ಶತೃಗಳ ತಲೆ ತೆಗೆಯುವ ಬದಲಿಗೆ
ನಮ್ಮ ತಲೆಯಿಂದ ಅವರನ್ನು ತೆಗೆಯೋಣ.
ಮೊನ್ನೆ ಮಕ್ಕಳಿಗೆ ಶಾಲಾ ಪ್ರಾರ್ಥನೆಯ ಅವಧಿಯಲ್ಲಿ ಪತ್ರಿಕೆಯನ್ನು ಓದಿಸುವಾಗ ಅಂದಿನ ಸುಭಾಷಿತ ನನ್ನನ್ನು ಬಹಳ ಆಕರ್ಷಿಸಿತು ಅದು ಹೀಗಿತ್ತು.
"ನಮ್ಮ ಶತ್ರುವಿನ ಬಗ್ಗೆ ಸೇಡು ತೀರಿಸಿಕೊಳ್ಳಬೇಕು ಎಂದು ನಿಮಗನಿಸಿದರೆ ಶತೃವಿನ ತಲೆ ತೆಗೆಯ ಬೇಕಿಲ್ಲ.ಅವರನ್ನು ನಮ್ಮ ತಲೆಯಿಂದ ತೆಗೆದರೆ ಸಾಕು" ಹೌದಲ್ಲವಾ? ಇದರ ಬಗ್ಗೆ ಮಕ್ಕಳಿಗೆ ಬಿಡಿಸಿ ಹೇಳಿದೆ.ಇದೇ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಗೆಳೆಯರೊಬ್ಬರು ಕಳಿಸಿದ ಸಂದೇಶ ಪೂರಕವಾಗಿದೆ.
ಜೀವನದಲ್ಲಿ ಕೆಲವರನ್ನು ನಾವೇ ಮೊದಲು ಕ್ಷಮಿಸಿಬಿಡಬೇಕು.
ಅವರು ಕ್ಷಮೆಗೆ ಅರ್ಹರು ಎಂದಾಗಲೀ, ಅವರು ಮಾಡಿದ ತಪ್ಪು ಕ್ಷುಲ್ಲಕ ಎಂದಾಗಲೀ ಅಲ್ಲ.
ಅವರು ಕ್ಷಮೆಗೆ ಅರ್ಹರು ಎಂಬುದಕ್ಕಿಂತ ನಮ್ಮ ಮನಃಶಾಂತಿ, ನೆಮ್ಮದಿ, ಸಮಾಧಾನ ಬಹಳ ಮುಖ್ಯ.
ಒಮ್ಮೆ ಅಂಥವರನ್ನು ಕ್ಷಮಿಸಿಬಿಟ್ಟರೆ ಅವರು ತಮ್ಮ ಪಾಡಿಗೆ ಹೋಗುತ್ತಾರೆ. ನಮ್ಮ ಪಾಡಿಗೆ ನಾವಿರಬಹುದು.
ಒಂದು ವೇಳೆ ಕ್ಷಮಿಸಲಿಲ್ಲ ಎಂದುಕೊಳ್ಳಿ. ಅವರ ವಿರುದ್ಧ ಇನ್ನೂ ಹಗೆ, ವೈರತ್ವ ಮುಂದುವರಿಸಿದರೆ ಏನಾಗುವುದೆಂದರೆ ನಾವು ಅವರ ಬಗ್ಗೆ ಅನಗತ್ಯ ಯೋಚಿಸಬೇಕಾಗುತ್ತದೆ.*
ನಮ್ಮ ಆಲೋಚನೆಯಲ್ಲಿ ಅವರು ನೆಲೆಸುತ್ತಾರೆ. ಅವರ ಬಗ್ಗೆ ಯೋಚಿಸಿದಾಗಲೆಲ್ಲ ನಮ್ಮ ಮೂಡು ಹಾಳಾಗುತ್ತದೆ. ಮನಸ್ಸು ಕದಡಿದ ನೀರಿನಂತಾಗುತ್ತದೆ. ಇದರಿಂದ ನಮ್ಮ ಗುಣಮಟ್ಟದ ಸಮಯವೂ ಇಂಥ ಕ್ಷುಲ್ಲಕ ಸಂಗತಿಗಳಿಗಾಗಿ ಹಾಳಾಗುತ್ತದೆ.
ಹೀಗೆ ಮಾಡುವುದರಿಂದ ಅವರದ್ದೇನೂ ಹೋಗುವುದಿಲ್ಲ. ನಮ್ಮ ಸಮಯ, ನೆಮ್ಮದಿಯೇ ಹಾಳಾಗುತ್ತದೆ.
ಅದರ ಬದಲು ಅಂಥ ವ್ಯಕ್ತಿಗಳನ್ನು ಕ್ಷಮಿಸಿ ಬಿಡಬೇಕು. ಅಷ್ಟರಮಟ್ಟಿಗೆ ನಮ್ಮ ಮನಸ್ಸು ನಿರ್ಮಲವಾಗುತ್ತದೆ, ಹಗುರವಾಗುತ್ತದೆ. ನಾವು ಆ ಹಾಳು ಯೋಚನೆಗಳಿಂದ ದೂರಾಗುತ್ತೇವೆ.
ಅಷ್ಟಕ್ಕೂ ಇಂಥ ಸಂಗತಿಗಳಲ್ಲೇ ಕಾಲ ಕಳೆಯಲು ನಾವೇನು ಸಾವಿರಾರು ವರ್ಷಗಳ ಕಾಲ ಇಲ್ಲಿ ಗೂಟ ಹೊಡೆದುಕೊಂಡು ಇರುತ್ತೇವಾ? ಕೆಲವು ವ್ಯಕ್ತಿ, ಸಂಗತಿ, ಬದುಕು ವಿಷಯಗಳನ್ನು ಅಲ್ಲಲ್ಲಿಯೇ ಬಿಟ್ಟು ಮುಂದಕ್ಕೆ ಹೋಗುತ್ತಿರಬೇಕು. ನಮ್ಮ ನೆಮ್ಮದಿಗೆ ಅದು ಅನಿವಾರ್ಯ.ಅಲ್ಲವೆ?
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment