28 February 2025

ಕಂಬನಿಯ ಕುಯಿಲು ಪುಸ್ತಕ ಪರಿಚಯ.


 


ಕಂಬನಿಯ ಕುಯಿಲು..


ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಶಾ ಮಂ ಕೃಷ್ಣ ರಾಯರವರ ಸಂಪಾದಕತ್ವದ ತ ರಾ ಸು ಸಾಹಿತ್ಯ ಸಂಪದ ಸಂಪುಟ ಒಂದರ ಐತಿಹಾಸಿಕ ಕಾದಂಬರಿಗಳ ಸೆಟ್ ನಲ್ಲಿ ಮೂರು ಕಾದಂಬರಿಗಳಲ್ಲಿ.   ಎರಡನೇ ಕಾದಂಬರಿ "ಕಂಬನಿಯ ಕುಯಿಲು" ಕಾದಂಬರಿಯನ್ನು ಶಿವರಾತ್ರಿ ಜಾಗರಣೆ ಮಾಡುತ್ತಾ ಓದಿದೆ.


ಮದಕರಿನಾಯಕರ ಮರಣದ ಶೋಕದಿಂದ ಮೊದಲುಗೊಳ್ಳುವ ಕಾದಂಬರಿಯು ಗೌರವ್ವನಾಗತಿಯು ತನ್ನ ಹಠದಿಂದಾಗಿ ಸಹಗಮನಕ್ಕೆ ಸಿದ್ದವಾಗಿರುವ ಹಿರಿಯ ಓಬವ್ವನಾಗತಿಯ ಮೇಲೆ ದುರ್ಗದ ಭವಿಷ್ಯದ ಭಾರ ಹಾಕಿ ತಾನು ಸಹಗಮನ ಮಾಡುತ್ತಾಳೆ. ಇಹಲೋಕದ ಬಂಧನಗಳಿಂದ ಮುಕ್ತಳಾಗಿ ಸ್ವರ್ಗ ಸೇರುವ ಆತುರದಲ್ಲಿದ್ದ ಓಬವ್ವನಾಗತಿಗೆ ಬಿದ್ದ ಕರ್ತವ್ಯ ನಿರ್ವಹಿಸುವಾಗ ಇನ್ನೇನು ಎಲ್ಲಾ ತಾವಂದುಕೊಂಡಂತೆ   ಮದಕರಿನಾಯಕರ   ಆಸೆಯ ಈಡೇರಿಕೆಯಾಯಿತು ಎನ್ನುವಾಗ ಬರುವ ವಿವಿಧ ವಿಘ್ನಗಳನ್ನು ಭುವನಪ್ಪ, ಕಸ್ತೂರಿ ನಾಯಕ, ಗಿರಿಜೆ ಮುಂತಾದವರ ಬೆಂಬಲದಿಂದ ಚಾಕಚಕ್ಯತೆಯಿಂದ ನಿಭಾಯಿಸಿದರೂ ಕೊನೆಗೆ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡದ್ದು ಓದುವಾಗ ಕಂಬನಿ ಬೀಳುತ್ತದೆ.

 

ಲಿಂಗಪ್ಪನಾಯಕರ ಮಾತೃಪ್ರೇಮ, ತ್ಯಾಗಗಳ ಬಗ್ಗೆ ಓದುವಾಗ ಮನ ನೋಯುತ್ತದೆ. ಭುವನಪ್ಪನವರಿಗೆ ದುರ್ಗದ ಮೇಲಿರುವ ಅಪಾರ ನಿಷ್ಠೆಯಿಂದ ಆಗಲಿರುವ ಅನಾಹತ  ತಪ್ಪಿಸಲು ಶತಾಯಗತಾಯ ಪ್ರಯತ್ನ ಮಾಡುವ ಜೊತೆಯಲ್ಲಿ ತನ್ನ  ಪ್ರಧಾನಿ ಹುದ್ದೆಯನ್ನು ರಾಜ್ಯದ ಒಳಿತಿಗಾಗಿ ತ್ಯಾಗ ಮಾಡಿದರೂ ಕೊನೆಗೆ ತಮ್ಮ ಕೈ ಮೀರಿ ಒಳಶತೃಗಳ ಪಿತೂರಿಗೆ ಪ್ರಾಣ ಅರ್ಪಿಸಿದ್ದನ್ನು ಓದುವಾಗ ಕಂಬನಿ ಹನಿಯುತ್ತದೆ.

  ನ್ಯಾಯದ ಹೆಸರಿನಲ್ಲಿ ದ್ವೇಷ,ಕಠೋರತೆ, ಹಠಗಳೇ ರೂಪವೆತ್ತಂತೆ ನಿಲ್ಲುವ ದಳವಾಯಿ ಮುದ್ದಣ್ಣ ಖಳನಾಯಕನ ಕುತಂತ್ರಗಳನ್ನು ಓದುವಾದ ಮೈ ಉರಿಯುತ್ತದೆ.  ತನ್ನ ಅಸಮಾಧಾನದ ಸಣ್ಣ ಕಿಡಿಯಿಂದ ಆರಂಭವಾದ ಒಳಸಂಚು ದುರ್ಗವನ್ನೇ ದಹಿಸುವಾಗ ಅದನ್ನು ಹಿಡಿತಕ್ಕೆ ತರಲಾಗದೇ ತಾವೇ ಬೆಂದು ಮಾರಣಹೋಮಕ್ಕೆ ಮೊದಲ ಬಲಿಯಾಗುವ ದಳವಾಯಿ ದೇಸಣ್ಣನ ರುಂಡ ಎಗರುವಾಗ ಭಯವಾಗುತ್ತದೆ.

  ದುರ್ಗದ ಅಂತಃಕಲಹದಲ್ಲಿ ಕರ್ತವ್ಯ ನಿಷ್ಠೆಗೆ ಹೆಸರಾದ   ಗಿರಿಜವ್ವ ತದ್ವಿರುದ್ಧವಾದ ಗುಣಗಳ   ವೀರನಾಯಕನ ದುರಂತ ಅಂತ್ಯವನ್ನು ಓದುವಾಗ ನಮ್ಮ ಅಳು ತಡೆಯುವುದು ಕಷ್ಟ.

 ಕಸ್ತೂರಿನಾಯಕ ದುರ್ಗದ ನಾಯಕರ ಪ್ರಾಣ ರಕ್ಷಣಾ ಕವಚ.ಆದರೂ ನಾಯಕರ ಸಾವಿನ ಸುದ್ದಿ ತಿಳಿದು ತನ್ನ ಆತ್ಮಹುತಿ ಮಾಡಿಕೊಳ್ಳುವುದು ನೋಡಿ ಮನ ಮಿಡಿಯುತ್ತದೆ. 

ಈ ಕಾದಂಬರಿ ಓದುವಾಗ  ರಾಜ್ಯ, ಅರಮನೆ, ವೈಭವ, ಅಧಿಕಾರಗಳ ಬಗ್ಗೆ ಜಿಗುಪ್ಸೆ ಮೂಡಿಸುತ್ತದೆ.  

ಕಾದಂಬರಿ ಓದಿ ಮುಗಿಸಿದ ಎರಡು ಮೂರು ದಿನ ಒಂದು ರೀತಿಯ ಬೇಸರ ಆವರಿಸುವುದು ಸತ್ಯ. ಅಷ್ಟು ಪರಿಣಾಮಕಾರಿಯಾಗಿ ದುರ್ಗದ ಇತಿಹಾಸದ ಹಿನ್ನೆಲೆಯಲ್ಲಿ ಕಾದಂಬರಿ ರಚಿಸಿದ   ತ ರಾ ಸು ರವರ ಪ್ರತಿಭೆಯನ್ನು ಎಷ್ಟು ಹೊಗಳಿದರೂ ಸಾಲದು. ಅವರ ಮತ್ತೊಂದು ಕಾದಂಬರಿ "ರಾಜ್ಯ ದಾಹ " ಓದಿ ಮತ್ತೆ ಸಿಗುತ್ತೇನೆ

ಧನ್ಯವಾದಗಳು

ನಿಮಗೆ ತ ರಾ ಸು ರವರ ಯಾವ ಕಾದಂಬರಿ ಇಷ್ಟ ಎಂದು ಹೇಳಬಹುದು.


ಸಿಹಿಜೀವಿ ವೆಂಕಟೇಶ್ವರ


27 February 2025

ಜ್ಞಾನಾಮೃತ ಉಣಬಡಿಸಲು ಸಿದ್ಧವಾಗುತ್ತಿರುವ ಶಿವಶರಣರ ವಚನಾಮೃತ ಮಂಟಪ.

 




ಜ್ಞಾನಾಮೃತ ಉಣಬಡಿಸಲು ಸಿದ್ಧವಾಗುತ್ತಿರುವ   ಶಿವಶರಣರ ವಚನಾಮೃತ ಮಂಟಪ.


ಪುರಾತನ ಕಾಲದಿಂದಲೂ ದೇವಾಲಯಗಳು ಭಕ್ತಿಯ ಸ್ಥಳಗಳೂ ಆಗಿ ಕೆಲವೊಮ್ಮೆ ಮನರಂಜನಾ ತಾಣಗಳಾಗಿಯೂ ಗುರುತಿಸಲ್ಪಟ್ಟಿದ್ದವು.ದೇವಾಲಯಗಳಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಹಿಂದಿನ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದವು.ಮನರಂಜನಾ ಪರಿಕಲ್ಪನೆ ಮತ್ತು ವ್ಯಾಪ್ತಿ ಬದಲಾದ ಕಾಲಘಟ್ಟದಲ್ಲಿ ಮನರಂಜನೆಗೆ ಇತರೆ ಮಾಧ್ಯಮಗಳ ಭರಪೂರ ಬೆಳವಣಿಗೆಯ ನಂತರ ದೇವಾಲಯಗಳು ಕೇವಲ ಭಕ್ತಿಯ ತಾಣಗಳಾದವು.ಕೆಲ ದೇವಾಲಯಗಳು ಜ್ಞಾನ ಪಸರಿಸುವ ತಾಣಗಳಾಗಿ‌‌ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದ್ದವು. ಅಲ್ಲಿ ವೇದ,ಉಪನಿಷತ್ ಮುಂತಾದವುಗಳ  ಕಲಿಕೆ  ನಡೆಯುತ್ತಿತ್ತು. ಈಗಲೂ ಕೆಲ ದೇವಾಲಯಗಳು ಜ್ಞಾನ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.ಅಂತಹ ದೇವಾಲಯಗಳಲ್ಲಿ 





ಸಿದ್ದರಾಮೇಶ್ವರ75 ನೇ ಗದ್ದುಗೆಯಿರುವ ಬೆಳಗುಂಬದ ದೇವಾಲಯ ಭಕ್ತರ ಮತ್ತು ಜ್ಞಾನಾರ್ಥಿಗಳ ಗಮನ ಸೆಳೆಯುತ್ತಿದೆ.

ಆತ್ಮೀಯರು, ಸಹೋದ್ಯೋಗಿಗಳು ಹಾಗೂ  ಕಲಾವಿದರಾದ ಕೋಟೆ ಕುಮಾರ್ ರವರೊಂದಿಗೆ ಇತ್ತೀಚಿಗೆ ಈ ದೇವಾಲಯಕ್ಕೆ ಭೇಟಿ ನೀಡಿ ಕಳೆದ ವರ್ಷ ಜೀರ್ಣೋದ್ಧಾರಗೊಂಡ ದೇವಾಲಯದಲ್ಲಿ  ಸಿದ್ದರಾಮೇಶ್ವರ ಸ್ವಾಮಿಯ ದರ್ಶನ ಪಡೆದು ಹೊರಬಂದಾಗ  ನಮ್ಮನ್ನು ಸೆಳೆದ ಮಂದಿರವೇ "ಶಿವ ಶರಣರ ವಚನಾಮೃತ" ಎಂಬ ಹೆಸರಿನ ಈ ಕಿರುಮಂಟಪ.

ಇದನ್ನು ತುಮಕೂರಿನ ಶ್ರೀ ಜಗಜ್ಯೋತಿ   ಬಸವೇಶ್ವರ ಟ್ರಸ್ಟ್ ನವರು ನಿರ್ಮಿಸಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಹಿರಿಯ ಗಾಂಧೀವಾದಿ ಶ್ರೀ ಎಂ  ಬಸವಯ್ಯರವರ ಮುಂದಾಳತ್ವದಲ್ಲಿ ಪೌಳಿಶಂಕರಾನಂದಪ್ಪ ಮುಂತಾದವರ ಸಕಾರಾತ್ಮಕ ಯೋಚನೆಯ ಫಲವಾಗಿ  ಒಂದು ಸುಂದರವಾದ ಜ್ಞಾನ ಮಂಟಪ ತಲೆ ಎತ್ತಿದೆ.ಎರಡು ಭಾಗದಲ್ಲಿ ಇರುವ ಈ ವಚನಾಮೃತ ಮಂಟಪದಲ್ಲಿ  ವಚನ ಪಿತಾಮಹ ಫ ಗು ಹಳಕಟ್ಟಿ ಅವರ ಭಾವಚಿತ್ರ ಇಟ್ಟು ಅವರಿಗೆ ಗೌರವ ಸೂಚಿಸಲಾಗಿದೆ. ಬಸವಣ್ಣನವರಾದಿಯಾಗಿ ಹನ್ನೆರಡನೆಯ ಶತಮಾನದಿಂದ ಆರಂಭವಾಗಿ ಇಪ್ಪತ್ತೊಂದನೇ ಶತಮಾನದ ಶರಣರೂ  ಸೇರಿದಂತೆ  ಒಟ್ಟು 64  ಶಿವಶರಣರ ವಚನಗಳು ನಮ್ಮನ್ನು ಇಲ್ಲಿ ಶರಣು ಬನ್ನಿ ಎನ್ನುತ್ತಾ ಸ್ವಾಗತಿಸುತ್ತವೆ. 

 ವಚನಾಮೃತ ಮಂಟಪವು ಅನುಭವ ಮಂಟಪದ ಹಾಗೆ ಗೋಚರಿಸುತ್ತದೆ. ಭಕ್ತಿ ಹಾಗೂ ಜ್ಞಾನದ ಸಂಗಮವಾದ ಇಂಥಹ ಮಂದಿರಗಳು ನಾಡಿನಾದ್ಯಂತ ಹೆಚ್ಚಾಗಲಿ ತನ್ಮೂಲಕ ಜಂಜಡದ ಈ ಕಾಲದಲ್ಲಿ  ಜನರಿಗೆ ಶಾಂತಿ ನೆಮ್ಮದಿಯ ಜೊತೆಯಲ್ಲಿ ಜ್ಞಾನ ಲಭಿಸಲಿ ಎಂದು ಕಲಾವಿದರಾದ ಕೋಟೆ ಕುಮಾರ್ ರವರು ಅಭಿಪ್ರಾಯ ಪಟ್ಟರು.



ಬಸವಣ್ಣ, ಚನ್ನಬಸವೇಶ್ವರ, ಅಕ್ಕಮಹಾದೇವಿ, ಎಡೆಯೂರು ಸಿದ್ಧಲಿಂಗೇಶ್ವರ,ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಡೋಹರ ಕಕ್ಕಯ್ಯ, ಮಡಿವಾಳ ಮಾಚಿದೇವ, ಕೂಗಿನ ಮಾರಯ್ಯ, ಬಹುರೂಪಿ ಚೌಡಯ್ಯ, ಮರುಳ ಶಂಕರದೇವ, ಕುರುಬ ಗೊಲ್ಲಾಳ, ಕಲ್ಬುರ್ಗಿ ಸಂಗನ ಬಸವೇಶ್ವರ, ಮಾತೆ ಮಹದೇವಿ, ಉದ್ದಾನೇಶ್ವರ  ಶಿವಯೋಗಿಗಳು, ಹಾನಗಲ್ ಕುಮಾರ ಸ್ವಾಮಿ, ಸರ್ವಜ್ಞ, ಅಲ್ಲಮಪ್ರಭು, ಸಿದ್ದರಾಮೇಶ್ವರ, ಮುಂತಾದ ಶರಣರ ಹಾಗೂ ವಚನಕಾರರ ಭಾವಚಿತ್ರ ಸಹಿತವಾಗಿ ಪ್ರಮುಖ 85 ವಚನಗಳನ್ನು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿದ್ದಾರೆ.

21 ನೇ ಶತಮಾನದ  ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು, ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರ ಸಮೇತ  ವಚನಗಳು ಭಕ್ತರ ಮತ್ತು ಜ್ಞಾನಾರ್ಥಿಗಳನ್ನು ಸೆಳೆಯುತ್ತಿವೆ.

ಇತ್ತೀಚಿಗೆ ಈ ಮಂಟಪ ನಿರ್ಮಾಣವಾಗಿರುವುದನ್ನು ತಿಳಿದು ದೇವಾಲಯಕ್ಕೆ ಆಗಮಿಸುವ ಭಕ್ತರು ಉದ್ಘಾಟನೆಗೆ ಸಿದ್ದವಾಗಿರುವ ಈ ಮಂಟಪವನ್ನು ನೋಡಿ ಬಹಳ ಸಂತಸ ವ್ಯಕ್ತಪಡಿಸುತ್ತಾರೆ ಎಂದು

ಬೆಳಗುಂಬದ ಶ್ರೀ ಸಿದ್ದರಾಮೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀಶಾಂತಮಲ್ಲೇಶಯ್ಯ ರವರು ಮಾಹಿತಿ ನೀಡಿದರು.

ಶೀಘ್ರದಲ್ಲೇ ಈ ಶಿವಶರಣರ ವಚನಾಮೃತ ಮಂಟಪವು ಅಧಿಕೃತವಾಗಿ ಉದ್ಘಾಟನೆಯಾಗಲಿದೆ.ಇದು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ಜೊತೆಯಲ್ಲಿ ಜನರಲ್ಲಿ ಭಕ್ತಿ ಮತ್ತು ಜ್ಞಾನ ಪಸರಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಪ್ರಯತ್ನಗಳು ನಾಡಿನೆಲ್ಲಡೆ ಆಗಲಿ ಎಂಬುದು ಎಲ್ಲ ಜ್ಞಾನಾರ್ಥಿಗಳ ಬಯಕೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

9900925529




 


ಜಲಿಯನ್ ವಾಲಾಬಾಗ್ ಮಾರಣಹೋಮ.


 ಜಲಿಯನ್ ವಾಲಾಬಾಗ್ ಮಾರಣಹೋಮ.


ಕೆಲ ವರ್ಷಗಳ ಹಿಂದೆ ಪಂಜಾಬ್ ನ ಅಮೃತಸರಕ್ಕೆ ಪ್ರವಾಸ ಹೋದಾಗ ಜಲಿಯನ್ ವಾಲಾಬಾಗ್ ಎಂಬ ಮಾರಣಹೋಮದ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದೆವು.ಪುಸ್ತಕಗಳಲ್ಲಿ ಬ್ರಿಟಿಷರು ಕ್ರೌರ್ಯವನ್ನು ಅಮಾನುಷ ಕ್ರಮವನ್ನು ಓದಿದ್ದೆ.ಮಕ್ಕಳಿಗೆ ಹೇಳಿದ್ದೆ.ಅಂದು  ಕಣ್ಣಾರೆ ಆ ಕಟುಕರು ಮಾಡಿದ ಅನರ್ಥ, ಅಮಾನವೀಯತೆ ಮತ್ತು ಮಾರಣ ಹೋಮಕ್ಕೆ ಸಾಕ್ಷಿಯಾದ ಗುಂಡಿನ ಗುರುತುಗಳನ್ನು ಹೊಂದಿರುವ  ಗೋಡೆಗಳು,  ನೂರಾರು ಅಮಾಯಕ ಮಕ್ಕಳು ಮಹಿಳೆಯರು  ಪ್ರಾಣ ಭೀತಿಯಿಂದ ಹಾರಿ ಪ್ರಾಣ ಕಳೆದುಕೊಂಡ ಬಾವಿಯನ್ನು ನೋಡಿ ಮನಸ್ಸು ಭಾರವಾಯಿತು.

ಅದು 1919ರ  ಏಪ್ರಿಲ್ 13ರ ದಿನ.  ಬ್ರಿಟಿಷರು ಜಾರಿಗೆ ತಂದ ರೌಲಟ್ ಆಕ್ಟನ್ನು ವಿರೊಧಿಸಿ ಪಂಜಾಬ್ ರಾಜ್ಯದ ಮುಖ್ಯವಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಲ್ಲೊಂದಾದ ಅಮೃತಸರದಲ್ಲಿನ ಹೃದಯಭಾಗದಲ್ಲಿರುವ ಜಲಿಯ‍ನ್ವಾಲ ಬಾಗ್ ಉದ್ಯಾನದಲ್ಲಿ ಸಹಸ್ರಾರು ಮಂದಿ ಭಾರತೀಯರು ಮುಖ್ಯವಾಗಿ ಪಂಜಾಬಿ ನಾಗರೀಕರು ಸಮಾವೇಶಗೊಂಡಿದ್ದರು. 

ಆ ಪವಿತ್ರದಿನದಂದು ಬೈಸಾಖಿ ಹಬ್ಬವನ್ನು ಆಚರಿಸಲು ಅಮೃತಸರದಲ್ಲಿ ಸಮಾವೇಶಗೊಳ್ಳುವುದು ಸಂಪ್ರದಾಯವಾಗಿತ್ತು.

 ಬ್ರಿಟಿಷ್ ಆಡಳಿತ ವಿಧಿಸಿದ ನಿರ್ಬಂಧಿತ  ಶಾಸನದ ಪ್ರಕಾರ ಅಮೃತಸರದಲ್ಲಿ ಐದಕ್ಕಿಂತ ಹೆಚ್ಚಿನ ಜನ ಗುಂಪುಗೂಡುವಂತಿರಲಿಲ್ಲ  'ಮಾರ್ಷಲ್ ನಿಯಮ' ಎನ್ನುತ್ತಿದ್ದರು. ಅಂದು ನಡೆದ ಸಮಾವೇಶ ಈ ನಿಯಮದ ಉಲ್ಲಂಘನೆಯಾಗಿತ್ತು.

ಇದನ್ನು ಕಂಡು ಕೆರಳಿದ ಆಂಗ್ಲ ಅಧಿಕಾರಿಗಳು ಕ್ರೋಧಗೊಂಡರು.

ತೊಂಬತ್ತು   ಸೈನಿಕರಿದ್ದ ಬಂದೂಕುಗಳಿಂದ ಶಸ್ತ್ರಸಜ್ಜಿತವಾದ ತುಕಡಿಯೊಂದು ಉದ್ಯಾನವನಕ್ಕೆ ಎರಡು ಶಸ್ತ್ರಸಜ್ಜಿತ ಕಾರುಗಳೊಂದಿಗೆ ಬಂದಿತು. ಮೆಷಿನ್ಗನ್ ‍ಗಳನ್ನು ಅಳವಡಿಸಲಾಗಿದ್ದ ಆ ವಾಹನಗಳು ಉದ್ಯಾನದ ಕಡಿದಾದ ಬಾಗಿಲಿನಿಂದ ಬರಲು ಅಸಾಧ್ಯವಾಗಿತ್ತು. ಆ ತುಕಡಿಯ ನಿಯಂತ್ರಕನಾದ ಬ್ರಿಗೇಡಿಯರ್ ಜನರಲ್ ರೆಗಿನಾಲ್ಡ್ ಡೈಯರ್   ಉದ್ಯಾನದೊಳಗೆ ಕಾಲಿಡುತ್ತಲೇ ಅಲ್ಲಿ ನೆರೆದಿದ್ದವರಿಗೆ ಯಾವೊಂದು ಎಚ್ಚರಿಕೆಯನ್ನೂ ಕೊಡದೆ ಗುಂಪು ಚದುರುವಂತೆ ಯಾವೊಂದು ಆದೇಶವನ್ನೀಯದೇ ಹಠಾತ್ತಾಗಿ ಗುಂಡಿನ ಮಳೆಗರೆವಂತೆ ತಮ್ಮ ತುಕಡಿಗೆ ಆದೇಶವನ್ನಿತ್ತುಬಿಟ್ಟ. ಅದರಲ್ಲಿಯೂ ವಿಶೇಷವಾಗಿ, ಜನಸಾಂದ್ರತೆ ಎಲ್ಲಿ ಹೆಚ್ಚಾಗಿರುವುದೋ ಅತ್ತಕಡೆ ಗುಂಡಿನ ದಾಳಿ ಕೇಂದ್ರೀಕೃತವಾಗುವಂತೆ ಆದೇಶಿಸಿದ.

ಗುಂಡಿನ ದಾಳಿಯು ಸಂಜೆ  ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಸತತವಾಗಿ ನಡೆಯಿತು. ಸುತ್ತಲೂ ಇಟ್ಟಿಗೆ ಗೋಡೆಗಳಿಂದ ಕಟ್ಟಡಗಳಿಂದ ಆವೃತವಾಗಿದ್ದ ಉದ್ಯಾನವನಕ್ಕೆ ಇದ್ದದ್ದು ಐದು ಕಡಿದಾದ ದ್ವಾರಗಳು ಮಾತ್ರ. ಅದರಲ್ಲಿ ಬಹುತೇಕ ಶಾಶ್ವತವಾಗಿ ಮುಚ್ಚಲ್ಪಟ್ಟಿದ್ದವು. ತುಕಡಿಯಿದ್ದ ದ್ವಾರದ ಹೊರತಾಗಿ ಇನ್ನೊಂದೇ ದ್ವಾರವು ಮಾರ್ಗವಾಗಿ ಉಳಿದಿದ್ದರಿಂದ, ಕಂಗಾಲಾದ ಜನರು ಗೋಡೆಯನ್ನು ಹತ್ತಿ ಹಾರಲು ಪ್ರಯತ್ನಿಸಿದರು.

ಬಹಳಷ್ಟು ಜನರು ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಉದ್ಯಾನದಲ್ಲಿದ್ದ ಬಾವಿಯೊಳಗೆ ಹಾರಿದರು. ಈ ಹತ್ಯಾಕಾಂಡ ಸ್ಮಾರಕದಲ್ಲಿನ ಅಂಶವೊಂದರ ಪ್ರಕಾರ, ಬಾವಿಯೊಂದರಿಂದಲೇ ಸುಮಾರು 120 ಶವಗಳನ್ನು ಹೊರತೆಗೆಯಲಾಗಿತ್ತು. ಹತ್ಯಾಕಾಂಡದಿಂದ ನೂರಾರು ಜನರು ಸಾವನಪ್ಪಿದರಲ್ಲದೆ ಸಾವಿರಾರು ಮಂದಿ ಗಾಯಗೊಂಡರು. ಸರ್ಕಾರಿ ಮೂಲಗಳ ಪ್ರಕಾರ 379 ಮಂದಿ ಸಾವನಪ್ಪಿದ್ದಾರೆ. ಆದರೆ ಸಾವಗೀಡಾದವರ ನಿಜವಾದ ಸಂಖ್ಯೆ ಇನ್ನು ಹೆಚ್ಚಿತ್ತು ಎನ್ನಲಾಗುತ್ತದೆ.

ಕರ್ಫ್ಯು ವಿಧಿಸಿದ ಕಾರಣ ಗಾಯಗೊಂಡ ಹಲವರನ್ನು ಹತ್ಯಾಕಾಂಡದ ಸ್ಥಳದಿಂದ ಇತರೆಡೆಗೆ ಸ್ಥಳಾಂತರಿಸಲಾಗಲಿಲ್ಲ. ನಿಜವಾದ ಸಾವಿನ ಸಂಖ್ಯೆಗಳ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಲೇ ಇದೆ. ಈ ಘಟನೆ ನಡೆದ ಬಳಿಕ, ಬ್ರಿಟಿಷ್ ಸೇನೆಗೆ ವಿದ್ರೋಹಿ ಸೈನ್ಯವು ಎದುರಾದುದರಿಂದ ಅವರಿಗೆ ತಕ್ಕ ಪಾಠ ಕಲಿಸಿದ್ದಾಗಿ  ಜನರಲ್ ಡೈಯರನು ತನ್ನ ಮೇಲಧಿಕಾರಿಗಳಿಗೆ ಸುಳ್ಳು  ವರದಿಯೊಪ್ಪಿಸಿದನು.

ಇದಕ್ಕೆ ಉತ್ತರಿಸಿದ ಪಂಜಾಬ್‌ನ ಅಂದಿನ ಲೆಫ್ಟಿನೆಂಟ್-ಗವರ್ನರ್  ಮೈಕಲ್ ಓಡ್ವಾಯರ್ ಅವರಿಗೆ ತಕ್ಕ ಪಾಠ ಕಲಿಸಿದಿರಿ ಲೆಫ್ಟಿನೆಂಟ್-ಗವರ್ನರ ಇದನ್ನು ಅನುಮೋದಿಸುತ್ತಾರೆ ಎಂದು ತಂತಿಯ ಮೂಲಕ ಜನರಲ್ ಡೈಯರ್‌ಗೆ ಸಂದೇಶ ಕಳುಹಿಸಿ ಮಾಡಿದ ಕಗ್ಗೊಲೆಗೆ ಬೆಂಬಲ ನೀಡಿಬಿಟ್ಟ. ಮೈಕಲ್ ಓಡ್ವಾಯರ್ನ ಇಚ್ಚೆಯಂತೆ ಈ ಘಟನೆಯ ನಂತರ ಅಂದಿನ ವೈಸರಾಯ್  ಫ್ರೆಡ್ರಿಕ್ ತೆಸಿಂಗರ್ ಅಮೃತಸರ ಹಾಗು ಅದರ ಸುತ್ತಮುತ್ತ ಮಿಲಿಟರಿ ಆಡಳಿತವನ್ನು ಹೇರುವಂತೆ ಆದೇಶಿಸಿದ.

ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಕುರಿತು ತನಿಖೆ ನಡೆಸಲು ಹಂಟರ್ ಆಯೋಗ ಅನ್ನು ಸ್ಥಾಪಿಸುವಂತೆ ಅಂದಿನ ಭಾರತದ ರಾಜ್ಯಾಂಗ ಕಾರ್ಯದರ್ಶಿಯಾಗಿದ್ದ ಎಡ್ವಿನ್ ಮೊಂಟಾಗೊ ನಿರ್ಧರಿಸಿದನು. ಈ ಆಯೋಗದೆದುರು ಮೈಕಲ್ ಓಡ್ವಾಯರ್ನನ್ನು ಕರೆತರಲಾಯಿತು. ವಿಚಾರಣೆಯ ವೇಳೆ ಜಲಿಯನ್‌ವಾಲ ಬಾಗ್ ನಲ್ಲಿ ಉದ್ದೆಶಿಸಲಾಗಿದ್ದ ಕಾರ್ಯಕ್ರಮದ ಬಗ್ಗೆ ತನಗೆ ಅಂದಿನ ದಿನ ಮಧ್ಯಾಹ್ನ ದ ವೇಳೆಗೆ ತಿಳಿಯಿತಾದರೂ ಇದನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿರಲ್ಲಿಲ್ಲವೆಂದು ಡ್ವಾಯರ್ ಒಪ್ಪಿಕೊಂಡು  ತಾನು ಜಲಿಯನ್‌ವಾಲ ಬಾಗ್ ‌ಗೆ ಗುಂಡು ಹಾರಿಸುವ ಉದ್ದೇಶದಿಂದಲೆ ತೆರಳಿದ್ದಾಗಿ ತಿಳಿಸಿದನು. "ಜಲಿಯನ್‌ವಾಲಾ ಬಾಗನಲ್ಲಿ ಸೇರಿದ ಜನರನ್ನು ಚದುರಿಸಲು ಗುಂಡಿನ ಅವಶ್ಯಕತೆ ಇರಲ್ಲಿಲವಾದರೂ ತಾನು ಆ ಕ್ರಮ ಕೈಗೊಂಡಿರದಿದ್ದರೆ ಜನರು ಮತ್ತೆ ಗುಂಪು ಸೇರಿ ತನ್ನನ್ನು ನೋಡಿ ಗೇಲಿ ಮಾಡಿ ತಾನು ಒಬ್ಬ ಮೂರ್ಖನಂತೆ ತೋರುತಿದ್ದೆ" ಎಂದು ಹಂಟರ್ ಆಯೋಗದ ಮುಂದೆ ಡಯರ್  ತನ್ನ ನಿಲುವನ್ನು ಸ್ಪಷ್ಟಪಡಿಸಿದ.


1920ರಲ್ಲಿ ಹಂಟರ್ ವರದಿಯ ಬಿಡುಗಡೆಯ ನಂತರ ಉಂಟಾದ ಜನರ ಆಕ್ರೋಶದ ಮಧ್ಯೆ ಡೈಯರ್‍ನನ್ನು ನಿಷ್ಕ್ರಿಯ ಅಧಿಕಾರಿಗಳ ಪಟ್ಟಿಗೆ ಸೇರಿಸಲಾಯಿತು. ಅವನ ಪದವಿಯನ್ನು ಕಮಾಂಡರ್ ಇನ್ ಚೀಫ್ ಇಂದ ಕರ್ನಲ್ ಪದವಿಗೆ ಇಳಿಸಲಾಯಿತು. ಅಂದಿನ ಕಮಾಂಡರ್-ಇನ್-ಚೀಫ್ ಅವರು ಡಯರ್‍ಗೆ ಭಾರತದಲ್ಲಿ ಇನ್ನು ಮುಂದೆ ಯಾವ ಕೆಲಸವನ್ನೂ ಕೊಡುವುದಲ್ಲ  ಎಂದು ಹೇಳಿಕೆ ನೀಡಿದರು.

ಡೈಯರ್ ನ ಆರೋಗ್ಯವೂ ಚೆನ್ನಾಗಿರಲಿಲ್ಲ. ಅವನನ್ನು ಒಂದು ವೈದ್ಯಕೀಯ ಹಡಗಿನಲ್ಲಿ ಇಂಗ್ಲೆಂಡಿಗೆ ಅವನ ಮನೆಗೆ ಕಳಿಸಲಾಯಿತು. ಕೆಲವು ಹಿರಿಯ ಬ್ರಿಟಿಷ್ ಅಧಿಕಾರಿಗಳು ಮತ್ತು ಭಾರತದ ಅನೇಕ ಸಾರ್ವಜನಿಕರು 'ಇನ್ನೊಂದು ಭಾರತೀಯ ದಂಗೆ'ಯನ್ನು ಅಡಗಿಸಿದ್ದಕ್ಕಾಗಿ ಅವನನ್ನು ಪ್ರಶಂಶಿಸಿದರು. ಲಾರ್ಡ್ಸ್ ಸಭೆ ಯು ಅವನನ್ನು ಹೊಗಳಿ ನಿರ್ಣಯವನ್ನು ಅಂಗೀಕರಿಸಿತು. ಆದರೆ ಹೌಸ್ ಆಫ್ ಕಾಮನ್ಸ್, ಅವನನ್ನು ಖಂಡಿಸಿತು.

 ವಿನ್‍ಸ್ಟನ್ ಚರ್ಚಿಲ್   "ಜಲಿಯನ್‍ವಾಲಾ ಬಾಗ್ ನಲ್ಲಿ ನಡೆದಿರುವ ಈ ಘಟನೆಯು ಒಂದು ಅಸಾಮಾನ್ಯ ಘಟನೆಯಾಗಿದ್ದು, ವಿಸ್ಮಯಗೊಳಿಸುವಂತಹ ಅಮಾನುಷ ದುಷ್ಕೃತ್ಯವಾಗಿದೆ.ಎಂದರು.  ಡೈಯರ್‍ನ ಕ್ರಮವು ಜಗತ್ತಿನಾದ್ಯಂತ ನಿಂದಿಸಲ್ಪಟ್ಟಿತು. ಆಗ ಎಚ್ಚೆತ್ತ  ಬ್ರಿಟೀಷ್ ಸರಕಾರವು ಅವನನ್ನು ಅಧಿಕೃತವಾಗಿ ಅಮಾನತುಗೊಳಿಸಿತು. ಅವನು ತನ್ನ ಹುದ್ದೆಗೆ 1920ರಲ್ಲಿ ರಾಜೀನಾಮೆ ಕೊಟ್ಟನು.

ಮಾರ್ನಿಂಗ್ ಪೋಸ್ಟ್ ಪತ್ರಿಕೆಯು ಡೈಯರ್‍ನಿಗಾಗಿ ಒಂದು ಸಹಾನುಭೂತಿ ನಿಧಿಯನ್ನು ಸ್ಥಾಪಿಸಿ 26,000 ಕ್ಕೂ ಹೆಚ್ಚು ಪೌಂಡ್‍ಗಳನ್ನು ಸಂಗ್ರಹಿಸಿತು. ಶುಭಕೋರಿರುವರ ಹೆಸರುಗಳನ್ನೊಳಗೊಂಡ ಸ್ಮರಣ ಸಂಚಿಕೆಯನ್ನು ಡೈಯರ್‍ಗೆ ಅರ್ಪಿಸಲಾಯಿತು. ಭಾರತದಲ್ಲಿ ಈ ಹತ್ಯಾಕಾಂಡವು ಅತೀವ ದುಃಖ, ರೋಷವನ್ನು ಉಂಟುಮಾಡಿತು.

ಈ ಹತ್ಯಾಕಾಂಡವು ಭಾರತದ ಸ್ವಾತಂತ್ರ್ಯ ಚಳುವಳಿಗೆ ವೇಗೋತ್ಕರ್ಷಕವಾಗಿ ಪರಿಣಮಿಸಿ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಬ್ರಿಟೀಷರ ವಿರುದ್ಧದ 1920ರಲ್ಲಿ ನಡೆದ ಅಸಹಕಾರ ಸತ್ಯಾಗ್ರಹದಲ್ಲಿ ಹೆಚ್ಚಿನ ಉತ್ಸಾಹದಿಂದ ಜನರು ಪಾಲ್ಗೊಳ್ಳುವಂತಾಯಿತು. ನೊಬೆಲ್ ಪ್ರಶಸ್ತಿ ವಿಜೇತರಾದ ರವೀಂದ್ರನಾಥ ಠಾಗೋರ್ ಅವರು ಪ್ರತಿಭಟನೆಯೆಂದು ತಮ್ಮ ನೈಟ್ ಪದವಿಯನ್ನು ಚಕ್ರವರ್ತಿಗೆ ಹಿಂತಿರುಗಿಸಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಂಡಿಸಿದ ನಿರ್ಣಯದ ಮೇರೆಗೆ ಈ ಸ್ಥಳದಲ್ಲಿ ಒಂದು ಸ್ಮಾರಕವನ್ನು ನಿರ್ಮಿಸುವ ಸಲುವಾಗಿ 1920ರಲ್ಲಿ ಟ್ರಸ್ಟ್ ಒಂದನ್ನು ರಚಿಸಲಾಯಿತು. 1923ರಲ್ಲಿ ಇದಕ್ಕೆ ಬೇಕಾದ ಜಾಗವನ್ನು ಖರೀದಿಸಲಾಯಿತು. ಆ ಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಲಾಯಿತು. ಇದನ್ನು 1961ಏಪ್ರಿಲ್ 13ರಂದು ಅಂದಿನ ಪ್ರಧಾನಿ ಜವಹರಲಾಲ್ ನೆಹರು ಮತ್ತಿತರ ಮುಖಂಡರ ಸಮ್ಮುಖದಲ್ಲಿ ಭಾರತದ ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಉದ್ಘಾಟಿಸಿದರು.

ನಂತರ ಜ್ಯೋತಿಯೊಂದನ್ನು ಇಡಲಾಯಿತು. ಗುಂಡಿನಿಂದಾದ ರಂಧ್ರಗಳನ್ನು ಇಂದಿಗೂ ಅಲ್ಲಿನ ಗೋಡೆಗಳ ಮೇಲೆ, ಅಕ್ಕಪಕ್ಕದ ಕಟ್ಟಡಗಳ ಮೇಲೆ ನೋಡಬಹುದಾಗಿದೆ. ಬಹಳಷ್ಟು ಜನರು ಧುಮುಕಿದ ಅಲ್ಲಿನ ಬಾವಿಯನ್ನು ಕೂಡ ಸಂರಕ್ಷಿಸಿ, ಸ್ಮಾರಕವನ್ನಾಗಿ ಮಾಡಲಾಗಿದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


25 February 2025

ಮಾತು ೨


 ಹೆದರಿಸುವವರ ಮುಂದೆ

ನಮ್ಮ ಮಾತಾಗಲಿ ಕತ್ತಿ|

ಹಿರಿಯರ ಮುಂದೆ 

ನಮ್ಮ ನುಡಿಯಾಗಲಿ ಹತ್ತಿ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು


     

ಮಾತು..


 


ಮಾತು...


 ವೈರಿಗಳ ಮುಂದೆ 

ನಮ್ಮ ಮಾತಿಗಿರಲಿ ಗತ್ತು|

ಆತ್ಮೀಯರ ಮಂದೆ 

ನಮ್ಮ ಸೊಲ್ಲಾಗಲಿ ಮುತ್ತು

23 February 2025

ಕಸ್ತೂರಿ ಕಂಕಣ .ಪುಸ್ತಕ ಪರಿಚಯ.



 


ಕಸ್ತೂರಿ ಕಂಕಣ..


ಶಾ ಮಂ ಕೃಷ್ಣ ರಾಯರವರ ಸಂಪಾದಕತ್ವದ ತ ರಾ ಸು ಸಾಹಿತ್ಯ ಸಂಪದ ಸಂಪುಟ ಒಂದರ ಐತಿಹಾಸಿಕ ಕಾದಂಬರಿಗಳ ಸೆಟ್ ನಲ್ಲಿ ಮೂರು ಕಾದಂಬರಿಗಳು ಇವೆ. ಅದರಲ್ಲಿ  "ಕಸ್ತೂರಿ ಕಂಕಣ" ಕಾದಂಬರಿಯನ್ನು ಈ ವಾರ ಬಿಡುವಿನ ವೇಳೆಯಲ್ಲಿ ಓದಿದೆ.


ಚಿತ್ರದುರ್ಗದ ಮೇಲೆ ಸೇಡು ತೀರಿಸಿಕೊಳ್ಳಲು   ಸೀರ್ಯದವರು ಮತ್ತು ತರೀಕೆರೆಯವರು ಜೊತೆ ಸೇರಿ ಕುಟಿಲ ತಂತ್ರ ರೂಪಿಸಿ ಸೀರ್ಯದ ರಂಗಪ್ಪ ನಾಯಕನ ಮಗ ಕೃಷ್ಣಪ್ಪನಾಯಕನ ಜೊತೆ ಕಸ್ತೂರಿ ರಂಗಪ್ಪನ ಮಗಳ ಜೊತೆಯಲ್ಲಿ ಜಾತಕ ಕೂಡಿ ಬರದಿದ್ದರೂ  ಮದುವೆ ಮಾಡಿಸುತ್ತಾರೆ. ಇದರಲ್ಲಿ ತರೀಕೆರೆಯ ವಕೀಲ ವೆಂಕಪ್ಪಯ್ಯ ಸಹಜಾನಂದ ಸ್ವಾಮಿಯ ವೇಷ ಧರಿಸಿ ದುರ್ಗದ ನಕ್ಷೆ ಸಮೇತವಾಗಿ ರಹಸ್ಯ ಮಾಹಿತಿಗಳನ್ನು ಸೀರ್ಯ ಮತ್ತು ತರೀಕೆರೆಗೆ ರವಾನಿಸಿ ದುರ್ಗದ ಮೇಲೆ ಆಕ್ರಮಣ ಮಾಡಲು ಸಂಚು ರೂಪಿಸುತ್ತಾನೆ.

ಈ ಮದುವೆಯ ಮಾತುಕತೆ ಶುರುವಾದಾಗಿನಿಂದ  ದುರ್ಗದ  ಹಿತೈಷಿಯಾದ ಹಿರಿಯೂರಿನ ಕೆಂಚಣ್ಣ ನಾಯಕನಿಗೆ ಸೀರ್ಯದವರ ಮೇಲೆ ಅನುಮಾನವಿರುತ್ತದೆ ಈ ಕಾರಣದಿಂದ ಅವರ ಬೇಹುಗಾರರನ್ನು ಸೀರ್ಯದಲ್ಲಿ ಬಿಟ್ಟಿರುತ್ತಾನೆ.

ಇತ್ತ ಸೀರ್ಯದವರು ದುರ್ಗದ ಸೇನೆಯ ಗಮನ ಸೆಳೆಯಲು ಯಾವುದೇ ಸುಳಿವು ಕೊಡದೆ ಹಿರಿಯೂರಿನ ಮೇಲೆ ದಾಳಿ ಮಾಡುತ್ತಾರೆ.ಈ ಸಂದರ್ಭದಲ್ಲಿ ದುರ್ಗದವರು ತಮ್ಮ ಸೈನ್ಯವನ್ನು ತೆಗೆದುಕೊಂಡು ಇತ್ತ ಬಂದಾಗ ಇನ್ನೊಂದು ಕಡೆಯಿಂದ ತರೀಕೆರೆಯವರಿಂದ ದುರ್ಗದ ಮೇಲೆ ದಾಳಿ ನಡೆಸುವ ಯೋಜನೆ ಸಿದ್ದವಾಗಿರುತ್ತದೆ.ಇದರ ಜೊತೆಗೆ ದುರ್ಗದಲ್ಲಿರುವ ತಮ್ಮ ಕಡೆಯವರಿಂದ ಆದಷ್ಟು ದುರ್ಗವನ್ನು ನಾಶ ಮಾಡಲು ಹುನ್ನಾರ ಮಾಡಿರುತ್ತಾರೆ.ಇದರಲ್ಲಿ  ನೀರಿನ ಮೂಲಗಳಿಗೆ ವಿಷ ಬೆರೆಸುವುದು, ಪ್ರಸಾದ ರೂಪದಲ್ಲಿ ವಿಷಪ್ರಾಶನ ಮತ್ತು ಕಗ್ಗೊಲೆ ಮಾಡುವ ಮೂಲಕ ದುರ್ಗದಲ್ಲಿ ಸ್ಮಶಾನದ ವಾತಾವರಣ ನಿರ್ಮಿಸುವುದು ವಿರೋಧಿಗಳ ಸಂಚಾಗಿರುತ್ತದೆ.ಕೆಂಚಪ್ಪನಾಯಕ, ದುರ್ಗದ ಯುವರಾಜ ಸರ್ಜಾನಾಯಕ ,ಸುಬ್ಬರಾಯ ಶಾಸ್ತ್ರಿ ಮುಂತಾದ ನಿಷ್ಠಾವಂತ ಪ್ರಜೆಗಳ ಸಾಂಘಿಕ ಪ್ರಯತ್ನದಿಂದ ದುರ್ಗಕ್ಕೆ ಒದಗಿದ ಗಂಡಾಂತರ ನೀಗುತ್ತದೆ. ತಮ್ಮನ್ನು ನಂಬಿದ ಸಾಮಂತರನ್ನು ಕಸ್ತೂರಿ ರಂಗಪ್ಪ ನಾಯಕ ಅಭಯ ನೀಡಿ ಕಾಯುತ್ತಾನೆ. ಅದು ಹೇಗೆ ಎಂಬುದನ್ನು ನೀವು ಕಾದಂಬರಿ ಓದಿಯೇ ಅನುಭವಿಸಬೇಕು.

ಈ ಕಾದಂಬರಿಯ ಸಂಭಾಷಣೆಗಳು ನನಗೆ ಬಹಳ ಹಿಡಿಸಿದವು.ಅದರಲ್ಲೂ ಪ್ರತಿ ಪೇಜ್ ಗೆ ಒಂದಾದರೂ ಸಮಯೋಚಿತವಾದ ಗಾದೆಗಳನ್ನು ಬಳಕೆ ಮಾಡಿರುವುದು ನನ್ನ ಗಮನ ಸೆಳೆದ ಮತ್ತೊಂದು ಅಂಶ.ಪ್ರಸ್ತುತ ಚಿತ್ರದುರ್ಗ ಜಿಲ್ಲೆಯಲ್ಲಿ ವಾಸವಾಗಿರುವವರು ಮತ್ತು ಚಿತ್ರದುರ್ಗದ ಕೋಟೆ ಮತ್ತು ಜಿಲ್ಲೆಯ ವಿವಿಧ ತಾಲ್ಲೂಕುಗಳ  ಬಗ್ಗೆ ಮಾಹಿತಿ ಇರುವವರಿಗೆ ಈ ಕಾದಂಬರಿ ಓದುವಾಗ ಆ ಸ್ಥಳಗಳಲ್ಲಿ ನಮ್ಮ ಕಣ್ಮುಂದೆಯೇ  ಘಟನೆಗಳು ನಡೆಯುತ್ತಿವೆಯೇನೋ ಎಂಬಂತೆ ಚಿತ್ರಿಸಿದ್ದಾರೆ ತ ರಾ ಸು ರವರು. 

ಇದೇ ಸಂಪುಟದಲ್ಲಿರುವ ಮತ್ತೆರಡು ಕಾದಂಬರಿಗಳಾದ ಕಂಬನಿಯ ಕುಯಿಲು ಮತ್ತು ರಾಜ್ಯ ದಾಹ ಓದಿ ಮತ್ತೆ ನಿಮ್ಮೊಂದಿಗೆ ಹಂಚಿಕೊಳ್ಳುವೆ.

ರಿಯಾಯಿತಿ ದರದಲ್ಲಿ ಪುಸ್ತಕ ನೀಡಿದ ಆತ್ಮೀಯರಾದ ಎಂ ವಿ ಶಂಕರಾನಂದ ರವರನ್ನು ಸಂದರ್ಭದಲ್ಲಿ ಸ್ಮರಿಸುತ್ತೇನೆ.



ಸಿಹಿಜೀವಿ ವೆಂಕಟೇಶ್ವರ

ತುಮಕೂರು


ಸಡಿಲಿನ ಸಿಂಹದ ಮರಿ ಛಾವ


 ಸಡಿಲಿನ ಸಿಂಹದ ಮರಿ  ಛಾವ 


"ಜೈ ಭವಾನಿ","ಹರ ಹರ ಮಹಾದೇವ" "ಜಗದಂಬಾ" ಈ ಘೋಷಣೆಗಳು ಚಿತ್ರ ಮಂದಿರದಿಂದ ಹೊರಬಂದಾಗಲೂ ನನ್ನ  ಕಿವಿಯಲ್ಲಿ ಮಾರ್ಧನಿಸುತ್ತಿದ್ದವು.

ಪ್ರೇಮಿಗಳ ದಿನ ದೇಶಪ್ರೇಮಿಗಳಿಗಾಗಿ ಮಾಡಿದ ಛಾವ ಚಲನಚಿತ್ರ ನೋಡಿದೆ.

ಬಹಳ ದಿನಗಳ ನಂತರ ಒಂದು ಉತ್ತಮ ಐತಿಹಾಸಿಕ ಚಿತ್ರ ನೋಡಿದ ಸಮಾಧಾನವಾಯ್ತು.ಇದು   ಹಿಂದಿ ಭಾಷೆಯ ಐತಿಹಾಸಿಕ ಆಕ್ಷನ್ ಚಿತ್ರವಾಗಿದ್ದು  ಮರಾಠಾ ಸಾಮ್ರಾಜ್ಯದ ಶಿವಾಜಿಯ ಮಗ   ಸಂಭಾಜಿಯ ಜೀವನವನ್ನು ಆಧರಿಸಿದೆ.  ವಿಕ್ಕಿ ಕೌಶಲ್ ಈ ಚಿತ್ರದಲ್ಲಿ ಛತ್ರಪತಿ ಸಂಭಾಜಿ ಪಾತ್ರದಲ್ಲಿ ನಟಿಸಿಲ್ಲ ಬದಲಿಗೆ ಜೀವಿಸಿದ್ದಾರೆ. ಶಿವಾಜಿ ಸಾವಂತ್ ಅವರ ಮರಾಠಿ ಕಾದಂಬರಿ ಆಧಾರಿತ ಈ ಚಿತ್ರವನ್ನು  ಲಕ್ಷ್ಮಣ್ ಉಟೇಕರ್ ಬಹಳ ಅಚ್ಚುಕಟ್ಟಾಗಿ  ನಿರ್ದೇಶನ ಮಾಡಿದ್ದಾರೆ.


ಶಿವಾಜಿಯ ಮರಣದ ನಂತರ  ಮೊಘಲ್ ಚಕ್ರವರ್ತಿ ಔರಂಗಜೇಬನ ಆಸ್ಥಾನದಲ್ಲಿ  ಸಂತೋಷದ ಪಾರ್ಟಿ ಮಾಡುವ ಚರ್ಚೆಯಿಂದ ಆರಂಭವಾಗುವ ಸಿನಿಮಾ ಕುತಂತ್ರದಿಂದ ಸಂಭಾಜಿಯ ಸೆರೆಹಿಡಿದು ಹಿಂಸೆ ನೀಡುವ ದೃಶ್ಯಗಳಿಂದ ಚಿತ್ರ ಮುಕ್ತಾಯವಾಗುತ್ತದೆ.ಚಿತ್ರದ ಮಧ್ಯ ಮಧ್ಯ ಮರಿ ಸಿಂಹದ ಘರ್ಜನೆ, ತಂತ್ರಗಳು ಮತ್ತು ಬುದ್ಧಿವಂತಿಕೆಯಿಂದ ಜನರು ಥಿಯೇಟರ್ ನಲ್ಲಿ ಶಿಳ್ಳೆ ಚಪ್ಪಾಳೆ ಹೊಡೆಯುತ್ತಾರೆ. ಕೊನೆಯ ಇಪ್ಪತ್ತು ನಿಮಿಷಗಳು ಪ್ರೇಕ್ಷಕರ ಕಣ್ಣಾಲಿಗಳು ತೇವವಾಗುತ್ತವೆ. ಶಿವಾಜಿ ಮರಣದ ನಂತರ ಪ್ರಮುಖ ಮೊಘಲ್ ಆಡಳಿತ ಮತ್ತು ವಾಣಿಜ್ಯ ಕೇಂದ್ರವಾದ ಬುರ್ಹಾನ್‌ಪುರದ ಮೇಲೆ  ಹಠಾತ್ ಸಂಭಾಜಿ ದಾಳಿ ಮಾಡಿ ಅಲ್ಲಿನ ಸಂಪತ್ತನ್ನು ವಶಪಡಿಸಿಕೊಳ್ಳುವಾಗ ಯುದ್ಧಭೂಮಿಯಲ್ಲಿ ಸಿಲುಕಿದ  ಶತೃಪಡೆಯ  ಪುಟ್ಟ ಮಗುವನ್ನು ಅದರ ತಾಯಿಯ ಮಡಿಲಿಗೆ ಸುರಕ್ಷಿತವಾಗಿ ತಲುಪಿಸಿ ಯುದ್ದವನ್ನು ಮುಂದುವರೆಸಿದ ಸಂಭಾಜಿಯ ಬಗ್ಗೆ ನನಗೆ ಬಹಳ ಹೆಮ್ಮೆ ಎನಿಸಿತು.

ಇದೇ  ಯುದ್ಧದಲ್ಲಿ ಸಂಭಾಜಿ ಸಿಂಹವಿರುವ ಬೋನಿಗೆ ಬಿದ್ದಾಗ  ತನ್ನ ಬರಿ ಕೈಗಳಿಂದಲೇ ಅದನ್ನು ಕೊಂದು ಅಸಲಿ ಛಾವ ಅಂದರೆ ಸಿಂಹದ ಮರಿಯಾಗಿ ಅಬ್ಬರಿಸಿತ್ತಾ ಬಂದು "ನಾನು ಘರ್ಜಿಸೋಲ್ಲ, ಬೇಟೆಯಾಡ್ತೇನೆ" ಎಂಬ ಡೈಲಾಗ್ ಗೆ ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಹೊಡೆದುಬಿಟ್ಟರು.

 ಔರಂಗಜೇಬನ ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ ತಣ್ಣನೆಯ ಕ್ರೌರ್ಯ ಹೊರ ಹಾಕುತ್ತಾ ಸಂಭಾಜಿಯನ್ನು ಸೋಲಿಸದ ಹೊರತು ತನ್ನ ಕಿರೀಟಧಾರಣೆ ಮಾಡಲಾರೆ ಎಂದು ಶಪಥ ಮಾಡಿದ. ತನ್ನ ಲಕ್ಷಗಟ್ಟಲೆ ಸೈನ್ಯದ  ಮುಂದೆ ಸಾವಿರ ಲೆಕ್ಕಾಚಾರದ ಮರಾಠರ ಸೈನ್ಯ ಲೆಕ್ಕವಿಲ್ಲ ಎಂದು ಹಗುರವಾಗಿ ಯೋಚಿಸಿ ದಖ್ಖನ್ ಮೇಲೆ ದಾಳಿ ಮಾಡಲು ಆದೇಶ ಮಾಡುತ್ತಾನೆ. ಶಿವಾಜಿಯ ಕಾಲದಿಂದಲೂ ಗೆರಿಲ್ಲಾ ಯುದ್ಧ ತಂತ್ರದಲ್ಲಿ ಪಳಗಿದ ಮರಾಠರು ಛತ್ರಪತಿ ಸಂಭಾಜಿಯ ನೇತೃತ್ವದಲ್ಲಿ ಮೊಘಲರ ಸೇನೆಯನ್ನು ಸೋಲಿಸಿ ಹಿಮ್ಮೆಟ್ಟಿಸುತ್ತಾರೆ.

  ಸಂಭಾಜಿಯನ್ನು  ಪತ್ನಿ ಯೇಸುಬಾಯಿ ಆಗಿ  ರಶ್ಮಿಕಾ ಮಂದಣ್ಣ ಉತ್ತಮವಾಗಿ ಅಭಿನಯಿಸಿದ್ದಾರೆ. ಎಲ್ಲಾ ಕಡೆ ಇರುವಂತೆ  ಮರಾಠಾ ಆಸ್ಥಾನದಲ್ಲಿ ಗುಂಪುಗಾರಿಕೆ, ಒಳಸಂಚು ಬೆಳೆಯುತ್ತದೆ. ಸಂಭಾಜಿಯ ಮಲಸಹೋದರ ರಾಜಾರಾಮ್‌ನನ್ನು ಆಡಳಿತಗಾರನನ್ನಾಗಿ ಪ್ರತಿಷ್ಠಾಪಿಸಲು ಪಿತೂರಿಗಳು ನಡೆಯುತ್ತಲೇ ಇರುತ್ತವೆ.  ಮೊಘಲ್ ರಾಜಕುಮಾರ ಮಿರ್ಜಾ ಅಕ್ಬರ್ ಔರಂಗಜೇಬನ ವಿರುದ್ಧ ದಂಗೆ ಏಳಲು ಸಂಭಾಜಿಯ ಸಹಾಯವನ್ನು ಕೋರುವಾಗ   ಮಲತಾಯಿ ಸೋಯಾರಾಬಾಯಿ ಮತ್ತು ರಾಜಕುಮಾರನ ಜೊತೆಯಲ್ಲಿ   ಪಿತೂರಿಯ ಭಾಗವಾದವರನ್ನು   ಆನೆಯ ಕಾಲಿನಿಂದ ತುಳಿಸಿ ಸಾಯಿಸುವ  ದೃಶ್ಯಗಳನ್ನು ನೋಡಿದಾಗ ಮರಾಠರು ಮೋಸಗಾರರಿಗೆ ಕರುಣೆಗೆ ಅವಕಾಶವಿಲ್ಲದೇ  ತಕ್ಕ ಶಿಕ್ಷೆಗೆ ಗುರಿಪಡಿಸುತ್ತಿದ್ದರು ಎಂಬುದು ತಿಳಿದುಬರುತ್ತದೆ.  

ಔರಂಗಜೇಬನು ಮತ್ತೆ ದಖ್ಖನ್ ಕಡೆ ಯುದ್ಧಕ್ಕೆ ಬರುವ ಸುದ್ದಿ ತಿಳಿದು ನಿರ್ಣಾಯಕ ಯುದ್ದದಲ್ಲಿ ಸಂಗಮೇಶ್ವರದಲ್ಲಿ ಕೇವಲ ನೂರರ ಲೆಕ್ಕದಲ್ಲಿ ಇರುವ ಸೈನಿಕರಿಗೆ ಛತ್ರಪತಿಯು ಹುರಿದುಂಬಿಸುವ ಮಾತುಗಳು ಪ್ರೇಕ್ಷಕರ ಮೈ ನವಿರೇಳಿಸುತ್ತದೆ.ನಾವೂ ಅವರ ಜೊತೆಯಲ್ಲಿ ಹರ ಹರ ಮಹಾದೇವ್ ,ಜೈ ಭವಾನಿ ಎನ್ನಬೇಕು ಎಂಬ ಭಾವ ಮೂಡುತ್ತದೆ.

 ಸಂಭಾಜಿಯ ಮೇಲೆ ಸಾವಿರದ ಲೆಕ್ಕದಲ್ಲಿ ಮುತ್ತಿಗೆ ಹಾಕಿದ ಮೊಘಲರ ಸೈನ್ಯಕ್ಕೆ ಮರಾಠರಲ್ಲಿ ಕೆಲ ದ್ರೋಹಿ ಬಂಧುಗಳು ರಹಸ್ಯ ಮಾಹಿತಿ ನೀಡಿದ್ದು ಕಂಡು ಸಂಭಾಜಿ ಮರುಗುತ್ತಾನೆ.

ಯುದ್ದದಲ್ಲಿ ಗಾಯಗೊಂಡ ಸಂಭಾಜಿಯನ್ನು ಸರಪಳಿ ಹಾಕಿ ಬಂಧಿಸಿ ಅವನೊಂದಿಗೆ ಅವನ ಗೆಳೆಯ ಕವಿ ಕಲಾಷ್ ನನ್ನ ಚಿತ್ರ ಹಿಂಸೆ ನೀಡಿ ಮತಾಂತರ ಮಾಡಲು ಬಲವಂತ ಮಾಡುವಾಗ ಸಂಭಾಜಿಯು ಪ್ರತಿರೋಧ ತೋರಿದ ರೀತಿಯನ್ನು ಚೆನ್ನಾಗಿ ಚಿತ್ರಿಸಲಾಗಿದೆ. ಸಂಭಾಜಿಯ ಕಣ್ಣುಗಳನ್ನು ಕಾದ ಕಬ್ಬಿಣದ ಕೆಂಪನೆಯ ಸರಳುಗಳಿಂದ ಕೀಳುವಾಗ ಸಂಕಟವಾಗುತ್ತದೆ. ಅವರ ಉಗುರು ಕೀಳುತ್ತಾರೆ, ಗಾಯಕ್ಕೆ ಉಪ್ಪು ಕಾರ ಹಾಕಿ ಹಿಂಸಿಸುವಾಗ ಸಂಭಾಜಿಯ  ನರಳದೇ  ಒಂದೇ ಪದ ಉಚ್ಚಾರ ಮಾಡುತ್ತಾರೆ ಅದೇ "ಜಗದಂಬಾ" 

ಕೊನೆಗೆ ನಾಲಿಗೆ ಕೀಳಿಸಿದಾಗಲೂ ಅಸ್ಪಷ್ಟವಾಗಿ ತಾಯಿ ನಾಮ ಸ್ಮರಣೆ ಮಾಡುತ್ತಾನೆ ಸಂಭಾಜಿ!

ಹೀಗೆ ಹಿಂಸಿಸುವಾಗ ದಖ್ಖನ್ ನಿಂದ ಒಂದು ಸುದ್ದಿ ಬರುತ್ತದೆ. ಅದು  ಯೇಸುಬಾಯಿ ರಾಜಾರಾಮ್ ನನ್ನ ಛತ್ರಪತಿ ಸ್ಥಾನದಲ್ಲಿ ಪ್ರತಿಷ್ಟಾಪಿಸಿದ್ದಾರೆ  ಎಂಬುದನ್ನು ತಿಳಿದಾಗ ಸಂಭಾಜಿಗೆ ನೋವಿನಲ್ಲೂ ನಲಿವಾದರೆ.ಔರಂಗಜೇಬ್ ನಿಂತಲ್ಲೇ ಕುಸಿಯುತ್ತಾನೆ.


ಒಟ್ಟಾರೆ ಛಾವ ಒಂದು ಐತಿಹಾಸಿಕವಾದ ಸ್ವರಾಜ್ಯ ಕಲ್ಪನೆಯನ್ನು ಎತ್ತಿ ಹಿಡಿಯುವ ಚಿತ್ರ  ದೇಶಭಕ್ತಿ ಸಾರುವ ಇಂತಹ ಚಿತ್ರವನ್ನು ಎಲ್ಲರೂ ನೋಡಬಹುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


ಶತೃಗಳ ತಲೆ ತೆಗೆಯುವ ಬದಲಿಗೆ ನಮ್ಮ ತಲೆಯಿಂದ ಅವರನ್ನು ತೆಗೆಯೋಣ.


 


ಶತೃಗಳ ತಲೆ ತೆಗೆಯುವ ಬದಲಿಗೆ 

ನಮ್ಮ ತಲೆಯಿಂದ ಅವರನ್ನು ತೆಗೆಯೋಣ.


ಮೊನ್ನೆ ಮಕ್ಕಳಿಗೆ ಶಾಲಾ ಪ್ರಾರ್ಥನೆಯ ಅವಧಿಯಲ್ಲಿ ಪತ್ರಿಕೆಯನ್ನು ಓದಿಸುವಾಗ ಅಂದಿನ ಸುಭಾಷಿತ ನನ್ನನ್ನು ಬಹಳ ಆಕರ್ಷಿಸಿತು ಅದು ಹೀಗಿತ್ತು.

"ನಮ್ಮ ಶತ್ರುವಿನ ಬಗ್ಗೆ ಸೇಡು ತೀರಿಸಿಕೊಳ್ಳಬೇಕು ಎಂದು ನಿಮಗನಿಸಿದರೆ ಶತೃವಿನ   ತಲೆ ತೆಗೆಯ ಬೇಕಿಲ್ಲ.ಅವರನ್ನು ನಮ್ಮ ತಲೆಯಿಂದ ತೆಗೆದರೆ ಸಾಕು" ಹೌದಲ್ಲವಾ? ಇದರ ಬಗ್ಗೆ ಮಕ್ಕಳಿಗೆ ಬಿಡಿಸಿ ಹೇಳಿದೆ.ಇದೇ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಗೆಳೆಯರೊಬ್ಬರು ಕಳಿಸಿದ ಸಂದೇಶ ಪೂರಕವಾಗಿದೆ.

ಜೀವನದಲ್ಲಿ ಕೆಲವರನ್ನು ನಾವೇ ಮೊದಲು ಕ್ಷಮಿಸಿಬಿಡಬೇಕು.

ಅವರು ಕ್ಷಮೆಗೆ ಅರ್ಹರು ಎಂದಾಗಲೀ, ಅವರು ಮಾಡಿದ ತಪ್ಪು ಕ್ಷುಲ್ಲಕ ಎಂದಾಗಲೀ ಅಲ್ಲ.

ಅವರು ಕ್ಷಮೆಗೆ ಅರ್ಹರು ಎಂಬುದಕ್ಕಿಂತ ನಮ್ಮ ಮನಃಶಾಂತಿ, ನೆಮ್ಮದಿ, ಸಮಾಧಾನ ಬಹಳ ಮುಖ್ಯ.

ಒಮ್ಮೆ ಅಂಥವರನ್ನು ಕ್ಷಮಿಸಿಬಿಟ್ಟರೆ ಅವರು ತಮ್ಮ ಪಾಡಿಗೆ ಹೋಗುತ್ತಾರೆ. ನಮ್ಮ ಪಾಡಿಗೆ ನಾವಿರಬಹುದು.

ಒಂದು ವೇಳೆ ಕ್ಷಮಿಸಲಿಲ್ಲ ಎಂದುಕೊಳ್ಳಿ. ಅವರ ವಿರುದ್ಧ ಇನ್ನೂ ಹಗೆ, ವೈರತ್ವ ಮುಂದುವರಿಸಿದರೆ ಏನಾಗುವುದೆಂದರೆ ನಾವು ಅವರ ಬಗ್ಗೆ ಅನಗತ್ಯ ಯೋಚಿಸಬೇಕಾಗುತ್ತದೆ.*

ನಮ್ಮ ಆಲೋಚನೆಯಲ್ಲಿ ಅವರು ನೆಲೆಸುತ್ತಾರೆ. ಅವರ ಬಗ್ಗೆ ಯೋಚಿಸಿದಾಗಲೆಲ್ಲ ನಮ್ಮ ಮೂಡು ಹಾಳಾಗುತ್ತದೆ. ಮನಸ್ಸು ಕದಡಿದ ನೀರಿನಂತಾಗುತ್ತದೆ. ಇದರಿಂದ ನಮ್ಮ ಗುಣಮಟ್ಟದ ಸಮಯವೂ ಇಂಥ ಕ್ಷುಲ್ಲಕ ಸಂಗತಿಗಳಿಗಾಗಿ ಹಾಳಾಗುತ್ತದೆ.

ಹೀಗೆ ಮಾಡುವುದರಿಂದ ಅವರದ್ದೇನೂ ಹೋಗುವುದಿಲ್ಲ. ನಮ್ಮ ಸಮಯ, ನೆಮ್ಮದಿಯೇ ಹಾಳಾಗುತ್ತದೆ.

ಅದರ ಬದಲು ಅಂಥ ವ್ಯಕ್ತಿಗಳನ್ನು ಕ್ಷಮಿಸಿ ಬಿಡಬೇಕು. ಅಷ್ಟರಮಟ್ಟಿಗೆ ನಮ್ಮ ಮನಸ್ಸು ನಿರ್ಮಲವಾಗುತ್ತದೆ, ಹಗುರವಾಗುತ್ತದೆ. ನಾವು ಆ ಹಾಳು ಯೋಚನೆಗಳಿಂದ ದೂರಾಗುತ್ತೇವೆ.

ಅಷ್ಟಕ್ಕೂ ಇಂಥ ಸಂಗತಿಗಳಲ್ಲೇ ಕಾಲ ಕಳೆಯಲು ನಾವೇನು ಸಾವಿರಾರು ವರ್ಷಗಳ ಕಾಲ ಇಲ್ಲಿ ಗೂಟ ಹೊಡೆದುಕೊಂಡು ಇರುತ್ತೇವಾ? ಕೆಲವು ವ್ಯಕ್ತಿ, ಸಂಗತಿ, ಬದುಕು ವಿಷಯಗಳನ್ನು ಅಲ್ಲಲ್ಲಿಯೇ ಬಿಟ್ಟು ಮುಂದಕ್ಕೆ ಹೋಗುತ್ತಿರಬೇಕು. ನಮ್ಮ ನೆಮ್ಮದಿಗೆ ಅದು ಅನಿವಾರ್ಯ.ಅಲ್ಲವೆ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

21 February 2025

ಬ್ಯಾಂಕ್ ಗಳು ಗ್ರಾಹಕ ಸ್ನೇಹಿಯಾಗುವುದು ಯಾವಾಗ?

 




 ಕೆಲ  ಬ್ಯಾಂಕುಗಳು ಗ್ರಾಹಕ ಸ್ನೇಹಿಯಲ್ಲ.ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡೇತರ ಸಿಬ್ಬಂದಿಯಿಂದ ಕನ್ನಡ ಮಾತನಾಡದೇ ಅನ್ಯಭಾಷೆ ಮಾತನಾಡುವ ಪರಿಣಾಮ ಅಲ್ಲಲ್ಲಿ ಗ್ರಾಹಕ ಮತ್ತು ಬ್ಯಾಂಕ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದನ್ನು ನೋಡುತ್ತೇವೆ. ಅದರ ಜೊತೆಗೆ  ಸೇವೆಗಳನ್ನು ನೀಡುವಾಗ ಅನವಶ್ಯಕ ವಿಳಂಬ ಮಾಡುವುದು. ಗ್ರಾಹಕರೊಂದಿಗೆ ಸೌಜನ್ಯವಾಗಿ ವರ್ತಿಸದಿರುವುದು ಅಲ್ಲಲ್ಲಿ ಕಂಡು ಬರುತ್ತವೆ. ನಿನ್ನೆ ದಿನ ಕ್ಯಾತ್ಸಂದ್ರ ದ ಕೆನರಾ ಬ್ಯಾಂಕ್ ಶಾಖೆಗೆ ಹಣ ಪಾವತಿ ಮಾಡಲು ಹೋದಾಗ ಹಣ ಪಾವತಿ ಸ್ಲಿಪ್ ಅನ್ಯ ರಾಜ್ಯದ ಭಾಷೆ ಪ್ರಿಂಟ್ ಇರುವುದನ್ನು ನೀಡಿದರು. ಕನ್ನಡ ಮತ್ತು ಇಂಗ್ಲೀಷ್ ಮುದ್ರಣದ ಸ್ಲಿಪ್ ಕೊಡಿ ಎಂದಾಗ ಅಲ್ಲಿಯ ಸಿಬ್ಬಂದಿ ಉಡಾಫೆಯಿಂದ ಉತ್ತರಿಸಿದರು.  ನಾನು ಮ್ಯಾನೇಜರ್ ಭೇಟಿ ಮಾಡಿ ವಿಷಯ ಮುಟ್ಟಿಸಿದಾಗ ಅವರು ಕ್ಷಮೆ ಕೇಳಿ ಕನ್ನಡ ಚಲನ್ ಕೊಟ್ಟರು. ಬೇಕಾಬಿಟ್ಟಿ ಸರ್ವೀಸ್ ಚಾರ್ಜ್ ಹಾಕುವ  ಈ ಬ್ಯಾಂಕ್ ಗಳು ಸೇವೆ ನೀಡುವಲ್ಲಿ ಅಸಡ್ಡೆ ತೋರುವ ತನ್ನ ಸಿಬ್ಬಂದಿಗಳಿಗೆ  ಯಾಕೆ ಬುದ್ದಿ ಕಲಿಸಲ್ಲ. ಕೆಲ ಬ್ಯಾಂಕ್  ಸಿಬ್ಬಂದಿ ಯಾಕೆ ಹೀಗೆ?ಇವರು ಗ್ರಾಹಕ ಸ್ನೇಹಿ ಆಗುವುದು ಯಾವಾಗ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 

20 February 2025

ಕಳೆದು ಹೋದ ಪತ್ರಗಳು..

 




ಆ ಪತ್ರಗಳು ಈಗ ಕಳೆದುಹೋಗಿವೆ. ಸ್ಮಾರ್ಟ್ ಪೋನ್, ಲ್ಯಾಪ್‌ಟಾಪ್, ಸಿಸ್ಟಮ್ ಯುಗದಲ್ಲಿ ಬರೆಯುವ ಕಲೆ ಕ್ರಮೇಣವಾಗಿ ಕಡಿಮೆಯಾಗುತ್ತಿದೆ.  ತೀರ್ಥರೂಪ ತಂದೆಯವರಿಗೆ...ಉ. ಕು .ಸಾಂಪ್ರತ ಎಂಬ  ಯೋಗಕ್ಷೇಮದ ವಾಕ್ಯಗಳ ಮೂಲಕ,ನಲ್ಮೆಯ ಗೆಳಯ/ ಗೆಳತಿಗೆ ಸವಿನೆನಪುಗಳು ಮುಂತಾದ ವಾಕ್ಯಗಳಿಂದ  ಆರಂಭವಾಗುತ್ತಿದ್ದ  ಆ ಪತ್ರಗಳು  ಹಿರಿಯರ ಪಾದಗಳಲ್ಲಿ ಆಶೀರ್ವಾದ ಬೇಡುತ್ತಲೋ ನಲ್ಲನಲ್ಲೆಯರ ಸಿಹಿಮುತ್ತುಗಳ ನಿರೀಕ್ಷೆಯಲ್ಲಿ ಕೊನೆಗೊಳ್ಳುತ್ತಿದ್ದವು.  ನವಜಾತ ಶಿಶುವಿನ ಸುದ್ದಿ, ತಾಯಿಯ ಅನಾರೋಗ್ಯದ ನೋವು, ಹಣವನ್ನು ಕಳುಹಿಸುವ ಮನವಿ, ಮತ್ತು ವಿಫಲವಾದ ಬೆಳೆಗಳಿಗೆ ಕಾರಣಗಳು...! ಆ ಸರಳ "ನೀಲಿ ಮತ್ತು ಹಳದಿ  ಕಾಗದದ ಹಾಳೆ"ಯಲ್ಲಿ ನಮ್ಮ ಮನದ  ಭಾವನೆಗಳನ್ನು ಬೇರೆಡೆ ಇರುವ ನಮ್ಮ ಬಂಧುಗಳ ಜೊತೆಯಲ್ಲಿ ಹಂಚಿಕೊಳ್ಳುತ್ತಿದ್ದೆವು. 

ಯುವ ವಧು  ತನಗೆ ಬಂದ ಪತ್ರವನ್ನು ಎದೆಗಪ್ಪಿಕೊಂಡು ಏಕಾಂತದಲ್ಲಿ ಅದನ್ನು  ಓದಲು ಓಡಿಹೋಗುತ್ತಿದ್ದಳು.ಕಣ್ಣೀರಿನಿಂದ ತುಂಬಿದ ಕಣ್ಣುಗಳು. ಅದು ತಾಯಿಯ ಭರವಸೆ, ತಂದೆಯ ಬೆಂಬಲ, ಮಕ್ಕಳ ಭವಿಷ್ಯ ಮತ್ತು ಹಳ್ಳಿಯ ಹೆಮ್ಮೆ ಹೀಗೆ ಪತ್ರಗಳಲ್ಲಿ ಎಲ್ಲವೂ ಅಡಗಿರುತ್ತಿದ್ದವು.

 "ಪೋಸ್ಟ್‌ಮ್ಯಾನ್ ತಂದ  ಪತ್ರವನ್ನು ಅನಕ್ಷರಸ್ಥರಿಗೆ ಕೊಟ್ಟರೆ   ಯಾ‌‌‌ರಾದರೂ ಅದನ್ನು ಗಟ್ಟಿಯಾಗಿ ಓದುತ್ತಿದ್ದರು. ಅನಕ್ಷರಸ್ಥರು ಸಹ ಆ ಪತ್ರಗಳನ್ನು  ಮತ್ತೆ ಮತ್ತೆ ಸ್ಪರ್ಶಿಸುತ್ತಾ, ಒಳಗೆ ಬರೆದ ಭಾವನೆಗಳನ್ನು ಅನುಭವಿಸಲು ಪ್ರಯತ್ನಪಡುತ್ತಿದ್ದರು!

ಈಗ ಒಂದು ಬೆರಳು ಪರದೆಯ ಮೇಲೆ ಸ್ಕ್ರಾಲ್ ಮಾಡುತ್ತಾ ಬರೆಯುವ ಯಾಂತ್ರಿಕ ಬರಹಗಳಿಗೆ ಹೃದಯ ಬೆಸೆಯುವ ಶಕ್ತಿಗಿಂತ  ಹೃದಯಗಳನ್ನು ಮುರಿಯುತ್ತವೆಯೇನೋ ಎಂಬ ಭಾವನೆ ಬರುತ್ತದೆ. ಪತ್ರಗಳನ್ನು ಹತ್ತಾರು ವರ್ಷ ಕಾಪಿಟ್ಟುಕೊಂಡು ಮತ್ತೆ ನೋಡುತ್ತಾ ಓದುತ್ತಾ ಸಂಭ್ರಮಿಸುವವರು ಬಹಳ ಇದ್ದೇವೆ. ಈ ಆಧುನಿಕ ಯುಗದಲ್ಲಿ ಎಂತಹ ಭಾವನೆಗಳಿರುವ ಬರಹವಾದರೂ  ಫೋನ್‌ನಲ್ಲಿ  ಸ್ಟೋರೇಜ್ ಇಲ್ಲದಿದ್ದರೆ ತಕ್ಷಣವೇ ಡಿಲೀಟ್ ಭಾಗ್ಯ ಲಭಿಸುತ್ತದೆ. ಭಾರತದ ಹೆಮ್ಮೆಯ ಪೋಸ್ಟಲ್ ಡಿಪಾರ್ಟ್‌ಮೆಂಟ್ ‌ನ ಹಳದಿ ಮತ್ತು   ನೀಲಿ ಕಾಗದಗಳ ನಂಟು ನನಗಂತೂ ಪದೇ ಪದೇ ನೆನಪಾಗುತ್ತದೆ. ನಿಮಗೆ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 

ದುಬಾರಿ ಬೆಲೆಯ ರೂಬಿ ರೋಮನ್ ದ್ರಾಕ್ಷಿ!


 


ದುಬಾರಿ ಬೆಲೆಯ   ರೂಬಿ ರೋಮನ್ ದ್ರಾಕ್ಷಿ! 

 ದ್ರಾಕ್ಷಿ ದರ ಕೆ.ಜಿಗೆ 8 ಲಕ್ಷ ರೂ.! ದುಬಾರಿ ದ್ರಾಕ್ಷಿಯನ್ನು ಕೊಪ್ಪಳ  ಭಾಗದ ರೈತರು ಕಣ್ಣುಂಬಿಕೊಳ್ಳುವ  ಸದುದ್ದೇಶದಿಂದ ಜಿಲ್ಲಾ ತೋಟಗಾರಿಕೆ ಇಲಾಖೆ ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದೆ.


ಶಿವರಾತ್ರಿ ಅಂಗವಾಗಿ ಫೆ.23ರಿಂದ ನಗರದಲ್ಲಿ ನಡೆಯಲಿರುವ 'ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ' ದುಬಾರಿ ಬೆಲೆಯ ದ್ರಾಕ್ಷಿಗೆ ವೇದಿಕೆ ಒದಗಿಸಲಿದೆ. ಹಣ್ಣುಗಳ ಪ್ರದರ್ಶನ ವೇಳೆ ಸದಾ ಒಂದಲ್ಲ ಒಂದು ಹೊಸತನದ ಮೂಲಕ ಗಮನ ಸೆಳೆಯುತ್ತಿರುವ ಜಿಲ್ಲಾ ತೋಟಗಾರಿಕೆ ಇಲಾಖೆ, ಈ ಬಾರಿ ಜಪಾನ್ ಮೂಲದ ರೂಬಿ ರೋಮನ್ ದ್ರಾಕ್ಷಿಯನ್ನು ಪ್ರದರ್ಶಿಸಲು ಸಿದ್ದತೆ ನಡೆಸಿದೆ. ಪ್ರಸಕ್ತ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಕಾಲು ಕೆ.ಜಿ ದ್ರಾಕ್ಷಿ ಮಾತ್ರ ನೋಡಲು ಸಿಗಲಿದೆ.


ರೂಬಿ ರೋಮನ್ ವಿಶೇಷವೆಂದರೆ

ಜಪಾನ್ ದೇಶದಲ್ಲಿ ಸಾಮಾನ್ಯವಾಗಿ ಬೆಳೆಯುವ ವಿಶಿಷ್ಟ ತಳಿಯ ದ್ರಾಕ್ಷಿಯ ಹೆಸರೇ ರೂಬಿ ರೋಮನ್.ಆಕರ್ಷಕ ಕೆಂಪು ಬಣ್ಣದಿಂದ ಕೂಡಿದೆ. ವಿಟೀಸ್ ಲ್ಯಾಬೂನ್ಯನಾ ಬೇಲಿ ಈ ಹಣ್ಣಿನ ವೈಜ್ಞಾನಿಕ ಹೆಸರು. ಜಪಾನ್ ದೇಶದಲ್ಲಿ 2008ರ ವೇಳೆ ಈ ಹಣ್ಣಿನ ಬೆಲೆ 700 ಗ್ರಾಂಗೆ 1 ಲಕ್ಷ ರೂ. ವರೆಗೆ ಇತ್ತು. ವರ್ಷದಿಂದ ವರ್ಷಕ್ಕೆ ಖ್ಯಾತಿ ಪಡೆದು ಬೆಲೆ ಗಗನಮುಖ ಮಾಗಿದೆ. ಸದ್ಯ ಕೆ.ಜಿಗೆ 8 ಲಕ್ಷ ರೂ. ವರೆಗೆ ಬೆಲೆಯಿದೆ.


13 February 2025

ನೀರ್ ಕುಡಿಯೋಣ..


 


ಬೇರೆಯರಿಗೆ ನೀರ್ ಕುಡ್ಸೋದ್ ಬಿಟ್ಟು ನಾವೂ ನೀರ್ ಕುಡಿಯೋಣ!



ಕೆಲವರು ಮಾತನಾಡುತ್ತಾ "ಅವ್ನಿಗೆ  ಚೆನ್ನಾಗಿ ನೀರ್ ಕುಡ್ಸಿದಿನಿ ನೋಡು" ಎಂದು ಜಂಭ ಕೊಚ್ಚಿಕೊಳ್ಳುವದನ್ನು ಕಂಡಿದ್ದೇವೆ.ಬೇರೆಯವರಿಗೆ ನೀರು ಕುಡ್ಸೋ ಮುನ್ನ ನಾವು ನೀರು ಕುಡೀಬೇಕು.

ಯಾಕಂತೀರಾ? ಮುಂದೆ ಓದಿ


 ನಮ್ಮ ಮೆದುಳು ಸರಿಸುಮಾರು 75% ನೀರನ್ನು ಹೊಂದಿರುತ್ತದೆ.  ಸ್ವಲ್ಪ ನಿರ್ಜಲೀಕರಣವು ಅದರ ಕಾರ್ಯವನ್ನು ದುರ್ಬಲಗೊಳಿಸುತ್ತದೆ.

ಸಾಕಷ್ಟು ಜಲಸಂಚಯನದ ಕೊರತೆಯಿಂದ ಗಮನ ಕಡಿಮೆಯಾಗುವುದು.ನಿಧಾನಗತಿಯ ಸಂಸ್ಕರಣಾ ವೇಗ ಮತ್ತು ಸ್ಮರಣಶಕ್ತಿಯ ತೊಂದರೆಗಳಿಗೆ ಕಾರಣವಾಗಬಹುದು.

 ನಮ್ಮ ಶರೀರದ ತೂಕದ 1-2% ರಷ್ಟು ಕಡಿಮೆ ನಿರ್ಜಲೀಕರಣವು ಗಮನ ಮತ್ತು ಅಲ್ಪಾವಧಿಯ ಸ್ಮರಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.

ಸರಿಯಾದ ಪ್ರಮಾಣದಲ್ಲಿ ಜಲ ಸೇವನೆಯಿಂದ ಮನಸ್ಥಿತಿಯನ್ನು ನಿಯಂತ್ರಿಸುವ ಸಿರೊಟೋನಿನ್ ಮತ್ತು ಡೋಪಮೈನ್‌ನಂತಹ ನರಪ್ರೇಕ್ಷಕಗಳ ಉತ್ಪಾದನೆಯನ್ನು ಬೆಂಬಲಿಸುತ್ತದೆ.

ನಿರ್ಜಲೀಕರಣವು ಕಿರಿಕಿರಿ, ಆಯಾಸ ಮತ್ತು ಹೆಚ್ಚಿದ ಆತಂಕಕ್ಕೆ ಕಾರಣವಾಗಬಹುದು.

ನಿರ್ಜಲೀಕರಣವು ಬ್ರೈನ್ ಫಾಗ್  ಕಾರಣವಾಗಬಹುದು.ಇದು ಗೊಂದಲ, ಮಾನಸಿಕ ಸ್ಪಷ್ಟತೆಯ ಕೊರತೆ ಮತ್ತು    ವಸ್ತು ವಿಷಯದ ಬಗ್ಗೆ ಕೇಂದ್ರೀಕರಿಸುವಲ್ಲಿ ತೊಂದರೆಗೆ ಕಾರಣವಾಗುತ್ತದೆ.

ಜಲಸಂಚಯನವನ್ನು ಉಳಿಸಿಕೊಳ್ಳುವುದು ಮಾನಸಿಕ ತೀಕ್ಷ್ಣತೆ ಮತ್ತು ಜಾಗರೂಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ಮೆದುಳಿನ ಜೀವಕೋಶಗಳಿಗೆ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸಾಗಿಸಲು ನೀರು ಅತ್ಯಗತ್ಯ.

ಸಾಕಷ್ಟು ಜಲಸಂಚಯನವು ಮೆದುಳಿನೊಳಗೆ ಪರಿಣಾಮಕಾರಿ ಶಕ್ತಿ ಉತ್ಪಾದನೆ ಮತ್ತು ಸೆಲ್ಯುಲಾರ್ ಕಾರ್ಯವನ್ನು ಖಚಿತಪಡಿಸುತ್ತದೆ.

ನೀರು ಸೆರೆಬ್ರೊಸ್ಪೈನಲ್ ದ್ರವದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮೆದುಳನ್ನು ಆಘಾತದಿಂದ ರಕ್ಷಿಸುತ್ತದೆ.ಸರಿಯಾದ ಜಲಸಂಚಯನವು ತಲೆನೋವಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಆದ್ದರಿಂದ ಇಂದೇ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯೋಣ ನಮ್ಮ ಮೆದಳು ಮತ್ತು ಇತರ ಭಾಗಗಳನ್ನು ಸಂರಕ್ಷಿಸಿಕೊಳ್ಳೋಣ.


ಸಿಹಿಜೀವಿ ವೆಂಕಟೇಶ್ವರ


ಸಿಹಿಜೀವಿಯಿಂದ ನಿತ್ಯ ಸತ್ಯ.


ಸಿಹಿಜೀವಿಯಿಂದ   ನಿತ್ಯ ಸತ್ಯ.


ನಾನು  ಎಷ್ಟೇ ಬಾರಿ ಮಾಡಿದ್ದರೂ

ಪರರಿಗೆ, ಬಂಧುಗಳಿಗೆ ಸಹಾಯ|

ಒಮ್ಮೆ ನಿರಾಕರಿಸಿದರೆ ಬೈಯ್ದೇ

ಬಿಡುತ್ತಾರೆ ಅಯ್ಯೋ ಇವ್ನ ಮನೆಕಾಯ||


ಸಿಹಿಜೀವಿ ವೆಂಕಟೇಶ್ವರ

 

11 February 2025

ಹನಿಗವನ


 ನಿಯಂತ್ರಣದಲ್ಲಿಟ್ಟುಕೊಂಡರೆ ನಿನ್ನ ಮನಸ್ಸು ಮುಂದೊಂದು ದಿನ ನನಸಾಗುವುದು ಕನಸು


ಸಿಹಿಜೀವಿ ವೆಂಕಟೇಶ್ವರ

ಜ್ಞಾನಂ ಭಾರತಂ ಮಿಷನ್.


 


ಜ್ಞಾನಂ ಭಾರತಂ ಮಿಷನ್.


ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಹೆಚ್ಚು ಚರ್ಚೆ ಆದ ವಿಷಯ ಹಾಗೂ ಸಂತಸಕ್ಕೆ ಕಾರಣವಾದ ವಿಷಯ ಐಟಿಯಲ್ಲಿ ವಿನಾಯಿತಿ.ನಿಜಕ್ಕೂ ಇದು ಮದ್ಯಮ ವರ್ಗದ ನಮ್ಮಂತವರಿಗೆ  ಉತ್ತಮ ನೀತಿ ಎಂಬುದರಲ್ಲಿ ಸಂಶಯವಿಲ್ಲ. ಈ ಬಜೆಟ್ ನಲ್ಲಿ ನನಗೆ ಸಂತಸ ಕೊಟ್ಟ ಮತ್ತೊಂದು ವಿಷಯ ಎಂದರೆ 

ಭಾರತದ ಪ್ರಾಚೀನ ಜ್ಞಾನವನ್ನು ರಕ್ಷಿಸಲು ಹೊಸ 'ಜ್ಞಾನ ಭಾರತಂ ಮಿಷನ್' ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ದಾಖಲಿಸಬೇಕು ಮತ್ತು ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ಹಮ್ಮಿಕೊಂಡ ಯೋಜನೆ.

2025-26 ರ ಕೇಂದ್ರ ಬಜೆಟ್‌ನಲ್ಲಿ, ಹಣಕಾಸು ಸಚಿವೆರವರು  ಜ್ಞಾನ ಭಾರತಂ ಮಿಷನ್ ಅನ್ನು ಪರಿಚಯಿಸಿದರು.ಇದರ ಅಡಿಯಲ್ಲಿ ಒಂದು ಕೋಟಿ ಹಸ್ತಪ್ರತಿಗಳನ್ನು ಸಂರಕ್ಷಿಸಿ ದಾಖಲಿಸಲಾಗುತ್ತದೆ.

ಈ ಉಪಕ್ರಮವು ಭಾರತದ ವಿಶಾಲ ಬೌದ್ಧಿಕ ಪರಂಪರೆಯನ್ನು ರಕ್ಷಿಸಲು ಮತ್ತು ಹೆಚ್ಚಿಸಲು ಪ್ರಯತ್ನಿಸುತ್ತದೆ ಮತ್ತು ಈ ಕ್ರಮವು ಪ್ರಸ್ತುತ ಸರ್ಕಾರದ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದೊಂದಿಗೆ ಪ್ರಾಚೀನ ಜ್ಞಾನವನ್ನು ಸಂಯೋಜಿಸುತ್ತದೆ.

ಈ ಯೋಜನೆಯ ಅಂಗವಾಗಿ

ಶೈಕ್ಷಣಿಕ ಸಂಸ್ಥೆಗಳು, ವಸ್ತು ಸಂಗ್ರಹಾಲಯಗಳು, ಗ್ರಂಥಾಲಯಗಳು ಮತ್ತು ಖಾಸಗಿ ಸಂಗ್ರಾಹಕರೊಂದಿಗೆ ನಮ್ಮ ಹಸ್ತಪ್ರತಿ ಪರಂಪರೆಯ ಸಮೀಕ್ಷೆ, ದಾಖಲೀಕರಣ ಮತ್ತು ಸಂರಕ್ಷಣೆಗಾಗಿ ಜ್ಞಾನ ಭಾರತಂ ಮಿಷನ್ ಅನ್ನು 1 ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಒಳಗೊಳ್ಳಲು ಕೈಗೊಳ್ಳಲಾಗುತ್ತದೆ.

ಜ್ಞಾನ ಹಂಚಿಕೆಗಾಗಿ ಭಾರತೀಯ ಜ್ಞಾನ ವ್ಯವಸ್ಥೆಗಳ ರಾಷ್ಟ್ರೀಯ ಡಿಜಿಟಲ್ ಭಂಡಾರವನ್ನು (ಐಕೆಎಸ್) ಸ್ಥಾಪಿಸುವ ಯೋಜನೆಯನ್ನು ಸಹ ಈ ಬಜೆಟ್ ನಲ್ಲಿ ಪ್ರಸ್ತಾಪಿಸಿರುವುದು ಶ್ಲಾಘನೀಯ.

ಭಾರತದ ರಾಷ್ಟ್ರೀಯ ಆರ್ಕೈವ್ಸ್ ತನ್ನ ವ್ಯಾಪಕವಾದ ದಾಖಲೆಗಳು ಮತ್ತು ಹಸ್ತಪ್ರತಿಗಳ ಸಂಗ್ರಹವನ್ನು ಡಿಜಿಟಲೀಕರಣಗೊಳಿಸುವ ಮೂಲಕ ಈ ಸಾಂಸ್ಕೃತಿಕ ಪ್ರಯತ್ನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ತನ್ಮೂಲಕ ಭವಿಷ್ಯದ ಪೀಳಿಗೆಗೆ ಅವುಗಳನ್ನು ಸಂರಕ್ಷಿಸಿ  ನೀಡಲು 

ಸಹಾಯಕವಾಗಲಿದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು