ಆಸ್ತಿಕರ ಹಾಗೂ ಚಾರಣಿಗರ ಮೆಚ್ಚಿನ ತಾಣ ಎಸ್ ಆರ್ ಎಸ್ ಬೆಟ್ಟಗಳು.
ತುಮಕೂರಿನಿಂದ ರಾಮನಗರ ತಲುಪಿ ಅಲ್ಲಿನ ಹೈವೆ ಪಕ್ಕದ ಕಾಮತ್ ಹೋಟೆಲ್ ನಲ್ಲಿ ತಿಂಡಿ ತಿಂದು
ಮಗಳನ್ನು ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ ದಿನ ಅಲ್ಲಿಂದ ಹದಿಮೂರು ಕಿಲೋಮೀಟರ್ ದೂರವಿರುವ ಎಸ್ ಆರ್ ಎಸ್ ಬೆಟ್ಟ ನೋಡಲು ಕಾರ್ ನಲ್ಲಿ ಹೊರಟೆವು.
ಶ್ರೀ ರೇವಣ್ಣ ಸಿದ್ದೇಶ್ವರ ಅಥವಾ SRS ಬೆಟ್ಟಗಳು ಎಂದು ಕರೆಯಲ್ಪಡುವ ಸುಂದರವಾದ ಬೆಟ್ಟ ಶ್ರೇಣಿಯು ರಾಮನಗರದಲ್ಲಿರುವ ಅತ್ಯಂತ ಪ್ರಸಿದ್ಧ ಸಾಹಸಮಯ ಸ್ಥಳಗಳಲ್ಲಿ ಒಂದಾಗಿದೆ.ಇದು ಧಾರ್ಮಿಕ ಪ್ರಸಿದ್ಧ ಸ್ಥಳವೂ ಹೌದು. ವಾರಾಂತ್ಯದ ವಿಹಾರಮಾಡಲು ಚಾರಣಪ್ರಿಯರು ಇಲ್ಲಿಗೆ ಆಗಮಿಸುತ್ತಾರೆ.
ನಾವು ಅಲ್ಲಿಗೆ ಹೋದಾಗ ಮಧ್ಯಾಹ್ನ 12.30 ಆಗಿತ್ತು.ಬಿಸಿಲಲ್ಲಿ ಬೆಟ್ಟ ಹತ್ತಬೇಕೋ ಬೇಡವೋ ಎಂಬ ಗೊಂದಲದಲ್ಲೆ ನಿಧಾನವಾಗಿ ಬೆಟ್ಟ ಏರಲು ತೀರ್ಮಾನಕ್ಕೆ ಬಂದೆವು.
ಬೆಟ್ಟ ಹತ್ತುವಾಗ ನಮಗೆ ಸಿಗುವುದು ಭೀಮೇಶ್ವರ ದೇವಾಲಯ.
ಪಾಂಡವರು ಅಜ್ಞಾತವಾಸದಲ್ಲಿರುವಾಗ ಈ ಬೆಟ್ಟದಲ್ಲಿ ಕೆಲ ಕಾಲ ತಂಗಿದ್ದು ಆ ಸಂದರ್ಭದಲ್ಲಿ ಬೆಟ್ಟದ ಮದ್ಯಭಾಗದಲ್ಲಿ ಭೀಮಸೇನನಿಂದ ಸ್ಥಾಪಿಸಿದ ಶಿವಲಿಂಗವಿದ್ದು ಇಂದು ಅದೇ ಭೀಮೇಶ್ವರ ದೇವಾಲಯವಾಗಿ ಪ್ರಸಿದ್ದಿಯಾಗಿದೆ. ನಾವು ಅಲ್ಲಿಗೆ ಹೋದಾಗ ದೇವಾಲಯ ಮುಚ್ಚಿತ್ತು.ಹೊರಗಿನಿಂದ ಕೈ ಮುಗಿದು ಬೆಟ್ಟ ಏರಲು ಮುಂದೆ ಸಾಗಿದೆವು. ಅಲ್ಲಲ್ಲಿ ವಾನರ ಸೇನೆ ನಮಗೆ ಸ್ವಾಗತ ಕೋರುತ್ತಾ ನಮ್ಮ ಕೈಯಲ್ಲಿರುವ ತಿನಿಸುಗಳ ಕಡೆ ಹೆಚ್ಚು ಗಮನ ಹರಿಸಿ ಮುಲಾಜಿಲ್ಲದೆ ಕಿತ್ತುಕೊಂಡು ಇದು ನಮ್ದೇ ಎಂದು ನಮ್ಮ ಮುಂದೆಯೇ ತಿನ್ನುತ್ತಿದ್ದವು.
ಬೆಟ್ಟ ಏರಲು ಬಿಸಿಲು ಮಳೆಯಿಂದ ಭಕ್ತರ ರಕ್ಷಿಸಲು ಚಾವಣಿಯ ವ್ಯವಸ್ಥೆ ಮಾಡಿದ್ದರಿಂದ ಬೆಟ್ಟ ಏರಲು ಕಷ್ಟ ಆಗಲಿಲ್ಲ. ಅಲ್ಲಲ್ಲಿ ಬಹಳ ಕಡಿದಾದ ಮೆಟ್ಟಿಲು ಹತ್ತುವಾಗ ಸ್ವಲ್ಪ ಬೆವರು ಬಂದು ಏದುಸಿರು ಬಿಡುತ್ತಾ ಹತ್ತಿದೆವು.ಮೇಲೆ ಹೋದಂತೆ ಕೆರೆಗಳು, ತೋಟಗಳು ಸಣ್ಣ ಪುಟ್ಟ ಗುಡ್ಡಗಳು ಬಹಳ ಸುಂದರವಾಗಿ ಕಂಡವು.ದೂರದಲ್ಲಿ ರಾಮನಗರದ ಕೆಲ ಕಟ್ಟಡಗಳು ಸಹ ಕಂಡವು.ಬೆಟ್ಟದ ಮೇಲೇರಿ ಪ್ರಕೃತಿಯ ಸೌಂದರ್ಯವನ್ನು ನಮ್ಮ ಕಣ್ಣುಗಳಲ್ಲಿ ಹಾಗೂ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದೆ.ಮೊಬೈಲ್ ನೆಟ್ವರ್ಕ್ ಚೆನ್ನಾಗಿದ್ದರಿಂದ ನಮ್ಮ ಮುಖಪುಟ ಬಂಧುಗಳಿಗೆ ಲೈವ್ ನಲ್ಲಿ ಎಸ್ ಆರ್ ಎಸ್ ಸೌಂದರ್ಯ ತೋರಿಸಿದೆ.
ಬೆಟ್ಟದ ತುದಿಯಿಂದ ಬಲಕ್ಕೆ ತಿರುಗಿ ನೂರು ಮೀಟರ್ ಕೆಳಗಿಳಿದರೆ ರೇವಣ ಸಿದ್ದೇಶ್ವರ ದೇವಾಲಯ ತಲುಪಬಹುದು. ರೇವಣ ಸಿದ್ದೇಶ್ವರ ರವರು ದಿವ್ಯ ತಪಸ್ಸನ್ನು ಮಾಡಿ ಲಿಂಗದ ರೂಪದಲ್ಲಿ ಇಲ್ಲಿ ನೆಲೆನಿಂತಿದ್ದಾರೆ. ಅರ್ಧ ಅಡಿ ಎತ್ತರದ ಶ್ರೀ ರೇವಣ ಸಿದ್ದೇಶ್ವರ ಸ್ವಾಮಿ ಉದ್ಬವ ಶಿವಲಿಂಗ ಭಕ್ತರನ್ನು ಸೆಳೆಯುತ್ತದೆ. ಈ ದೇವಾಲಯದ ಸಮೀಪ ಮೊರೆ ಬಸವನ ವಿಗ್ರಹ ಹಾಗೂ ಎಂದೂ ಬತ್ತದ ದೊಣೆ ಇದೆ. ಬುಡದಲ್ಲಿ ರೇಣುಕಾಂಬ ಹಾಗೂ ವೀರಭದ್ರೇಶ್ವರ ದೇವಾಲಯಗಳಿವೆ.
ದೇವರ ದರ್ಶನ ಪಡೆದು ಪ್ರಸಾದ ಸೇವಿಸಿ ಬೆಟ್ಟ ಇಳಿಯುವಾಗ ಅಲ್ಲಲ್ಲಿ ವಿಶ್ರಾಂತಿ ಪಡೆದು ಕೊನೆಗೂ ಬೆಟ್ಟ ಇಳಿದು ಕಾರ್ ಹತ್ತುವಾಗ ಹೊಟ್ಟೆ ತಾಳ ಹಾಕುತ್ತಿತ್ತು.ರಾಮನಗರಕ್ಕೆ ಹಿಂತಿರುಗುವಾಗ ಮಾರ್ಗ ಮಧ್ಯದ ಹೋಟೆಲ್ ನಲ್ಲಿ ಊಟ ಮಾಡಿ ಮನೆಯ ಕಡೆ ಪಯಣ ಬೆಳೆಸಿದೆವು.
ಒಂದು ದಿನದ ಪ್ರವಾಸ, ಚಾರಣ ಮಾಡುವವರಿಗೆ ಎಸ್ ಆರ್ ಎಸ್ ಬೆಟ್ಟ ಬಹಳ ಸುಂದರ ಸ್ಥಳ ನೀವು ಒಮ್ಮೆ ಹೋಗಿ ಬನ್ನಿ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
.
No comments:
Post a Comment