ಎಚ್ಚರ ಗ್ರಾಹಕ ಎಚ್ಚರ.
ಇಂದು ವಿಶ್ವ ಗ್ರಾಹಕರ ದಿನ..
ಗ್ರಾಹಕರೊಬ್ಬರಿಗೆ 50 ಪೈಸೆ ಬಾಕಿ ನೀಡದ ಅಂಚೆ ಇಲಾಖೆಗೆ ಕಾಂಚೀಪುರ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಪರಿಹಾರ ಸೇರಿ ಗ್ರಾಹಕರಿಗೆ ಒಟ್ಟು ₹15 ಸಾವಿರ ಪಾವತಿಸುವಂತೆ ಆದೇಶಿಸಿದ ಘಟನೆಯು ಎಚ್ಚತ್ತ ಗ್ರಾಹಕರಿಗೆ ಉದಾಹರಣೆಯಾಗಿದೆ.
50 ಪೈಸೆ ಚಿಲ್ಲರೆ ಮರಳಿಸದೇ ಗ್ರಾಹಕರಿಗೆ ಉಂಟು ಮಾಡಿದ್ದ ಮಾನಸಿಕ ನೋವು ಹಾಗೂ ನ್ಯಾಯಸಮ್ಮತವಲ್ಲದ ವಹಿವಾಟು ಕ್ರಮ, ಸೇವಾ ನ್ಯೂನತೆಗಾಗಿ ₹10 ಸಾವಿರ ಪರಿಹಾರ ನೀಡಬೇಕು ಹಾಗೂ ಮೊಕದ್ದಮೆ ವೆಚ್ಚವಾಗಿ ₹ 5 ಸಾವಿರ ಪಾವತಿಸಬೇಕು ಎಂದು ಆಯೋಗವು ಆದೇಶಿಸಿದೆ.
ದೂರಿನ ಪ್ರಕಾರ ಅರ್ಜಿದಾರರಾದ ಎ.ಮಾನಶಾ ಅವರು 2023ರ ಡಿಸೆಂಬರ್‌ನಲ್ಲಿ ರಿಜಿಸ್ಟ್ರರ್ ಅಂಚೆ ವೆಚ್ಚವಾಗಿ ₹ 30 ಪಾವತಿಸಿದ್ದರು. ₹29.50 ಪೈಸೆಗೆ ರಸೀದಿ ನೀಡಿದ್ದು, 50 ಪೈಸೆ ಚಿಲ್ಲರೆ ನೀಡಿರಲಿಲ್ಲ.
ಯುಪಿಐ ಮೂಲಕ ನಿಖರ ಮೊತ್ತ ಪಾವತಿಸುತ್ತೇನೆ ಎಂದು ಅರ್ಜಿದಾರ ಹೇಳಿದ್ದರೂ ತಾಂತ್ರಿಕ ಕಾರಣ ನೀಡಿದ್ದ ಪೋಜಿಚಾಲುರ್ ಅಂಚೆ ಕಚೇರಿಯ ಸಿಬ್ಬಂದಿ ಅದಕ್ಕೆ ಅವಕಾಶವನ್ನು ನಿರಾಕರಿಸಿದ್ದರು.
ಅಂಚೆ ಇಲಾಖೆಯಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಯಲಿದೆ. ಪೂರಕವಾಗಿ ದಾಖಲೆಗಳ ನಿರ್ವಹಣೆ ಆಗುತ್ತಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಇದರಿಂದಾಗಿ ನನಗೆ ಮಾನಸಿಕವಾಗಿ ತೀವ್ರ ನೋವಾಗಿದೆ ಎಂದು ಅರ್ಜಿದಾರರು ದೂರಿದ್ದರು.
ಅಂಚೆ ಇಲಾಖೆಯು ಇದಕ್ಕೆ ಪ್ರತಿಕ್ರಿಯಿಸಿ ತಾಂತ್ರಿಕ ಕಾರಣದಿಂದ ಯುಪಿಐ ಪಾವತಿಗೆ ಅವಕಾಶ ದೊರೆತಿಲ್ಲ. ಆದರೆ ಇಲಾಖೆಯಲ್ಲಿ ಅಳವಡಿಸಿಕೊಂಡಿರುವ ಸಾಫ್ಟ್‌ವೇರ್‌ನಲ್ಲಿ ಚಿಲ್ಲರೆಯು ಮುಂದಿನ ಮೊತ್ತಕ್ಕೆ ಸ್ವಯಂಚಾಲಿತವಾಗಿ ಸೇರ್ಪಡೆಯಾಗುತ್ತದೆ. ಇದಕ್ಕೆ ದಾಖಲೆಗಳಿವೆ ಎಂದಿತ್ತು.
ಉಭಯ ವಾದಗಳನ್ನು ಆಲಿಸಿದ ಆಯೋಗವು, ಸಾಫ್ಟ್‌ವೇರ್ ಕಾರಣ ನೀಡಿ ಅಂಚೆ ಇಲಾಖೆಯು ಹೆಚ್ಚುವರಿಯಾಗಿ 50 ಪೈಸೆ ವಸೂಲಿ ಮಾಡಿರುವುದು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಪ್ರಕಾರ ನ್ಯಾಯಯುತ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿತು.
50 ಪೈಸೆ ವಾಪಸು ಕೊಡಿಸಬೇಕು ಮತ್ತು ಆಗಿರುವ ಮಾನಸಿಕ ನೋವಿಗೆ ₹ 2.5 ಲಕ್ಷ ಪರಿಹಾರ, ಮೊಕದ್ದಮೆ ವೆಚ್ಚವಾಗಿ ₹ 10 ಸಾವಿರ ಕೊಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಆದರೆ ನ್ಯಾಯಲಯ 15000 ಪರಿಹಾರ ಕೊಡಿಸಿದೆ.
ಇದು ಇತರೆ ಎಲ್ಲಾ ಗ್ರಾಹಕರು ತಮ್ಮ ಶೋಷಣೆಯ ವಿರುದ್ಧದ ಹೋರಾಟಕ್ಕೆ ಸ್ಪೂರ್ತಿಯಾಗಿದೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment