ಆರ್ಟಿಕಲ್ 370 ...
ಪ್ರಕಾಶಕ ಮತ್ತು ಲೇಖಕರಾದ ಗೆಳೆಯ ಶಂಕರಾನಂದ್ ರವರ ಜೊತೆಯಲ್ಲಿ ಇತ್ತೀಚೆಗೆ ಐನಾಕ್ಸ್ ಥಿಯೇಟರ್ ನಲ್ಲಿ ಆರ್ಟಿಕಲ್ 370 ಚಿತ್ರ ವೀಕ್ಷಿಸಿದೆ.
ತುಮಕೂರಿನಲ್ಲಿ ಐನಾಕ್ಸ್ ಆರಂಭವಾದ ತರುವಾಯ ಕನ್ನಡ ಸೇರಿ ಹಿಂದಿ, ತೆಲುಗು,ಇಂಗ್ಲಿಷ್, ತಮಿಳು ಹೀಗೆ ವಿವಿಧ ಭಾಷೆಯ ಎಲ್ಲಾ ಜಾನರ್ ಸಿನಿಮಾ ನೋಡಿದ್ದರೂ ರಾಜಕೀಯ ಜ್ಞಾನ ನೀಡುವ ,ದೇಶದ ಭದ್ರತಾ ವಿಷಯ ಮತ್ತು ಏಕತೆಯ ಸಂದೇಶ ಸಾರುವ ಈ ಚಿತ್ರ ಗಮನಾರ್ಹವಾದದು ಎಂದು ನನಗನಿಸಿತು.
2016 ರಿಂದ 2019 ರವರೆಗೆ ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವ ಹಿನ್ನೆಲೆಯಲ್ಲಿ ನಡೆದ ಅನೇಕ ಘಟನೆಗಳನ್ನು ಒಟ್ಟುಗೂಡಿಸಿ. ಉತ್ತಮ ಸ್ಕ್ರೀನ್ ಪ್ಲೇ ಮೂಲಕ ನಮಗೆ ಚಿತ್ರವನ್ನು ಸಮರ್ಪಕವಾಗಿ ತಲುಪಿಸಿದ ಚಿತ್ರತಂಡಕ್ಕೆ ಒಂದು ಮೆಚ್ಚುಗೆ ಹೇಳಲೇಬೇಕು.
ಜೋನಿ ಹಕ್ಸರ್ ಎಂಬ ಗುಪ್ತಚರ ಅಧಿಕಾರಿಯ ಡಿ ಗ್ಲಾಮ್ ಪಾತ್ರದಲ್ಲಿ ಯಾಮಿ ಗೌತಮಿ ಅತ್ಯುತ್ತಮ ಅಭಿನಯ ನೀಡಿದ್ದಾರೆ. ತನ್ನ ತಂದೆಯ ಅಸಹಜ ಸಾವು ನೆನೆದು ಹಾಗೂ ಜೀವದ ಗೆಳೆಯ ಅಸುನೀಗಿದ ಸಮಯದಲ್ಲಿ ನೋವಿನಿಂದ ಬಳಲುವ ಅಭಿನಯ ಗಮನ ಸೆಳೆಯುತ್ತದೆ. ತಮಿಳುನಾಡು ಮೂಲದ ಗೃಹ ಕಾರ್ಯದರ್ಶಿಯಾಗಿ ಪ್ರಿಯ ಮಣಿಯವರದು ಪ್ರಬುದ್ದ ಅಭಿನಯ.370ನೇ ವಿಧಿಯ ರದ್ದತಿಗೆ ಕಾರಣವಾಗುವ ಘಟನೆಗಳನ್ನು ಬಹಳ ಚಾಕಚಕ್ಯತೆಯಿಂದ ನಿರ್ವಹಿಸುವಲ್ಲಿ ನಿರ್ದೇಶಕರಾದ
ಆದಿತ್ಯ ಸುಹಾಸ್ ಜಂಬಳೆರವರು ಪ್ರಿಯಾಮಣಿ
ಅವರಿಂದ ಉತ್ತಮ ಅಭಿನಯ ತೆಗೆದಿದ್ದಾರೆ.
ಒಂದೆಡೆ ಬಿಲ್ ಮಂಡನೆಯ ಹಿನ್ನೆಲೆಯಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳು, ಕಣಿವೆಯಲ್ಲಿ ನಡೆವ ಉಗ್ರ ಚಟುವಟಿಕೆಗಳು, ಅವುಗಳನ್ನು ನಿಭಾಯಿಸಲು ಪಿ ಎಂ ಓ ಕಛೇರಿಯ ಕಾರ್ಯಾಚರಣೆ ಇವುಗಳು ಕೆಲವೊಮ್ಮೆ ನಮಗೆ ಜ್ಞಾನದ ಜೊತೆಯಲ್ಲಿ ಆಕ್ಷನ್ ಥ್ರಿಲ್ಲರ್ ರೀತಿಯಲ್ಲಿ ನಮ್ಮನ್ನು ನಮ್ಮ ಆಸನದ ತುದಿಯಲ್ಲಿ ಇರಿಸುತ್ತದೆ.
ಇನ್ನೂ ಚಿತ್ರದ ಸಂಕಲನ ಬಹಳ ಚುರುಕಾಗಿರುವುದರಿಂದ ಸಿನಿಮಾ ನಿಮೆಗೆಲ್ಲಿಯೂ ಬೋರ್ ಆಗುವುದಿಲ್ಲ
ವಿಶೇಷವಾಗಿ 370 ನೇ ವಿಧಿಯ ಕಾನೂನು ಅಂಶಗಳ ಚರ್ಚೆಯ ಸಮಯದಲ್ಲಿ ಕ್ಯಾಮರಾ ಕೆಲಸ ಮತ್ತು ಹಿನ್ನೆಲೆಯ ಸಂಗೀತವು ಶ್ಲಾಘನೀಯವಾಗಿದೆ.
ಚಿತ್ರ ನೋಡಿ ಥಿಯೇಟರ್ ನಿಂದ ಹೊರ ಬರುವಾಗ ಕಾಲೇಜು ವಿದ್ಯಾರ್ಥಿಗಳು ಬಿಲ್ ಅನ್ನು ರಾಜ್ಯ ಸಭೆಯಲ್ಲಿ ಮಂಡಿಸಿದ ರೀತಿ, ಅಲ್ಲಿ ನಡೆದ ಚರ್ಚೆಯ ಪ್ರಮುಖಾಂಶಗಳ ಬಗ್ಗೆ ಮಾತನಾಡುವುದನ್ನು ಕೇಳಿಸಿಕೊಂಡ ನನಗೆ ನಿಜಕ್ಕೂ ಇದೊಂದು ಕಾಡುವ ಸಿನಿಮಾ ಎಂದನಿಸಿತು. ಬಿಲ್ ಮಂಡನೆಯ ಹಿನ್ನೆಲೆ, ಕಾನೂನಿನ ಜ್ಞಾನ, ಭದ್ರತೆ ,ಮುಂತಾದ ವಿಷಯಗಳು ಎಷ್ಟು ಮುಖ್ಯ ಎಂಬುದನ್ನು ರಾಜ್ಯಶಾಸ್ತ್ರದ ವಿದ್ಯಾರ್ಥಿಗಳು ಮತ್ತು ರಾಜಕೀಯ ಆಸಕ್ತರು ಈ ಸಿನಿಮಾ ನೋಡಿದರೆ ಒಂದು ನಿರ್ದಿಷ್ಟ ಜ್ಞಾನ ಲಭಿಸುತ್ತದೆ.ಒಟ್ಟಾರೆ ಹೇಳುವುದಾದರೆ ನಮ್ಮ ದೇಶದ ಎಲ್ಲ ನಾಗರಿಕರು ನೋಡಲೇಬೇಕಾದ ಚಿತ್ರ ಇದು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment