ಕಸ್ತೂರಿ ಕಂಕಣ..
ಶಾ ಮಂ ಕೃಷ್ಣ ರಾಯರವರ ಸಂಪಾದಕತ್ವದ ತ ರಾ ಸು ಸಾಹಿತ್ಯ ಸಂಪದ ಸಂಪುಟ ಒಂದರ ಐತಿಹಾಸಿಕ ಕಾದಂಬರಿಗಳ ಸೆಟ್ ನಲ್ಲಿ ಮೂರು ಕಾದಂಬರಿಗಳು ಇವೆ. ಅದರಲ್ಲಿ "ಕಸ್ತೂರಿ ಕಂಕಣ" ಕಾದಂಬರಿಯನ್ನು ಈ ವಾರ ಬಿಡುವಿನ ವೇಳೆಯಲ್ಲಿ ಓದಿದೆ.
ಚಿತ್ರದುರ್ಗದ ಮೇಲೆ ಸೇಡು ತೀರಿಸಿಕೊಳ್ಳಲು ಸೀರ್ಯದವರು ಮತ್ತು ತರೀಕೆರೆಯವರು ಜೊತೆ ಸೇರಿ ಕುಟಿಲ ತಂತ್ರ ರೂಪಿಸಿ ಸೀರ್ಯದ ರಂಗಪ್ಪ ನಾಯಕನ ಮಗ ಕೃಷ್ಣಪ್ಪನಾಯಕನ ಜೊತೆ ಕಸ್ತೂರಿ ರಂಗಪ್ಪನ ಮಗಳ ಜೊತೆಯಲ್ಲಿ ಜಾತಕ ಕೂಡಿ ಬರದಿದ್ದರೂ ಮದುವೆ ಮಾಡಿಸುತ್ತಾರೆ. ಇದರಲ್ಲಿ ತರೀಕೆರೆಯ ವಕೀಲ ವೆಂಕಪ್ಪಯ್ಯ ಸಹಜಾನಂದ ಸ್ವಾಮಿಯ ವೇಷ ಧರಿಸಿ ದುರ್ಗದ ನಕ್ಷೆ ಸಮೇತವಾಗಿ ರಹಸ್ಯ ಮಾಹಿತಿಗಳನ್ನು ಸೀರ್ಯ ಮತ್ತು ತರೀಕೆರೆಗೆ ರವಾನಿಸಿ ದುರ್ಗದ ಮೇಲೆ ಆಕ್ರಮಣ ಮಾಡಲು ಸಂಚು ರೂಪಿಸುತ್ತಾನೆ.
ಈ ಮದುವೆಯ ಮಾತುಕತೆ ಶುರುವಾದಾಗಿನಿಂದ ದುರ್ಗದ ಹಿತೈಷಿಯಾದ ಹಿರಿಯೂರಿನ ಕೆಂಚಣ್ಣ ನಾಯಕನಿಗೆ ಸೀರ್ಯದವರ ಮೇಲೆ ಅನುಮಾನವಿರುತ್ತದೆ ಈ ಕಾರಣದಿಂದ ಅವರ ಬೇಹುಗಾರರನ್ನು ಸೀರ್ಯದಲ್ಲಿ ಬಿಟ್ಟಿರುತ್ತಾನೆ.
ಇತ್ತ ಸೀರ್ಯದವರು ದುರ್ಗದ ಸೇನೆಯ ಗಮನ ಸೆಳೆಯಲು ಯಾವುದೇ ಸುಳಿವು ಕೊಡದೆ ಹಿರಿಯೂರಿನ ಮೇಲೆ ದಾಳಿ ಮಾಡುತ್ತಾರೆ.ಈ ಸಂದರ್ಭದಲ್ಲಿ ದುರ್ಗದವರು ತಮ್ಮ ಸೈನ್ಯವನ್ನು ತೆಗೆದುಕೊಂಡು ಇತ್ತ ಬಂದಾಗ ಇನ್ನೊಂದು ಕಡೆಯಿಂದ ತರೀಕೆರೆಯವರಿಂದ ದುರ್ಗದ ಮೇಲೆ ದಾಳಿ ನಡೆಸುವ ಯೋಜನೆ ಸಿದ್ದವಾಗಿರುತ್ತದೆ.ಇದರ ಜೊತೆಗೆ ದುರ್ಗದಲ್ಲಿರುವ ತಮ್ಮ ಕಡೆಯವರಿಂದ ಆದಷ್ಟು ದುರ್ಗವನ್ನು ನಾಶ ಮಾಡಲು ಹುನ್ನಾರ ಮಾಡಿರುತ್ತಾರೆ.ಇದರಲ್ಲಿ ನೀರಿನ ಮೂಲಗಳಿಗೆ ವಿಷ ಬೆರೆಸುವುದು, ಪ್ರಸಾದ ರೂಪದಲ್ಲಿ ವಿಷಪ್ರಾಶನ ಮತ್ತು ಕಗ್ಗೊಲೆ ಮಾಡುವ ಮೂಲಕ ದುರ್ಗದಲ್ಲಿ ಸ್ಮಶಾನದ ವಾತಾವರಣ ನಿರ್ಮಿಸುವುದು ವಿರೋಧಿಗಳ ಸಂಚಾಗಿರುತ್ತದೆ.ಕೆಂಚಪ್ಪನಾಯಕ, ದುರ್ಗದ ಯುವರಾಜ ಸರ್ಜಾನಾಯಕ ,ಸುಬ್ಬರಾಯ ಶಾಸ್ತ್ರಿ ಮುಂತಾದ ನಿಷ್ಠಾವಂತ ಪ್ರಜೆಗಳ ಸಾಂಘಿಕ ಪ್ರಯತ್ನದಿಂದ ದುರ್ಗಕ್ಕೆ ಒದಗಿದ ಗಂಡಾಂತರ ನೀಗುತ್ತದೆ. ತಮ್ಮನ್ನು ನಂಬಿದ ಸಾಮಂತರನ್ನು ಕಸ್ತೂರಿ ರಂಗಪ್ಪ ನಾಯಕ ಅಭಯ ನೀಡಿ ಕಾಯುತ್ತಾನೆ. ಅದು ಹೇಗೆ ಎಂಬುದನ್ನು ನೀವು ಕಾದಂಬರಿ ಓದಿಯೇ ಅನುಭವಿಸಬೇಕು.
ಈ ಕಾದಂಬರಿಯ ಸಂಭಾಷಣೆಗಳು ನನಗೆ ಬಹಳ ಹಿಡಿಸಿದವು.ಅದರಲ್ಲೂ ಪ್ರತಿ ಪೇಜ್ ಗೆ ಒಂದಾದರೂ ಸಮಯೋಚಿತವಾದ ಗಾದೆಗಳನ್ನು ಬಳಕೆ ಮಾಡಿರುವುದು ನನ್ನ ಗಮನ ಸೆಳೆದ ಮತ್ತೊಂದು ಅಂಶ.ಪ್ರಸ್ತುತ ಚಿತ್ರದುರ್ಗ ಜಿಲ್ಲೆಯಲ್ಲಿ ವಾಸವಾಗಿರುವವರು ಮತ್ತು ಚಿತ್ರದುರ್ಗದ ಕೋಟೆ ಮತ್ತು ಜಿಲ್ಲೆಯ ವಿವಿಧ ತಾಲ್ಲೂಕುಗಳ ಬಗ್ಗೆ ಮಾಹಿತಿ ಇರುವವರಿಗೆ ಈ ಕಾದಂಬರಿ ಓದುವಾಗ ಆ ಸ್ಥಳಗಳಲ್ಲಿ ನಮ್ಮ ಕಣ್ಮುಂದೆಯೇ ಘಟನೆಗಳು ನಡೆಯುತ್ತಿವೆಯೇನೋ ಎಂಬಂತೆ ಚಿತ್ರಿಸಿದ್ದಾರೆ ತ ರಾ ಸು ರವರು.
ಇದೇ ಸಂಪುಟದಲ್ಲಿರುವ ಮತ್ತೆರಡು ಕಾದಂಬರಿಗಳಾದ ಕಂಬನಿಯ ಕುಯಿಲು ಮತ್ತು ರಾಜ್ಯ ದಾಹ ಓದಿ ಮತ್ತೆ ನಿಮ್ಮೊಂದಿಗೆ ಹಂಚಿಕೊಳ್ಳುವೆ.
ರಿಯಾಯಿತಿ ದರದಲ್ಲಿ ಪುಸ್ತಕ ನೀಡಿದ ಆತ್ಮೀಯರಾದ ಎಂ ವಿ ಶಂಕರಾನಂದ ರವರನ್ನು ಸಂದರ್ಭದಲ್ಲಿ ಸ್ಮರಿಸುತ್ತೇನೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment