22 September 2024

ಆದರ್ಶ ಪಿತ ,ಹೆಮ್ಮೆಯ ಸುತ.


 


ಆದರ್ಶ ಪಿತ ,ಹೆಮ್ಮೆಯ ಸುತ.


ಜಗತ್ತಿನಲ್ಲಿ ತಾಯಿಯ ತ್ಯಾಗಕ್ಕೆ, ಮಮತೆಗೆ, ಪಾಲನೆ ಮಾಡುವ ಗುಣಕ್ಕೆ ಸಾಟಿ ಬೇರಾವುದೂ ಇಲ್ಲ ಅಂತೆಯೇ ತಾಯಿಯ ಗುಣಗಳನ್ನು ಕೊಂಡಾಡುವ ಸಾವಿರದ ಕಥೆಗಳಿಗೆ ಬರವಿಲ್ಲ. ಸಂಸಾರ ಪೋಷಣೆಯಲ್ಲಿ   ತಾಯಿಗೆ ಬೆಂಬಲವಾಗಿ ನಿಂತ ತಂದೆಯನ್ನು ನಾವು ಮರೆತೇ ಬಿಟ್ಟೆವೇನೋ ಎಂದೆನಿಸುವುದು ಸುಳ್ಳಲ್ಲ. ಇತ್ತೀಚೆಗೆ ಗೆಳೆಯನೊಬ್ಬ ಕಳಿಸಿದ ಸಂದೇಶವು ತಂದೆ ಮಗನ ನಡುವಿನ ಅಗೋಚರವಾದ ಬಾವುಕ ಪ್ರೀತಿಯನ್ನು ತರೆದಿಟ್ಟಿತು.ಅದನ್ನು  ನೀವು ಓದಿದರೆ ಖಂಡಿತವಾಗಿಯೂ ನೀವು ಬಾವುಕರಾಗುವಿರಿ.


ತಂದೆ ತಾಯಿ ತಮ್ಮ ಒಬ್ಬನೇ ಮಗನನ್ನು ಮಮತೆಯಿಂದ ಸಾಕಿ ಸಲಹಿ ಒಳ್ಳೆಯ ವಿದ್ಯಾಭ್ಯಾಸವನ್ನೂ ಕೊಡಿಸಿದರು. ಮಗನೂ ಸಹ ಕಷ್ಟಪಟ್ಟು ಓದಿ ತುಂಬಾ ವಿಧೇಯನಾಗಿ ನಡೆದುಕೊಂಡು ವಿಧ್ಯಾಭ್ಯಾಸವನ್ನು ಮುಗಿಸಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದನು. ಒಂದು ಉತ್ಕೃಷ್ಟ ಕಂಪನಿಯಲ್ಲಿ ಕೆಲಸವೂ ಅರಸಿಕೊಂಡು ಬಂತು. ಮೊದಲನೇ ಸಂಬಳವೂ ಸಹ ಅವನ ಕೈ ಸೇರಿತು.


   ತನ್ನ ಮೊದಲ ಸಂಬಳವನ್ನು ತಾಯಿಯ ಕೈಗೆ ಕೊಟ್ಟು ನಮಸ್ಕರಿಸಿದ. ತಾಯಿಗೆ ಖುಷಿಯಾಯಿತು. ಅವಳು ಒಂದು ಕ್ಷಣ ಆಲೋಚಿಸಿ, ಮೊದಲು ಇದನ್ನು ನಿಮ್ಮ ತಂದೆಯ ಕೈಗೆ ಕೊಡು ಎಂದಳು. ಮಗನು ತಾಯಿಯ ಮಾತು ಕೇಳಿಸಿಕೊಂಡರೂ ಕೇಳದಂತೆ ಇದ್ದನು. ಮತ್ತೆ ತಾಯಿಯು ತಂದೆಯ ಕೈಗೆ ಕೊಡುವಂತೆ  ಹೇಳಿ  ಆ ಹಣವನ್ನು ಮರಳಿ ಮಗನ ಕೈಗೆ ನೀಡಿದಳು.


ಆಗ ಮಗನು, ''ಇಲ್ಲಮ್ಮ ನಾನು ಅವರಿಗೆ ಕೊಡುವುದಿಲ್ಲ'' ಎಂದನು. "ಹಾಗೆ ಹೇಳಬಾರದು ಕಂದಾ"ಎಂದಳು ತಾಯಿ. "ನನ್ನಿಂದ ಸಾಧ್ಯವಿಲ್ಲ" ಎಂದು ಮಗ ಉತ್ತರಿಸಿದ. ಇದರಿಂದ ತಾಯಿಗೆ ಸಿಟ್ಟು ಬಂದಿತು. ಇದುವರೆಗೆ ವಿಧೇಯನಾಗಿದ್ದ ಮಗನ ಈ ವರ್ತನೆಗೆ ನೊಂದಳು. ಬೆಳೆದ ಮಗ ಮುಂದೆ ಮನೆಯ ಜವಾಬ್ಧಾರಿ ಹೊರುವ ಈತ ಹೀಗೇಕೆ ? ಎಂದು ಮನದಲ್ಲಿಯೇ ಸಂಕಟ ಪಟ್ಟುಕೊಂಡಳು. ಕೊನೆಗೆ ಏನಾಯಿತೋ ಏನೋ ಬೆಳೆದ ಮಗ ಎಂದೂ ನೋಡದೆ ತಕ್ಷಣವೇ ಕಪಾಳಕ್ಕೆ ಚಟಾರ್ ಎಂದು ಭಾರಿಸಿದಳು. ಕೋಪದಿಂದ ಬೈದಳು. ಮುಂದುವರೆದು "ಮೊದಲ ಸಂಬಳ ತೆಗೆದುಕೊಂಡ ಕೂಡಲೆ ನೀನು ದೊಡ್ಡವನಾದಿಯೇನೋ, ಬಹಳ ದೊಡ್ಡ ವ್ಯಕ್ತಿ ಆಗಿಬಿಟ್ಟಿಯೇನೋ,ಛೇ!" ಎಂದು ಮೂದಲಿಸಿದಳು.

"ತಂದೆಗೆ ಕೊಡು ಎಂಬ ನನ್ನ ಮಾತನ್ನು ಸಹ ನೀನು ದಿಕ್ಕರಿಸಿರುವೆ. ಇದೇನಾ ನೀನು ಇದುವರೆಗೂ ಕಲಿತುಕೊಂಡ ಸಂಸ್ಕಾರ" ಎಂದು ಬೈದಳು.


ಮಗನು ತನ್ನ ಕೆನ್ನೆಯನ್ನು ಸವರಿಕೊಳ್ಳುತ್ತಾ ಕಣ್ಣಿಂದ ಸಿಡಿದ ಹನಿಯನ್ನು ಅಂಗೈಯಿಂದ  ಒರೆಸಿಕೊಳ್ಳುತ್ತಾ  ದುಃಖದಿಂದ ತಾಯಿಗೆ ಹೇಳುತ್ತಾನೆ, ''ಇಲ್ಲಮ್ಮ, ನನ್ನ ತಂದೆಯ ಕೈ ಯಾವತ್ತೂ ಮೇಲೆಯೇ ಇರಬೇಕು. ಕೆಳಗೆ ಕೈ ಚಾಚಕೂಡದು. ಹಾಗೆಯೇ ಮೇಲೆಯೇ ಇರಲಿ ಎಂಬುದೇ ನನ್ನ ಅದಮ್ಯ ಆಸೆ. ಇದುವರೆಗೂ ಅವರಿಂದ ನಾನು ಹಣ ಪಡೆದುಕೊಳ್ಳುವಾಗ ಹೆಮ್ಮೆಯಿಂದ ಸ್ವೀಕರಿಸಿದ್ದೇನೆ. ಈಗ ನಾನು ಅವರಿಗೆ ಇದನ್ನು ಕೊಡುವಾಗ ಅವರ ಕೈ ನನ್ನ ಕೈಗಳ ಕೆಳಗೆ ಬರುತ್ತದೆ. ಅದು ನನಗಿಷ್ಟವಿಲ್ಲ. ಎಂದೆಂದೂ  ಸರ್ವಕಾಲಕ್ಕೂ ನನ್ನ ತಂದೆಯ ಕೈಗಳು ಮೇಲೆಯೇ ಇರಬೇಕು.      ನೀವೇ ಇದನ್ನು ಅಪ್ಪನಿಗೆ ಕೊಟ್ಟು ಬಿಡಿ. ಅವರಿಗೆ ಹಣ ಕೊಡುವಷ್ಟು ಯಾವ ಅರ್ಹತೆಯೂ ನನಗಿಲ್ಲ. ನೀವು ಕೊಡಿ, ನಾನು ನಮಸ್ಕಾರ ಮಾಡಿ ಅವರಿಂದ ಆಶೀರ್ವಾದ ಪಡೆಯುವೆ'' ಎಂದನು. 

ತಾಯಿಗೆ ದಿಗ್ಭ್ರಮೆಯಾಯಿತು. ವಿಗ್ರಹದಂತೆ   ನಿಂತು ಬಿಟ್ಟಳು.


   ಕೊಠಡಿಯ ಒಳಗೆ ಕುಳಿತು ತಾಯಿ-ಮಗನ ಸಂಭಾಷಣೆಯನ್ನು ಕೇಳಿಸಿ ಕೊಳ್ಳುತ್ತಿದ್ದ ತಂದೆ, ತಕ್ಷಣ ಹೊರಬಂದು ತಮ್ಮ ಮಗನನ್ನು ನೋಡಿದ. ಕಣ್ಣಲ್ಲಿ ನೀರು ತುಂಬಿ ಬಂತು. ಅದು ಆನಂದ ಭಾಷ್ಬ. ತನ್ನ ಎರಡು ಬಾಹುಗಳಿಂದ ಮಗನಿಗೆ ಬಿಗಿಯಾದ ದೀರ್ಘಾಲಿಂಗನ ಮಾಡಿದನು. ತನ್ನ ಮಗ ತನ್ನನ್ನು ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿರುವನಲ್ಲ ಎಂದು ಹೆಮ್ಮೆಯಿಂದ ಮಗನ ಕಣ್ಣಿನೊಳಗೆ ತನ್ನ ಬಿಂಬವನ್ನು ನೋಡಿ ಪುಳಕಿತನಾದನು. ಮನದಲ್ಲಿ ಹೆಮ್ಮೆಯ ಸಾರ್ಥಕ ಭಾವ ತುಂಬಿ ಬಂದಿತು. ಮೈ ಮನಸ್ಸು ಹಗುರವಾಗಿ ಗಾಳಿಯಲ್ಲಿ ತೇಲಿದ ಅನುಭವ. ಕೈಯಲ್ಲಿ ಮೋಡ ಹಿಡಿದ ಅನುಭವವಾಯಿತು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


 

No comments: