಲಿ  ಮಲಗಿಸಿ ಕೆಲಸಕ್ಕೆ ಹೊರಟರು .ಮಧ್ಯಾಹ್ನದ ವೇಳೆಗೆ ಮಾರಣ್ಣ ಕೆಲಸದಲ್ಲಿ ನಿರತನಾಗಿದ್ದಾಗ ಮಗಳು ಜೋಲಿಯಿಂದಿಳಿದು ಕಟ್ಟಡದ ಕೆಲಸ ಮಾಡುವ ಕಡೆಗೆ ಅಂಬೆಗಾಲಿಟ್ಟು ಬಂದಳು .ಹತ್ತು ಅಂತಸ್ತಿನ ನಿರ್ಮಾಣದ ಕಟ್ಟಡದಿಂದ ಮೇಲಿನಿಂದ ಒಂದು ಚೂಪಾದ ಸರಳು ಇನ್ನೇನು ಮಗುವಿನ ಮೇಲೆ ಬೀಳುವ ವೇಳೆಗೆ ಓಡಿ ಬಂದ ಮಾರಣ್ಣ ಮಗಳನ್ನು ದೂರ ತಳ್ಳಿ ತಾನು ಮುಂದೆ ಸಾಗಲು ಪ್ರಯತ್ನಿಸಿದ ಅದಾಗಲೇ ಸರಳು ಅವನ ದೇಹ ಸೀಳಿ ರಕ್ತ ಚಿಮ್ಮಿ ಪ್ರಾಣ ಪಕ್ಷಿ ಹಾರಿತ್ತು ಕಣ್ಣು ಮಾತ್ರ ಮುಚ್ಚದೇ  ಅವನ ಮಗಳ ಭವಿಷ್ಯದ ಮನೆ ಕಣ್ಣುಗಳಲ್ಲಿ ಪ್ರತಿಫಲನ ಆಗುತ್ತಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಮದ್ಯವಯಸ್ಸಿನ ನಂತರ ......(ಸಂಗ್ರಹ ಲೇಖನ)

*ನಮ್ಮ ಆತ್ಮೀಯರೊಬ್ಬರು ಕಳುಹಿಸಿದ ಜೀವನದ ಬಗೆಗಿನ ಕೆಲವು ಮೆಲುಕು ಹಾಕುವಂತ ನುಡಿಗಳು*:
*"ಮಧ್ಯವಯಸ್ಸಿನ ನಂತರ"*

೧.  ಜೀವನದ ರಹಸ್ಯ :
       1.ಮಧ್ಯವಯಸ್ಸಿನ ವರೆಗೆ  ಹೆದರ  ಬೇಡಿ....
       2.ಮಧ್ಯವಯಸ್ಸಿನ ನಂತರ : ಯಾವುದಕ್ಕೂ ಬೇಸರ ಪಡಬೇಡಿ.....

೨.  ನೀವು ಸಾಧ್ಯವಾಗುವಷ್ಟು ನಿಮ್ಮ ಜೀವನವನ್ನು ಅನುಭವಿಸಿ...

  ೩.   ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ ಪಡಿಸಲೂ ಸಾಧ್ಯವಾಗದಷ್ಟು ಮುದುಕರಾಗುವವರೆಗೆ ಮುಂದೂಡಬೇಡಿ, ಎಲ್ಲಿಯವರೆಗೆ ನಿಮ್ಮಿಂದ ಸಾಧ್ಯವೋ ಅಲ್ಲಿಯವರೆಗೆ ಮೊದಲೇ ನೀವು ನೋಡಬೇಕೆಂದಿರುವ ಸ್ಥಳಗಳನ್ನು ಭೇಟಿ ಕೊಡಿ, ನೋಡಿ ಬಿಡಿ.

೪.  ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಹಳೆ ಸ್ನೇಹಿತರು ಗುರು ಹಿರಿಯರು ಇವರುಗಳನ್ನು ಬೇಟಿಯಾಗಿಬಿಡಿ,  ಮುಂದೆ ಅವರೆಲ್ಲರನ್ನು ನೋಡುವ ಅವಕಾಶ ಸಿಗುತ್ತೋ ಇಲ್ಲವೋ.

೫.  ಬ್ಯಾಂಕುಗಳಲ್ಲಿ ಇಟ್ಟ ನಿಮ್ಮ ಹಣ ನಿಮ್ಮದಾಗಿ ಇರದಿರಬಹುದು, ಅದಕ್ಕೇ ಅದನ್ನ ಖರ್ಚು ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಅನುಭವಿಸಿ, ಇದಕ್ಕಾಗಿ ನೀವು ನಾಳೆಯ ಬಗ್ಗೆ ಯೋಚಿಸ ಬೇಕಿಲ್ಲ

೬.  ಏನೆಲ್ಲಾ ತಿನ್ನ ಬೇಕೆನಿಸುತ್ತೋ ತಿಂದು ಬಿಡಿ, ನೀವು  ಖುಷಿ ಯಾಗಿರುವುದು ಮಾತ್ರ ಮುಖ್ಯ ಆದರೆ ನಿಮ್ಮ  ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳನ್ನು ಯಾವಾಗಲೂ ತಿನ್ನಿ, ಅದೇ ನಿಮ್ಮ ಆರೋಗ್ಯಕ್ಕೆ ಹಾನಿಕರವಾದವುಗಳನ್ನು ತಿನ್ನಲೇಬೇಕೆನಿಸಿದಲ್ಲಿ ಒಮ್ಮೊಮ್ಮೆ ಮಾತ್ರ ಸ್ವಲ್ಪ  ಸ್ವಲ್ಪವೇ ತಿನ್ನಿ.

೭.  ಅನಾರೋಗ್ಯವನ್ನು ಸರಿಯಾದ ರೀತಿಯಲ್ಲೇ ಕ್ರಮಿಸಿ, ಬಡವರಾಗಿರಲಿ, ಶ್ರೀಮಂತರಾಗಿರಲಿ, ಪ್ರತಿಯೊಬ್ಬರೂ ಹುಟ್ಟು, ವಯಸ್ಸು, ಅನಾರೋಗ್ಯ, ಮತ್ತು ಸಾವು ಈ ಚಕ್ರದಲ್ಲೇ ಸುತ್ತಬೇಕು. ಇದಕ್ಕೆ ಶಾಶ್ವತವಾದ   ಪರಿಹಾರ ಎಂದೂ ಇಲ್ಲವೇ ಇಲ್ಲ. ಇದೇ ಜೀವನ.

೮.  ನೀವು ಅನಾರೋಗ್ಯವಾಗಿರುವಾಗ ಹೆದರುವುದೂ ಬೇಡ, ಬೇಸರವೂ ಬೇಡ. ನಿಮ್ಮದೇನಾದರೂ ಬಾಕಿ/ ನೀವು ಪರಿಹರಿಸಬೇಕಾದ /ಇತ್ಯರ್ಥವಾಗಬೇಕಾದ ಸಮಸ್ಯೆ ಇದ್ದರೆ ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಿ ಮತ್ತು ನಿರಾಳರಾಗಿ.

೯.  ನಿಮ್ಮ ದೇಹವನ್ನು ವೈದ್ಯರೂ, ಜೀವನವನ್ನು ದೇವರೂ/ ಪ್ರಕೃತಿಯೂ ಮತ್ತು ನಿಮ್ಮ ಮನಸ್ಥಿತಿಯನ್ನು ನೀವೂ ನೋಡುತ್ತಿರಿ.

೧೦.  ನಿಮ್ಮ ಚಿಂತೆ ನಿಮ್ಮ ಅನಾರೋಗ್ಯವನ್ನು ಸರಿ ಪಡಿಸುವದಾದರೆ ನೀವು ಸದಾ ಚಿಂತಿಸಿ, ನಿಮ್ಮ ಆಯುಷ್ಯವನ್ನು ಚಿಂತೆ ಹೆಚ್ಚಿಸುವುದಾದರೆ ನೀವು ಸದಾ ಚಿಂತಿಸಿ, ಮತ್ತು  ಸಂತೋಷಗಳಿಗೆ  ಚಿಂತೆಗಳನ್ನು ಬದಲಿಸ ಬಹು ದಾದರೆ ಹಾಗೇ ಮಾಡಿ .

೧೧. ಮಕ್ಕಳು ಅವರ ಭವಿಷ್ಯವನ್ನು ಖುದ್ದು ಮಾಡಿಕೊಳ್ಳುತ್ತಾರೆ. ಅವರ ಬಗ್ಗೆ ನೀವು ಜಾಸ್ತಿ ಚಿಂತಿಸುವುದು ಬೇಡ.

೧೨.   ನಾಲ್ಕು ಖಜಾನೆಯನ್ನು ಸರಿಯಾಗಿ ನೋಡಿಕೊಳ್ಳಿ....
 
             ೧.   ನಿಮ್ಮ  ದೇಹ : ನಿಮ್ಮ ಆರೋಗ್ಯ ಮತ್ತು ದೇಹಸ್ಥಿತಿಯ  ಬಗೆಗೆ ಜಾಸ್ತಿ  ಕಾಳಜಿ    ನಿಮ್ಮದೇ ಇರಲಿ
          ೨.     ನಿಮ್ಮ  ಆರ್ಜಿತ  ಧನ ನಿಮ್ಮ  ಕೈಯಲ್ಲೇ ಇಟ್ಟುಕೊಳ್ಳುವುದು  ಅತ್ಯಂತ ಒಳ್ಳೆಯದು.
          ೩.     ನಿಮ್ಮ ಹಳೆಯ ಸಂಗಾತಿ ಅತ್ಯಂತ ಅಮೂಲ್ಯ ಖಜಾನೆಯಿದು, ಪ್ರತಿ ಕ್ಷಣವೂ ಅನ್ಯೋನ್ಯವಾಗಿ ಸಹಚರರಂತೆ ಬಾಳಲು ಪ್ರಯತ್ನ ಪಡಿ , ನಿಮ್ಮಿಬ್ಬರಲ್ಲಿ ಒಬ್ಬರು ಮೊದಲು ಕೈ ಬಿಡುವಿರಿ ( ಈ ಜಗದಿಂದ)....
         ೪.     ನಿಮ್ಮ ಹಳೆಯ ಸ್ನೇಹಿತರು:  ಇವರನ್ನು ಸಿಗಲು ಸಾಧ್ಯವಾಗುವ ಪ್ರತಿ ಕ್ಷಣಗಳನ್ನೂ ಸಿಕ್ಕಿ ಅಸ್ವಾದಿಸಿ, ಏಕೆಂದರೆ ಕಳೆಯುತ್ತಿರುವ ಪ್ರತಿ ಕ್ಷಣಗಳೂ ನಿಮಗೆ ಅಮೂಲ್ಯವಾಗಿ ಕಡಿಮೆಯಾಗುತ್ತಲಿರುತ್ತದೆ.

 13. ದಿನಾ ನೀವು ಅವಶ್ಯ  ಮಾಡಲೇಬೇಕಾದ ಮುಖ್ಯ ಎರಡು ಕೆಲಸಗಳು  " ಹಸನ್ಮುಖಿಯಾಗಿ" ಮತ್ತು "ನಗುತ್ತಿರಿ"

14. ಹರಿಯುತ್ತಿರುವ ನೀರು ಹಿಂದಕ್ಕೆ ತಿರುಗದು... ಅಂತೆಯೇ ನಮ್ಮ ಜೀವನ..  ಅದಕ್ಕೇ ಸಂತಸವಾಗಿಸಿರಿ.

15. ದೇವರು ನಿಮ್ಮ ಚೆನ್ನಾಗಿ ಖುಷಿಯಲ್ಲಿಟ್ಟಿರಲಿ.

*ಸಂಗ್ರಹ*:
*ಸಿ.ಜಿ.ವೆಂಕಟೇಶ್ವರ*

ಈ ವಿಷಯಗಳನ್ನು ಸಾಧ್ಯವಾದಷ್ಟೂ ಬೇಕಾದವರೊಡನೆ ಹಂಚಿಕೊಳ್ಳಿ....
🙏🌹

🌷🌷🌷🌷🌷🌷🌷🌷🌷

03 November 2017

ಉಂಡಾಡಿ ಗುಂಡ (ಕಥನ ಕವನ)

ಉಂಡಾಡಿಗುಂಡ*

ನಮ್ಮೂರ ರಾಮನಿಗೆ ಮಕ್ಕಳಿರಲಿಲ್ಲ
ದೇವರಿಗೆ ಬೇಡುವುದ ಮರೆಯಲಿಲ್ಲ
ಹಾಲುಕುಡಿದಪ್ಪನಿಗೆ ಹರಕೆ ಹೊತ್ತನು
ದಿನಕಳೆಯುತಲಿ ಸಂತಾನ  ಪಡೆದನು//

ಮಗನ ಬಾಲ ಲೀಲೆಗೆ ಮನಸೋತನು
ಅತಿಯಾಗಿ ಪ್ರೀತುಸಿ ಮುದ್ದಿಸಿದನು
ಮಗ ಉಡಾಳರ ಸಂಘ ಮಾಡಿ  ಕೆಟ್ಟನು
ವಿದ್ಯೆ ಕಲಿಯಲು ಬಿಟ್ಟು ಅಲೆದನು //

ಅಪ್ಪನ ಅಮ್ಮನ  ಮಾತಿಗೆ ಬೆಲೆಯುಲ್ಲ
ಊರಸುತ್ತುವದ ಅವನು  ಮರೆಯಲಿಲ್ಲ
ಹಣವನ್ನು ಖರ್ಚು ಮಾಡಿದ ನೀರಿನಂತೆ
ಅಪ್ಪ ಅಮ್ಮರಾದರು ಭಿಕ್ಷುಕರಂತೆ //

ಮದುವೆ ಮಾಡಿದರು ವಧುವ ತಂದು
ಚಿಗುರಿತು ಆಸೆ ಮಗ ಸುಧಾರಿಸುವನೆಂದು
ನಾಯಿಬಾಲ ಡೊಂಕು ಅವನು ಉಂಡಾಡಿ
ಸಾಕುತ್ತಿದ್ದಾಳೆ ಸೊಸೆ ಎಲ್ಲರ ಕೂಲಿ ಮಾಡಿ//

ರಾಮನಿಗೆ ಆಸೆ ಮೊಮ್ಮಕ್ಕಳ ನೋಡಲು
ಮಗನ ಹಾತೊರೆವ ಹೆಂಡ ಕುಡಿಯಲು
ಸೊಸೆಗೂ ಆಸೆ ಮಗುವ  ತಾಯಿಯಾಗಲು
ಆದರೆ ನಿರ್ಧಾರ ಮಡಿದಳು ಬಂಜೆಯಾಗಲು //

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

02 November 2017

ಸ್ಕೂಲ್ ಬಸ್ (ನ್ಯಾನೋ ಕಥೆ)

ಸ್ಕೂಲ್ ಬಸ್
(ನ್ಯಾನೋ ಕಥೆ)

"ಏಯ್ ಹುಡುಗಿ ಎಮ್ಮೆ ಆಕಡೆ ಹೊಡಿ" ಎಂದು ಸ್ಕೂಲ್ ಬಸ್ ಡ್ರೈವರ್ ಗದರಿದಾಗ ಗೌರಿ ಓಡಿಬಂದು ಎಮ್ಮೆಗಳನ್ನು ರಸ್ತೆ ಬದಿಗೆ ಒಡೆದಳು. ಆಗ ಬಸ್ ನಲ್ಲಿದ್ದ ಮಕ್ಕಳು ಇವಳಿಗೆ ಟಾಟ ಮಾಡಿದರು .ದೂಳೆಬ್ಬಿಸುತ್ತಾ ಬಸ್ ಮುಂದೆ ಚಲಿಸಿದಾಗ ಈ ಬಾಲಕಿಯ ಮನದಲ್ಲಿ ಪ್ರಶ್ನೆಗಳ ಸುರಿಮಳೆ.
" ನಮ್ಮಪ್ಪ ಹಾವು ಕಚ್ಚಿ ಸಾಯದಿದ್ದರೆ ನಾನು ಸಹ ಈ ಮಕ್ಕಳಂತೆ ಶಾಲೆಗೆ ಹೋಗುತ್ತಿರಲಿಲ್ಲವೆ? ನಮ್ಮಪ್ಪನ ಮರಣದ ನಂತರ ನಮ್ಮ ಚಿಕ್ಕಪ್ಪರು  ನಮ್ಮಮ್ಮನಿಗೆ ಮೋಸ ಮಾಡಿ ಹೆಬ್ಬೆಟ್ಟು ಹಾಕಿಸಿಕೊಂಡು ನಮ್ಮ ಆಸ್ತಿ ಲಪಟಾಯಿಸಿಕೊಂಡು ನಮ್ಮನ್ನು ಬೀದಿಪಾಲು ಮಾಡದಿದ್ದರೆ ನಾನು ಶಾಲೆಗೆ ಹೋಗುತ್ತಿರಲಿಲ್ಲವೇ? ನಮ್ಮೂರಿನ ಸಾಹುಕಾರರ ಬಳಿ ನಮ್ಮಮ್ಮ ನನ್ನ ಓದಿಗೆ ಸಾಲ ಕೇಳಿದಾಗ ಬಾಯಿಗೆ ಬಂದಂತೆ ಬೈಯದಿದ್ದರೆ.ಅಲ್ಪ ಸ್ವಲ್ಪ ಸಹಾಯ ಮಾಡಿದ್ದರೆ ನಾನು ಶಾಲೆಗೆ ಹೋಗುತ್ತಿರಲಿಲ್ವೇ? ನಾನು ಓದದಿದ್ದರೂ ಕೂಲಿ ನಾಲಿ ಮಾಡಿ ನನ್ನ ಸಾಕುವ ನನ್ನ ಅಮ್ಮನ ಸಾಕುವ ಶಕ್ತಿ ನನಗೆ ಬರುವುದಿಲ್ಲವೆ ? ಬರಿ ಓದಿದರೆ ಮಾತ್ರ ಜೀವನ ಮಾಡಬಹುದೆ?
ಈಗೇ ನೂರಾರು ಪ್ರಶ್ನೆಗಳು ತಲೆಯಲ್ಲಿ ಗುಯ್ ಗುಡುವಾಗ "ಎಯ್ ಹುಡುಗಿ ಹೊಟ್ಟೆಗೆ ಏನ್ ತಿಂತಿಯಾ ?ಎಮ್ಮೆಗಳು ರಾಗಿ ಹೊಲ ಮೇಯ್ತಾ ಅವೆ ಹೊಡ್ಕ" ಎಂದು ರಂಗಣ್ಣನವರು ಗದರಿದಾಗ ಬೆಚ್ಚಿ ಒಡೋ ಬರದಲ್ಲಿ ಕಲ್ಲಿಗೆ ಎಡವಿ ಬರಿಗಾಲಲ್ಲಿದ ಅವಳ ಕಾಲಿಗೆ ಬೆಣಚು ಕಲ್ಲು ತಾಗಿ ರಕ್ತ ಚಿಲ್ಲನೆ ಚಿಮ್ಮಿತು .ಗೌರಿಯು ನೋವಿನಿಂದ ಚೀರಿದಳು ಮಗಳ ದ್ವನಿ ಕೇಳಿ ದೂರದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಓಡೋಡಿ ಬಂದು ಮಗಳ ಸ್ಥಿತಿ ಕಂಡು ಅವಳ ಆಕ್ರಂದನ ಮುಗಿಲು ಮುಟ್ಟಿತು .ರಸ್ತೆಯಲ್ಲಿ ಜನಸೇರಿದರು ದೂರದಲ್ಲಿ ಒಂದು ವಾಹನ  ರಸ್ತೆಯಲ್ಲಿರುವ ಜನರ  ಚದುರಿಸಲು ಕಿವಿ ಕಿತ್ತುಹೋಗುವಂತೆ   ಹಾರ್ನ್ ಮಾಡಿತು ಎಲ್ಲರೂ ತಿರುಗಿ    ನೋಡಿದರೆ  ಮಕ್ಕಳ ಬಿಟ್ಟು ಹಿಂದಿರುಗಿದ ಅದೇ   ಶಾಲಾ ಬಸ್ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನಗು (ಹನಿಗವನಗಳು)

*೧*
*ಪರಿಣಾಮ*

ಕಛೇರಿಯಿಂದ ಬರುವ ನನ್ನ
ಸ್ವಾಗತಿಸುತ್ತಿದ್ದಳು ತೋರಿ
ನಗು ಮೊಗ
ಅದರ ಪರಿಣಾಮ ಮನೆಯಲ್ಲಿ
ಮಗು ನಗು

*೨*

*ಕರ್ಮ*
ನಗುವುದು ಸಹಜ ಧರ್ಮ
ನಗಿಸುವುದು ಪರ ಧರ್ಮ
ಇವೆರಡೂ ಇಲ್ಲದಿದ್ದರೆ
ನಿಮ್ಮ ಕರ್ಮ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*