ಸಮಾಜಮುಖಿ ಚಿಂತನೆಯ ಗ್ರಂಥಪಾಲಕ ಎಸ್ ಆರ್ ಯೋಗಾನಂದ್ .
"ಪಿ ಯು ಸಿ ಕಾಲೇಜಿನ ಮೇಲ್ಪಟ್ಟ ಕಾಲೇಜುಗಳಲ್ಲಿ ಮಕ್ಕಳ ಕಲಿಕೆಗೆ ಮತ್ತು ಜ್ಞಾನಾರ್ಜನೆಗೆ ಪೂರಕವಾದ ಒಂದು ಪ್ರತ್ಯೇಕ ಗ್ರಂಥಾಲಯ ಕಟ್ಟಡವಿರಬೇಕು.ವಿಶಾಲವಾದ ಕಟ್ಟಡದ ಕೆಳಾಂತಸ್ತು ಮತ್ತು ಮೇಲ್ ಅಂತಸ್ತು ಹೊಂದಿರಬೇಕು. ಮೇಲಿನ ಅಂತಸ್ತಿನಲ್ಲಿ ಪಠ್ಯಕ್ರಮಕ್ಕೆ ಪೂರಕವಾದ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಅಗತ್ಯವಾದ ಪುಸ್ತಕಗಳು ಲಭ್ಯವಿರಬೇಕು.ಜೊತೆಗೆ ಅತ್ಯಾಧುನಿಕ ಡಿಜಿಟಲ್ ಗ್ರಂಥಾಲಯವಿರಬೇಕು. ಕೆಳಭಾಗದಲ್ಲಿ ಸಭಾಂಗಣವಿರಬೇಕು ಅಲ್ಲಿ ಆಗಾಗ್ಗೆ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಕ್ಕೆ ಮತ್ತು ವ್ಯಕ್ತಿತ್ವ ವಿಕಸನ ತರಗತಿಗಳನ್ನು ಹಮ್ಮಿಕೊಳ್ಳಬೇಕು..".ಹೀಗೆ ತನ್ನ ಯೋಜನೆಗಳನ್ನು ಪಟಪಟನೆ ಹೇಳುತ್ತಾ ಹೋಗುತ್ತಾನೆ ಗೆಳೆಯ ಯೋಗಾನಂದ್ ...
ಇತ್ತೀಚೆಗೆ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮದ್ದೂರು ತಾಲ್ಲೂಕಿನ ರಂಜಿತಾ ಎಂಬುವವರು ಕಾಲೇಜಿನ ಲೈಬ್ರರಿ ನಾನು ಯಶಸ್ಸು ಗಳಿಸಲು ಮೂಲ ಕಾರಣ ಎಂಬ ಮಾತುಗಳನ್ನು ಕೇಳಿದಾಗ
ಯೋಗಾನಂದ್ ರವರ ಚಿಂತನೆ ಸರಿಯಾದುದು ಎಂದು ನನಗೆ ಮನವರಿಕೆಯಾಯಿತು.
ಗೆಳೆಯ ಯೋಗಾನಂದ ಎಸ್.ಆರ್.ಗ್ರಂಥಪಾಲಕರಾಗಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಅರಕಲಗೂಡು ಹಾಸನ ಜಿಲ್ಲೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದಾ ಚಲನಶೀಲ ಸಮಾಜ ಮುಖಿ ಚಿಂತನೆಯ ಇವರು ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಶೀಗೋಡು ಗ್ರಾಮದ ನಿವಾಸಿಗಳಾದ ರಾಚಪ್ಪ ಶಿವಮ್ಮ ದಂಪತಿಗಳ ಮಗನಾಗಿ ಜುಲೈ ತಿಂಗಳ 1976 ರಲ್ಲಿ ಜನಿಸಿದರು.
ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟಿದ ಊರಾದ ಶೀಗೋಡು ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಪೂರೈಸಿದರು.
5 ರಿಂದ 7 ನೇ ತರಗತಿ ಯನ್ನು ಪಿರಿಯಾಪಟ್ಟಣ ತಾಲೂಕಿನ ಸಂಗರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ವ್ಯಾಸಂಗ ಮಾಡಿದರು.
ಮೈಸೂರು ಜಿಲ್ಲೆಯ ಚನ್ನಂಗೆರೆಯ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯನ್ನು ಓದಿದ ಬಳಿಕ
ಕೆ ಆರ್ ನಗರದ ಭೇರ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿ ಯು ಸಿ ವ್ಯಾಸಂಗ ಮಾಡಿದರು.
ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದು ಮೈಸೂರಿನ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ ಎಡ್ ಓದುವಾಗ ಇವರು ನನ್ನ ಸಹಪಾಠಿಯಾಗಿದ್ದರು ಎಂಬುದು ನನಗೆ ಹೆಮ್ಮೆ. ಅಂದು ಆರಂಭವಾದ ನಮ್ಮ ಸ್ನೇಹ ಇಂದಿಗೂ ಮುಂದುವರೆದಿದೆ.
ನಂತರ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ
ಅರ್ಥಶಾಸ್ತ್ರದಲ್ಲಿ ಎಂ.ಎ ಸ್ನಾತಕ ಪದವಿ ಪಡೆದರು.
ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯ. ಗ್ರಂಥಾಲಯ ವಿಷಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಗ್ರಂಥಪಾಲಕರಾಗಿ KPSC ನೇರ ನೇಮಕಾತಿಯಲ್ಲಿ ಆಯ್ಕೆಗೊಂಡು ಸ.ಪ.ಪೂ.ಕಾಲೇಜು H.D.ಕೋಟೆಯಲ್ಲಿ ಗ್ರಂಥಪಾಲಕರಾಗಿ ಮೊದಲು
ಸೇವೆಗೆ ಸೇರಿದರು. ನಂತರ ಸ.ಪ.ಪೂ.ಕಾಲೇಜು ಆನೇಕಲ್
ಮಹಾತ್ಮಾ ಗಾಂಧಿ ಸ.ಪ.ಪೂರ್ವ ಕಾಲೇಜು ಕುಣಿಗಲ್ ,ಕೃಷ್ಣರಾಜೇಂದ್ರ ಬಾಲಕರ ಸ.ಪ.ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದು
ಪ್ರಸ್ತುತ ಬಾಲಕರ ಸ.ಪ.ಪೂರ್ವ ಕಾಲೇಜು ಅರಕಲಗೂಡಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇದರ ಜೊತೆಯಲ್ಲಿ ಸಂಘಟನೆ ಸೇವಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಗ್ರಂಥಪಾಲಕರ ಸಂಘದಲ್ಲಿ ಸುಮಾರು 5 ವರ್ಷಗಳ ಕಾಲ ಸಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ.
ಇವರು ಸೇವೆ ಸಲ್ಲಿಸಿದಂತಹ ಯಾವುದೇ ಕಾಲೇಜಿನಲ್ಲಿ ಕಾಲೇಜು ವಿಭಾಗಕ್ಕೆ ಪ್ರತ್ಯೇಕವಾದ ಗ್ರಂಥಾಲಯದ ವ್ಯವಸ್ಥೆ ಇರಲಿಲ್ಲ.ಇವರ ಪ್ರಾಮಾಣಿಕ ಪ್ರಯತ್ನದ ಫಲವಾಗಿ
ಪ್ರತಿ ಕಾಲೇಜಿ ನಲ್ಲಿಯೂ ಪ್ರತ್ಯೇಕವಾದ ಗ್ರಂಥಾಲಯದ ವ್ಯವಸ್ಥೆಯನ್ನು ಪ್ರಾಂಶುಪಾಲರ,ಉಪನ್ಯಾಸಕರ,ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಇತರೆ ಸದಸ್ಯರ ಸಹಕಾರ ದೊಂದಿಗೆ ವ್ಯವಸ್ಥಿತವಾದ ಗ್ರಂಥಾಲಯದ ವ್ಯವಸ್ಥೆಯನ್ನವಿದ್ಯಾರ್ಥಿಗಳಿಗೆ ನೀಡುವ ಪ್ರಯತ್ನವನ್ನ ಮಾಡಿರುತ್ತಾರೆ.ಇದು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನ ಹೆಚ್ಚಿಸುವಲ್ಲಿ,ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಎಂದು ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.
ಯೋಗಾನಂದ್ ರವರು ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ಬೆಳಸುವಲ್ಲಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸುತ್ತಿರುವುದು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯ ಚಟುವಟಿಕೆಯ ಜೊತೆಗೆ ಸಹಪಠ್ಯ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ,NSS ವಿಶೇಷ ವಾರ್ಷಿಕ ಶಿಬಿರಗಳಲ್ಲಿ ಸಹ ಶಿಬಿರಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿರುತ್ತಿದ್ದಾರೆ.
2008 -09 ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ರಾಜ್ಯಾದ್ಯಂತ ಪ್ರಾದೇಶಿಕ ಅಸಮತೋಲನವನ್ನ ಹೋಗಲಾಡಿಸಲು
ಶ್ರೀ ಡಿ ಎಮ್ ನಂಜುಡಪ್ಪ ನವರ ವರದಿಯಂತೆ ಆಯ್ದ ಶಾಲಾ-ಕಾಲೇಜಿನಲ್ಲಿ ಜಾರಿಗೆ ತಂದಿದ್ದ ಶೈಕ್ಷಣಿಕ ವೃತ್ತಿ ಮಾರ್ಗದರ್ಶನದ ಘಟಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.ಬೆಂಗಳೂರಿನ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳ ಕಛೇರಿಯಲ್ಲಿ ನಡೆಸಲಾಗುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಗತಿಗಳನ್ನ ಮಾಡಿರುತ್ತಾರೆ.
ಎಲೆ ಮರೆಯ ಕಾಯಿಯಂತೆ ಕನ್ನಡ ಸಾಹಿತ್ಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುವ ಇವರು ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಓದುವ ಹವ್ಯಾಸ ಬೆಳೆಸಲು ತಾವೇ ಹಣ ಕೊಟ್ಟು ಪುಸ್ತಕ ಖರೀದಿಸಿ ಮಕ್ಕಳಿಗೆ ಬಹುಮಾನ ರೂಪದಲ್ಲಿ, ದೊಡ್ಡವರಿಗೆ, ಮದುವೆ ಗೃಹಪ್ರವೇಶ ಮುಂತಾದ ಸಂದರ್ಭಗಳಲ್ಲಿ ಉಡುಗೊರೆಯಾಗಿ ನೀಡುತ್ತಿದ್ದಾರೆ.
"ನಾನು ಮಾಡಿದ್ದು ಸ್ವಲ್ಪ ಮಾಡಬೇಕಿರುವವುದು ಬಹಳಷ್ಟಿದೆ
ಮುಂದಿನ ವೃತ್ತಿ ಬದುಕಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮವಾದ ಸುಸಜ್ಜಿತ ಅತ್ಯಾಧುನಿಕ ಮೂಲ ಭೂತ ಸೌಕರ್ಯಗಳನ್ನು ಹೊಂದಿರುವ ಮಾದರಿ ಗ್ರಂಥಾಲಯವನ್ನು ಸರ್ಕಾರದ,ಇಲಾಖೆಯ ವತಿಯಿಂದ ಸ್ಥಾಪಿಸಿಕೊಂಡು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಮಾದರಿ ಗ್ರಂಥಾಲಯದ ಸೇವೆಯನ್ನು ಸಲ್ಲಿಸುವ ಕನಸನ್ನ ಹೊಂದಿರುತ್ತೇನೆ. ಇದಕ್ಕೆಲ್ಲ ಇಲಾಖೆಯ ಸರ್ಕಾರದ ಸಹಕಾರ,ಸಲಹೆ,
ಮಾರ್ಗದರ್ಶನದಲ್ಲಿ ಸೇವೆ ಸಲ್ಲಿಸಲು ಇಚ್ಚಿಸಿರುತ್ತೇನೆ" ಎಂದು ಯೋಗಾನಂದ್ ಆತ್ಮ ವಿಶ್ವಾಸ ದಿಂದ ಹೇಳುವಾಗ ಅವರ ಸೇವಾ ಮನೋಭಾವ ಮತ್ತು ಸಾಮಾಜಿಕ ಕಳಕಳಿ ನನ್ನ ಮನಸೆಳೆಯಿತು.
ನಿನ್ನ ಸೇವಾಕೈಂಕರ್ಯ ಹೀಗೆಯೇ ಮುಂದುವರೆಯಲಿ ಗೆಳೆಯ ನಿನ್ನ ಗುರಿಗಳು ಈಡೇರಲಿ ಸಮಾಜಮುಖಿ ಸೇವಾ ಕಾರ್ಯಕ್ರಮಗಳಿಗೆ ನಿಮ್ಮೊಂದಿಗೆ ನಾವಿದ್ದೇವೆ ಶುಭವಾಗಲಿ...
ಸಿಹಿಜೀವಿ ವೆಂಕಟೇಶ್ವರ
ತುಮಕೂರು