01 October 2024

ವನಸ್ನಾನದ ಬಗ್ಗೆ ನಿಮಗೆಷ್ಟು ಗೊತ್ತು?


#ವನಸ್ನಾನ 


ಸನ್ ಬಾತ್, ಮಡ್ ಬಾತ್ ಬಗ್ಗೆ ಕೇಳಿರುವ ನಾವು ವನ ಸ್ನಾನದ ಬಗ್ಗೆ ಕೇಳಿರುವುದು ಕಡಿಮೆ. ಹೌದು ಹೀಗೊಂದು ಅರಣ್ಯ ಸ್ನಾನ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರನ್ನು ಸೆಳೆಯುತ್ತಿದೆ.

1980 ರ ದಶಕದಲ್ಲಿ ಜಪಾನ್‌ನಲ್ಲಿ ಶಿನ್ರಿನ್-ಯೋಕು ಎಂಬ ಹೆಸರಿನಿಂದ ಆರಂಭವಾದ  ಅರಣ್ಯ ಸ್ನಾನ ಪರಿಕಲ್ಪನೆ ಇಂದು ಬಹುತೇಕ ದೇಶಗಳಲ್ಲಿ ಜಾರಿಯಲ್ಲಿದೆ.

  1990 ರ ದಶಕದಲ್ಲಿ ಸಂಶೋಧಕರು ಅರಣ್ಯ ಸ್ನಾನದ ಶಾರೀರಿಕ ಪ್ರಯೋಜನಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು.  

ವನಸ್ನಾನವನ್ನು  ವನಪ್ರಿಯರು ಮಾತ್ರವಲ್ಲ ಎಲ್ಲರೂ  ಅಭ್ಯಾಸ ಮಾಡಬಹುದು. 


ಅರಣ್ಯ ಅಥವಾ ವನ   ಸ್ನಾನವೆಂದರೆ ಕಾಡಿನ ಪರಿಸರದಲ್ಲಿ ಹೋಗಿ ಸುಮ್ಮನೆ ಮಾತಾನಾಡದೆ ಕೂತು ಕಾಡಿನ ಶಬ್ದಗಳನ್ನು ಕೇಳುವುದು.‌ ದೂರದಲ್ಲೊಂದು‌ ಹಕ್ಕಿ ತನ್ನ ಸಂಗಾತಿಗೆ ಕರೆಯವ ಶಬ್ದ, ಮೆಲ್ಲನೆ ತೇಲಿ ಬಂದು ಕಿವಿಗೆ ಅಪ್ಪಳಿಸುವ ಗಾಳಿ, ದೂರದ ಕಾಡಿನ ಮದ್ಯದಿಂದ ಬರುವ ಚಿತ್ರವಿಚಿತ್ರ ಶಬ್ದಗಳು ಇವುಗಳನ್ನು ಕೇಳಬಾರದು "ಆಲಿಸಬೇಕು". ಕಾಡಿನಲ್ಲಿ ನಾವು ಮಾತಾಡದೆ ಸುಮ್ಮನಿದ್ದರೆ ಕಾಡು ಮಾತನಾಡಲು ಪ್ರಾರಂಭಿಸುತ್ತದೆ.  ಅದನ್ನು ಅನುಭವಿಸಬೇಕು.


ನಾವು ದೇಹವನ್ನು ಪ್ರಕೃತಿಯೊಂದಿಗೆ ಜೋಡಿಸಿದಾಗ ಅದು ಯಾವಾಗಲೂ ಶಾಂತವಾಗಿರುತ್ತದೆ. ಆಗ ಮನಸ್ಸಿನಲ್ಲೊಂದು ಹೊಸ ಚೈತನ್ಯ ಮೂಡುತ್ತದೆ. ಎಂದು 

ಹಲವಾರು ವರ್ಷಗಳಿಂದ ವನ ಸ್ನಾನ ಮಾಡುತ್ತಿರುವ 

ನಿವೃತ್ತ ಉಪನ್ಯಾಸಕರಾದ ನಂಜುಂಡಪ್ಪ ರವರು ಅಭಿಪ್ರಾಯಪಡುತ್ತಾರೆ. ಪ್ರಕೃತಿಯ ಶಬ್ದಗಳನ್ನು ಆಲಿಸಿ, ನಮಗಾಗಿ ಹಾಡುವ ನಿರ್ದಿಷ್ಟ ಪಕ್ಷಿಗಳನ್ನು ವೀಕ್ಷಿಸಬಹುದು. ಮರವನ್ನು ತಬ್ಬಿಕೊಳ್ಳಿ, ಹೂವುಗಳನ್ನು ವಾಸನೆ ಗ್ರಹಿಸಿ, ತೊಗಟೆ ಮತ್ತು ಎಲೆಗಳ ವಿನ್ಯಾಸವನ್ನು ಪರಿಶೀಲಿಸಬಹುದು. ಭೂಮಿಯನ್ನು ಸ್ಪರ್ಶಿಸಿ ಮತ್ತು ಭೂಮಿಯ ವಾಸನೆಯನ್ನು ಅನುಭವಿಸಬಹುದು. 

ನಮಗೆ ದಣಿವಾದಾಗ, ಹುಲ್ಲು ಅಥವಾ ಬಿದ್ದ ಮರದ ಮೇಲೆ ಕುಳಿತು ವಿಶ್ರಾಂತಿ ಪಡೆಯಬಹುದು. ಕ್ಯಾಮರಾದಿಂದ ಚಿತ್ರಗಳನ್ನು ತೆಗೆದುಕೊಳ್ಳುವ ಬದಲು, ನಮ್ಮ ಕಣ್ಣುಗಳಿಂದ ಶೂಟ್ ಮಾಡುವ ಪ್ರಯತ್ನ ಮಾಡಬೇಕು. ಪ್ರತಿ ವಿವರವನ್ನು ನೋಡಿ ಮತ್ತು ಆಶ್ಚರ್ಯಪಡುತ್ತಾ ಆನಂದ ಪಟ್ಟರೆ  ಇದಕ್ಕಿಂತ ‌ದೊಡ್ಡ ಯೋಗ, ಧ್ಯಾನ ಮತ್ತೊಂದಿಲ್ಲ ಎನಿಸುತ್ತದೆ.

ಇಂತಹ ಅನುಭವದ ಅನುಭೂತಿಯನ್ನು ಪಡೆಯಲು ‌ನೀವು ಒಮ್ಮೆ ಅಥವಾ ಆಗಾಗ್ಗೆ ವನ ಸ್ನಾನ ಮಾಡಬಹುದು.


ಸಿಹಿಜೀವಿ ವೆಂಕಟೇಶ್ವರ

#sihijeeviVenkateshwara #forestbathing #forest #floral #bathing #relaxation



 

No comments: