ಮಕ್ಕಳಲ್ಲಿ ಪೌರ ಪ್ರಜ್ಞೆ ಮೂಡಿಸುವ ಸಿ ಎಂ ಸಿ ಎ.
ಇಂದಿನ ಪೋಷಕರು ಮಕ್ಕಳಿಗೆ ಹೇಳುವ ಒಂದೇ ಮಾತು ಜಾಸ್ತಿ ಪರ್ಸೆಂಟೇಜ್ ತೆಗಿ, ಟೈಮ್ ವೇಸ್ಟ್ ಮಾಡಬೇಡ, ಕಲ್ಚರಲ್ ಆಕ್ಟಿವಿಟೀಸ್ ಏನೂ ಬೇಡ ಬರೀ ಓದು ಸಾಕು.
ಹೀಗೆ ಬೆಳೆದ ಮಕ್ಕಳಿಗೆ
ಪ್ರಜಾಪ್ರಭುತ್ವ, ಸರ್ಕಾರ, ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ಬಹುತ್ವ ಇವೆಲ್ಲವೂ ಹೇಗೆ ತಾನೆ ಅರ್ಥವಾಗಬೇಕು?
ಕೆಲ ಶಾಲಾ ಕಾಲೇಜುಗಳಲ್ಲಿ ಈ ಕುರಿತಾದ ಪ್ರಯತ್ನಗಳಾಗಿರುವುದು ಸ್ವಾಗತಾರ್ಹ ಆದರೆ ಅಷ್ಟೊಂದು ವ್ಯಾಪಕವಾಗಿ ಆಗಿಲ್ಲದಿರುವುದು ಅಷ್ಟೇ ಸತ್ಯ. ಈ ನಿಟ್ಟಿನಲ್ಲಿ
ಬೆಂಗಳೂರಿನ ಚಿಲ್ಡ್ರನ್ ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‌ನೆಸ್ ಸಂಸ್ಥೆಯು (ಸಿಎಂಸಿಎ) ಎರಡು ದಶಕಕ್ಕೂ ಹೆಚ್ಚಿನ ಅವಧಿಯಿಂದ ಕೆಲಸ ಮಾಡುತ್ತಿದೆ.
ಐದು ವರ್ಷಗಳ ಹಿಂದೆ ನಾನು ಈ ಸಂಸ್ಥೆಗೆ ಭೇಟಿ ನೀಡಿದ್ದೆ ಆ ಸಂಸ್ಥೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುವ ಮರಳಪ್ಪ ರವರು ಸಂಸ್ಥೆಯ ಕಾರ್ಯ ವಿಧಾನವನ್ನು ವಿವರಿಸಿದ್ದರು.
'ಪಬ್ಲಿಕ್ ಅಫೇರ್ಸ್ ಸೆಂಟರ್' ಸಂಸ್ಥೆಯ ಯೋಜನೆಯಾಗಿ 'ಚಿಲ್ಡ್ರನ್ ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‌ನಸ್' ಹುಟ್ಟು ಪಡೆಯಿತು. ನಂತರದ ದಿನಗಳಲ್ಲಿ ಈ ಯೋಜನೆಯೇ ಸಂಸ್ಥೆಯ ರೂಪ ಪಡೆದುಕೊಂಡಿತು. ಮಂಜುನಾಥ ಸದಾಶಿವ, ವೃಂದಾ ಭಾಸ್ಕರ್ ಹಾಗೂ ಪ್ರಿಯಾ ಕೃಷ್ಣಮೂರ್ತಿ ಅವರು ಸೇರಿ ಈ ಸಂಸ್ಥೆಯನ್ನು 2000ನೇ ಇಸ್ವಿಯಲ್ಲಿ ಹುಟ್ಟುಹಾಕಿದರು.
ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಯಾಗಿಸಲು, ಅವರಲ್ಲಿ ಜೀವನ ಕೌಶಲಗಳನ್ನು ತುಂಬಲು ಈ ಸಂಸ್ಥೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಸಂಸ್ಥೆಯ ಕಾರ್ಯಕರ್ತರು ಶಾಲೆ ಶಾಲೆಗಳಿಗೆ ತೆರಳಿ ಸಂಸ್ಥೆಯ ಕುರಿತು, ಅವರ ಯೋಜನೆಯ ಕುರಿತು ವಿವರಿಸುತ್ತಾರೆ. ಅದು, ಸರ್ಕಾರಿ ಶಾಲೆ ಇರಬಹುದು, ಖಾಸಗಿ ಶಾಲೆ ಇರಬಹುದು. ಶಾಲೆಯು ಒಪ್ಪಿಗೆ ನೀಡಿದರೆ, ಸಂಸ್ಥೆಯು ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸುತ್ತದೆ. ಶಾಲೆಗಳೂ ಖುದ್ದಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು.
6ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಮಕ್ಕಳನ್ನು ಸಂಸ್ಥೆಯು ಮುಖ್ಯ ಗುರಿಯನ್ನಾಗಿಸಿಕೊಂಡಿದೆ. 6ನೇ ತರಗತಿಯ ಒಬ್ಬ ಮಗುವು ಈ ಯೋಜನೆಯ ಭಾಗವಾದರೆ, ಆ ಮಗುವು 10ನೇ ತರಗತಿಗೆ ಬರುವವರೆಗೂ ಸಂಸ್ಥೆಯ ಯೋಜನೆಗಳ ಭಾಗವಾಗಿಯೇ ಇರುತ್ತದೆ. ಶಾಲೆಯೊಂದರಲ್ಲಿ ವಾರಕ್ಕೆ ಒಂದು ತರಗತಿಯನ್ನು ಪ್ರತಿ ತರಗತಿಯ ಮಕ್ಕಳಿಗೆ ಸಂಸ್ಥೆಯು ನಡೆಸುತ್ತದೆ. ತಜ್ಞರ ಮೂಲಕ ಸಂಸ್ಥೆಯು ತನ್ನದೇ ಪಠ್ಯಕ್ರಮವನ್ನೂ ರೂಪಿಸಿಕೊಂಡಿದೆ. ಸಹಾನುಭೂತಿ, ಒಂದು ವಿಷಯದ ಕುರಿತು ವಿಮರ್ಶೆ ಮಾಡುವುದು, ಕ್ರಿಯಾಶೀಲ ವಿಚಾರವಂತಿಕೆಯನ್ನು ಬೆಳೆಸಿಕೊಳ್ಳುವುದು, ಉತ್ತಮ ಸಂವಹನ ಹೀಗೆ ಅನೇಕ ಜೀವನ ಕೌಶಲಗಳನ್ನೂ ಸಂಸ್ಥೆ ಕಲಿಸಿಕೊಡುತ್ತದೆ.
ಪ್ರಾಯೋಗಿಕ ಚಟುವಟಿಕೆಗಳೇ ಸಂಸ್ಥೆಯ ಪಠ್ಯಕ್ರಮ. ಕರ್ನಾಟಕವಲ್ಲದೆ, ತಮಿಳುನಾಡು, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿಯೂ ತನ್ನ ಕಾರ್ಯ ಚಟುವಟಿಕೆಗಳನ್ನು ಸಂಸ್ಥೆ ವಿಸ್ತರಿಸಿ ಕೊಂಡಿದೆ. ತನ್ನೆಲ್ಲಾ ಕಾರ್ಯಚಟು ವಟಿಕೆಗಳನ್ನು ಸಂಸ್ಥೆ ಉಚಿತವಾಗಿ ಮಾಡುತ್ತದೆ. ದಾನಿಗಳ ದೇಣಿಗೆಯೇ ಸಂಸ್ಥೆಯ ಆರ್ಥಿಕ ಬೆನ್ನೆಲುಬು.
ಹಾಗೂ ನಾಗರಿಕ ಸಮಸ್ಯೆಗಳ ಕುರಿತು ತಿಳಿಸಿಕೊಡಲು 'ಸಿಎಂಸಿಎ ಕ್ಲಬ್' ಯೋಜನೆಯನ್ನು ಸಂಸ್ಥೆ ರೂಪಿಸಿದೆ. ಜೊತೆಗೆ, ಸರ್ಕಾರದೊಂದಿಗೆ ಕೈಜೋಡಿಸಿ, ಮಕ್ಕಳ ಗ್ರಾಮ ಸಭೆಗಳನ್ನೂ ಸಂಸ್ಥೆ ಆಯೋಜಿಸುತ್ತದೆ. 'ನನ್ನ ಒಳಿತಿಗಾಗಿ ಗ್ರಂಥಾಲಯ' ಎನ್ನುವ ಯೋಜನೆಯಡಿ, ಗ್ರಾಮದಲ್ಲಿನ ಗ್ರಂಥಾಲಯಕ್ಕೆ ಬರುವಂತೆ ಮಕ್ಕಳನ್ನು ಹುರಿದುಂಬಿಸುತ್ತದೆ. ನಾಗರಿಕ ವಿಷಯಗಳ ಕುರಿತು ಜಾಗೃತಿ ಮೂಡಿಸಲು, ಮಕ್ಕಳಿಂದ ಹಲವು ಚಟುವಟಿಕೆಗಳನ್ನು ಮಾಡಿಸುತ್ತದೆ. ಕಾರ್ಯಚಟುವಟಿಕೆ: ಶಾಲೆಯಲ್ಲಿ ಶೌಚಾಲಯ ಇಲ್ಲದಿದ್ದರೆ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲದಿದ್ದರೆ, ತಮ್ಮ ಮನೆಯ ಎದುರು ಕಸ ಸುರಿಯುತ್ತಿದ್ದರೆ, ಬಾಲ ಕಾರ್ಮಿಕ ಪದ್ಧತಿ ನಡೆಯುತ್ತಿದ್ದರೆ... ಹೀಗೆ ಅನೇಕ ಸಾಮಾಜಿಕ ಸಮಸ್ಯೆಗಳ ಕುರಿತು, ಪರಿಸರ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಹೀಗೆ ಸಿ ಎಮ್ ಸಿಎ ಭವಿಷ್ಯದ ಜವಾಬ್ದಾರಿಯುತ ನಾಗರಿಕರ ನಿರ್ಮಾಣಕ್ಕೆ ಉತ್ತಮ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತವಾಗಿದೆ.ಇವರೊಂದಿಗೆ ಸಮುದಾಯವು ಸಕ್ರಿಯವಾಗಿ ಪಾಲ್ಗೊಂಡು ಸಾರ್ವಜನಿಕರು ಸಹಕಾರ ನೀಡಿದರೆ ಜವಾಬ್ದಾರಿಯುತ ಸಮಾಜ ನಮ್ಮದಾಗುತ್ತದೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
No comments:
Post a Comment