20 February 2025

ಕಳೆದು ಹೋದ ಪತ್ರಗಳು..

 




ಆ ಪತ್ರಗಳು ಈಗ ಕಳೆದುಹೋಗಿವೆ. ಸ್ಮಾರ್ಟ್ ಪೋನ್, ಲ್ಯಾಪ್‌ಟಾಪ್, ಸಿಸ್ಟಮ್ ಯುಗದಲ್ಲಿ ಬರೆಯುವ ಕಲೆ ಕ್ರಮೇಣವಾಗಿ ಕಡಿಮೆಯಾಗುತ್ತಿದೆ.  ತೀರ್ಥರೂಪ ತಂದೆಯವರಿಗೆ...ಉ. ಕು .ಸಾಂಪ್ರತ ಎಂಬ  ಯೋಗಕ್ಷೇಮದ ವಾಕ್ಯಗಳ ಮೂಲಕ,ನಲ್ಮೆಯ ಗೆಳಯ/ ಗೆಳತಿಗೆ ಸವಿನೆನಪುಗಳು ಮುಂತಾದ ವಾಕ್ಯಗಳಿಂದ  ಆರಂಭವಾಗುತ್ತಿದ್ದ  ಆ ಪತ್ರಗಳು  ಹಿರಿಯರ ಪಾದಗಳಲ್ಲಿ ಆಶೀರ್ವಾದ ಬೇಡುತ್ತಲೋ ನಲ್ಲನಲ್ಲೆಯರ ಸಿಹಿಮುತ್ತುಗಳ ನಿರೀಕ್ಷೆಯಲ್ಲಿ ಕೊನೆಗೊಳ್ಳುತ್ತಿದ್ದವು.  ನವಜಾತ ಶಿಶುವಿನ ಸುದ್ದಿ, ತಾಯಿಯ ಅನಾರೋಗ್ಯದ ನೋವು, ಹಣವನ್ನು ಕಳುಹಿಸುವ ಮನವಿ, ಮತ್ತು ವಿಫಲವಾದ ಬೆಳೆಗಳಿಗೆ ಕಾರಣಗಳು...! ಆ ಸರಳ "ನೀಲಿ ಮತ್ತು ಹಳದಿ  ಕಾಗದದ ಹಾಳೆ"ಯಲ್ಲಿ ನಮ್ಮ ಮನದ  ಭಾವನೆಗಳನ್ನು ಬೇರೆಡೆ ಇರುವ ನಮ್ಮ ಬಂಧುಗಳ ಜೊತೆಯಲ್ಲಿ ಹಂಚಿಕೊಳ್ಳುತ್ತಿದ್ದೆವು. 

ಯುವ ವಧು  ತನಗೆ ಬಂದ ಪತ್ರವನ್ನು ಎದೆಗಪ್ಪಿಕೊಂಡು ಏಕಾಂತದಲ್ಲಿ ಅದನ್ನು  ಓದಲು ಓಡಿಹೋಗುತ್ತಿದ್ದಳು.ಕಣ್ಣೀರಿನಿಂದ ತುಂಬಿದ ಕಣ್ಣುಗಳು. ಅದು ತಾಯಿಯ ಭರವಸೆ, ತಂದೆಯ ಬೆಂಬಲ, ಮಕ್ಕಳ ಭವಿಷ್ಯ ಮತ್ತು ಹಳ್ಳಿಯ ಹೆಮ್ಮೆ ಹೀಗೆ ಪತ್ರಗಳಲ್ಲಿ ಎಲ್ಲವೂ ಅಡಗಿರುತ್ತಿದ್ದವು.

 "ಪೋಸ್ಟ್‌ಮ್ಯಾನ್ ತಂದ  ಪತ್ರವನ್ನು ಅನಕ್ಷರಸ್ಥರಿಗೆ ಕೊಟ್ಟರೆ   ಯಾ‌‌‌ರಾದರೂ ಅದನ್ನು ಗಟ್ಟಿಯಾಗಿ ಓದುತ್ತಿದ್ದರು. ಅನಕ್ಷರಸ್ಥರು ಸಹ ಆ ಪತ್ರಗಳನ್ನು  ಮತ್ತೆ ಮತ್ತೆ ಸ್ಪರ್ಶಿಸುತ್ತಾ, ಒಳಗೆ ಬರೆದ ಭಾವನೆಗಳನ್ನು ಅನುಭವಿಸಲು ಪ್ರಯತ್ನಪಡುತ್ತಿದ್ದರು!

ಈಗ ಒಂದು ಬೆರಳು ಪರದೆಯ ಮೇಲೆ ಸ್ಕ್ರಾಲ್ ಮಾಡುತ್ತಾ ಬರೆಯುವ ಯಾಂತ್ರಿಕ ಬರಹಗಳಿಗೆ ಹೃದಯ ಬೆಸೆಯುವ ಶಕ್ತಿಗಿಂತ  ಹೃದಯಗಳನ್ನು ಮುರಿಯುತ್ತವೆಯೇನೋ ಎಂಬ ಭಾವನೆ ಬರುತ್ತದೆ. ಪತ್ರಗಳನ್ನು ಹತ್ತಾರು ವರ್ಷ ಕಾಪಿಟ್ಟುಕೊಂಡು ಮತ್ತೆ ನೋಡುತ್ತಾ ಓದುತ್ತಾ ಸಂಭ್ರಮಿಸುವವರು ಬಹಳ ಇದ್ದೇವೆ. ಈ ಆಧುನಿಕ ಯುಗದಲ್ಲಿ ಎಂತಹ ಭಾವನೆಗಳಿರುವ ಬರಹವಾದರೂ  ಫೋನ್‌ನಲ್ಲಿ  ಸ್ಟೋರೇಜ್ ಇಲ್ಲದಿದ್ದರೆ ತಕ್ಷಣವೇ ಡಿಲೀಟ್ ಭಾಗ್ಯ ಲಭಿಸುತ್ತದೆ. ಭಾರತದ ಹೆಮ್ಮೆಯ ಪೋಸ್ಟಲ್ ಡಿಪಾರ್ಟ್‌ಮೆಂಟ್ ‌ನ ಹಳದಿ ಮತ್ತು   ನೀಲಿ ಕಾಗದಗಳ ನಂಟು ನನಗಂತೂ ಪದೇ ಪದೇ ನೆನಪಾಗುತ್ತದೆ. ನಿಮಗೆ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 

No comments: