19 November 2024

ಮುತ್ತಿನಂಥಹ ಮಾತು..


 

#ಮುತ್ತಿನಂಥಮಾತು..

ಸಂಬಂಧಗಳು ಯಾವಾಗಲೂ ಆಗಿರಬೇಕು ಶ್ರೀಗಂಧ|
ಹಲವಾರು ತುಂಡುಗಳಾದರೂ
ಬೀರುತ್ತಿರಬೇಕು  ಸುಗಂಧ||

ಸಿಹಿಜೀವಿ ವೆಂಕಟೇಶ್ವರ..
#sihijeeviVenkateshwara
#personaldevelopment #quotes #articlewriting #tumkur

15 November 2024

ಬಿರ್ಸಾಮುಂಡಾ_ಜಯಂತಿ


 



#ಬಿರ್ಸಾಮುಂಡಾ_ಜಯಂತಿ 


"ಅಬುವಾ ರಾಜ್ ಅತೆ ಜನ, ಮಹಾರಾಣಿ ರಾಜ್ ತುಂಡು ಜನ" ಇದು ಬಿರ್ಸಾ ಬುಡಕಟ್ಟು ಭಾಷೆಯ ವಾಕ್ಯ. "ರಾಣಿಯ ಆಡಳಿತವನ್ನು ರದ್ದುಗೊಳಿಸಿ ನಮ್ಮ ಆಡಳಿತವನ್ನು ಸ್ಥಾಪಿಸಿ" ಎಂಬ ಅರ್ಥದ ಘೋಷವಾಕ್ಯ ನೀಡಿದ,  ನಮ್ಮ ರಾಜ್ಯ, ನಮ್ಮ ಆಡಳಿತ ಎಂದು ಗುಡುಗಿದ, ಜಾರ್ಖಂಡ್ ಭೂಮಿಯಿಂದ ಬಂದ  ಭಾರತೀಯ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಲಕ್ಷಾಂತರ ಬುಡಕಟ್ಟು ಜನರಿಗೆ ಸ್ಫೂರ್ತಿಯ ಚೇತನವೇ ಬಿರ್ಸಾ ಮುಂಡ!


ಇಂದು ಬಿರ್ಸಾ ಮುಂಡಾ ರವರ 150 ನೇ ಜಯಂತಿ.  ಪ್ರಕೃತಿ ಪ್ರೇಮಕ್ಕೆ ಈ ವ್ಯಕ್ತಿ ನಿದರ್ಶನವಾಗಿದ್ದು, ನೀರು, ಕಾಡು, ಭೂಮಿ ಎಂದಾಗ ಇಂದಿಗೂ ಜನ ಇವರನ್ನು ನೆನಪಿಸಿಕೊಳ್ಳುತ್ತಾರೆ. 


ಬಿರ್ಸಾ ಮುಂಡಾ ಯುವ ಸ್ವಾತಂತ್ರ್ಯ ಹೋರಾಟಗಾರ ಮತ್ತು ಬುಡಕಟ್ಟು ಸಮುದಾಯದ ನಾಯಕ. ಬಿರ್ಸಾ ಮುಂಡಾ ಮುಂಡಾ ಬುಡಕಟ್ಟಿಗೆ ಸೇರಿದವರು. ಅವರು 1875 ರ ನವೆಂಬರ್ 15 ರಂದು ಜಾರ್ಖಂಡ್ನಲ್ಲಿ ಜನಿಸಿದರು . ಬಿರ್ಸಾ 'ಉಲ್ಗುಲಾನ್' ಅಥವಾ 'ದಿ ಗ್ರೇಟ್ ಟುಮಲ್ಟ್' ಎಂಬ ಚಳವಳಿಯನ್ನು ಆರಂಭಿಸಿದರು. ಆ ಸಮಯದಲ್ಲಿ ಜನರು ಅವರನ್ನು "ಧರ್ತಿ ಅಬ್ಬಾ" ಎಂದು ಕರೆಯುತ್ತಿದ್ದರು, ಅಂದರೆ "ಭೂಮಿಯ ತಂದೆ". ಅವರು ಬ್ರಿಟಿಷ್ ಮಿಷನರಿಗಳು ಮತ್ತು ಅವರ ಮತಾಂತರ ಚಟುವಟಿಕೆಗಳ ವಿರುದ್ಧ ಪ್ರಮುಖ ಧಾರ್ಮಿಕ ಚಳುವಳಿಯನ್ನು ರಚಿಸಿದರು. ಮುಖ್ಯವಾಗಿ ಮುಂಡಾ ಮತ್ತು ಓರಾನ್ ಬುಡಕಟ್ಟು ಸಮುದಾಯಗಳ ಜನರ ಸಹಾಯದಿಂದ ಕ್ರಿಶ್ಚಿಯನ್ ಮಿಷನರಿಗಳ ಧಾರ್ಮಿಕ ಪರಿವರ್ತನೆ ಚಟುವಟಿಕೆಗಳ ವಿರುದ್ಧ ಅವರು ಬಂಡಾಯವೆದ್ದರು. ನೀರು, ಅರಣ್ಯ, ಭೂಮಿ ಮತ್ತು ಆದಿವಾಸಿಗಳಿಗೆ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ.


ಬಿರ್ಸಾ ಮುಂಡಾ ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಆಂದೋಲನ ನಡೆಸಿದ್ದರು. ಜಮೀನ್ದಾರಿ ಪದ್ಧತಿ ಮತ್ತು ಬ್ರಿಟಿಷರ ಆಡಳಿತದ ವಿರುದ್ಧ ದೊಡ್ಡ ಹೋರಾಟ ನಡೆಸಿದರು. ಬಿರ್ಸಾ ಮುಂಡಾ ಆದಿವಾಸಿಗಳಿಗೆ ನೀರು, ಕಾಡುಗಳನ್ನು ರಕ್ಷಿಸಲು ಸ್ಫೂರ್ತಿ ನೀಡಿದರು ಮತ್ತು ಉಲ್ಗುಲಾನ್ ಎಂಬ ಚಳವಳಿಯನ್ನು ಪ್ರಾರಂಭಿಸಿದರು. ಈ ಚಳುವಳಿ ಬ್ರಿಟಿಷ್ ಆಡಳಿತ ಮತ್ತು ಮಿಷನರಿಗಳ ವಿರುದ್ಧವಾಗಿತ್ತು.


ಬಿರ್ಸಾ ಮುಂಡಾ ರವರು "ಅಬುವಾ ಡಿಶುಂ ಅಬುವಾ ರಾಜ್" ಎಂಬ ಘೋಷಣೆಯನ್ನು ನೀಡಿದ್ದರು. ಅವರು ಅಬುವಾ ರಾಜ್ ಅತೆ ಜನ, ಮಹಾರಾಣಿ ರಾಜ್ ತುಂಡು ಜನ" ಅಂದರೆ "ರಾಣಿಯ ಆಡಳಿತವನ್ನು ರದ್ದುಗೊಳಿಸಿ ನಮ್ಮ ಆಡಳಿತವನ್ನು ಸ್ಥಾಪಿಸಿ" ಎಂದು ಹೇಳಿದರು. ನಮ್ಮ ರಾಜ್ಯ, ನಮ್ಮ ಆಡಳಿತ ಎಂದರ್ಥ. ಇದು ಜಾರ್ಖಂಡ್ ಭೂಮಿಯಿಂದ ಬಂದ ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ ಲಕ್ಷಾಂತರ ಬುಡಕಟ್ಟು ಜನರಿಗೆ ಸ್ಫೂರ್ತಿಯ ಮೂಲವಾಗಿತ್ತು.

ಬಿರ್ಸಾ ಮುಂಡಾರವರು ಇನ್ನೂ ಹಲವಾರು ಘೋಷಣೆ ನೀಡಿ ಅವುಗಳನ್ನು ಕಾರ್ಯರೂಪಕ್ಕೆ  ತರಲು ಬಹಳ ಶ್ರಮಿಸಿದರು. ಅವರ ಇತರೆ ಘೋಷಣೆಗಳೆಂದರೆ 

"ವಿಜಯವು ಹೋರಾಟದ ಮೂಲಕ ಮಾತ್ರ ಬರುತ್ತದೆ, ಶರಣಾಗತಿಯ ಮೂಲಕ ಅಲ್ಲ." 

"ನಮ್ಮ ಮಾತೃಭೂಮಿಯನ್ನು ರಕ್ಷಿಸುವುದು ನಮ್ಮ ಕರ್ತವ್ಯ." 

"ಶಿಕ್ಷಣ, ಹೋರಾಟ ಮತ್ತು ಏಕತೆಯ ಮೂಲಕ ಮಾತ್ರ ನಾವು ನಮ್ಮ ಹಕ್ಕುಗಳನ್ನು ಸಾಧಿಸಬಹುದು." 


ಬಿರ್ಸಾ ಮುಂಡಾರವರ 150ನೇ ಜನ್ಮ ದಿನದ ಪ್ರಯುಕ್ತ ಸರ್ಕಾರಗಳು ದೇಶಾದ್ಯಂತ ಅವರ ಜಯಂತಿ ಆಚರಿಸುವ ಮೂಲಕ ಗೌರವ ಸೂಚಿಸುತ್ತಿರುವುದು ಬಹಳ ಉತ್ತಮ ಕಾರ್ಯ. ಇದರ ಜೊತೆಯಲ್ಲಿ ದೇಶಾದ್ಯಂತ ಶಾಲಾ ಕಾಲೇಜುಗಳಲ್ಲಿ ಮುಂಡಾರವ ಬಗ್ಗೆ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಯುವ ಜನರಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ತುತ್ಯಾರ್ಹ.

ಇಂತಹ ಮಹಾನ್ ಚೇತನಕ್ಕೆ ನಾವು ಇಂದು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಾ ನಮ್ಮ ಸ್ವಾತಂತ್ರ್ಯ ಹೋರಾಟಕ್ಕಾಗಿ ಮಡಿದ ಸಾವಿರಾರು ಹುತಾತ್ಮರ ನೆನಯೋಣ..


ಸಿಹಿಜೀವಿ ವೆಂಕಟೇಶ್ವರ

ತುಮಕೂರು.


#sihijeeviVenkateshwara 

#ಬಿರ್ಸಾಮುಂಡ #BirsaMunda #BirsaMundaJayanti #JanjatiyaGauravDiwasv

12 November 2024

ಒಳಿತಿಗೆ ಸಾವಿಲ್ಲ...


 


ಒಳಿತಿಗೆ ಸಾವಿಲ್ಲ...


ಇಂದು ಆಳಾಗಿದ್ದವ ನಾಳೆ ಅರಸನಾಗಬಹುದು.ಅರಸ ಭಿಕ್ಷೆ ಬೇಡುವ ಸ್ಥಿತಿ ಬರಬಹುದು. ಯಾರಿಗೂ ಯಾವುದೂ ಶಾಶ್ವತವಲ್ಲ ಇದನ್ನರಿತು ನಾವು ಬಾಳಬೇಕು. ನಮ್ಮ ನಡವಳಿಕೆಗಳು ನಮ್ಮ ಒಳ್ಳೆಯತನ ನಮ್ಮ ವ್ಯಕ್ತಿತ್ವದ ಭಾಗವಾಗಿರುತ್ತವೆ.ಇದಕ್ಕೆ ಪೂರಕವಾದ ಒಂದು ಕಥೆ ಓದಿ..


ಒಂದು ಕುಟುಂಬವಿತ್ತು. ಇಬ್ಬರೂ ಮಕ್ಕಳು. ಇಬ್ಬರು ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಒಟ್ಟಿಗೆ ಕುಳಿತರು. ಅಂದರೆ ಹಿರಿಯವನು ದಡ್ಡನಾಗಿದ್ದು, ಅನುತ್ತೀರ್ಣನಾಗಿ ಬಂದಿದ್ದನು. ತಮ್ಮ ಬುದ್ಧಿವಂತ. ಫಲಿತಾಂಶ ಬಂದಿತ್ತು. ತಂದೆ ಇಬ್ಬರಿಗೂ ಹಣ ನೀಡಿ ಪಾಸಾದಲ್ಲಿ ಸಿಹಿ ಹಂಚಿ ಎಂದು ಹೇಳಿದನು. ಫಲಿತಾಂಶ ಈಗಿನಂತೆ ಆಗ ಇರಲಿಲ್ಲ. ಆಗ ನೋಟಿಸ್ ಬೋರ್ಡ್ ನಲ್ಲಿ ಹಾಕುತ್ತಿದ್ದರು. ಇಬ್ಬರು ಶಾಲೆಗೆ ಹೋದರು. ಅಣ್ಣ ಫಲಿತಾಂಶ ನೋಡಿದ, ತಮ್ಮ ಶಾಲೆಗೆ ಪ್ರಥಮ ಬಂದಿದ್ದನು. ಅಣ್ಣನಿಗೆ ಎಷ್ಟು ಸಂತೋಷ ಎಂದರೆ ಇಡೀ ಶಾಲೆಗೆ ತಮ್ಮ ಪ್ರಥಮ ಎಂದು ಸಿಹಿ ಖರೀದಿಸಿ ಎಲ್ಲರಿಗೂ ಹಂಚುತ್ತಿದ್ದ. ಎಲ್ಲರೂ ಕೇಳುತ್ತಿದ್ದರು ಏನಪ್ಪಾ ಪಾಸಾದೆ ಏನು?. ಅದಕ್ಕೆ ಆತ ಹೇಳುತ್ತಿದ್ದ, ನನ್ನ ತಮ್ಮ ಇಡೀ ಶಾಲೆಗೆ ಪ್ರಥಮ ಎಂದು. ಅದಕ್ಕೆ ಅವರೆಲ್ಲರೂ ಇವನೊಬ್ಬ ಹುಚ್ಚ ಎನ್ನುತ್ತಿದ್ದರು. ಇಲ್ಲಿ ತಮ್ಮ ಫಲಿತಾಂಶ ನೋಡಿದ, ತಾನು ಶಾಲೆಗೆ ಪ್ರಥಮ ಬಂದಿದ್ದನ್ನು ನೋಡಿ ಸಂತೋಷವಾಯಿತು. ನಂತರ ಅಣ್ಣನ ಫಲಿತಾಂಶ ನೋಡಿದ ಆತನ ಹೆಸರು, ನೊಂದಣಿ ಸಂಖ್ಯೆ ಇರಲಿಲ್ಲ. ಆತನಿಗೆ ಅಣ್ಣನ ಬಗ್ಗೆ ಅಷ್ಟು ತಾತ್ಸಾರವಾಯಿತು. ಊರಿನ ತುಂಬಾ ಅಣ್ಣ ಅನುತ್ತೀರ್ಣ ಎಂದು ಹೇಳುತ್ತಾ ಹೊರಟಿದ್ದನು. ಇಬ್ಬರು ಮನೆಗೆ ಬಂದರು ತಂದೆ ನೋಡಿದ ಅಣ್ಣನ ಕೈಯಲ್ಲಿ ಸಿಹಿ ಇತ್ತು. ತಂದೆ ಇಬ್ಬರೂ ಪಾಸಾಗಿದ್ದಾರೆಂದು ಭಾವಿಸಿ, ಒಳ್ಳೆಯದು ಇಬ್ಬರೂ ಪಾಸಾಗಿದ್ದರಲ್ಲ ಬಹಳ ಸಂತೋಷವಾಯಿತು ಎಂದನು. ಆಗ ಅಣ್ಣ ಹೇಳಿದ ನನ್ನ ತಮ್ಮ ಶಾಲೆಗೆ ಪ್ರಥಮ ಬಂದಿದ್ದಾನೆ, ಅದಕ್ಕೆ ನಾನು ಸಿಹಿ ಹಂಚಿದ್ದೇನೆ ಎಂದು. ತಮ್ಮ ಹೇಳಿದ ಅಣ್ಣ ಅನುತೀರ್ಣನಾಗಿದ್ದಾನೆ ಎಂದು. ಆಗ ತಂದೆ ಹೇಳಿದನು, "ಏನೋ ಇಷ್ಟು ದಡ್ಡ. ನೀನು ಫೇಲ್ ಆಗಿದ್ದು ಸಿಹಿ ಹಂಚುತ್ತಿದ್ದೀಯಲ್ಲ" ಎಂದನು. ಆಗ ಅಣ್ಣ ತಂದೆಗೆ ಹೇಳಿದ, "ನನ್ನ ತಮ್ಮ ಶಾಲೆಗೆ ಪ್ರಥಮ ಬಂದಿದ್ದಾನೆ. ಅದಕ್ಕಿಂತ ದೊಡ್ಡ ಸಂತೋಷ ಎಲ್ಲಿದೆ...? ಅಣ್ಣ ಶಾಲೆಗೆ ಹೋಗಿ ಮುಖ್ಯ ಶಿಕ್ಷಕರಿಗೆ ಸಿಹಿ ನೀಡಿದ. ಈತ ಫೇಲ್ ಆಗಿರುವುದು ಮುಖ್ಯ ಶಿಕ್ಷಕರಿಗೆ ಗೊತ್ತಿತ್ತು. ಸಿಹಿ ಪಡೆದು ಹೇಳಿದರು... "ನಿನ್ನ ತಮ್ಮನಂತವರು ನೂರು ಜನ ಹುಟ್ಟುತ್ತಾರೆ. ನಿನಗೆ ನಾನು ವಿದ್ಯೆ ಕೊಡಬಹುದು. ಇಂತಹ ಹೃದಯ ಕೊಡಲು ಸಾಧ್ಯವಿಲ್ಲ." ಎಂದು ಹೇಳಿ ಆತನನ್ನು ಕರೆಸಿ ವಿದ್ಯೆ ನೀಡಿದರು. ಮುಂದೆ ಆತ ದೊಡ್ಡ ಸಂತನಾದನು. ಅಣ್ಣನ ಹೆಸರು ಎಲ್ಲಾ ಕಡೆ ಪ್ರಸಾರವಾಯಿತು. ತಮ್ಮನ ಹೆಸರು ಎಲ್ಲೂ ಇರಲಿಲ್ಲ.  


 ಸಿಹಿಜೀವಿ ವೆಂಕಟೇಶ್ವರ

ತುಮಕೂರು

05 November 2024

ದುಃಖ ನಿವಾರಣೆ ನಮ್ಮ ‌ಕೈಯಲ್ಲಿಯೇ ಇದೆ..


 




ದುಃಖ ನಿವಾರಣೆ ನಮ್ಮ ‌ಕೈಯಲ್ಲಿಯೇ ಇದೆ.. 


ಸುಖ ದುಃಖಗಳು ಒಂದೇ ನಾಣ್ಯದ ಎರಡು ಮುಖಗಳು ಸುಖ ಬಂದಾಗ ಹಿಗ್ಗಿ ಕಷ್ಟಗಳು ಬಂದಾಗ ದುಃಖದಿಂದ ಕನಲಿ ಬಿಡುತ್ತೇವೆ.ಎಲ್ಲೋ ಕೆಲ‌ ಸಾಧಕರು ಮಾತ್ರ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ ಸ್ಥಿತ ಪ್ರಜ್ಞರಾಗಿರುತ್ತಾರೆ. ಪ್ರತಿಯೊಬ್ಬರೂ ದುಃಖವನ್ನು ಸ್ವೀಕರಿಸುವ ಬಗೆ ವಿಭಿನ್ನ

ಅದರ ಆಧಾರದ ಮೇಲೆ ನಮ್ಮ ವ್ಯಕ್ತಿತ್ವ  ನಿರ್ಧಾರವಾಗುತ್ತದೆ.


ಎಂದಿನಂತೆ ಆ ಸಾಧು ಧ್ಯಾನಾಸಕ್ತನಾಗಿ ಕೂತಿದ್ದ. ಒಬ್ಬ ಮನುಷ್ಯ ಬಂದು ಆತನ ಪಾದಮುಟ್ಟಿ ನಮಸ್ಕರಿಸಿದ. ಮೆಲ್ಲಗೆ ಕಣ್ಣುಬಿಟ್ಟು ಎದುರಿಗಿದ್ದವನನ್ನು ನೋಡಿದ ಸಾಧು.

“ಏನು ಮಗು ಬಂದದ್ದು? ನೋಡಿದರೆ ತುಂಬ ದುಃಖದಲ್ಲಿರುವಂತಿದೆ? ಕರುಣೆಯಿಂದ ಕೇಳಿದ.

“ಹೌದು ಸ್ವಾಮಿ. ನೋವುಗಳಿಂದ ತತ್ತರಿಸಿ ಹೋಗಿದ್ದೇನೆ. ವ್ಯಕ್ತಿ ಕಂಬನಿದುಂಬಿ ಉತ್ತರಿಸಿದ.

“ಮಗು, ನಿನ್ನ ನೋವು ಏನೆಂದು ನನಗೆ ಗೊತ್ತಿಲ್ಲ. ಆದರೆ ಎಷ್ಟು ಎಂಬುದು ಮುಖದ ಮೇಲೆ ಕಾಣುತ್ತಿದೆ. ಸಂತೈಸಿಕೋ ಮಗೂ.

“ಅದೇ ನನಗೆ ತಿಳಿಯುತ್ತಿಲ್ಲ ಸ್ವಾಮಿ  ಹಾಗಾಗಿಯೇ ನಿಮ್ಮ ಬಳಿ ಬಂದೆ. ನೋವನ್ನು ನಿವಾರಿಸಿಕೊಳ್ಳಲು ಏನು ಮಾಡಲಿ?” ಎಂದು ಕೇಳಿದ 

“ಅದನ್ನು ಅವರವರೇ ತಿಳಿದುಕೊಳ್ಳಬೇಕು. ನಿನ್ನ ನೋವನ್ನಂತು ನಾನು ಕಿತ್ತುಕೊಳ್ಳಲಾರೆ ಅಲ್ಲವೇ? ನೋಡು ಮಗು, ಜೀವನದಲ್ಲಿ ದುಃಖ ಎಲ್ಲರಿಗೂ ಬರುತ್ತದೆ. ಅವರವರು ತೆಗೆದುಕೊಳ್ಳುವ ರೀತಿ, ತಡೆದುಕೊಳ್ಳುವ ರೀತಿ, ಬೇರೆ ಬೇರೆ. ನನಗೆ ತಿಳಿದದ್ದನ್ನು ಹೇಳುತ್ತೇನೆ. ನಿನಗೆ ಏನಾದರೂ ಉಪಯೋಗವಾದೀತೋ ನೋಡೋಣ.

ನೋಡು ಮಗೂ, ಕೆಲವರಿಗೆ ಈ ದುಃಖವೆಂಬುದು ಕಲ್ಲಿನ ಮೇಲೆ ಗೆರೆ ಕೊರೆದ ಹಾಗೆ ಉಳಿದುಬಿಡುತ್ತದೆ. ಮರೆಯುವುದೇ ಇಲ್ಲ. ಬೇರೆ ಕೆಲವರಿಗೆ ನೋವುಗಳು ಸಮುದ್ರತೀರದ ಮರಳಿನ ಮೇಲೆ ಗೆರೆ ಎಳೆದಂತೆ  ಸ್ವಲ್ಪ ಹೊತ್ತು ಮಾತ್ರ ಇರುತ್ತದೆ. ಅಲೆತೇಲಿ ಬಂದು ಅದನ್ನು ಒರೆಸಿಕೊಂಡು ಹೋಗುವವರೆಗೆ! ಕೆಲವರಿಗಂತು ಅದು ನೀರಿನ ಮೇಲೆ ಗೆರೆ ಬರೆದಂತೆ ಬರೆಯುವಾಗಷ್ಟೇ ಕಾಣುತ್ತದೆ… ಮರುಕ್ಷಣ ಇಲ್ಲ! ಯೋಗಿಗಳಿಗಾದರೋ ಅದು ಗಾಳಿಯಲ್ಲಿ ಎಳೆ ಎಳೆದಂತೆ! ಗೋಚರವಾಗೋದೇ ಇಲ್ಲ! ಅರ್ಥವಾಯಿತೇ ಮಗು?”

ಸಾಧು ಪ್ರೀತಿಯಿಂದ ಆ ವ್ಯಕ್ತಿಯ ತಲೆಯನ್ನು ನೇವರಿಸಿದ. ಮಾತಿನ ಅರ್ಥಕ್ಕೋ, ಆ ಮಾತೃಸ್ಪರ್ಶಕ್ಕೋ ಆ ಮನುಷ್ಯನ ಮನಸ್ಸು ಇದ್ದಕ್ಕಿದ್ದಂತೆ ಸಮಾಧಾನವಾಯಿತು. ಮತ್ತೊಮ್ಮೆ ಭಕ್ತಿಯಿಂದ ಆ ಯೋಗಿಯ ಪಾದಗಳಿಗೆ ನಮಸ್ಕರಿಸಿ ತನ್ನ ದಾರಿ ಹಿಡಿದು ಹೊರಟುಹೋದ


ಸಿಹಿಜೀವಿ ವೆಂಕಟೇಶ್ವರ

ತುಮಕೂರು


02 November 2024

ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು


 


ನವೆಂಬರ್ ಮಾಸದ ನೆನೆಕೆಗಳು...


ಕನ್ನಡ ಕುಲಪುರೋಹಿತ   ಆಲೂರು ವೆಂಕಟರಾಯರು


"ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಎಂಬ ಆಶಯ ಗೀತೆಯನ್ನು ಬರೆದು ಕರ್ನಾಟಕದ ಏಕೀಕರಣಕ್ಕೆ ಮುನ್ನುಡಿ ಬರೆದ ಚೇತನವೇ ಹುಯಿಲಗೋಳ ನಾರಾಯಣರಾಯರು. ಆ ನಿಟ್ಟಿನಲ್ಲಿ ಹೋರಾಟ ಮಾಡಿದ ಹಲವಾರು ಧೀಮಂತರಲ್ಲಿ ಆಲೂರು ವೆಂಕಟರಾಯರು ಓರ್ವರು.


ಭಾರತೀಯ ಇತಿಹಾಸಕಾರ, ಬರಹಗಾರ ಮತ್ತು ಪತ್ರಕರ್ತ. ಪ್ರತ್ಯೇಕ ಕರ್ನಾಟಕ ರಾಜ್ಯದ ಉದ್ದೇಶಕ್ಕಾಗಿ ಅವರು ನೀಡಿದ ಕೊಡುಗೆಗಾಗಿ ಅವರನ್ನು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಕುಲಪುರೋಹಿತ ಅಥವಾ ಕನ್ನಡ ಕುಟುಂಬದ ಪ್ರಧಾನ ಅರ್ಚಕ ಎಂದು ಹೆಸರಾಗಿದ್ದಾರೆ. 


ಇವರ ಮೂಲ ಹೆಸರು ವೆಂಕಟರಾವ್ ಆದರೂ ಇವರು ವೆಂಕಟರಾಯರು ಎಂದೇ ಜನಜನಿತ.

ಭಾರತೀಯ ಇತಿಹಾಸಕಾರರಾಗಿ,ಬರಹಗಾರರಾಗಿ, ಮತ್ತು ಪತ್ರಕರ್ತರಾಗಿ ಚಿರಪರಿಚಿತರು. ಪ್ರತ್ಯೇಕ ಕರ್ನಾಟಕ ರಾಜ್ಯದ ಉದ್ದೇಶಕ್ಕಾಗಿ ಅವರು ನೀಡಿದ ಕೊಡುಗೆಗಾಗಿ ಅವರನ್ನು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಕುಲಪುರೋಹಿತ ಎಂದು ಪೂಜಿಸುತ್ತಿದ್ದೇವೆ.


ವೆಂಕಟರಾವ್ ಅವರು ಜುಲೈ 12, 1880 ರಂದು ಕಂದಾಯ ಇಲಾಖೆಯಲ್ಲಿ ಸಿರಸ್ತೇದಾರ್ ಆಗಿದ್ದ ಭೀಮಾ ರಾವ್ ಅವರಿಗೆ ಜನಿಸಿದರು. ಅವರು ಕರ್ನಾಟಕದ ಬಿಜಾಪುರದಲ್ಲಿ ಸಾಂಪ್ರದಾಯಿಕ ದೇಶಸ್ಥ ಮಾಧ್ವ ಬ್ರಾಹ್ಮಣ ಕುಟುಂಬದವರು. ಅವರು ಫರ್ಗುಸನ್ ಕಾಲೇಜಿನಲ್ಲಿ ಬಿಎ ಮತ್ತು ಎಲ್ಎಲ್‌ಬಿ ಪದವಿಗಾಗಿ ಅಧ್ಯಯನ ಮಾಡಿದರು, ಅಲ್ಲಿ ಅವರು ವಿನಾಯಕ ದಾಮೋದರ್ ಸಾವರ್ಕರ್, ಸೇನಾಪತಿ ಬಾಪಟ್ ಮತ್ತು ಬಾಲಗಂಗಾಧರ ತಿಲಕ್ ಅವರ ಸಂಪರ್ಕಕ್ಕೆ ಬಂದರು. ರಾವ್ ಅವರು ತಿಲಕರ ಆತ್ಮೀಯ ಸ್ನೇಹಿತರಾಗಿದ್ದರು ಮತ್ತು ಅವರ ಗೀತ ರಹಸ್ಯವನ್ನು ಕನ್ನಡಕ್ಕೆ ಅನುವಾದಿಸಿದರು.


ಧಾರವಾಡದಲ್ಲಿ ಆರಂಭದ ಶಿಕ್ಷಣ ಮುಗಿಸಿದ ವೆಂಕಟರಾಯರು ಪುಣೆಯ ಫರ್ಗ್ಯೂಸನ್ ಕಾಲೇಜಿನಿಂದ 1904ರಲ್ಲಿ ಬಿ.ಎ. ಪದವಿ ಪಡೆದರು. 1905ರಲ್ಲಿ ಮುಂಬಯಿಯಲ್ಲಿ ಎಲ್.ಎಲ್.ಬಿ. ಪದವಿಯನ್ನು ಗಳಿಸಿ, ಧಾರವಾಡಕ್ಕೆ ಮರಳಿದರು.

ಸೇನಾಪತಿ ಬಾಪಟ್ ರವರು ಮತ್ತು ವೀರ್ ಸಾವರ್ಕರ್ ರವರು ಇವರ ಸಹಾಧ್ಯಾಯಿಗಳಾಗಿದ್ದರು.

ಒಮ್ಮೆ ಬೇಸಿಗೆ ರಜೆಯಲ್ಲಿ, ನವ ವೃಂದಾವನ, ಆನೆಗೊಂದಿಗಳನ್ನು ಸಂದರ್ಶಿಸಿ ಅಲ್ಲಿಂದ ಹಂಪಿಗೆ ಹೋದರು. ಹಂಪಿಯ ಅವಶೇಷಗಳು ಅವರ ಮನಸ್ಸಿನ ಮೇಲೆ ಅಪೂರ್ವ ಪರಿಣಾಮ ಉಂಟುಮಾಡಿದವು. ಅವರ ಮಾತಿನಲ್ಲೇ ಹೇಳುವುದಾದರೆ: "ನಮ್ಮ ವಿಜಯನಗರವು ಅಲ್ಲಿ ಪ್ರತ್ಯಕ್ಷವಾಗಿಯೂ ವಿಸ್ತಾರವಾಗಿಯೂ ನನ್ನ ಮುಂದೆ ಬಿದ್ದಿದೆ. ಆ ದರ್ಶನವು ನನ್ನ ಮನದಲ್ಲಿ ವಿದ್ಯುತ್ತಿನ ಸಂಚಾರವನ್ನು ಮೂಡಿಸಿತು. ಚಲನಚಿತ್ರ ಪಟದಲ್ಲಿ ವಿದ್ಯುದ್ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡಹತ್ತಿತು. ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿದ ತರಂಗಗಳಿಗೆ ಇಂಬುಗೊಟ್ಟಿತು. ಹೃದಯ ಸಮುದ್ರವು ಅಲ್ಲೋಲ ಕಲ್ಲೋಲವಾಯಿತು. ಆ ದಿವಸವು ನನ್ನ ಜೀವನದ ಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು." ಇದರಿಂದಾಗಿ ಆಲೂರರು ಕರ್ನಾಟಕದ ಇತಿಹಾಸ, ಸಾಹಿತ್ಯಗಳ ವ್ಯಾಸಂಗಕ್ಕೆ ತೊಡಗಿದರು.

ಆ ಕಾಲದಲ್ಲಿ ಮುಂಬಯಿ ಪ್ರಾಂತದಲ್ಲಿದ್ದ ಕನ್ನಡ ಪ್ರದೇಶಗಳಲ್ಲಿ ಮರಾಠಿಯದೆ ಪ್ರಾಬಲ್ಯ. ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಪ್ರವೇಶಿಸಿದರು. ಸಂಘದ ಸ್ಥಿತಿ ಅಷ್ಟೊಂದು ಸಮರ್ಪಕವಾಗಿಲ್ಲದ ಕಾರಣ ಅದರ ಕಾರ್ಯಭಾರವನ್ನು ಹೊತ್ತುಕೊಂಡರು. ಕನ್ನಡಿಗರನ್ನು ಜಾಗೃತಗೊಳಿಸಲು ವೆಂಕಟರಾಯರು 1906ರಲ್ಲಿ ವಾಗ್ಭೂಷಣ ಎಂಬ ಪತ್ರಿಕೆ ಆರಂಭಿಸಿದರು. ತಮ್ಮ ಸಾಮರ್ಥ್ಯದಿಂದ ಆ ಪತ್ರಿಕೆಗೆ ಹೊಸ ರೂಪವನ್ನು ಕೊಟ್ಟರು. ವಕೀಲಿ ವೃತ್ತಿಯನ್ನು ತೊರೆದು ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದರು. 1922 ನವೆಂಬರ್ 4 ರಂದು ಜಯಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆ ಆರು ವರ್ಷಗಳವರೆಗೆ ನಡೆಯಿತು. ಈ ಪತ್ರಿಕೆಗೆ ಬೆಟಗೇರಿ ಕೃಷ್ಣಶರ್ಮ, ದ.ರಾ.ಬೇಂದ್ರೆ ಮೊದಲಾದ ಶ್ರೇಷ್ಠ ಸಾಹಿತಿಗಳು ಸಹಸಂಸ್ಥಾಪಕ ಸಂಪಾದಕರಾಗಿ ಕೆಲಸ ಮಾಡಿದ್ದರು. ಕನ್ನಡಿಗ, ಕರ್ಮವೀರ ಮೊದಲಾದ ಪತ್ರಿಕೆಗಳ ಸಂಪಾದಕತ್ವವನ್ನು ಸಹ ವಹಿಸಿಕೊಂಡಿದ್ದರು.

ಅಂದಿನ ದಿನಗಳಲ್ಲಿ ಕನ್ನಡದಲ್ಲಿ ಪುಸ್ತಕಗಳ ಕೊರತೆಯನ್ನು ನೀಗಿಸಲು ಕರ್ನಾಟಕದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಎರಡು ಬಾರಿ ಗ್ರಂಥಕರ್ತರ ಸಮಾವೇಶವನ್ನು ಕರೆದರು. ಮೂರನೆಯ ಅಧಿವೇಶನ ಬೆಂಗಳೂರಿನಲ್ಲಿ ನಡೆಸಬೇಕೆಂಬ ಆಶಯ ರೂಪುಗೊಂಡಿದ್ದು ಆರು ವರ್ಷಗಳ ನಂತರ. 1915ರಲ್ಲಿ ನಡೆದ ಆ ಘಟನೆ ಕರ್ನಾಟಕ ಸಾಹಿತ್ಯ ಪರಿಷತ್ತಿಗೆ ನಾಂದಿಹಾಡಿತು. ಧಾರವಾಡದಲ್ಲಿದ್ದುಕೊಂಡೆ ಆಲೂರರು ಈ ಕಾರ್ಯವನ್ನು ಆಗು ಮಾಡಿದರು.

ಆಲೂರು ವೆಂಕಟರಾಯರು ಆ ಕಾಲದ ಸಾಮಾಜಿಕ ಚಟುವಟಿಕೆಗಳ ಮುಂಚೂಣಿಯಲ್ಲಿದ್ದರು. 1921ರಲ್ಲಿ ಮಹಾತ್ಮ ಗಾಂಧಿಯವರು ಆರಂಭಿಸಿದ ಸತ್ಯಾಗ್ರಹ ಚಳುವಳಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕದ ಏಕೀಕರಣ, ಕರ್ನಾಟಕ ಇತಿಹಾಸ ಮಂಡಲದ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಕರ್ನಾಟಕ ವಿಶ್ವವಿದ್ಯಾನಿಲಯದ ಕಲ್ಪನೆ, ವಿಜಯನಗರ ಮಹೋತ್ಸವ, ನಾಡಹಬ್ಬದ ಯೋಜನೆ, ಕರ್ನಾಟಕ ವಿದ್ಯಾವರ್ಧಕ ಸಂಘ, ಈ ಎಲ್ಲಾ ಯೋಜನೆಗಳಲ್ಲಿ ಆಲೂರು ವೆಂಕಟರಾಯರು ಮಹತ್ವದ ಪಾತ್ರ ವಹಿಸಿದ್ದಾರೆ.  ಕನ್ನಡ ಗ್ರಂಥಕರ್ತರ ಸಮ್ಮೇಳನವನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಕಾಶಕರಿಗೆ ಅನುಕೂಲವಾಗಲು ಕರ್ನಾಟಕ ಗ್ರಂಥ ಮಂಡಳಿಯನ್ನು ಸ್ಥಾಪಿಸಿದ್ದರು.


ಆಲೂರರ ಉದ್ಯಮಶೀಲತೆ ಅಸಾಧಾರಣವಾದದ್ದು. ತಾವು ಸ್ಥಾಪಿಸಿದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿಪರ ತರಬೇತಿ ನೀಡುವ ಉದ್ದೇಶದಿಂದ ಬೆಂಕಿಪೆಟ್ಟಿಗೆ ಕಾರ್ಖಾನೆ, ಪೆನ್ಸಿಲ್ ಕಾರ್ಖಾನೆ, ಉಡುಗೆ ಫ್ಯಾಕ್ಟರಿ, ಡ್ರಾಯಿಂಗ್ ಪೆಯಿಂಟಿಂಗ್ ಕ್ಲಾಸು, ಮತ್ತು ಪ್ರಿಂಟಿಂಗ್ ಕ್ಲಾಸುಗಳನ್ನೂ ಪ್ರಾರಂಭಿಸಿದರು. ಆಗಿನ ಬ್ರಿಟಿಷ್ ಆಳ್ವಿಕೆಯ ಹತ್ತಿಕ್ಕುವ ನೀತಿಯಿಂದಾಗಿ ಈ ಸಂಸ್ಥೆಯನ್ನು ಮುಚ್ಚಬೇಕಾಗಿ ಬಂತು. ನಂತರ ಸಕ್ಕರೆ ಕಾರ್ಖಾನೆ, ಬೆಳಗಾವಿಯ ಹತ್ತಿರ ಖಾನಾಪುರದಲ್ಲಿ ಹಂಚಿನ ಕಾರ್ಖನೆ,ಹೊಳೆ ಆಲೂರಿನಲ್ಲಿ ಹತ್ತಿಯ ಮಿಲ್ಲು, ಹೀಗೆ ಒಂದಾದಮೇಲೊಂದು ಉದ್ಯಮಗಳನ್ನು ಹುಟ್ಟುಹಾಕಿದರು. ನಂತರ ಮಿತ್ರರೊಂದಿಗೆ ಅಗ್ರಿಕಲ್ಚರಲ್ ಸೊಸೈಟಿ ತೆರೆದರು. ನಂತರ ಬಟ್ಟೆ ಅಂಗಡಿ ತೆರೆದರು. ತದನಂತರ ಮ್ಯೂಚುವಲ್ ಹೆಲ್ಪ್ ಫಂಡ್ ತೆರೆದರು. ದುರದೃಷ್ಟವಶಾತ್ ಇವು ಯಾವುದೂ ಯಶಸ್ವಿಯಾಗಲಿಲ್ಲ. ಈ ಪ್ರಯತ್ನಗಳಲ್ಲಿ ಬರಿಯ ಲಾಭ ಮಾಡಿಕೊಳ್ಳುವ ದೃಷ್ಟಿಯಿರದೆ, ಅವೆಲ್ಲವುಗಳಲ್ಲಿ ಒಂದು ವಿಶಿಷ್ಟ ರಾಷ್ಟ್ರೀಯ ಸೊಗಡಿದ್ದು, ಭಾರತದ ಔದ್ಯೋಗಿಕ ಪ್ರಗತಿಯ ಅಂಗವಾಗಿದ್ದವು.


ಆಲೂರರು'ಗತವೈಭವ'ದಲ್ಲಿ  ಅಂದು  ಕನ್ನಡಕ್ಕೆ ಒದಗಿದ ದುರ್ಗತಿಯನ್ನು  ಕೆಳಗಿನ ಮಾತುಗಳಲ್ಲಿ ಖಾರವಾಗಿ ಹೇಳಿದ್ದರು. ಅದು ಇಂದಿಗೂ ಪ್ರಸ್ತುತ.

  "ನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಆತ್ಮಾನಂದದಿಂದ ಪುಳಕಿತಗೊಳ್ಳುವುವುದಿಲ್ಲವೋ ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ; ದೇಹವಲ್ಲ, ಮೋಟು ಮರ". 


ಆಲೂರು ವೆಂಕಟರಾಯರು ಸುಮಾರು ಇಪ್ಪತ್ತೈದು ಕೃತಿಗಳನ್ನು ಬರೆದಿದ್ದು ಕೆಲವು ಇಂತಿವೆ

ಶ್ರೀ ವಿದ್ಯಾರಣ್ಯ ಚರಿತ್ರೆ , ಕರ್ನಾಟಕ ಗತವೈಭವ, ಕರ್ನಾಟಕ ವೀರರತ್ನಗಳು, ಶಿಕ್ಷಣ ಮೀಮಾಂಸೆ, ರಾಷ್ಟ್ರೀಯತ್ವದ ಮೀಮಾಂಸೆ, ಕನ್ನಡಿಗರ ಭ್ರಮನಿರಸನ, ಕರ್ನಾಟಕತ್ವದ ವಿಕಾಸ, ಕರ್ನಾಟಕತ್ವದ ಸೂತ್ರಗಳು, ಸ್ವಾತಂತ್ರ್ಯಸಂಗ್ರಾಮ, ಗೀತಾಪ್ರಕಾಶ, ಗೀತಾಸಂದೇಶ, ಗೀತಾಪರಿಮಳ, ಗೀತಾಭಾವ ಪ್ರದೀಪ, ಶ್ರೀ ಮಧ್ವಾಚಾರ್ಯರ ಮೂಲ ಸಿದ್ಧಾಂತ, ಶ್ರೀ ಮಧ್ವಾಚಾರ್ಯರ ಪೂರ್ಣ ಬ್ರಹ್ಮವಾದ. ಆತ್ಮಕಥನ - ನನ್ನ ಜೀವನ ಸ್ಮೃತಿಗಳು ಎಂಬ ಹೆಸರಿನಲ್ಲಿ ಎರಡು ಭಾಗಗಳಲ್ಲಿ ಪ್ರಕಟಿಸಿದ್ದಾರೆ. ಲೋಕಮಾನ್ಯ ತಿಲಕರ ಗೀತಾ ರಹಸ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಆಲೂರು ವೆಂಕಟರಾಯರು ೧೯೩೦ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡದ ಜನತೆ ಇವರಿಗೆ ದೇಶಸೇವಾಧುರೀಣ , ಸ್ವಭಾಷಾರಕ್ಷಕ ಎಂದು ಕರೆದು ಸನ್ಮಾನಿಸಿದೆ. ಅಲ್ಲದೆ ಕರ್ನಾಟಕದ ಕುಲಪುರೋಹಿತ ಎಂದು ಗೌರವಿಸಿದೆ. 


ವರಕವಿ ದ.ರಾ. ಬೇಂದ್ರೆಯವರು ಅಲೂರರನ್ನು 'ಕರ್ನಾಟಕದ ಪ್ರಾಣೋಪಾಸಕರು' ಎಂದು ಕರೆದದ್ದು ಅರ್ಥಪೂರ್ಣವಾಗಿದೆ. ಬೇಂದ್ರೆಯವರು ಆಲೂರರ ವೈಶಿಷ್ಟ್ಯವನ್ನು ಹೀಗೆ ಗುರುತಿಸಿದ್ದಾರೆ: "ಬಹುಮುಖವಾಗಿಯೂ, ಏಕನಿಷ್ಠೆಯಿಂದಲೂ, ಅನನ್ಯ ಬುದ್ಧಿಯಿಂದಲೂ, ಸತತ ಅನುಸಂಧಾನದಿಂದಲೂ, ಕರ್ನಾಟಕದ ಸಲುವಾಗಿ ವಿಚಾರ ಮಾಡುವವರೂ, ತದನುಸಾರವಾಗಿಯೇ ಆಚರಿಸಲು ಪ್ರಯತ್ನಿಸುವವರೂ ಹಿರಿಯರಾದ ಕನ್ನಡಿಗರಲ್ಲಿ ಇನ್ನೂ ಇವರೊಬ್ಬರೇ! ಅದೇ ಇವರ ತಪಸ್ಸು. ಇವರ ಅದ್ವಿತೀಯವಾದ ಹೆಸರು ಅದರ ಫಲವು. ಇವರಲ್ಲಿ ಬುದ್ದಿಯ ಏಕಾಗ್ರ ವೃತ್ತಿಗಿಂತ ವ್ಯಾಪಕವೃತ್ತಿಯು ಹೆಚ್ಚು, ಮೂರ್ತಿಪೂಜೆಗಿಂತ ತತ್ವಪೂಜೆಯು ಅಧಿಕ. ಆಚಾರ ನಿಷ್ಠೆಗಿಂತ ವಿಚಾರ ನಿಷ್ಠೆ ಬಹಳ. ರಾಷ್ಟ್ರೀಯ ದೃಷ್ಠಿ ಹೆಚ್ಚು; ರಾಷ್ಟ್ರದರ್ಶನ ಕಡಿಮೆ. ಜನೋದ್ದೀಪನ ಹೆಚ್ಚು, ಜನ ನಿರ್ವಹಣ ಶಕ್ತಿ ಕಡಿಮೆ... ಇವರು ಜನನಾಯಕರಾಗದೆ ನೇತ್ರವಾಗಿದ್ದಾರೆ; ಮುಂದಾಳುಗಳಾಗದೆ ಪ್ರತಿನಿಧಿಗಳಾಗಿದ್ದಾರೆ."


1956 ರ ನವೆಂಬರ್ 1 ರಂದು ಕರ್ನಾಟಕ ಏಕೀಕರಣಗೊಂಡಾಗ ರಾವ್ ಅವರು ಸಂತೋಷಪಟ್ಟರು. ಹಂಪಿಗೆ ಹೋಗಿ ವಿರೂಪಾಕ್ಷ ದೇವಸ್ಥಾನದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಕರ್ನಾಟಕದ ಕುಲಪುರೋಹಿತ ಎಂಬ ಹೆಸರು ಪಡೆದರು. ರಾಷ್ಟ್ರಗೀತೆಯಲ್ಲಿ ಉಲ್ಲೇಖಿಸಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕದ ಹೆಸರಿಗೆ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡು ಭಾರತದ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಅದರ ಸೇರ್ಪಡೆ ಬಗ್ಗೆ ಪತ್ರ ಬರೆದಿದ್ದರು. 1963 ರಲ್ಲಿ ರಾಜ್ಯ ರಚನೆಯ ಎಂಟನೇ ವಾರ್ಷಿಕೋತ್ಸವದಂದು ಬೆಂಗಳೂರಿನ ರಾಜಧಾನಿಯಲ್ಲಿ ಅವರನ್ನು ಗೌರವಿಸಲಾಯಿತು. 

ರಾವ್ ಅವರು 25 ಫೆಬ್ರವರಿ 1964 ರಂದು ಧಾರವಾಡದ ತಮ್ಮ ನಿವಾಸದಲ್ಲಿ ನಿಧನರಾದರು ಮತ್ತು ನಾಲ್ವರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದರು. 


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529


01 November 2024

ನವೆಂಬರ್ ಮಾಸದ ನೆನೆಕೆಗಳು


 ನವೆಂಬರ್ ಮಾಸದ ನೆನೆಕೆಗಳು


ಕರ್ನಾಟಕದ ಅರ್ಥ..


 1956 ರಲ್ಲಿ  ವಿಶಾಲ ಮೈಸೂರು ರಾಜ್ಯವಾಗಿ ಉದಯಯಿಸಿದ ನಮ್ಮ ನಾಡು 1973ರ  ನವೆಂಬರ್ ಒಂದರಂದು ಅಧಿಕೃತವಾಗಿ ಕರ್ನಾಟಕ ಎಂಬ ಹೆಸರು ಪಡೆಯಿತು.

ಕರ್ನಾಟಕ ಪದದ ಅರ್ಥದ ಬಗ್ಗೆ ವಿವಿಧ ಮೂಲಗಳು ವಿವಿಧ ಅರ್ಥಗಳನ್ನು ತಿಳಿಸುತ್ತವೆ.

ಈ ಪ್ರದೇಶವನ್ನು ಭಾರತೀಯ ಇತಿಹಾಸದಲ್ಲಿ 'ಕರ್ನಾಟ ದೇಶ' ಎಂದು ಕರೆಯಲಾಗುತ್ತಿತ್ತು. ಸ್ವೀಕೃತವಾದ  ಕನ್ನಡ ಪದಗಳಾದ ಕರ್ ಮತ್ತು ನಾಡು ಅಂದರೆ ಕಪ್ಪುಮಣ್ಣಿನ ಭೂಮಿ ಎಂದರ್ಥವಿದೆ. ಉನ್ನತವಾದ ಅಥವಾ ಎತ್ತರವಾದ ನಾಡು ಎಂಬ ಅರ್ಥವನ್ನು  ನೀಡುತ್ತದೆ.


 ಮಹಾಭಾರತದ ಭೀಷ್ಮ ಪರ್ವದಲ್ಲಿ ಮತ್ತು ಪುರಾತನ ಭಾರತೀಯ ಮಹಾಕಾವ್ಯಗಳಲ್ಲಿ  ಮತ್ಸ್ಯ ಪುರಾಣ, ಸ್ಕಂದ ಪುರಾಣ, ಮಾರ್ಕಂಡೇಯ ಪುರಾಣ ಮತ್ತು ಭಾಗವತ ಪುರಾಣಗಳಲ್ಲಿ ಕೂಡಾ ಕರ್ನಾಟಾ ಎಂಬ ಹೆಸರನ್ನು ಉಲ್ಲೇಖಿಸಲಾಗಿದೆ.

 

ವಿದ್ವಾಂಸರಾದ ಪಾಣಿನಿಯು ಮೃಚ್ಛಾಕಟಿಕ ಮತ್ತು ಕಥಾಸರಿತ್ಸಗರಾ  ಕೃತಿಗಳಲ್ಲಿ ಕರ್ನಾಟಕವನ್ನು ಉಲ್ಲೇಖಿಸಿದ್ದಾರೆ. ೭ ನೇ ಶತಮಾನದಲ್ಲಿ ರಾಷ್ಟ್ರಕೂಟ ಶಾಸನಗಳಲ್ಲಿ ಬಾದಾಮಿ ಚಾಲುಕ್ಯರ ಸೇನಾಪಡೆಗಳನ್ನು ಕರ್ಣಟಕಬಲಾ ಎಂದು ಉಲ್ಲೇಖಿಸಲಾಗಿದೆ. ಇದೇ ಅವಧಿಯಲ್ಲಿ ತಮಿಳು ಮಹಾನ್ ಕೃತಿ ಸಿಲಪ್ಪಾದಿಗಾರಂ ನಲ್ಲಿ ಇಂದಿನ ಕರ್ನಾಟಕ ಪ್ರದೇಶದ ಜನರನ್ನು ಕರುಣಾಟಕರನ್ನಾಗಿ ಉಲ್ಲೇಖಿಸಿದೆ. ತಮಿಳು ಸಾಹಿತ್ಯದ  ಯುದ್ಧ ಕವಿತೆ ಕಲಿಂಗತು ಪರಾನಿ ಯಲ್ಲಿ 'ಕರುಣಾತ್ಯಾರ್' ಎಂಬ ಪ್ರದೇಶದ ಜನರನ್ನು ಕರೆದಿದ್ದಾರೆ. ಕ್ರಿ.ಪೂ ೯ ನೇ ಶತಮಾನದಲ್ಲಿ, ಕನ್ನಡ ಕೃತಿ  ಕವಿರಾಜಮಾರ್ಗವು "ಕಾವೇರಿ ಯಿಂದ ಮಾ..ಗೋದಾವರಿವರೆಗಿರ್ದ..." ಎಂಬ ಉಲ್ಲೇಖದಂತೆ   ಕಾವೇರಿ ಮತ್ತು ಗೋದಾವರಿ ನದಿಗಳ ನಡುವಣ ಪ್ರದೇಶವನ್ನು ಕರ್ಣಟಾ ಎಂದು ಕರೆಯುತ್ತದೆ. ೧೩ ನೇ ಶತಮಾನದಲ್ಲಿ ಕನ್ನಡ ಕವಿ ಆಂಡಯ್ಯನ ಕೃತಿಗಳು ಅದೇ ಪರಿಭಾಷೆಯನ್ನು ಬಳಸಿವೆ.

ಒಟ್ಟಾರೆ ಕರ್ನಾಟಕ ಹೆಸರು ಇಂದು ನಿನ್ನೆಯದಲ್ಲ ಅದಕ್ಕೆ ತನ್ನದೇ ಆದ ಇತಿಹಾಸವಿದೆ.ಹಿರಿಮೆ ಗರಿಮೆ ಇದೆ ನಾವು ಕನ್ನಡಿಗರಾಗಿ ಕರ್ನಾಟಕದಲ್ಲಿ ಇದ್ದೇವೆ ಎಂಬುದು ನಮ್ಮ ‌ಹೆಮ್ಮೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 


31 October 2024

ತಾಯಿ ಮತ್ತು ನಾಯಿ.ಹನಿಗವನ

 

#ತಾಯಿ ಮತ್ತು

#ನಾಯಿ


ಒಂದು ತುತ್ತು 

ಹಾಕುದಳು 

ಆ ತಾಯಿ|

ನಿಯತ್ತು

ತೋರುತ್ತಿದೆ

ಈ ನಾಯಿ||

#sihijeeviVenkateshwara #quotes #quoteoftheday #dog

30 October 2024

#ಅಮೂಲ್ಯವಾದ_ಸಂಬಂಧಗಳನ್ನು_ಜೋಡಿಸೋಣ


 
#ಅಮೂಲ್ಯವಾದ_ಸಂಬಂಧಗಳನ್ನು_ಜೋಡಿಸೋಣ...

 ಅವನೊಬ್ಬ  ಶ್ರೀಮಂತ ಕುಟುಂಬದ ಚಿಕ್ಕ ಹುಡುಗ.  ತುಂಬಾ ಹಳೆಯ ಮತ್ತು ಮುರಿದ ಕ್ರೇಯಾನ್ ಗಳನ್ನು ನೋಡಿ .   ತಾಯಿಗೆ ಹೇಳಿದನು. 
 "ಅಮ್ಮಾ, ನನ್ನ ಎಲ್ಲಾ ಮುರಿದ ಕ್ರೇಯಾನ್ ಗಳು ನನಗೆ ಬೇಡ. ಅವು ನಿಷ್ಪ್ರಯೋಜಕವಾಗಿವೆ ಮತ್ತು ನನ್ನ ಮಲಗುವ ಕೋಣೆಯಲ್ಲಿ ಅವು ನನಗೆ ತುಂಬಾ ಕಿರಿಕಿರಿಯನ್ನುಂಟುಮಾಡುತ್ತವೆ ಎಲ್ಲಾದರೂ ಬಿಸಾಡಿ ಬಿಡು "  ಅಂದ. ಶ್ರೀಮಂತ ತಾಯಿ ತನ್ನ ಮಗುವಿಗೆ ಸಂತೋಷವಾಗುವುದಾದರೆ ಈ ಮುರಿದ ಕ್ರೇಯಾನ್ ಗಳು ಏತಕ್ಕೆ  ಎಂದು  ಮುರಿದ ಕ್ರೇಯಾನ್ ಗಳನ್ನು ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿ ಹೊರಗೆ ಎಸೆದಳು.
ಮರುದಿನ ಅವಳು ತನ್ನ ಮಗನ ಅಸಂತೋಷದ  ಮನಸ್ಥಿತಿಯಲ್ಲಿ ನೋಡಿ ಕಾರಣ ಕೇಳಿದಾಗ.  
 ಚಿಕ್ಕ ಹುಡುಗ ಪ್ರತಿಕ್ರಿಯಿಸಿದನು.
 "ನಾನು ಇನ್ನು ಮುಂದೆ ನನ್ನ ಕೋಣೆಯಲ್ಲಿನ ಏರ್ ಫ್ರೆಶ್‌ನರ್‌ಗಳು ಮತ್ತು ಸುಗಂಧ ತೈಲದ ವಾಸನೆಯನ್ನು ಇಷ್ಟಪಡುವುದಿಲ್ಲ. ನಾವು ಎಲ್ಲವನ್ನೂ ಹೊರಹಾಕಬಹುದೇ?" ಎಂದನು
 ತಾಯಿಯು   ಎಲ್ಲಾ ಸುಗಂಧದ ಬಾಟಲಿಗಳನ್ನು ಸಂಗ್ರಹಿಸಿ ಅವುಗಳನ್ನು ಹೊರಗೆ ಹಾಕಿ    ನಂತರ ತನ್ನ ಮಗನಿಗೆ ಹೊಸ ಪರಿಮಳವನ್ನು ಖರೀದಿಸಿದಳು.
ಇದಾಗಿ ಕೆಲ ದಿನಗಳಾದ ಮೇಲೆ 
 ಒಂದು ಸಂಜೆ ತಾಯಿ ತನ್ನ ಮಗನನ್ನು ದಿನಸಿ ಅಂಗಡಿಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದಳು.  ಅವರು ರಸ್ತೆಯಲ್ಲಿ ಕಾರಿನಲ್ಲಿ ಹೋಗುವಾಗ  ಹುಡುಗನು ಕಾರಿನ ಕಿಟಕಿಯಿಂದ  ಆಶ್ಚರ್ಯಕರವಾದದ್ದನ್ನು ನೋಡಿದನು.  ಅದೆಂದರೆ ಬಡ ಹುಡುಗನೊಬ್ಬ ಕೆಲವು ವರ್ಣರಂಜಿತ ಮೇಣದಬತ್ತಿಗಳನ್ನು ಮಾರುವುದನ್ನು ಅವನು ನೋಡಿದನು.   ಮೇಣದ ಬತ್ತಿಗಳನ್ನು ಮಾರುವ ಬಾಲಕ ಇವು  "ಸ್ವರ್ಗದ ಮೇಣದಬತ್ತಿಗಳು" ಎಂದು ಕೂಗುತ್ತಾ ಮಾರುತ್ತಿದ್ದ.  ಒಂದು ಮೇಣದಬತ್ತಿಯು ತುಂಬಾ ಪ್ರಕಾಶಮಾನವಾಗಿ ಉರಿಯುತ್ತಿತ್ತು ಮತ್ತು ಗಾಳಿಯನ್ನು ತುಂಬುವ ಆಹ್ಲಾದಕರ ಪರಿಮಳವನ್ನು ಹೊರಸೂಸುತ್ತಿತ್ತು.  ಬಡ ಹುಡುಗ ಮಾರಾಟ ಮಾಡಿದ ದುಬಾರಿ ಮತ್ತು ವಿಶಿಷ್ಟವಾದ ಮೇಣದಬತ್ತಿಗಳನ್ನು    ಬೆಲೆ ಹೆಚ್ಚಾದರೂ ಕೊಳ್ಳಲು ಬಹಳಷ್ಟು ಜನರು ಸೇರಿದ್ದರು. 

 ಆ ಸಮಯದಲ್ಲಿ  ಶ್ರೀಮಂತ ಮಗು ತನ್ನ ತಾಯಿಯನ್ನುದ್ದೇಶಿಸಿ  
 "ಅಮ್ಮ, ನೋಡು! ಮೇಣದಬತ್ತಿಗಳು ತುಂಬಾ ಚೆನ್ನಾಗಿವೆ ಮತ್ತು ಸುಂದರವಾಗಿವೆ. ಅವು ನನ್ನ ಮಲಗುವ ಕೋಣೆಯನ್ನು ನೋಡಲು ಮತ್ತು ಅಸಾಧಾರಣವಾದ ವಾಸನೆಯನ್ನು ನೀಡುತ್ತವೆ. ದಯವಿಟ್ಟು ನನಗಾಗಿ ಖರೀದಿಸು"  ಎಂದು ನುಡಿದನು 
 ತಾಯಿ ತನ್ನ ಮಗನನ್ನು ಸಂತೋಷಪಡಿಸಲು ಬಯಸಿದ್ದಳು.  ಆದರೆ ಅವರು ಕಾರಿನಿಂದ ಇಳಿದು ಕ್ಯಾಂಡಲ್ ಬಾಯ್ ಹತ್ತಿರ ಬಂದು ಕ್ಯಾಂಡಲ್ ಖರೀದಿಸಲು ಮುಂದಾದಳು ಆಗ ಆ ಬಾಲಕ ಹೇಳಿದ
 "ನನ್ನನ್ನು ಕ್ಷಮಿಸಿ ಮೇಡಮ್, ಎಲ್ಲಾ ಕ್ಯಾಂಡಲ್ ಮಾರಾಟವಾದವು ಇನ್ನು ಯಾವುದೇ ಕ್ಯಾಂಡಲ್  ಉಳಿದಿಲ್ಲ" ಎಂಬ ಉತ್ತರ ನೀಡಿದ. 
 ಶ್ರೀಮಂತ ಹುಡುಗನ ಮುಖದಲ್ಲಿ ನಿರಾಶೆ ಮೂಡಿತು.  ಅವನ ದುಃಖದ ಮುಖವನ್ನು ಅವನ ತಾಯಿ ಗಮನಿಸಿದಾಗ ಅವಳು ಕ್ಯಾಂಡಲ್ ಹುಡುಗನನ್ನು ಕೇಳಿದಳು. 
 "ನೀನು  ಆ ವಿಶೇಷ ಮೇಣದಬತ್ತಿಗಳನ್ನು ಎಲ್ಲಿ ಖರೀದಿಸಿದೆ? ನಾನು ನನ್ನ ಮಗನಿಗೆ ಖರೀದಿಸಲು ಬಯಸುತ್ತೇನೆ?" 
 ಕ್ಯಾಂಡಲ್ ಬಾಯ್ ವಿನಮ್ರವಾಗಿ ಉತ್ತರಿಸಿದ.
 "ನಾನು ಅವುಗಳನ್ನು ಖರೀದಿಸಲಿಲ್ಲ, ನಾನೇ ತಯಾರು  ಮಾಡಿದ್ದೇನೆ" 
 ಅವಳು ತುಂಬಾ ಆಶ್ಚರ್ಯಪಟ್ಟು  ಕೇಳಿದಳು. "ಆದರೆ ಅಂತಹ ಅದ್ಭುತವಾದ ಮೇಣದಬತ್ತಿಗಳನ್ನು ನೀನೇ ಹೇಗೆ ಮಾಡಲು ಸಾಧ್ಯವಾಯಿತು? ನೀನು ಯಾವ ವಸ್ತುಗಳನ್ನು ಬಳಸಿದೆ?" 
 ಹುಡುಗ ಒಂದು ಕ್ಷಣ ತಡೆದು ಹೇಳಿದ.
 "ಒಮ್ಮೆ ಮಹಿಳೆಯೊಬ್ಬಳು ಮುರಿದ ಕ್ರೆಯಾನ್  ಪೆಟ್ಟಿಗೆಯನ್ನು ಎಸೆಯುವುದನ್ನು ನಾನು ನೋಡಿದೆ. ನಾನು ಸಂತೋಷದಿಂದ  ಎಲ್ಲವನ್ನೂ ತೆಗೆದುಕೊಂಡೆ. ನಂತರ ಮರುದಿನ ಅದೇ ತ್ಯಾಜ್ಯದ ತೊಟ್ಟಿಯಲ್ಲಿ ಕೆಲವು ಸುಗಂಧದ ಬಾಟಲಿಗಳನ್ನು ಅದೇ   ಮಹಿಳೆ  ಎಸೆದರು. ನಾನು ಅವುಗಳನ್ನು ಮನೆಗೆ ತೆಗೆದುಕೊಂಡು ಹೋದೆ.  ನಾನು ಎಲ್ಲಾ ಮುರಿದ ಕ್ರೆಯಾನ್ ಗಳನ್ನು ಕರಗಿಸಿ ಕೆಲವು ಸುಗಂಧ ದ್ರವ್ಯಗಳೊಂದಿಗೆ ಮೇಣವನ್ನು ಬೆರೆಸಿದೆ. ಸುಗಂಧಯುಕ್ತ ಕ್ಯಾಂಡಲ್ ಮಾಡಿ  ಸ್ವರ್ಗ ದ ಕ್ಯಾಂಡಲ್ ಎಂದು ಹೆಸರಿಟ್ಟೆ ಅಷ್ಟೇ" ಎಂದು ಬಾಲಕ ಮಾತು ನಿಲ್ಲಿಸಿದ.
ಆ ಸಿರಿವಂತ ಮಹಿಳೆಗೆ ಮತ್ತೆ ಮಾತು ಹೊರಡಲಿಲ್ಲ.
ಪ್ರತಿಯೊಂದು ವಸ್ತು ಅಥವಾ ಸಂಬಂಧ ಅಮೂಲ್ಯವಾದುದು.  ಯಾವುದೇ ವಸ್ತು ಅಥವ ಸಂಬಂಧ ನಿಷ್ಪ್ರಯೋಜಕ ಎಂಬ ತೀರ್ಮಾನಕ್ಕೆ ಬಂದುಬಿಡುತ್ತೇವೆ.ಇದು ತಪ್ಪು   ಅನುಪಯುಕ್ತ ಎಂದು ಬಿಸಾಡಿದ  ವಸ್ತುಗಳಿಗೆ ಸೂಕ್ತ ಮೌಲ್ಯವರ್ಧನೆ ಮಾಡಿದರೆ ಅಮೂಲ್ಯ ವಸ್ತುಗಳಾಗುವಂತೆ ಸಣ್ಣ ಪುಟ್ಟ ಕಾರಣದಿಂದ ಸಂಬಂಧಗಳ ಕಡಿತಗೊಳಿಸಿದವರು ಒಮ್ಮೆ ಚಿಂತಿಸಿ ಚಿಕ್ಕ ಪುಟ್ಟ ಬದಲಾವಣೆ ಮಾಡಿಕೊಂಡು ಸಂಬಂಧಗಳನ್ನು ಚಿಗುರಿಸಿದರೆ ಬದುಕು ನಂದನವನವಾಗುವುದು ಅಲ್ಲವೇ?

ಸಿಹಿಜೀವಿ ವೆಂಕಟೇಶ್ವರ
ತುಮಕೂರು
#sihijeeviVenkateshwara #storytelling #moral #PersonalDevelopment #motivational

28 October 2024

ಮೇರಾ ಭಾರತ್ ಮಹಾನ್


 ಮೇರಾ ಭಾರತ್ ಮಹಾನ್ 


ಜನನಿ ಜನ್ಮ ಭೂಮಿಶ್ಚ ಸ್ವರ್ಗಾ ದಪಿ ಗರಿಯಸಿ ಎಂಬಂತೆ ನನ್ನ ದೇಶ ನನಗೆ ಸ್ವರ್ಗಕ್ಕಿಂತ ಮೇಲು ಅಂತಹ ಸ್ವರ್ಗದ ಕೆಲ ವಿಶೇಷಗಳನ್ನು ಈ ಕೆಳಗಿನಂತೆ ಹೇಳಬಹುದು

 ಮಣಿಪುರ ರಾಜ್ಯದಲ್ಲಿರುವ ಕೀಬುಲ್ ಲಾಮ್ಜಾವೊ ರಾಷ್ಟ್ರೀಯ ಉದ್ಯಾನವನ ಎಂಬ ತೇಲುವ ರಾಷ್ಟ್ರೀಯ ಉದ್ಯಾನವನವಿದೆ.  ಇದು ವಿಶ್ವದ ಏಕೈಕ ತೇಲುವ ಉದ್ಯಾನವನವಾಗಿದೆ ಮತ್ತು ಅದರ ವಿಶಿಷ್ಟ ಪರಿಸರ ವ್ಯವಸ್ಥೆ ಮತ್ತು ಅಳಿವಿನಂಚಿನಲ್ಲಿರುವ ಸಂಗೈ ಜಿಂಕೆಗಳಿಗೆ ಹೆಸರುವಾಸಿಯಾಗಿದೆ. ಭಾರತದ ಹಿಮಾಚಲ ಪ್ರದೇಶದ ಚೈಲ್‌ನಲ್ಲಿರುವ ವಿಶ್ವದ ಅತಿ ಎತ್ತರದ ಕ್ರಿಕೆಟ್ ಮೈದಾನವು ಸಮುದ್ರ ಮಟ್ಟದಿಂದ 2,444 ಮೀಟರ್  ಅಂದರೆ 8,018 ಅಡಿ ಎತ್ತರದಲ್ಲಿದೆ. ತೇಲುವ ಅಂಚೆ ಕಛೇರಿ ಹೊಂದಿರುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದು.  ಇದು ಶ್ರೀನಗರದ ದಾಲ್ ಸರೋವರದಲ್ಲಿದೆ ಮತ್ತು ಇದು ಪ್ರವಾಸಿ ಆಕರ್ಷಣೆಯಾಗಿಯೂ ಕಾರ್ಯನಿರ್ವಹಿಸುತ್ತದೆ.ಭಾರತೀಯ ರಾಷ್ಟ್ರೀಯ ಕಬಡ್ಡಿ ತಂಡವು ಇಲ್ಲಿಯವರೆಗೆ ನಡೆದ ಎಲ್ಲಾ ವಿಶ್ವಕಪ್‌ಗಳನ್ನು ಗೆದ್ದಿದೆ. ಭಾರತದ ಮೇಘಾಲಯ ರಾಜ್ಯದ ಮಾವ್ಸಿನ್ರಾಮ್ ಎಂಬ ಹಳ್ಳಿಯು ವಿಶ್ವದಲ್ಲೇ ಅತಿ ಹೆಚ್ಚು ಸರಾಸರಿ ವಾರ್ಷಿಕ ಮಳೆಯನ್ನು ಪಡೆಯುತ್ತದೆ. ಮಹಾರಾಷ್ಟ್ರದ ಶನಿ ಶಿಂಗ್ನಾಪುರ ಎಂಬ ಗ್ರಾಮವು ಬಾಗಿಲುಗಳಿಲ್ಲದ ಮನೆಗಳನ್ನು ಹೊಂದಿದೆ.  ಶನಿ ಗ್ರಹದ ಹಿಂದೂ ದೇವರಾದ ಶನಿಯು ಗ್ರಾಮವನ್ನು ರಕ್ಷಿಸುತ್ತಾನೆ ಮತ್ತು ಆದ್ದರಿಂದ ಕಳ್ಳತನವು ವಾಸ್ತವಿಕವಾಗಿ ಅಸ್ತಿತ್ವದಲ್ಲಿಲ್ಲ ಎಂದು ನಂಬಲಾಗಿದೆ.ಕುಂಭಮೇಳ, ಹಿಂದೂ ನಂಬಿಕೆಯ ತೀರ್ಥಯಾತ್ರೆ, ಇದು ಭೂಮಿಯ ಮೇಲಿನ ಮಾನವರ ಅತಿದೊಡ್ಡ ಸಭೆಯಾಗಿದೆ.  ಇದು ಎಷ್ಟು ದೊಡ್ಡದಾಗಿದೆ ಎಂದರೆ ಅದು ಬಾಹ್ಯಾಕಾಶದಿಂದಲೂ  ಗೋಚರಿಸುತ್ತದೆ. ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕರಾಗಿದ್ದು, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾವನ್ನು ಮೀರಿಸಿದೆ. ಭಾರತೀಯ ರೈಲ್ವೇ ವಿಶ್ವದ ಅತಿದೊಡ್ಡ ಉದ್ಯೋಗದಾತರಲ್ಲಿ ಒಂದಾಗಿದೆ, 1.4 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ. ಭಾರತದ ಸಿಕ್ಕಿಂ ರಾಜ್ಯವು ಭಾರತ ಮತ್ತು ವಿಶ್ವದ ಮೊದಲ ಮತ್ತು ಏಕೈಕ ಸಂಪೂರ್ಣ ಸಾವಯವ ರಾಜ್ಯವಾಗಿದೆ.ಕೇರಳದ ಕೊಡಿನ್ಹಿ ಪಟ್ಟಣವು ವಿಶ್ವದಲ್ಲೇ ಅತಿ ಹೆಚ್ಚು ಅವಳಿ ಮಕ್ಕಳನ್ನು ಹೊಂದಿದೆ.ಪಂಜಾಬ್‌ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್, ಧರ್ಮ, ಜಾತಿ, ಅಥವಾ ಪಂಥವನ್ನು ಲೆಕ್ಕಿಸದೆ ಪ್ರತಿದಿನ 100,000 ಕ್ಕೂ ಹೆಚ್ಚು ಜನರಿಗೆ ಉಚಿತ ಊಟವನ್ನು  ಒದಗಿಸುತ್ತದೆ.

 ಭಾರತದ ಮುಂಬೈ ನಗರವು ಭಾರತದಲ್ಲಿ ಅತ್ಯಂತ ಗಮನಾರ್ಹ ಸಂಖ್ಯೆಯ ಮಿಲಿಯನೇರ್‌ಗಳು ಮತ್ತು ಬಿಲಿಯನೇರ್‌ಗಳನ್ನು ಹೊಂದಿದೆ. ಮಹಾರಾಷ್ಟ್ರದ ಲೋನಾರ್ ಸರೋವರವು ಸುಮಾರು 52,000 ವರ್ಷಗಳ ಹಿಂದೆ ಉಲ್ಕೆಯ ಪ್ರಭಾವದ ಕುಳಿಯಲ್ಲಿ ರೂಪುಗೊಂಡ ಒಂದು ವಿಶಿಷ್ಟ ಮತ್ತು ನಿಗೂಢ ಉಪ್ಪುನೀರಿನ ಸರೋವರವಾಗಿದೆ.

 ಭಾರತದ ಗೋವಾ ರಾಜ್ಯವು ಎಲ್ಲಾ ಭಾರತೀಯ ರಾಜ್ಯಗಳಲ್ಲಿ ಅತಿ ಹೆಚ್ಚು ತಲಾವಾರು GDP ಹೊಂದಿದೆ, ಹೆಚ್ಚಾಗಿ ಅದರ ಅಭಿವೃದ್ಧಿ ಹೊಂದುತ್ತಿರುವ ಪ್ರವಾಸೋದ್ಯಮ ಉದ್ಯಮದಿಂದಾಗಿ. ವಿಶ್ವದ ಅತಿ ಹೆಚ್ಚು ಮಸಾಲೆಗಳನ್ನು ಉತ್ಪಾದಿಸುವ ದೇಶ ಭಾರತವಾಗಿದ್ದು, ಜಾಗತಿಕ ಮಸಾಲೆ ಉತ್ಪಾದನೆಯ 70% ಕ್ಕಿಂತ ಹೆಚ್ಚು ಪಾಲು ಹೊಂದಿದೆ.


 #incredibleindia #vedictemples #exploreindia

27 October 2024

ಸಾಕು ಮಗ .ಹನಿಗವನ


 



ಸಾಕು ಮಗ


ದತ್ತು ತೆಗೆದುಕೊಂಡ 

ಮಗ ಬಾಲ್ಯದಲ್ಲಿ ಓದಿನಲ್ಲಿ

ಸಾಧನೆ ಕಂಡ  ತಂದೆ ಹೆಮ್ಮೆಯಿಂದ ಹೇಳುತ್ತಿದ್ದರು

ಇವನು ನನ್ನ ಸಾಕು ಮಗ|

ಮಗನಿಗೆ ಮದುವೆ ಮಾಡಿದ 

ನಂತರ ಅರ್ಧ ಡಜನ್ 

ಮಕ್ಕಳನ್ನು  ಕೊಟ್ಟಿರುವ ಮಗನಿಗೆ ಆತಂಕದಿಂದ ಹೇಳುತ್ತಾರೆ 

ಸಾಕು ಮಗ||


ಸಿಹಿಜೀವಿ ವೆಂಕಟೇಶ್ವರ

ಕಾಯಸ್ತ ರಾಜ...


 #ದಕ್ಷಿಣ_ಭಾರತದ_ಕಾಯಸ್ಥ_ರಾಜ


 "ಆಂಧ್ರಪ್ರದೇಶದ ಅಯ್ಯಂಬೋಟ್ಲಪಲ್ಲಿಯಲ್ಲಿ  ಕಾಯಸ್ಥರಾಜಗಂಗಯ್ಯಸಾಹಿನಿಗೆ ಸಂಬಂಧಿಸಿದ ಶಾಸನ ಕಂಡುಬಂದಿದೆ."


 ಗಂಗಯ್ಯ ಸಾಹಿನಿ 1262 CE ನಲ್ಲಿ ನಿಧನರಾದರು ಎಂದು ಶಾಸನದಲ್ಲಿ ಉಲ್ಲೇಖವಿದೆ.

 ಕಾಯಸ್ಥ ರಾಜ ಗಂಗಯ ಸಾಹಿನಿಯ ಮರಣವನ್ನು ಚಿತ್ರಿಸುವ ಶಾಸನವು ಪ್ರಕಾಶಂ ಜಿಲ್ಲೆಯ ಅಯ್ಯಂಬೋಟ್ಲಪಲ್ಲಿಯಲ್ಲಿ ಕಂಡುಬಂದಿದೆ.

 ಪುರಾತತ್ವ ತಜ್ಞರು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಯರ್ರಗೊಂಡಪಾಲೆಂ ಮಂಡಲದ ಅಯ್ಯಂಬೋಟ್ಲಪಲ್ಲಿಯಲ್ಲಿ ದೊರೆತ ಶಾಸನದ ಆಧಾರದ ಮೇಲೆ ಕಾಯಸ್ಥ ರಾಜ ಗಂಗಯ ಸಾಹಿನಿಯ ಮರಣದ ವರ್ಷಕ್ಕೆ ಪುರಾವೆಗಳನ್ನು ಹುಡುಕಿದ್ದಾರೆ.


  ಕೆ. ಮುನಿರತ್ನಂ ರೆಡ್ಡಿಯವರು  ನಿರ್ದೇಶಕ (ಎಪಿಗ್ರಫಿ), ಭಾರತೀಯ ಪುರಾತತ್ವ ಸರ್ವೇಕ್ಷಣಾ (ASI) ಮೈಸೂರು, ಶಾಸನವನ್ನು ಡಿಕೋಡ್ ಮಾಡಿದ್ದಾರೆ."

 ಗಂಗಾಯ ಸಾಹಿನಿಯು ಸಾಹಿನಿ ಕಾಯಸ್ಥ ರಾಜವಂಶದ ಮೊದಲ ದೊರೆ.  ಅವರು ಕಾಕತೀಯ ರಾಜವಂಶದ (ಕಾಕತೀಯ ರಾಜವಂಶವು ಕ್ಯಸ್ತ ರಾಜವಂಶದವರಾಗಿದ್ದರು) ಗಣಪತಿ ದೇವರೊಂದಿಗೆ ಒಡನಾಟವನ್ನು ಹೊಂದಿದ್ದರು. 

 ಕಾಯಸ್ಥ ದೊರೆಗಳು ತಮ್ಮ ರಾಜ್ಯವನ್ನು ಪ್ರಸ್ತುತ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪಾನುಗಲ್ಲುನಿಂದ ಪ್ರಸ್ತುತ ಕರ್ನಾಟಕದ ಕೋಲಾರದ ಬಳಿ ಚಿಂತಾಮಣಿಯವರೆಗೆ ವಿಸ್ತರಿಸಿದರು.  ಈ ಕಾಯಸ್ಥರು ವಿವಿಧ ಕಾರಣಗಳಿಂದ ಆ ಸಮಯದಲ್ಲಿ ಮಹಾರಾಷ್ಟ್ರದಿಂದ ಆಂಧ್ರಪ್ರದೇಶಕ್ಕೆ ವಲಸೆ ಬಂದರು ಎಂದು ನಂಬಲಾಗಿದೆ.


 ಶ್ರೀ ಕೆ. ಮುನಿರತ್ನಂ ರೆಡ್ಡಿ ಅವರು ಶಾಸನವನ್ನು ತೆಲುಗು ಭಾಷೆಯಲ್ಲಿ ಬರೆಯಲಾಗಿದೆ ಮತ್ತು ದಿನಾಂಕ [ಶಕ 1184] ದುಂದುಭಿ, ಭಾದ್ರಪದ, ಸು 15, ಗುರುವಾರ, 1262 ಸಿ.ಇ.ಯಲ್ಲಿ ಆಗಸ್ಟ್ 31 ರಂದು ಚಂದ್ರಗ್ರಹಣ ಎಂದು ವಿವರಿಸಿದ್ದಾರೆ.


 "ಈ ಶಾಸನವು ಗಂಗಾಯ ಸಾಹಿನಿಯ (1239-1257 ಸಿ.ಇ.) ಪುಣ್ಯಕ್ಕಾಗಿ ಸತ್ರಯ್ಯನಿಂದ ಶ್ರೀಗಿರಿ (ಶ್ರೀಶೈಲದ ಮಲ್ಲಿಕಾರ್ಜುನ ದೇವರು) ದೇವರಿಗೆ ಸದಾ-ಸುಂಕಮ್ ಜೊತೆಗೆ ಗುಡೂರು ಗ್ರಾಮದ ಉಡುಗೊರೆಯನ್ನು (ಎಲ್ಲ ತೆರಿಗೆಗಳಿಂದ ವಿನಾಯಿತಿ ಪಡೆದ ನಂತರ) ದಾಖಲಿಸುತ್ತದೆ.  ಒಂದು ಚಂದ್ರ ಗ್ರಹಣ.  ಮೇಲಿನ ಕಾಣಿಕೆಯನ್ನು ಹಳ್ಳಿಶೆಟ್ಟಿಯವರಿಗೆ ಒಪ್ಪಿಸಲಾಯಿತು,” ಹಳ್ಳಿಶೆಟ್ಟಿ ಆ ಪ್ರದೇಶದ ವ್ಯಕ್ತಿಯಾಗಿದ್ದು, ಉಡುಗೊರೆಯನ್ನು ರಕ್ಷಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಯಿತು.

#sihijeeviVenkateshwara #inscription #stone #Kingdom #Telangana

ಆಮೆಯ ಕುತಂತ್ರ.


  ಆಮೆಯ ಕುತಂತ್ರ 


ನಾವು ಆಮೆ ಮತ್ತು ಮೊಲದ ಕತೆ ಕೇಳಿದ್ದೇವೆ.ಇದು ವಿಭಿನ್ನವಾದ ಕಥೆ ಓದಿ.ಒಂದು ದಿನ ಆಮೆಗೆ ತಿನ್ನಲು ಆಹಾರವಿರಲಿಲ್ಲ   ಅದು ಯೋಚಿಸಿತು.  ಹೇರಳವಾಗಿ ಆಹಾರವನ್ನು ಹೊಂದಿದ್ದ ಜಿಪುಣನಾದ ಮೇಕೆಯ ಬಳಿಗೆ ಹೋಗಿ"ಹೇ ಮೇಕೆ, ನಾನು ನಿನಗೆ ಸರಳವಾದ ಪ್ರಶ್ನೆಯನ್ನು ಕೇಳಬಹುದೇ?"  ಎಂದಿತು.  

 "ಖಂಡಿತವಾಗಿಯೂ  ಕೇಳಬಹುದು" ಮೇಕೆ ಉತ್ತರ ನೀಡಿತು."ವಿಶ್ವದ ಅತ್ಯಂತ ವೇಗದ ಪ್ರಾಣಿ ಯಾವುದು ಎಂದು ನೀನು ನನಗೆ ಹೇಳಬಲ್ಲೆಯಾ?" 

 ಮೇಕೆ ಪ್ರತಿಕ್ರಿಯಿಸಿತು. "ಭೂಮಿಯಲ್ಲಿ? ಅಥವಾ ನೀರಿನಲ್ಲಿ?" "ಭೂಮಿಯ ಮೇಲೆ" 

 "ಖಂಡಿತವಾಗಿಯೂ ಇದು ಚಿರತೆ" ಎಂದು ಮೇಕೆ ಹೇಳಿತು. 

 "ಸರಿ! ನೀನು ತುಂಬಾ ಬುದ್ಧಿವಂತ. ಕೇಳು, ನೀನು ನನಗೆ ಆಹಾರ ಕೊಟ್ಟರೆ, ನಾನು ನಿನ್ನನ್ನು ಭೂಮಿಯ ಮೇಲಿನ ಅತ್ಯಂತ ವೇಗದ ಜೀವಿಯನ್ನಾಗಿ ಮಾಡುತ್ತೇನೆ" ಎಂದಿತು ಆಮೆ 


 ಮೇಕೆ ಗೊಂದಲದಿಂದ ನುಡಿಯಿತು   "ಅದು ಹೇಗೆ ಸಾಧ್ಯ? ನೀನು ದೇವರೇ?" 

 "ನಾನು ದೇವರಲ್ಲ ಆದರೆ ನನಗೆ ಅಲೌಕಿಕ ಶಕ್ತಿಗಳಿವೆ. ನಾನು ನಿನಗೆ ಹೇಳಿದರೆ ನೀನು ನನ್ನನ್ನು ನಂಬುವುದಿಲ್ಲ. ಆದರೆ ನಾನು ರಣಹದ್ದಿಗೆ  ಮಾಟ ಮಂತ್ರ ಮಾಡಿ  ಕುರೂಪಿಯಾಗುವಂತೆ ಮಾಡಿದವನು"

 "ವಾವ್!"  ಮೇಕೆ ಉದ್ಘರಿಸುತ್ತಾ.  "ಹಾಗಾದರೆ ನೀನು ನನ್ನನ್ನು  ನಿಜವಾಗಿಯೂ ಚಿರತೆಗಿಂತ ವೇಗವಾಗಿ ಓಡುವಂತೆ  ಮಾಡಬಲ್ಲೆಯಾ?  ಎಂದಿತು"

 "ಖಂಡಿತವಾಗಿಯೂ" ಆಮೆ ಕೂಗಿತು. ಮೇಕೆ ಉತ್ಸುಕವಾಯಿತು.  ಅದು  ಆಮೆಯನ್ನು ಊಟಕ್ಕೆ ಆಹ್ವಾನಿಸಿತು  ಮತ್ತು ಅದಕ್ಕೆ ಉತ್ತಮ  ಆಹಾರ ಮತ್ತು ದ್ರಾಕ್ಷಾರಸವನ್ನು ಬಡಿಸಿತು.  ಹೊಟ್ಟೆತುಂಬಾ ತಿಂದು ಕುಡಿದು, ಆಮೆ ಹೊರಡಲು ಮುಂದಾದಾಗ ಮೇಕೆ ತಡೆದು. 

 "ಈಗ ಇದು ನಿನ್ನ ಸರದಿ. ನನ್ನನ್ನು ವಿಶ್ವದ ಅತ್ಯಂತ ವೇಗದ ಪ್ರಾಣಿಯಾಗಿ ಪರಿವರ್ತಿಸು . ನಾನು ಕಾಯಲು ಸಾಧ್ಯವಿಲ್ಲ" ಎಂದಿತು. ಆಮೆ ಗಹಗಹಿಸಿ ನಗುತ್ತಾ   ನಂತರ ಹೇಳಿತು.

 "ನೀನು ಎಷ್ಟು ದೊಡ್ಡ ಮೂರ್ಖ. ನಾನು ಪ್ರಪಂಚದಲ್ಲೇ ಅತೀ ನಿಧಾನವಾದ ಪ್ರಾಣಿ ಎಂದು ಎಲ್ಲರಿಗೂ ತಿಳಿದಿದೆ.ನನಗೆ ವೇಗವಾಗಿ ಪರಿವರ್ತಿಸುವ ಜಾದೂ ಗೊತ್ತಿದ್ದರೆ  ನನ್ನ ಮೇಲೆ ಅದನ್ನು ಪ್ರಯೋಗ ಮಾಡಿಕೊಂಡು ಮೊದಲು ನಾನೇ ವೇಗವಾದ  ಪ್ರಾಣಿಯಾಗುತ್ತಿದ್ದೆ ಅದೇನೇ ಇರಲಿ ಪುಷ್ಕಳ ಭೋಜನ ಹಾಕಿದ್ದಕ್ಕೆ  ಧನ್ಯವಾದಗಳು" ಎಂದು ಹೊರಡಲನುವಾಯಿತು.

 ಮೇಕೆಗೆ  ತುಂಬಾ ಕೋಪ ಬಂದು ಆಮೆಯ ಕುತ್ತಿಗೆಯನ್ನು ಹಿಡಿದು ಗೋಡೆಯ ಮೇಲೆ  ತಳ್ಳಿತು.  ನಂತರ ಲೋಹದ ರಾಡ್‌ನಿಂದ ಅದರ ಬೆನ್ನಿನ ಮೇಲೆ ಹಲವಾರು ಬಾರಿ ಅದರ  ಬೆನ್ನು ಬಿರುಕು ಬಿಡುವವರೆಗೆ ಹೊಡೆಯಿತು.


 ಬಂಧುಗಳೇ ನಮ್ಮ ಈ ಕಥೆಯಲ್ಲಿ ಬರುವ ಮೇಕೆಯಂತೆ ವಿವೇಚನೆಯಿಲ್ಲದ ತಮ್ಮ ಮೆದಳುನ್ನು ಸರಿಯಾಗಿ ಬಳಸದ  ಜನರು ನಮ್ಮ ನಡುವೆಯೇ ಈಗಲೂ ಇದ್ದಾರೆ. ಅಂತಹ ಜನರನ್ನು  ಆಮೆಯಂತಹವರು ಬಹಳ ಸುಲಭವಾಗಿ ವಂಚಿಸುವರು. "ಎತ್ತು  ಕರು ಹಾಕಿತು ಎಂದರೆ ಕೊಟ್ಟಿಗೆಯಲ್ಲಿ ಕಟ್ಟು" ಎಂಬ ಜಾಣರು ಈಗಲೂ ನಮ್ಮಲ್ಲಿ ಇದ್ದಾರೆ.ಶಿಕ್ಷಣದ ಮೂಲಕ ಜಾಗೃತರಾಗಿ ವಂಚಕರ ಬಲೆಗೆ ಬೀಳದೇ ವಿವೇಚನೆಯಿಂದ ಬದುಕಿದರೆ ನಮ್ಮ ಬಾಳು ಬಂಗಾರವಾಗುವುದು ಅಲ್ಲವೆ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು.   

 

26 October 2024

ಅಲಕ್ ಪಾಂಡೆ ,ಭಾರತದ ಅತ್ಯಂತ ಶ್ರೀಮಂತ ಶಿಕ್ಷಕ.


 


ಅಲಕ್ ಪಾಂಡೆ, ಭಾರತ ಕಂಡ ಅತ್ಯಂತ ಶ್ರೀಮಂತ ಶಿಕ್ಷಕ! 


ಮಗಳು ಸಂದೇಹ ಪರಿಹಾರಕ್ಕಾಗಿ ಒಮ್ಮೆ ‌ಯೂಟೂಬ್ ನಲ್ಲಿ ಫಿಸಿಕ್ಸ್ ವಿಷಯದ ಬಗ್ಗೆ ವೀಡಿಯೋ ನೋಡುತ್ತಿದ್ದಳು. ಕುತೂಹಲದಿಂದ ಚಾನೆಲ್ ಬಗ್ಗೆ ಕೇಳಿದಾಗ ಫಿಸಿಕ್ಸ್ ವಾಲಾ ಎಂದಳು.ಆ ಚಾನೆಲ್ ಸ್ಥಾಪಿಸಿದ ಅಲಕ್ ಪಾಂಡೆಯವರ ಸಾಧನೆ ಕೇಳಿ ಬೆರಗಾದೆ. 

ಭಾರತದಲ್ಲಿ ಯಾವೆಲ್ಲಾ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿದ್ದಾರೋ ಅವರೆಲ್ಲರಿಗೂ ಅಲಕ್ ಪಾಂಡೆ ಎಂಬ ಶಿಕ್ಷಕನ ಹೆಸರು ಚಿರಪರಿಚಿತ. ಈ ವ್ಯಕ್ತಿ ದೇಶದ ಎಲ್ಲ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೂ ಒಂದು ಲೆಕ್ಕದಲ್ಲಿ ಸ್ಫೂರ್ತಿಯ ಸೆಲೆ. ಇವರನ್ನು ಭಾರತದಲ್ಲಿಯೇ ಅತ್ಯಂತ ಶ್ರೀಮಂತ ಶಿಕ್ಷಕ ಎಂದು ಗುರುತಿಸಲಾಗುತ್ತದೆ. ಆದ್ರೆ ನೆನಪಿರಲಿ ಇವರು ಜೆಇಇ ಹಾಗೂ ಐಐಟಿ ಫೇಲ್ ಆದವರು. ಆದರೂ ಈಗ ಜೆಇಇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಇವರು ಶುರು ಮಾಡಿರುವ ತರಬೇತಿ ಕೇಂದ್ರದ ಹೆಸರು ಪಿಸಿಕ್ಸ್ ವಲ್ಹಾ ಎಂದು. ಅಲಕ್ ಪಾಂಡೆ ಈ ಒಂದು ಸಂಸ್ಥೆಯನ್ನು ಏಕಾಂಗಿಯಾಗಿ ಕಟ್ಟಿದ್ದರು. ಸದ್ಯ ಅವರ ಸಂಸ್ಥೆ ಈಗ ಸಾವಿರಾರು ಕೋಟಿ ರೂಪಾಯಿ ತಂದುಕೊಡುತ್ತಿದೆ. ಅಲಕ್ ಪಾಂಡೆಯವರು ಈ ಒಂದು ತರಬೇತಿ ಕೇಂದ್ರದಿಂದ ಗಳಿಸಿದ ಒಟ್ಟು ಆಸ್ತಿ 4500 ಕೋಟಿ ರೂಪಾಯಿ.

1991ರಲ್ಲಿ ಉತ್ತರಪ್ರದೇಶದ ಅಲಹಾಬಾದ್​ನಲ್ಲಿ ಹುಟ್ಟಿದ ಅಲಕ್ ಪಾಂಡೆ, ಜೀವನ ಕಳೆದಿದ್ದು ಅತ್ಯಂತ ಮಧ್ಯಮ ವರ್ಗದ ಕುಟುಂಬದಲ್ಲಿ. ಅವರ ತಂದೆ ಖಾಸಗಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಅವರ ತಾಯಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆರ್ಥಿಕ ಪರಿಸ್ಥಿತಿ ಅವರನ್ನು ಹೇಗೆ ತಿಂದು ಹಾಕಿತ್ತು ಎಂದರೆ. ಅದರಿಂದ ಪಾರಾಗಲು ಅವರು ಸ್ವಂತ ಮನೆಯನ್ನೇ ಮಾರಿ, ಬಾಡಿಗೆ ಮನೆಗೆ ಬರಬೇಕಾಯ್ತು.

ಅಲೋಕ್ ಪಾಂಡೆ 6ನೇ ತರಗತಿಯಲ್ಲಿದ್ದಾಗ ತನಗಿಂತ ಕಿರಿಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳುವ ಮೂಲಕ ಅವರ ಶಿಕ್ಷಕನ ವೃತ್ತಿ ಆರಂಭವಾಯತು. ಈ ವೇಳೆ ತಮ್ಮ ಊರಿನಿಂದ ಐದು ಕಿಲೋ ಮೀಟರ್ ನಡೆದುಕೊಂಡು ಹೋಗಿ ತನ್ನ ಜೂನಿಯರ್​ಗಳಿಗೆ ಪಾಠ ಮಾಡುತ್ತಿದ್ದರು.

ತಮ್ಮ ಶಾಲಾ ದಿನಗಳು ಮುಗಿದ ಬಳಿಕ ಅಲಕ್ ಐಐಟಿ ಹಾಗೂ ಜೆಇಇ ಪರೀಕ್ಷೆಯನ್ನು ಎದುರಿಸಿ ವಿಫಲರಾಗಿದ್ದರು.  ತಮ್ಮ ಪ್ರಯಾಣವನ್ನು ಯೂಟ್ಯೂಬ್ ಚಾನೆಲ್​ನತ್ತ ಹೊರಳಿಸಿದ ಅಲೋಕ್ ಹಿಂತಿರುಗಿ ನೋಡಲಿಲ್ಲ.

2014ರಲ್ಲಿ ತಮ್ಮದೇ ಒಂದು ಪಿಜಿಕ್ಸ್ ವಲ್ಹಾ ಎಂಬ ಚಾನೆಲ್ ಶುರು ಮಾಡಿದ ಅಲಕ್ ಪಾಂಡೆ ಅವರ ಕಲಿಕಾ ಶೈಲಿಯಿಂದಲೇ ಫೇಮಸ್ ಆದರು. ಅವರ ವಿಡಿಯೋಗಳು ಎಲ್ಲೆಡೆ ಹರಿದಾಡಲು ಶುರುವಾದವು. ಇಲ್ಲಿಂದ ಅಲಕ್ ಪಾಂಡೆ ಅವರ ಲಕ್ ಸಂಪೂರ್ಣವಾಗಿ ಬದಲಾಯ್ತು. ಮುಂದೆ ಇದು ವೆಬ್​ಸೈಟ್ ರೂಪವನ್ನು ಪಡೆದುಕೊಂಡಿತು. ಅನೇಕ ಕಡೆ ಪಿಜಿಕ್ಸ್ ವಲ್ಹಾ ಕೋಚಿಂಗ್ ಸೆಂಟರ್​ಗಳನ್ನು ಶುರುವಾದವು.ಸದ್ಯ ಅಲಕ್ ಪಾಂಡೆ ಅವರ ಆಸ್ತಿ 4100 ಕೋಟಿ ರೂಪಾಯಿ ತಲುಪುತ್ತದೆ. ಇವರು ಭಾರತದ ಅತ್ಯಂತ ಕಿರಿಯ ಬಿಲಿಯೇನಿಯರ್​ಗಳಲ್ಲಿ ಒಬ್ಬರು ಎಂದು ಗುರುತಿಸಲಾಗುತ್ತದೆ. ಇವರನ್ನು ಭಾರತದ ಅತ್ಯಂತ ಶ್ರೀಮಂತ ಶಿಕ್ಷಕ ಎಂದು ಕೂಡ ಗುರುತಿಸಲಾಗಿದೆ.


ಸಿಹಿಜೀವಿ ವೆಂಕಟೇಶ್ವರ

25 October 2024

ದುರ್ಗಮ ಚಾರಣ


 #ದುರ್ಗಮಚಾರಣ 


ನಮ್ಮಲ್ಲಿ ಕುಮಾರ ಪರ್ವತ ಚಾರಣ ದುರ್ಗಮ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಅದಕ್ಕಿಂತ ದುರ್ಗಮ ಮತ್ತು ಕಠಿಣ ವೆನುಜುಯೇಲ ದೇಶದ  ಟೆಪುಯಿ ಪರ್ವತಾರೋಹಣ!  ಅದು ಜೀವಮಾನದ ಸಾಹಸ!  ಈ ಸಾಹಸಕ್ಕೆ ಅತ್ಯುತ್ತಮ ದೈಹಿಕ ಸಾಮರ್ಥ್ಯದ ಅಗತ್ಯವಿದೆ.  ಹೃದಯರಕ್ತನಾಳದ ವ್ಯಾಯಾಮಗಳು, ಶಕ್ತಿ ತರಬೇತಿ ಮತ್ತು ಸಹಿಷ್ಣುತೆಯ ಮೇಲೆ ಕೇಂದ್ರೀಕರಿಸುವ ಮೂಲಕ ಕಠಿಣವಾಗಿ ತರಬೇತಿಯೂ ಬೇಕು.

 ಗಟ್ಟಿಮುಟ್ಟಾದ ಹೈಕಿಂಗ್ ಬೂಟುಗಳು, ಕ್ರಾಂಪನ್‌ಗಳು, ಹಗ್ಗಗಳು, ಸರಂಜಾಮುಗಳು ಮತ್ತು ಕ್ಯಾರಬೈನರ್‌ಗಳು ಬೇಕೇ ಬೇಕು.ಪ್ರಥಮ ಚಿಕಿತ್ಸಾ ಕಿಟ್, ದಿಕ್ಸೂಚಿ, GPS ಸಾಧನ ಮತ್ತು ನಕ್ಷೆಗಳಿದ್ದರೆ ಒಳಿತು...

ನೀವೇನಾದರೂ ವೆನುಜುಯೇಲಾಗೆ ಹೋದರೆ ಒಮ್ಮೆ ಈ ಟ್ರಕ್ ಟ್ರೈ ಮಾಡಿ..

#sihijeeviVenkateshwara #tour #venezuela #trekking

23 October 2024

ಟ್ರಿಸ್ಟಾನ್ ಡ ಕುನ್ಹಾ"...ದ್ವೀಪ

 

ಆ ದ್ವೀಪದಲ್ಲಿ   ಕೇವಲ 264 ಜನರು ವಾಸವಾಗಿದ್ದಾರೆ!.. ನೆಮ್ಮದಿ ಶಾಂತಿಯ ಬದುಕು ಅವರದಾಗಿದೆ...ಯಾವುದು ಆ ದ್ವೀಪ?..

ಅದೇ..

"ಟ್ರಿಸ್ಟಾನ್ ಡ ಕುನ್ಹಾ"...ದ್ವೀಪ

ಅಂಡಮಾನ್ ಭೂತಾನ್ ನೋಡಿ ಅಚ್ಚರಿಗೊಂಡ ನನಗೆ ಈ ದ್ವೀಪದ ಕುರಿತು ತಿಳಿದು ಇನ್ನೂ ಅಚ್ಚರಿಯಾಯಿತು.

ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿರುವ ದ್ವೀಪಸಮೂಹದ ಭಾಗವಾದ   ಈ ದ್ವೀಪವು ಹತ್ತಿರದ ಮಾನವ ವಾಸಿಸುವ ಜಾಗದಿಂದ  ಸುಮಾರು 2,400 ಕಿಲೋಮೀಟರ್  ದೂರದಲ್ಲಿದೆ, ಇದಕ್ಕೆ ಬಹಳ ಹತ್ತಿರದ ದ್ವೀಪ  ಸೇಂಟ್ ಹೆಲೆನಾ.

   ಟ್ರಿಸ್ಟಾನ್ ಡ ಕುನ್ಹಾದಲ್ಲಿನ ಜನರು   ಜೀವನಾಧಾರಕ್ಕೆ  ಕೃಷಿ ಮತ್ತು ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಕೆಲವರು  ಸೀಮಿತ ವ್ಯಾಪಾರ ಮತ್ತು ಪ್ರವಾಸೋದ್ಯಮದ ಮೇಲೆ ಜೀವನ ಸಾಗಿಸುತ್ತಿದ್ದಾರೆ.

ಟ್ರಿಸ್ಟಾನ್ ಡ ಕುನ್ಹಾ  ಜ್ವಾಲಾಮುಖಿಗೆ  ಹೆಸರುವಾಸಿಯಾಗಿದೆ, ದೊಡ್ಡ, ಕೇಂದ್ರ ಶಿಖರವು ಸಮುದ್ರ ಮಟ್ಟದಿಂದ 2,000 ಮೀಟರ್  ಎತ್ತರದಲ್ಲಿದೆ.  ದ್ವೀಪದ ಸೌಂದರ್ಯದ ಹೊರತಾಗಿಯೂ  ಕಠಿಣ ಹವಾಮಾನ ಮತ್ತು ಸೀಮಿತ ಮೂಲಸೌಕರ್ಯದಿಂದಾಗಿ ಅಲ್ಲಿನ ಜೀವನವು ಸವಾಲಿನದಾಗಿದೆ.  ದ್ವೀಪಕ್ಕೆ ಯಾವುದೇ ವಿಮಾನ ನಿಲ್ದಾಣವಿಲ್ಲ. ಆದ್ದರಿಂದ ಅದನ್ನು ತಲುಪಲು ಏಕೈಕ ಮಾರ್ಗವೆಂದರೆ ಸಮುದ್ರದ ಮೂಲಕ ಮಾತ್ರ  ಇದು ಹತ್ತಿರದ ಬಂದರಿನಿಂದ ಹಲವಾರು ದಿನಗಳ ಸಮುದ್ರ ಯಾನದ ಬಳಿಕ ಈ ದ್ವೀಪ ತಲುಪಬಹುದು. ತೆಗೆದುಕೊಳ್ಳಬಹುದು.

#sihijeeviVenkateshwara #island #cristenda #cunhã #tourist


14 October 2024

ಸೆಲಾ ಪಾಸ್..ಅರುಣಾಚಲ ಪ್ರದೇಶ್..







ಸೆಲಾ ಟನಲ್


ಸೆಲಾ ಟನಲ್ , ಭಾರತ ಸರ್ಕಾರವು 2018-19 ಬಜೆಟ್‌ನಲ್ಲಿ ಎಲ್ಲಾ ಹವಾಮಾನ ರಸ್ತೆ ಸಾರಿಗೆ ಸುರಂಗ ನಿರ್ಮಾಣಕ್ಕೆ ಹಣವನ್ನು ಘೋಷಿಸಿತು  ಜನವರಿ 2019 ರಲ್ಲಿ ನಿರ್ಮಾಣ ಪ್ರಾರಂಭವಾಗಿ  

ಮಾರ್ಚ್ 09, 2024 ರಂದು ಅರುಣಾಚಲ ಪ್ರದೇಶದ ಇಟಾನಗರದಲ್ಲಿ ವಿಕಸಿತ್  ಭಾರತ್ ವಿಕಸಿತ್  ಈಶಾನ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಲಾ ಸುರಂಗ ಯೋಜನೆಯನ್ನು ವರ್ಚುವಲ್ ಕಾರ್ಯಕ್ರಮದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿದರು.  ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ತವಾಂಗ್‌ನಿಂದ ಅಸ್ಸಾಂನ ತೇಜ್‌ಪುರವನ್ನು ಸಂಪರ್ಕಿಸುವ ರಸ್ತೆಯಲ್ಲಿ 13,000 ಅಡಿ.  ಒಟ್ಟು 825 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸುರಂಗವು ಬಲಿಪರಾ - ಚರಿದುವಾರ್ - ತವಾಂಗ್ ರಸ್ತೆಯಲ್ಲಿ ಸೆಲಾ ಪಾಸ್ ಮೂಲಕ ತವಾಂಗ್‌ಗೆ ಎಲ್ಲಾ ಹವಾಮಾನ ಸಂಪರ್ಕವನ್ನು ಒದಗಿಸುತ್ತದೆ, ಸಶಸ್ತ್ರ ಪಡೆಗಳ ಸನ್ನದ್ಧತೆಗೆ ಇದು ಸಹಕಾರಿ ಮತ್ತು ಗಡಿ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.  


 

11 October 2024

ಪರೋಪಕಾರ ಮಾಡೋಣ


ಭಾರತದಲ್ಲಿ ಬ್ರಿಟಿಷ್ ರ ಆಳುವಿಕೆ ಇದ್ದಾಗ ಬ0ಗಾಲ ದೇಶದಲ್ಲಿ ನಡೆದ ಒ0ದು ಸತ್ಯ ಘಟನೆ-


ಅಲ್ಲಿ ಕೊಲ್ಕತ್ತಾ ಪಟ್ಟಣಕ್ಕೆ ತಲುಪುವ ದೊಡ್ಡ ರೈಲು ಮಾರ್ಗ ಹಾದಿದೆ. ಮಾರ್ಗ ಮಧ್ಯ ಇರುವ ಚಿಕ್ಕ ನದಿಗೆ ಸೇತುವೆಯನ್ನು ಕಟ್ಟಲಾಗಿದೆ. ಆ ಸೇತುವೆ ಸಮೀಪ ನದಿಯ ದಡದಲ್ಲಿ ಬಡವರ ಒ0ದು ಗುಡಿಸಲು. ಅದರಲ್ಲಿ ಒಬ್ಬ ತಾಯಿ ಮಗಳು ವಾಸವಾಗಿದ್ದರು.ಅದು ಅರಣ್ಯ ಪ್ರದೇಶ.ಸಮೀಪದಲ್ಲಿ ಯಾವ ಗ್ರಾಮವೂ ಇರಲಿಲ್ಲ. 


ಒ0ದು ರಾತ್ರಿ ಧಾರಾಕಾರ ಮಳೆ.ಒ0ದೆರಡು ತಾಸಿನ ನ0ತರ ಮಳೆ ಕಡಿಮೆಯಾಯ್ತು .ಅಷ್ಟೊತ್ತಿಗೆ ಗುಡಿಸಲೆಲ್ಲಾ ನೀರಾಯ್ತು .ಇರುವ ಒ0ದೆರಡು ಹಾಸಿಗೆ ಹೊದಿಕೆಗಳೂ ನೆನೆದವು.ಮಲಗುವಷ್ಟೂ ಒಣಗಿದ ಸ್ಥಳವಿರಲಿಲ್ಲ.ಮಧ್ಯದಲ್ಲಿ ಒ0ದು ಒಲೆಯನ್ನು  ಹೊತ್ತಿಸಿ ಅದರ ಸುತ್ತ ತಾಯಿ ಮಗಳು ಕೂತಲ್ಲೇ ತೂಕಡಿಸುತ್ತಿದ್ದರು.ಇದ್ದಕ್ಕಿದ್ದ0ತೆ ಹೊರಗೆ ಭಯಂಕರ ಸದ್ದಾಯಿತು.

ಇದೇನಿದು ಎಂದು ಮಗಳು ಹೊರಗೆ ಬಂದು ನೋಡಿದಳು.ಮಿಂಚಿನ ಬೆಳಕಿನಲ್ಲಿ ನದಿಗೆ ಅಡ್ಡಲಾಗಿದ್ದ ಸೇತುವೆ ಕುಸಿದು ಬಿದ್ದದ್ದು ಕ0ಡಿತು !


ಮಗಳು ತಾಯಿಗೆ ಹೇಳಿದಳು, ಅಮ್ಮಾ ಇಷ್ಟರಲ್ಲೇ ಸಾವಿರಾರು ಜನರನ್ನು ತುಂಬಿಕೊ0ಡು ರೈಲು ಬರಲಿದೆ. ಈ ರಾತ್ರಿ ಅವರಿಗೆ ಸೇತುವೆ ಕುಸಿತದ್ದು ಕಾಣದೇ ಹೋದರೆ ಎ0ಥ ಭಯ0ಕರ ಅಪಘಾತವಾಗುತ್ತೆ ! ಇದನ್ನು ಹೇಗಾದರೂ ಮಾಡಿ ತಪ್ಪಿಸಲೇಬೇಕು.  ತಾಯಿ ಹೇಳಿದಳು, ಹೌದು ಮಗಳೇ ನಾವೇನು ಮಾಡಬಲ್ಲೆವು ?

ಒ0ದು ಕಟ್ಟಿಗೆಗೆ ಬಟ್ಟೆಯನ್ನು ದೀವಟಿಗೆ ಮಾಡಿ ತೋರಿಸಬಹುದಲ್ಲಾ ! ಅ0ದಳು ಮಗಳು.

ಸರಿ ಮಗಳೇ , ಒಣಗಿದ ಬಟ್ಟೆ ಎಲ್ಲಿದೆ ? ಎ0ದಳು ತಾಯಿ. 

ಅಮ್ಮಾ ನನ್ನ ಮೈಮೇಲಿರುವ ಬಟ್ಟೆಯು ಒಣದಾಗಿಯೇ ಇದೆಯಲ್ಲಾ ! ಎ0ದಳು ಮಗಳು


ಅವಳ ಹೃದಯ ಸಿರಿಗೆ ತಾಯಿ ತಕ್ಷಣ ಒಪ್ಪಿದಳು.ಮಗಳು ತನ್ನ ಮೈಮೇಲಿದ್ದ ಮಾನದ ಬಟ್ಟೆಯನ್ನು ಒ0ದು ಕಟ್ಟಿಗೆಗೆ ಕಟ್ಟಿ ಉರಿಸಿದಳು.ಆ ದೀವಟಿಗೆಯನ್ನು ಕೈಯಲ್ಲಿ ಹಿಡಿದು ತಾಯಿ ಮಗಳು ಕೂಡಿ ಕಾಣದ ಬ0ಧುಗಳ ಪ್ರಾಣವನ್ನು ಉಳಿಸಲು ರೈಲಿಗೆ ಎದುರಾಗಿ ದಾರಿಯನ್ನು ಹಿಡಿದು ನಡೆದರು.


ರೈಲು ಬರುವುದು ಒ0ದೆರಡು ನಿಮಿಷ ಉಳಿದಿತ್ತು.ಅಷ್ಟರಲ್ಲೇ ಕೈಯೊಳಗಿನ ದೀವಟಿಗೆ ನ0ದುವ0ತಾಯ್ತು .ತತ್ ಕ್ಷಣ ತಾಯಿ ತನ್ನ ಬಟ್ಟೆಯನ್ನೂ ದೀವಟಿಗೆಗೆ ಕಟ್ಟಿ ಉರಿಸಿ ಕೈಯಲ್ಲಿ ಹಿಡಿದು ಬೀಸಿದಳು.

ಚಾಲಕ ರೈಲು ನಿಲ್ಲಿಸಿದ. ಸೇತುವೆ ಬಿದ್ದು ಹೋಗಿರುವುದನ್ನು ನೋಡಿ ತಾಯಿ ಮಗಳ ತ್ಯಾಗಕ್ಕೆ ತಲೆಬಾಗಿದ.ರೈಲಿನಲ್ಲಿದ್ದ ಸಾವಿರ-ಸಾವಿರ ಜನರು ಆ ತಾಯಿ ಮಗಳಿಗೆ ಬಟ್ಟೆಯನ್ನು ಉಡಿಸಿ ಗೌರವಿಸಿದರು.ಹಾಡಿ ಹರಸಿದರು.ಆಗಿನ ಆ0ಗ್ಲ ಅಧಿಕಾರಿಗಳೂ ಆ ತಾಯಿ ಮಗಳನ್ನು ಸ0ತಸದಿ0ದ ಸತ್ಕರಿಸಿದರು..


ಎಂತಹ ತ್ಯಾಗ ಮತ್ತು ಸಹಕಾರದ ಮನೋಭಾವದ ಜನರು ನಮ್ಮ ದೇಶದಲ್ಲಿ ಇದ್ದರು ಎಂಬುದು ನಮ್ಮ ಹೆಮ್ಮೆ.

 

01 October 2024

ವನಸ್ನಾನದ ಬಗ್ಗೆ ನಿಮಗೆಷ್ಟು ಗೊತ್ತು?


#ವನಸ್ನಾನ 


ಸನ್ ಬಾತ್, ಮಡ್ ಬಾತ್ ಬಗ್ಗೆ ಕೇಳಿರುವ ನಾವು ವನ ಸ್ನಾನದ ಬಗ್ಗೆ ಕೇಳಿರುವುದು ಕಡಿಮೆ. ಹೌದು ಹೀಗೊಂದು ಅರಣ್ಯ ಸ್ನಾನ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರನ್ನು ಸೆಳೆಯುತ್ತಿದೆ.

1980 ರ ದಶಕದಲ್ಲಿ ಜಪಾನ್‌ನಲ್ಲಿ ಶಿನ್ರಿನ್-ಯೋಕು ಎಂಬ ಹೆಸರಿನಿಂದ ಆರಂಭವಾದ  ಅರಣ್ಯ ಸ್ನಾನ ಪರಿಕಲ್ಪನೆ ಇಂದು ಬಹುತೇಕ ದೇಶಗಳಲ್ಲಿ ಜಾರಿಯಲ್ಲಿದೆ.

  1990 ರ ದಶಕದಲ್ಲಿ ಸಂಶೋಧಕರು ಅರಣ್ಯ ಸ್ನಾನದ ಶಾರೀರಿಕ ಪ್ರಯೋಜನಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು.  

ವನಸ್ನಾನವನ್ನು  ವನಪ್ರಿಯರು ಮಾತ್ರವಲ್ಲ ಎಲ್ಲರೂ  ಅಭ್ಯಾಸ ಮಾಡಬಹುದು. 


ಅರಣ್ಯ ಅಥವಾ ವನ   ಸ್ನಾನವೆಂದರೆ ಕಾಡಿನ ಪರಿಸರದಲ್ಲಿ ಹೋಗಿ ಸುಮ್ಮನೆ ಮಾತಾನಾಡದೆ ಕೂತು ಕಾಡಿನ ಶಬ್ದಗಳನ್ನು ಕೇಳುವುದು.‌ ದೂರದಲ್ಲೊಂದು‌ ಹಕ್ಕಿ ತನ್ನ ಸಂಗಾತಿಗೆ ಕರೆಯವ ಶಬ್ದ, ಮೆಲ್ಲನೆ ತೇಲಿ ಬಂದು ಕಿವಿಗೆ ಅಪ್ಪಳಿಸುವ ಗಾಳಿ, ದೂರದ ಕಾಡಿನ ಮದ್ಯದಿಂದ ಬರುವ ಚಿತ್ರವಿಚಿತ್ರ ಶಬ್ದಗಳು ಇವುಗಳನ್ನು ಕೇಳಬಾರದು "ಆಲಿಸಬೇಕು". ಕಾಡಿನಲ್ಲಿ ನಾವು ಮಾತಾಡದೆ ಸುಮ್ಮನಿದ್ದರೆ ಕಾಡು ಮಾತನಾಡಲು ಪ್ರಾರಂಭಿಸುತ್ತದೆ.  ಅದನ್ನು ಅನುಭವಿಸಬೇಕು.


ನಾವು ದೇಹವನ್ನು ಪ್ರಕೃತಿಯೊಂದಿಗೆ ಜೋಡಿಸಿದಾಗ ಅದು ಯಾವಾಗಲೂ ಶಾಂತವಾಗಿರುತ್ತದೆ. ಆಗ ಮನಸ್ಸಿನಲ್ಲೊಂದು ಹೊಸ ಚೈತನ್ಯ ಮೂಡುತ್ತದೆ. ಎಂದು 

ಹಲವಾರು ವರ್ಷಗಳಿಂದ ವನ ಸ್ನಾನ ಮಾಡುತ್ತಿರುವ 

ನಿವೃತ್ತ ಉಪನ್ಯಾಸಕರಾದ ನಂಜುಂಡಪ್ಪ ರವರು ಅಭಿಪ್ರಾಯಪಡುತ್ತಾರೆ. ಪ್ರಕೃತಿಯ ಶಬ್ದಗಳನ್ನು ಆಲಿಸಿ, ನಮಗಾಗಿ ಹಾಡುವ ನಿರ್ದಿಷ್ಟ ಪಕ್ಷಿಗಳನ್ನು ವೀಕ್ಷಿಸಬಹುದು. ಮರವನ್ನು ತಬ್ಬಿಕೊಳ್ಳಿ, ಹೂವುಗಳನ್ನು ವಾಸನೆ ಗ್ರಹಿಸಿ, ತೊಗಟೆ ಮತ್ತು ಎಲೆಗಳ ವಿನ್ಯಾಸವನ್ನು ಪರಿಶೀಲಿಸಬಹುದು. ಭೂಮಿಯನ್ನು ಸ್ಪರ್ಶಿಸಿ ಮತ್ತು ಭೂಮಿಯ ವಾಸನೆಯನ್ನು ಅನುಭವಿಸಬಹುದು. 

ನಮಗೆ ದಣಿವಾದಾಗ, ಹುಲ್ಲು ಅಥವಾ ಬಿದ್ದ ಮರದ ಮೇಲೆ ಕುಳಿತು ವಿಶ್ರಾಂತಿ ಪಡೆಯಬಹುದು. ಕ್ಯಾಮರಾದಿಂದ ಚಿತ್ರಗಳನ್ನು ತೆಗೆದುಕೊಳ್ಳುವ ಬದಲು, ನಮ್ಮ ಕಣ್ಣುಗಳಿಂದ ಶೂಟ್ ಮಾಡುವ ಪ್ರಯತ್ನ ಮಾಡಬೇಕು. ಪ್ರತಿ ವಿವರವನ್ನು ನೋಡಿ ಮತ್ತು ಆಶ್ಚರ್ಯಪಡುತ್ತಾ ಆನಂದ ಪಟ್ಟರೆ  ಇದಕ್ಕಿಂತ ‌ದೊಡ್ಡ ಯೋಗ, ಧ್ಯಾನ ಮತ್ತೊಂದಿಲ್ಲ ಎನಿಸುತ್ತದೆ.

ಇಂತಹ ಅನುಭವದ ಅನುಭೂತಿಯನ್ನು ಪಡೆಯಲು ‌ನೀವು ಒಮ್ಮೆ ಅಥವಾ ಆಗಾಗ್ಗೆ ವನ ಸ್ನಾನ ಮಾಡಬಹುದು.


ಸಿಹಿಜೀವಿ ವೆಂಕಟೇಶ್ವರ

#sihijeeviVenkateshwara #forestbathing #forest #floral #bathing #relaxation



 

ಅಮರ .ಹನಿಗವನ


 

#ಅಮರ

ಆ ಮರ
ತಬ್ಬಿದೆ
ಈ ಮರ
ಹೇಳುತ್ತಿವೆ
ನಮ್ಮ ಸ್ನೇಹ
ಅಮರ

ಸಿಹಿಜೀವಿ ವೆಂಕಟೇಶ್ವರ

ಚಿತ್ರ ಕೃಪೆ: ಅಂತರ್ಜಾಲ..

ಮರೀನಾ ಬೀಚ್ ಚೆನ್ನೈ


 ಮರೀನಾ ಬೀಚ್..


ಕಳೆದ ವರ್ಷ ಅಕ್ಟೋಬರ್ ರಜೆಯಲ್ಲಿ  ಅಂಡಮಾನ್ ಗೆ ಟೂರ್ ಹೊರಟಾಗ ಎರ್ ಇಂಡಿಯಾದ ಪ್ರಮಾದದಿಂದ ಫ್ಲೈಟ್ ಕ್ಯಾನ್ಸಲ್ ಆದ ಪರಿಣಾಮವಾಗಿ ಎರಡು ದಿನ ಅವರ ಖರ್ಚಿನಲ್ಲಿ ‌ಚೆನ್ನೈನ ಒಂದು  ಹೋಟೆಲ್ ನಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಮಾಡಿದ್ದರು. ನಮಗೆ ಅದೊಂದು ಬೋನಸ್ ಟ್ರಿಪ್ ಮಾಡಲು ಸಹಕಾರಿಯಾಯಿತು. ಆ ಸಮಯದಲ್ಲಿ ನಾವು ಮರೀನಾ ಬೀಚ್ ನ ಸೌಂದರ್ಯ ಸವಿದೆವು.

ಬಂಗಾಳ ಕೊಲ್ಲಿಯಲ್ಲಿ ಚೆನ್ನೈನಲ್ಲಿರುವ ಮರೀನಾ ಬೀಚ್ ಭಾರತದ ಅತಿ ಉದ್ದದ ಮತ್ತು ವಿಶ್ವದ ಎರಡನೇ ಅತಿ ಉದ್ದದ ಬೀಚ್ ಆಗಿದೆ. ಸುಮಾರು 12 ಕಿಲೋಮೀಟರ್‌ಗಳ ಈ ಬೀಚ್ ದಕ್ಷಿಣದಲ್ಲಿ ಬೀಸಂಟ್ ನಗರದಿಂದ ಉತ್ತರದಲ್ಲಿ ಸೇಂಟ್ ಜಾರ್ಜ್ ಕೋಟೆಯವರೆಗೆ ವ್ಯಾಪಿಸಿದೆ. ಚೆನ್ನೈ ಮರೀನಾ ಬೀಚ್ ಅನ್ನು ಗವರ್ನರ್ ಮೌಂಟ್‌ಸ್ಟುವರ್ಟ್ ಎಲ್ಫಿನ್‌ಸ್ಟೋನ್ ಗ್ರಾಂಟ್ ಡಫ್ 1880 ರಲ್ಲಿ ನವೀಕರಿಸಿದರು. ಚೆನ್ನೈಗೆ ಪ್ರಯಾಣಿಸುವ ಎಲ್ಲಾ ಪ್ರವಾಸಿಗರು ಈ ಭವ್ಯವಾದ ಚೆನ್ನೈ ಬೀಚ್‌ಗೆ ಭೇಟಿ ನೀಡುವುದನ್ನು ತಪ್ಪಿಸುವುದಿಲ್ಲ. ಮರೀನಾ ಬೀಚ್ ಅನ್ನು ಬಸ್ಸುಗಳು, ಟ್ಯಾಕ್ಸಿಗಳು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಮೂಲಕ ಸುಲಭವಾಗಿ ತಲುಪಬಹುದು.



ಮರೀನಾ ಬೀಚ್ ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಚಟುವಟಿಕೆಯಿಂದ ತುಂಬಿರುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಕಡಲತೀರಗಳ ಉದ್ದಕ್ಕೂ ನಡೆಯುವುದು ಎಲ್ಲರಿಗೂ ಆಹ್ಲಾದಕರ ಅನುಭವ ನೀಡುತ್ತದೆ ಸಂಜೆಯ ವೇಳೆಗೆ ಈ ಬೀಚ್ ಕಲಾಕೃತಿಗಳು, ಕರಕುಶಲ ಪ್ರದರ್ಶನಗಳು,  ಆಭರಣಗಳು ಮತ್ತು ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಹಲವಾರು ಮಳಿಗೆಗಳೊಂದಿಗೆ ಜಗಮಗಿಸುತ್ತದೆ.

 

 ಗಾಳಿಪಟಗಳನ್ನು ಹಾರಿಸುವುದು ಮತ್ತು ಕುದುರೆ ಸವಾರಿ ಈ ಕಡಲತೀರದಲ್ಲಿ ಜನಪ್ರಿಯ ಚಟುವಟಿಕೆಗಳಾಗಿವೆ.



ಮರೀನಾ ಕಡಲತೀರದ ಪ್ರಮುಖ ಆಕರ್ಷಣೆಗಳೆಂದರೆ  ಅಕ್ವೇರಿಯಂ ಮತ್ತು ಐಸ್ ಹೌಸ್. ಚೆಪಾಕ್ ಅರಮನೆ, ಸೆನೆಟ್ ಹೌಸ್, PWD ಕಛೇರಿ, ಪ್ರೆಸಿಡೆನ್ಸಿ ಕಾಲೇಜು ಮತ್ತು ಚೆನ್ನೈ ವಿಶ್ವವಿದ್ಯಾನಿಲಯವು ಬೀಚ್ ಡ್ರೈವ್‌ನಲ್ಲಿರುವ ಐತಿಹಾಸಿಕ ಕಟ್ಟಡಗಳಾಗಿವೆ.


ವಿಕ್ಟರಿ ಆಫ್ ಲೇಬರ್ ಮತ್ತು ಮಹಾತ್ಮ ಗಾಂಧಿ ಮರೀನಾ ಬೀಚ್‌ನಲ್ಲಿರುವ ಎರಡು ಪ್ರಮುಖ ಪ್ರತಿಮೆಗಳು. ಈ ಚೆನ್ನೈ ಕಡಲತೀರದ ಉದ್ದಕ್ಕೂ ಇರುವ ಇತರ ಪ್ರತಿಮೆಗಳಲ್ಲಿ ಸ್ವಾಮಿ ಶಿವಾನಂದ, ಅವಯ್ಯರ್, ತಂತೈ ಪೆರಿಯಾರ್, ತಿರುವಳ್ಳುವರ್, ಡಾ. ಅನ್ನಿ ಬೀಸೆಂಟ್, ಜಿಯು ಪೋಪ್, ಸರ್ ಥಾಮಸ್ ಮನ್ರೋ, ಸುಬ್ರಮಣಿಯ ಭಾರತಿಯಾರ್, ಕಾಮರಾಜರ್, ರಾಬರ್ಟ್ ಕಾಲ್ಡ್ವೆಲ್, ಕನ್ನಗಿ, ಕಾಮರಾಜರ್, ಎಂಜಿ ರಾಮಚಂದ್ರನ್ ಮತ್ತು ಶಿವಾಜಿ  ಗಣೇಶನ್ ಪ್ರತಿಮೆಗಳು ಮುಖ್ಯವಾಗಿವೆ.


30 September 2024

ನಮ್ಮ ಪರಂಪರೆ ನಮ್ಮ ಹೆಮ್ಮೆ..


 ಅತ್ಯಂತ ಹಳೆಯ ಆಪ್ಟಿಕಲ್ ಇಲ್ಲೂಶನ್..


ಕಲೆಯಲ್ಲಿ ಪ್ರಪಂಚದ ಅತ್ಯಂತ ಹಳೆಯ ಆಪ್ಟಿಕಲ್ ಭ್ರಮೆಗಳಲ್ಲಿ ಒಂದಾದ 

ಆನೆ ಮತ್ತು ಗೂಳಿ ಒಂದೇ  ತಲೆಯನ್ನು ಹೊಂದಿರುವ 

900 ವರ್ಷಗಳಷ್ಟು ಹಳೆಯದಾದ ಈ ಸೊಗಸಾದ ಈ ಶಿಲ್ಪ ತಮಿಳುನಾಡಿನ ಐರಾವತೇಶ್ವರ ಮಂದಿರದಲ್ಲಿ ಕಾಣಬಹುದು  ಇದು ಚೋಳರ ವಾಸ್ತುಶಿಲ್ಪದ  ಶ್ರೇಷ್ಠತೆಗೆ ಮತ್ತೊಂದು  ಉದಾಹರಣೆ.

ನಮ್ಮ ಸಾಂಸ್ಕೃತಿಕ ಪರಂಪರೆ ನಮ್ಮ ಹೆಮ್ಮೆ..


29 September 2024

ನಂತರ #later

 

#ನಂತರ 


ನಮ್ಮಲ್ಲಿ ನಾನೂ ಸೇರಿ ಹಲವರು ಯಾವುದೇ ಕಾರ್ಯವನ್ನು ಮುಂದೂಡುವ ರೋಗ ಹೊಂದಿದ್ದೇವೆ.ಆಮೇಲೆ ಮಾಡಿದರಾಯಿತು.ಮುಂದೆ ನೋಡೋಣ   ನಂತರ ಮಾಡಿದರಾಯಿತು ಎಂಬ ನೆಪ ಹೇಳಿ ಸುಮ್ಮನಾಗುತ್ತೇವೆ.ಇತ್ತೀಚೆಗೆ 


"ಬಿಫೋರ್ ದ ಕಾಫಿ ಗೆಟ್ಸ್ ಕೋಲ್ಡ್ "ಎಂಬ  ತೋಶಿಕಾಜು ಕವಾಗುಚಿಯವರ  ಕಾದಂಬರಿಯ ಬಗ್ಗೆ ಓದುವಾಗ ಅಲ್ಲಿನ ಕೆಲ ಸಾಲುಗಳು ಇಷ್ಟವಾದವು.


ನಂತರ ಮಾಡುವೆ ಎಂಬುದನ್ನು ತೆಗೆದು ಹಾಕಿ.

 ನಂತರ ಕಾಫಿ ತಣ್ಣಗಾಗುತ್ತದೆ.

 ನಂತರ, ನೀವು ಆಸಕ್ತಿ ಕಳೆದುಕೊಳ್ಳುತ್ತೀರಿ.

 ನಂತರ, ಹಗಲು ರಾತ್ರಿಯಾಗಿ ಬದಲಾಗುತ್ತದೆ.

 ನಂತರ, ಜನರು ಬೆಳೆಯುತ್ತಾರೆ.

 ನಂತರ, ಜನರಿಗೆ  ವಯಸ್ಸಾಗುತ್ತದೆ.

 ನಂತರ, ಜೀವನವೇ ಕಳೆದುಹೋಗುತ್ತದೆ.

 ನಂತರ, ನೀವು ಏನನ್ನೂ ಮಾಡಲಿಲ್ಲ ಎಂದು ವಿಷಾದಿಸುತ್ತೀರಿ ...


 ನಿಮಗೆ ಅವಕಾಶ ಸಿಕ್ಕಾಗ. 

ನಿಮ್ಮ ಪಾಲಿನ ಕರ್ತವ್ಯವನ್ನು ಶ್ರದ್ಧೆಯಿಂದ ಪ್ರಮಾಣಿಕವಾಗಿ ಮಾಡಬೇಕು‌..

ಹೌದಲ್ಲವೆ?


#sihijeeviVenkateshwara 

#think #inspiration #literature

ಜಾಗರೂಕರಾಗಿ....

 ಎಪಿಕೆ ಫೈಲ್ ಡೌನ್ಲೋಡ್ ಆಗಿದ್ದರಿಂದ ನನ್ನ ಮೊಬೈಲ್ ಹ್ಯಾಕ್  ಮಾಡಿ ನನ್ನ ಮೊಬೈಲ್ ಕಂಟ್ರೋಲ್ ತೆಗೆದುಕೊಂಡು  ನಾನು ನೋಡು ನೋಡುತ್ತಿದ್ದಂತೆ  ನನಗೊಂದು ಓಟಿಪಿ ಅವರಿಗೊಂದು ಓಟಿಪಿ ಬರುತ್ತಿತ್ತು,  ನಮಗೆ ಗೊತ್ತಿಲ್ಲದ ಹಾಗೆ ಮೆಸೇಜ್ ಗಳಿಂದ ಬರುವ ಓಟಿಪಿಗಳನ್ನು ತಾವೇ ಸ್ವೀಕರಿಸಿ ಫ್ಲಿಪ್ ಕಾರ್ಟ್ ನಲ್ಲಿ ತಲಾ  10,000 ಅಂತೆ ಎರಡು ಸಲ ಆರ್ಡರ್ ಮಾಡಿ  ಆನ್ಲೈನ್ ಮೂಲಕ ಎಲೆಕ್ಟ್ರಾನಿಕ್ ಇ-ಮೇಲ್  ಗಿಫ್ಟ್ ಓಚರ್ ಗಳನ್ನು  ಪಡೆದುಕೊಂಡಿರುತ್ತಾರೆ. ಮಧ್ಯಾಹ್ನ 12 ಗಂಟೆಗೆ ಆರ್ಡರ್ ಮಾಡಿದರು, 12:30ಕ್ಕೆ  ಅವರಿಗೆ ಡೆಲಿವರಿ ಆಯಿತು. ಯಾರೋ ಮಹಾನ್ ಬಾವರು ಗ್ರೂಪಿಗೆ ಎಪಿಕೆ ಫೈಲ್ಸ್ ಕಳಿಸಿಕೊಟ್ಟಿದ್ದರಿಂದ ನಾನು ಸರಿಯಾಗಿ ಪರಿಶೀಲದೆ ಅವಸರವಾಗಿ ಡೌನ್ಲೋಡ್ ಮಾಡಿದೆ, ಆಕರಗಳು ನನ್ನ ಮೊಬೈಲನ್ನು ಮೊಬೈಲ್ ಇರೋ ಮಾಹಿತಿಗಳನ್ನು ನಿಧಾನವಾಗಿ ಸಂಗ್ರಹಿಸಿ, ಒಂದೇ ಸಲ ತಲಾ ಹತ್ತು ಸಾವಿರ ರೂಪಾಯಿಗೆ ಐದು ಸಲ ಆರ್ಡರ್ ಮಾಡಿದರು, ಅಂದರೆ 50,000ಗಳನ್ನು ಆರ್ಡರ್ ಮಾಡಿದರು, ನಾನು ತಕ್ಷಣ ಬ್ಯಾಂಕ್ಗೆ ಫೋನ್ ಮಾಡಿ ನನ್ನ ಎಲ್ಲಾ ಯುಪಿಐ ಬ್ಯಾಂಕ್ ಎಟಿಎಂ ಕಾರ್ಡ್ ಗಳನ್ನು ಸ್ಟಾಪ್ ಮಾಡುವಂತೆ ಕೋರಿಕೊಂಡಿದ್ದರಿಂದ, ಬ್ಯಾಂಕಿನವರು ತಕ್ಷಣ ಕಾರ್ಡನ್ನು  ಲಾಕ್ ಮಾಡಿದರು, ಅಷ್ಟರೊಳಗಾಗಿ, 20,000 ಹ್ಯಾಕರ್ಸ್ ಕೈಗೆ ಹೋಗಿತ್ತು. ಹಾಗಾಗಿ ನಾನು ಎಲ್ಲರಲ್ಲಿ ಕೇಳಿಕೊಳ್ಳುವುದೇನೆಂದರೆ ಅಮೆಜಾನ್,  ಫ್ಲಿಪ್ಕಾರ್ಟ್, ಆರ್ಡರ್ ಮಾಡುವಾಗ  ಡೋರ್ ಡೆಲಿವರಿ ಮಾಡಿ, ದಯವಿಟ್ಟು ಎಟಿಎಂ ಕಾರ್ಡ್ ಕ್ರೆಡಿಟ್ ಕಾರ್ಡ್ ಡೀಟೇಲ್ಸ್ ಹಾಕಿದ್ದರೆ ದಯವಿಟ್ಟು ಈಗ ಕೂಡಲೇ ಡಿಲೀಟ್ ಮಾಡಿ, ನನಗಾದ ಪರಿಸ್ಥಿತಿ ನಿಮಗೆ ಬರುವುದು ಬೇಡ, ಜಾಗರೂಕರಾಗಿರಿ,  ಎಚ್ಚರವಾಗಿರಿ. ನಮ್ಮ ನ್ಯಾಯಾಲಯದಲ್ಲಿ ಈ ರೀತಿ 20 ರಿಂದ 25 ಕೇಸ್ಗಳು ಪ್ರತಿದಿನ  ನೋಂದಣಿ ಆಗುತ್ತಿದೆ. ನಮಗೆ ಈ ರೀತಿ ಆದರೆ ಜನಸಾಮಾನ್ಯರ ಗತಿಯೇನು?. ನನಗಾದ ಪರಿಸ್ಥಿತಿಯನ್ನು ಎಲ್ಲರಿಗೂ ತಿಳಿಸಿ ನೀವು ಸಹ ಎಚ್ಚರದಿಂದಿರಿ. 🙏🙏

26 September 2024

ಪ್ಲಾಸ್ಟಿಕ್ ಬಳಕೆ ನಿಲ್ಲಿಸೋಣ...



 ಸಿಕ್ಕಿಂ ನಲ್ಲಿ ಪ್ಲಾಸ್ಟಿಕ್ ಬಾಟಲ್ ಗಳ ಬದಲಾಗಿ ಬಿದಿರಿನ ಬಾಟಲ್ ಗಳ ಬಳಕೆ ಹೆಚ್ಚಾಗುತ್ತಿದೆ.ಎಲ್ಲಾ ಕಡೆ ಇದು ಮುಂದುವರೆಯಲಿ..ಪರಿಸರ ಸಂರಕ್ಷಣೆಯ ಮಾತುಗಳನ್ನು ನಿಲ್ಲಿಸಿ ಕೃತಿಗಳಲ್ಲಿ ತೋರಿಸೋಣ...

#ಪರಿಸರಕಾಳಜಿ



Sikkim is setting a remarkable example by embracing bamboo bottles over plastic ones, paving the way for a more sustainable future; let's strive to make this eco-friendly practice a nationwide phenomenon.

#sihijeeviVenkateshwara #ecofriendly #environmentallyfriendly #SayNoToPlastic


#


25 September 2024

ಅಪ್ಪನೂ ಗ್ರೇಟ್ ...ಹನಿಗವನ..


 


ಅಪ್ಪನೂ ಗ್ರೇಟ್..


ನನ್ನ ಬಾಲ್ಯದ ದಿನಗಳಲ್ಲಿ ಅಪ್ಪ 

ಕೊಡಿಸಿದ್ದರು ಸೂಟು ಬೂಟು 

ದುಬಾರಿ ಬೆಲೆ ತೆತ್ತು|

ಯಾರಿಗೂ ಗೊತ್ತೇ ಆಗಿರಲಿಲ್ಲ  ಅವರ  ಬೂಟುಗಳಲ್ಲಿನ ತೂತು||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

24 September 2024

ಗೌರವ .ಹನಿಗವನ

 



ಗೌರವ


ಗೌರವವೆನ್ನುವುದು 

ಒಂದು ಕನ್ನಡಿ|

ಇತರರಿಗೆ ನೀಡಿದರೆ

ಆಗುವುದು ಇಮ್ಮಡಿ||


ಸಿಹಿಜೀವಿ ವೆಂಕಟೇಶ್ವರ

22 September 2024

ಆದರ್ಶ ಪಿತ ,ಹೆಮ್ಮೆಯ ಸುತ.


 


ಆದರ್ಶ ಪಿತ ,ಹೆಮ್ಮೆಯ ಸುತ.


ಜಗತ್ತಿನಲ್ಲಿ ತಾಯಿಯ ತ್ಯಾಗಕ್ಕೆ, ಮಮತೆಗೆ, ಪಾಲನೆ ಮಾಡುವ ಗುಣಕ್ಕೆ ಸಾಟಿ ಬೇರಾವುದೂ ಇಲ್ಲ ಅಂತೆಯೇ ತಾಯಿಯ ಗುಣಗಳನ್ನು ಕೊಂಡಾಡುವ ಸಾವಿರದ ಕಥೆಗಳಿಗೆ ಬರವಿಲ್ಲ. ಸಂಸಾರ ಪೋಷಣೆಯಲ್ಲಿ   ತಾಯಿಗೆ ಬೆಂಬಲವಾಗಿ ನಿಂತ ತಂದೆಯನ್ನು ನಾವು ಮರೆತೇ ಬಿಟ್ಟೆವೇನೋ ಎಂದೆನಿಸುವುದು ಸುಳ್ಳಲ್ಲ. ಇತ್ತೀಚೆಗೆ ಗೆಳೆಯನೊಬ್ಬ ಕಳಿಸಿದ ಸಂದೇಶವು ತಂದೆ ಮಗನ ನಡುವಿನ ಅಗೋಚರವಾದ ಬಾವುಕ ಪ್ರೀತಿಯನ್ನು ತರೆದಿಟ್ಟಿತು.ಅದನ್ನು  ನೀವು ಓದಿದರೆ ಖಂಡಿತವಾಗಿಯೂ ನೀವು ಬಾವುಕರಾಗುವಿರಿ.


ತಂದೆ ತಾಯಿ ತಮ್ಮ ಒಬ್ಬನೇ ಮಗನನ್ನು ಮಮತೆಯಿಂದ ಸಾಕಿ ಸಲಹಿ ಒಳ್ಳೆಯ ವಿದ್ಯಾಭ್ಯಾಸವನ್ನೂ ಕೊಡಿಸಿದರು. ಮಗನೂ ಸಹ ಕಷ್ಟಪಟ್ಟು ಓದಿ ತುಂಬಾ ವಿಧೇಯನಾಗಿ ನಡೆದುಕೊಂಡು ವಿಧ್ಯಾಭ್ಯಾಸವನ್ನು ಮುಗಿಸಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದನು. ಒಂದು ಉತ್ಕೃಷ್ಟ ಕಂಪನಿಯಲ್ಲಿ ಕೆಲಸವೂ ಅರಸಿಕೊಂಡು ಬಂತು. ಮೊದಲನೇ ಸಂಬಳವೂ ಸಹ ಅವನ ಕೈ ಸೇರಿತು.


   ತನ್ನ ಮೊದಲ ಸಂಬಳವನ್ನು ತಾಯಿಯ ಕೈಗೆ ಕೊಟ್ಟು ನಮಸ್ಕರಿಸಿದ. ತಾಯಿಗೆ ಖುಷಿಯಾಯಿತು. ಅವಳು ಒಂದು ಕ್ಷಣ ಆಲೋಚಿಸಿ, ಮೊದಲು ಇದನ್ನು ನಿಮ್ಮ ತಂದೆಯ ಕೈಗೆ ಕೊಡು ಎಂದಳು. ಮಗನು ತಾಯಿಯ ಮಾತು ಕೇಳಿಸಿಕೊಂಡರೂ ಕೇಳದಂತೆ ಇದ್ದನು. ಮತ್ತೆ ತಾಯಿಯು ತಂದೆಯ ಕೈಗೆ ಕೊಡುವಂತೆ  ಹೇಳಿ  ಆ ಹಣವನ್ನು ಮರಳಿ ಮಗನ ಕೈಗೆ ನೀಡಿದಳು.


ಆಗ ಮಗನು, ''ಇಲ್ಲಮ್ಮ ನಾನು ಅವರಿಗೆ ಕೊಡುವುದಿಲ್ಲ'' ಎಂದನು. "ಹಾಗೆ ಹೇಳಬಾರದು ಕಂದಾ"ಎಂದಳು ತಾಯಿ. "ನನ್ನಿಂದ ಸಾಧ್ಯವಿಲ್ಲ" ಎಂದು ಮಗ ಉತ್ತರಿಸಿದ. ಇದರಿಂದ ತಾಯಿಗೆ ಸಿಟ್ಟು ಬಂದಿತು. ಇದುವರೆಗೆ ವಿಧೇಯನಾಗಿದ್ದ ಮಗನ ಈ ವರ್ತನೆಗೆ ನೊಂದಳು. ಬೆಳೆದ ಮಗ ಮುಂದೆ ಮನೆಯ ಜವಾಬ್ಧಾರಿ ಹೊರುವ ಈತ ಹೀಗೇಕೆ ? ಎಂದು ಮನದಲ್ಲಿಯೇ ಸಂಕಟ ಪಟ್ಟುಕೊಂಡಳು. ಕೊನೆಗೆ ಏನಾಯಿತೋ ಏನೋ ಬೆಳೆದ ಮಗ ಎಂದೂ ನೋಡದೆ ತಕ್ಷಣವೇ ಕಪಾಳಕ್ಕೆ ಚಟಾರ್ ಎಂದು ಭಾರಿಸಿದಳು. ಕೋಪದಿಂದ ಬೈದಳು. ಮುಂದುವರೆದು "ಮೊದಲ ಸಂಬಳ ತೆಗೆದುಕೊಂಡ ಕೂಡಲೆ ನೀನು ದೊಡ್ಡವನಾದಿಯೇನೋ, ಬಹಳ ದೊಡ್ಡ ವ್ಯಕ್ತಿ ಆಗಿಬಿಟ್ಟಿಯೇನೋ,ಛೇ!" ಎಂದು ಮೂದಲಿಸಿದಳು.

"ತಂದೆಗೆ ಕೊಡು ಎಂಬ ನನ್ನ ಮಾತನ್ನು ಸಹ ನೀನು ದಿಕ್ಕರಿಸಿರುವೆ. ಇದೇನಾ ನೀನು ಇದುವರೆಗೂ ಕಲಿತುಕೊಂಡ ಸಂಸ್ಕಾರ" ಎಂದು ಬೈದಳು.


ಮಗನು ತನ್ನ ಕೆನ್ನೆಯನ್ನು ಸವರಿಕೊಳ್ಳುತ್ತಾ ಕಣ್ಣಿಂದ ಸಿಡಿದ ಹನಿಯನ್ನು ಅಂಗೈಯಿಂದ  ಒರೆಸಿಕೊಳ್ಳುತ್ತಾ  ದುಃಖದಿಂದ ತಾಯಿಗೆ ಹೇಳುತ್ತಾನೆ, ''ಇಲ್ಲಮ್ಮ, ನನ್ನ ತಂದೆಯ ಕೈ ಯಾವತ್ತೂ ಮೇಲೆಯೇ ಇರಬೇಕು. ಕೆಳಗೆ ಕೈ ಚಾಚಕೂಡದು. ಹಾಗೆಯೇ ಮೇಲೆಯೇ ಇರಲಿ ಎಂಬುದೇ ನನ್ನ ಅದಮ್ಯ ಆಸೆ. ಇದುವರೆಗೂ ಅವರಿಂದ ನಾನು ಹಣ ಪಡೆದುಕೊಳ್ಳುವಾಗ ಹೆಮ್ಮೆಯಿಂದ ಸ್ವೀಕರಿಸಿದ್ದೇನೆ. ಈಗ ನಾನು ಅವರಿಗೆ ಇದನ್ನು ಕೊಡುವಾಗ ಅವರ ಕೈ ನನ್ನ ಕೈಗಳ ಕೆಳಗೆ ಬರುತ್ತದೆ. ಅದು ನನಗಿಷ್ಟವಿಲ್ಲ. ಎಂದೆಂದೂ  ಸರ್ವಕಾಲಕ್ಕೂ ನನ್ನ ತಂದೆಯ ಕೈಗಳು ಮೇಲೆಯೇ ಇರಬೇಕು.      ನೀವೇ ಇದನ್ನು ಅಪ್ಪನಿಗೆ ಕೊಟ್ಟು ಬಿಡಿ. ಅವರಿಗೆ ಹಣ ಕೊಡುವಷ್ಟು ಯಾವ ಅರ್ಹತೆಯೂ ನನಗಿಲ್ಲ. ನೀವು ಕೊಡಿ, ನಾನು ನಮಸ್ಕಾರ ಮಾಡಿ ಅವರಿಂದ ಆಶೀರ್ವಾದ ಪಡೆಯುವೆ'' ಎಂದನು. 

ತಾಯಿಗೆ ದಿಗ್ಭ್ರಮೆಯಾಯಿತು. ವಿಗ್ರಹದಂತೆ   ನಿಂತು ಬಿಟ್ಟಳು.


   ಕೊಠಡಿಯ ಒಳಗೆ ಕುಳಿತು ತಾಯಿ-ಮಗನ ಸಂಭಾಷಣೆಯನ್ನು ಕೇಳಿಸಿ ಕೊಳ್ಳುತ್ತಿದ್ದ ತಂದೆ, ತಕ್ಷಣ ಹೊರಬಂದು ತಮ್ಮ ಮಗನನ್ನು ನೋಡಿದ. ಕಣ್ಣಲ್ಲಿ ನೀರು ತುಂಬಿ ಬಂತು. ಅದು ಆನಂದ ಭಾಷ್ಬ. ತನ್ನ ಎರಡು ಬಾಹುಗಳಿಂದ ಮಗನಿಗೆ ಬಿಗಿಯಾದ ದೀರ್ಘಾಲಿಂಗನ ಮಾಡಿದನು. ತನ್ನ ಮಗ ತನ್ನನ್ನು ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿರುವನಲ್ಲ ಎಂದು ಹೆಮ್ಮೆಯಿಂದ ಮಗನ ಕಣ್ಣಿನೊಳಗೆ ತನ್ನ ಬಿಂಬವನ್ನು ನೋಡಿ ಪುಳಕಿತನಾದನು. ಮನದಲ್ಲಿ ಹೆಮ್ಮೆಯ ಸಾರ್ಥಕ ಭಾವ ತುಂಬಿ ಬಂದಿತು. ಮೈ ಮನಸ್ಸು ಹಗುರವಾಗಿ ಗಾಳಿಯಲ್ಲಿ ತೇಲಿದ ಅನುಭವ. ಕೈಯಲ್ಲಿ ಮೋಡ ಹಿಡಿದ ಅನುಭವವಾಯಿತು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


 

20 September 2024

ಸಿಹಿಜೀವಿಯ ನುಡಿ


 



ಸವಾಲುಗಳೆಷ್ಟೇ ಇರಲಿ। 

ಗುರಿಮುಟ್ಟುವ ನಿರಂತರ ಪ್ರಯತ್ನ ಜಾರಿಯಲ್ಲಿರಲಿ॥


©ಸಿಹಿಜೀವಿ ವೆಂಕಟೇಶ್ವರ

ಭಾರತದ ಅಗಲವಾದ ರಸ್ತೆ...


 ಹೊಸ ಬೆಂಗಳೂರು- ಮುಂಬೈ ಎಕ್ಸ್‌ಪ್ರೆಸ್ ವೇ

  ಹೊಸ 14 ಲೇನ್ ಗಳ  ಮುಂಬೈ-ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಾಣ ಮಾಡಲಾಗುತ್ತದೆ.

 ಆರಂಭದಲ್ಲಿ ಇದನ್ನು 8 ಲೇನ್ ಪುಣೆ ಬೆಂಗಳೂರು ಎಕ್ಸ್‌ಪ್ರೆಸ್‌ವೇ ಯೋಜಿಸಲಾಗಿತ್ತು ಆದರೆ ಈಗ ಮುಂಬೈ-ಬೆಂಗಳೂರು ಅನ್ನು ಪುಣೆ ಮೂಲಕ ಸಂಪರ್ಕಿಸಲು ಯೋಜನೆಯನ್ನು ಬದಲಾಯಿಸಲಾಗಿದೆ ಈ ಎಕ್ಸ್‌ಪ್ರೆಸ್‌ವೇ ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕವನ್ನು ಮುಂಬೈ ಮತ್ತು ಬೆಂಗಳೂರಿಗೆ ಹತ್ತಿರ ತರುತ್ತದೆ ಮತ್ತು ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ ಮತ್ತು ಸಾಗಾಣಿಕೆ ವೆಚ್ಚವನ್ನು ಬಹಳ  ಕಡಿಮೆ ಮಾಡುತ್ತದೆ. ಈ ಯೋಜನೆ ಪೂರ್ಣಗೊಂಡ ಮೇಲೆ ಭಾರತದಲ್ಲಿ ಅಗಲದಲ್ಲಿ ಅತಿದೊಡ್ಡ ಎಕ್ಸ್‌ಪ್ರೆಸ್‌ವೇ ಆಗಿರಲಿದೆ...

#road #infrastructure #Expressway #sihijeeviVenkateshwara

19 September 2024

ಹನಿಗವನ

 

ಸಿರಿಬಂದ ಕಾಲಕ್ಕೆ ನೆಂಟರು

ನೂರು|

ಆಪತ್ಕಾಲದಲ್ಲಿ ತಿಳಿವುದು ನಮಗೆ ನಮ್ಮವರಾರು?||


#sihijeeviVenkateshwara #quotes #kannada #quoteoftheday

16 September 2024

ಮಹಾಶರಣ ಕಮ್ಮಾರ ಕಲ್ಲಯ್ಯ...ಪುಸ್ತಕ ಪರಿಚಯ..


 


ಕಮ್ಮಾರ ಕಲ್ಲಯ್ಯ.

ಮಾಹಾಶರಣರ ಬಗ್ಗೆ ಒಂದು ಸಂಶೋಧನಾ ಕೃತಿ


ಎಂದಿನಂತೆ ಮಗಳೊಂದಿಗೆ ವಾಕ್ ಮಾಡಿ ಬರುವಾಗ ಆತ್ಮೀಯರಾದ ಮಂಜಣ್ಣನವರು ಒಂದು ಪುಸ್ತಕ ನೀಡಿ  ಈ  ಪುಸ್ತಕ  ಓದಿ ಸರ್ ಎಂದರು. ಬಹುತೇಕ ನನ್ನ ಎಲ್ಲಾ  ಬರೆಹಗಳನ್ನು ಓದಿ ಪ್ರೋತ್ಸಾಹ ಮಾಡುವ ಮಂಜಣ್ಣನವರ ಸಾಹಿತ್ಯಾಭಿರುಚಿ ಕಂಡು ಅವರನ್ನು ಆಗಾಗ ಧನ್ಯವಾದಗಳನ್ನು ಹೇಳುತ್ತಲೇ ಬಂದಿರುವೆ.ಈಗ ಒಂದು ಕಿರುಹೊತ್ತಿಗೆ ನೀಡಿ ಹಿರಿದಾದ ಜ್ಞಾನವನ್ನು ಪಡೆಯಲು ಸಹಕಾರಿಯಾದ ಮಂಜಣ್ಣನವರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಹೇಳಲೇಬೇಕು.

ಅಂದ ಹಾಗೆ ಅವರು ಅಂದು ನನಗೆ ನೀಡಿದ ಪುಸ್ತಕ  "ಮಹಾಶರಣ ಕಮ್ಮಾರ ಕಲ್ಲಯ್ಯ"


ಆಕಾಶದಲ್ಲಿ ನಕ್ಷತ್ರದಂತೆ ಮಿನುಗುತ್ತಾ ಬೆಳೆದು ಬಂದಂತಹ 12 ನೇ ಶತಮಾನದಲ್ಲಿ ಬೆಳಕಿಗೆ ಬಂದ ಸಂತತಿಯಲ್ಲಿ ಶರಣ ಬಸವಣ್ಣನವರ ಸಂಸ್ಕಾರ ದಡಿಯಲ್ಲಿ ಸಾವಿರಾರು ಶರಣರು ಬೆಳೆದು ಹೆಮ್ಮರವಾಗಿದ್ದಾರೆ.

ಎಲ್ಲಾ ವರ್ಗದ ಶರಣರನ್ನು ಸಮಾನವಾಗಿ ಕಂಡು ಪ್ರೋತ್ಸಾಹ ನೀಡಿ ಬೆಳೆಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು. ಈಗಾಗಲೇ ಹಲವಾರು ಶರಣರು ಲಭ್ಯ ವಚನಗಳ  ಆಧಾರದ ಮೇಲೆ ಜನಜನಿತರಾಗಿದ್ದಾರೆ.ಇನ್ನೂ ಕೆಲ ಶರಣರು ದಾಖಲೆಗಳ ಕೊರತೆಯಿಂದ  ಅಜ್ಞಾತವಾಗಿಯೇ ಉಳಿದಿದ್ದಾರೆ.ಅಂತಹವರಲ್ಲಿ  ಒಬ್ಬರು ಮಹಾ ಶರಣ ಕಮ್ಮಾರ ಕಲ್ಲಯ್ಯ‌.

 ಕಮ್ಮಾರಿಕೆ ಕುಲವೃತ್ತಿಯನ್ನು ಮಾಡುತ್ತಾ ದಾರ್ಶನಿಕರಾಗಿ ಜಗತ್ತಿನ ಶ್ರೇಷ್ಠ ಪಂಕ್ತಿಯಲ್ಲಿ ಬೆಳೆದಿರುವ ಶರಣರಲ್ಲಿ ನಿಜ ಶರಣ ಕಮ್ಮಾರ ಕಲ್ಲಯ್ಯನವರು

 ತಮ್ಮ ಜೀವನವನ್ನು ಪೂರ್ಣವಾಗಿ ಶರಣ ಸಂತತಿಯ ಬೆಳವಣಿಗೆಗೆ ಧಾರೆ ಎರೆದ ಮಹಾನುಭಾವರು. ಇಂತವರ ಬಗ್ಗೆ ಅನೇಕ ಗ್ರಂಥಗಳು ಬಹುತೇಕ ಕಡೆ ಹುಡುಕಿದರೂ ಸಿಗದಿರುವ ಅಪರೂಪದ ವಿಚಾರಗಳನ್ನು  ಅನೇಕ ಗ್ರಂಥಗಳನ್ನು ಪರಿಶೀಲಿಸಿ, ಜನಪದ ಆಕರಗಳನ್ನು ಬಳಸಿಕೊಂಡು ತಮ್ಮ ಬುದ್ದಿವಂತಿಕೆಯ ಚಾತುರ್ಯವನ್ನು ಕಮ್ಮಾರ ಸಮುದಾಯಕ್ಕೆ ದಾರಿದೀಪವಾಗುವಂತೆ ಆಧಾರವನ್ನಾಗಿಸುವ ಪ್ರಯತ್ನವನ್ನು ಮಾಡಿ ಡಾ. ಸೋಮನಾಥ ಯಾಳವಾರ  ಕಿರು ಹೊತ್ತಿಗೆ ರಚಿಸಿದ್ದಾರೆ.

ಹೊತ್ತಿಗೆ ಕಿರಿದಾದರೂ ಅದರಲ್ಲಿ ಸತ್ವಯುತವಾದ ವಿಚಾರವಿದೆ ಎಂಬುದು ನನ್ನ ಅಭಿಪ್ರಾಯ.


ಡಾ. ಸೋಮನಾಥ ಯಾಳವಾರರವರ ಅಧ್ಯಯನದ, ಹರವು ಬಹುವಿಸ್ತಾರ, ದೃಷ್ಟಿ ವಿಶಾಲ ಮತ್ತು ಬರವಣಿಗೆ ಪ್ರಖರವಾದದ್ದು, ಸಾಹಿತ್ಯದ ವಿವಿಧ ಘಟ್ಟಗಳು, ಪ್ರಕಾರಗಳು, ಆಯಾಮಗಳು ಅವರಿಗೆ ಕರತಲಾಮಲಕ ಜನಪದ, ತತ್ವಪದ, ಕೀರ್ತನ ಸಾಹಿತ್ಯ, ವಚನ ಸಾಹಿತ್ಯ ಮತ್ತು ಆಧುನಿಕ ಸಾಹಿತ್ಯವನ್ನು ಸೂಕ್ಷ್ಮ ಹಾಗೂ ಸಂಶೋಧನಾತ್ಮಕವಾಗಿ ಅಧ್ಯಯನ ಮಾಡಿರುವ ಇವರು. ವಚನ ಸಾಹಿತ್ಯ ಕುರಿತಾಗಿ ಹೆಚ್ಚಿನ ಒಲವಿನಿಂದ  ಬಸವಾದಿ ಶರಣರ ಕುರಿತಾಗಿ ಅನೇಕ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ.

ಜಾನಪದರ ಹಾಡಿನ ಜಾಡು ಹಿಡಿದು ಆ ಹಾಡುಗಳ ಆಧಾರದ ಮೇಲೆ ಅವರು  ನಮಗೆ ಕಲ್ಲಯ್ಯನವರ ದರ್ಶನ ಮಾಡಿಸಿದ್ದಾರೆ. 


'ಕಮ್ಮಾರಿಕೆ' ಯ ಪವಿತ್ರ ಕಾಯಕ ಕೈಕೊಂಡಿದ್ದ ಕಲ್ಲಯ್ಯ ಬಿಜಾಪುರ ಭಾಗದ 'ಮುತ್ತಗಿ' ಯಲ್ಲಿ ಹುಟ್ಟಿದ ಮುತ್ತು. ಭಕ್ತನಾಗಿದ್ದ ಈತ ಸಿದ್ಧರಾಮೇಶ್ವರ ಪ್ರಭಾವಲಯಕ್ಕೆ ಬಂದು ವಿರಕ್ತನಾಗಿ ನಂತರ ಚನ್ನಬಸವಣ್ಣನವರಿಂದ ಲಿಂಗದೀಕ್ಷೆ, ಸಿದ್ದರಾಮೇಶ್ವರರಿಂದ ಶರಣತತ್ವ ತಿಳಿದುಕೊಂಡು ಶರಣಜೀವಿಯಾದ ಬಗ್ಗೆ ಜನಪದ ತ್ರಿಪದಿಯ ಆಧಾರದಿಂದ  ತಿಳಿದುಬರುತ್ತದೆ. ಕಮ್ಮಾರ ಕಲ್ಲಯ್ಯ ಬಸವಣ್ಣನವರ ಕಟ್ಟಾ ಅನುಯಾಯಿಯಾಗಿದ್ದರು. ಗೌರಮ್ಮ ಮಾದಾರ ಹಾಡಿರುವ  64 ತ್ರಿಪದಿಗಳು ಕಮ್ಮಾರ ಕಲ್ಲಯ್ಯನವರ ಜೀವನದ ಬಗ್ಗೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿವೆ.ಇಂತಹ ಪ್ರಯತ್ನಗಳು ಹೆಚ್ಚಾಗಬೇಕಿದೆ. ಈ ನಿಟ್ಟಿನಲ್ಲಿ  ಎಲೆ ಮರೆ ಕಾಯಿಗಳಾಗಿರುವ ನೂರಾರು ಶರಣರ ಜೀವನ ಚರಿತ್ರೆಗಳು ಹೊರತರುವಲ್ಲಿ. ಕೆಲ ಸಂಘ ಸಂಸ್ಥೆಗಳು ಶ್ರಮಿಸುತ್ತಿರುವುದು ಶ್ಲಾಘನೀಯ.

ಲಿಂಗಾಯತ ವಿಶ್ವ ವಿದ್ಯಾಲಯದ ಪ್ರಸಾರಾಂಗವು   ಅನುಭವ ಮಂಟಪ ಶರಣಚರಿತಾಮೃತ ಮಾಲಿಕೆಯಡಿಯಲ್ಲಿ 39 ನೇ ಕೃತಿಯಾಗಿ ಪ್ರಕಟಿಸಿದ ಈ ಕೃತಿಯು ಮೌಲಿಕವಾದದ್ದು ಇಂತಹ ನೂರಾರು ಶರಣರ ಕೃತಿಗಳು ಪ್ರಕಟವಾಗಲಿ ಎಂಬುದೇ ನಮ್ಮ ಆಶಯ.



ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಹಾಗೂ ಸಾಹಿತಿಗಳು.

ತುಮಕೂರು.

9900925529


ಸರಳತೆ..ಚುಟುಕು


 



*ಸರಳತೆಗೆ ಮೆರಗು*


ಆಡಂಬರ ಯಾರಿಗೆ ಬೇಕು

ಮೈ ಮುಚ್ಚಿಕೊಂಡರೆ ಸಾಕು

ಸಭ್ಯವಾಗಿರಲಿ ನಮ್ಮ ಪೋಷಾಕು

ಸರಳತೆಗೇ ಮೆರಗು ಎಲ್ಲಾಕಾಲಕು


*ಸಿಹಿಜೀವಿ ವೆಂಕಟೇಶ್ವರ*

ತುಮಕೂರು

15 September 2024

ನಾನೆಂದೂ ಸೋಲುವುದಿಲ್ಲ....


 


ನಿನ್ನೆ ನಾನು "ಪ್ರಯತ್ನವೇ ಪರಮಾತ್ಮ" ಎಂಬ ಕ್ಯಾಚಿ  ಟ್ಯಾಗ್ ಲೈನ್ ಹೊಂದಿದ ರಂಗಸ್ವಾಮಿ ಮೂಕನಹಳ್ಳಿಯವರ  "ನಾನೆಂದಿಗೂ ಸೋಲುವುದಿಲ್ಲ ಸೋತರದು ನಾನಲ್ಲ" ಎಂಬ  ಪುಸ್ತಕ ಓದಿದೆ.

 ಇದು 18 ಮಹಾನ್ ಸಾಧಕರ ಬದುಕಿನ ಕಥೆಗಳನ್ನು ಕಟ್ಟಿಕೊಡುತ್ತಾ ನಮ್ಮಲ್ಲಿರುವ ಕೀಳರಿಮೆ ಹೋಗಲಾಡಿಸಿ ನಾನೂ ಏನಾದರೂ ಸಾಧಿಸಬೇಕೆಂಬ ಭಾವನೆ ಮೂಡಿಸುವ ಉತ್ತಮ ‌ಮೋಟಿವೇಶನಲ್ ಪುಸ್ತಕ.

ಅಪಾಯವಿಲ್ಲದ ಬದುಕಿಲ್ಲ ಎಂದು ಹೇಳುವ ರಿಚರ್ಡ್ ಬ್ರಾನ್ಸನ್ ಬಗ್ಗೆ ಇರುವ ಲೇಖನ   ಸುಲಭವಾಗಿ 'ಕ್ವಿಟ್' ಎನ್ನದೆ, ನಮ್ಮ ವೇಳೆ ಬರುವವರೆಗೂ ತಾಳ್ಮೆಯಿಂದ ಕಾಯಬೇಕು ಎಂಬ ಕರ್ನಲ್ ಸ್ಯಾಂಡರ್ಸ್ ರವರ  ಬಗ್ಗೆ ಲೇಖನ

 ಸಾಧಿಸುವ ಮನಸ್ಸಿದ್ದರೆ ನಮ್ಮೆಲ್ಲಾ ಕನಸುಗಳೂ ಈಡೇರುತ್ತವೆ ಎಂದು ಹೇಳಿದ  ವಾಲ್ಟ್ ಡಿಸ್ನಿ ಯ ಬಗ್ಗೆ ಇರುವ ಲೇಖನ ನನಗೆ ಬಹಳ ಹಿಡಿಸಿದವು 

ಪ್ರತಿ ಅಧ್ಯಾಯದ ಕೊನೆಯಲ್ಲಿ ನೀಡಿದ ಐದರಿಂದ ಆರು ಕೀ ಪಾಯಿಂಟ್ ಗಳು ಗಮನಾರ್ಹ ಮತ್ತು ಚಿಂತನಾರ್ಹ.


14 September 2024

ಬದುಕು .ಹನಿಗವನ


 


 ಬದುಕು 


ಅತಿಯಾಗಿ ಬಾಯಿ ತೆರೆಯುವುದನ್ನು ನಿಲ್ಲಿಸು

ನೀನು|

ಅತಿಯಾಗಿ ಬಾಯಿ ತೆರೆದರೆ

ನೀರಲ್ಲೂ ಬದುಕಲಾರದು

ಮೀನು||


ಸಿಹಿಜೀವಿ ವೆಂಕಟೇಶ್ವರ.

11 September 2024

ರಾಮನಾಥಸ್ವಾಮಿ ದೇವಾಲಯವಿರುವ ರಾಮೇಶ್ವರ.


 


ರಾಮನಾಥಸ್ವಾಮಿ ದೇವಾಲಯವಿರುವ ರಾಮೇಶ್ವರ.


 ರಾಮನಾಥಸ್ವಾಮಿ ದೇವಾಲಯವು ಶಿವನಿಗೆ ಅರ್ಪಿತವಾದ ಒಂದು ಪ್ರಮುಖವಾದ ದೇವಾಲಯವಾಗಿದೆ.  ಇದು ಭಾರತದ ತಮಿಳುನಾಡು ರಾಜ್ಯದಲ್ಲಿ ಪಂಬನ್ ದ್ವೀಪದ ಪೂರ್ವ ಭಾಗದಲ್ಲಿ ರಾಮೇಶ್ವರಂನಲ್ಲಿದೆ.  ಈ ದೇವಾಲಯವು ಹಿಂದೂಗಳಿಗೆ ಅಪಾರ ಪ್ರಾಮುಖ್ಯತೆಯ ಪವಿತ್ರ ಸ್ಥಳವಾಗಿದೆ. ಇದು ಪ್ರತಿ ವರ್ಷ ಲಕ್ಷಾಂತರ ಯಾತ್ರಿಕರು ಮತ್ತು ಬೃಹತ್ ಭಕ್ತರನ್ನು ಆಕರ್ಷಿಸುತ್ತದೆ.ವಿಶೇಷವಾಗಿ ಮಹಾ ಶಿವರಾತ್ರಿಯ ಹಬ್ಬದ ಸಮಯದಲ್ಲಿ. ನಾನೂ ಸಹ ಹದಿನಾರು ವರ್ಷಗಳ ಹಿಂದೆ ಈ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ  ಪಡೆದಿರುವೆ.


 ‘ರಾಮನಾಥಸ್ವಾಮಿ’ ಎಂದರೆ ‘ರಾಮನ ಒಡೆಯ’, ಇದು ಶಿವನನ್ನು ಸೂಚಿಸುತ್ತದೆ.  ಶ್ರೀಲಂಕಾದಲ್ಲಿ ಸೃಷ್ಟಿಯಾದ ಪಾಪಗಳನ್ನು ಪರಿಹರಿಸಲು ವಿಷ್ಣುವಿನ ಅವತಾರವಾದ ಭಗವಾನ್ ರಾಮನು ಈ ದೇವಾಲಯವನ್ನು ಸ್ಥಾಪಿಸಿದನು ಮತ್ತು ಪೂಜಿಸಿದನು ಎಂದು ನಂಬಲಾಗಿದೆ.

 ಹಿಂದೂ ಲಿಪಿಗಳ ಪ್ರಕಾರ, ಖಂಡದಲ್ಲಿ ಕೇವಲ 12 ಜ್ಯೋತಿರ್ಲಿಂಗಗಳಿವೆ. ಅದರಲ್ಲಿ ಒಂದು ಲಿಂಗ ರಾಮೇಶ್ವರದ ಲಿಂಗ   ಎಲ್ಲಾ 12 ಜ್ಯೋತಿರ್ಲಿಂಗಗಳನ್ನು ಭೇಟಿ ಮಾಡುವವರು ಮೋಕ್ಷವನ್ನು ಪಡೆಯುತ್ತಾರೆ ಮತ್ತು ಜನನ ಮತ್ತು ಮರಣದ ಚಕ್ರದಿಂದ ಮುಕ್ತರಾಗುತ್ತಾರೆ ಎಂದು  ನಂಬಲಾಗಿದೆ.  ಇದರೊಂದಿಗೆ ಅವರು ಶಿವನ ಆಶೀರ್ವಾದವನ್ನು ಪಡೆಯುತ್ತಾರೆ.

ಅನಾದಿಕಾಲದಿಂದಲೂ

 ಚಾರ್ ಧಾಮ್ ಯಾತ್ರೆಗೆ ತನ್ನದೇ ಆದ ಮಹತ್ವವಿದೆ. ಮಹಾಭಾರತದಲ್ಲಿ ಪಾಂಡವರು "ಬದ್ರಿನಾಥ್", "ಕೇದಾರನಾಥ್", "ಗಂಗೋತ್ರಿ" ಮತ್ತು "ಯಮುನೋತ್ರಿ" ಎಂದು ವ್ಯಾಖ್ಯಾನಿಸಿದ್ದಾರೆ.  ಪಾಂಡವರು ತಮ್ಮ ಪಾಪಗಳಿಂದ ಜನರನ್ನು ಶುದ್ಧೀಕರಿಸಬಹುದೆಂದು ನಂಬಿದ ನಾಲ್ಕು ಸ್ಥಳಗಳಾಗಿವೆ. ಅದರಂತೆ

 ಆಧುನಿಕ ಕಾಲದಲ್ಲಿ, ಚಾರ್ ಧಾಮ್ ಭಾರತದ ನಾಲ್ಕು ಯಾತ್ರಾ ಸ್ಥಳಗಳ ಹೆಸರುಗಳಾಗಿವೆ, ಇವುಗಳನ್ನು ಹಿಂದೂಗಳು ವ್ಯಾಪಕವಾಗಿ ಗೌರವಿಸುತ್ತಾರೆ.  ಇದು ಬದರಿನಾಥ್, ದ್ವಾರಕಾ, ಪುರಿ ಮತ್ತು ರಾಮೇಶ್ವರಂ ಅನ್ನು ಒಳಗೊಂಡಿದೆ.  ಒಬ್ಬರ ಜೀವಿತಾವಧಿಯಲ್ಲಿ ಚಾರ್ ಧಾಮ್‌ಗೆ ಭೇಟಿ ನೀಡುವುದನ್ನು ಹಿಂದೂಗಳು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ.  ಆದಿ ಶಂಕರಾಚಾರ್ಯರು ವ್ಯಾಖ್ಯಾನಿಸಿದ ಚಾರ್ ಧಾಮ್ ನಾಲ್ಕು ವೈಷ್ಣವ ತೀರ್ಥಯಾತ್ರೆಗಳನ್ನು ಒಳಗೊಂಡಿದೆ.


 ಈ  ದೇವಾಲಯವು ಎರಡು 'ಲಿಂಗ'ಗಳನ್ನು ಹೊಂದಿದೆ.ಅವುಗಳೆಂದರೆ 'ರಾಮಲಿಂಗಂ' ಮತ್ತು 'ವಿಶ್ವಲಿಂಗಂ'.  ಪ್ರಧಾನ ದೇವತೆಯಾದ ರಾಮನಾಥಸ್ವಾಮಿಯ ಲಿಂಗವನ್ನು ದೇವಿ ಸೀತೆ ಮಾತೆ  ಭಗವಾನ್ ಹನುಮಾನ್ ಸಹಾಯ ಮಾಡಿ, ರಾಮನು ಸ್ಥಾಪಿಸಿ ಪೂಜಿಸಿದನೆಂದು ನಂಬಲಾಗಿದೆ.  ರಾವಣನು ಬ್ರಾಹ್ಮಣ ಮತ್ತು ಶಿವನ ಭಕ್ತನಾಗಿದ್ದರಿಂದ.  ‘ರಾಮಲಿಂಗಂ’ ದೇವಿ ಸೀತಾದೇವಿಯಿಂದಲೇ ಮರಳಿನಿಂದ ನಿರ್ಮಿಸಲ್ಪಟ್ಟದ್ದು ಮತ್ತು ‘ವಿಶ್ವಲಿಂಗಂ’ ಎಂಬುದು ಹನುಮಂತನು ಕೈಲಾಸದಿಂದ  ತಂದದ್ದು.


 ದಂತಕಥೆಯ ಪ್ರಕಾರ ರಾಮನು ಬ್ರಾಹ್ಮಣನನ್ನು ಕೊಂದ ಪಾಪವನ್ನು ತೊಡೆದುಹಾಕಲು ಶಿವನನ್ನು ಪೂಜಿಸಲು ದೊಡ್ಡ ಲಿಂಗವನ್ನು ಪ್ರತಿಷ್ಟಾಪನೆ ಮಾಡಲು ಬಯಸಿದನು.  ಹೀಗಾಗಿ, ಹಿಮಾಲಯದಿಂದ ಲಿಂಗವನ್ನು ತರಲು ಅವನು ಹನುಮಂತನಿಗೆ  ನಿರ್ದೇಶಿಸಿದನು.  ಆದರೆ ಹನುಮಂತ ಲಿಂಗವನ್ನು ತರಲು ತಡಮಾಡಿದಾಗ.  ರಾಮನ ಪತ್ನಿ ಸೀತಾದೇವಿಯು ಸಮುದ್ರ ತೀರದಲ್ಲಿ ಲಭ್ಯವಿದ್ದ ಮರಳಿನಿಂದ ಸಣ್ಣ ಲಿಂಗವನ್ನು ನಿರ್ಮಿಸಿದಳು.  

ನಾವು ಸಮುದ್ರ ಸ್ನಾನ ಮಾಡಿ ದೇವಾಲಯ ಒಳ ಪ್ರವೇಶಿಸಿ 22 ಬಾವಿಗಳಿಂದ ತೆಗೆದ ನೀರಿನಿಂದ ಪುನಃ ಸ್ನಾನ ಮಾಡಿ ದೇವಾಲಯವನ್ನು ಪ್ರದಕ್ಷಿಣೆ ಹಾಕುವಾಗ ಕಂಡ ಬೃಹತ್ ಕಂಬಗಳ ಹಾಲ್ ನಮ್ಮನ್ನು ಆಕರ್ಷಿಸಿತು.


 ಹೊರ ಕಾರಿಡಾರ್‌ನಲ್ಲಿ 1212 ಸ್ತಂಭಗಳಿವೆ. ಇದರ ಎತ್ತರವು ನೆಲದಿಂದ ಛಾವಣಿಯ ಮಧ್ಯದವರೆಗೆ ಸುಮಾರು 30 ಅಡಿಗಳು.  ಮುಖ್ಯ ಗೋಪುರ ಅಥವಾ ರಾಜಗೋಪುರವು 53 ಮೀ ಎತ್ತರವಿದೆ.  ಹೆಚ್ಚಿನ ಸ್ತಂಭಗಳನ್ನು ಪ್ರತ್ಯೇಕ ಸಂಯೋಜನೆಗಳೊಂದಿಗೆ ಕೆತ್ತಲಾಗಿದೆ.


 ದೇವಾಲಯದ ಮುಖ್ಯ ದೇವರಾದ , ಶ್ರೀರಾಮನು ಸ್ಥಾಪಿಸಿದ ಶಿವಲಿಂಗವು ಈ ದೇವಾಲಯದಲ್ಲಿ ಪ್ರಮುಖ ಆಕರ್ಷಣೆ.   ರಾಮನಾಥಸ್ವಾಮಿ ದೇವಾಲಯವನ್ನು ಕಪ್ಪು  ಗ್ರಾನೈಟ್ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ ಮತ್ತು ವಿಮಾನ  ಗೋಪುರ  ಚಿನ್ನದಿಂದ ಲೇಪಿತವಾಗಿದೆ. ಮುಖ್ಯ ದೇವರ ಆಶೀರ್ವಾದ ಪಡೆದ ನಂತರ ಅದೇ ದೇವಾಲಯದ ಸಂಕೀರ್ಣದಲ್ಲಿ ಇರುವ ಇತರೆ ದೇವ ದೇವತೆಗಳಾದ ವಿಶಾಲಾಕ್ಷಿ, ಪರ್ವತವರ್ಧಿನಿ, ಸಂತಾನಗಣಪತಿ, ಮಹಾಗಣಪತಿ, ಸುಬ್ರಹ್ಮಣ್ಯ, ಸೇತುಮಾಧವ, ಮಹಾಲಕ್ಷ್ಮಿ, ನಟರಾಜ ಮತ್ತು ಆಂಜನೇಯರ ದರ್ಶನ ಪಡೆದೆವು.


ಈ ಮೊದಲೇ ನಾನು ಹೇಳಿದಂತೆ 22 ಬಾವಿಗಳ ತೀರ್ಥ ಸ್ನಾನ ಇಲ್ಲಿನ ವಿಶೇಷ. ಈ ಸ್ನಾನ ಮಾಡಲು ಇಚ್ಚಿಸುವರು ಮೊದಲು ನಿಗದಿ ಪಡಿಸಿದ ಶುಲ್ಕ ಪಾವತಿಸಿ ನಮ್ಮೊಂದಿಗೆ ಓರ್ವ ದೇವಾಲಯದ ಸಿಬ್ಬಂದಿ ಕರೆದೊಯ್ಯಬೇಕು. ಅವರು ಪ್ರತಿ ಬಾವಿಯ ಬಳಿ ತೆರಳಿ ಹಗ್ಗದಿಂದ ನೀರು ಮೇಲೆತ್ತಿ ನಮ್ಮ ಮೇಲೆ ಸುರಿಯುತ್ತಾರೆ.

ಈ ಬಾವಿಗಳು  ಪವಿತ್ರ ಜಲಮೂಲಗಳು. ಹಾಗೂ ತೀರ್ಥಗಳು  ರಾಮನ ಬತ್ತಳಿಕೆಯಲ್ಲಿರುವ 22 ಬಾಣಗಳನ್ನು ಪ್ರತಿನಿಧಿಸುತ್ತವೆ.  ಎಂದು ನಂಬಲಾಗಿದೆ.

 

ಸ್ವಾಮಿಯ ದರ್ಶನ ಮಾಡಿ ಕೃತಾರ್ಥರಾಗಿ ಹೊರಬಂದ ನಮಗೆ  

 ರಾಮನಾಥಸ್ವಾಮಿ ದೇವಾಲಯದ ಕಾರಿಡಾರ್‌ಗಳ ಹೊರಭಾಗವು ಬಹುವಾಗಿ ಆಕರ್ಷಿಸಿತು ಇದರ ಬಗ್ಗೆ ಅಲ್ಲಿನ ಸಿಬ್ಬಂದಿಯನ್ನು ಕೇಳಿದಾಗ ಪ್ರಪಂಚದಲ್ಲೇ ಅತಿ ಉದ್ದದ ದೇವಾಲಯ ಕಾರಿಡಾರ್ ಎಂಬ ಮಾಹಿತಿಯನ್ನು ನೀಡಿದರು. ಇದು ಸುಮಾರು 6.9 ಮೀ ಎತ್ತರ, ಪೂರ್ವ ಮತ್ತು ಪಶ್ಚಿಮದಲ್ಲಿ ತಲಾ 400 ಅಡಿ ಮತ್ತು ಉತ್ತರ ಮತ್ತು ದಕ್ಷಿಣದಲ್ಲಿ ಸುಮಾರು 640 ಅಡಿಗಳನ್ನು ಹೊಂದಿದೆ.  ಒಳ ಕಾರಿಡಾರ್‌ಗಳು ಪೂರ್ವ ಮತ್ತು ಪಶ್ಚಿಮದಲ್ಲಿ ತಲಾ 224 ಅಡಿಗಳು ಮತ್ತು ಉತ್ತರ ಮತ್ತು ದಕ್ಷಿಣದಲ್ಲಿ ಸುಮಾರು 352 ಅಡಿಗಳು.  ಅವುಗಳ ಅಗಲವು ಪೂರ್ವ ಮತ್ತು ಪಶ್ಚಿಮದಲ್ಲಿ 15.5 ಅಡಿಗಳಿಂದ 17 ಅಡಿಗಳವರೆಗೆ ಇದೆ  ಉತ್ತರ ಮತ್ತು ದಕ್ಷಿಣದಲ್ಲಿ ಸುಮಾರು 172 ಅಡಿಗಳು 14.5 ಅಡಿಗಳಿಂದ 17 ಅಡಿಗಳವರೆಗೆ ಅಗಲವಿದೆ.  ಈ ಕಾರಿಡಾರ್‌ಗಳ ಒಟ್ಟು ಉದ್ದ 3850 ಅಡಿಗಳು. ಇದರ ಜೊತೆಯಲ್ಲಿ ಅಲ್ಲಲ್ಲಿ ಸಿಗುವ ಶಿಲ್ಪ ಕಲೆಯ ಕೆತ್ತನೆಯು ನಮ್ಮ ನಮ್ಮನ್ನು ಸೆಳೆಯುತ್ತವೆ.

ಆಸ್ತಿಕರು ಶಿವನ ಆಶೀರ್ವಾದ ಪಡೆಯಲು ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ನಾಸ್ತಿಕರು ಕಡಲ ತೀರದ ಸೌಂದರ್ಯ ದೇವಾಲಯ ಶಿಲ್ಪಕಲೆಯನ್ನು ಆಸ್ವಾದಿಸಲು ಇಲ್ಲಿಗೆ ಬರುತ್ತಾರೆ ಒಟ್ಟಾರೆ ರಾಮೇಶ್ವರಂ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ ನೀವು ಇದುವರೆಗೆ ರಾಮೇಶ್ವರ ನೋಡಿಲ್ಲವೆಂದೇ ಒಮ್ಮೆ ನೋಡಿ..


ಸಿಹಿಜೀವಿ ವೆಂಕಟೇಶ್ವರ

ತುಮಕೂರು.


 

09 September 2024

ನಿಮ್ಮ‌ ಶತೃ ನೀವೇ


 ನಿಮ್ಮ‌ ಶತೃ  ನೀವೇ


ನಿಮ್ಮ ನಿಜವಾದ ಶತ್ರುಗಳು ಬೇರಾರೂ ಅಲ್ಲ...

ನೀವೇ...ನಿಮ್ಮ ಅಹಂ,ನಿಮ್ಮ ಆಲಸ್ಯ,ನಿಮ್ಮ ಶಿಸ್ತಿನ ಕೊರತೆ,ನಿಮ್ಮ ಗೊಂದಲಗಳು,ನಿಮ್ಮ ಕೆಟ್ಟ ಅಭ್ಯಾಸಗಳು, ನಿಮ್ಮ ಸ್ವಯಂ ಅನುಮಾನ,ನೀವು ಕಲಿಯಲು ನಿರ್ಲಕ್ಷಿಸುವ ಜ್ಞಾನ,ನೀವು ಸೇವಿಸುವ ಅನಾರೋಗ್ಯಕರ ಆಹಾರ.


ಇಂದೇ  ನಿಮ್ಮ ನಿಜವಾದ  ಶತೃಗಳ ಮೇಲೆ ಯುದ್ಧ ಘೋಷಿಸಿ ಜಯ ಗಳಿಸಿ 


ಸಿಹಿಜೀವಿ ವೆಂಕಟೇಶ್ವರ

ತುಮಕೂರು


07 September 2024

ಜ್ಞಾನ ಮತ್ತು ಸಂಪತ್ತಿನ ಸಮ್ಮಿಳಿತಜೀವನ ನಮ್ಮದಾಗಲಿ.

 


ಜ್ಞಾನ ಮತ್ತು ಸಂಪತ್ತಿನ ಸಮ್ಮಿಳಿತಜೀವನ ನಮ್ಮದಾಗಲಿ.


ನಮಗೆ ದೈಹಿಕ ಮಾನಸಕ ಆರೋಗ್ಯವಿದ್ದರೆ ಸಾಲದು ಅದಕ್ಕೆ ಪೂರಕವಾಗಿ ಸಮತೋಲಿತ ಜ್ಞಾನ ಮತ್ತು ಸಂಪತ್ತಿನ ಅಗತ್ಯ ವಿದೆ.

ಕೇವಲ ಸಂಪತ್ತಿರುವ ಅಜ್ಞಾನಿ ಜಗದ ಸೌಂದರ್ಯವನ್ನು ಸಂಪೂರ್ಣವಾಗಿ ಸವಿಯಲಾರ. ಬರೀ ಜ್ಞಾನ ವಿದ್ದು  ಸಂಪತ್ತಿಲ್ಲದಿದ್ದರೆ  ಜಗದಲ್ಲಿ ತಕ್ಕಮಟ್ಟಿಗೆ ಉತ್ತಮ ಜೀವನ  ಸಾಗಿಸಬಹುದು.

ಆದ್ದರಿಂದ ಜ್ಞಾನ ಸಂಪತ್ತಿನ ಜೊತೆಯಲ್ಲಿ ಸಂಪತ್ತನ್ನು ಹೊಂದಿ ಉತ್ತಮ ವ್ಯಕ್ತಿತ್ವ ಹೊಂದಿದ ವ್ಯಕ್ತಿಗಳಾಗಿ ಈ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ.

ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು.


ಸಿಹಿಜೀವಿ ವೆಂಕಟೇಶ್ವರ


06 September 2024

ಕುಮಾರಿ ಕಾಂಡ...ಭಾರತದ ದಕ್ಷಿಣಕ್ಕೆ ಇದ್ದ ಖಂಡ..


 



ಕುಮಾರಿ ಕಾಂಡಂ


ನಾವು ಖಂಡಗಳ ಚಲನೆಯ ವಾದವನ್ನು ಕೇಳಿದ್ದೇವೆ.ಅದೇ ರೀತಿಯಲ್ಲಿ ವೈಜ್ಞಾನಿಕವಾಗಿ ಆಧಾರವಿಲ್ಲದಿದ್ದರೂ ತಮಿಳುನಾಡಿನ ಕೆಲ ಜನಪದ ಕಥೆಗಳ ಆಧಾರದ ಮೇಲೆ ಹಿಂದೂ ಮಹಾಸಾಗರ ದಲ್ಲಿ ಕುಮಾರಿ ಕಾಂಡ ಎಂಬ ಖಂಡವಿತ್ತು ಎಂದು ಉಲ್ಲೇಖಿಸುತ್ತಾರೆ.

ತಮಿಳು ಜಾನಪದದ ಪ್ರಕಾರ ಈ ವಿಶಾಲವಾದ ಭೂಪ್ರದೇಶವು ಒಂದು ಕಾಲದಲ್ಲಿ ಮುಂದುವರಿದ ಮತ್ತು ಅಭಿವೃದ್ಧಿ ಹೊಂದಿದ್ದ ನಾಗರಿಕತೆಗೆ ನೆಲೆಯಾಗಿತ್ತು, ಶ್ರೀಮಂತ ಸಂಸ್ಕೃತಿ, ಪ್ರವರ್ಧಮಾನಕ್ಕೆ ಬರುತ್ತಿರುವ ನಗರಗಳು ಮತ್ತು ಹೆಚ್ಚು ಅಭಿವೃದ್ಧಿ ಹೊಂದಿದ ಸಮಾಜವನ್ನು ಹೊಂದಿತ್ತು. 


 ಕುಮಾರಿ ಕಾಂಡಂ ತಮಿಳು ಸಂಸ್ಕೃತಿಯ ತೊಟ್ಟಿಲು ಎಂದು ಕಥೆಗಳು ಸೂಚಿಸುತ್ತವೆ. ಅಲ್ಲಿ ಆರಂಭಿಕ ತಮಿಳು ಸಾಹಿತ್ಯ, ಭಾಷೆ ಮತ್ತು ಸಂಪ್ರದಾಯಗಳು ಹುಟ್ಟಿದವು.  ದುರಂತದಲ್ಲಿ ಪ್ರವಾಹವು ಸಮುದ್ರದಲ್ಲಿ ಮುಳುಗಿರಬಹುದು ಎಂದು ಊಹಿಸಲಾಗಿದೆ.


 

28 August 2024

ದೀಪ.


 ದೀಪವು ಕತ್ತಲೆಯನ್ನು ಮೀರಿ

ನೀಡುವುದು ಬೆಳಕು| 

ಕಷ್ಟಗಳನ್ನು ಎದುರಿಸಿ ನಿಂತಾಗಲೇ

ಸುಂದರ ಬದುಕು||


23 August 2024

ಮೊದಲರಾಷ್ಟ್ರೀಯ #ಬಾಹ್ಯಾಕಾಶದಿನ

 



#ಮೊದಲರಾಷ್ಟ್ರೀಯ #ಬಾಹ್ಯಾಕಾಶದಿನ
*🌺ಆಗಸ್ಟ್ 23-ರಾಷ್ಟ್ರೀಯ ಬಾಹ್ಯಾಕಾಶ ದಿನ National Space Day*

*ಆಗಸ್ಟ್ 23, 2024 ರಂದು ಇದೇ ಮೊದಲ ಬಾರಿಗೆ ಇಸ್ರೋದಿಂದ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ. ಚಂದ್ರಯಾನ-3 ಮಿಷನ್ ಯಶಸ್ಸಿನ ಸ್ಮರಣಾರ್ಥ ಆಗಸ್ಟ್ 23ರಂದು ಪ್ರತಿವರ್ಷ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.*
*#ಇತಿಹಾಸ:*
*ಆಗಸ್ಟ್ 23, 2023 ರಂದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರಯಾನ-3ನ್ನು ಆಗಸ್ಟ್ 23, 2023 ರಂದು ವಿಕ್ರಮ್ ಲ್ಯಾಂಡರ್ನ್ನು ಚಂದ್ರನ ಮೇಲ್ಮೈ ಮೇಲೆ ಪ್ರಗ್ಯಾನ್ ರೋವರ್ ಅನ್ನು ಯಶಸ್ವಿಯಾಗಿ ಇಳಿಸಲಾಗಿತ್ತು. ಈ ಮೂಲಕ ಚಂದ್ರನ ಮೇಲೆ ಇಳಿದ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ದೇಶವೆಂಬ ಹೆಗ್ಗಳಿಕೆ ಗಳಿಸಿತ್ತು.* *ಅಲ್ಲದೇ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಭಾರತ ಎಂದು ಅಭಿದಾನಕ್ಕೂ ಪ್ರಾಪ್ತವಾಗಿತ್ತು.*
*ಈ ಸಾಧನೆಯನ್ನು ಗುರುತಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 23 ಅನ್ನು ಭಾರತದಲ್ಲಿ "ರಾಷ್ಟ್ರೀಯ ಬಾಹ್ಯಾಕಾಶ ದಿನ" ಎಂದು ಘೋಷಿಸಿದರು.
#ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನ-2024:
ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು 2024 ರಲ್ಲಿ ಭಾರತದಾದ್ಯಂತ ಆಚರಿಸಲಾಗುತ್ತದೆ.ಭಾರತ ಸರ್ಕಾರವು ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗಳ ಸಾಧನೆಗಳನ್ನು ಪ್ರದರ್ಶಿಸಲು ಮತ್ತು ಯುವಕರನ್ನು ಪ್ರೇರೇಪಿಸಲು ಒಂದು ತಿಂಗಳ ಅವಧಿಯ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಈ ವರ್ಷದ ಥೀಮ್, "ಚಂದ್ರನನ್ನು ಸ್ಪರ್ಶಿಸುವಾಗ ಜೀವನವನ್ನು ಸ್ಪರ್ಶಿಸುವುದು:ಭಾರತದ ಬಾಹ್ಯಾಕಾಶ ಸಾಗಾ"(This  theme, "Touching Lives while Touching the Moon: India’s Space Saga," highlights the significant impact of space exploration on society and technology) ಸಮಾಜ ಮತ್ತು ತಂತ್ರಜ್ಞಾನದ ಮೇಲೆ ಬಾಹ್ಯಾಕಾಶ ಪರಿಶೋಧನೆಯ ಗಮನಾರ್ಹ ಪರಿಣಾಮವನ್ನು ಎತ್ತಿ ತೋರಿಸುತ್ತದೆ.

ಬಾಹ್ಯಾಕಾಶ ಸಂಶೋಧನೆ ಮತ್ತು ಅನ್ವೇಷಣೆಯಲ್ಲಿ ಭಾರತದ ತಾಂತ್ರಿಕ ಪ್ರಗತಿಯನ್ನು ಆಚರಿಸುತ್ತದೆ.ಚಂದ್ರಯಾನ-3 ರ ಯಶಸ್ಸು ಭಾರತವನ್ನು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಮುಖ ದೇಶವಾಗಿ ಗುರ್ತಿಸಿದ್ದು  ಮಾತ್ರವಲ್ಲದೆ ಇಸ್ರೋ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ತೋರಿಸುತ್ತದೆ.
ಈ ಮೈಲಿಗಲ್ಲು ಚಂದ್ರಯಾನ-3 ಹೊಸತನ, ನಿಖರತೆ ಮತ್ತು ಪರಿಶ್ರಮಕ್ಕೆ ಉದಾಹರಣೆಯಾಗಿ ಕಾರ್ಯನಿರ್ವಹಿಸುವುದರೊಂದಿಗೆ ಬಾಹ್ಯಾಕಾಶ ಪರಿಶೋಧನೆಯಲ್ಲಿ ಸಾಧನೆಗಳನ್ನು ಸಾಧಿಸುವ ಭಾರತದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.ಇದಲ್ಲದೆ, ಭಾರತದ ಭವಿಷ್ಯದ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಕೊಡುಗೆ ನೀಡಲು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಭಾರತದ ಮುಂಬರುವ ಪೀಳಿಗೆಯನ್ನು ಪ್ರೇರೇಪಿಸಲು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಸ್ಥಾಪಿಸಲಾಗಿದೆ.

20 August 2024

ಟೂರಿಸಂ ನಲ್ಲಿ ಉದ್ಯೋಗಾವಕಾಶಗಳು

 


ಟೂರಿಸಂ ನಲ್ಲಿ ಅಪಾರವಾದ ಉದ್ಯೋಗಾವಕಾಶ.


ಇತ್ತೀಚಿನ ದಿನಗಳಲ್ಲಿ

ಪ್ರಯಾಣ ಮತ್ತು ಪ್ರವಾಸೋದ್ಯಮ ಉದ್ಯಮದಲ್ಲಿ ಹಲವಾರು ಉದ್ಯೋಗಾವಕಾಶಗಳನ್ನು ಕಾಣಬಹುದು.  ಟ್ರಾವೆಲ್ ಏಜೆಂಟ್

ಪ್ರವಾಸ ಮಾರ್ಗದರ್ಶಿ,

ಪ್ರವಾಸೋದ್ಯಮ ವ್ಯವಸ್ಥಾಪಕ

PR ಮ್ಯಾನೇಜರ್,

ಈವೆಂಟ್ ಮ್ಯಾನೇಜರ್,

ಏರ್ಲೈನ್ ​​ಗ್ರೌಂಡ್ ಸ್ಟಾಫ್,

ಸಾರಿಗೆ ಅಧಿಕಾರಿ,

ಪ್ರಯಾಣ ಬರಹಗಾರ, ಹೀಗೆ ವಿವಿಧ ಹುದ್ದೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೇಡಿಕೆಯಿದೆ.



ನೀವು ಸಹ ಪ್ರವಾಸೋದ್ಯಮದಲ್ಲಿ ಉದ್ಯೋಗ ಆರಂಬಿಸುವುದಾದರೆ ಇವುಗಳಲ್ಲಿ ಯಾವುದಾದರೊಂದು ಆಯ್ಕೆ ಮಾಡಬಹುದು.

  

ಟ್ರಾವೆಲ್ ಏಜೆಂಟ್


ಟ್ರಾವೆಲ್ ಏಜೆಂಟ್ ಏನು ಮಾಡುತ್ತಾನೆ ಎಂಬುದರ ಕುರಿತು ನಿಮಗೆ ತಿಳಿದಿರಬಹುದು.ಟ್ರಾವೆಲ್ ಏಜೆಂಟ್ ವ್ಯಕ್ತಿಗಳು ಮತ್ತು ಗುಂಪುಗಳಿಗೆ ಪ್ರವಾಸಗಳನ್ನು ಸಂಶೋಧಿಸುತ್ತಾರೆ, ಯೋಜಿಸುತ್ತಾರೆ ಮತ್ತು ಆಯೋಜಿಸುತ್ತಾರೆ. ಟ್ರಾವೆಲ್ ಏಜೆಂಟ್ ಸಾಮಾನ್ಯವಾಗಿ ವಿವಿಧ ವ್ಯಾಪಾರ ಮತ್ತು ವಿರಾಮ ಪ್ರವಾಸಗಳನ್ನು ಆಯೋಜಿಸುವ ಟ್ರಾವೆಲ್ ಏಜೆನ್ಸಿಗಾಗಿ ಕೆಲಸ ಮಾಡುತ್ತಾರ ಮತ್ತು ಪ್ರವಾಸಿಗರು ಮತ್ತು ಪ್ರಯಾಣಿಕರು ಆರಾಮದಾಯಕ ಪ್ರಯಾಣವನ್ನು ಹೊಂದಿದ್ದಾರೆ ಮತ್ತು ಅವರ ವಾಸ್ತವ್ಯವು ಆರಾಮದಾಯಕವಾಗಿದೆ ಎಂದು ಖಚಿತಪಡಿಸುತ್ತಾರೆ. ಟ್ರಾವೆಲ್ ಏಜೆಂಟ್ ಕೆಲಸ ಮಾಡುವ ಇತರ ವಿಷಯಗಳು ಗ್ರಾಹಕರಿಗೆ ಆರಾಮದಾಯಕ ವಸತಿ, ವೀಸಾಗಳು, ಪ್ರಯಾಣ, ವಿದೇಶಿ ವಿನಿಮಯ ಇತ್ಯಾದಿಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು. 


ಪ್ರವಾಸ ಮಾರ್ಗದರ್ಶಿ


ಪ್ರಯಾಣ ಮತ್ತು ಪ್ರವಾಸೋದ್ಯಮದಲ್ಲಿ ವೃತ್ತಿಜೀವನವನ್ನು ಆರಂಭಿಸುವವರಿಗೆ  ಹೆಚ್ಚು ಬೇಡಿಕೆಯಿರುವ ಉದ್ಯೋಗಗಳಲ್ಲಿ ಪ್ರವಾಸ ಮಾರ್ಗದರ್ಶಿ ಅಥವಾ  ಟೂರ್ ಗೈಡ್ ಒಂದಾಗಿದೆ. ಪ್ರವಾಸಿ ಮಾರ್ಗದರ್ಶಿಯು ಪ್ರವಾಸಿಗರ ಗುಂಪಿಗೆ ಅಥವಾ ವ್ಯಕ್ತಿಗೆ ಮಾರ್ಗದರ್ಶಿ ಪ್ರವಾಸವನ್ನು ನೀಡುತ್ತಾನೆ. ಪ್ರವಾಸಿ ಮಾರ್ಗದರ್ಶಿಯು ಐತಿಹಾಸಿಕ ಸ್ಥಳಗಳು, ಧಾರ್ಮಿಕ ಸಂಸ್ಥೆಗಳು, ವಸ್ತುಸಂಗ್ರಹಾಲಯಗಳು, ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳು ಅಥವಾ ಸಾಂಸ್ಕೃತಿಕ ಪ್ರಾಮುಖ್ಯತೆಯ ಸ್ಥಳದ ಬಗ್ಗೆ ಸಹಾಯ ಮತ್ತು ಮಾಹಿತಿಯನ್ನು ಒದಗಿಸುತ್ತಾನೆ. ಪ್ರವಾಸಿ ಮಾರ್ಗದರ್ಶಿಯು ಈ ಸ್ಥಳಗಳು, ಅವುಗಳ ಇತಿಹಾಸ, ಭೌಗೋಳಿಕ ಪರಿಸ್ಥಿತಿಗಳು ಮತ್ತು ಇತರ ಸಂಬಂಧಿತ ಮಾಹಿತಿಯ ಸಂಪೂರ್ಣ ಜ್ಞಾನವನ್ನು ಹೊಂದಿರಬೇಕು. ಪ್ರವಾಸಿ ಮಾರ್ಗದರ್ಶಿಯಾಗಲು, ನೀವು ಉತ್ತಮ ಸಂವಹನ ಕೌಶಲ್ಯ, ವಿದೇಶಿ ಭಾಷೆಗಳಲ್ಲಿ ನಿರರ್ಗಳತೆ ಮತ್ತು ಸ್ಥಳೀಯ ಪ್ರದೇಶದ ಬಗ್ಗೆ ಮಾಹಿತಿ ಮತ್ತು ಅದರೊಂದಿಗೆ ಪರಿಚಿತತೆಯನ್ನು ಬೆಳೆಸಿಕೊಳ್ಳಬೇಕು. 


ಪ್ರವಾಸೋದ್ಯಮ ವ್ಯವಸ್ಥಾಪಕ


 ಪ್ರವಾಸೋದ್ಯಮ ವ್ಯವಸ್ಥಾಪಕರು ವಿವಿಧ ಜಾಹೀರಾತು ವಿಧಾನಗಳು ಮತ್ತು ಪ್ರಚಾರಗಳನ್ನು ಬಳಸಿಕೊಂಡು ತನ್ನ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಾರೆ. ಮ್ಯಾನೇಜರ್ ಎಲ್ಲಾ ಸಂಸ್ಕೃತಿಗಳು ಮತ್ತು ಪದ್ಧತಿಗಳ ಪ್ರಯಾಣಿಕರಿಗೆ ಸಹ ಸಹಾಯ ಮಾಡುತ್ತಾರೆ.


PR ಮ್ಯಾನೇಜರ್


ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕರು ಟ್ರಾವೆಲಿಂಗ್ ಏಜೆನ್ಸಿ ಅಥವಾ ಮಾರುಕಟ್ಟೆಯಲ್ಲಿನ ಯಾವುದೇ ಸಂಸ್ಥೆಯ ಖ್ಯಾತಿಯನ್ನು ನಿರ್ವಹಿಸುವ ವಿವಿಧ ಅಂಶಗಳನ್ನು ನೋಡುತ್ತಾರೆ. ಒಂದು PR ಮ್ಯಾನೇಜರ್‌ಗೆ ಮಾರುಕಟ್ಟೆಯಲ್ಲಿ ಉತ್ತಮ ಖ್ಯಾತಿಯನ್ನು ನಿರ್ಮಿಸುವ ಸಲುವಾಗಿ ಏಜೆನ್ಸಿಯ ಬಗ್ಗೆ ಜಾಹೀರಾತು ಮತ್ತು ಮಾಹಿತಿಯನ್ನು ನೀಡಲು ಜವಾಬ್ದಾರನಾಗಿರುತ್ತಾನೆ. ಈ ಉದ್ಯಮದಲ್ಲಿ PR ಮ್ಯಾನೇಜರ್ ಸಾಮಾನ್ಯವಾಗಿ ಟ್ರಾವೆಲ್ ಏಜೆನ್ಸಿ, ಹೋಟೆಲ್ ಸರಪಳಿಗಳು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಕೆಲಸ ಮಾಡುತ್ತಾರೆ. PR ಮ್ಯಾನೇಜರ್ ಪತ್ರಿಕಾ ಪ್ರಕಟಣೆಗಳನ್ನು ಬರೆಯಬೇಕು, ಈವೆಂಟ್‌ಗಳನ್ನು ನಿರ್ವಹಿಸಬೇಕು ಮತ್ತು ಸಂಸ್ಥೆಯ ವಿವಿಧ ವಿಭಾಗಗಳ ನಡುವೆ ಸಂಯೋಜಕರಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. PR ಮ್ಯಾನೇಜರ್ ಸಾಮಾನ್ಯವಾಗಿ ಉತ್ತಮ ಸಂವಹನ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಹೊಂದಿರಬೇಕು ಇದು  ಯಾವುದೇ ಸಂಭಾವ್ಯ ಬಿಕ್ಕಟ್ಟನ್ನು ನಿಭಾಯಿಸಲು ಸಾಧ್ಯವಾಗುತ್ತದೆ.


ಈವೆಂಟ್ ಮ್ಯಾನೇಜರ್


ಈವೆಂಟ್‌ನ ವಿವಿಧ ಲಾಜಿಸ್ಟಿಕ್‌ಗಳನ್ನು ಆಯೋಜಿಸಲು, ಯೋಜಿಸಲು ಮತ್ತು ಮೇಲ್ವಿಚಾರಣೆ ಮಾಡಲು ಈವೆಂಟ್ ಮ್ಯಾನೇಜರ್ ಜವಾಬ್ದಾರನಾಗಿರುತ್ತಾನೆ. ಕ್ಲೈಂಟ್‌ನ ವಿವಿಧ ಬೇಡಿಕೆಗಳನ್ನು ಪೂರೈಸುವ ಸಂಯೋಜಕರಾಗಿ ಈವೆಂಟ್ ಮ್ಯಾನೇಜರ್ ಕಾರ್ಯನಿರ್ವಹಿಸುತ್ತಾರೆ. ಈವೆಂಟ್‌ಗಳು ಗೋಷ್ಠಿಯಿಂದ ಸಮ್ಮೇಳನಕ್ಕೆ ಬದಲಾಗಬಹುದು. 

ಏರ್ಲೈನ್ ​​ಗ್ರೌಂಡ್ ಸ್ಟಾಫ್

ವಾಣಿಜ್ಯ ಚಟುವಟಿಕೆಗಳು, ವಿಮಾನ ನಿಲ್ದಾಣ ಕಾರ್ಯಾಚರಣೆಗಳು, ವಿಮಾನಯಾನ ಕಾರ್ಯಾಚರಣೆಗಳು ಮತ್ತು ಮುಂತಾದ ಕ್ಷೇತ್ರಗಳಲ್ಲಿ ನೆಲದ ಸಿಬ್ಬಂದಿ ಅತ್ಯಗತ್ಯ. ನೆಲದ ಸಿಬ್ಬಂದಿಗಳು ಸಾಮಾನು ಸರಂಜಾಮುಗಳನ್ನು ಪರಿಶೀಲಿಸುವುದು, ಸಂಗ್ರಹಿಸುವುದು ಮತ್ತು ಒಯ್ಯುವುದು, ಹಾಗೆಯೇ ಆಹಾರ ಮತ್ತು ಪಾನೀಯಗಳೊಂದಿಗೆ ವಿಮಾನವನ್ನು ತುಂಬುವುದು ಸೇರಿದಂತೆ ವ್ಯಾಪಕವಾದ ಕಾರ್ಯಗಳನ್ನು ಹೊಂದಿದ್ದಾರೆ.


ಸಾರಿಗೆ ಅಧಿಕಾರಿ


ವಾಹನದ ಫ್ಲೀಟ್ ನಿರ್ವಹಣೆ, ವಾಹನಗಳ ಲಭ್ಯತೆ, ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡುವುದು, ಭೂ ಸಾರಿಗೆ ಬಜೆಟ್‌ಗಳನ್ನು ಅನುಮೋದಿಸುವುದು  ಮುಂತಾದ ಕಾರ್ಯಗಳನ್ನು ನಿರ್ವಹಿಸಲು ಸಾರಿಗೆ ಅಧಿಕಾರಿಯನ್ನು ಸಾಮಾನ್ಯವಾಗಿ ರಾಜ್ಯ ಸರ್ಕಾರ ಅಥವಾ ಪುರಸಭೆಯ ಸಾರಿಗೆ ಪ್ರಾಧಿಕಾರವು ನೇಮಿಸುತ್ತದೆ.


ಪ್ರಯಾಣ ಬರಹಗಾರ


ಐತಿಹಾಸಿಕ ತಾಣಗಳು, ರಜಾದಿನಗಳು, ಸಾಹಸಗಳು, ಹೋಟೆಲ್ ವ್ಯವಹಾರ, ಸಂಸ್ಕೃತಿ ಇತ್ಯಾದಿಗಳ ಬಗ್ಗೆ ಲೇಖನಗಳನ್ನು ತಯಾರಿಸಲು ಪ್ರವಾಸ ಬರಹಗಾರ ಜವಾಬ್ದಾರನಾಗಿರುತ್ತಾನೆ.ಈ ಬರಹಗಾರರು ತಮ್ಮ ‌ಬ್ಲಾಗ್ ಗಳಲ್ಲಿ ಕಂಪನಿಯ ವೆಬ್‌ಸೈಟ್ ಮತ್ತು ಜಾಲತಾಣಗಳಲ್ಲಿ ತಮ್ಮ ಬರಹಗಳನ್ನು ಪ್ರಕಟಿಸುವರು.

 

ಹೀಗೆ ಟೂರಿಸಂ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾನ್ಯತೆ ಮತ್ತು ವ್ಯಾಪಕತೆ ಬರುವುದರಿಂದ ಆಸಕ್ತರು ಇತ್ತ ಕಡೆ ಗಮನ ಹರಿಸಬಹುದು


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಸ್ಟಾಂಡರ್ಡ್ ಆಪ್ ಗಿವಿಂಗ್

 


ಸ್ಟಾಂಡರ್ಡ್ ಆಪ್ ಗಿವಿಂಗ್


ಆರ್ಥಿಕವಾಗಿ ಉತ್ತಮ ಸ್ಥಿತಿ ತಲುಪಿದಾಗ ಹೆಚ್ಚಿಸಿಕೊಳ್ಳದಿದ್ದರೂ ಚಿಂತೆಯಿಲ್ಲ ಸ್ಟಾಂಡರ್ಡ್ ಆಪ್ ಲಿವಿಂಗ್|

ಹೆಚ್ಚಿಸಿಕೊಳ್ಳೋಣ ಸ್ಟಾಂಡರ್ಡ್ ಆಪ್ ಗಿವಿಂಗ್ ||

ಸಿಹಿಜೀವಿ ವೆಂಕಟೇಶ್ವರ