27 March 2025

ಅನುಭವಿ ಮಾರಾಟಗಾರ .ಹನಿಗವನ



 

ಅನುಭವಿ ಮಾರಾಟಗಾರ 

ಮಾರಾಟ ಪ್ರತಿನಿಧಿ ಹುದ್ದೆಯ
ಸಂದರ್ಶನದಲ್ಲಿ ಪ್ರಶ್ನೆ ಕೇಳಿದರು
ನಿನಗೆ ಮಾರಾಟದಲ್ಲಿ ಇರುವ 
ಅನುಭವವೇನು|
ಅವನು ಆತ್ಮವಿಶ್ವಾಸದಿಂದ  ಉತ್ತರಿಸಿದ
ನಾನೀಗಾಗಲೆ ನಮ್ಮ ಮನೆ, ಕಾರು, ಬೈಕ್ ಹಾಗೂ ಹೆಂಡತಿಯ ಒಡವೆ ಮಾರಿರುವೆನು||

ಸಿಹಿಜೀವಿ ವೆಂಕಟೇಶ್ವರ
ತುಮಕೂರು

ರಂಗಪರಂಪರೆ ಬೆಂಬಲಿಸೋಣ. (ಇಂದು ವಿಶ್ವ ರಂಗ ಭೂಮಿ ದಿನ)


 


ರಂಗಪರಂಪರೆ ಬೆಂಬಲಿಸೋಣ.

(ಇಂದು ವಿಶ್ವ ರಂಗ ಭೂಮಿ ದಿನ)

ಇಂದಿನ ಮನರಂಜನೆ ಎಂದರೆ  ಸಿನಿಮಾ  ಮತ್ತು ಸಾಮಾಜಿಕ ಮಾಧ್ಯಮಗಳು ಎಂಬುದು ಸತ್ಯವಾದರೂ ನಾಟಕಗಳು ಅನಾದಿ ಕಾಲದಿಂದಲೂ ಮನರಂಜನೆ ನೀಡುತ್ತಾ ಬಂದಿವೆ. ರಂಗಭೂಮಿ ಇಂದಿಗೂ ಪ್ರಸ್ತುತ ಎಂಬುದನ್ನು ಈಗಲೂ ಹಮ್ಮಿಕೊಳ್ಳುತ್ತಿರುವ ಹಲವಾರು ನಾಟಕ ಪ್ರದರ್ಶನಗಳು ನಿರೂಪಿಸುತ್ತಿವೆ.

ವಿಶ್ವ ರಂಗಭೂಮಿ ದಿನವನ್ನು ಮಾರ್ಚ್ 27 ರಂದು ಆಚರಿಸಲಾಗುತ್ತದೆ. ಪ್ರದರ್ಶನ ಕಲೆಗಳನ್ನು ಆಚರಿಸಲು ಮತ್ತು ಸಮಾಜದಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ಗಮನ ಸೆಳೆಯಲು ಅಂತರರಾಷ್ಟ್ರೀಯ ರಂಗಭೂಮಿ ಸಂಸ್ಥೆ  1962ರಿಂದ  ಈ ದಿನವನ್ನು  ಆಚರಿಸಿಕೊಂಡು ಬರುತ್ತಿದೆ. 

ಪ್ರದರ್ಶನ ಕಲೆಗಳನ್ನು ಉತ್ತೇಜಿಸುವುದು. ಈ ದಿನಾಚರಣೆಯ  ಪ್ರಮುಖವಾದ ಉದ್ದೇಶ. ಇದರ ಜೊತೆಯಲ್ಲಿ ರಂಗಭೂಮಿಯು ಒಂದು ಕಲಾ ಪ್ರಕಾರವಾಗಿ ಮತ್ತು ಸಂಸ್ಕೃತಿ ಮತ್ತು ಸಮಾಜದ ಮೇಲೆ ಅದರ ಪ್ರಭಾವವನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ.ರಂಗಭೂಮಿ ಕಾರ್ಮಿಕರನ್ನು ಬೆಂಬಲಿಸುತ್ತಾ  ಪೋಷಕ ನಟರು, ನಿರ್ದೇಶಕರು, ಬರಹಗಾರರು ಮತ್ತು ರಂಗಭೂಮಿಯಲ್ಲಿ ಕೆಲಸ ಮಾಡುವ ಇತರರಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ದಿನವು ಪ್ರಪಂಚದಾದ್ಯಂತದ ರಂಗಭೂಮಿಗಳ ನಡುವೆ ವಿಚಾರಗಳು ಮತ್ತು ಅನುಭವಗಳ ವಿನಿಮಯವನ್ನು ಉತ್ತೇಜಿಸುತ್ತದೆ. ಜೊತೆಗೆ ವಿವಿಧ ನಾಟಕ ಸಂಪ್ರದಾಯಗಳು ಮತ್ತು ಶೈಲಿಗಳತ್ತ ಗಮನ ಸೆಳೆಯುತ್ತದೆ.

 ವಿಶ್ವ ರಂಗಭೂಮಿ ದಿನವು ರಂಗಭೂಮಿ ಪ್ರದರ್ಶನಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಮತ್ತು ಜನರು ನಾಟಕಗಳಿಗೆ  ಭೇಟಿ ನೀಡಲು ಪ್ರೇರೇಪಿಸುತ್ತದೆ.

ಈ ದಿನದಂದು

 ಅನೇಕ ದೇಶಗಳು ರಂಗಭೂಮಿಗೆ ಮೀಸಲಾಗಿರುವ ವಿಶೇಷ ಪ್ರದರ್ಶನಗಳು, ಉತ್ಸವಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಇವು ಸಾಮಾನ್ಯವಾಗಿ ಕಲೆಯ ಮಹತ್ವ ಮತ್ತು ಸಮಾಜದ ಮೇಲೆ ಅದರ ಪ್ರಭಾವವನ್ನು ಎತ್ತಿ ತೋರಿಸುವ ಪ್ರದರ್ಶನಗಳಾಗಿವೆ.ಕಾರ್ಯಕ್ರಮಗಳು ಮತ್ತು ಉಪನ್ಯಾಸಗಳು. ರಂಗಭೂಮಿಗಳು ಮತ್ತು ಶಿಕ್ಷಣ ಸಂಸ್ಥೆಗಳು ರಂಗಭೂಮಿಯ ಕಲೆ ಮತ್ತು ಸಮಾಜದಲ್ಲಿ ಅದರ ಪಾತ್ರಕ್ಕೆ ಮೀಸಲಾದ ಉಪನ್ಯಾಸಗಳು, ಕಾರ್ಯಾಗಾರಗಳು ಮತ್ತು ಚರ್ಚೆಗಳನ್ನು ಆಯೋಜಿಸುತ್ತವೆ.ಪ್ರತಿ ವರ್ಷ, ರಂಗಭೂಮಿಯ ದಿನದಂದು ಜಗತ್ತಿನ ಪ್ರಸಿದ್ಧ ವ್ಯಕ್ತಿಯನ್ನು ಈ ದಿನಕ್ಕೆ ವಿಶೇಷ ಸಂದೇಶವನ್ನು ಬರೆಯಲು ಆಯ್ಕೆ ಮಾಡಲಾಗುತ್ತದೆ.ನಂತರ ಅದನ್ನು ಪ್ರಪಂಚದಾದ್ಯಂತ ವಿತರಿಸಲಾಗುತ್ತದೆ. ಈ ಸಂದೇಶಗಳು ಜನರನ್ನು ಪ್ರೇರೇಪಿಸುತ್ತವೆ ಮತ್ತು ರಂಗಭೂಮಿಯ ಮಹತ್ವವನ್ನು ಎತ್ತಿ ತೋರಿಸುತ್ತವೆ. 


  ಕನ್ನಡಕ್ಕೂ ಒಮ್ಮೆ ಈ ಗೌರವ ಸಂದಿತ್ತು. ನಾಟಕಕಾರ ಗಿರೀಶ್ ಕಾರ್ನಾಡ್ ಅವರನ್ನು ವಿಶ್ವರಂಗಭೂಮಿ ದಿನದ ಸಂದೇಶ ನೀಡುವಂತೆ 2002ರಲ್ಲಿ ಕೇಳಿಕೊಳ್ಳಲಾಗಿತ್ತು. ಕಾರ್ನಾಡರು ಆಗ  ಅಂತರರಾಷ್ಟ್ರೀಯ ಸಂಸ್ಥೆಯ ರಾಯಭಾರಿಯೂ ಆಗಿದ್ದರು. ವಿಶ್ವದ ನಾನಾ ಭಾಷೆಯ ರಂಗಕರ್ಮಿಗಳು ಅಂದು ಈ ಸಂದೇಶ ಓದಿ ನಾಟಕ ಪ್ರಯೋಗ ಇತ್ಯಾದಿ ಉತ್ಸವಗಳನ್ನು ಆಚರಿಸಿದ್ದರು. 


2023ರ ವರ್ಷದ ರಂಗಭೂಮಿ ದಿನಕ್ಕೆ ಪ್ರಸಿದ್ಧ ನಾಟಕ ರಚನಕಾರ ನೊಬೆಲ್ ಪ್ರಶಸ್ತಿ ವಿಜೇತ ದರಿಯ ಫೋ ಅವರು ಸಂದೇಶ ನೀಡಿದ್ದರು.   ಅವರು ತಮ್ಮ  ಸಂದೇಶದಲ್ಲಿ “ಹೆಚ್ಚು ಹೆಚ್ಚು ಯುವಜನತೆ ರಂಗ ಚಟುವಟಿಕೆಗಳಲ್ಲಿ ಪಾಲ್ಗೊಂಡು ಹೊಸ ಚಿಂತನೆಗಳ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವುದಕ್ಕೆ ಪೂರಕರಾಗಬೇಕಾಗಿದೆ” ಎಂದು ಕರೆ ನೀಡಿದ್ದರು.

2024 ರಲ್ಲಿ  'ಕಲೆಯೇ ಶಾಂತಿ' ಎಂಬ ಶೀರ್ಷಿಕೆಯ ಸಂದೇಶವನ್ನು ನಾರ್ವೇಜಿಯನ್ ಬರಹಗಾರ ಮತ್ತು ನಾಟಕಕಾರ ಜಾನ್ ಫೋಸ್ಸೆ ನೀಡಿದ್ದರು.

ಈ ವರ್ಷ ಗ್ರೀಸ್ ನ ಲೇಖಕ ,ನಾಟಕಕಾರ, ನಿರ್ದೇಶಕ

ಥಿಯೋಡೋರೋಸ್ ಟೆರ್ಜೊಪೌಲೋಸ್ ವಿಶ್ವ ರಂಗಭೂಮಿ ದಿನದ ಸಂದೇಶ ನೀಡಿದ್ದಾರೆ.

ವೃತ್ತಿ ರಂಗಭೂಮಿಯ ಕಲಾವಿದರು ರಂಗಭೂಮಿಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ.ಇದಕ್ಕೆ ಪೂರಕವಾಗಿ ಹವ್ಯಾಸಿ ರಂಗ ಕಲಾವಿದರು ಸಹ ರಂಗಭೂಮಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ.ಜಗದ ಎಲ್ಲಾ ಕಡೆ ನಾಟಕ ಚಟುವಟಿಕೆಗಳು ಇನ್ನೂ ಹೆಚ್ಚು ಸಕ್ರಿಯವಾಗಲಿ ನಮ್ಮ ಸಾಂಸ್ಕೃತಿಕ ಪರಂಪರೆ  ಅಭಿವೃದ್ಧಿಯಾಗಲಿ ಎಂದು ಆಶಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು







24 March 2025

ಹಾಲಲ್ಲಾದರು ಹಾಕು....


 


ಯಂಗ್ಟಿ ೨ 

ಅದು ಕಳೆದ ಶತಮಾನದ ತೊಂಬತ್ತರ ದಶಕ ನಾನಾಗ ಹಿರಿಯೂರಿನ ಡಾ ರಾಧಾಕೃಷ್ಣನ್ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಟಿ ಸಿ ಎಚ್ ತರಬೇತಿ ಪಡೆಯುತ್ತಿದ್ದೆ.ಒಂದು ದಿನ ನಮ್ಮ ಕಾಲೇಜಿನ  ಕಾರ್ಯದರ್ಶಿಗಳಾದ  ವೀರಕರಿಯಪ್ಪನವರು ನಾನು ಮತ್ತು ನನ್ನ ಟಿ ಸಿ ಹೆಚ್ ಸಹಪಾಠಿಗಳನ್ನು ಕಾರ್ಯಕ್ರಮವೊಂದಕ್ಮೆ ಕರೆದುಕೊಂಡು ಹೋದರು.ಆಗ ಸಚಿವರಾಗಿದ್ಸ ಕೆ ಎಚ್ ರಂಗನಾಥ ರವರ ಅಧ್ಯಕ್ಷತೆಯ ಕಾರ್ಯಕ್ರಮ ಅದು ಮೊದಲ ಬಾರಿಗೆ ಸಚಿವರೊಬ್ವರನ್ನು ಹತ್ತಿರದಿಂದ ನೋಡಿದ್ದೆ.ಕಾರ್ಯಕ್ರಮ ಆರಂಭದ ಮೂರು ನಿಮಿಷ ಮೊದಲು ವೆಂಕಟೇಶ್ ನೀನು ಪ್ರಾರ್ಥನೆ ಮಾಡಬೇಕು ಅಂದು ಬಿಟ್ಟರು ನಮ್ಮ ಕಾರ್ಯದರ್ಶಿ. ಸರ್ ನಾನು ಪ್ರಿಪೇರ್ ಆಗಿಲ್ಲ ಎಂದರೂ "ಹಾಡ ನೀನ್  ಹಾಡ್ತೀಯ " ಅಂತ ಧೈರ್ಯ ತುಂಬಿದರು.ಅಂದು ನಾನು ಹಾಡಿದ ಹಾಡು" ಹಾಲಲ್ಲಾದರು ಹಾಕು...ನೀರಲ್ಲಾದರು ಹಾಕು ರಾಘವೇಂದ್ರ..." ಗೀತೆ ಕಾರ್ಯಕ್ರಮದ ಕೊನೆಯಲ್ಲಿ ಮಾನ್ಯ ಮಂತ್ರಿಗಳು ಹತ್ತಿರ ಕರೆದು ಚೆನ್ನಾಗಿ ಹಾಡಿದೆ ಕಣೋ ಅಂದರು. ಮಂತ್ರಿಗಳಾದ ರಂಗನಾಥ್ ಸರ್ ಈಗ ನಮ್ಮಂದಿಗಿಲ್ಲ  ಆ ಸವಿನೆನಪುಗಳು ಸದಾ ನನ್ನೊಂದಿವೆ. ನಿನ್ನೆ ಸರಿಗಮಪ ಕಾರ್ಯಕ್ರಮದಲ್ಲಿ ಸಹೋದರಿಯರಿಬ್ಬರು ಅದೇ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಅಣ್ಣಾವ್ರಿಗೆ ಡೆಡಿಕೇಟ್ ಮಾಡಿದಾಗ ನನ್ನ ಸವಿನೆನಪು  ಮತ್ತೆ ಮರುಕಳಿಸಿತು.


#sihijeeviVenkateshwara 

Hit Songs #kannadasongs #songs #songstrending Saregama Zee Kannada #rajkukumar

23 March 2025

ಬೆಂಗಳೂರು ತಂಡ ಹಾಲಿ ಚಾಂಪಿಯನ್ ಕೋಲ್ಕತ್ತಾವನ್ನು 7 ವಿಕೆಟ್‌ಗಳಿಂದ ಸೋಲಿಸಿತು

 


 ಬೆಂಗಳೂರು ತಂಡ ಹಾಲಿ ಚಾಂಪಿಯನ್ ಕೋಲ್ಕತ್ತಾವನ್ನು 7 ವಿಕೆಟ್‌ಗಳಿಂದ ಸೋಲಿಸಿತು.

ರಜತ್ ಪಾಟಿದಾರ್ 16 ಎಸೆತಗಳಲ್ಲಿ 34 ರನ್ ಗಳಿಸಿ ವೈಭವ್ ಅರೋರಾಗೆ ವಿಕೆಟ್ ಒಪ್ಪಿಸಿದರು. ಆದರೆ RCB ಚೇಸಿಂಗ್ ಮೇಲೆ ಸಂಪೂರ್ಣ ನಿಯಂತ್ರಣದಲ್ಲಿ ಮುಂದುವರೆದು. ವಿರಾಟ್ ಕೊಹ್ಲಿ ಉತ್ತಮವಾಗಿ ಆಡಿ  ಅರ್ಧಶತಕದೊಂದಿಗೆ ಇನ್ನಿಂಗ್ಸ್ ಅನ್ನು ಸ್ಥಿರವಾಗಿರಿಸುತ್ತಾ ಮುನ್ನಡೆಸಿದರು.

ಫಿಲ್ ಸಾಲ್ಟ್ 31 ಎಸೆತಗಳಲ್ಲಿ 56 ರನ್ ಗಳಿಸಿ ಅಬ್ಬರದ ಬ್ಯಾಟಿಂಗ್ ಮಾಡಿ ಗೆಲುವಿಗೆ ಭದ್ರ ಬುನಾದಿ ಹಾಕಿದರು. ಅಜೇಯ ಅರ್ಧಶತಕ ಗಳಿಸಿದ  ವಿರಾಟ್ ಕೊಹ್ಲಿ ಅವರು  175 ರನ್‌ಗಳ ಗುರಿ ಏನೇನೂ ಅಲ್ಲ ಅಂತ ಬೇಗನೆ ಪಂದ್ಯ  ಗೆದ್ದು ನಾವೆಲ್ಲರೂ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಲು ಸಹಕರಿಸಿದರು.

  ಇಷ್ಟೆಲ್ಲಾ ಆದ ಮೇಲೂ ನಮ್ಮನ್ನು ಕಾಡುವ ಪ್ರಶ್ನೆ ಈ ಸಲನಾದ್ರೂ ಕಪ್ ನಮ್ದಾಗುತ್ತಾ?

ಕಾದು ನೋಡೋಣ...

ನಿಮ್ಮ

ಸಿಹಿಜೀವಿ ವೆಂಕಟೇಶ್ವರ


ಹವಾಮಾನ ದಿನ


 



ಇಂದು ಹವಾಮಾನ ದಿನ.ಬಹಳಷ್ಟು ಜನ ಹವಾಮಾನ ಮತ್ತು ವಾಯುಗುಣ ಎರಡನ್ನೂ ಒಂದೇ ಅರ್ಥದಲ್ಲಿ ಬಳಸುತ್ತಾರೆ. ಇದು ತಪ್ಪು ಹವಾಮಾನ ದಿನನಿತ್ಯದ ವಾತಾವರಣದಲ್ಲಿ ಆಗುವ ಬದಲಾವಣೆಗಳನ್ನು ಸೂಚಿಸಿದರೆ ವಾಯುಗುಣ ದೀರ್ಘಕಾಲದ ಹವಾಮಾನದ ಮೊತ್ತವಾಗಿದೆ.

ಹವಾಮಾನವನ್ನು ಕೆಲವರು "ಅವಮಾನ" ಎಂದು ಅವಮಾನ ಮಾಡುವುದೂ ಉಂಟು.

ಹವಾಮಾನದ ದಿನದ  ಮಹತ್ವವನ್ನು ಹೀಗೇ ಹೇಳಬಹುದು.

  ಹವಾಮಾನದ ಅರಿವು ಮೂಡಿಸುವುದು. ಹವಾಮಾನದ ಬದಲಾವಣೆಗಳು, ಅದರ ಪರಿಣಾಮಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ.

    ವಿಶೇಷವಾಗಿ, ರೈತರು, ಮೀನುಗಾರರು ಮತ್ತು ಇತರ ಹವಾಮಾನ-ಅವಲಂಬಿತ ವೃತ್ತಿಗಳಲ್ಲಿರುವವರಿಗೆ ಇದು ಬಹಳ ಮುಖ್ಯ. ಹವಾಮಾನ ಬದಲಾವಣೆಯು ಪರಿಸರದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸುವುದು.

    ಪರಿಸರವನ್ನು ರಕ್ಷಿಸಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆ ಮಾಡಲು ಪ್ರೋತ್ಸಾಹಿಸುವುದು.

 ಪ್ರಕೃತಿ ವಿಕೋಪಗಳಾದ ಪ್ರವಾಹ, ಬರ, ಬಿರುಗಾಳಿ ಇತ್ಯಾದಿಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಲು ಸಹಾಯ ಮಾಡುವುದು. ಈ ಸಂದರ್ಭಗಳಲ್ಲಿ ಸುರಕ್ಷಿತವಾಗಿರುವುದು ಹೇಗೆ ಎಂದು ಜನರಿಗೆ ತಿಳಿಸುವುದು.

    ಹವಾಮಾನದ ವೈಜ್ಞಾನಿಕ ಅಂಶಗಳ ಬಗ್ಗೆ ಜನರಿಗೆ ತಿಳಿಸುವುದು ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು.

    ಹವಾಮಾನದ ಬಗ್ಗೆ ಸಂಶೋಧನೆ ನಡೆಸಲು ಪ್ರೇರೇಪಿಸುವುದು.

    ಹವಾಮಾನದ ಬಗ್ಗೆ ಚರ್ಚಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಸಮುದಾಯದ ಸಹಭಾಗಿತ್ವವನ್ನು ಪ್ರೋತ್ಸಾಹಿಸುವುದು. ಇದು ಹವಾಮಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.

ಹವಾಮಾನ ದಿನಾಚರಣೆಯು ಕೇವಲ ಒಂದು ದಿನದ ಆಚರಣೆಯಲ್ಲ, ಬದಲಿಗೆ ಹವಾಮಾನದ ಬಗ್ಗೆ ನಿರಂತರವಾಗಿ ಕಲಿಯಲು ಮತ್ತು ಜಾಗರೂಕರಾಗಿರಲು ಪ್ರೇರೇಪಿಸುವ ಒಂದು ಅವಕಾಶ.


ನಿಮ್ಮ 

ಸಿಹಿಜೀವಿ ವೆಂಕಟೇಶ್ವರ


ಆಸ್ತಿಕರ ಹಾಗೂ ಚಾರಣಿಗರ ಮೆಚ್ಚಿನ ತಾಣ ಎಸ್ ಆರ್ ಎಸ್ ಬೆಟ್ಟಗಳು.



 ಆಸ್ತಿಕರ  ಹಾಗೂ ಚಾರಣಿಗರ ಮೆಚ್ಚಿನ ತಾಣ ಎಸ್ ಆರ್ ಎಸ್ ಬೆಟ್ಟಗಳು.


ತುಮಕೂರಿನಿಂದ ರಾಮನಗರ ತಲುಪಿ ಅಲ್ಲಿನ ಹೈವೆ ಪಕ್ಕದ ಕಾಮತ್ ಹೋಟೆಲ್ ‌ನಲ್ಲಿ ತಿಂಡಿ ತಿಂದು 

ಮಗಳನ್ನು ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ ದಿನ ಅಲ್ಲಿಂದ ಹದಿಮೂರು ಕಿಲೋಮೀಟರ್ ದೂರವಿರುವ ಎಸ್ ಆರ್ ಎಸ್ ಬೆಟ್ಟ ನೋಡಲು ಕಾರ್ ನಲ್ಲಿ ಹೊರಟೆವು.

ಶ್ರೀ ರೇವಣ್ಣ ಸಿದ್ದೇಶ್ವರ ಅಥವಾ  SRS ಬೆಟ್ಟಗಳು ಎಂದು ಕರೆಯಲ್ಪಡುವ  ಸುಂದರವಾದ ಬೆಟ್ಟ ಶ್ರೇಣಿಯು ರಾಮನಗರದಲ್ಲಿರುವ ಅತ್ಯಂತ ಪ್ರಸಿದ್ಧ ಸಾಹಸಮಯ ಸ್ಥಳಗಳಲ್ಲಿ ಒಂದಾಗಿದೆ.ಇದು ಧಾರ್ಮಿಕ ಪ್ರಸಿದ್ಧ ಸ್ಥಳವೂ ಹೌದು.  ವಾರಾಂತ್ಯದ ವಿಹಾರಮಾಡಲು ಚಾರಣಪ್ರಿಯರು ಇಲ್ಲಿಗೆ ಆಗಮಿಸುತ್ತಾರೆ. 

ನಾವು ಅಲ್ಲಿಗೆ ಹೋದಾಗ ಮಧ್ಯಾಹ್ನ 12.30 ಆಗಿತ್ತು.ಬಿಸಿಲಲ್ಲಿ ಬೆಟ್ಟ ಹತ್ತಬೇಕೋ ಬೇಡವೋ ಎಂಬ ಗೊಂದಲದಲ್ಲೆ ನಿಧಾನವಾಗಿ ಬೆಟ್ಟ ಏರಲು ತೀರ್ಮಾನಕ್ಕೆ ಬಂದೆವು.

ಬೆಟ್ಟ ಹತ್ತುವಾಗ ನಮಗೆ ಸಿಗುವುದು ಭೀಮೇಶ್ವರ ದೇವಾಲಯ.

ಪಾಂಡವರು ಅಜ್ಞಾತವಾಸದಲ್ಲಿರುವಾಗ ಈ ಬೆಟ್ಟದಲ್ಲಿ ಕೆಲ ಕಾಲ ತಂಗಿದ್ದು ಆ ಸಂದರ್ಭದಲ್ಲಿ ಬೆಟ್ಟದ ಮದ್ಯಭಾಗದಲ್ಲಿ ಭೀಮಸೇನನಿಂದ ಸ್ಥಾಪಿಸಿದ ಶಿವಲಿಂಗವಿದ್ದು ಇಂದು ಅದೇ ಭೀಮೇಶ್ವರ ದೇವಾಲಯವಾಗಿ ಪ್ರಸಿದ್ದಿಯಾಗಿದೆ. ನಾವು ಅಲ್ಲಿಗೆ ಹೋದಾಗ ದೇವಾಲಯ ಮುಚ್ಚಿತ್ತು.ಹೊರಗಿನಿಂದ ಕೈ ಮುಗಿದು ಬೆಟ್ಟ ಏರಲು ಮುಂದೆ ಸಾಗಿದೆವು. ಅಲ್ಲಲ್ಲಿ ವಾನರ ಸೇನೆ ನಮಗೆ ಸ್ವಾಗತ ಕೋರುತ್ತಾ ನಮ್ಮ ಕೈಯಲ್ಲಿರುವ ತಿನಿಸುಗಳ ಕಡೆ ಹೆಚ್ಚು ಗಮನ ಹರಿಸಿ ಮುಲಾಜಿಲ್ಲದೆ ಕಿತ್ತುಕೊಂಡು ಇದು ನಮ್ದೇ  ಎಂದು ನಮ್ಮ ಮುಂದೆಯೇ ತಿನ್ನುತ್ತಿದ್ದವು.


‌ಬೆಟ್ಟ ಏರಲು ಬಿಸಿಲು ಮಳೆಯಿಂದ ಭಕ್ತರ ರಕ್ಷಿಸಲು ಚಾವಣಿಯ ವ್ಯವಸ್ಥೆ ಮಾಡಿದ್ದರಿಂದ ಬೆಟ್ಟ ಏರಲು ಕಷ್ಟ ಆಗಲಿಲ್ಲ. ಅಲ್ಲಲ್ಲಿ ಬಹಳ ಕಡಿದಾದ ಮೆಟ್ಟಿಲು ಹತ್ತುವಾಗ ಸ್ವಲ್ಪ ಬೆವರು ಬಂದು ಏದುಸಿರು ಬಿಡುತ್ತಾ ಹತ್ತಿದೆವು.ಮೇಲೆ ಹೋದಂತೆ ಕೆರೆಗಳು, ತೋಟಗಳು ಸಣ್ಣ ಪುಟ್ಟ ಗುಡ್ಡಗಳು ಬಹಳ ಸುಂದರವಾಗಿ ಕಂಡವು.ದೂರದಲ್ಲಿ ರಾಮನಗರದ ಕೆಲ ಕಟ್ಟಡಗಳು ಸಹ ಕಂಡವು.ಬೆಟ್ಟದ ಮೇಲೇರಿ ಪ್ರಕೃತಿಯ ಸೌಂದರ್ಯವನ್ನು ನಮ್ಮ ಕಣ್ಣುಗಳಲ್ಲಿ ಹಾಗೂ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದೆ.ಮೊಬೈಲ್ ನೆಟ್ವರ್ಕ್ ಚೆನ್ನಾಗಿದ್ದರಿಂದ ನಮ್ಮ ಮುಖಪುಟ  ಬಂಧುಗಳಿಗೆ ಲೈವ್ ನಲ್ಲಿ ಎಸ್ ಆರ್ ಎಸ್ ಸೌಂದರ್ಯ ತೋರಿಸಿದೆ.

ಬೆಟ್ಟದ ತುದಿಯಿಂದ ಬಲಕ್ಕೆ ತಿರುಗಿ ನೂರು ಮೀಟರ್ ಕೆಳಗಿಳಿದರೆ  ರೇವಣ ಸಿದ್ದೇಶ್ವರ ದೇವಾಲಯ ತಲುಪಬಹುದು. ರೇವಣ ಸಿದ್ದೇಶ್ವರ ರವರು   ದಿವ್ಯ ತಪಸ್ಸನ್ನು ಮಾಡಿ ಲಿಂಗದ ರೂಪದಲ್ಲಿ ಇಲ್ಲಿ ನೆಲೆನಿಂತಿದ್ದಾರೆ.   ಅರ್ಧ ಅಡಿ ಎತ್ತರದ ಶ್ರೀ ರೇವಣ ಸಿದ್ದೇಶ್ವರ ಸ್ವಾಮಿ ಉದ್ಬವ ಶಿವಲಿಂಗ ಭಕ್ತರನ್ನು ಸೆಳೆಯುತ್ತದೆ. ಈ ದೇವಾಲಯದ ಸಮೀಪ ಮೊರೆ ಬಸವನ ವಿಗ್ರಹ ಹಾಗೂ ಎಂದೂ ಬತ್ತದ ದೊಣೆ ಇದೆ. ಬುಡದಲ್ಲಿ ರೇಣುಕಾಂಬ ಹಾಗೂ ವೀರಭದ್ರೇಶ್ವರ ದೇವಾಲಯಗಳಿವೆ.


ದೇವರ ದರ್ಶನ ಪಡೆದು ಪ್ರಸಾದ ಸೇವಿಸಿ ಬೆಟ್ಟ ಇಳಿಯುವಾಗ ಅಲ್ಲಲ್ಲಿ ವಿಶ್ರಾಂತಿ ಪಡೆದು ಕೊನೆಗೂ ಬೆಟ್ಟ ಇಳಿದು ಕಾರ್ ಹತ್ತುವಾಗ  ಹೊಟ್ಟೆ ತಾಳ ಹಾಕುತ್ತಿತ್ತು.ರಾಮನಗರಕ್ಕೆ ಹಿಂತಿರುಗುವಾಗ ಮಾರ್ಗ ಮಧ್ಯದ ಹೋಟೆಲ್ ನಲ್ಲಿ ಊಟ ಮಾಡಿ ಮನೆಯ ಕಡೆ ಪಯಣ ಬೆಳೆಸಿದೆವು.

ಒಂದು ದಿನದ ಪ್ರವಾಸ, ಚಾರಣ ಮಾಡುವವರಿಗೆ ಎಸ್ ಆರ್ ಎಸ್ ಬೆಟ್ಟ ಬಹಳ ಸುಂದರ ಸ್ಥಳ ನೀವು ಒಮ್ಮೆ ಹೋಗಿ ಬನ್ನಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


.

21 March 2025

ವಿಶ್ವ ಕವಿತಾ ದಿನದ ಪ್ರಯುಕ್ತ ಒಂದು ಹಾಸ್ಯ ಹನಿಗವ‌ನ


 


ವಿಶ್ವ ಕವಿತಾ ದಿನದ ಪ್ರಯುಕ್ತ ಒಂದು ಹಾಸ್ಯ ಹನಿಗವ‌ನ 


ನೆನಪು.


ಗೆಳೆಯ ಕೇಳಿದ ನೆನಪಿದೆಯಾ

ನಿನಗೆ, ನಾಕನೇ ತರಗತಿಯಲ್ಲಿ

ನಮ್ಮ ಜೊತೆಯಲ್ಲಿ ಓದಿದ ಕೋಮಲ|

ಅವನು ಉತ್ತರಿಸಿದ ಅದೆಲ್ಲಾ

ನೆನಪಿರುವ ನಿನಗೆ ಏಕೆ ನೆನಪಿಲ್ಲ?

ಕಳೆದ ತಿಂಗಳು  ನನ್ನಿಂದ ಪಡೆದ ಐನೂರು ರೂಪಾಯಿ ಸಾಲ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು






20 March 2025

ಬಾಗ್ಡೋಗ್ರಾ ವಿಮಾನ ನಿಲ್ದಾಣ.

 ಭೂತಾನ್ ಪ್ರವಾಸ 

ಬಾಗ್ಡೋಗ್ರಾ ವಿಮಾನ ನಿಲ್ದಾಣ.




ಬಾಗ್ಡೋಗ್ರಾ ವಿಮಾನ ನಿಲ್ದಾಣ.    ಹೌದು ನನಗೂ ಮೊದಲು ಉಚ್ಚರಿಸಲು ಕಷ್ಟವಾದ ಹೆಸರು.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗಿನ ಜಾವ ಹೊರಟ ನಮ್ಮ ಆಕಾಸ ಏರ್ಲೈನ್ ಪಶ್ಚಿಮ ಬಂಗಾಳದ  ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಮುನ್ನ ಸಾವಿರಾರು ಕಿಲೋಮೀಟರ್ ಪಯಣ ಮಾಡಿದ್ದೆವು. ಭೂತಾನ್ ಪ್ರವಾಸ ಕೈಗೊಳ್ಳಲು ನಾವು ಈ ವಿಮಾನ ನಿಲ್ದಾಣದಲ್ಲಿ ಇಳಿದು ರಸ್ತೆ ಮೂಲಕ ಹಸಿಮರ ಪುಟ್ಶಿಲಾಂಗ್ ಮೂಲಕ ಭೂತಾನ್ ಪ್ರವೇಶ ಮಾಡಲು ಪ್ಲಾನ್ ಮಾಡಿ ಹೊರಟಿದ್ದೆವು. ಬೆಳಗಿನ 8 ಗಂಟೆಗೆ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ನಾವು ಲ್ಯಾಂಡ್ ಆಗುತ್ತೇವೆ.ವಿಮಾನ ನಿಲ್ದಾಣದಲ್ಲಿ ಪೋಟೋ ವೀಡಿಯೋ ಮಾಡಬೇಡಿ ಎಂದು ಗಗನ ಸಖಿ ಹೇಳಿದರು.


ಬಾಗ್ಡೋಗ್ರಾ ವಿಮಾನ ನಿಲ್ದಾಣ ಪಶ್ಚಿಮ ಬಂಗಾಳದ ಸಿಲಿಗುರಿ ನಗರಕ್ಕೆ ಸೇವೆ ಸಲ್ಲಿಸುವ ಕಸ್ಟಮ್ಸ್ ವಿಮಾನ ನಿಲ್ದಾಣವಾಗಿದೆ. ಇದು  ಭಾರತೀಯ ವಾಯುಪಡೆಯ ಬಾಗ್ಡೋಗ್ರಾ ವಾಯುಪಡೆ ನಿಲ್ದಾಣದಲ್ಲಿ ನಾಗರಿಕ ಎನ್ಕ್ಲೇವ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಡಾರ್ಜಿಲಿಂಗ್, ಗ್ಯಾಂಗ್ಟಾಕ್, ಕುರ್ಸಿಯೊಂಗ್, ಕಾಲಿಂಪಾಂಗ್, ಮಿರಿಕ್ ಮತ್ತು ಉತ್ತರ ಬಂಗಾಳ ಪ್ರದೇಶದ ಇತರ ಭಾಗಗಳು ಮತ್ತು ಈಶಾನ್ಯ ಬಿಹಾರದ ಗಿರಿಧಾಮಗಳಿಗೆ ಪ್ರವೇಶ ದ್ವಾರವಾಗಿದೆ. ಭಾರತ ಸರ್ಕಾರವು 2002 ರಲ್ಲಿ ಈ   ವಿಮಾನ ನಿಲ್ದಾಣಕ್ಕೆ ಸೀಮಿತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾನಮಾನವನ್ನು ನೀಡಿದೆ.  ಬ್ಯಾಂಕಾಕ್-ಸುವರ್ಣಭೂಮಿ ಮತ್ತು ಪಾರೋಗೆ ಸೀಮಿತ ಅಂತರರಾಷ್ಟ್ರೀಯ ಕಾರ್ಯಾಚರಣೆಗಳೊಂದಿಗೆ  ಇದು ಪಶ್ಚಿಮ ಬಂಗಾಳದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ.

 ಹಾಗೂ ಭಾರತದ 17 ನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ. ಇದು ವಾಯುಯಾನ ಟರ್ಬೈನ್ ಇಂಧನದ ಮೇಲೆ ಶೂನ್ಯ ಮಾರಾಟ ತೆರಿಗೆಯನ್ನು ಹೊಂದಿರುವ ಭಾರತದ ಕೆಲವೇ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.  ಈ ವಿಮಾನ ನಿಲ್ದಾಣವು 13 ವಿಮಾನ ನಿಲ್ದಾಣಗಳಿಗೆ ಮಾರ್ಗಗಳನ್ನು ಹೊಂದಿದೆ ಮತ್ತು 3 ದೇಶಗಳಿಗೆ ಭಾರತ , ಭೂತಾನ್ ಮತ್ತು ಥೈಲ್ಯಾಂಡ್ ಸಂಪರ್ಕ ಕಲ್ಪಿಸುತ್ತದೆ.  

ವಿಮಾನ ನಿಲ್ದಾಣ ತಲುಪಿ ಅಲ್ಲೇ ಪ್ರೇಶ್ ಅಪ್ ಆಗಿ ಹೊರಬಂದ ನಮ್ಮ ತಂಡವನ್ನು ನಮ್ಮ ಟೂರ್ ಮೇನೇಜರ್ ಪ್ರಕಾಶ್ ಸ್ವಾಗತಿಸಿ ತಿನ್ನಲು ಪುರಿ ಮತ್ತು ಸಾಗು ಕೊಟ್ಟರು.ಮುದ್ದೆ ಅನ್ನ ತಿನ್ನುವ ನಮಗೆ ಪುರಿ ಸಾಗು‌ ಅಷ್ಟು ‌ರುಚಿಸಲಿಲ್ಲ. ನಮಗಾಗಿ ಸಿದ್ದವಾಗಿದ್ದ ಎರಡು ಮಿನಿ ಬಸ್ ಏರಿ ಜೈಗಾನ್ ಕಡೆ ಪಯಣ ಮುಂದುವರೆಸಿದೆವು.




19 March 2025

ಪ್ರೀತಿ ನಿವೇದನ .ಹನಿಗವನ


 


ಪ್ರೀತಿ ನಿವೇದನ 


ನೀನೇ ನನ್ನ ಪ್ರಾಣ,

ರಾಣಿಯಂಗೆ ನೋಡಿಕೊಳ್ಳುವೆ

ಒಪ್ಪಿಕೊಂಡು ಬಿಡು ನನ್ನ

ಪ್ರೀತಿಯನೆಂದು ಹುಡುಗ

ಮಾಡಿದನು ಪ್ರೀತಿ ನಿವೇದನ|

ಹುಡುಗಿ ಉತ್ತರಿಸಿದಳು 

ಪ್ರೀತಿಯ ಮಾತು ಆಮೇಲೆ

ಮೊದಲು ನಿನ್ನ ಬಳಿ

ಇದೆಯೋ ಇಲ್ಲವೋ ಹೇಳು ಧನ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು


18 March 2025

ಭೂತಾನ್ ನ ಹೆಬ್ಬಾಗಿಲು ಫುಂಟ್‌ಶೋಲಿಂಗ್


 


ಭೂತಾನ್ ನ ಹೆಬ್ಬಾಗಿಲು 

ಫುಂಟ್‌ಶೋಲಿಂಗ್ 


  ಫುಂಟ್‌ಶೋಲಿಂಗ್! ಮೊದಲ ಬಾರಿ ಹೆಸರು ಕೇಳಿದರೆ ವಿಚಿತ್ರ ಎನಿಸಬಹುದು. ನಾವು ಭೂತಾನ್ ಪ್ರವಾಸ ಮಾಡಲು ಬಾಗ್ಡೋಗ್ರಾ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಜೈಗಾನ್ ತಲುಪಿ ಅದಕ್ಕೆ ಹೊಂದಿಕೊಂಡಿರುವ ಫುಂಟ್ ಶೋಲಿಂಗ್ ಸೇರಲು ಹೊರಟೆವು. ಇದು ದಕ್ಷಿಣ ಭೂತಾನ್‌ನ ಗಡಿ ಪಟ್ಟಣವಾಗಿದ್ದು ಚುಖಾ ಜಿಲ್ಲೆಯ ಆಡಳಿತ ಸ್ಥಾನವಾಗಿದೆ.

ಫ್ಯೂಯೆಂಟ್‌ಶೋಲಿಂಗ್ ಭಾರತದ ಜೈಗಾಂವ್ ಪಟ್ಟಣಕ್ಕೆ ಹೊಂದಿಕೊಂಡಿದೆ. ಗಡಿಯಾಚೆಗಿನ ವ್ಯಾಪಾರವು ಸ್ಥಳೀಯ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಕಾರಣವಾಗಿದೆ. ಥಿಂಫುಗೆ ಸ್ಥಳಾಂತರಗೊಳ್ಳುವ ಮೊದಲು ಈ ಪಟ್ಟಣವು ಬ್ಯಾಂಕ್ ಆಫ್ ಭೂತಾನ್‌ನ ಪ್ರಧಾನ ಕಚೇರಿಯನ್ನು ಹೊಂದಿತ್ತು . 


ಮೊದಲು ಭೂತಾನ್ ನಲ್ಲಿ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಲು ಅವಕಾಶವಿರಲಿಲ್ಲ.

ಭೂತಾನ್ ನ ದಿವಂಗತ ಪ್ರಧಾನಿ ಜಿಗ್ಮೆ ದೋರ್ಜಿ ಫುಂಟ್‌ಶೋಲಿಂಗ್ ನಿವಾಸಿಗಳಿಗೆ ಕಾಂಕ್ರೀಟ್ ಮನೆಗಳನ್ನು ನಿರ್ಮಿಸಬಹುದು ಎಂದು ಆದೇಶ ಮಾಡಿದ ಪರಿಣಾಮವಾಗಿ ತಾಶಿ ಗ್ರೂಪ್ ಆಫ್ ಕಂಪನಿಗಳು ಮೊದಲ ಕಾಂಕ್ರೀಟ್ ಮನೆಯನ್ನು ನಿರ್ಮಿಸಿದವು. ಇದರ ಪರಿಣಾಮವಾಗಿ ಈ ಪ್ರದೇಶ ಕ್ರಮೇಣವಾಗಿ ನಗರವಾಗಿ ಅಭಿವೃದ್ಧಿಯಾಯಿತು.


ಫಂಟ್‌ಶೋಲಿಂಗ್ ಒಂದು ಬಿಸಿ ಉಷ್ಣವಲಯದ ಮಾನ್ಸೂನ್ ಹವಾಮಾನವನ್ನು ಹೊಂದಿದ  ತಾಣವಾಗಿದ್ದು   ಸರಾಸರಿ ವಾರ್ಷಿಕ 3,953 ಮಿಲಿಮೀಟರ್  ಮಳೆಯನ್ನು ಪಡೆಯುತ್ತದೆ ಬೇಸಿಗೆಯು ದೀರ್ಘವಾಗಿರುತ್ತದೆ.ನಾವು ಅಕ್ಟೋಬರ್ ತಿಂಗಳಲ್ಲಿ ಅಲ್ಲಿಗೆ ಭೇಟಿ ನೀಡಿದರೂ ಬೆಳಗಿನ ಎಂಟು ಗಂಟೆಗಾಗಲೇ ಸೂರ್ಯನ ಕಿರಣಗಳು ನಮ್ಮ ನೆತ್ತಿಯನ್ನು ಸುಡಲಾರಂಬಿಸಿದ್ದವು.

  

ಭಾರತ-ಭೂತಾನ್ ಗಡಿಯು ಎರಡು ವಿಭಿನ್ನ ನಗರ ಪ್ರದೇಶಗಳನ್ನು ಪ್ರತ್ಯೇಕಿಸುತ್ತದೆ. ಗಡಿಯಾಚೆಗಿನ ಜೈಗಾಂವ್ ದೊಡ್ಡದಾಗಿದೆ, ಗದ್ದಲ ಮತ್ತು ಜೋರಾಗಿದೆ, ಇದು ಪಶ್ಚಿಮ ಬಂಗಾಳದ ಇತರ ಅನೇಕ ವಾಣಿಜ್ಯ ಕೇಂದ್ರಗಳಂತೆಯೇ ಇದೆ, ಆದರೂ ಅನೇಕ ಭೂತಾನ್ ಖರೀದಿದಾರರನ್ನು ಹೊಂದಿದೆ. ಫಂಟ್‌ಶೋಲಿಂಗ್ ಭೂತಾನ್‌ನ ಆರ್ಥಿಕ, ಕೈಗಾರಿಕಾ ಮತ್ತು ವ್ಯಾಪಾರ ರಾಜಧಾನಿಯಾಗಿರುವುದರಿಂದ ಇತರ ಭೂತಾನ್ ಪಟ್ಟಣಗಳಿಗಿಂತ ವಿಶಿಷ್ಟವಾಗಿ ಹೆಚ್ಚು ನಗರವಾಗಿದೆ. 


ಭೂತಾನ್‌ಗೆ ವ್ಯಾಪಾರವಾಗುವ ಹೆಚ್ಚಿನ ಸರಕುಗಳು ಫುಂಟ್‌ಶೋಲಿಂಗ್ ಮೂಲಕ ಸಾಗಣೆಯಾಗುತ್ತವೆ. ಇದು ಭಾರತದೊಂದಿಗಿನ ವ್ಯಾಪಾರಕ್ಕಾಗಿ ಭೂತಾನ್‌ಗೆ ಪ್ರವೇಶ ದ್ವಾರವಾಗಿದೆ. 


ಗಡಿಯ ಜೈಗಾನ್ ನಿಂದ  ಭೂತಾನಿನ ಪ್ರವೇಶಕ್ಕೆ  ಸ್ಥಳೀಯರು ಕೆಲವೊಮ್ಮೆ ದಾಖಲೆಗಳನ್ನು ನೀಡದೆ  ದಾಟಬಹುದು. ಭಾರತ, ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್‌ನ ಪ್ರವಾಸಿಗರು ಭೂತಾನ್‌ಗೆ ಪ್ರವೇಶಿಸಲು ವೀಸಾ ಅಗತ್ಯವಿಲ್ಲ ಆದರೆ ಪಾಸ್‌ಪೋರ್ಟ್ ಅಥವಾ ಮತದಾರರ ಗುರುತಿನ ಚೀಟಿಯಂತಹ ಗುರುತಿನ ಪುರಾವೆಗಳನ್ನು ತೋರಿಸಬೇಕು ಮತ್ತು ಭೂತಾನ್‌ಗೆ ಪ್ರವೇಶಿಸಲು ಫಂಟ್‌ಶೋಲಿಂಗ್‌ನಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕು. ಇತರ ವಿದೇಶಿಯರಿಗೆ ಬಾಡಿಗೆ ನೋಂದಾಯಿತ ಪ್ರವಾಸ ಮಾರ್ಗದರ್ಶಿಯಿಂದ ಪ್ರಸ್ತುತಪಡಿಸಲಾದ ವೀಸಾ ಅಗತ್ಯವಿದೆ. ಪಟ್ಟಣದ ಪ್ರವೇಶ ದ್ವಾರವನ್ನು ಸಶಸ್ತ್ರ ಸೀಮಾ ಬಲದ  ಮತ್ತು ಭೂತಾನ್ ಸೇನಾ ಸಿಬ್ಬಂದಿ ಕಾವಲು ಕಾಯುತ್ತಿದ್ದರು.

ಈ ಪಟ್ಟಣವು ರಾಷ್ಟ್ರೀಯ ಹೆದ್ದಾರಿಯ ಮೂಲಕ ಉಳಿದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಈ ಪಟ್ಟಣವು ವಿಮಾನ ನಿಲ್ದಾಣ ಸೌಲಭ್ಯಗಳನ್ನು ಅಥವಾ ನೇರ ರೈಲು ಮಾರ್ಗವನ್ನು ಹೊಂದಿಲ್ಲ.ಆದರೆ ಭಾರತೀಯ ರೈಲ್ವೆಯು ಹತ್ತಿರದಲ್ಲಿ ರೈಲು ನಿಲ್ದಾಣಗಳನ್ನು ಹೊಂದಿದೆ. ಉತ್ತರ ಬಂಗಾಳದ ಹತ್ತಿರದ ರೈಲ್ವೆ ಸ್ಟೇಷನ್  ಹಸಿಮಾರದಿಂದ ಫುಂಟ್‌ಶೋಲಿಂಗ್‌ಗೆ 20 ಕಿಮೀ  ಇದೆ. ಸಿಲಿಗುರಿ, ನ್ಯೂ ಜಲ್ಪೈಗುರಿ ಮತ್ತು ನ್ಯೂ ಅಲಿಪುರ್ದೂರ್ ಹತ್ತಿರದ ದೊಡ್ಡ ರೈಲ್ವೆ ಜಂಕ್ಷನ್‌ಗಳಾಗಿವೆ. ಉತ್ತರ ಬಂಗಾಳದ ಪಟ್ಟಣಗಳಿಂದ ಬಸ್‌ಗಳು ಲಭ್ಯವಿವೆ. ಭಾರತೀಯ ಮೂಲದ ಖಾಸಗಿ ಮತ್ತು ಭೂತಾನ್ ಸರ್ಕಾರದ ಬಸ್ ಗಳು ಹೀಗೆ ಎರಡೂ ರೀತಿಯ ಬಸ್‌ಗಳನ್ನು ನೋಡಬಹುದು. ನಾವು ಮೊದಲೇ ನಮ್ಮ ಟ್ರಾವೆಲ್ ಏಜೆನ್ಸಿ ಮೂಲಕ ಬಸ್ ಬುಕ್ ಮಾಡಿದ್ದರಿಂದ ಎರಡು ಮಿನಿ ಬಸ್ ಗಳು ನಮಗಾಗಿ ಕಾದಿದ್ದವು.

ಅವುಗಳನ್ನು ಏರಿ  ಪುಂಟ್ ಶಿಲಾಂಗ್ ಕಡೆಗೆ ತಲುಪುವ ಮುನ್ನ ಒಂದು ರಾತ್ರಿ ಅಲ್ಲೇ ತಂಗಿದ್ದೆವು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು







ಕಲ್ಪನಾ ಚಾವ್ಲಾ..


 ಚಿಕ್ಕ ವಯಸ್ಸಿನಲ್ಲಿ ಹರ್ಯಾಣ ದ ಕರ್ನಾಲ್ ನಲ್ಲಿ ರಾತ್ರಿ ಅಂಗಳದಲ್ಲಿ ತನ್ನ ಕುಟುಂಬದ ಜೊತೆಯಲ್ಲಿ ಮಲಗಿದ್ದಾಗ ನಕ್ಷತ್ರ ಎಣಿಸುವ ಕೆಲಸ ಮಾಡದೇ ಆ ನಕ್ಷತ್ರಗಳಿರುವ ಕಡೆ ತನ್ನ ಗುರಿ ನೆಟ್ಟು ಅದರಲ್ಲಿ ಯಶಸ್ಸು ಕಂಡು ಬಾಹ್ಯಾಕಾಶಕ್ಕೆ ನೆಗೆದು ಸಾಹಸ ಮಾಡಿ‌ ಕೊನೆಗೆ ಬಾಹ್ಯಾಕಾಶದಲ್ಲೇ ಮರಣ ಹೊಂದಿ ನಕ್ಷತ್ರವಾದ ನಕ್ಷತ್ರವೇ ಕಲ್ಪನಾ ಚಾವ್ಲಾ! ಇಂದು ಅವರ ಹುಟ್ಟಿದ ದಿನ ಕೋಟ್ಯಾಂತರ ಬಾಹ್ಯಾಕಾಶ ಪ್ರಿಯರ ಸ್ಪೂರ್ತಿ ನಮ್ಮ ಕಲ್ಪನಾ ಚಾವ್ಲ.


ಕಲ್ಪನಾ ಚಾವ್ಲಾ ಮಾರ್ಚ್ 17 ರ 1962ರಲ್ಲಿ ಜನಿಸಿದ ಅವರು   ಗಗನಯಾತ್ರಿಯಾಗಿ ಬಾಹ್ಯಾಕಾಶ ಎಂಜಿನಿಯರ್ ಆಗಿ ಅವರು ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. ಚಾವ್ಲಾ ಚಿಕ್ಕ ವಯಸ್ಸಿನಿಂದಲೂ ಬಾಹ್ಯಾಕಾಶ ಎಂಜಿನಿಯರಿಂಗ್‌ನಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದರು ಮತ್ತು ಭಾರತದ ದಯಾಳ್ ಸಿಂಗ್ ಕಾಲೇಜು ಮತ್ತು ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು   ಯುನೈಟೆಡ್ ಸ್ಟೇಟ್ಸ್‌ಗೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರು ತಮ್ಮ ಎಂಎಸ್ಸಿ ಮತ್ತು ಪಿಎಚ್‌ಡಿ ಗಳಿಸಿದರು, ೧೯೯೦ ರ ದಶಕದ ಆರಂಭದಲ್ಲಿ ನೈಸರ್ಗಿಕ ಯುನೈಟೆಡ್ ಸ್ಟೇಟ್ಸ್ ನಾಗರಿಕರಾದರು.

ನಾಸಾ ಸೇರಿ ಮೊದಲ ಗಗನಯಾನ ಯಶಸ್ವಿಯಾಗಿ ಪೂರೈಸಿ ಎರಡನೇ ಗಗನಯಾನದಲ್ಲಿ ತನ್ನ ಆರು ಜನ ಸಹ ಯಾತ್ರಿಗಳೊಂದಿಗೆ ಅಕಾಲ ಮರಣ ಹೊಂದಿದರು.

ಕಲ್ಪನಾ ರ ಸಾಧನೆಯನ್ನು ಎಲ್ಲರೂ ಪ್ರಶಂಸಿಸೋಣ.

#ಕಲ್ಪನಾ #ಚಾವ್ಲಾ #kalpana @highlight CgVenkateshwara Cg #KalpanaChawla #kalpanachavla #NASA #NasaSpaceAppsChallenge

16 March 2025

ನಮ್ಮ ಪೂರ್ವಜರಿಗೆ ನಮನಗಳು

 


ನಮ್ಮ ಪೂರ್ವಜರಿಗೆ  ನಮನಗಳು.


ನಾವು ಭೂಮಿಗೆ ಬರಲು 

2 ಪೋಷಕರು

4 ಅಜ್ಜ-ಅಜ್ಜಿಯರು

8 ಮುತ್ತಜ್ಜಿಯರು

16 ಮುತ್ತಜ್ಜಿಯರು

32  3 ನೇ ಪೀಳಿಗೆ ತಾತ ಅಜ್ಜಿಯರು 

64 4 ನೇ ಪೀಳಿಗೆ ತಾತ ಅಜ್ಜಿಯರು

128 5 ನೇ ಪೀಳಿಗೆಯ ತಾತ ಅಜ್ಜಿಯರು

256 6 ನೇ ಪೀಳಿಗೆಯ ಪುರ್ವಜರು

512 7 ನೇ ಪೀಳಿಗೆಯ ಪೂರ್ವಜರು

1024 8 ನೇ ಪೀಳಿಗೆಯ ಪೂರ್ವಜರು

2048 9 ನೆಯ ಪೀಳಿಗೆಯ ಪೂರ್ವಜರು ಹೀಗೆ  ಮುಂದುವರೆಯುತ್ತದೆ..... ಇಲ್ಲಿಗೆ ಈ ಉದಾಹರಣೆ ನಿಲ್ಲಿಸಿ ನೋಡಿದರೆ.

ನಾವು ಭುವಿಗೆ ಬರಲು 

ಕಳೆದ 11 ತಲೆಮಾರುಗಳಲ್ಲಿ 4,094 ಪೂರ್ವಜರು ಬೇಕು.   ನೀವು ಅಥವಾ ನಾನು ಹುಟ್ಟುವ ಸುಮಾರು 300 ವರ್ಷಗಳ ಮೊದಲು!

ನಮ್ಮ ಪೂರ್ವಜರು ಎಷ್ಟು ಯುದ್ಧಗಳನ್ನು ಮಾಡಿದರು?

ಅವರು ಎಷ್ಟು ಹಸಿವನ್ನು ಸಹಿಸಿಕೊಂಡರು?

ನಮ್ಮ ಪೂರ್ವಜರು ಎಷ್ಟು ಕಷ್ಟಗಳನ್ನು ಅನುಭವಿಸಿದರು?

ಮತ್ತೊಂದೆಡೆ ಅವರು ನಮಗೆ ಎಷ್ಟು ಪ್ರೀತಿ, ಶಕ್ತಿ, ಸಂತೋಷ ಮತ್ತು ಪ್ರೋತ್ಸಾಹವನ್ನು ನೀಡಿದರು? 

ಅವರಲ್ಲಿ ಪ್ರತಿಯೊಬ್ಬರೂ ನಮ್ಮಲ್ಲಿ ಎಷ್ಟರ ಮಟ್ಟಿಗೆ ಬದುಕುವ ಇಚ್ಛೆಯನ್ನು ಬಿಟ್ಟು ಹೋಗಿದ್ದಾರೆ, ನಾವು ಇಂದು ಜೀವಂತವಾಗಿರಲು ಅವಕಾಶ ಮಾಡಿಕೊಟ್ಟಿದ್ದಾರೆ?


ಅದ್ದರಿಂದ ಅವರನ್ನು ಗೌರವಿಸುವ ಸಲುವಾಗಿ  ಜಗತ್ತಿನ ಎಲ್ಲಾ ದೇಶಗಳಲ್ಲಿ ಜನರು ತಮ್ಮ ಪೂರ್ವಜರನ್ನು ಆರಾಧಿಸುವ ವಿವಿಧ ಆಚರಣೆಗಳಲ್ಲಿ ತೊಡಗಿರುವುದನ್ನು  ಕಾಣುತ್ತೇವೆ.

ಇಂತಹ ಪರಂಪರೆಯನ್ನು ಹೊಂದಿರುವ ನಾವು ನಮ್ಮ ಪೂರ್ವಜರನ್ನು ಗೌರವಿಸುತ್ತಾ ಸಂಸ್ಕಾರಯುತ ಸಶಕ್ತ  ಮುಂದಿನ  ಪೀಳಿಗೆಯನ್ನು ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮದಾಗಬೇಕು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

15 March 2025

ಎಚ್ಚರ ಗ್ರಾಹಕ ಎಚ್ಚರ...


 ಎಚ್ಚರ ಗ್ರಾಹಕ ಎಚ್ಚರ.


ಇಂದು ವಿಶ್ವ ಗ್ರಾಹಕರ ದಿನ..


ಗ್ರಾಹಕರೊಬ್ಬರಿಗೆ 50 ಪೈಸೆ ಬಾಕಿ ನೀಡದ  ಅಂಚೆ ಇಲಾಖೆಗೆ   ಕಾಂಚೀಪುರ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಪರಿಹಾರ ಸೇರಿ ಗ್ರಾಹಕರಿಗೆ ಒಟ್ಟು ₹15 ಸಾವಿರ ಪಾವತಿಸುವಂತೆ ಆದೇಶಿಸಿದ ಘಟನೆಯು ಎಚ್ಚತ್ತ ಗ್ರಾಹಕರಿಗೆ ಉದಾಹರಣೆಯಾಗಿದೆ.


50 ಪೈಸೆ ಚಿಲ್ಲರೆ ಮರಳಿಸದೇ ಗ್ರಾಹಕರಿಗೆ ಉಂಟು ಮಾಡಿದ್ದ ಮಾನಸಿಕ ನೋವು ಹಾಗೂ ನ್ಯಾಯಸಮ್ಮತವಲ್ಲದ ವಹಿವಾಟು ಕ್ರಮ, ಸೇವಾ ನ್ಯೂನತೆಗಾಗಿ ₹10 ಸಾವಿರ ಪರಿಹಾರ ನೀಡಬೇಕು ಹಾಗೂ ಮೊಕದ್ದಮೆ ವೆಚ್ಚವಾಗಿ ₹ 5 ಸಾವಿರ ಪಾವತಿಸಬೇಕು ಎಂದು ಆಯೋಗವು ಆದೇಶಿಸಿದೆ.

ದೂರಿನ ಪ್ರಕಾರ ಅರ್ಜಿದಾರರಾದ ಎ.ಮಾನಶಾ ಅವರು 2023ರ ಡಿಸೆಂಬರ್‌ನಲ್ಲಿ ರಿಜಿಸ್ಟ್ರರ್‌ ಅಂಚೆ ವೆಚ್ಚವಾಗಿ ₹ 30 ಪಾವತಿಸಿದ್ದರು. ₹29.50 ಪೈಸೆಗೆ ರಸೀದಿ ನೀಡಿದ್ದು, 50 ಪೈಸೆ ಚಿಲ್ಲರೆ ನೀಡಿರಲಿಲ್ಲ. 

ಯುಪಿಐ ಮೂಲಕ ನಿಖರ ಮೊತ್ತ ಪಾವತಿಸುತ್ತೇನೆ ಎಂದು ಅರ್ಜಿದಾರ ಹೇಳಿದ್ದರೂ ತಾಂತ್ರಿಕ ಕಾರಣ ನೀಡಿದ್ದ ಪೋಜಿಚಾಲುರ್ ಅಂಚೆ ಕಚೇರಿಯ ಸಿಬ್ಬಂದಿ ಅದಕ್ಕೆ ಅವಕಾಶವನ್ನು ನಿರಾಕರಿಸಿದ್ದರು.

ಅಂಚೆ ಇಲಾಖೆಯಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಯಲಿದೆ. ಪೂರಕವಾಗಿ ದಾಖಲೆಗಳ ನಿರ್ವಹಣೆ ಆಗುತ್ತಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಇದರಿಂದಾಗಿ ನನಗೆ ಮಾನಸಿಕವಾಗಿ ತೀವ್ರ ನೋವಾಗಿದೆ ಎಂದು ಅರ್ಜಿದಾರರು ದೂರಿದ್ದರು.

ಅಂಚೆ ಇಲಾಖೆಯು ಇದಕ್ಕೆ ಪ್ರತಿಕ್ರಿಯಿಸಿ ತಾಂತ್ರಿಕ ಕಾರಣದಿಂದ ಯುಪಿಐ ಪಾವತಿಗೆ ಅವಕಾಶ ದೊರೆತಿಲ್ಲ. ಆದರೆ ಇಲಾಖೆಯಲ್ಲಿ ಅಳವಡಿಸಿಕೊಂಡಿರುವ ಸಾಫ್ಟ್‌ವೇರ್‌ನಲ್ಲಿ ಚಿಲ್ಲರೆಯು ಮುಂದಿನ ಮೊತ್ತಕ್ಕೆ ಸ್ವಯಂಚಾಲಿತವಾಗಿ ಸೇರ್ಪಡೆಯಾಗುತ್ತದೆ. ಇದಕ್ಕೆ ದಾಖಲೆಗಳಿವೆ ಎಂದಿತ್ತು.

ಉಭಯ ವಾದಗಳನ್ನು ಆಲಿಸಿದ ಆಯೋಗವು, ಸಾಫ್ಟ್‌ವೇರ್‌ ಕಾರಣ ನೀಡಿ ಅಂಚೆ ಇಲಾಖೆಯು ಹೆಚ್ಚುವರಿಯಾಗಿ 50 ಪೈಸೆ ವಸೂಲಿ ಮಾಡಿರುವುದು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಪ್ರಕಾರ ನ್ಯಾಯಯುತ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿತು. 

50 ಪೈಸೆ ವಾಪಸು ಕೊಡಿಸಬೇಕು ಮತ್ತು ಆಗಿರುವ ಮಾನಸಿಕ ನೋವಿಗೆ ₹ 2.5 ಲಕ್ಷ ಪರಿಹಾರ, ಮೊಕದ್ದಮೆ ವೆಚ್ಚವಾಗಿ ₹ 10 ಸಾವಿರ ಕೊಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಆದರೆ ನ್ಯಾಯಲಯ 15000 ಪರಿಹಾರ ಕೊಡಿಸಿದೆ.


ಇದು ಇತರೆ ಎಲ್ಲಾ ಗ್ರಾಹಕರು ತಮ್ಮ ಶೋಷಣೆಯ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿಯಾಗಿದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಸಹೃದಯ



 


ಸಹೃದಯ.


ಸಹೃದಯಿ ಎಂಬುದು ಸಮಾನ್ಯ ವಾಗಿ ನಾವು ಉತ್ತಮ ಗುಣ ನಡತ  ಹೊಂದಿದ ವ್ಯಕ್ತಿಯ ಕುರಿತ ಮಾತನಾಡುವಾಗ ಬಳಸುವ ಪದ  ಭಾರತೀಯ ಕಾವ್ಯಮೀಮಾಂಸೆಯಲ್ಲಿ ಸಹೃದಯ ಅಥವಾ ಸಹೃದಯಿ ಎಂಬುದು ಒಂದು ಪ್ರಮುಖ ಪರಿಕಲ್ಪನೆ. ಕವಿಹೃದಯಕ್ಕೆ ಸಮಾನವಾದ ಹೃದಯವುಳ್ಳವನು ಸಹೃದಯ. ಕಾವ್ಯವನ್ನು ಓದುವಾಗ ಕವಿಯ ಹೃದಯದೊಂದಿಗೆ ಇವನ ಹೃದಯವೂ ಸಮಾನವಾಗಿ ಮಿಡಿಯುತ್ತದೆ. ಇವನು ಕವಿಯ ಇಂಗಿತ, ಆಶಯಗಳನ್ನು ಸಹಾನುಭೂತಿಯಿಂದ ಅರಿತು ಕವಿಯ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾನೆ.


ಲೋಕ ವ್ಯಾಪಾರದಲ್ಲಿ ಸೌಂದರ್ಯಾನುಭವ ಹೊಂದಿ ತನ್ನ ವಿಶಿಷ್ಟ ಶಕ್ತಿಯಿಂದ ಕವಿಯು ಕೃತಿಯನ್ನು ರಚಿಸಿದರೆ ಅದು ಅರ್ಧ ಭಾಗದ ಕೆಲಸವಷ್ಟೇ ಆಗುತ್ತದೆ. ತೀವ್ರವಾದ ಆತನ ಅನುಭವಗಳು ಅನ್ಯಹೃದಯವೇದ್ಯವಾದಾಗ ಮಾತ್ರ ಅವನ ಕಾರ್ಯ ಪೂರ್ಣರೂಪ ಪಡೆದಂತೆ. ಇದು ಕವಿಯ ಮೂಲಭೂತ ಬಯಕೆ. ಕಾವ್ಯವನ್ನು ಓದಿ ಆ ಅನುಭವದ ಸುಖವನ್ನು ಪಡೆಯುವವರೇ ಇಲ್ಲದಿದ್ದರೆ ಆತನ ಕೃತಿ ವ್ಯರ್ಥ. "ಕಟ್ಟಿಯುಮೇನೊ ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೆ" ಎಂದು ಕನ್ನಡ ಕವಿ ಜನ್ನ ಹೇಳಿದ್ದಾನೆ. ಕವಿ ಕಾವ್ಯದಲ್ಲಿ ಒಡಮೂಡಿಸಿದ ಸೌಂದರ್ಯಾನುಭವವನ್ನು ಕಾವ್ಯದ ಮೂಲಕ ಏರಿ ಸಹೃದಯ ಮುಟ್ಟುತ್ತಾನೆ. ಅಭಿನವಗುಪ್ತನ ಪ್ರಕಾರ ಕಾವ್ಯವರ್ತುಲದ ಪೂರ್ಣತೆಯಲ್ಲಿ ಕವಿ ಹೇಗೋಹಾಗೆ ಸಹೃದಯನೂ ಪ್ರಧಾನ ಕೊಂಡಿಯಾಗಿದ್ದಾನೆ. ಕಾವ್ಯಮೀಮಾಂಸಕರು ಕವಿಗೆ ಹೇಳಿರುವಂತೆಯೇ ಸಹೃದಯನಿಗೂ ಕೆಲವು ಲಕ್ಷಣಗಳನ್ನು ಹೇಳಿದ್ದಾರೆ. ಇವುಗಳಲ್ಲಿ ಅತ್ಯಂತ ಗಮನೀಯವಾದದ್ದು ಅಭಿನವಗುಪ್ತನದು "ಯೇಷಾಂ ಕಾವ್ಯಾನುಶೀಲನಾಭ್ಯಾಸವಶಾತ್ ವಿಶದೀಭೂತೇ ಮನೋಮುಕುರೇ ವರ್ಣನೀಯ ತನ್ಮಯೀ ಭವನ ಯೋಗ್ಯತಾ ತೇ ಸ್ವಹೃದಯ ಸಂವಾದಭಾಜಃ ಸಹೃದಯಾಃ" ಅಂದರೆ ಕಾವ್ಯಾಭ್ಯಾಸದಿಂದ ಮನಸ್ಸೆಂಬ ಕನ್ನಡಿಯು ನಿರ್ಮಲವಾಗಿ ವರ್ಣನೀಯ ವಿಷಯದಲ್ಲಿ ತನ್ಮಯವಾಗುವ ಯೋಗ್ಯತೆ ಯಾರಿಗಿದೆಯೋ ಅವರೇ ಕವಿಹೃದಯಕ್ಕೆ ಸಮಾನ ಹೃದಯಸಂವಾದವುಳ್ಳ ಸಹೃದಯರು.


ಮೂರ್ತಗೊಳಿಸಿದ್ದನ್ನು ಕೃತಿಯ ಮೂಲಕ ತನ್ನ ಅನುಭವವಾಗಿಸಿಕೊಳ್ಳುವ  ಸಹೃದಯರಿಗೂ  ಪ್ರತಿಭೆ ಅಗತ್ಯ. ಕವಿಯ ಸೂಕ್ಷ್ಮಾನುಭವಗಳು ಸೂಚ್ಯವಾಗಿ ಧ್ವನಿಪೂರ್ಣ ಶಬ್ದಗಳಲ್ಲಿ ಅಡಕಗೊಂಡಿರುತ್ತವೆ. ಆ ಮಾತುಗಳ ಶಕ್ತಿಯಿಂದ ಅನುಭವದ ಅನೇಕ ಪದರುಗಳನ್ನು ಗುರುತಿಸುವ ಇವನ ಆಸ್ವಾದನ ಕ್ರಿಯೆಯೂ ಸೃಷ್ಟಿಕ್ರಿಯೆಯಂತೆ ವಿಶಿಷ್ಟ ಶಕ್ತಿಯಿಂದ ಮಾತ್ರವೇ ಸಾಧ್ಯ ಎಂಬುದನ್ನು ಆನಂದವರ್ಧನ ಒತ್ತಿ ಹೇಳಿದ್ದಾನೆ. ಈ ಶಕ್ತಿಯನ್ನು ಅಭಿನವಗುಪ್ತ ಪ್ರತಿಭಾ ಎಂದು ಗುರುತಿಸುತ್ತಾನೆ. ಕವಿಪ್ರತಿಭೆಗೆ ಸಮಾನವಲ್ಲದಿದ್ದರೂ ಇದು ಸಹೃದಯನ ಆಸ್ವಾದನ ಸಾಮರ್ಥ್ಯಕ್ಕೆ ಸಹಾಯವಾದ ಅನುಸೃಷ್ಟಿಶೀಲ ಪ್ರತಿಭೆ ಎನಿಸಿಕೊಳ್ಳುತ್ತದೆ. ರಾಜಶೇಖರನೆಂಬ ಕಾವ್ಯ ಮೀಮಾಂಸಕ ಈ ಎರಡೂ ರೀತಿಯ ಪ್ರತಿಭೆಗಳನ್ನು ಗುರುತಿಸಿ ಕವಿಪ್ರತಿಭೆಯನ್ನು ಕಾರಯಿತ್ರೀ ಎಂದೂ ಸಹೃದಯನ ಪ್ರತಿಭೆಯನ್ನು ಭಾವಯಿತ್ರೀ ಎಂದೂ ಕರೆದಿದ್ದಾನೆ. ಪಾಶ್ಚಾತ್ಯ ಮೀಮಾಂಸಕರು ಕೊಡುವ ಓದುಗನ ಪರಿಕಲ್ಪನೆಯೂ ಸಹೃದಯ ಪರಿಕಲ್ಪನೆಗೆ ಸಂವಾದಿಯಾಗಿದೆ.


ಸಿಹಿಜೀವಿ ವೆಂಕಟೇಶ್ವರ


12 March 2025

ಡೈರಿ ಮಿಲ್ಕ್ . ಹನಿಗವನ

 




ಡೈರಿ ಮಿಲ್ಕ್


ಲವ್ ಮಾಡುವಾಗ 

ಅವನು ಅವಳಿಗೆ

ದಿನವೂ ತಂದು ಕೊಡುತ್ತಿದ್ದ 

ಡೈರಿ ಮಿಲ್ಕು|

ಮದುವೆಯಾದ ನಂತರ 

ಈಗ ತಂದುಕೊಡುತ್ತಿದ್ದಾನೆ

ಡೈಲಿ ಮಿಲ್ಕು||


ಸಿಹಿಜೀವಿ ವೆಂಕಟೇಶ್ವರ

07 March 2025

ಸಿಹಿಜೀವಿಯ ಹನಿ.

 

ಬೇರೆಯವರ ಜೀವನದಲ್ಲಿ ನೀವು

ನೀಡದಿದ್ದರೂ ಪರವಾಗಿಲ್ಲ ಅಕ್ಕರೆ|

ಆದರೆ ಉಳಿಸಿ ಹೋಗದಿರಿ ಮನದಲ್ಲಿ

ಮಾಯಲಾಗದ ಗಾಯದ ಬರೆ|