27 February 2025

ಜ್ಞಾನಾಮೃತ ಉಣಬಡಿಸಲು ಸಿದ್ಧವಾಗುತ್ತಿರುವ ಶಿವಶರಣರ ವಚನಾಮೃತ ಮಂಟಪ.

 




ಜ್ಞಾನಾಮೃತ ಉಣಬಡಿಸಲು ಸಿದ್ಧವಾಗುತ್ತಿರುವ   ಶಿವಶರಣರ ವಚನಾಮೃತ ಮಂಟಪ.


ಪುರಾತನ ಕಾಲದಿಂದಲೂ ದೇವಾಲಯಗಳು ಭಕ್ತಿಯ ಸ್ಥಳಗಳೂ ಆಗಿ ಕೆಲವೊಮ್ಮೆ ಮನರಂಜನಾ ತಾಣಗಳಾಗಿಯೂ ಗುರುತಿಸಲ್ಪಟ್ಟಿದ್ದವು.ದೇವಾಲಯಗಳಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಹಿಂದಿನ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದವು.ಮನರಂಜನಾ ಪರಿಕಲ್ಪನೆ ಮತ್ತು ವ್ಯಾಪ್ತಿ ಬದಲಾದ ಕಾಲಘಟ್ಟದಲ್ಲಿ ಮನರಂಜನೆಗೆ ಇತರೆ ಮಾಧ್ಯಮಗಳ ಭರಪೂರ ಬೆಳವಣಿಗೆಯ ನಂತರ ದೇವಾಲಯಗಳು ಕೇವಲ ಭಕ್ತಿಯ ತಾಣಗಳಾದವು.ಕೆಲ ದೇವಾಲಯಗಳು ಜ್ಞಾನ ಪಸರಿಸುವ ತಾಣಗಳಾಗಿ‌‌ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದ್ದವು. ಅಲ್ಲಿ ವೇದ,ಉಪನಿಷತ್ ಮುಂತಾದವುಗಳ  ಕಲಿಕೆ  ನಡೆಯುತ್ತಿತ್ತು. ಈಗಲೂ ಕೆಲ ದೇವಾಲಯಗಳು ಜ್ಞಾನ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.ಅಂತಹ ದೇವಾಲಯಗಳಲ್ಲಿ 





ಸಿದ್ದರಾಮೇಶ್ವರ75 ನೇ ಗದ್ದುಗೆಯಿರುವ ಬೆಳಗುಂಬದ ದೇವಾಲಯ ಭಕ್ತರ ಮತ್ತು ಜ್ಞಾನಾರ್ಥಿಗಳ ಗಮನ ಸೆಳೆಯುತ್ತಿದೆ.

ಆತ್ಮೀಯರು, ಸಹೋದ್ಯೋಗಿಗಳು ಹಾಗೂ  ಕಲಾವಿದರಾದ ಕೋಟೆ ಕುಮಾರ್ ರವರೊಂದಿಗೆ ಇತ್ತೀಚಿಗೆ ಈ ದೇವಾಲಯಕ್ಕೆ ಭೇಟಿ ನೀಡಿ ಕಳೆದ ವರ್ಷ ಜೀರ್ಣೋದ್ಧಾರಗೊಂಡ ದೇವಾಲಯದಲ್ಲಿ  ಸಿದ್ದರಾಮೇಶ್ವರ ಸ್ವಾಮಿಯ ದರ್ಶನ ಪಡೆದು ಹೊರಬಂದಾಗ  ನಮ್ಮನ್ನು ಸೆಳೆದ ಮಂದಿರವೇ "ಶಿವ ಶರಣರ ವಚನಾಮೃತ" ಎಂಬ ಹೆಸರಿನ ಈ ಕಿರುಮಂಟಪ.

ಇದನ್ನು ತುಮಕೂರಿನ ಶ್ರೀ ಜಗಜ್ಯೋತಿ   ಬಸವೇಶ್ವರ ಟ್ರಸ್ಟ್ ನವರು ನಿರ್ಮಿಸಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಹಿರಿಯ ಗಾಂಧೀವಾದಿ ಶ್ರೀ ಎಂ  ಬಸವಯ್ಯರವರ ಮುಂದಾಳತ್ವದಲ್ಲಿ ಪೌಳಿಶಂಕರಾನಂದಪ್ಪ ಮುಂತಾದವರ ಸಕಾರಾತ್ಮಕ ಯೋಚನೆಯ ಫಲವಾಗಿ  ಒಂದು ಸುಂದರವಾದ ಜ್ಞಾನ ಮಂಟಪ ತಲೆ ಎತ್ತಿದೆ.ಎರಡು ಭಾಗದಲ್ಲಿ ಇರುವ ಈ ವಚನಾಮೃತ ಮಂಟಪದಲ್ಲಿ  ವಚನ ಪಿತಾಮಹ ಫ ಗು ಹಳಕಟ್ಟಿ ಅವರ ಭಾವಚಿತ್ರ ಇಟ್ಟು ಅವರಿಗೆ ಗೌರವ ಸೂಚಿಸಲಾಗಿದೆ. ಬಸವಣ್ಣನವರಾದಿಯಾಗಿ ಹನ್ನೆರಡನೆಯ ಶತಮಾನದಿಂದ ಆರಂಭವಾಗಿ ಇಪ್ಪತ್ತೊಂದನೇ ಶತಮಾನದ ಶರಣರೂ  ಸೇರಿದಂತೆ  ಒಟ್ಟು 64  ಶಿವಶರಣರ ವಚನಗಳು ನಮ್ಮನ್ನು ಇಲ್ಲಿ ಶರಣು ಬನ್ನಿ ಎನ್ನುತ್ತಾ ಸ್ವಾಗತಿಸುತ್ತವೆ. 

 ವಚನಾಮೃತ ಮಂಟಪವು ಅನುಭವ ಮಂಟಪದ ಹಾಗೆ ಗೋಚರಿಸುತ್ತದೆ. ಭಕ್ತಿ ಹಾಗೂ ಜ್ಞಾನದ ಸಂಗಮವಾದ ಇಂಥಹ ಮಂದಿರಗಳು ನಾಡಿನಾದ್ಯಂತ ಹೆಚ್ಚಾಗಲಿ ತನ್ಮೂಲಕ ಜಂಜಡದ ಈ ಕಾಲದಲ್ಲಿ  ಜನರಿಗೆ ಶಾಂತಿ ನೆಮ್ಮದಿಯ ಜೊತೆಯಲ್ಲಿ ಜ್ಞಾನ ಲಭಿಸಲಿ ಎಂದು ಕಲಾವಿದರಾದ ಕೋಟೆ ಕುಮಾರ್ ರವರು ಅಭಿಪ್ರಾಯ ಪಟ್ಟರು.



ಬಸವಣ್ಣ, ಚನ್ನಬಸವೇಶ್ವರ, ಅಕ್ಕಮಹಾದೇವಿ, ಎಡೆಯೂರು ಸಿದ್ಧಲಿಂಗೇಶ್ವರ,ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಡೋಹರ ಕಕ್ಕಯ್ಯ, ಮಡಿವಾಳ ಮಾಚಿದೇವ, ಕೂಗಿನ ಮಾರಯ್ಯ, ಬಹುರೂಪಿ ಚೌಡಯ್ಯ, ಮರುಳ ಶಂಕರದೇವ, ಕುರುಬ ಗೊಲ್ಲಾಳ, ಕಲ್ಬುರ್ಗಿ ಸಂಗನ ಬಸವೇಶ್ವರ, ಮಾತೆ ಮಹದೇವಿ, ಉದ್ದಾನೇಶ್ವರ  ಶಿವಯೋಗಿಗಳು, ಹಾನಗಲ್ ಕುಮಾರ ಸ್ವಾಮಿ, ಸರ್ವಜ್ಞ, ಅಲ್ಲಮಪ್ರಭು, ಸಿದ್ದರಾಮೇಶ್ವರ, ಮುಂತಾದ ಶರಣರ ಹಾಗೂ ವಚನಕಾರರ ಭಾವಚಿತ್ರ ಸಹಿತವಾಗಿ ಪ್ರಮುಖ 85 ವಚನಗಳನ್ನು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿದ್ದಾರೆ.

21 ನೇ ಶತಮಾನದ  ನಡೆದಾಡುವ ದೇವರು ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು, ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರ ಸಮೇತ  ವಚನಗಳು ಭಕ್ತರ ಮತ್ತು ಜ್ಞಾನಾರ್ಥಿಗಳನ್ನು ಸೆಳೆಯುತ್ತಿವೆ.

ಇತ್ತೀಚಿಗೆ ಈ ಮಂಟಪ ನಿರ್ಮಾಣವಾಗಿರುವುದನ್ನು ತಿಳಿದು ದೇವಾಲಯಕ್ಕೆ ಆಗಮಿಸುವ ಭಕ್ತರು ಉದ್ಘಾಟನೆಗೆ ಸಿದ್ದವಾಗಿರುವ ಈ ಮಂಟಪವನ್ನು ನೋಡಿ ಬಹಳ ಸಂತಸ ವ್ಯಕ್ತಪಡಿಸುತ್ತಾರೆ ಎಂದು

ಬೆಳಗುಂಬದ ಶ್ರೀ ಸಿದ್ದರಾಮೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀಶಾಂತಮಲ್ಲೇಶಯ್ಯ ರವರು ಮಾಹಿತಿ ನೀಡಿದರು.

ಶೀಘ್ರದಲ್ಲೇ ಈ ಶಿವಶರಣರ ವಚನಾಮೃತ ಮಂಟಪವು ಅಧಿಕೃತವಾಗಿ ಉದ್ಘಾಟನೆಯಾಗಲಿದೆ.ಇದು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುವ ಜೊತೆಯಲ್ಲಿ ಜನರಲ್ಲಿ ಭಕ್ತಿ ಮತ್ತು ಜ್ಞಾನ ಪಸರಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಪ್ರಯತ್ನಗಳು ನಾಡಿನೆಲ್ಲಡೆ ಆಗಲಿ ಎಂಬುದು ಎಲ್ಲ ಜ್ಞಾನಾರ್ಥಿಗಳ ಬಯಕೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

9900925529




 


No comments: