25 February 2024

ಆತ್ಮೀಯ ಶಿಕ್ಷಕ, ಶಿಕ್ಷಕಿಯರೆ ದಯವಿಟ್ಟು ಗಮನಿಸಿ...

 


ಆತ್ಮೀಯ ಶಿಕ್ಷಕ, ಶಿಕ್ಷಕಿಯರೆ ದಯವಿಟ್ಟು ಗಮನಿಸಿ...


ಜಾಗತೀಕರಣ, ಆಧುನೀಕರಣ, ಕೈಗಾರಿಕೀಕರಣ, ನಗರೀಕರಣದ ಈ ಕಾಲಘಟ್ಟದಲ್ಲಿ ಮೊಬೈಲ್,ಎ ಐ ,ಟಿ ವಿ ಗಳು ಮತ್ತು ಸಾಮಾಜಿಕ ಮಾದ್ಯಮಗಳ ಅತಿಯಾದ ಬಳಕೆಯ ಈ ಸಂಧಿಕಾಲದಲ್ಲಿ ಶಿಕ್ಷಕರ ಕೆಲಸ ಸವಾಲಿನದು ಎಂದರೆ ತಪ್ಪಾಗಲಾರದು. ಪ್ರಭುತ್ವದ ಕೆಲ ನಿಯಮಗಳು, ಮಕ್ಕಳ ಅತಿಯಾದ ನಕಾರಾತ್ಮಕ ಚಟುವಟಿಕೆಗಳು, ಪೋಷಕರ ಅತಿಯಾದ ಮುದ್ದು ಇವುಗಳ ಪರಿಣಾಮವಾಗಿ ಶಾಲೆಗೆ ಬರುವ ಕೆಲ ಮಕ್ಕಳ ವರ್ತನೆ ಸಾಮಾನ್ಯ ವಿದ್ಯಾರ್ಥಿಗಳ ವರ್ತನೆಯಂತಿರದೆ ಯಾವುದೋ ಬಾಹ್ಯ ಪ್ರಪಂಚದಿಂದ ಪ್ರೇರಣೆಗೊಂಡು ನಿರ್ದೇಶಿತವಾದಂತೆ ಭಾಸವಾಗುತ್ತದೆ. ಇಂತಹ ಸಂಕೀರ್ಣವಾದ ಸಮಯದಲ್ಲಿ ಶಿಕ್ಷಕರಾದ ನಾವು ಇನ್ನೂ ಹೆಚ್ಚಿನ ಜವಾಬ್ದಾರಿ ಮತ್ತು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

 ಮೊನ್ನೆ ಈ ವಿಷಯಕ್ಕೆ ಸಂಬಂಧಿಸಿದಂತೆ ಗೆಳೆಯನೋರ್ವ ಒಂದು ಸಂದೇಶ ಕಳಿಸಿದ್ದ ಅದಕ್ಕೆ ಕೆಲ ನನ್ನ ಮಾತುಗಳನ್ನು ಸೇರಿಸಿರುವೆ.

ಇಂದಿನ ಶಿಕ್ಷಕರಾದ ನಾವು ಅಗತ್ಯವಾಗಿ ಕೆಲ ಅಂಶಗಳನ್ನು ತಿಳಿದಿರಬೇಕು ಹಾಗೂ ನಮ್ಮ ಬೋಧನಾ ಜೀವನದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಪ್ರಯತ್ನ ಮಾಡೋಣ.

ತೀರಾ ಇತ್ತೀಚಿನವರೆಗೆ ಶಿಕ್ಷಕರು ಪ್ರಶ್ನಾತೀತರಾಗಿದ್ದರು. ಆದರೆ ಇಂದು ಅವರನ್ನು ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲರೂ ಪ್ರಶ್ನಿಸಬಹುದು ಎಂದು ತಿಳಿದಿರಲಿ.ಮೊದಲು ಟೀಚಿಂಗ್ ಪ್ರೊಫೆಷನ್ ಈಸ್ ನೋಬಲ್ ಪ್ರೊಫೆಷನ್ ಎಂಬ ಗೌರವವಿತ್ತು.ಆದರೆ  ಶಿಕ್ಷಕ ವೃತ್ತಿ ಇಂದು ಇತರ ವೃತ್ತಿಗಳಂತೆ ಒಂದು ವೃತ್ತಿ ಎಂದು ಕೆಲವರು ಭಾವಿಸಿದ್ದಾರೆ ಎಂಬುದು ನಿಮಗೆ  ಗೊತ್ತಿರಲಿ.ಧರ್ಮ, ಜಾತಿ, ರಾಜಕೀಯ ದಂತಹ ವಿಚಾರಗಳು ಈ ದಿನಗಳಲ್ಲಿ ತೀರಾ ಸೂಕ್ಷ್ಮ ವಿಚಾರಗಳು. ಇಲ್ಲಿ ಹಗ್ಗದ ಮೇಲಿನ ನಡಿಗೆಯಂತಹ ಎಚ್ಚರ ಅಗತ್ಯ ಎಂಬ ಅರಿವಿರಲಿ.

ಈ ಮೇಲಿನ ಎಲ್ಲಾ ಕ್ಷೇತ್ರಗಳಲ್ಲೂ ನಿಮ್ಮ ನಿಲುವು ತಟಸ್ಥವಾಗಿಯೇ ಇರಲಿ.ನಮಗೂ ಖಾಸಗಿ ಬದುಕಿದೆ. ನಮ್ಮ ಖಾಸಗಿ ಬದುಕಿನ ಖಾಸಗಿ ವಿಚಾರಗಳು ಕೂಡಾ ನಮ್ಮ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುತ್ತವೆ ಎಂಬ ಸತ್ಯದ ಅರಿವಿರಲಿ.

ನಮ್ಮ ನಿಯಂತ್ರಣದಲ್ಲಿ  ವಿದ್ಯಾರ್ಥಿ ಸಮುದಾಯ ಇದೆ ಎಂಬ ಭಾವನೆ ಪೂರ್ತಿ ನಿಜವಲ್ಲ. ಅವರನ್ನು ಶಾಲೆಯ ಹೊರಗಿನ ವಿವಿಧ ಶಕ್ತಿಗಳು ವಿವಿಧ ಪರಿಸರ ಕೂಡಾ ನಿಯಂತ್ರಿಸುತ್ತಿರಬಹುದು ಎಂಬ ಅರಿವಿರಲಿ.ನೀವೆಷ್ಟೇ ಸರಿ ಇದ್ದರೂ, ನಿಮ್ಮನ್ನು ವಿರೋಧಿಸುವ ಶಕ್ತಿಯೊಂದು ನಿಮ್ಮ ಪಕ್ಕದಲ್ಲೇ ಇದೆ ಎಂದು ಎಚ್ಚರವಹಿಸಿ. ಯಾಕೆಂದರೆ ನಿಮಗೆ ಸರಿಯೆನಿಸಿದ್ದು ಇತರರ ದೃಷ್ಟಿಯಿಂದ ತಪ್ಪಾಗಿ ಕಾಣಬಹುದು.ಸಂಘರ್ಷ ಮತ್ತು ಸಮನ್ವಯ, ಇವೆರಡರ  ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿ ಎಂಬ ಗೊಂದಲ ಎದುರಾದಾಗ ಸಮನ್ವಯವನ್ನು ಆಯ್ದುಕೊಳ್ಳಿ. ಸಂಘರ್ಷದಿಂದ ಯುದ್ದ ಗೆದ್ದು ನಾವೇನು ಸಾಮ್ರಾಟರಾಗಬೇಕಿಲ್ಲ. ನಮ್ಮ ಭಾವೀ ಸಮಾಜವೂ ಸಮನ್ವಯದ ಜೀವನ ಪದ್ಧತಿಯನ್ನೇ ಕಲಿಯಬೇಕಿದೆ. ಸಮನ್ವಯ ಎಂದರೆ ಶರಣಾಗತಿ ಅಥವಾ ವೀಕ್ನೆಸ್  ಎಂದು ಅರ್ಥವಲ್ಲ. ಇದಕ್ಕಾಗಿ ಮನವೊಲಿಸುವ ಕಲೆ ಯಲ್ಲಿ ಪರಿಣತಿ ಸಾಧಿಸಿ.

ನೀವು ಬೋಧಿಸುವ ವಿಷಯ ಮತ್ತು  ಬೋಧನಾ ವಿಧಾನದ ಬಗ್ಗೆ ಸಾಧ್ಯವಾದಷ್ಟು ಪಾಂಡಿತ್ಯ ಗಳಿಸಿ. ಅಪ್ಡೇಟ್ ಆಗಿ. ಎಷ್ಟೇ ಜ್ಞಾನಿಯಾಗಿದ್ದರೂ ಇನ್ನಷ್ಟು ಕಲಿಯುವ ವಿದ್ಯಾರ್ಥಿಯಾಗಿಯೇ ಮುಂದುವರಿಯಿರಿ.ಕಲಿಕೆ ಗರ್ಭದಿಂದ ಗೋರಿಯವರೆಗೆ ನಿರಂತರ ಎಂಬುದನ್ನು ಮತ್ತೊಂದು ಬಾರಿ ನೆನಪಿಸಿಕೊಳ್ಳಿ.

ನಿಮ್ಮ ಎದುರು ಇರುವ ಮಕ್ಕಳನ್ನು ಅವರು ಸೂಕ್ಷ್ಮ ಸಂವೇದನಾಶೀಲರು ಎಂದೇ ಭಾವಿಸಿ ಭೋಧನೆ ಮಾಡಿ. ಅವರು ವಯಸ್ಸಿನಲ್ಲಿ ನಿಮಗಿಂತ ಚಿಕ್ಕವರಿರಬಹುದು. ಆದರೂ ಇಂದಿನ ಇಂಟರ್ನೆಟ್ ಯುಗದಲ್ಲಿ ಕೆಲವು ವಿಷಯಗಳಲ್ಲಿ ಅವರು ಕಿರಿಯ ಶರೀರ ಧರಿಸಿರುವ ಹಿರಿಯ ಜೀವ  ಆಗಿರುತ್ತಾರೆ ಎಂದು ನೆನಪಿಡಿ.ಮಕ್ಕಳಿಗೆ ನಿಮ್ಮಷ್ಟು ತಿಳಿಯದೇ ಇರಬಹುದು. ಆದರೆ ಅವರು ನಿಮ್ಮನ್ನು ತಿಳಿದಿರುತ್ತಾರೆ ಎಂದು ಅರಿವು ಇರಲಿ.

ವಿದ್ಯಾರ್ಥಿಗಳು ನೀವು ಹೇಳಿದ್ದನ್ನು ಅರ್ಥ ಮಾಡಿಕೊಳ್ಳದೇ ಹೋದರೂ, ನೀವು ಹೇಳದೇ ಇದ್ದುದನ್ನು ಅರ್ಥ ಮಾಡಿಕೊಳ್ಳಲು ತುಂಬಾ ಪ್ರಯತ್ನಿಸುತ್ತಾ ಇರುತ್ತಾರೆ ಎಂಬ ರಹಸ್ಯ ನಿಮಗೆ ಗೊತ್ತಿರಲಿ. ಈಗ ಚಾಟ್ ಜಿ ಪಿ ಟಿ, ಮತ್ತು ಎ ಐ ನಂತಹ ಸಹಾಯಕರು  ಅವರ ಮನೆಯಲ್ಲಿದ್ದಾರೆ.ವಿಷಯ ಜ್ಞಾನ ದೊಂದಿಗೆ ಸಂವಹನ ಕೌಶಲ, ಔದ್ಯೋಗಿಕ ಮಾರ್ಗದರ್ಶನ, ಸಮಸ್ಯೆಗಳ ಪರಿಹಾರದಂತಹ ಜೀವನ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ. ಮತ್ತು ಮೊದಲು ಇವುಗಳನ್ನು ನೀವು ಕಲಿಯಿರಿ.ನೀವು ಕಲಿಸಿದ್ದೆಲ್ಲವನ್ನೂ ಮರೆತರೂ, ಮಕ್ಕಳು ಸದಾ ನಿಮ್ಮನ್ನು ಮರೆಯದೆ ಇರುವಂತಹ ಶಿಕ್ಷಕರಾಗಲು ಪ್ರಯತ್ನಿಸಿ.ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗ‌ವಿಲ್ಲ. ಎಂಬ ಗಾದೆ ಮಾತನ್ನು ಮೌನ ಬಲ್ಲವನಿಗೆ ಜಗಳವಿಲ್ಲ ಎಂಬಂತೆ ಕೊಂಚ ವಿಸ್ತರಿಸಿಕೊಳ್ಳಿ.ನಿಮ್ಮ ಮೌನವೂ ಎಷ್ಟು ಪ್ರಭಾವಶಾಲಿ ಆಗಿರುತ್ತದೆ  ಎಂಬುದನ್ನು ಅನುಭವದಿಂದ ಕಲಿಯಿರಿ.ಪಾಠಕ್ಕೆ ಪೂರಕವಾದ ವಿಷಯಗಳನ್ನು ಪ್ರಸ್ತುತ ಪಡಿಸುವ ಅಗತ್ಯ ಎದುರಾದಾಗ ಇದನ್ನು ಹೇಳದೇ ಇರುವುದು, ಅದನ್ನು ಹೇಳುವುದಕ್ಕಿಂತ ಹೆಚ್ಚು ಪ್ರಯೋಜನಕರ ಎಂದು ಅನಿಸಿದರೆ ಅದನ್ನು ಹೇಳದೇ ಇರುವುದೇ ಉತ್ತಮ ಎಂದು ನೆನಪಿಡಿ.ನಿಮ್ಮ ಸಹೋದ್ಯೋಗಿಗಳು ಮತ್ತು ಮುಖ್ಯಸ್ಥ ರೊಂದಿಗೆ ನಿಮಗೆದುರಾಗುವ ಸಮಸ್ಯೆ ಗಳ ಮತ್ತು ಗೊಂದಲಗಳ ಬಗ್ಗೆ ಚರ್ಚಿಸಿ. ಅವರ ಸಲಹೆ, ಮಾರ್ಗದರ್ಶನ ಪಡೆಯಲು ಹಿಂಜರಿಯಬೇಡಿ.ಎಷ್ಟೇ ಪರಿಣಿತರಿದ್ದರೂ ನಮ್ಮಿಂದ ತಪ್ಪುಗಳು ನಡೆದು ಹೋಗಬಹುದು. ತಪ್ಪುಗಳು ನಡೆದುಹೋದರೆ ಪ್ರಾಂಜಲ ಮನಸ್ಸಿನಿಂದ ಅದನ್ನು ಒಪ್ಪಿಕೊಂಡು ಮುಂದುವರಿಯಿರಿ.

ನಮ್ಮನ್ನು ಟೀಕಿಸುವವರನ್ನು ಹತ್ತಿರ ಇರಿಸಿಕೊಳ್ಳಿ. ಅದರಿಂದ ನಿಮಗೆ ಒಳಿತು ಜಾಸ್ತಿ ಎಂದು ಗೊತ್ತಿರಲಿ.

ಸಮಾಜ ಮತ್ತು ವಿದ್ಯಾರ್ಥಿಗಳು ನಿಮ್ಮ ಯಾವುದೇ ಶಕ್ತಿಗೆ ತಲೆ ಬಾಗದೆ ಹೋದರೂ ನಹಿ ಜ್ಞಾನೇನ ಸದೃಶಂ ಎಂಬಂತೆ ಜ್ಞಾನ ಸಂಪತ್ತಿಗೆ ತಲೆಬಾಗುತ್ತಾರೆ ಎಂಬ ವಿಶ್ವಾಸ ನಿಮ್ಮಲ್ಲಿರಲಿ. ಜ್ಞಾನ ಸಂಪತ್ತಿನ ನೆರವಿನಿಂದ ನೀವು ಎಲ್ಲರ ಗೌರವಾದರಗಳನ್ನು ಖಂಡಿತಾ ಪಡೆಯುತ್ತೀರಿ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗೋಣ.

ಶಿಕ್ಷಕ ವೃತ್ತಿ ಹಿಂದೆಯೂ, ಇಂದಿಗೂ ಮುಂದೆ ಹಾಗೂ ಎಂದೆಂದಿಗೂ ಪವಿತ್ರ ವೃತ್ತಿ ಎಂಬುದನ್ನು ಸಾಬೀತುಪಡಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529.


No comments: