ಮರೆಯಲಾಗದ ನಾಗರ ಹೊಳೆ ಸಫಾರಿ
ಕಳೆದ ವರ್ಷ ಇದೇ ದಿನ ನೀನು ನಿನ್ನ ಸಹೋದ್ಯೋಗಿಗಳ ಜೊತೆಯಲ್ಲಿ ನಾಗರ ಹೊಳೆ ಪ್ರವಾಸದಲ್ಲಿ ಖುಷಿಯಲ್ಲಿದ್ದೆ ಎಂದು ಮುಖಪುಟ ನೆನಪಿಸಿತು.
ಹೌದು ಕೆಲಸದ ಏಕತಾನತೆ ನಿವಾರಿಸಲು ನಮ್ಮ ಮುಖ್ಯ ಶಿಕ್ಷಕರು ಮತ್ತು ಸಹೋದ್ಯೋಗಿಗಳ ಜೊತೆಯಲ್ಲಿ ಒಂದು ದಿನದ ಪ್ರವಾಸ ಹೊರಟೆವು. ಅಂದು ನಾವು ನಾಗರ ಹೊಳೆ ಅಭಯಾರಣ್ಯದ ಸೊಗಸಾದ ಚಿತ್ರಗಳನ್ನು ಕಣ್ತುಂಬಿಕೊಂಡೆವು.
ಕರ್ನಾಟಕದ ಮೈಸೂರಿನ ತಪ್ಪಲಿನಲ್ಲಿ ಮತ್ತು ತಮಿಳುನಾಡಿನ ನೀಲಗಿರಿ ಪರ್ವತಗಳ ನಡುವೆ ಇರುವ ನಾಗರ ಹೊಳೆ 640 ಚದರ ಕಿ.ಮೀ. ಇದ್ದು ಹಲವಾರು ರೀತಿಯ ವನ್ಯಜೀವಿಗಳಿಗೆ ನೆಲೆಯಾಗಿರುವ ಅಭಯಾರಣ್ಯ. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವು ಕರ್ನಾಟಕದ ಪ್ರಮುಖ ಹುಲಿ ಮೀಸಲು ಪ್ರದೇಶವಾಗಿದೆ ಮತ್ತು ಇದು ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್ ಅಡಿಯಲ್ಲಿ ಸಂರಕ್ಷಣೆಯ ಪ್ರಮುಖ ಕೇಂದ್ರವಾಗಿದೆ. ಈ ಅಭಯಾರಣ್ಯವು ವಿಶ್ವದ ಅತಿದೊಡ್ಡ ಏಷ್ಯಾಟಿಕ್ ಆನೆಗಳ ಹಿಂಡಿಗೆ ಆತಿಥ್ಯ ವಹಿಸಿದೆ ಮತ್ತು ಅಸಂಖ್ಯಾತ ಜಾತಿಯ ಪಕ್ಷಿಗಳು, ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲವನ್ನು ದೊಡ್ಡ ಕ್ರೂರ ಪ್ರಾಣಿಗಳು , ಸರೀಸೃಪಗಳು, ಕಾಡೆಮ್ಮೆ , ಜಿಂಕೆ, ಕರಡಿಗಳು ಮತ್ತು ಸಣ್ಣ ಪ್ರಾಣಿಗಳನ್ನು ಒಳಗೊಂಡಿದೆ .
ಕರ್ನಾಟಕದ ಪ್ರಮುಖ ಹುಲಿ ಮೀಸಲು ಪ್ರದೇಶವಾದ ನಾಗರ ಹೊಳೆ ವನ್ಯಜೀವಿ ಉತ್ಸಾಹಿಗಳು ಮತ್ತು ಛಾಯಾಗ್ರಾಹಕರಿಗೆ ಭೇಟಿ ನೀಡಲೇಬೇಕಾದ ರಾಷ್ಟ್ರೀಯ ಉದ್ಯಾನವನವಾಗಿದೆ. ಏಕೆಂದರೆ ಅರಣ್ಯ ಸಫಾರಿಯಲ್ಲಿ ಬಂಗಾಳ ಹುಲಿಗಳು ಮತ್ತು ಏಷ್ಯಾಟಿಕ್ ಆನೆಗಳನ್ನು ತಮ್ಮ ಸ್ವಾಭಾವಿಕ ಸ್ಥಳಗಳಲ್ಲಿ ನೋಡಬಹುದು ಎಂದು ನಮ್ಮ ಸ್ನೇಹಿತರು ಹೇಳಿದ್ದರು. ಅದಕ್ಕೆ ನಮ್ಮ ಕ್ಯಾಮೆರಾ ಸಿದ್ದವಾಗಿಟ್ಟು ಕೊಂಡು ನಿಧಾನವಾಗಿ ಸಾಗುವ ನಮ್ಮ ಟೆಂಪೋ ಟ್ರಾವೆಲ್ ನಲ್ಲಿ ಮೈಯೆಲ್ಲಾ ಕಣ್ಣಾಗಿ ನೋಡುತ್ತಿದ್ದೆವು.ಆದರೆ ನಮಗೆ ಹುಲಿರಾಯ ಕಾಣಿಸಲೇ ಇಲ್ಲ. ಜಿಂಕೆಗಳ ದಂಡು, ನರಿಗಳು, ಒಂದೆರಡು ಆನೆಗಳು ನಮ್ಮ ಕ್ಯಾಮೆರಾಗಳಲ್ಲಿ ಸೆರೆಯಾದದ್ದು ಸಮಾಧಾನಕರ.ನಮ್ಮ ಸಹೋದ್ಯೋಗಿಮಿತ್ರರಾದ ಕೋಟೆ ಕುಮಾರ್ ರವರು ನಮ್ಮ ಇಡೀ ಸಫಾರಿಯನ್ನು ತಮ್ಮ ಕ್ಯಾಮರಾದಲ್ಲಿ ವೀಡಿಯೋ ಮಾಡಿದ್ದರು.
ನಾಗರ ಹೊಳೆ ರಾಷ್ಟ್ರೀಯ ಉದ್ಯಾನವು ಹೆಚ್ಚಿನ ಸಂಖ್ಯೆಯ ಕಾಡು ನಾಯಿಗಳು, ಚಿರತೆಗಳು ಮತ್ತು ಕರಡಿಗಳಿಗೆ ನೆಲೆಯಾಗಿದೆ. ಕಾಡೆಮ್ಮೆ, ಕಾಡು ಹಂದಿ, ಸಾಂಬಾರ್ ಜಿಂಕೆ, ಕೃಷ್ಣ ಮೃಗ, ಚುಕ್ಕೆ ಜಿಂಕೆಗಳು ಮತ್ತು ಹಲವಾರು ಜಾತಿಯ ಪಕ್ಷಿಗಳು ಸಾಮಾನ್ಯವಾಗಿ ಗುರುತಿಸ್ಪಡುವ ಸಸ್ಯಹಾರಿ ಪ್ರಾಣಿಗಳು. ನಮಗೂ ಹಲ ಜಾತಿಯ ಪಕ್ಷಿಗಳ ದರ್ಶನವಾಯಿತು.
ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನವು 300ಕ್ಕೂ ಹೆಚ್ಚು ಪ್ರಭೇದಗಳಿಗೆ ಸೇರಿದ ಪಕ್ಷಿಗಳಿಗೆ ಆಶ್ರಯ ನೀಡಿದೆ ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಹೇಳಿದರು. ಆದರೆ ನಮಗೆ ಕಂಡಿದ್ದು ಕೆಲ ಪ್ರಭೇದಗಳು ಮಾತ್ರ ಎಂದು ಬೇಸರದಿ ನುಡಿದಾಗ ಎಲ್ಲಾ ಪ್ರಬೇಧಗಳನ್ನು ನೋಡಲು ಪಕ್ಷಿ ವೀಕ್ಷಕರಿಗೆ ಕ್ಯಾಂಪ್ ಮಾಡಲಾಗುವುದು ಆಗ ಬನ್ನಿ ಎಂದರು.
ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ತೇಗದ ಮರಗಳು ಮತ್ತು ರೋಸ್‌ವುಡ್‌ನ ಸಮೃದ್ಧ ಸಂಗ್ರಹವಿದೆ.ನಾವು ಚಲಿಸುವ ರಸ್ತೆಯ ಮಾರ್ಗದ ಇಕ್ಕೆಲಗಳಲ್ಲಿ ಒಣಗಿ ಬಿದ್ದ ಮರಗಳು ಒಂದೊಂದು ಕಲಾಕೃತಿಗಳಂತೆ ಕಂಡವು.
ನಾವು ನಾಗರ ಹೊಳೆ ಕಾಡಿನ ಮಧ್ಯ ಹಾದು ಹೋಗುವಾಗ ಗಮನಿಸಿದ ಮತ್ತೊಂದು ಅಂಶವೆಂದರೆ ಅಲ್ಲಲ್ಲಿ ಕಾಣುವ ಬುಡಕಟ್ಟು ಜನಾಂಗದವರ ಮನೆಗಳು! ಹಾಗೂ ಶಾಲೆ ,ವನ್ಯಜೀವಿಗಳು ಮತ್ತು ಪ್ರಕೃತಿಯೊಂದಿಗೆ ಅವರು ಹೇಗೆ ಹೊಂದಿಕೊಂಡು ಜೀವಿಸುತ್ತಿದ್ದಾರೆ ಎಂದು ಮನದಲ್ಲಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.ನಾವೇಕೆ ಬರೀ ಕಾಂಕ್ರೀಟ್ ಕಾಡನ್ನು ಬೆಳೆಸುತ್ತಾ ಅದನ್ನೇ ಅಭಿವೃದ್ಧಿ ಎಂಬ ಭ್ರಮೆಯಲ್ಲಿದ್ದೇವೆ ಎಂದು ಪ್ರಶ್ನಿಸಿಕೊಂಡೆ.ನಮ್ಮ ಟೆಂಪೋ ಟ್ರಾವೆಲರ್ ಸಾಕಷ್ಟು ಹೊಗೆ ಉಗುಳುತ್ತಾ, ಸದ್ದು ಮಾಡುತ್ತಾ ನಾಗರ ಹೊಳೆ ಅಭಯಾರಣ್ಯದಿಂದ ಹೊರಗೆ ಚಲಿಸಿತು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
No comments:
Post a Comment