30 October 2024

#ಅಮೂಲ್ಯವಾದ_ಸಂಬಂಧಗಳನ್ನು_ಜೋಡಿಸೋಣ


 
#ಅಮೂಲ್ಯವಾದ_ಸಂಬಂಧಗಳನ್ನು_ಜೋಡಿಸೋಣ...

 ಅವನೊಬ್ಬ  ಶ್ರೀಮಂತ ಕುಟುಂಬದ ಚಿಕ್ಕ ಹುಡುಗ.  ತುಂಬಾ ಹಳೆಯ ಮತ್ತು ಮುರಿದ ಕ್ರೇಯಾನ್ ಗಳನ್ನು ನೋಡಿ .   ತಾಯಿಗೆ ಹೇಳಿದನು. 
 "ಅಮ್ಮಾ, ನನ್ನ ಎಲ್ಲಾ ಮುರಿದ ಕ್ರೇಯಾನ್ ಗಳು ನನಗೆ ಬೇಡ. ಅವು ನಿಷ್ಪ್ರಯೋಜಕವಾಗಿವೆ ಮತ್ತು ನನ್ನ ಮಲಗುವ ಕೋಣೆಯಲ್ಲಿ ಅವು ನನಗೆ ತುಂಬಾ ಕಿರಿಕಿರಿಯನ್ನುಂಟುಮಾಡುತ್ತವೆ ಎಲ್ಲಾದರೂ ಬಿಸಾಡಿ ಬಿಡು "  ಅಂದ. ಶ್ರೀಮಂತ ತಾಯಿ ತನ್ನ ಮಗುವಿಗೆ ಸಂತೋಷವಾಗುವುದಾದರೆ ಈ ಮುರಿದ ಕ್ರೇಯಾನ್ ಗಳು ಏತಕ್ಕೆ  ಎಂದು  ಮುರಿದ ಕ್ರೇಯಾನ್ ಗಳನ್ನು ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿ ಹೊರಗೆ ಎಸೆದಳು.
ಮರುದಿನ ಅವಳು ತನ್ನ ಮಗನ ಅಸಂತೋಷದ  ಮನಸ್ಥಿತಿಯಲ್ಲಿ ನೋಡಿ ಕಾರಣ ಕೇಳಿದಾಗ.  
 ಚಿಕ್ಕ ಹುಡುಗ ಪ್ರತಿಕ್ರಿಯಿಸಿದನು.
 "ನಾನು ಇನ್ನು ಮುಂದೆ ನನ್ನ ಕೋಣೆಯಲ್ಲಿನ ಏರ್ ಫ್ರೆಶ್‌ನರ್‌ಗಳು ಮತ್ತು ಸುಗಂಧ ತೈಲದ ವಾಸನೆಯನ್ನು ಇಷ್ಟಪಡುವುದಿಲ್ಲ. ನಾವು ಎಲ್ಲವನ್ನೂ ಹೊರಹಾಕಬಹುದೇ?" ಎಂದನು
 ತಾಯಿಯು   ಎಲ್ಲಾ ಸುಗಂಧದ ಬಾಟಲಿಗಳನ್ನು ಸಂಗ್ರಹಿಸಿ ಅವುಗಳನ್ನು ಹೊರಗೆ ಹಾಕಿ    ನಂತರ ತನ್ನ ಮಗನಿಗೆ ಹೊಸ ಪರಿಮಳವನ್ನು ಖರೀದಿಸಿದಳು.
ಇದಾಗಿ ಕೆಲ ದಿನಗಳಾದ ಮೇಲೆ 
 ಒಂದು ಸಂಜೆ ತಾಯಿ ತನ್ನ ಮಗನನ್ನು ದಿನಸಿ ಅಂಗಡಿಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದಳು.  ಅವರು ರಸ್ತೆಯಲ್ಲಿ ಕಾರಿನಲ್ಲಿ ಹೋಗುವಾಗ  ಹುಡುಗನು ಕಾರಿನ ಕಿಟಕಿಯಿಂದ  ಆಶ್ಚರ್ಯಕರವಾದದ್ದನ್ನು ನೋಡಿದನು.  ಅದೆಂದರೆ ಬಡ ಹುಡುಗನೊಬ್ಬ ಕೆಲವು ವರ್ಣರಂಜಿತ ಮೇಣದಬತ್ತಿಗಳನ್ನು ಮಾರುವುದನ್ನು ಅವನು ನೋಡಿದನು.   ಮೇಣದ ಬತ್ತಿಗಳನ್ನು ಮಾರುವ ಬಾಲಕ ಇವು  "ಸ್ವರ್ಗದ ಮೇಣದಬತ್ತಿಗಳು" ಎಂದು ಕೂಗುತ್ತಾ ಮಾರುತ್ತಿದ್ದ.  ಒಂದು ಮೇಣದಬತ್ತಿಯು ತುಂಬಾ ಪ್ರಕಾಶಮಾನವಾಗಿ ಉರಿಯುತ್ತಿತ್ತು ಮತ್ತು ಗಾಳಿಯನ್ನು ತುಂಬುವ ಆಹ್ಲಾದಕರ ಪರಿಮಳವನ್ನು ಹೊರಸೂಸುತ್ತಿತ್ತು.  ಬಡ ಹುಡುಗ ಮಾರಾಟ ಮಾಡಿದ ದುಬಾರಿ ಮತ್ತು ವಿಶಿಷ್ಟವಾದ ಮೇಣದಬತ್ತಿಗಳನ್ನು    ಬೆಲೆ ಹೆಚ್ಚಾದರೂ ಕೊಳ್ಳಲು ಬಹಳಷ್ಟು ಜನರು ಸೇರಿದ್ದರು. 

 ಆ ಸಮಯದಲ್ಲಿ  ಶ್ರೀಮಂತ ಮಗು ತನ್ನ ತಾಯಿಯನ್ನುದ್ದೇಶಿಸಿ  
 "ಅಮ್ಮ, ನೋಡು! ಮೇಣದಬತ್ತಿಗಳು ತುಂಬಾ ಚೆನ್ನಾಗಿವೆ ಮತ್ತು ಸುಂದರವಾಗಿವೆ. ಅವು ನನ್ನ ಮಲಗುವ ಕೋಣೆಯನ್ನು ನೋಡಲು ಮತ್ತು ಅಸಾಧಾರಣವಾದ ವಾಸನೆಯನ್ನು ನೀಡುತ್ತವೆ. ದಯವಿಟ್ಟು ನನಗಾಗಿ ಖರೀದಿಸು"  ಎಂದು ನುಡಿದನು 
 ತಾಯಿ ತನ್ನ ಮಗನನ್ನು ಸಂತೋಷಪಡಿಸಲು ಬಯಸಿದ್ದಳು.  ಆದರೆ ಅವರು ಕಾರಿನಿಂದ ಇಳಿದು ಕ್ಯಾಂಡಲ್ ಬಾಯ್ ಹತ್ತಿರ ಬಂದು ಕ್ಯಾಂಡಲ್ ಖರೀದಿಸಲು ಮುಂದಾದಳು ಆಗ ಆ ಬಾಲಕ ಹೇಳಿದ
 "ನನ್ನನ್ನು ಕ್ಷಮಿಸಿ ಮೇಡಮ್, ಎಲ್ಲಾ ಕ್ಯಾಂಡಲ್ ಮಾರಾಟವಾದವು ಇನ್ನು ಯಾವುದೇ ಕ್ಯಾಂಡಲ್  ಉಳಿದಿಲ್ಲ" ಎಂಬ ಉತ್ತರ ನೀಡಿದ. 
 ಶ್ರೀಮಂತ ಹುಡುಗನ ಮುಖದಲ್ಲಿ ನಿರಾಶೆ ಮೂಡಿತು.  ಅವನ ದುಃಖದ ಮುಖವನ್ನು ಅವನ ತಾಯಿ ಗಮನಿಸಿದಾಗ ಅವಳು ಕ್ಯಾಂಡಲ್ ಹುಡುಗನನ್ನು ಕೇಳಿದಳು. 
 "ನೀನು  ಆ ವಿಶೇಷ ಮೇಣದಬತ್ತಿಗಳನ್ನು ಎಲ್ಲಿ ಖರೀದಿಸಿದೆ? ನಾನು ನನ್ನ ಮಗನಿಗೆ ಖರೀದಿಸಲು ಬಯಸುತ್ತೇನೆ?" 
 ಕ್ಯಾಂಡಲ್ ಬಾಯ್ ವಿನಮ್ರವಾಗಿ ಉತ್ತರಿಸಿದ.
 "ನಾನು ಅವುಗಳನ್ನು ಖರೀದಿಸಲಿಲ್ಲ, ನಾನೇ ತಯಾರು  ಮಾಡಿದ್ದೇನೆ" 
 ಅವಳು ತುಂಬಾ ಆಶ್ಚರ್ಯಪಟ್ಟು  ಕೇಳಿದಳು. "ಆದರೆ ಅಂತಹ ಅದ್ಭುತವಾದ ಮೇಣದಬತ್ತಿಗಳನ್ನು ನೀನೇ ಹೇಗೆ ಮಾಡಲು ಸಾಧ್ಯವಾಯಿತು? ನೀನು ಯಾವ ವಸ್ತುಗಳನ್ನು ಬಳಸಿದೆ?" 
 ಹುಡುಗ ಒಂದು ಕ್ಷಣ ತಡೆದು ಹೇಳಿದ.
 "ಒಮ್ಮೆ ಮಹಿಳೆಯೊಬ್ಬಳು ಮುರಿದ ಕ್ರೆಯಾನ್  ಪೆಟ್ಟಿಗೆಯನ್ನು ಎಸೆಯುವುದನ್ನು ನಾನು ನೋಡಿದೆ. ನಾನು ಸಂತೋಷದಿಂದ  ಎಲ್ಲವನ್ನೂ ತೆಗೆದುಕೊಂಡೆ. ನಂತರ ಮರುದಿನ ಅದೇ ತ್ಯಾಜ್ಯದ ತೊಟ್ಟಿಯಲ್ಲಿ ಕೆಲವು ಸುಗಂಧದ ಬಾಟಲಿಗಳನ್ನು ಅದೇ   ಮಹಿಳೆ  ಎಸೆದರು. ನಾನು ಅವುಗಳನ್ನು ಮನೆಗೆ ತೆಗೆದುಕೊಂಡು ಹೋದೆ.  ನಾನು ಎಲ್ಲಾ ಮುರಿದ ಕ್ರೆಯಾನ್ ಗಳನ್ನು ಕರಗಿಸಿ ಕೆಲವು ಸುಗಂಧ ದ್ರವ್ಯಗಳೊಂದಿಗೆ ಮೇಣವನ್ನು ಬೆರೆಸಿದೆ. ಸುಗಂಧಯುಕ್ತ ಕ್ಯಾಂಡಲ್ ಮಾಡಿ  ಸ್ವರ್ಗ ದ ಕ್ಯಾಂಡಲ್ ಎಂದು ಹೆಸರಿಟ್ಟೆ ಅಷ್ಟೇ" ಎಂದು ಬಾಲಕ ಮಾತು ನಿಲ್ಲಿಸಿದ.
ಆ ಸಿರಿವಂತ ಮಹಿಳೆಗೆ ಮತ್ತೆ ಮಾತು ಹೊರಡಲಿಲ್ಲ.
ಪ್ರತಿಯೊಂದು ವಸ್ತು ಅಥವಾ ಸಂಬಂಧ ಅಮೂಲ್ಯವಾದುದು.  ಯಾವುದೇ ವಸ್ತು ಅಥವ ಸಂಬಂಧ ನಿಷ್ಪ್ರಯೋಜಕ ಎಂಬ ತೀರ್ಮಾನಕ್ಕೆ ಬಂದುಬಿಡುತ್ತೇವೆ.ಇದು ತಪ್ಪು   ಅನುಪಯುಕ್ತ ಎಂದು ಬಿಸಾಡಿದ  ವಸ್ತುಗಳಿಗೆ ಸೂಕ್ತ ಮೌಲ್ಯವರ್ಧನೆ ಮಾಡಿದರೆ ಅಮೂಲ್ಯ ವಸ್ತುಗಳಾಗುವಂತೆ ಸಣ್ಣ ಪುಟ್ಟ ಕಾರಣದಿಂದ ಸಂಬಂಧಗಳ ಕಡಿತಗೊಳಿಸಿದವರು ಒಮ್ಮೆ ಚಿಂತಿಸಿ ಚಿಕ್ಕ ಪುಟ್ಟ ಬದಲಾವಣೆ ಮಾಡಿಕೊಂಡು ಸಂಬಂಧಗಳನ್ನು ಚಿಗುರಿಸಿದರೆ ಬದುಕು ನಂದನವನವಾಗುವುದು ಅಲ್ಲವೇ?

ಸಿಹಿಜೀವಿ ವೆಂಕಟೇಶ್ವರ
ತುಮಕೂರು
#sihijeeviVenkateshwara #storytelling #moral #PersonalDevelopment #motivational

No comments: