27 March 2025

ರಂಗಪರಂಪರೆ ಬೆಂಬಲಿಸೋಣ. (ಇಂದು ವಿಶ್ವ ರಂಗ ಭೂಮಿ ದಿನ)


 


ರಂಗಪರಂಪರೆ ಬೆಂಬಲಿಸೋಣ.

(ಇಂದು ವಿಶ್ವ ರಂಗ ಭೂಮಿ ದಿನ)

ಇಂದಿನ ಮನರಂಜನೆ ಎಂದರೆ  ಸಿನಿಮಾ  ಮತ್ತು ಸಾಮಾಜಿಕ ಮಾಧ್ಯಮಗಳು ಎಂಬುದು ಸತ್ಯವಾದರೂ ನಾಟಕಗಳು ಅನಾದಿ ಕಾಲದಿಂದಲೂ ಮನರಂಜನೆ ನೀಡುತ್ತಾ ಬಂದಿವೆ. ರಂಗಭೂಮಿ ಇಂದಿಗೂ ಪ್ರಸ್ತುತ ಎಂಬುದನ್ನು ಈಗಲೂ ಹಮ್ಮಿಕೊಳ್ಳುತ್ತಿರುವ ಹಲವಾರು ನಾಟಕ ಪ್ರದರ್ಶನಗಳು ನಿರೂಪಿಸುತ್ತಿವೆ.

ವಿಶ್ವ ರಂಗಭೂಮಿ ದಿನವನ್ನು ಮಾರ್ಚ್ 27 ರಂದು ಆಚರಿಸಲಾಗುತ್ತದೆ. ಪ್ರದರ್ಶನ ಕಲೆಗಳನ್ನು ಆಚರಿಸಲು ಮತ್ತು ಸಮಾಜದಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ಗಮನ ಸೆಳೆಯಲು ಅಂತರರಾಷ್ಟ್ರೀಯ ರಂಗಭೂಮಿ ಸಂಸ್ಥೆ  1962ರಿಂದ  ಈ ದಿನವನ್ನು  ಆಚರಿಸಿಕೊಂಡು ಬರುತ್ತಿದೆ. 

ಪ್ರದರ್ಶನ ಕಲೆಗಳನ್ನು ಉತ್ತೇಜಿಸುವುದು. ಈ ದಿನಾಚರಣೆಯ  ಪ್ರಮುಖವಾದ ಉದ್ದೇಶ. ಇದರ ಜೊತೆಯಲ್ಲಿ ರಂಗಭೂಮಿಯು ಒಂದು ಕಲಾ ಪ್ರಕಾರವಾಗಿ ಮತ್ತು ಸಂಸ್ಕೃತಿ ಮತ್ತು ಸಮಾಜದ ಮೇಲೆ ಅದರ ಪ್ರಭಾವವನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ.ರಂಗಭೂಮಿ ಕಾರ್ಮಿಕರನ್ನು ಬೆಂಬಲಿಸುತ್ತಾ  ಪೋಷಕ ನಟರು, ನಿರ್ದೇಶಕರು, ಬರಹಗಾರರು ಮತ್ತು ರಂಗಭೂಮಿಯಲ್ಲಿ ಕೆಲಸ ಮಾಡುವ ಇತರರಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ದಿನವು ಪ್ರಪಂಚದಾದ್ಯಂತದ ರಂಗಭೂಮಿಗಳ ನಡುವೆ ವಿಚಾರಗಳು ಮತ್ತು ಅನುಭವಗಳ ವಿನಿಮಯವನ್ನು ಉತ್ತೇಜಿಸುತ್ತದೆ. ಜೊತೆಗೆ ವಿವಿಧ ನಾಟಕ ಸಂಪ್ರದಾಯಗಳು ಮತ್ತು ಶೈಲಿಗಳತ್ತ ಗಮನ ಸೆಳೆಯುತ್ತದೆ.

 ವಿಶ್ವ ರಂಗಭೂಮಿ ದಿನವು ರಂಗಭೂಮಿ ಪ್ರದರ್ಶನಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಲು ಮತ್ತು ಜನರು ನಾಟಕಗಳಿಗೆ  ಭೇಟಿ ನೀಡಲು ಪ್ರೇರೇಪಿಸುತ್ತದೆ.

ಈ ದಿನದಂದು

 ಅನೇಕ ದೇಶಗಳು ರಂಗಭೂಮಿಗೆ ಮೀಸಲಾಗಿರುವ ವಿಶೇಷ ಪ್ರದರ್ಶನಗಳು, ಉತ್ಸವಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಇವು ಸಾಮಾನ್ಯವಾಗಿ ಕಲೆಯ ಮಹತ್ವ ಮತ್ತು ಸಮಾಜದ ಮೇಲೆ ಅದರ ಪ್ರಭಾವವನ್ನು ಎತ್ತಿ ತೋರಿಸುವ ಪ್ರದರ್ಶನಗಳಾಗಿವೆ.ಕಾರ್ಯಕ್ರಮಗಳು ಮತ್ತು ಉಪನ್ಯಾಸಗಳು. ರಂಗಭೂಮಿಗಳು ಮತ್ತು ಶಿಕ್ಷಣ ಸಂಸ್ಥೆಗಳು ರಂಗಭೂಮಿಯ ಕಲೆ ಮತ್ತು ಸಮಾಜದಲ್ಲಿ ಅದರ ಪಾತ್ರಕ್ಕೆ ಮೀಸಲಾದ ಉಪನ್ಯಾಸಗಳು, ಕಾರ್ಯಾಗಾರಗಳು ಮತ್ತು ಚರ್ಚೆಗಳನ್ನು ಆಯೋಜಿಸುತ್ತವೆ.ಪ್ರತಿ ವರ್ಷ, ರಂಗಭೂಮಿಯ ದಿನದಂದು ಜಗತ್ತಿನ ಪ್ರಸಿದ್ಧ ವ್ಯಕ್ತಿಯನ್ನು ಈ ದಿನಕ್ಕೆ ವಿಶೇಷ ಸಂದೇಶವನ್ನು ಬರೆಯಲು ಆಯ್ಕೆ ಮಾಡಲಾಗುತ್ತದೆ.ನಂತರ ಅದನ್ನು ಪ್ರಪಂಚದಾದ್ಯಂತ ವಿತರಿಸಲಾಗುತ್ತದೆ. ಈ ಸಂದೇಶಗಳು ಜನರನ್ನು ಪ್ರೇರೇಪಿಸುತ್ತವೆ ಮತ್ತು ರಂಗಭೂಮಿಯ ಮಹತ್ವವನ್ನು ಎತ್ತಿ ತೋರಿಸುತ್ತವೆ. 


  ಕನ್ನಡಕ್ಕೂ ಒಮ್ಮೆ ಈ ಗೌರವ ಸಂದಿತ್ತು. ನಾಟಕಕಾರ ಗಿರೀಶ್ ಕಾರ್ನಾಡ್ ಅವರನ್ನು ವಿಶ್ವರಂಗಭೂಮಿ ದಿನದ ಸಂದೇಶ ನೀಡುವಂತೆ 2002ರಲ್ಲಿ ಕೇಳಿಕೊಳ್ಳಲಾಗಿತ್ತು. ಕಾರ್ನಾಡರು ಆಗ  ಅಂತರರಾಷ್ಟ್ರೀಯ ಸಂಸ್ಥೆಯ ರಾಯಭಾರಿಯೂ ಆಗಿದ್ದರು. ವಿಶ್ವದ ನಾನಾ ಭಾಷೆಯ ರಂಗಕರ್ಮಿಗಳು ಅಂದು ಈ ಸಂದೇಶ ಓದಿ ನಾಟಕ ಪ್ರಯೋಗ ಇತ್ಯಾದಿ ಉತ್ಸವಗಳನ್ನು ಆಚರಿಸಿದ್ದರು. 


2023ರ ವರ್ಷದ ರಂಗಭೂಮಿ ದಿನಕ್ಕೆ ಪ್ರಸಿದ್ಧ ನಾಟಕ ರಚನಕಾರ ನೊಬೆಲ್ ಪ್ರಶಸ್ತಿ ವಿಜೇತ ದರಿಯ ಫೋ ಅವರು ಸಂದೇಶ ನೀಡಿದ್ದರು.   ಅವರು ತಮ್ಮ  ಸಂದೇಶದಲ್ಲಿ “ಹೆಚ್ಚು ಹೆಚ್ಚು ಯುವಜನತೆ ರಂಗ ಚಟುವಟಿಕೆಗಳಲ್ಲಿ ಪಾಲ್ಗೊಂಡು ಹೊಸ ಚಿಂತನೆಗಳ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸುವುದಕ್ಕೆ ಪೂರಕರಾಗಬೇಕಾಗಿದೆ” ಎಂದು ಕರೆ ನೀಡಿದ್ದರು.

2024 ರಲ್ಲಿ  'ಕಲೆಯೇ ಶಾಂತಿ' ಎಂಬ ಶೀರ್ಷಿಕೆಯ ಸಂದೇಶವನ್ನು ನಾರ್ವೇಜಿಯನ್ ಬರಹಗಾರ ಮತ್ತು ನಾಟಕಕಾರ ಜಾನ್ ಫೋಸ್ಸೆ ನೀಡಿದ್ದರು.

ಈ ವರ್ಷ ಗ್ರೀಸ್ ನ ಲೇಖಕ ,ನಾಟಕಕಾರ, ನಿರ್ದೇಶಕ

ಥಿಯೋಡೋರೋಸ್ ಟೆರ್ಜೊಪೌಲೋಸ್ ವಿಶ್ವ ರಂಗಭೂಮಿ ದಿನದ ಸಂದೇಶ ನೀಡಿದ್ದಾರೆ.

ವೃತ್ತಿ ರಂಗಭೂಮಿಯ ಕಲಾವಿದರು ರಂಗಭೂಮಿಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ.ಇದಕ್ಕೆ ಪೂರಕವಾಗಿ ಹವ್ಯಾಸಿ ರಂಗ ಕಲಾವಿದರು ಸಹ ರಂಗಭೂಮಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ.ಜಗದ ಎಲ್ಲಾ ಕಡೆ ನಾಟಕ ಚಟುವಟಿಕೆಗಳು ಇನ್ನೂ ಹೆಚ್ಚು ಸಕ್ರಿಯವಾಗಲಿ ನಮ್ಮ ಸಾಂಸ್ಕೃತಿಕ ಪರಂಪರೆ  ಅಭಿವೃದ್ಧಿಯಾಗಲಿ ಎಂದು ಆಶಿಸೋಣ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು







No comments: