ಸಹೃದಯ.
ಸಹೃದಯಿ ಎಂಬುದು ಸಮಾನ್ಯ ವಾಗಿ ನಾವು ಉತ್ತಮ ಗುಣ ನಡತ ಹೊಂದಿದ ವ್ಯಕ್ತಿಯ ಕುರಿತ ಮಾತನಾಡುವಾಗ ಬಳಸುವ ಪದ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಸಹೃದಯ ಅಥವಾ ಸಹೃದಯಿ ಎಂಬುದು ಒಂದು ಪ್ರಮುಖ ಪರಿಕಲ್ಪನೆ. ಕವಿಹೃದಯಕ್ಕೆ ಸಮಾನವಾದ ಹೃದಯವುಳ್ಳವನು ಸಹೃದಯ. ಕಾವ್ಯವನ್ನು ಓದುವಾಗ ಕವಿಯ ಹೃದಯದೊಂದಿಗೆ ಇವನ ಹೃದಯವೂ ಸಮಾನವಾಗಿ ಮಿಡಿಯುತ್ತದೆ. ಇವನು ಕವಿಯ ಇಂಗಿತ, ಆಶಯಗಳನ್ನು ಸಹಾನುಭೂತಿಯಿಂದ ಅರಿತು ಕವಿಯ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾನೆ.
ಲೋಕ ವ್ಯಾಪಾರದಲ್ಲಿ ಸೌಂದರ್ಯಾನುಭವ ಹೊಂದಿ ತನ್ನ ವಿಶಿಷ್ಟ ಶಕ್ತಿಯಿಂದ ಕವಿಯು ಕೃತಿಯನ್ನು ರಚಿಸಿದರೆ ಅದು ಅರ್ಧ ಭಾಗದ ಕೆಲಸವಷ್ಟೇ ಆಗುತ್ತದೆ. ತೀವ್ರವಾದ ಆತನ ಅನುಭವಗಳು ಅನ್ಯಹೃದಯವೇದ್ಯವಾದಾಗ ಮಾತ್ರ ಅವನ ಕಾರ್ಯ ಪೂರ್ಣರೂಪ ಪಡೆದಂತೆ. ಇದು ಕವಿಯ ಮೂಲಭೂತ ಬಯಕೆ. ಕಾವ್ಯವನ್ನು ಓದಿ ಆ ಅನುಭವದ ಸುಖವನ್ನು ಪಡೆಯುವವರೇ ಇಲ್ಲದಿದ್ದರೆ ಆತನ ಕೃತಿ ವ್ಯರ್ಥ. "ಕಟ್ಟಿಯುಮೇನೊ ಮಾಲೆಗಾರನ ಪೊಸಬಾಸಿಗಂ ಮುಡಿವ ಭೋಗಿಗಳಿಲ್ಲದೆ ಬಾಡಿಪೋಗದೆ" ಎಂದು ಕನ್ನಡ ಕವಿ ಜನ್ನ ಹೇಳಿದ್ದಾನೆ. ಕವಿ ಕಾವ್ಯದಲ್ಲಿ ಒಡಮೂಡಿಸಿದ ಸೌಂದರ್ಯಾನುಭವವನ್ನು ಕಾವ್ಯದ ಮೂಲಕ ಏರಿ ಸಹೃದಯ ಮುಟ್ಟುತ್ತಾನೆ. ಅಭಿನವಗುಪ್ತನ ಪ್ರಕಾರ ಕಾವ್ಯವರ್ತುಲದ ಪೂರ್ಣತೆಯಲ್ಲಿ ಕವಿ ಹೇಗೋಹಾಗೆ ಸಹೃದಯನೂ ಪ್ರಧಾನ ಕೊಂಡಿಯಾಗಿದ್ದಾನೆ. ಕಾವ್ಯಮೀಮಾಂಸಕರು ಕವಿಗೆ ಹೇಳಿರುವಂತೆಯೇ ಸಹೃದಯನಿಗೂ ಕೆಲವು ಲಕ್ಷಣಗಳನ್ನು ಹೇಳಿದ್ದಾರೆ. ಇವುಗಳಲ್ಲಿ ಅತ್ಯಂತ ಗಮನೀಯವಾದದ್ದು ಅಭಿನವಗುಪ್ತನದು "ಯೇಷಾಂ ಕಾವ್ಯಾನುಶೀಲನಾಭ್ಯಾಸವಶಾತ್ ವಿಶದೀಭೂತೇ ಮನೋಮುಕುರೇ ವರ್ಣನೀಯ ತನ್ಮಯೀ ಭವನ ಯೋಗ್ಯತಾ ತೇ ಸ್ವಹೃದಯ ಸಂವಾದಭಾಜಃ ಸಹೃದಯಾಃ" ಅಂದರೆ ಕಾವ್ಯಾಭ್ಯಾಸದಿಂದ ಮನಸ್ಸೆಂಬ ಕನ್ನಡಿಯು ನಿರ್ಮಲವಾಗಿ ವರ್ಣನೀಯ ವಿಷಯದಲ್ಲಿ ತನ್ಮಯವಾಗುವ ಯೋಗ್ಯತೆ ಯಾರಿಗಿದೆಯೋ ಅವರೇ ಕವಿಹೃದಯಕ್ಕೆ ಸಮಾನ ಹೃದಯಸಂವಾದವುಳ್ಳ ಸಹೃದಯರು.
ಮೂರ್ತಗೊಳಿಸಿದ್ದನ್ನು ಕೃತಿಯ ಮೂಲಕ ತನ್ನ ಅನುಭವವಾಗಿಸಿಕೊಳ್ಳುವ ಸಹೃದಯರಿಗೂ ಪ್ರತಿಭೆ ಅಗತ್ಯ. ಕವಿಯ ಸೂಕ್ಷ್ಮಾನುಭವಗಳು ಸೂಚ್ಯವಾಗಿ ಧ್ವನಿಪೂರ್ಣ ಶಬ್ದಗಳಲ್ಲಿ ಅಡಕಗೊಂಡಿರುತ್ತವೆ. ಆ ಮಾತುಗಳ ಶಕ್ತಿಯಿಂದ ಅನುಭವದ ಅನೇಕ ಪದರುಗಳನ್ನು ಗುರುತಿಸುವ ಇವನ ಆಸ್ವಾದನ ಕ್ರಿಯೆಯೂ ಸೃಷ್ಟಿಕ್ರಿಯೆಯಂತೆ ವಿಶಿಷ್ಟ ಶಕ್ತಿಯಿಂದ ಮಾತ್ರವೇ ಸಾಧ್ಯ ಎಂಬುದನ್ನು ಆನಂದವರ್ಧನ ಒತ್ತಿ ಹೇಳಿದ್ದಾನೆ. ಈ ಶಕ್ತಿಯನ್ನು ಅಭಿನವಗುಪ್ತ ಪ್ರತಿಭಾ ಎಂದು ಗುರುತಿಸುತ್ತಾನೆ. ಕವಿಪ್ರತಿಭೆಗೆ ಸಮಾನವಲ್ಲದಿದ್ದರೂ ಇದು ಸಹೃದಯನ ಆಸ್ವಾದನ ಸಾಮರ್ಥ್ಯಕ್ಕೆ ಸಹಾಯವಾದ ಅನುಸೃಷ್ಟಿಶೀಲ ಪ್ರತಿಭೆ ಎನಿಸಿಕೊಳ್ಳುತ್ತದೆ. ರಾಜಶೇಖರನೆಂಬ ಕಾವ್ಯ ಮೀಮಾಂಸಕ ಈ ಎರಡೂ ರೀತಿಯ ಪ್ರತಿಭೆಗಳನ್ನು ಗುರುತಿಸಿ ಕವಿಪ್ರತಿಭೆಯನ್ನು ಕಾರಯಿತ್ರೀ ಎಂದೂ ಸಹೃದಯನ ಪ್ರತಿಭೆಯನ್ನು ಭಾವಯಿತ್ರೀ ಎಂದೂ ಕರೆದಿದ್ದಾನೆ. ಪಾಶ್ಚಾತ್ಯ ಮೀಮಾಂಸಕರು ಕೊಡುವ ಓದುಗನ ಪರಿಕಲ್ಪನೆಯೂ ಸಹೃದಯ ಪರಿಕಲ್ಪನೆಗೆ ಸಂವಾದಿಯಾಗಿದೆ.
ಸಿಹಿಜೀವಿ ವೆಂಕಟೇಶ್ವರ
No comments:
Post a Comment