25 February 2024

ಗುರುವೇ ನಮಃ

 ಗುರುವೇ ನಮಃ 


ಗುರು ಬ್ರಹ್ಮ ಗುರು ವಿಷ್ಣು ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಂಬ ಉಕ್ತಿಯಂತೆ ಶಿಕ್ಷಕರಿಗೆ ದೇವರ ಸ್ಥಾನ ನೀಡಲಾಗಿದೆ. ಆಧುನೀಕರಣ ಹಾಗೂ ಇತರ ಕಾರಣದಿಂದಾಗಿ ಅಲ್ಲಲ್ಲಿ ಶಿಕ್ಷಕರ ಬಗ್ಗೆ ಕೆಲ ನಕಾರಾತ್ಮಕ ಸುದ್ದಿಗಳು ಬಿತ್ತರವಾಗುತ್ತಿದ್ದರೂ  ಇಂದಿಗೂ ಗುರುಗಳಿಗೆ ತನ್ನದೇ ಆದ ಸ್ಥಾನವಿದೆ.ಈ ಕೆಳಗಿನ ಘಟನೆ ಗುರುವಿನ ಮಹತ್ವ ಸಾರುತ್ತದೆ. 


ಒಮ್ಮೆ ಡಾ.ವಿ ಕೃ   ಗೋಕಾಕರು ರೈಲಿನಲ್ಲಿ ಪ್ರವಾಸ ಮಾಡುತ್ತಿದ್ದರು.

ರಾತ್ರಿ ಪ್ರವಾಸ­ವಾದ್ದರಿಂದ ಪೈಜಾಮಾ, ಶರ್ಟು ಹಾಕಿಕೊಂಡಿದ್ದರು. ಮಲಗುವ ಮುನ್ನ ಶರ್ಟು ತೆಗೆದಿಟ್ಟು ಬನಿಯನ್ ನೊಂದಿಗೆ ಮಲಗಿದ್ದರು. ಬೆಳಿಗ್ಗೆ ಎಚ್ಚರವಾದಾಗ ರೈಲು ಒಂದು ನಿಲ್ದಾಣದಲ್ಲಿ ನಿಂತಿತ್ತು. ಗೋಕಾಕರು ಕಿಟಕಿಯಿಂದ ಆಚೆ ನೋಡಿ ಹತ್ತಿರದಲ್ಲೇ ಚಹಾದ ಅಂಗಡಿ ಇರುವು­ದನ್ನು ಕಂಡರು. ಚಹಾ ಕುಡಿಯ­ಬೇಕೆಂದು ಅವಸರದಿಂದ ಪೈಜಾಮಾದ ಜೇಬಿನಲ್ಲಿ ಎರಡು ರೂಪಾಯಿ ಹಾಕಿ­ಕೊಂಡು ಕೆಳಗಿಳಿದರು. ನೇರವಾಗಿ ಚಹಾದ ಅಂಗಡಿಗೆ ನಡೆದು ಚಹಾ ಆರ್ಡರ್ ಮಾಡಿದರು.


ಚಹಾ ಕುಡಿಯುತ್ತಿದ್ದಂತೆ ರೈಲು ಹೊರಡ­ತೊಡಗಿತು. ಇವರು ಗಾಬರಿಯಿಂದ ಚಹಾ ಕುಡಿಯುವುದನ್ನು ಬಿಟ್ಟು ರೈಲಿನ ಕಡೆಗೆ ಓಡಿದರು. ಆದರೆ ರೈಲು ಹೊರಡುತ್ತ ವೇಗವನ್ನು ಪಡೆದುಕೊಳ್ಳ­ತೊಡಗಿತು. ಇವರು ಎಷ್ಟೇ ಧಾವಂತ­ದಿಂದ ಓಡಿದರೂ ರೈಲು ಮುಂದೆ ಹೋಗಿಯೇ ಬಿಟ್ಟಿತು! ಡಾ. ಗೋಕಾಕ­ರಿಗೆ ಈಗ ಫಜೀತಿ. ಹಾಕಿಕೊಳ್ಳಲು ಬಟ್ಟೆಯಿಲ್ಲ, ಹಣವೂ ಇಲ್ಲ. ಇದ­ರೊಂದಿಗೆ ತಾವು ಹೊರಟಿದ್ದ ಮಹತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗಲಾಗುವುದಿಲ್ಲ.


ಇನ್ನೇನು ಮಾಡು­ವುದು ಎಂದು ಚಿಂತಿಸುವಷ್ಟರಲ್ಲಿ ರೈಲು ಪ್ಲಾಟ್‌ಫಾರ್ಮ್‌ ದಾಟಿಯಾಗಿತ್ತು. ಇವರು ಹತಾಶರಾಗಿ ನಿಂತಿದ್ದಾಗ ಒಂದು ಆಶ್ಚರ್ಯಕರ ಸಂಗತಿ ಘಟಿಸಿತು! ಹೊರಟಿದ್ದ ರೈಲು ನಿಂತಿತು. ಇವರು ನೋಡುತ್ತಿದ್ದಂತೆ ಹಿಂದೆ ಹಿಂದೆ ಬರತೊಡಗಿತು! ರೈಲಿನ ಗಾರ್ಡ್ ಇದ್ದ ಬೋಗಿ ಪ್ಲಾಟ್ ಫಾರ್ಮ್  ಮೇಲೆ ಬಂದೊಡನೆ ಅದರಲ್ಲಿದ್ದ ಗಾರ್ಡ್ ಹೊರಗೆ ಹಾರಿಕೊಂಡ. ಗೋಕಾಕರು ನೋಡುತ್ತಿರುವಂತೆ ಆತ ಓಡಿಬಂದು ಅವರ ಕಾಲು ಮುಟ್ಟಿ ನಮಸ್ಕರಿಸಿದ!


ಇವರು ಬೆರಗಿನಲ್ಲಿದ್ದಂತೆಯೇ ಅತ ಹೇಳಿದ  ‘ಸರ್, ನಾನು ಕರ್ನಾಟಕ ಕಾಲೇಜಿನಲ್ಲಿ ನಿಮ್ಮ ವಿದ್ಯಾರ್ಥಿ­ಯಾಗಿದ್ದೆ. ನಾನು ಬಿ.ಎ. ಓದುತ್ತಿರು­ವಾಗ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿ­ದ್ದೆನೆಂದು ನೀವು ಮೂರು ವರ್ಷ ಡಿಬಾರ್ ಮಾಡಿಸಿದ್ದಿರಿ’. ‘ಹೌದಲ್ಲ, ನೀನು ಮೆನೆಜಿಸ್ ಅಲ್ಲವೇ?’ ಕೇಳಿದರು ಗೋಕಾಕ. ‘ಹೌದು ಸರ್, ಡಿಬಾರ್ ಮಾಡಿದ್ದು ನಿಮ್ಮ ತಪ್ಪಲ್ಲ ಸರ್, ಅದು ನನ್ನ ತಪ್ಪಿಗೆ ಶಿಕ್ಷೆ. ಆದರೆ ಆಮೇಲೆ ನಾನು ತಮ್ಮನ್ನು ಕಂಡು ಕ್ಷಮೆ ಕೇಳಿ ಪರಿಶ್ರಮ­ದಿಂದ ಓದಿದೆ. ನಂತರ ನೀವು ನನ್ನ ಡಿಬಾರ್ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಿದಿರಿ. ಮರುವರ್ಷ ನಾನು ಪರೀಕ್ಷೆಗೆ ಕುಳಿತು ಪಾಸಾದೆ. ನನಗೆ ಈ ಗಾರ್ಡ್‌ ಕೆಲಸ ದೊರಕಿತು. ಸರ್, ಇಂದಿಗೂ ನಾನು ತಮ್ಮ ಇಂಗ್ಲೀಷ್ ತರಗತಿಗಳನ್ನು ಮರೆತಿಲ್ಲ’ ಎಂದ ಗಾರ್ಡ್‌ ಮೆನೆಜಿಸ್.


ಗೋಕಾಕರು ನಿರಾಳವಾಗಿ ರೈಲನ್ನೇರಿ ಪ್ರವಾಸ ಮುಂದುವರೆಸಿದರು. ಆದರ್ಶ ಶಿಕ್ಷಕರು ಏನೆಲ್ಲ ಮಾಡಬಹುದು. ವಿದ್ಯಾರ್ಥಿ­ಗಳನ್ನು ವಿಷಯದಲ್ಲಿ ಹೇಗೆ ಪ್ರೋತ್ಸಾ­­ಹಿಸಬಹುದು, ಅವರ ಬದುಕಿಗೆ ಮಾರ್ಗದರ್ಶನ ನೀಡಬಹುದು, ಸಮಾಜದಲ್ಲಿ ಪರಿವರ್ತನೆ ತರಬ­ಹುದು. ಇದೆಲ್ಲದರ ಜೊತೆಗೆ ಮುಂದೆ ಹೋದ ರೈಲನ್ನು ಕೂಡ ಮರಳಿ ಪ್ಲಾಟಫಾರ್ಮ್‌ಗೆ ತರಬಹುದು.

 ಒಬ್ಬ ಆದರ್ಶ ಶಿಕ್ಷಕ  ಮಕ್ಕಳಿಗೆ ಸ್ಪೂರ್ತಿ ಚೈತನ್ಯ ವನ್ನು ತುಂಬ್ತಾನೆ. ಮಕ್ಕಳ ಮನಸ್ಸನ್ನು ಅರಿತು ಅವರೊಡನೆ ಬೆರೆತು ನಿರಂತರ ವಿದ್ಯಾರ್ಥಿಯಾಗಿರುತ್ತಾನೆ.

ಉತ್ತಮ ಸಮಾಜದ ರೂವಾರಿಯಾಗಿರುತ್ತಾನೆ. 


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


No comments: