ನಮ್ಮ #ಸಂವಿಧಾನ ನಮ್ಮ ಹೆಮ್ಮೆ..
ಸುಮಾರು ಇನ್ನೂರೈವತ್ತು ವರ್ಷಗಳ ದಾಸ್ಯ ಸಂಕೋಲೆಯಿಂದ 1947 ರಲ್ಲಿ ಮುಕ್ತಿ ಪಡೆದ ಭಾರತಕ್ಕೆ ನಮ್ಮದೇ ಆದ ಸುಶಾಸನ ಮಾಡಿಕೊಂಡು ಆಳ್ವಿಕೆ ಮಾಡುವ ಸಂಧಿ ಸಮಯದಲ್ಲಿ ಪ್ರಪಂಚವೇ ಬೆರಗುಗಣ್ಣಿನಿಂದ ನೋಡುವಂತ ಭಾರತೀಯರೆಲ್ಲ ಹೆಮ್ಮೆ ಪಡುವ ಸಂವಿಧಾನ ರಚನೆ ಮಾಡಿ ತೋರಿಸಿದ್ದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ.
ಇಂತಹ ಮಹಾನ್ ಸಂವಿಧಾನ ರಚನೆಯಲ್ಲಿ ಡಾ ಬಾಬು ರಾಜೇಂದ್ರ ಪ್ರಸಾದ್ ಅಧ್ಯಕತೆಯಲ್ಲಿ ಮುನ್ನೂರಕ್ಕೂ ಹೆಚ್ಚು ಸದಸ್ಯರು ವಿವಿದ ಕ್ಷೇತ್ರಗಳನ್ನು ಪ್ರತಿನಿಧಿಸಿ ಭಾಗವಹಿಸಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.
ಅದರಲ್ಲೂ ಕರಡು ಸಮಿತಿಯ ಅಧ್ಯಕ್ಷರಾದ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿ "ಸಂವಿಧಾನದ ಶಿಲ್ಪಿ " ಎಂದು ಮಾನ್ಯರಾಗಿದ್ದಾರೆ.
ಸುದೀರ್ಘವಾದ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಬ್ರಿಟಿಷರು ತೀರ್ಮಾನಿಸಿದರು.
ಕ್ಲಿಮೆಂಟ್ ಆಟ್ಲಿ ಎಂಬಾತ ಬ್ರಿಟಿಷ್ ಪ್ರಧಾನಮಂತ್ರಿಯಾದರು. ಅವರು 1946ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಭರವಸೆಯನ್ನು ಹಾಗೂ ಅದಕ್ಕೆ ಪೂರಕವಾಗಿ ಸಂವಿಧಾನ ಸಭೆಯನ್ನು ರಚಿಸಿಕೊಳ್ಳಲು ಅನುಮತಿಯನ್ನು ನೀಡಿದರು.
ಅದರಂತೆ 1946ರಲ್ಲಿ ಚುನಾವಣೆಯ ಮೂಲಕ 389 ಮುಖಂಡರನ್ನೊಳಗೊಂಡ ಒಂದು ಸಂವಿಧಾನ ಸಭೆಯನ್ನು ರಚಿಸಲಾಯಿತು. (ಮುಂದೆ ಈ ಸಭೆಯ ಸದಸ್ಯರ ಸಂಖ್ಯೆ 299ಕ್ಕೆ ಇಳಿಯಿತು.) ಇದರಲ್ಲಿ ಪ್ರಮುಖ ರಾಜಕೀಯ ಮುಖಂಡರು, ಕಾಂಗ್ರೆಸ್ ಪಕ್ಷದವರು, ಕಮ್ಯುನಿಷ್ಟರು. ಸಮಾಜವಾದಿಗಳು, ಕೈಗಾರಿಕೋದ್ಯಮಿಗಳು, ಕಾರ್ಮಿಕ ಸಂಘಗಳ ಪ್ರತಿನಿಧಿಗಳು, ವಿಭಿನ್ನ ಆರ್ಥಿಕ ಮತ್ತು ರಾಜಕೀಯ ಸಿದ್ಧಾಂತಗಳವರು, ಭಿನ್ನ ಪಂಥಗಳಿಗೆ ಸೇರಿದವರು, ಹಿಂದುಗಳು. ಮುಸಲ್ಮಾನರು, ಕ್ರಿಶ್ಚಿಯನ್ನರು, ಪಾರ್ಸಿಗಳು, ನಾಸ್ತಿಕರು ಮತ್ತು ವಿಭಿನ್ನ ಸಾಮಾಜಿಕ ವರ್ಗಗಳಿಗೆ ಸೇರಿದವರು. ಶ್ರೀಮಂತರು, ಮಧ್ಯಮ ವರ್ಗದವರು. ಹಿಂದುಳಿದ ವರ್ಗದವರು. ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದವರು ಎಲ್ಲರೂ ಈ ಸಮಿತಿಯಲ್ಲಿದ್ದರು.
ಆಸ್ಟ್ರೇಲಿಯಾ, ಕೆನಡಾ ,ಐರ್ಲೆಂಡ್, ಜಪಾನ್ , ರಷ್ಯಾ, ಅಮೇರಿಕಾ ಇಂಗ್ಲೆಂಡ್, ಜರ್ಮನಿ ,ಪ್ರಾನ್ಸ್ ಮುಂತಾದ ಇಪ್ಪತ್ತಕ್ಕೂ ಹೆಚ್ಚು ದೇಶಗಳ ಸಂವಿಧಾನಗಳನ್ನು ಆಧ್ಯಯನ ಮಾಡಿ ಅವುಗಳ ಉತ್ಕೃಷ್ಟ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿಕೊಳ್ಳುವಲ್ಲಿ ಅಂಬೇಡ್ಕರ್ ರವರ ಪಾತ್ರ ಪ್ರಮುಖವಾದುದು.
2 ವರ್ಷ, 11 ತಿಂಗಳು18 ದಿನಗಳ ಕಠಿಣ ಕಾರ್ಯದ ಫಲವಾಗಿ 1949 ನವೆಂಬರ್ 26 ರಂದು ನಮ್ಮ ಸಂವಿಧಾನವನ್ನು ಅಂಗೀಕರಿಸೆದೆವು.ಆ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್26 ನ್ನು ಸಂವಿಧಾನ ದಿನ ವನ್ನಾಗಿ ಆಚರಿಸಲಾಗುತ್ತದೆ.
ಜನವರಿ 26 1950 ರಂದು ನಮ್ಮ ಸಂವಿಧಾನವು ಅಧಿಕೃತವಾಗಿ ಜಾರಿಗೆ ಬಂದ ದಿನವನ್ನು ಪ್ರತಿ ವರ್ಷ ಗಣತಂತ್ರ ದಿನ ವಾಗಿ ಆಚರಿಸಲಾಗುತ್ತದೆ.
ನಮ್ಮ ಸಂವಿಧಾನದ ಮಹತ್ವ...
ಭಾರತ ಸಂವಿಧಾನವು ಭಾರತದ ಪ್ರಜೆಗಳಾದ ನಾವು... ಎಂಬ ಪ್ರಾರಂಭಿಕ ವಾಕ್ಯದೊಂದಿಗೆ ಪ್ರಾರಂಭವಾಗುವುದು. ಸಂವಿಧಾನದ ಪೂರ್ವಪೀಠಿಕೆಯು ಸಂವಿಧಾನದ ಪೂರ್ಣ ಸಾರಾಂಶವಾಗಿದೆ. ಭಾರತ ಸಂವಿಧಾನದ ಫಲವಾಗಿ, ಭಾರತದಲ್ಲಿ ವಂಶಪಾರಂಪರಿಕ ಆಡಳಿತ ಕೊನೆಗೊಂಡು ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಜಾರಿಯಾಗಿದೆ.
ಭಾರತ ಸಂವಿಧಾನವು ಭಾರತದ ತಳಮಟ್ಟದ ಜನರಿಂದ ಹಿಡಿದು ಮೇಲ್ಮಟ್ಟದ ಜನರವರೆಗೆ ಸಾಮಾಜಿಕ ನ್ಯಾಯ, ಆರ್ಥಿಕ ಸಬಲೀಕರಣ, ರಾಜಕೀಯ ಪ್ರಾತಿನಿಧ್ಯವನ್ನು ನೀಡುವ ಮೂಲಕ ಅವರನ್ನು ಸಶಕ್ತಗೊಳಿಸುವ ಆಶಯವನ್ನು ಹೊಂದಿದೆ.
ಭಾರತ ಒಂದು ವೈವಿಧ್ಯತೆಯಿಂದ ಕೂಡಿದ ರಾಷ್ಟ್ರ ಇಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕೃತಿಗಳು ಆಚರಣೆಯಲ್ಲಿವೆ. ವೈವಿಧ್ಯತೆಯಲ್ಲೂ ಏಕತೆಯನ್ನು ಸಾಧಿಸಿ, ಪ್ರತಿಯೊಬ್ಬ ಪ್ರಜೆಯ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿ ಆ ಮೂಲಕ ನಮ್ಮ ಸಂವಿಧಾನವು ಶ್ರೇಷ್ಠತೆಯನ್ನು ಸಾಧಿಸಿದೆ.
ಮತದಾನದ ಹಕ್ಕಿನ ಮೂಲಕ ಪ್ರಜೆಗಳೆಲ್ಲರೂ ರಾಜಕೀಯ ಹಕ್ಕನ್ನು ಪಡೆದು, ತಮ್ಮ ಮತದಾನದ ಮೂಲಕ ತಮ್ಮ ಆಯ್ಕೆಯ ಪ್ರತಿನಿಧಿಯನ್ನು ಆರಿಸುವ ಹಕ್ಕನ್ನು ಇಂದು ಸಂವಿಧಾನ ನೀಡಿದೆ.
ಮಹಿಳೆಯರು ಮತ್ತು ಮಕ್ಕಳ ಶಿಕ್ಷಣದ ಕುರಿತಾಗಿ ಹೇಳುವುದಾದರೆ ಸಂವಿಧಾನ ಪೂರ್ವದಲ್ಲಿ ಎಲ್ಲ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ದೊರೆಯುತ್ತಿರಲಿಲ್ಲ. ಭಾರತ ಸಂವಿಧಾನದಲ್ಲಿ ಸರ್ವರಿಗೂ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರತಿಯೊಂದು ಸಮಾಜದ ಮಹಿಳೆಯರು ಮತ್ತು ಮಕ್ಕಳು ಇಂದು ಉಚಿತ ಶಿಕ್ಷಣವನ್ನು ಪಡೆದು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಂವಿಧಾನ ಅನುವು ಮಾಡಿಕೊಟ್ಟಿದೆ.
ಭಾರತದ ಎಲ್ಲ ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಯು ಸಂವಿಧಾನದ ಮೂಲ ಆಶಯ ಮತ್ತು ಮೂಲ ಆಧಾರವಾಗಿದೆ.
ಭಾರತ ಸ್ವಾತಂತ್ರ್ಯಗೊಂಡು ಎಪ್ಪತ್ತೈದು ವರ್ಷಗಳ ಪೂರೈಸಿದ ಈ ಅಮೃತ ಕಾಲದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಸಂವಿಧಾನದ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
No comments:
Post a Comment