ತನ್ನಂತೆ ಪರರ ಬಗೆದೊಡೆ ಕೈಲಾಸ.
ಮಾನವ ಸಂಘಜೀವಿ. ನಮ್ಮ ನೆಮ್ಮದಿಗೆ ಸಹಜೀವನ,ಸಹಕಾರ ಅಪೇಕ್ಷಣೀಯವಾದರೂ ಮಾನವ ಸಹಜ ಗುಣಗಳಾದ ಮತ್ಸರ, ಸ್ವಾರ್ಥ ಸದಾ ಇಣುಕಿ ನಮ್ಮ ಮತ್ತು ಸಮಾಜದ ನೆಮ್ಮದಿ ಹಾಳು ಮಾಡಿಬಿಡುತ್ತವೆ.
ಒಂದು ದಿನ ಯಮಧರ್ಮರಾಯ ಒಂದು ವ್ಯಕ್ತಿಯ ಪ್ರಾಣವನ್ನು ಕೊಂಡೊಯ್ಯಲು ಭೂಮಿಗೆ ಬಂದ. ಆದರೆ ಪ್ರಾಣ ಕೊಂಡೊಯ್ಯಬೇಕಾಗಿದ್ದ ವ್ಯಕ್ತಿಯೇ ಯಮಧರ್ಮನಿಗೆ ಎದುರಾದ. ಯಮನಿಗೆ ಭೂಲೋಕ ಸುತ್ತಿ ಸುತ್ತಿ ದಾಹವಾಗಿತ್ತು. ಅವನಿಗೆ ಕುಡಿಯಲು ನೀರು ಕೇಳುತ್ತಾನೆ. ಸಾಯಬೇಕಾಗಿರುವ ವ್ಯಕ್ತಿಯೇ ನೀರು ಕೊಟ್ಟು ದಾಹ ತೀರಿಸುತ್ತಾನೆ.
ಆದರೆ ಯಮ ಕೊಂಡೊಯ್ಯಬೇಕಾದ ವ್ಯಕ್ತಿ ಅವನೇ ಎಂದು ತಿಳಿದು ಒಂದು ವರ ಕೊಡುತ್ತಾನೆ. ಏನೆಂದರೆ ಒಂದು ಹಣೆಬರಹದ ಪುಸ್ತಕ ಕೊಟ್ಟು ಇದರಲ್ಲಿ ನಿನಗೆ ಅಂತ ಒಂದು ಹಾಳೆ ಇದೆ. ನಿನಗೆ ಏನು ಬೇಕೋ ಅದನ್ನು ಬರೆದುಕೊ. ನೀನು ಏನು ಬರೆದುಕೊಂಡರೂ ನೆರವೇರುವುದು. ಇದರಲ್ಲಿ ಸಂಶಯವಿಲ್ಲ. ಆದರೆ ನೀನು ಬರೆದುಕೊಳ್ಳಲು ನಿನಗೆ ಐದು ನಿಮಿಷ ಮಾತ್ರ ಸಮಯ, ಆ ಐದು ನಿಮಿಷವೇ ನಿನಗೇ ಅತ್ಯಮೂಲ್ಯ. ಆ ಐದು ನಿಮಿಷ ದಾಟಿದ ನಂತರ ನಿನ್ನ ಹಣೆಬರಹ ಹೇಗಿರುತ್ತೋ ಹಾಗಾಗುವುದು ಎಂದು ಹೇಳಿ ಒಂದು ಪುಸ್ತಕ ಕೊಡುತ್ತಾನೆ.
ಆ ವ್ಯಕ್ತಿ ಪುಸ್ತಕ ತೆಗೆದ ತಕ್ಷಣ ಮೊದಲ ಪುಟ ಓದುತ್ತಾನೆ.ಅದರಲ್ಲಿ ನಿನ್ನ ಸ್ನೇಹಿತ ವಿದೇಶಕ್ಕೆ ಹೋಗುತ್ತಾನೆ ಎಂದಿರುತ್ತದೆ. ಅದಕ್ಕೆ ಅವನು ವಿದೇಶಕ್ಕೆ ಹೋಗಬಾರದೆಂದು ಬರೆದು ತಡೆಯುತ್ತಾನೆ.ಮತ್ತೊಂದು ಪುಟ ತೆರೆಯುತ್ತಾನೆ ಅದರಲ್ಲಿ ಮತ್ತೊಬ್ಬ ಸ್ನೇಹಿತ ಲಕ್ಷಗಟ್ಟಲೆ ಲಾಟರಿ ಗೆಲ್ಲುತ್ತಾನೆಂದಿರುತ್ತದೆ. ಅವನಿಗೆ ಲಾಟರಿ ಸಿಗಬಾರದು ಎಂದು ಬರೆಯುತ್ತಾನೆ.
ಮತ್ತೊಂದು ಪುಟ ತೆರೆಯುತ್ತಾನೆ. ಅದರಲ್ಲಿ ಅವನ ಆಪ್ತ ಗೆಳತಿ ಆಗರ್ಭ ಶ್ರೀಮಂತನನ್ನು ಮದುವೆಯಾಗುತ್ತಾಳೆ ಎಂದಿರುತ್ತದೆ.ಆಪ್ತ ಗೆಳತಿ ಆಗರ್ಭ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗಬಾರದೆಂದು ಬರೆಯುತ್ತಾನೆ.
ಮತ್ತೊಂದು ಪುಟ ತೆರೆಯುತ್ತಾನೆ. ಪಕ್ಕದ ಮನೆಯ ರೈತ ಬೆಳೆದ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಿ ಸಿರಿವಂತನಾಗುತ್ತಾನೆಂದು ಇರುತ್ತದೆ. ಅವನು ಸಿರಿವಂತ ನಾಗಬಾರದು ಎಂದು ಬರೆಯುತ್ತಾನೆ. ಕೊನೆಯ ಹಾಳೆ ತೆರೆಯುತ್ತಾನೆ. ಅದು ಖಾಲಿ ಹಾಳೆಯಾಗಿರುತ್ತದೆ. ಅದರಲ್ಲಿ ಬರೆಯಬೇಕೆನ್ನುವಷ್ಟರಲ್ಲಿ ಯಮ ಆ ಪುಸ್ತಕವನ್ನು ಕಸಿದುಕೊಳ್ಳುತ್ತಾನೆ. ಏಕೆಂದರೆ ಅವನಿಗೆ ಕೊಟ್ಟ ಐದು ನಿಮಿಷದ ಗಡುವು ಮುಗಿದು ಹೋಗಿರುತ್ತದೆ. ಆಗ ಯಮ ಹೇಳುತ್ತಾನೆ, "ನಿನ್ನ ಆಯಸ್ಸು ಮುಗಿದಿದೆ ನಡೆ" ಎಂದು. ಆಗ ಆ ವ್ಯಕ್ತಿ ಹೇಳುತ್ತಾನೆ ನನಗೆ ಅಂತ ನಾ ಏನು ಬರೆದುಕೊಳ್ಳಲಿಲ್ಲ ಎಂದು. ಆಗ ಯಮ ಹೇಳುತ್ತಾನೆ ನಿಮಗೆ ಅಂತ ಒಂದಷ್ಟು ವರ್ಷ ಆಯಸ್ಸು ಕೊಟ್ಟಿರುತ್ತೇವೆ. ಅದರಲ್ಲೂ ವರವೆಂದು ಒಂದೈದು ನಿಮಿಷ ಆಯಸ್ಸು ಕೊಟ್ಟರೂ ನಿಮ್ಮಬಗ್ಗೆ ಯೋಚಿಸದೆ ಪರರ ಅವನತಿಯ ಬಗ್ಗೆ ಯೋಚಿಸುತ್ತೀರಾ ಎಂದರೆ ಏನು ಹೇಳೋಣ?
ಜೀವನವಿಡೀ ಕೊಟ್ಟರು ನೀವೇನೆಂದು ತಿಳಿಯದೆ ಪರರ ಬಗ್ಗೆ ಆಲೋಚಿಸುವವರಿಗೆ ಇಲ್ಲಿಬದುಕುವ ಹಕ್ಕಿಲ್ಲವೆಂದು ಕರೆದೊಯ್ದುಬಿಡುತ್ತಾನೆ.
ನಮಗೆ ಅಂತ ಒಂದಷ್ಟು ಹಾಳೆಗಳಿವೆ.ನಮಗೆ ಅಂತ ಒಂದಷ್ಟು ದಿನಗಳಿವೆ.
ನಮಗೆ ಅಂತ ಒಂದು ಬದುಕಿದೆ.
ನಮಗೆ ಅಂತ ಒಂದು ದಾರಿಯಿದೆ.
ನಮಗೆ ಅಂತ ಏನಿದಿಯೋ ಅದು ಸನ್ಮಾರ್ಗದಲ್ಲಿರಲಿ ಅದು ಬಿಟ್ಟು ಪರರ ಬಗ್ಗೆ ಅಸೂಯೆ ಪಡುವುದು ತರವಲ್ಲ. ಸರ್ವೇ ಜನಾಃ ಸುಖಿನೋಭವಂತು ಎಂಬ ಭಾವನೆ ನಮ್ಮದಾಗಲಿ.ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ .ಅಲ್ಲವೇ?
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
No comments:
Post a Comment