23 February 2025

ಸಡಿಲಿನ ಸಿಂಹದ ಮರಿ ಛಾವ


 ಸಡಿಲಿನ ಸಿಂಹದ ಮರಿ  ಛಾವ 


"ಜೈ ಭವಾನಿ","ಹರ ಹರ ಮಹಾದೇವ" "ಜಗದಂಬಾ" ಈ ಘೋಷಣೆಗಳು ಚಿತ್ರ ಮಂದಿರದಿಂದ ಹೊರಬಂದಾಗಲೂ ನನ್ನ  ಕಿವಿಯಲ್ಲಿ ಮಾರ್ಧನಿಸುತ್ತಿದ್ದವು.

ಪ್ರೇಮಿಗಳ ದಿನ ದೇಶಪ್ರೇಮಿಗಳಿಗಾಗಿ ಮಾಡಿದ ಛಾವ ಚಲನಚಿತ್ರ ನೋಡಿದೆ.

ಬಹಳ ದಿನಗಳ ನಂತರ ಒಂದು ಉತ್ತಮ ಐತಿಹಾಸಿಕ ಚಿತ್ರ ನೋಡಿದ ಸಮಾಧಾನವಾಯ್ತು.ಇದು   ಹಿಂದಿ ಭಾಷೆಯ ಐತಿಹಾಸಿಕ ಆಕ್ಷನ್ ಚಿತ್ರವಾಗಿದ್ದು  ಮರಾಠಾ ಸಾಮ್ರಾಜ್ಯದ ಶಿವಾಜಿಯ ಮಗ   ಸಂಭಾಜಿಯ ಜೀವನವನ್ನು ಆಧರಿಸಿದೆ.  ವಿಕ್ಕಿ ಕೌಶಲ್ ಈ ಚಿತ್ರದಲ್ಲಿ ಛತ್ರಪತಿ ಸಂಭಾಜಿ ಪಾತ್ರದಲ್ಲಿ ನಟಿಸಿಲ್ಲ ಬದಲಿಗೆ ಜೀವಿಸಿದ್ದಾರೆ. ಶಿವಾಜಿ ಸಾವಂತ್ ಅವರ ಮರಾಠಿ ಕಾದಂಬರಿ ಆಧಾರಿತ ಈ ಚಿತ್ರವನ್ನು  ಲಕ್ಷ್ಮಣ್ ಉಟೇಕರ್ ಬಹಳ ಅಚ್ಚುಕಟ್ಟಾಗಿ  ನಿರ್ದೇಶನ ಮಾಡಿದ್ದಾರೆ.


ಶಿವಾಜಿಯ ಮರಣದ ನಂತರ  ಮೊಘಲ್ ಚಕ್ರವರ್ತಿ ಔರಂಗಜೇಬನ ಆಸ್ಥಾನದಲ್ಲಿ  ಸಂತೋಷದ ಪಾರ್ಟಿ ಮಾಡುವ ಚರ್ಚೆಯಿಂದ ಆರಂಭವಾಗುವ ಸಿನಿಮಾ ಕುತಂತ್ರದಿಂದ ಸಂಭಾಜಿಯ ಸೆರೆಹಿಡಿದು ಹಿಂಸೆ ನೀಡುವ ದೃಶ್ಯಗಳಿಂದ ಚಿತ್ರ ಮುಕ್ತಾಯವಾಗುತ್ತದೆ.ಚಿತ್ರದ ಮಧ್ಯ ಮಧ್ಯ ಮರಿ ಸಿಂಹದ ಘರ್ಜನೆ, ತಂತ್ರಗಳು ಮತ್ತು ಬುದ್ಧಿವಂತಿಕೆಯಿಂದ ಜನರು ಥಿಯೇಟರ್ ನಲ್ಲಿ ಶಿಳ್ಳೆ ಚಪ್ಪಾಳೆ ಹೊಡೆಯುತ್ತಾರೆ. ಕೊನೆಯ ಇಪ್ಪತ್ತು ನಿಮಿಷಗಳು ಪ್ರೇಕ್ಷಕರ ಕಣ್ಣಾಲಿಗಳು ತೇವವಾಗುತ್ತವೆ. ಶಿವಾಜಿ ಮರಣದ ನಂತರ ಪ್ರಮುಖ ಮೊಘಲ್ ಆಡಳಿತ ಮತ್ತು ವಾಣಿಜ್ಯ ಕೇಂದ್ರವಾದ ಬುರ್ಹಾನ್‌ಪುರದ ಮೇಲೆ  ಹಠಾತ್ ಸಂಭಾಜಿ ದಾಳಿ ಮಾಡಿ ಅಲ್ಲಿನ ಸಂಪತ್ತನ್ನು ವಶಪಡಿಸಿಕೊಳ್ಳುವಾಗ ಯುದ್ಧಭೂಮಿಯಲ್ಲಿ ಸಿಲುಕಿದ  ಶತೃಪಡೆಯ  ಪುಟ್ಟ ಮಗುವನ್ನು ಅದರ ತಾಯಿಯ ಮಡಿಲಿಗೆ ಸುರಕ್ಷಿತವಾಗಿ ತಲುಪಿಸಿ ಯುದ್ದವನ್ನು ಮುಂದುವರೆಸಿದ ಸಂಭಾಜಿಯ ಬಗ್ಗೆ ನನಗೆ ಬಹಳ ಹೆಮ್ಮೆ ಎನಿಸಿತು.

ಇದೇ  ಯುದ್ಧದಲ್ಲಿ ಸಂಭಾಜಿ ಸಿಂಹವಿರುವ ಬೋನಿಗೆ ಬಿದ್ದಾಗ  ತನ್ನ ಬರಿ ಕೈಗಳಿಂದಲೇ ಅದನ್ನು ಕೊಂದು ಅಸಲಿ ಛಾವ ಅಂದರೆ ಸಿಂಹದ ಮರಿಯಾಗಿ ಅಬ್ಬರಿಸಿತ್ತಾ ಬಂದು "ನಾನು ಘರ್ಜಿಸೋಲ್ಲ, ಬೇಟೆಯಾಡ್ತೇನೆ" ಎಂಬ ಡೈಲಾಗ್ ಗೆ ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಹೊಡೆದುಬಿಟ್ಟರು.

 ಔರಂಗಜೇಬನ ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ ತಣ್ಣನೆಯ ಕ್ರೌರ್ಯ ಹೊರ ಹಾಕುತ್ತಾ ಸಂಭಾಜಿಯನ್ನು ಸೋಲಿಸದ ಹೊರತು ತನ್ನ ಕಿರೀಟಧಾರಣೆ ಮಾಡಲಾರೆ ಎಂದು ಶಪಥ ಮಾಡಿದ. ತನ್ನ ಲಕ್ಷಗಟ್ಟಲೆ ಸೈನ್ಯದ  ಮುಂದೆ ಸಾವಿರ ಲೆಕ್ಕಾಚಾರದ ಮರಾಠರ ಸೈನ್ಯ ಲೆಕ್ಕವಿಲ್ಲ ಎಂದು ಹಗುರವಾಗಿ ಯೋಚಿಸಿ ದಖ್ಖನ್ ಮೇಲೆ ದಾಳಿ ಮಾಡಲು ಆದೇಶ ಮಾಡುತ್ತಾನೆ. ಶಿವಾಜಿಯ ಕಾಲದಿಂದಲೂ ಗೆರಿಲ್ಲಾ ಯುದ್ಧ ತಂತ್ರದಲ್ಲಿ ಪಳಗಿದ ಮರಾಠರು ಛತ್ರಪತಿ ಸಂಭಾಜಿಯ ನೇತೃತ್ವದಲ್ಲಿ ಮೊಘಲರ ಸೇನೆಯನ್ನು ಸೋಲಿಸಿ ಹಿಮ್ಮೆಟ್ಟಿಸುತ್ತಾರೆ.

  ಸಂಭಾಜಿಯನ್ನು  ಪತ್ನಿ ಯೇಸುಬಾಯಿ ಆಗಿ  ರಶ್ಮಿಕಾ ಮಂದಣ್ಣ ಉತ್ತಮವಾಗಿ ಅಭಿನಯಿಸಿದ್ದಾರೆ. ಎಲ್ಲಾ ಕಡೆ ಇರುವಂತೆ  ಮರಾಠಾ ಆಸ್ಥಾನದಲ್ಲಿ ಗುಂಪುಗಾರಿಕೆ, ಒಳಸಂಚು ಬೆಳೆಯುತ್ತದೆ. ಸಂಭಾಜಿಯ ಮಲಸಹೋದರ ರಾಜಾರಾಮ್‌ನನ್ನು ಆಡಳಿತಗಾರನನ್ನಾಗಿ ಪ್ರತಿಷ್ಠಾಪಿಸಲು ಪಿತೂರಿಗಳು ನಡೆಯುತ್ತಲೇ ಇರುತ್ತವೆ.  ಮೊಘಲ್ ರಾಜಕುಮಾರ ಮಿರ್ಜಾ ಅಕ್ಬರ್ ಔರಂಗಜೇಬನ ವಿರುದ್ಧ ದಂಗೆ ಏಳಲು ಸಂಭಾಜಿಯ ಸಹಾಯವನ್ನು ಕೋರುವಾಗ   ಮಲತಾಯಿ ಸೋಯಾರಾಬಾಯಿ ಮತ್ತು ರಾಜಕುಮಾರನ ಜೊತೆಯಲ್ಲಿ   ಪಿತೂರಿಯ ಭಾಗವಾದವರನ್ನು   ಆನೆಯ ಕಾಲಿನಿಂದ ತುಳಿಸಿ ಸಾಯಿಸುವ  ದೃಶ್ಯಗಳನ್ನು ನೋಡಿದಾಗ ಮರಾಠರು ಮೋಸಗಾರರಿಗೆ ಕರುಣೆಗೆ ಅವಕಾಶವಿಲ್ಲದೇ  ತಕ್ಕ ಶಿಕ್ಷೆಗೆ ಗುರಿಪಡಿಸುತ್ತಿದ್ದರು ಎಂಬುದು ತಿಳಿದುಬರುತ್ತದೆ.  

ಔರಂಗಜೇಬನು ಮತ್ತೆ ದಖ್ಖನ್ ಕಡೆ ಯುದ್ಧಕ್ಕೆ ಬರುವ ಸುದ್ದಿ ತಿಳಿದು ನಿರ್ಣಾಯಕ ಯುದ್ದದಲ್ಲಿ ಸಂಗಮೇಶ್ವರದಲ್ಲಿ ಕೇವಲ ನೂರರ ಲೆಕ್ಕದಲ್ಲಿ ಇರುವ ಸೈನಿಕರಿಗೆ ಛತ್ರಪತಿಯು ಹುರಿದುಂಬಿಸುವ ಮಾತುಗಳು ಪ್ರೇಕ್ಷಕರ ಮೈ ನವಿರೇಳಿಸುತ್ತದೆ.ನಾವೂ ಅವರ ಜೊತೆಯಲ್ಲಿ ಹರ ಹರ ಮಹಾದೇವ್ ,ಜೈ ಭವಾನಿ ಎನ್ನಬೇಕು ಎಂಬ ಭಾವ ಮೂಡುತ್ತದೆ.

 ಸಂಭಾಜಿಯ ಮೇಲೆ ಸಾವಿರದ ಲೆಕ್ಕದಲ್ಲಿ ಮುತ್ತಿಗೆ ಹಾಕಿದ ಮೊಘಲರ ಸೈನ್ಯಕ್ಕೆ ಮರಾಠರಲ್ಲಿ ಕೆಲ ದ್ರೋಹಿ ಬಂಧುಗಳು ರಹಸ್ಯ ಮಾಹಿತಿ ನೀಡಿದ್ದು ಕಂಡು ಸಂಭಾಜಿ ಮರುಗುತ್ತಾನೆ.

ಯುದ್ದದಲ್ಲಿ ಗಾಯಗೊಂಡ ಸಂಭಾಜಿಯನ್ನು ಸರಪಳಿ ಹಾಕಿ ಬಂಧಿಸಿ ಅವನೊಂದಿಗೆ ಅವನ ಗೆಳೆಯ ಕವಿ ಕಲಾಷ್ ನನ್ನ ಚಿತ್ರ ಹಿಂಸೆ ನೀಡಿ ಮತಾಂತರ ಮಾಡಲು ಬಲವಂತ ಮಾಡುವಾಗ ಸಂಭಾಜಿಯು ಪ್ರತಿರೋಧ ತೋರಿದ ರೀತಿಯನ್ನು ಚೆನ್ನಾಗಿ ಚಿತ್ರಿಸಲಾಗಿದೆ. ಸಂಭಾಜಿಯ ಕಣ್ಣುಗಳನ್ನು ಕಾದ ಕಬ್ಬಿಣದ ಕೆಂಪನೆಯ ಸರಳುಗಳಿಂದ ಕೀಳುವಾಗ ಸಂಕಟವಾಗುತ್ತದೆ. ಅವರ ಉಗುರು ಕೀಳುತ್ತಾರೆ, ಗಾಯಕ್ಕೆ ಉಪ್ಪು ಕಾರ ಹಾಕಿ ಹಿಂಸಿಸುವಾಗ ಸಂಭಾಜಿಯ  ನರಳದೇ  ಒಂದೇ ಪದ ಉಚ್ಚಾರ ಮಾಡುತ್ತಾರೆ ಅದೇ "ಜಗದಂಬಾ" 

ಕೊನೆಗೆ ನಾಲಿಗೆ ಕೀಳಿಸಿದಾಗಲೂ ಅಸ್ಪಷ್ಟವಾಗಿ ತಾಯಿ ನಾಮ ಸ್ಮರಣೆ ಮಾಡುತ್ತಾನೆ ಸಂಭಾಜಿ!

ಹೀಗೆ ಹಿಂಸಿಸುವಾಗ ದಖ್ಖನ್ ನಿಂದ ಒಂದು ಸುದ್ದಿ ಬರುತ್ತದೆ. ಅದು  ಯೇಸುಬಾಯಿ ರಾಜಾರಾಮ್ ನನ್ನ ಛತ್ರಪತಿ ಸ್ಥಾನದಲ್ಲಿ ಪ್ರತಿಷ್ಟಾಪಿಸಿದ್ದಾರೆ  ಎಂಬುದನ್ನು ತಿಳಿದಾಗ ಸಂಭಾಜಿಗೆ ನೋವಿನಲ್ಲೂ ನಲಿವಾದರೆ.ಔರಂಗಜೇಬ್ ನಿಂತಲ್ಲೇ ಕುಸಿಯುತ್ತಾನೆ.


ಒಟ್ಟಾರೆ ಛಾವ ಒಂದು ಐತಿಹಾಸಿಕವಾದ ಸ್ವರಾಜ್ಯ ಕಲ್ಪನೆಯನ್ನು ಎತ್ತಿ ಹಿಡಿಯುವ ಚಿತ್ರ  ದೇಶಭಕ್ತಿ ಸಾರುವ ಇಂತಹ ಚಿತ್ರವನ್ನು ಎಲ್ಲರೂ ನೋಡಬಹುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


No comments: