28 February 2025

ಕಂಬನಿಯ ಕುಯಿಲು ಪುಸ್ತಕ ಪರಿಚಯ.


 


ಕಂಬನಿಯ ಕುಯಿಲು..


ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಶಾ ಮಂ ಕೃಷ್ಣ ರಾಯರವರ ಸಂಪಾದಕತ್ವದ ತ ರಾ ಸು ಸಾಹಿತ್ಯ ಸಂಪದ ಸಂಪುಟ ಒಂದರ ಐತಿಹಾಸಿಕ ಕಾದಂಬರಿಗಳ ಸೆಟ್ ನಲ್ಲಿ ಮೂರು ಕಾದಂಬರಿಗಳಲ್ಲಿ.   ಎರಡನೇ ಕಾದಂಬರಿ "ಕಂಬನಿಯ ಕುಯಿಲು" ಕಾದಂಬರಿಯನ್ನು ಶಿವರಾತ್ರಿ ಜಾಗರಣೆ ಮಾಡುತ್ತಾ ಓದಿದೆ.


ಮದಕರಿನಾಯಕರ ಮರಣದ ಶೋಕದಿಂದ ಮೊದಲುಗೊಳ್ಳುವ ಕಾದಂಬರಿಯು ಗೌರವ್ವನಾಗತಿಯು ತನ್ನ ಹಠದಿಂದಾಗಿ ಸಹಗಮನಕ್ಕೆ ಸಿದ್ದವಾಗಿರುವ ಹಿರಿಯ ಓಬವ್ವನಾಗತಿಯ ಮೇಲೆ ದುರ್ಗದ ಭವಿಷ್ಯದ ಭಾರ ಹಾಕಿ ತಾನು ಸಹಗಮನ ಮಾಡುತ್ತಾಳೆ. ಇಹಲೋಕದ ಬಂಧನಗಳಿಂದ ಮುಕ್ತಳಾಗಿ ಸ್ವರ್ಗ ಸೇರುವ ಆತುರದಲ್ಲಿದ್ದ ಓಬವ್ವನಾಗತಿಗೆ ಬಿದ್ದ ಕರ್ತವ್ಯ ನಿರ್ವಹಿಸುವಾಗ ಇನ್ನೇನು ಎಲ್ಲಾ ತಾವಂದುಕೊಂಡಂತೆ   ಮದಕರಿನಾಯಕರ   ಆಸೆಯ ಈಡೇರಿಕೆಯಾಯಿತು ಎನ್ನುವಾಗ ಬರುವ ವಿವಿಧ ವಿಘ್ನಗಳನ್ನು ಭುವನಪ್ಪ, ಕಸ್ತೂರಿ ನಾಯಕ, ಗಿರಿಜೆ ಮುಂತಾದವರ ಬೆಂಬಲದಿಂದ ಚಾಕಚಕ್ಯತೆಯಿಂದ ನಿಭಾಯಿಸಿದರೂ ಕೊನೆಗೆ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡದ್ದು ಓದುವಾಗ ಕಂಬನಿ ಬೀಳುತ್ತದೆ.

 

ಲಿಂಗಪ್ಪನಾಯಕರ ಮಾತೃಪ್ರೇಮ, ತ್ಯಾಗಗಳ ಬಗ್ಗೆ ಓದುವಾಗ ಮನ ನೋಯುತ್ತದೆ. ಭುವನಪ್ಪನವರಿಗೆ ದುರ್ಗದ ಮೇಲಿರುವ ಅಪಾರ ನಿಷ್ಠೆಯಿಂದ ಆಗಲಿರುವ ಅನಾಹತ  ತಪ್ಪಿಸಲು ಶತಾಯಗತಾಯ ಪ್ರಯತ್ನ ಮಾಡುವ ಜೊತೆಯಲ್ಲಿ ತನ್ನ  ಪ್ರಧಾನಿ ಹುದ್ದೆಯನ್ನು ರಾಜ್ಯದ ಒಳಿತಿಗಾಗಿ ತ್ಯಾಗ ಮಾಡಿದರೂ ಕೊನೆಗೆ ತಮ್ಮ ಕೈ ಮೀರಿ ಒಳಶತೃಗಳ ಪಿತೂರಿಗೆ ಪ್ರಾಣ ಅರ್ಪಿಸಿದ್ದನ್ನು ಓದುವಾಗ ಕಂಬನಿ ಹನಿಯುತ್ತದೆ.

  ನ್ಯಾಯದ ಹೆಸರಿನಲ್ಲಿ ದ್ವೇಷ,ಕಠೋರತೆ, ಹಠಗಳೇ ರೂಪವೆತ್ತಂತೆ ನಿಲ್ಲುವ ದಳವಾಯಿ ಮುದ್ದಣ್ಣ ಖಳನಾಯಕನ ಕುತಂತ್ರಗಳನ್ನು ಓದುವಾದ ಮೈ ಉರಿಯುತ್ತದೆ.  ತನ್ನ ಅಸಮಾಧಾನದ ಸಣ್ಣ ಕಿಡಿಯಿಂದ ಆರಂಭವಾದ ಒಳಸಂಚು ದುರ್ಗವನ್ನೇ ದಹಿಸುವಾಗ ಅದನ್ನು ಹಿಡಿತಕ್ಕೆ ತರಲಾಗದೇ ತಾವೇ ಬೆಂದು ಮಾರಣಹೋಮಕ್ಕೆ ಮೊದಲ ಬಲಿಯಾಗುವ ದಳವಾಯಿ ದೇಸಣ್ಣನ ರುಂಡ ಎಗರುವಾಗ ಭಯವಾಗುತ್ತದೆ.

  ದುರ್ಗದ ಅಂತಃಕಲಹದಲ್ಲಿ ಕರ್ತವ್ಯ ನಿಷ್ಠೆಗೆ ಹೆಸರಾದ   ಗಿರಿಜವ್ವ ತದ್ವಿರುದ್ಧವಾದ ಗುಣಗಳ   ವೀರನಾಯಕನ ದುರಂತ ಅಂತ್ಯವನ್ನು ಓದುವಾಗ ನಮ್ಮ ಅಳು ತಡೆಯುವುದು ಕಷ್ಟ.

 ಕಸ್ತೂರಿನಾಯಕ ದುರ್ಗದ ನಾಯಕರ ಪ್ರಾಣ ರಕ್ಷಣಾ ಕವಚ.ಆದರೂ ನಾಯಕರ ಸಾವಿನ ಸುದ್ದಿ ತಿಳಿದು ತನ್ನ ಆತ್ಮಹುತಿ ಮಾಡಿಕೊಳ್ಳುವುದು ನೋಡಿ ಮನ ಮಿಡಿಯುತ್ತದೆ. 

ಈ ಕಾದಂಬರಿ ಓದುವಾಗ  ರಾಜ್ಯ, ಅರಮನೆ, ವೈಭವ, ಅಧಿಕಾರಗಳ ಬಗ್ಗೆ ಜಿಗುಪ್ಸೆ ಮೂಡಿಸುತ್ತದೆ.  

ಕಾದಂಬರಿ ಓದಿ ಮುಗಿಸಿದ ಎರಡು ಮೂರು ದಿನ ಒಂದು ರೀತಿಯ ಬೇಸರ ಆವರಿಸುವುದು ಸತ್ಯ. ಅಷ್ಟು ಪರಿಣಾಮಕಾರಿಯಾಗಿ ದುರ್ಗದ ಇತಿಹಾಸದ ಹಿನ್ನೆಲೆಯಲ್ಲಿ ಕಾದಂಬರಿ ರಚಿಸಿದ   ತ ರಾ ಸು ರವರ ಪ್ರತಿಭೆಯನ್ನು ಎಷ್ಟು ಹೊಗಳಿದರೂ ಸಾಲದು. ಅವರ ಮತ್ತೊಂದು ಕಾದಂಬರಿ "ರಾಜ್ಯ ದಾಹ " ಓದಿ ಮತ್ತೆ ಸಿಗುತ್ತೇನೆ

ಧನ್ಯವಾದಗಳು

ನಿಮಗೆ ತ ರಾ ಸು ರವರ ಯಾವ ಕಾದಂಬರಿ ಇಷ್ಟ ಎಂದು ಹೇಳಬಹುದು.


ಸಿಹಿಜೀವಿ ವೆಂಕಟೇಶ್ವರ


No comments: