ಸಂಸಾರದ ಗಾಡಿ
ಜರಿಯದಿರು ಇದು ನನ್ನ ಜೋಪಡಿ
ನೀನೇ ಬೆರಗಾಗುವೆ ನನ್ನಪ್ರೀತಿ ನೋಡಿ
ಮಲಗಿಸುವೆ ನಿನ್ನ ಲಾಲಿ ಹಾಡಿ
ಇಬ್ಬರೂ ಎಳೆಯೋಣ ಸಂಸಾರದ ಗಾಡಿ
ಕರೆದರೆ ಎಲ್ಲಿದ್ದರೂ ಬರುವೆ ಓಡಿ
ಜೀವಿಸೋಣ ಹಕ್ಕಿಗಳಂತೆ ಜೊತೆಗೂಡಿ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಸಂಸಾರದ ಗಾಡಿ
ಜರಿಯದಿರು ಇದು ನನ್ನ ಜೋಪಡಿ
ನೀನೇ ಬೆರಗಾಗುವೆ ನನ್ನಪ್ರೀತಿ ನೋಡಿ
ಮಲಗಿಸುವೆ ನಿನ್ನ ಲಾಲಿ ಹಾಡಿ
ಇಬ್ಬರೂ ಎಳೆಯೋಣ ಸಂಸಾರದ ಗಾಡಿ
ಕರೆದರೆ ಎಲ್ಲಿದ್ದರೂ ಬರುವೆ ಓಡಿ
ಜೀವಿಸೋಣ ಹಕ್ಕಿಗಳಂತೆ ಜೊತೆಗೂಡಿ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ರೋಗಮುಕ್ತರಾಗಿ ದೀರ್ಘಕಾಲ ಜೀವಿಸೋಣ.
ಸಾವೆಂದರೆ ಎಲ್ಲರಿಗೂ ಅವ್ಯಕ್ತ ಭಯ. ಸಾಯಲು ಯಾರೂ ತಯಾರಿರುವುದಿಲ್ಲ.ಅದರಲ್ಲೂ ಅಕಾಲಿಕ ಸಾವನ್ನು ಯಾರೂ ಬಯಸುವುದಿಲ್ಲ.ಆದರೂ ಇತ್ತೀಚಿನ ದಿನಗಳಲ್ಲಿ ಪ್ರಾಂತ್ಯ ಭೇದಗಳಿಲ್ಲದೇ ಸಾಯಬಾರದ ವಯಸ್ಸಿನಲ್ಲಿ ಎಲ್ಲಾ ವಯೋಮಾನದವರು ಮರಣಹೊಂದುತ್ತಿರುವುದು ಆಘಾತಕಾರಿ ಸಂಗತಿ.ಇದಕ್ಕೆ ಹವಾಮಾನ ವೈಪರೀತ್ಯ, ಆಹಾರ ಪದ್ದತಿ, ಮಾಲಿನ್ಯ,ಒತ್ತಡದ ಜೀವನ, ಆಶಿಸ್ತಿನ ಜೀವನಶೈಲಿ ಹೀಗೆ ನಾನಾ ಕಾರಣಗಳನ್ನು ಪಟ್ಟಿ ಮಾಡಬಹುದು.
ಇತ್ತೀಚಿನ ಒಂದು ಅಧ್ಯಯನದ ಪ್ರಕಾರ, ಆರೋಗ್ಯಕರ ಆಹಾರವನ್ನು ಅಳವಡಿಸಿಕೊಂಡು ನಮ್ಮ ಜೀವನ ಶೈಲಿಯನ್ನು ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿಕೊಂಡರೆ ಮಧ್ಯವಯಸ್ಕ ವ್ಯಕ್ತಿಗಳ ಜೀವಿತಾವಧಿಯನ್ನು ಸುಮಾರು ಒಂದು ದಶಕದವರೆಗೆ ವಿಸ್ತರಿಸಬಹುದು ಎಂಬ ಮಾಹಿತಿಯನ್ನು ನೀಡಿದೆ. ಈ ವಾರದ ಆರಂಭದಲ್ಲಿ ನೇಚರ್ ಫುಡ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯು ಯುಕೆ ಬಯೋಬ್ಯಾಂಕ್ ಅಧ್ಯಯನದಲ್ಲಿ ಭಾಗವಹಿಸುವ ಸುಮಾರು ಅರ್ಧ ಮಿಲಿಯನ್ ಬ್ರಿಟಿಷ್ ನಿವಾಸಿಗಳ ಆರೋಗ್ಯ ಡೇಟಾವನ್ನು ವಿಶ್ಲೇಷಿಸಿದೆ, ಕಾಲಾನಂತರದಲ್ಲಿ ಅವರ ಆಹಾರ ಪದ್ಧತಿಯನ್ನು ದಾಖಲಿಸಿದೆ.
ಸಂಶೋಧಕರು 467,354 ಭಾಗವಹಿಸುವವರನ್ನು ಅವರ ಆಹಾರದ ಆಯ್ಕೆಗಳ ಆಧಾರದ ಮೇಲೆ ವರ್ಗೀಕರಿಸಿ ಈ ಅಭ್ಯಾಸಗಳು ಹೇಗೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಟ್ರ್ಯಾಕ್ ಮಾಡಿದ್ದಾರೆ. ಆರೋಗ್ಯಕರ ಆಹಾರದಿಂದ ದೀರ್ಘಾಯುಷ್ಯಕ್ಕೆ ಸಂಬಂಧಿಸಿದ 40 ರ ವಯಸ್ಸಿನ ವ್ಯಕ್ತಿಗಳು ತಮ್ಮ ಜೀವಿತಾವಧಿಯಲ್ಲಿ ಸುಮಾರು 10 ವರ್ಷಗಳಷ್ಟು ಹೆಚ್ಚು ಕಾಲ ಜೀವಿಸಬಹುದು ಎಂಬುದನ್ನು ಬಹಿರಂಗಪಡಿಸಿದೆ.
ಹೆಚ್ಚಿನ ಜೀವಿತಾವಧಿಯು ನಮ್ಮದಾಗಲು ಆರೋಗ್ಯಕರ ಆಹಾರದ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಆಹಾರ ಪದ್ಧತಿ ಈ ಕೆಳಗಿನಂತಿದ್ದರೆ ಉತ್ತಮ ಆಯುರಾರೋಗ್ಯ ನಮ್ಮದಾಗುವಲ್ಲಿ ಸಂದೇಹವಿಲ್ಲ.
ಅನಾರೋಗ್ಯಕರ ಕೊಬ್ಬು ,ಸಕ್ಕರೆ, ಸೋಡಿಯಂ ಪದಾರ್ಥಗಳನ್ನು ಅಧಿಕವಾಗಿ ಸೇವಿಸಿದರೆ ಹೃದ್ರೋಗ, ಪಾರ್ಶ್ವವಾಯು ಮತ್ತು ಟೈಪ್ 2 ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಬೆಳವಣಿಗೆಗೆ ಕಾರಣವಾಗಬಹುದು. ಆದಷ್ಟು ಇಂತಹ ಆಹಾರವನ್ನು ಕಡಿಮೆ ಸೇವಿಸೋಣ.
ಪೈಬರ್,ಜೀವಸತ್ವಗಳು, ಖನಿಜಗಳು, ಮತ್ತು ಪೋಷಕಾಂಶಗಳನ್ನು ಅಗತ್ಯಕ್ಕೆ ಅನುಗುಣವಾಗಿ ತೆಗೆದುಕೊಳ್ಳೋಣ. ಇಂತಹ ಸಮತೋಲಿತ ಆಹಾರ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ದೀರ್ಘಕಾಲದ ಕಾಯಿಲೆಗಳ ವಿರುದ್ಧ ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.
ಹಣ್ಣು ತರಕಾರಿಗಳಲ್ಲಿ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅವು ಒಟ್ಟಾರೆ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತವೆ ಮತ್ತು ವಿವಿಧ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಅದ್ದರಿಂದ ಪ್ರತಿ ದಿನ ಇವುಗಳು ನಮ್ಮ ಆಹಾರದಲ್ಲಿರುವಂತೆ ಗಮನಹರಿಸೋಣ.
ಶಾಖಾಹಾರಿಗಳು ಮೀನುಗಳನ್ನು ಸೇವಿಸಬಹುದು ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್ಗಳಂತಹ ಮೀನುಗಳು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ದೀರ್ಘಾಯುಷ್ಯಕ್ಕೆ ಕೊಡುಗೆ ನೀಡುತ್ತದೆ
ಬೀಜಗಳು ಮತ್ತು ಧಾನ್ಯಗಳು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಇವು ಆರೋಗ್ಯಕರ ಕೊಬ್ಬುಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲಗಳಾಗಿವೆ. ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ ಮತ್ತು ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತವೆ
ಕಂದು ಅಕ್ಕಿ, ಗೋಧಿಯಂತಹ ಆಹಾರಗಳು ಸಂಕೀರ್ಣ ಕಾರ್ಬೋಹೈಡ್ರೇಟ್ಗಳು, ಫೈಬರ್ ಮತ್ತು ವಿವಿಧ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅವು ಸ್ಥಿರವಾದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡಲು ಸಹಾಯ ಮಾಡುತ್ತವೆ.
ಹೀಗೆ ಆಹಾರಕ್ಕೂ ನಮ್ಮ ಸರಾಸರಿ ಜೀವಿತಾವಧಿಗೂ ಪರಸ್ಪರ ಸಂಬಂಧವಿರುವುದರಿಂದ ಉತ್ತಮ ಸಮತೋಲಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳೋಣ ಮತ್ತು ರೋಗಮುಕ್ತರಾಗಿ ಆರೋಗ್ಯದಿಂದ ದೀರ್ಘಕಾಲ ಬಾಳೋಣ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
ಕೈಲಾಸಪತಿಯನ್ನು ಜಯಿಸಿದ ನಕ್ಕೀರ
ಅವನ ಹೆಸರು ನಕ್ಕೀರ ಯಾವಾಗಲೂ ಸಮುದ್ರದ ತಡಿಯಲ್ಲೇ ಇರುವವನು. ಅವನ ಕೆಲಸವೆಂದರೆ ಸಮುದ್ರದ ಆಳಕ್ಕೆ ಮುಳುಗಿ ಅಲ್ಲಿದ್ದ ಮುತ್ತುಗಳನ್ನು ಆಯ್ದು ತರುವುದು. ಅದು ಅವನಿಗೆ ದೈಹಿಕ ಕೆಲಸವಾದರೂ ಅವನ ಪ್ರತಿ ಉಸಿರಿನಲ್ಲಿ ಶಿವನಿದ್ದ. ಅವನು ನೀರಿನಲ್ಲಿ ಮುಳುಗುವಾಗ, ಮುತ್ತುಗಳನ್ನು ಆಯುವಾಗ, ನೀರಿನಿಂದ ಹೊರಬಂದು ಅವುಗಳನ್ನು ಬೇರ್ಪಡಿಸುವಾಗ ಪ್ರತಿಕ್ಷಣವೂ ಶಿವಧ್ಯಾನ. ಅವನಿಗೆ ಶಿವಭಕ್ತನೆಂದು ಅಷ್ಟು ದೊಡ್ಡ ಹೆಸರು ಬಂದದ್ದನ್ನು ಕಂಡು ಶಿವನಿಗೂ ಅಸೂಯೆಯಾಯಿತಂತೆ. ಅವನನ್ನು ಕಂಡು ಪರೀಕ್ಷಿಸಬೇಕೆಂದು ಶಿವ ಸಮುದ್ರ ದಂಡೆಗೆ ಬಂದು ಪ್ರತ್ಯಕ್ಷನಾದ. ನಕ್ಕೀರ ತನ್ನ ಕಾಯಕದಲ್ಲಿ ಎಷ್ಟು ತನ್ಮಯನಾಗಿದ್ದನೆಂದರೆ ಮುಂದೆ ಶಿವ ನಿಂತದ್ದು ಕಾಣಲಿಲ್ಲವಂತೆ! ಅವನನ್ನು ಗಮನಿಸದೇ ನೀರಿನಲ್ಲಿ ಮುಳುಗು ಹಾಕಿದ. ಶಿವನಿಗೆ ಕೋಪ ಬಂತು. ತನ್ನ ಭಕ್ತನೆಂದು ಜನ ಈತನನ್ನು ಕೊಂಡಾಡುತ್ತಿದ್ದರೆ ಈತ ಸಾಕ್ಷಾತ್ ತಾನೇ ಮುಂದೆ ಬಂದು ನಿಂತರೂ ಗಮನಿಸುತ್ತಿಲ್ಲ. ಶಿವನ ಕೋಪ ಹೆಚ್ಚಾಯಿತು.
ನಕ್ಕೀರ ನೀರಿನಿಂದ ಮೇಲೆ ಬಂದೊಡನೆ ಕ್ರುದ್ಧನಾಗಿ ತನ್ನ ಮೂರನೆಯ ಕಣ್ಣನ್ನು ತೆರೆದ! ಶಿವನ ಹಣೆಗಣ್ಣು ತೆರೆದರೆ ಪ್ರಪಂಚವೇ ಭಸ್ಮವಾಗಿ ಹೋಗುತ್ತದೆ. ನಕ್ಕೀರ ಹೇಗೆ ಬದುಕಿ ಉಳಿದಾನು? ಆದರೆ ಆಶ್ಚರ್ಯ! ಶಿವನ ತೆರೆದ ಕಣ್ಣೀರಿನ ಬೆಂಕಿಯ ಉರಿ ನಕ್ಕೀರನಿಗೆ ತಗುಲಲಿಲ್ಲ. ಅವನು ತನ್ನ ಕೆಲಸದಲ್ಲೇ ತೊಡಗಿದ್ದ. ಶಿವ ಆಶ್ಚರ್ಯದಿಂದ ನಕ್ಕೀರನನ್ನು ಕೇಳಿದ, ‘ಅಲ್ಲಯ್ಯ, ನನ್ನನ್ನು ಕಾಣಲೆಂದು ಅನೇಕಾನೇಕ ಶರಣರು ನೂರಾರು ವರ್ಷ ತಪಸ್ಸು ಮಾಡಿದರೂ ದೊರೆಯದ ನಾನು, ನಿನ್ನ ಮುಂದೆಯೇ ನಿಂತಿದ್ದರೂ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತೀದ್ದೀಯಾ. ಇದಕ್ಕೆ ಏನು ಕಾರಣ?’ ಆಗ ನಕ್ಕೀರ, ‘ದೇವಾ, ನಾನು ನನ್ನ ಕೆಲಸದಲ್ಲಿ ತನ್ಮಯನಾಗಿದ್ದೆ. ನನಗೆ ಕಾಯಕವೇ ಪೂಜೆ. ಆ ಕಾಯಕ ನೀನೇ.ನೀನೇ ನನ್ನ ಕಾಯಕದ ಉದ್ದೇಶ’ ಎಂದಾಗ ಶಿವ, ‘ಹೌದು, ಆದರೆ ನನ್ನ ಉರಿಗಣ್ಣಿನ ಬೆಂಕಿ ನಿನ್ನನ್ನು ಯಾಕೆ ಸುಡಲಿಲ್ಲ?’ ಎಂದು ಕೇಳುತ್ತಾನೆ.
ಅದಕ್ಕೆ ನಕ್ಕೀರ, ‘ದೇವಾ, ನಾನು ದುಡಿದು ತಿನ್ನುವವನು, ನೀನು ತಿರಿದು ತಿನ್ನುವವನು. ದುಡಿದು ತಿನ್ನುವವನು ತಿರಿದು ತಿನ್ನುವವನಿಗಿಂತ ದೊಡ್ಡವನು. ನಿನ್ನ ಉರಿಗಣ್ಣಿಗಿಂತ ನನ್ನ ಕಾಯಕದ ಶಕ್ತಿ ಹೆಚ್ಚು’ ಎನ್ನುತ್ತಾನೆ. ಈ ಮಾತಿಗೆ ಶಿವ ಮೆಚ್ಚುತ್ತಾನೆ, ನಕ್ಕೀರನ ಕಾಯಕದ ಶಕ್ತಿಯನ್ನು ಹೊಗಳುತ್ತಾನೆ, ಆಶೀರ್ವದಿಸುತ್ತಾನೆ.
ಕಾಯಕವೇ ಕೈಲಾಸ ಎಂದ ಶರಣರ ಚಿಂತನೆಯು ಇದೇ ಆಶಯವನ್ನು ಹೊಂದಿದೆ.ನಮ್ಮ ಕರ್ತವ್ಯವೇ ನಮಗೆ ದೇವರಾಗಲಿ ಎಲ್ಲರೂ ದುಡಿದು ತಿನ್ನುವ ಗುಣವನ್ನು ಬೆಳೆಸಿಕೊಳ್ಳೋಣ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಯಶಸ್ಸಿಗೆ ಐದು ಪಾಠಗಳು.
ನಾವು ಯಾವುದೇ ಸಾಧಕರ ಯಶೋಗಾಥೆಗಳನ್ನು ಕೇಳುವಾಗ ಎಲ್ಲದರಲ್ಲೂ ಕೆಲ ಸಾಮಾನ್ಯ ಅಂಶಗಳು ಕಂಡುಬರುತ್ತವೆ.ಆ ಸಾಧಕರ ಸಾಧನೆಯ ಹಿಂದೆ ಈ ಕೆಳಕಂಡ ಅಂಶಗಳಿದ್ದೇ ಇರುತ್ತವೆ.
1. ನಮ್ಮನ್ನು ನಂಬೋಣ .
ನಮ್ಮನ್ನು ನಾವು ನಂಬದಿದ್ದರೆ ಮತ್ತಾರು ನಂಬುತ್ತಾರೆ. ಎಲ್ಲಾ ಯಶಸ್ಸಿನ ಅಡಿಪಾಯವೇ ನಂಬಿಕೆ ನಮ್ಮ ಮೇಲೆ ನಮಗೆ ನಂಬಿಕೆ ಬರಲು ಮೊದಲು ನಾವು ಸಣ್ಣ ಪುಟ್ಟ ಯಶಸ್ಸು ಗಳಿಸುವುದು ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಮೂಡುತ್ತದೆ. ನಮ್ಮ ಸಾಮರ್ಥ್ಯ ಮತ್ತು ಸಾಧನೆಗಳನ್ನು ಪ್ರತಿಬಿಂಬಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅದಕ್ಕೆ ತಾಳ್ಮೆ ನಮ್ಮ ಜೊತೆಯಲ್ಲಿರಬೇಕು ಮತ್ತು ಸಕಾರಾತ್ಮಕ ಸ್ವಯಂಚಿತ್ರಣವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು.
2. ಗುರಿಯಿರಲಿನಮಗೆನಾವು ಜೀವನದಲ್ಲಿ ಏನನ್ನು ಸಾಧಿಸಲು ಬಯಸುತ್ತೇವೆ ಎಂಬುದು ನಮಗೆ ಸ್ಪಷ್ಟವಾದ ಗುರಿಯಿರಬೇಕು. ಪ್ರತಿದಿನ ಆ ಗುರಿಯನ್ನು ಜ್ಞಾಪಿಸಿಕೊಳ್ಳುತ್ತಾ , ಕ್ರಮೇಣ ಆ ಗುರಿಯೆಡೆಗೆ ಸಾಗುವ ಪ್ರಮಾಣಿಕ ಪ್ರಯತ್ನ ಮಾಡುತ್ತಲೇ ಇರಬೇಕು. ಆ ಗುರಿ ತಲುಪಲು ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕು.
3. ಚಲನೆಯಿರಲಿ.
ನಾವು ಬಹುತೇಕರು ಆರಂಭಶೂರರು.ಮೊದಲು ಸ್ವಲ್ಪ ದಿನ ನಮ್ಮ ಗುರಿ ತಲುಪಲು ಬಹಳ ಜೋಶ್ ನಲ್ಲಿ ನಡೆದು,ಕ್ರಮೇಣವಾಗಿ ಸೋಮಾರಿತನ ನಮ್ಮನ್ನು ತಬ್ಬಿದಾಗ ಹೊದ್ದು ಮಲಗಿಬಿಡುತ್ತೇವೆ. ಈಗಾಗಬಾರದು.
ಸದಾ ಸುಮ್ಮನೆ ಕುಳಿತುಕೊಳ್ಳದೇ ಮತ್ತು ಏನಾಗುತ್ತದೆ ಎಂದು ಕಾಯದೇ. ನಮ್ಮ ಕಾರ್ಯದಲ್ಲಿ ಚಲನಶೀಲರಾಗಬೇಕು ಮತ್ತು ನಮ್ಮ ಗುರಿಗಳತ್ತ ಸಾಗಲು ಸಣ್ಣ ಸಣ್ಣ ಹೆಜ್ಜೆಗಳನ್ನು ಇಡಬೇಕು. ಈ ಹೆಜ್ಜೆಗಳು ಕೂಡ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಹುದು. ದೊಡ್ಡ ದಾರಿ ತಲುಪಲು ಸಣ್ಣ ಹೆಜ್ಜೆಗಳು ಅಗತ್ಯವಲ್ಲವೆ?
4. ನಿರಂತರ ಪ್ರಯತ್ನ.
ನಮ್ಮ ಸಾಧನೆಯ ಹಾದಿಯಲ್ಲಿ ಅಲ್ಲಲ್ಲಿ ಅಡತಡೆಗಳು, ಕಲ್ಲುಮುಳ್ಳುಗಳು ಸಿಗಬಹುದು.
ದಾರಿಯುದ್ದಕ್ಕೂ ಹಿನ್ನಡೆಗಳು ಉಂಟಾಗಬಹುದು. ಆಗ ನಾವು ಛಲಬಿಡದ ತ್ರಿವಿಕ್ರಮರಾಗಬೇಕು.ಸತತ ಪ್ರಯತ್ನದಿಂದ ಒಂದಲ್ಲ ಒಂದು ದಿನ ಗೆದ್ದ ನಾವು ನಮ್ಮ ಗುರಿಗಳನ್ನು ತಲುಜೀವನದಲ್ಲಿನ
5. ಧನಾತ್ಮಕವಾಗಿರಿ.
ಸಣ್ಣ ಸೋಲು, ಗೆಳೆಯರ ಕೊಂಕು ಮಾತು ಮತ್ತು ನಕಾರಾತ್ಮಕ ಮಾತುಗಳು ನಮ್ಮನ್ನು ಎದೆಗುಂದುವಂತೆ ಮಾಡುತ್ತವೆ.ಇಂತಹ ಸಂದರ್ಭಗಳಲ್ಲಿ ನಾವು ಸಕಾರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳ ಬೇಕು.
ಸಕಾರಾತ್ಮಕ ಮನೋಭಾವವು ನಮಗೆ ಅಡೆತಡೆಗಳನ್ನು ನಿವಾರಿಸಲು ಮತ್ತು ಪ್ರೇರೇಪಿಸಲು ಸಹಾಯ ಮಾಡುತ್ತದೆ. ನಮ್ಮ ಜೀವನದಲ್ಲಿನ ಒಳ್ಳೆಯ ವಿಷಯಗಳ ಮೇಲೆ ಸದಾ ಕೇಂದ್ರೀಕರಿಸಬೇಕು ಮತ್ತು ನಕಾರಾತ್ಮಕ ಆಲೋಚನೆಗಳು ನಮ್ಮನ್ನು ಕೆಡಿಸಲು ಬಿಡಬಾರದು.ಧನಾತ್ಮಕ ಜನರೊಂದಿಗೆ ನಮ್ಮನ್ನು ಸುತ್ತುವರೆದಿರುವಂತೆ ನೋಡಿಕೊಳ್ಳೋಣ.ನಮ್ಮ ಸಮಯವನ್ನು ನಾವು ಕಳೆಯುವ ಜನರು ನಮ್ಮ ಯಶಸ್ಸಿನ ಮೇಲೆ ದೊಡ್ಡ ಪ್ರಭಾವ ಬೀರಬಹುದು. ನಮ್ಮನ್ನು ಬೆಂಬಲಿಸುವ ಮತ್ತು ನಮ್ಮ ಗುರಿಗಳನ್ನು ತಲುಪಲು ನಮ್ಮನ್ನು ಪ್ರೋತ್ಸಾಹಿಸುವ ಸಕಾರಾತ್ಮಕ ಜನರೊಂದಿಗೆ ಹೆಚ್ಚು ಒಡನಾಟ ಹೊಂದಿದರೆ ನಮ್ಮ ಗುರಿ ಸಾಧಿಸಲು ಪೂರಕವಾಗುತ್ತದೆ.
ಈ 5 ಪಾಠಗಳನ್ನು ಅನುಸರಿಸುವ ಮೂಲಕ ನಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಯಶಸ್ಸಿನ ಸಾಧ್ಯತೆಗಳನ್ನು ನಾವು ಹೆಚ್ಚಿಸಬಹುದು. ನೆನಪಿಡಿ ಯಶಸ್ಸು ಅದೃಷ್ಟ ಅಥವಾ ಪ್ರತಿಭೆಯಿಂದಲ್ಲ. ಇದು ಕಠಿಣ ಪರಿಶ್ರಮ ಮತ್ತು ನಿರ್ಣಯ. ಆದ್ದರಿಂದ ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಕಷ್ಟಪಟ್ಟು ಇಷ್ಟ ಪಟ್ಟು ಕೆಲಸ ಮಾಡುವುದನ್ನು ಮುಂದುವರಿಸೋಣ ತನ್ಮೂಲಕ ಉತ್ತಮವಾದ ಸಾಧನೆ ಮಾಡೋಣ.
ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
9900925529
ಬಾಳೋಣ ಬಾರ
ಜತನದಿ ಕಾಪಾಡೋಣ ಪರಿಸರ
ನೀಡುವುದದು ನಮಗೆ ಸಕಲ ವರ
ಸರ್ವ ಜೀವಿಗಳೂ ನಮ್ಮ ಪರಿವಾರ
ಸಮನ್ವಯದಿ ಬಾಳೋಣ ಬಾರಾ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ವಿಶ್ವದ ಎಂಟನೆಯ ಅದ್ಭುತ
ಪ್ರಪಂಚದ ಏಳು ಅದ್ಭುತಗಳನ್ನು ತಿಳಿದ ನಮಗೆ ಎಂಟನೆಯ ಅದ್ಭುತ ಯಾವುದು ಎಂಬ ಕುತೂಹಲವಿತ್ತು ಈ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.ಇಟಲಿಯ ಪೋಂಪು ವನ್ನು ಹಿಂದಿಕ್ಕಿ ಕಾಂಬೋಡಿಯಾದ ಆಂಕೋರ್ ವಾಟ್ ದೇವಾಲಯ ಸಂಕೀರ್ಣ ಈ ಕೀರ್ತಿಗೆ ಭಾಜನವಾಗಿದೆ.
ನಮ್ಮ ಭಾರತದ ತಾಜ್ ಮಹಲ್ ಸೇರಿದಂತೆ ಚೀನಾದ ಗ್ರೇಟ್ ವಾಲ್, ಜೋರ್ಡಾನ್ನ ಪೆಟ್ರಾ, ಇಟಲಿಯ ಕೊಲೋಸಿಯಮ್, ಬ್ರೆಜಿಲ್ನ ಕ್ರೈಸ್ಟ್ ದಿ ರಿಡೀಮರ್, ಮೆಕ್ಸಿಕೋದ ಷಿಚೆನ್ ಇಟ್ಜಾ, ಪೆರುವಿನ ಮಾಚು ಪಿಚು ಇವು ಪ್ರಪಂಚದ ಏಳು ಅದ್ಭುತಗಳು.
ಆಂಕೋರ್ ವಾಟ್ ಕಾಂಬೋಡಿಯಾ ದೇಶದಲ್ಲಿರುವ ಹಿಂದೂ ದೇವಾಲಯ ಸಮುಚ್ಛಯ. ಕಾಂಬೋಡಿಯಾ ದೇಶದ ಖ್ಮೇರ್(Khmer) ಸಾಮ್ರಾಜ್ಯದ ರಾಜಧಾನಿಯಾಗಿದ್ದ 'ಆಂಗ್ಕರ್' ಎಂಬಲ್ಲಿದೆ. ಇದನ್ನು ಸಾಮ್ರಾಟ ಎರಡನೆಯ ಸೂರ್ಯವರ್ಮ 12ನೆಯ ಶತಮಾನದಲ್ಲಿ ಕಟ್ಟಿಸಿದನು.ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಸಮುಚ್ಛಯವಾಗಿದೆ.ಇದು ಆಯತಾಕಾರದಲ್ಲಿ 2800 ಆಡಿ ಅಗಲ ಮತ್ತು 3800 ಅಡಿ ಉದ್ದವಾಗಿದೆ. ಮರಳುಕಲ್ಲು ಹಾಗೂ ಇತರೆಕಲ್ಲು ಉಪಯೋಗಿಸಿ ಕಟ್ಟಲಾಗಿದೆ. ಮೇರುಪರ್ವತ ವನ್ನು ಹೋಲುವಂತೆ ಖ್ಮೇರ್ ಹಾಗೂ ದಕ್ಷಿಣ ಭಾರತೀಯ ವಾಸ್ತುಶಿಲ್ಪದಂತೆ ಇದನ್ನು ಕಟ್ಟಲಾಗಿದೆ. ಇದರ ನಿರ್ಮಾಣಕ್ಕೆ 3೦ ವರ್ಷಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಯಿತು.
2 ನೆಯ ಸೂರ್ಯವರ್ಮ ತನ್ನ ರಾಜಧಾನಿಯಾಗಿದ್ದ ಯಶೋಧರಪುರದ ಪಕ್ಕದಲ್ಲೇ ಈ ಅಗಾಧ, ಅನುಪಮ ದೇವಾಲಯವನ್ನು ನಿರ್ಮಿಸಿದ.
ಗೊಂಡಾರಣ್ಯದ ಮಧ್ಯದಲ್ಲಿ ಮರಗಳನ್ನು ಕಡಿದು ಕಟ್ಟಡಕ್ಕೆ ಅಣಿಮಾಡಿಕೊಂಡ ವಿಶಾಲ ಪ್ರದೇಶ; ಅದನ್ನು ಸುತ್ತುಗಟ್ಟಿರುವ ನೀರು ತುಂಬಿದ ರಚನೆಗಳನ್ನು ದಾಟಿ ದ್ವಾರಮಂಟಪಕ್ಕೆ ಹೋಗುವಂತೆ ಎತ್ತರಿಸಿ ಕಲ್ಲಿನಿಂದ ಕಟ್ಟಿರುವ ಒಡ್ಡುದಾರಿ, ನೀರಿನಿಂದಲೇ ಎದ್ದು ನಿಂತಿರುವಂತೆ ನಿರ್ಮಿತವಾಗಿ ಆ ಪ್ರದೇಶವನ್ನು ಸುತ್ತುವರಿದಿರುವ ಮೊಗಸಾಲೆ, ಪಕ್ಕದಲ್ಲಿ ಸುತ್ತುವರಿದಿರುವ ಹೊರಾಂಗಣ, ಅದರ ಸುತ್ತ ಒಂದು ತಗ್ಗುಗೋಡೆ ಮತ್ತು ಒಳಾಂಗಣ, ಮಧ್ಯದಲ್ಲಿ ಇಡೀ ಪ್ರದೇಶವನ್ನಾಕ್ರಮಿಸಿರುವ, ಪರಸ್ಪರಾನುರೂಪತೆಯನ್ನು ಹೊಂದಿ ವಾಸ್ತುಶಿಲ್ಪಕಲಾವೈಭವವನ್ನು ಮೆರೆಸುತ್ತಲಿರುವ, ಕಟ್ಟಡಗಳ ನಡುವೆ ನಿಂತಿರುವ ದೇವಸ್ಥಾನ. ಚಚ್ಚೌಕವಾದ ಈ ಪ್ರದೇಶದ ಸುತ್ತುಗೋಡೆಗಳು ಒಂದೊಂದೂ ಒಂದು ಮೈಲಿನಷ್ಟು ಉದ್ದವಿದೆ. ಒಳಗೆ ಸುತ್ತಲೂ ಬಂದಿರುವ ಹೊರಾಂಗಣ ಮತ್ತು ಒಳಾಂಗಣಗಳು, ಸಾವಿರಾರು ಜನರು ಸಭೆ ಸೇರಲು ಅನುಕೂಲವಾಗುವಷ್ಟು ವಿಶಾಲವಾದ ಪ್ರದೇಶಗಳು. ಒಳಾವರಣದ ಕಟ್ಟಡ ಪ್ರದೇಶದ ಸುತ್ತಳತೆಯೇ ಅರ್ಧ ಮೈಲಿಗಿಂತ ಹೆಚ್ಚಾಗಿದೆ. ಗೋಪುರಾಕೃತಿಯಲ್ಲಿ ನಿರ್ಮಿತವಾಗಿರುವ ಈ ಕಟ್ಟಡ ಸಮುದಾಯದಲ್ಲಿ ಮೂರು ಹಂತಗಳು, ಕೊನೆಯ ಹಂತದ ಮೇಲೆ ಐದು ಗೋಪುರಗಳನ್ನೊಳಗೊಂಡ ಮುಖ್ಯ ಪೂಜಾಗಾರ. ಈ ಗೋಪುರಗಳಲ್ಲಿ ನಡುವಿನದು ಸುತ್ತಣ ಅರಣ್ಯಪ್ರದೇಶಕ್ಕಿಂತ ಇನ್ನೂರಹದಿನೈದು ಅಡಿ ಎತ್ತರ.ಇಂಥ ಬೃಹದಾಕೃತಿಯ ಕಟ್ಟಡದಲ್ಲೂ ಅಲಂಕಾರ ಚೆಲುವಿದೆ. ಸೂಕ್ಷ್ಮತೆ ಇದೆ. ಅರೆಯುಬ್ಬು ಚಿತ್ರಗಳಲ್ಲಿ ಕಂಡುಬರುವ ಕಲಾಪ್ರೌಢಿಮೆ ಪ್ರೇಕ್ಷಕರನ್ನು ವಿಸ್ಮಯಗೊಳಿಸುತ್ತದೆ. ಆದರೆ ಅಲಂಕಾರ ಅತಿಯಾಗಿ ಎಲ್ಲೂ ಕಟ್ಟಡದ ಭವ್ಯತೆ ಘನತೆಗಳಿಗೆ ಕುಂದು ತಂದಿಲ್ಲ. ರಾಮಾಯಣ ಮಹಾಭಾರತಗಳಿಂದ ಆಯ್ದ ಚಿತ್ರಗಳು ವಿಶೇಷವಾಗಿವೆ.ಕೆಲವೆಡೆ ಎಂಟು ಅಡಿಗಳ ಎತ್ತರ ಇರುವ ಈ ಚಿತ್ರಗಳು ಅರ್ಧ ಮೈಲಿಯಷ್ಟು ದೂರ ಹಬ್ಬಿವೆ. ಭಾರತದ ಸಂಸ್ಕೃತಿ ಆ ಜನರ ಮೇಲೆ ಎಂಥ ಪರಿಣಾಮವನ್ನುಂಟುಮಾಡಿತ್ತು ಎನ್ನುವುದಕ್ಕೆ ಈ ಚಿತ್ರಗಳೇ ನಿದರ್ಶನ. ಅಲ್ಲಲ್ಲೇ ಕಾಣಬಹುದಾದ ದೇವತೆಗಳ ಮತ್ತು ಅಪ್ಸರೆಯರ ಚಿತ್ರಣವಂತೂ ರಮ್ಯವಾಗಿದೆ. ಮುಖದಲ್ಲಿ ಪ್ರಶಾಂತತೆ, ಪ್ರಸನ್ನತೆ, ತುಟಿಯಲ್ಲಿ ಹುಸಿನಗೆ, ಮೋಹಕವಾದ ಕುಡಿನೋಟ, ಆಭರಣ ತೊಡಿಗೆಯಲ್ಲಿ ಹಿತ ಮಿತ.ಆಂಗ್ಕೋರ್‍ವಾಟ್‍ನ ವಾಸ್ತುಶಿಲ್ಪದ ಉತ್ಕಷ್ಟತೆಯನ್ನು ನೋಡಿದವರಿಗೆ, ಅದನ್ನು ನಿರ್ಮಿಸಿದ ವಾಸ್ತುಶಿಲ್ಪಿಗಳು ಅನೇಕ ಶತಮಾನಗಳ ಕಾಲ ವಂಶಪಾರಂಪರ್ಯವಾಗಿ ಆ ಕಲೆಯನ್ನು ರೂಢಿಸಿಕೊಂಡು ಬಂದು ಕೊನೆಗೆ ಪರಾಕಾಷ್ಠತೆ ಪಡೆದಿದ್ದ ಕಲಾವಿದರು ಎಂಬುದು ವ್ಯಕ್ತವಾಗುತ್ತದೆ. ಈ ಬೆಳೆವಣಿಗೆ ಒಂದು ಸಾವಿರ ವರ್ಷಗಳ ಹಿಂದೆಯೇ ಆರಂಭವಾಗಿರಬೇಕು. ಅನಂತರ ಕೊಂಚ ಕೊಂಚವಾಗಿ ವಿಕಾಸಗೊಳ್ಳುತ್ತ ಎರಡನೆಯ ಜಯವರ್ಮನು ಕಾಂಭೋಜ ರಾಜ್ಯಸ್ಥಾಪನೆ ಮಾಡಿದ ಕಾಲಕ್ಕೆ ಒಂದು ನಿರ್ದಿಷ್ಟನೆಲೆಗೆ ಬಂದು ಗೋಪುರಾಕೃತಿಯ ದೊಡ್ಡ ಕಟ್ಟಡಗಳ ನಿರ್ಮಾಣ ಪ್ರಾರಂಭವಾಯಿತು. ಅದು ತುತ್ತತುದಿಯನ್ನೇರಿದ್ದು ಆಂಗ್ಕೋರ್‍ವಾಟ್‍ನಲ್ಲಿ. ಇಂದಿಗೂ ಆಂಗ್ಕೋರ್‍ಥಾಮ್ ನಗರದ ಹಾಗೂ ಆಂಗ್ಕೋರ್‍ವಾಟ್‍ನ ಅವಶೇಷಗಳು ಪ್ರಾಕ್ತನ ಶಾಸ್ತ್ರಜ್ಞರನ್ನೂ ಪ್ರೇಕ್ಷಕರನ್ನೂ ಆಕರ್ಷಿಸುತ್ತಿವೆ.
ಅಂಕೋರ್ ವಾಟ್ನಲ್ಲಿನ ಅತ್ಯಂತ ಅಪ್ರತಿಮ ಅನುಭವವೆಂದರೆ ಅದರ ಭವ್ಯವಾದ ಗೋಪುರಗಳ ಮೇಲೆ ಸೂರ್ಯೋದಯವನ್ನು ವೀಕ್ಷಿಸುವುದು. ಮುಂಜಾನೆ, ದೇವಾಲಯವು ಗುಲಾಬಿ, ಕಿತ್ತಳೆ ಮತ್ತು ಚಿನ್ನದ ಛಾಯೆಗಳಲ್ಲಿ ನೆನೆಸಿ, ಮನಮೋಹಕ ದೃಶ್ಯವನ್ನು ಸೃಷ್ಟಿಸುತ್ತದೆ.
ಈ ತಾಣವನ್ನು ವಿಶ್ವ ಸಂಸ್ಥೆಯ ಯುನೆಸ್ಕೊ ವಿಶ್ವ ಪಾರಂಪರಿಕ ತಸಣವೆಂದು ಘೋಷಿಸಿದೆ.
ವಾಸ್ತುಶಿಲ್ಪದ ವೈಭವವನ್ನು ಮೀರಿ, ಅಂಕೋರ್ ವಾಟ್ ಅಪಾರವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ ದೇವಾಲಯ ಸಂಕೀರ್ಣವು ಸಕ್ರಿಯ ಧಾರ್ಮಿಕ ತಾಣವಾಗಿ ಉಳಿದಿದೆ ಬೌದ್ಧ ಸನ್ಯಾಸಿಗಳು ಮತ್ತು ಭಕ್ತರು ತಮ್ಮ ಗೌರವವನ್ನು ಸಲ್ಲಿಸಲು ಮತ್ತು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಮನದುಂಬಿ
ಜೇನೇ ನೀ ನನ್ನ ಸೃಷ್ಟಿ
ನಾನಿನ್ನ ಪ್ರೀತಿಸುವೆ
ಹೇಳಿತು ದುಂಬಿ|
ಜೇನು ಮಾರ್ನುಡಿಯಿತು
ನಾನು ನಿನ್ನ ಪ್ರೀತಿಸುವೆ
ಮನದುಂಬಿ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಸೈಟ್..
ಅವಳನ್ನು ಪ್ರೀತಿಸಿದ
ಮದುವೆಯಾಗಲು ತೀರ್ಮಾನಿಸಿದ
ಕಾರಣ ಅವಳ ಸೈಟ್ |
ಅವಳ ಮದುವೆಯಾಗದೆ ಇವಳ
ಮದುವೆಯಾದ ಕಾರಣ
ಇವಳಪ್ಪ ನೀಡಿದ ಸೈಟ್ ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
#ಉತ್ಥಾನ*
ಉತ್ಥಾನ ದ್ವಾದಶಿಯಂದು ಕೃಷ್ಣನ
ಎಲ್ಲರೂ ಪೂಜಿಸುತ್ತಾ
ಬೇಡುತ್ತಲಿಹರು ಎದ್ದೇಳು|
ಕಾಪಾಡು ಸಕಲಜೀವಿಗಳನ್ನು
ಪರಿಹರಿಸುತಾ ಗೋಳು ||
*#ಸಿಹಿಜೀವಿ ವೆಂಕಟೇಶ್ವರ*
ತುಮಕೂರು
*ಪಾಠ*
ಇದ್ದದ್ದೇ ಬದುಕಿನಲ್ಲಿ ಜಂಜಾಟ
ಮಾಡದಿರೋಣ ನಾವು ರಂಪಾಟ
ಬಾಳು ನೋವು ನಲಿವುಗಳು ಕೂಟ
ಬಲ್ಲವರಾರೂ ಇಲ್ಲ ದೇವರ ಆಟ
ಜೀವನಕ್ಕಿರಲಿ ಒಂದು ಮುನ್ನೋಟ
ಕಲಿಯೋಣ ಸರ್ವರಿಂದಲೂ ಪಾಠ
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಪ್ರಾಮಾಣಿಕತೆ ಗೆ ಯಶಸ್ಸು ಖಚಿತ.
ಚಕ್ರವರ್ತಿಯೊಬ್ಬರಿಗೆ ಸ್ವಂತ ಮಕ್ಕಳಿರಲಿಲ್ಲ.ಮುಂದಿನ ಚಕ್ರವರ್ತಿಯಾಗಿ ಯಾರನ್ನು ಮಾಡಬೇಕೆಂಬುದೇ ಅವರ ಚಿಂತೆ!ಅವರೊಮ್ಮೆ ಸಾಮ್ರಾಜ್ಯದ ಗಣ್ಯರನ್ನೆಲ್ಲ ತಂತಮ್ಮ ಮಕ್ಕಳನ್ನು ಕರೆದುಕೊಂಡು ಅರಮನೆಗೆ ಬರಬೇಕೆಂದು ಆಹ್ವಾನಿಸಿದರು. ಅಂದು ಗಣ್ಯಾತಿಗಣ್ಯರೆಲ್ಲ ಅರಮನೆಗೆ ತಂತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಚಕ್ರವರ್ತಿಯವರ ಅಂಗರಕ್ಷಕನೂ ತನ್ನ ಮಗನನ್ನು ಕರೆದುಕೊಂಡು ಬಂದಿದ್ದ.ಚಕ್ರವರ್ತಿಯವರು ನಾನೀಗ ಮುದುಕ ಆಗುತ್ತಿದ್ದೇನೆ.ನನಗೆ ಮಕ್ಕಳಿಲ್ಲ.ನಿಮ್ಮೆಲ್ಲರ ಮಕ್ಕಳಲ್ಲಿ ಒಬ್ಬರನ್ನು ಮುಂದಿನ ಚಕ್ರವರ್ತಿಯಾಗಿ ನೇಮಿಸಬೇಕೆಂದಿದ್ದೇನೆ. ಅದಕ್ಕಾಗಿ ಪರೀಕ್ಷೆಯೊಂದನ್ನು ಏರ್ಪಡಿಸು ತ್ತಿದ್ದೇನೆ.ಎಲ್ಲ ಮಕ್ಕಳಿಗೆ ಒಂದೊಂದು ಹೂವಿನ ಬೀಜವನ್ನು ಕೊಡುತ್ತೇನೆ. ಮಕ್ಕಳು ತಂತಮ್ಮ ಮನೆಯಲ್ಲಿ ಬಿತ್ತಲಿ. ಅದರಿಂದ ಹುಟ್ಟುವ ಗಿಡವನ್ನು ಮುಂದಿನ ವರ್ಷದ ಮೊದಲನೆಯ ದಿನದಂದು ಅರಮನೆಗೆ ತರಲಿ.ಯಾರ ಗಿಡ ಅತ್ಯುತ್ತಮವಾಗಿರುತ್ತದೋ ಅಂತಹ ಮಗು ಮುಂದಿನ ಚಕ್ರವರ್ತಿಯಾಗುತ್ತಾನೆ ಎಂದು ಘೋಷಿಸಿದರು. ಅಲ್ಲಿದ್ದವರೆಲ್ಲರಿಗೂ ತಮ್ಮ ಮಗನೇ ಮುಂದಿನ ಚಕ್ರವರ್ತಿ ಯಾಕಾಗಬಾರದು ಎನ್ನುವಾಸೆ!ಎಲ್ಲರೂ ನಾಮುಂದು-ತಾಮುಂದು ಎಂದು ಬೀಜಗಳನ್ನು ಪಡೆದು ಕೊಂಡು ಹೋದರು.
ಅಂದಿನಿಂದ ಎಲ್ಲರ ಬಾಯಲ್ಲೂ ಇದೇ ಮಾತು.ನಮ್ಮ ಮನೆಯಲ್ಲಿ ಬೀಜ ಸಸಿಯಾಗಿದೆ, ಗಿಡವಾಗಿದೆ,ಗಿಡದಲ್ಲೊಂದು ಕಾಯಾಗಿದೆ,ಹೂ ಬಿಟ್ಟಿದೆ ಎಂದೆಲ್ಲ ಹೇಳಿ ಕೊಳ್ಳುತ್ತಿದ್ದರು. ಆದರೆ ಚಕ್ರವರ್ತಿಗಳ ಅಂಗರಕ್ಷಕನ ಮನೆಯಲ್ಲಿ ನಿರಾಸೆ ತುಂಬಿತ್ತು.ಆತನ ಮಗ ಬಿತ್ತಿದ ಬೀಜ ಸಸಿಯಾಗಲೇ ಇಲ್ಲ!ಇಂದು ಸಸಿಯೊಡೆದೀತು, ನಾಳೆ ಸಸಿಯೊಡೆದೀತು ಎಂಬ ನಿರೀಕ್ಷೆಯಲ್ಲಿದ್ದರೂ,ವರ್ಷ ಕಳೆಯುತ್ತಾ ಬಂದರೂ ಕುಂಡ ಖಾಲಿಯಾಗೇ ಇತ್ತು!
ಆ ದಿನ ಬಂದೇ ಬಿಟ್ಟಿತು! ವರ್ಷದಾರಂಭದ ದಿನ ಅರಮನೆಯಲ್ಲಿ ತಾಯ್ತಂದೆಯರ-ಮಕ್ಕಳ ದೊಡ್ಡ ಗುಂಪೇ ಸೇರಿತ್ತು. ಎಲ್ಲರ ಕೈಯಲ್ಲೂ ಸುಂದರವಾದ ಹೂ-ಹಣ್ಣುಗಳ ಗಿಡಗಳು!ಸಂಭ್ರಮವೋ ಸಂಭ್ರಮ! ಚಕ್ರವರ್ತಿಗಳು ಬಂದರು. ಎಲ್ಲರ ಗಿಡಗಳನ್ನು ನೋಡುತ್ತಾ ಶಹಬಾಷ್! ವಾರೆವ್ಹಾ!ಎಂದೆಲ್ಲ ಹೇಳುತ್ತಾ ಮುಂದೆ ಮುಂದೆ ಸಾಗಿದರು. ಒಂದನ್ನೂ ಆಯ್ಕೆಮಾಡಲಿಲ್ಲ . ಕೊನೆಯ ಮೂಲೆಯಲ್ಲಿ ಜೋಲುಮುಖದೊಂದಿಗೆ ಅಂಗರಕ್ಷಕನ ಮಗ ನಿಂತಿದ್ದ. ಆತನ ಕೈಯಲ್ಲಿ ಖಾಲಿ ಕುಂಡ!ಚಕ್ರವರ್ತಿಗಳು ಏನಾಯಿತು ಎಂದು ಕೇಳಿದರು.ಆತ ಮಹಾಪ್ರಭು!ತಾವು ಕೊಟ್ಟಿದ್ದ ಬೀಜವನ್ನು ಬಿತ್ತಿದೆ,ಬಹಳ ಜತನ ಮಾಡಿದೆ.ಆದರೆ ಅದು ಸಸಿಯೊಡೆಯಲೇ ಇಲ್ಲ.ಖಾಲಿ ಕುಂಡವನ್ನೇ ತಂದಿದ್ದೇನೆ ಎನ್ನುತ್ತಾ ಬಿಕ್ಕಳಿಸಿ ಅಳತೊಡಗಿದ.ಚಕ್ರವರ್ತಿಗಳು ಆತನಿಗೆ ಸಮಾಧಾನ ಹೇಳಿದರು.ಆತನೇ ಮುಂದಿನ ಚಕ್ರವರ್ತಿಯೆಂದು ಘೋಷಿಸಿಬಿಟ್ಟರು.
ಅಲ್ಲಿದ್ದವರೆಲ್ಲ ಇದೆಂತಹ ಅನ್ಯಾಯ ?ಸುಂದರವಾದ ಗಿಡಗಳನ್ನು ಬೆಳೆದಿರುವ ಮಕ್ಕಳನ್ನು ಬಿಟ್ಟು ಖಾಲಿ ಕುಂಡದ ಹುಡುಗನನ್ನು ಚಕ್ರವರ್ತಿಯಾಗಿ ಘೋಷಿಸುವುದೇ?ಎಂದು ಗದ್ದಲವೆಬ್ಬಿಸಿದಾಗ,ಚಕ್ರವರ್ತಿಯವರು ಏರುದನಿಯಲ್ಲಿ ನಾನು ಅಂದು ಎಲ್ಲರಿಗೂ ಕೊಟ್ಟಿದ್ದು ಬೇಯಿಸಿದ ಬೀಜಗಳನ್ನು!ಅವು ಸಸಿಯೊಡೆಯಲು ಸಾಧ್ಯವೇ ಇಲ್ಲ.ನೀವೆಲ್ಲಾ ಬೀಜವನ್ನು ಬಿತ್ತಿರುವಿರಿ,ಅದು ಸಸಿಯೊಡೆಯದಿದ್ದಾಗ ಮತ್ಯಾವುದೋ ಸಸಿಯನ್ನು ಬೆಳೆಸಿ ಇಲ್ಲಿಗೆ ತಂದಿದ್ದೀರಿ. ಆದರೆ ಈ ಬಾಲಕ ಪ್ರಾಮಾಣಿಕವಾಗಿ ಇಲ್ಲಿಗೆ ಬಂದಿದ್ದಾನೆ.ನನಗೆ ನಂಬಿಕಸ್ಥ ವ್ಯಕ್ತಿ ಬೇಕಾಗಿದ್ದುದರಿಂದ ನಾನು ಈತನನ್ನೇ ಆಯ್ಕೆ ಮಾಡುತ್ತಿದ್ದೇನೆ.ನೀವೆಲ್ಲ ಆತ್ಮಸಾಕ್ಷಿಯಾಗಿ ನಿಜವನ್ನೇ ಹೇಳಿ.ನೀವು ತಂದಿರುವ ಗಿಡಗಳು ನಾನು ಕೊಟ್ಟ ಬೀಜದ್ದೇ ?ಎಂದಾಗ ಎಲ್ಲರು ತಲೆತಗ್ಗಿಸಿದರು.
ಇಂದಿನ ಜಗದಲ್ಲೂ ಪ್ರಾಮಾಣಿಕತೆ ಕಡಿಮೆಯಾಗಿ ಅಪ್ರಮಾಣಿಕರು ವಿಜೃಂಭಿಸುವುದನ್ನು ಕಾಣಬಹುದು. ಆದರೆ ಅದು ಕ್ಷಣಿಕ.
ಪ್ರಾಮಾಣಿಕತೆಗೆ ಎಂದಿದ್ದರೂ ಜಯವಿದ್ದೇ ಇರುತ್ತದೆ.ಸತ್ಯವಾಗಿ ನಡೆಯೋಣ ನಿಧಾನವಾದರೂ ಜಯ ನಮ್ಮದೆ.
ಸಿಹಿಜೀವಿ ವೆಂಕಟೇಶ್ವರ.
ಶಿಕ್ಷಕರು
ತುಮಕೂರು
9900925529
ಕಪ್ ನಮ್ದೇ
ಈ ಬಾರಿ ವಿಶ್ವ ಕಪ್
ನಮ್ಮದೇ |
ಹತ್ತು ಗೆದ್ದೋರಿಗೆ ಇನ್ನೊಂದು
ದೊಡ್ಡದೇ?|
*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
ಪ್ರಜಾಪತಿ
ಜನ ಸೇವಕನಾಗಬೇಕು ಛತ್ರಪತಿ
ಶತ್ರುಗಳ ಎದುರಿಸಲು ಬೇಕು ಛಾತಿ
ಕೈಗೊಳ್ಳಬೇಕು ಕಲ್ಯಾಣ ಕ್ರಾಂತಿ
ಅಂತಹ ನಾಯಕನಾಗುವ ಪ್ರಜಾಪತಿ
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ದೇವರೊಂದಿಗೆ ವಾಗ್ವಾದ..
ದೇವರು ಪ್ರತ್ಯಕ್ಷನಾಗುವುದೇ ವಿರಳವಾದ ಸಂಧರ್ಭದಲ್ಲಿ ಒಬ್ಬನಿಗೆ ದೇವರು ಪ್ರತ್ಯಕ್ಷನಾದಾಗ ವರ ಕೇಳುವ ಬದಲಿಗೆ ಅವನು ದೇವರ ಮುಂದೆ ದೇವರು ಅವನಿಗೆ ಕೆಡುಕನ್ನೇ ಮಾಡಿದ ಬಗ್ಗೆ ಇಷ್ಟುದ್ದ ಪಟ್ಟಿ ನೀಡುತ್ತಾ ತನ್ನ ಆಕ್ಷೇಪಣೆ ಸಲ್ಲಿಸಿದ. "ಬೆಳಗ್ಗೆ ಬೇಗ ಎಚ್ಚರವಾಗಲಿಲ್ಲ. ಕಾರುಸ್ಟಾರ್ಟ್ ಆಗಲು ಬಹಳ ತಡವಾಯಿತು. ಮಧ್ಯಾಹ್ನದ ಊಟದ ಡಬ್ಬಿ ಬದಲಾಗಿ, ತೊಂದರೆಯಾಯಿತು. ಸಂಜೆ ಮೊಬೈಲ್ ಕಾಲ್ ರಿಸೀವ್ ಮಾಡುತ್ತಿದ್ದಂತೆ ಹ್ಯಾಂಗ್ ಆಗಿ, ಡೆಡ್ ಆಯಿತು. ಮನೆಗೆ ಬಂದು ಕಾಲು ನೋವು ಪರಿಹರಿಸಿಕೊಳ್ಳಲು ಫುಟ್ ಮಸಾಜರ್ ನಲ್ಲಿ ಕಾಲಿಡುತ್ತಿದ್ದಂತೆ ಅದು ಕೆಟ್ಟು ನಿಂತಿತು. ಇಂದಿನ ಎಲ್ಲ ಕೆಲಸಗಳಲ್ಲೂ ವಿಘ್ನ ಹಾಗೂ ಆತಂಕಗಳು ಕಾಡಿದವು ಏಕೆ ? ಇದೇ ಏನು ನಿನ್ನ ಪೂಜೆ ಮಾಡಿದ್ದಕ್ಕೆ ಜಪ ತಪ ಮಾಡಿದ್ದಕ್ಕಾಗಿ ನೀನು ನನಗೆ ಕೊಡುವ ಬಹುಮಾನ?" ಎಂದು ಒಂದೇ ಸಮನೆ ಬಡಬಡಾಯಿಸಿದ. ಶಾಂತ ಚಿತ್ತದಿಂದ ಆಲಿಸಿದ ದೇವರು ನಗುತ್ತಾ ಉತ್ತರ ನೀಡಿದ.
ಭಕ್ತ " ಬೆಳಗ್ಗೆ ನಿನ್ನ ಜೀವಹರಣ ಮಾಡಲು ಮೃತ್ಯದೂತನೊಬ್ಬ ನಿನ್ನ ಹಾಸಿಗೆ ಬದಿಯಲ್ಲಿಕಾಯುತ್ತಿದ್ದ. ಅವನೊಂದಿಗೆ ಹೋರಾಡಿ ನಿಮ್ಮಜೀವ ಕಾಪಾಡಲು ದೇವದೂತನೊಬ್ಬನನ್ನು ಕಳುಹಿಸಿದ್ದೆ. ಇದು ನಿನಗೆ ಗೊತ್ತಾಗದಂತೆ ಹೆಚ್ಚು ಹೊತ್ತು ನಿದ್ದೆ ಮಾಡುವಂತೆ ಮಾಡಿದೆ.
ನೀನು ಸಂಚರಿಸುವ ದಾರಿಯಲ್ಲಿ ಕುಡಿದಮತ್ತಿನಲ್ಲಿ ಚಾಲಕನೊಬ್ಬ ಡ್ರೈವಿಂಗ್ ಮಾಡಿಕೊಂಡು ಬರುತ್ತಿದ್ದ, ಅವನಿಂದ ನಿನಗೆ ಅಪಘಾತವಾಗದಿರಲಿ ಎಂದು ನಿನ್ನ ಕಾರು ತಡವಾಗಿ ಸ್ಟಾರ್ಟ್ ಆಗುವಂತೆ ಮಾಡಿದೆ.
ನಿನಗೆ ಅಡುಗೆ ಮಾಡಿಕೊಡುತ್ತಿದ್ದ, ಬಾಣಸಿಗ ರೋಗಪೀಡಿತನಾಗಿದ್ದ. ಆತನ ರೋಗ ನಿನಗೆ ಹರಡದಂತೆ ಮಾಡಲು ನಿನ್ನ ಊಟದ ಡಬ್ಬ ಬದಲಿಸಿದೆ.
ಸಂಜೆ ನಿನ್ನ ಸ್ನೇಹಿತ ನಿನಗೆ ಕರೆ ಮಾಡಿ, ಸುಳ್ಳು ಸಾಕ್ಷಿ ಹೇಳಲು ಒಪ್ಪಿಸಲು ಬಯಸಿದ್ದ, ಅದಕ್ಕಾಗಿ ನಿನ್ನ ಮೊಬೈಲ್ ಹ್ಯಾಂಗ್ ಆಗುವಂತೆ ಮಾಡಿದೆ.
ನಿನ್ನ ಮನೆಯಲ್ಲಿದ್ದ ಫುಟ್ ಮಸಾಜರ್ನಲ್ಲಿ ನೀರು ಸೇರಿಕೊಂಡು ಶಾರ್ಟ್ ಆಗಿತ್ತು. ಅದು ಕಾರ್ಯ ನಿರ್ವಹಿಸಿದ್ದರೆ, ನಿನಗೆ ವಿದ್ಯುತ್ ಶಾಕ್ ತಗಲುವ ಸಾಧ್ಯತೆ ಇತ್ತು. ಅದಕ್ಕಾಗಿ ನಾನು, ಫುಟ್ ಮಸಾಜರ್ ಕಾರ್ಯನಿರ್ವಹಿಸದಂತೆ ನಿಷ್ಕ್ರಿಯೆಗೊಳಿಸಿದೆ ". ದೇವರ ಮಾತು ಕೇಳಿದ ಭಕ್ತನ ಕಣ್ಣಲ್ಲಿ ಪಶ್ಚಾತ್ತಾಪದ ನೀರಿತ್ತು.
ಅದಕ್ಕೆ ಹೇಳುವುದು ಆಗುವುದೆಲ್ಲ ಒಳ್ಳೆಯದಕ್ಕೆ ಎಂದು.ಕೆಲವು ಬಾರಿ ನಾವಂದುಕೊಂಡಂತೆ ಆಗದಿದ್ದರೆ ಚಡಪಡಿಸುತ್ತೇವೆ. ಗುರಿ ಮುಟ್ಟಲಾಗದಿದ್ದರೆ ಖನ್ನತೆಗೆ ಜಾರುತ್ತೇವೆ. ಯಾವುದೇ ಒಂದು ನಮ್ಮ ಕೈ ತಪ್ಪಿದರೆ ನಮ್ಮ ಪ್ರಯತ್ನ ನಿರಂತರವಾಗಿದ್ದರೆ ಅದಕ್ಕಿಂತ ದೊಡ್ಡ ಕೊಡುಗೆ ನಮ್ಮದಾಗುವುದರಲ್ಲಿ ಸಂದೇಹವಿಲ್ಲ.
ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
9900925529
ಒಂದಾಗಿ ಬಾಳೋಣ
ಒಮ್ಮೆ ಸ್ವರ್ಗಕ್ಕೆ ಯಾರು ಹೋಗಬಹುದು ಎಂಬ ಚರ್ಚೆ ಬಂದಾಗ ಕನಕದಾಸರು ಸೂಕ್ಷ್ಮವಾಗಿ "ನಾನು ಹೋದರೆ ಹೋದೇನು" ಎಂದಿದ್ದರು. ಹೌದು ನಾನು ಎಂಬ ಅಹಂ ನಿಂದ ಇಂದು ಏನೆಲ್ಲಾ ಅನಾವುತಗಳಾಗುತ್ತಿವೆ ಎಂಬುದು ನಮ್ಮ ಕಣ್ಣಮುಂದಿದೆ ಆದರೂ ನಾನತ್ವ ಬಿಡುತ್ತಿಲ್ಲ ವಿಶಾಲ ಮನೋಭಾವ ಬೆಳೆಯುತ್ತಿಲ್ಲ
ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ "ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.
ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ "ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು.
ಇದನ್ನು ಕೇಳಿದ ಬತ್ತಿ "ನಾನು ಉರಿಯುತ್ತಿರುವುದರಿಂದಲೇ ದೀಪ ಉರಿಯುತ್ತಿದೆ ಆದ್ದರಿಂದ ನ್ಯಾಯವಾಗಿ ಬೆಳಕು ನನ್ನದೇ" ಎಂದಿತು.
ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ "ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು.
ನಾನು ನನ್ನಿಂದ ಎಂಬ ಕಚ್ಚಾಟದಲ್ಲಿ ಹಣತೆ ಒಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !
ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿತ್ತು. "ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನಿಧ್ಯವಿಲ್ಲ"
ಕುವೆಂಪುರವರು ಅದಕ್ಕೆ ಹೇಳಿದ್ದು "ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ" ಎಲ್ಲರೂ ಒಬ್ಬನಿಗಾಗಿ ಒಬ್ಬ ಎಲ್ಲರಿಗಾಗಿ ಎಂಬ ಸಹಕಾರ ತತ್ವ ಪಾಲಿಸುತ್ತಾ ಸಹಬಾಳ್ವೆ ಮಾಡಿದರೆ ಈ ಧರೆ ನಾಕವಾಗುವುದು.
ಹಮ್ಮಿನಿಂದ ಬ್ರಹ್ಮನೂ ಕೆಟ್ಟ ನಮ್ ಮನೇಲಿ ಒಬ್ಬ ಸುಮ್ ಸುಮ್ ನೆ ಕೆಟ್ಟ ಎಂಬ ಗಾದೆಯಂತೆ ಇಂದು ಸಾಮರಸ್ಯದ ಕೊರತೆ ಕಾಡುತ್ತಿದೆ."ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಂ ನ ಕೋಟೆಯಲ್ಲಿ " ಎಂಬ ಕವಿವಾಣಿಯು ಇದನ್ನೇ ನೆನಪಿಸುತ್ತದೆ. "ಐದು ಬೆರಳು ಕೂಡಿದರೆ ಒಂದು ಮುಷ್ಟಿ, ಹಲವು ಮಂದಿ ಸೇರಿದರೆ ಈ ಸಮಷ್ಟಿ" ಆದ್ದರಿಂದ ಕತ್ತರಿಯಂತೆ ಹರಿಯುವ ಕಾರ್ಯ ಮಾಡದೇ ಸೂಜಿಯಂತೆ ಹೊಲಿಯುವ ಕೆಲಸ ಮಾಡುತ್ತಾ ಏಕತೆಯ ಮಂತ್ರ ಪಠಿಸುತ್ತಾ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನೆನಯುತ್ತಾ ನಾವೆಲ್ಲರೂ ಒಂದಾಗಿ ಬಾಳೋಣ...
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಇನ್ನೆಲ್ಲಿಯ ತಮ
ನಿನ್ನ ನಯನಗಳ ಬೆಳಕಿರುವಾಗ
ನನ್ನ ಬಾಳಲಿ ಇನ್ನೆಲಿಯ ತಮ|
ನೀ ಸೂರ್ಯ ನಾ ನಿನ್ನ ಪ್ರತಿಬಿಂಬ
ಮಾತ್ರವೇ ಪ್ರಿಯತಮ||
ಇಷ್ಟದ ಕಲರ್
ಆಗಸದಲ್ಲಿರುವ ಕಾಮನ ಬಿಲ್ಲು
ತಂದು ಕೊಡುವೆ ಎಂದ ಲವರ್ರು |
ಸಿಡುಕಿನಿಂದಲೇ ಉತ್ತರಿಸಿದಳು
ಬೇಕಿಲ್ಲ ನನಗೆ ಕಾಮನಬಿಲ್ಲು
ಅದರಲ್ಲಿಲ್ಲ ನನ್ನಿಷ್ಷದ ಕಲರ್ಗಳಾಗ ಗೋಲ್ಡು ಸಿಲ್ವರು ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಅನುಭವಾತ್ಮಕ ಕಲಿಕೆಯಲ್ಲಿ ನಿರತರಾದ ಕ್ಯಾತ್ಸಂದ್ರ ಶಾಲೆಯ ಮಕ್ಕಳು.
ಅಂದು ನಾಲ್ಕು ಗೋಡೆಗಳ ಮಧ್ಯೆ ಕಲಿಕೆಯ ಬದಲಾಗಿ ಕ್ಯಾತ್ಸಂದ್ರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅನುಭವಾತ್ಮಕ ಕಲಿಕೆಗೆ ಸಿದ್ದವಾಗಿ ಹಾಲು ಸಂಸ್ಕರಣಾ ಘಟಕದೊಳಗೊಂದು ಸುತ್ತು ಹಾಕಿ ಕ್ಷೇತ್ರ ಭೇಟಿ ಮಾಡಿ ತಮ್ಮ ಜ್ಞಾನಾರ್ಜನೆ ಮಾಡಿಕೊಂಡರು.
ಆಯ್ದ ಮಾದರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಂಸ್ಥೆಗಳ ಭೇಟಿಗಾಗಿ ಶಿಕ್ಷಕರ ಕಲ್ಯಾಣ ನಿಧಿಯ ಪ್ರಾಯೋಜಕತ್ವದಲ್ಲಿ ಕ್ಯಾತ್ಸಂದ್ರ ಪ್ರೌಢಶಾಲೆಯ ಆಯ್ದ ವಿದ್ಯಾರ್ಥಿಗಳು ತುಮಕೂರು ಬಳಿಯ ಮಲ್ಲಸಂದ್ರದ ಹಾಲು ಸಂಸ್ಕರಣಾ ಘಟಕಕ್ಕೆ ತರಳಿದ್ದರು.
ತುಮಕೂರು ಹಾಲು ಒಕ್ಕೂಟವು 30ನೇ ಮಾರ್ಚ್ 1977 ರಂದು ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಾಯ್ದೆಯಡಿಯಲ್ಲಿ "ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್" ಎಂದು ನೋಂದಾಯಿಸಲ್ಪಟ್ಟಿದೆ. ಡೈರಿ ಸಹಕಾರಿಗಳನ್ನು ಮೂರು ಹಂತದ ವ್ಯವಸ್ಥೆಯಲ್ಲಿ ಆನಂದ್ ಮಾದರಿಯಲ್ಲಿ ಸ್ಥಾಪಿಸಲಾಯಿತು. ಹಾಲಿನ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟವನ್ನು ನೋಡಿಕೊಳ್ಳಲು ಗ್ರಾಮ ಮಟ್ಟದಲ್ಲಿ ಗ್ರಾಮ ಮಟ್ಟದ ಡೈರಿ ಸಹಕಾರ ಸಂಘಗಳು ಅಸ್ತಿತ್ವಕ್ಕೆ ಬಂದಿವೆ.
1975-76ರಲ್ಲಿ ದಿನಕ್ಕೆ ಸರಾಸರಿ 1035 ಕೆಜಿ ಹಾಲು ಸಂಗ್ರಹವಾಗುತ್ತಿತ್ತು. ಒಕ್ಕೂಟದ ನೋಂದಣಿ ಸಮಯದಲ್ಲಿ, ಹಾಲು ಸಂಗ್ರಹಣೆಯು ದಿನಕ್ಕೆ 9,486 ಕೆಜಿಗೆ ಏರಿತು. ಅಂದಿನಿಂದ, ವಿವಿಧ ಇನ್‌ಪುಟ್ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಠಾನದಿಂದಾಗಿ ಹಾಲಿನ ಸಂಗ್ರಹವು ಅನೇಕ ಪಟ್ಟು ಹೆಚ್ಚಾಗಿದೆ. ಪ್ರಸ್ತುತ ದಿನವೊಂದಕ್ಕೆ 8.94 ಲಕ್ಷ ಕೆಜಿ ಹಾಲು ಸಂಗ್ರಹವಾಗುತ್ತಿದೆ. ಜೂನ್ 29, 2022 ರಂದು, ಒಕ್ಕೂಟವು 9,31,684 ಕೆಜಿಗಳನ್ನು ಸಂಗ್ರಹಿಸಿದೆ ಮತ್ತು ಇದು ಪ್ರಾರಂಭದಿಂದಲೂ ಅತಿ ಹೆಚ್ಚು ಹಾಲು ಸಂಗ್ರಹಣೆಯಾಗಿದೆ.
ಒಕ್ಕೂಟವು ವಿವಿಧ ರೀತಿಯ ಹಾಲುಗಳನ್ನು ಮಾರಾಟ ಮಾಡುತ್ತದೆ ಅಂದರೆ ಟೋನ್ಡ್ ಮಿಲ್ಕ್, ಹೋಮೋಜೆನೈಸ್ಡ್ ಟೋನ್ಡ್ ಹಾಲು, ಹೋಮೊಜೆನೈಸ್ಡ್ ಹಸುವಿನ ಹಾಲು, ವಿಶೇಷ ಹಾಲು ಮತ್ತು ಶುಭಂ ಹಾಲು. ತಯಾರಿಸಿದ ಮತ್ತು ಮಾರಾಟ ಮಾಡಲಾಗುವ ಉತ್ಪನ್ನಗಳ ಇತರ ಶ್ರೇಣಿಯು ಮೊಸರು, UHT-FP ಹಾಲು, ತುಪ್ಪ, ಬೆಣ್ಣೆ ಹಾಲು, ಮೈಸೂರು ಪಾಕ್, ಗೋಡಂಬಿ ಬರ್ಫಿ ಮತ್ತು ಪೇಡಾವನ್ನು ಒಳಗೊಂಡಿದೆ. ಇದಲ್ಲದೆ, ಒಕ್ಕೂಟವು ನಂದಿನಿ ಹಾಲಿನ ಉತ್ಪನ್ನಗಳಿಂದ ಉತ್ಪತ್ತಿಯಾಗುವ ಎಲ್ಲಾ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ, ಕೆಎಂಎಫ್ ಘಟಕವು ತನ್ನ ಮಾರುಕಟ್ಟೆ ಪಾಲನ್ನು ಸ್ಥಿರವಾಗಿ ಹೆಚ್ಚಿಸುತ್ತಿದೆ. ಪ್ರಸ್ತುತ ದಿನಕ್ಕೆ 2.88 ಲಕ್ಷ ಲೀಟರ್ ಮಾರಾಟ ಮಾಡುತ್ತಿದ್ದೇವೆ. ಎಂದು ನಳಿನ ರವರು ಮಾಹಿತಿ ನೀಡಿದರು.
ಮಾಹಿತಿಯನ್ನು ಕೇಳುತ್ತಾ ಬೆಣ್ಣೆ ತಯಾರಿಸುವ ಘಟಕ, ತುಪ್ಪ ,ಮತ್ತು 6 ರೀತಿಯ ಹಾಲು ಪ್ಯಾಕ್ ಮಾಡುವ ಘಟಕಗಳನ್ನು ಸ್ವತಃ ನೋಡುತ್ತಾ ಅಚ್ಚರಿ ಪಡುತ್ತಾ ಮುಂದೆ ಸಾಗುತ್ತಿದ್ದರು.
ಓದೋಣ ಓದಿಸೋಣ..
ಒಂದು ಭಾನುವಾರ ಸಂಜೆ ತುಮಕೂರಿನ ಬಾಯರ್ಸ್ ಕಾಪೀ ಹೌಸ್ ನಲ್ಲಿ ಟೀ ಕುಡಿಯುತ್ತಾ ಸಮಾನ ಮನಸ್ಕ ಗೆಳೆಯರ ಜೊತೆ ಕುಳಿತು ಟೀ ಕುಡಿಯುವಾಗ ಸಾಹಿತ್ಯ, ಸಮಾಜ ,ಶಿಕ್ಷಣ ಹೀಗೆ ನಮ್ಮ ಮಾತುಕತೆ ಸಾಗುವಾಗ ಓದುವ ಹವ್ಯಾಸ ಕ್ರಮೇಣ ಕಡಿಮೆಯಾಗಿರುವ ಬಗ್ಗೆ ಚರ್ಚೆ ನಡೆಯುವಾಗ ಸ್ಟೂಡೆಂಟ್ ಬುಕ್ ಹೌಸ್ ಮಾಲೀಕರು ಪ್ರಕಾಶಕರಾದ ಸದಾಶಿವ್ ರವರು ಒಂದು ಘಟನೆ ಹೇಳಿದರು .ಒಮ್ಮೆ ನನ್ನ ಪುಸ್ತಕದ ಅಂಗಡಿಗೆ ನಾಲ್ಕು ಜನ ಕಾರಿನಲ್ಲಿ ಬಂದು ಶಿಕ್ಷಕರು ಎಂದು ಪರಿಚಯ ಮಾಡಿಕೊಂಡು ಓರ್ವ ಶಿಕ್ಷಕರು ಸುಮಾರು ಎಂಟತ್ತು ಉತ್ತಮ ಅಭಿರುಚಿಯ ಪುಸ್ತಕಗಳನ್ನು ಕೊಂಡರು .ಅವರ ಜೊತೆಯಲ್ಲಿ ಇದ್ದ ಶಿಕ್ಷಕರೊಬ್ಬರು "ಸಾಕು ಬಾರಪ್ಪ ಅದೇನ್ ಪುಸ್ತಕ ಓದ್ತಿಯಾ ನೀನು " ಎಂದು ವ್ಯಂಗ್ಯವಾಗಿ ಹೇಳಿದರು ಇದರಿಂದ ನನಗೆ ಬಹಳ ಬೇಸರ ವಾಯಿತು ಎಂದರು.. ಅವರು ಮುಂದುವರೆದು ನಾನು ಪುಸ್ತಕ ಅಂಗಡಿಯಿಟ್ಟು ಹದಿನೈದು ವರ್ಷಗಳಾದವು ಶಿಕ್ಷಕರು ಪುಸ್ತಕ ಕೊಳ್ಳುವುದು ಬಹಳ ಕಡಿಮೆ ಎಂದರು ಅದಕ್ಕೆ ನಾನು ಆಕ್ಷೇಪಿಸಿ ನಾನು ಈ ವರ್ಷ ಹದಿನೈದು ಪುಸ್ತಕ ಕೊಂಡು ಓದಿರುವೆ ಎಂದೆ .ನೀವು ಹಾಗೂ ನಿಮ್ಮಂತವರು ಕೆಲವೇ ಮಂದಿ ಸರ್ ನಮ್ಮ ಮನೆಯ ಪಕ್ಕ ಎರಡು ಶಿಕ್ಷಕರ ಕುಟುಂಬ ಇವೆ ಅವರ ಮನೆಯಲ್ಲಿ ಒಂದು ನ್ಯೂಸ್ ಪೇಪರ್ ಸಹ ತರಿಸಲ್ಲ ಅವರು ನ್ಯೂಸ್ ಪೇಪರನ್ನೇ ಓದಲ್ಲ ಎಂದರೆ ಪುಸ್ತಕ ಓದುವ ಮಾತೆಲ್ಲಿ ಬಂತು? ಅಂದು ನನ್ನ ಬಾಯಿ ಮುಚ್ಚಿಸಿದರು.
ರವೀಂದ್ರನಾಥ ಟಾಗೋರ್ ರವರು ಒಂದು ದೀಪ ತಾನು ಉರಿಯದೇ ಮತ್ತೊಂದು ದೀಪ ಹಚ್ಚಲಾಗದು ಎಂದಂತೆ ಶಿಕ್ಷಕರಾದವರು ಮೊದಲು ತಾವು ಓದಿ ಜ್ಞಾನವನ್ನು ಪಡೆದರೆ ಮಾತ್ರ ಮಕ್ಕಳಿಗೆ ಜ್ಞಾನ ನೀಡಲು ಸಾದ್ಯ. ಸಾಧಾರಣ ಶಿಕ್ಷಕ ಪಾಠ ಮಾಡುತ್ತಾನೆ ಉತ್ತಮ ಶಿಕ್ಷಕ ಅರ್ಥ ಮಾಡಿಸುತ್ತಾನೆ ಅತ್ಯುತ್ತಮ ಶಿಕ್ಷಕ ಪ್ರೇರಣೆ ನೀಡುತ್ತಾನೆ ಅಂತಹ ಪ್ರೇರಣೆ ನೀಡುವ ಶಿಕ್ಷಕ ಮೊದಲು ಕಲಿಕಾರ್ಥಿಯಾಗಿ ಕಲಿತಿರಬೇಕು.ಬಹುತೇಕರು ನಂಬಿದಂತೆ ಶಿಕ್ಷಕ ವೃತ್ತಿ ಸಿಕ್ಕಿದ ಮೇಲೆ ಕಲಿಯಲು ಏನೂ ಇಲ್ಲ ಎಂಬುದು ಸುಳ್ಳು. ಕಲಿಕೆಯು ವರ್ಷದಿಂದ ಗೋರಿಯವರೆಗೆ ನಡೆವ ನಿರಂತರ ಪ್ರಕ್ರಿಯೆಯಾಗಿದೆ. ಅದರಲ್ಲೂ ಈ ಇಪ್ಪತ್ತೊಂದನೇ ಶತಮಾನದ ರೋಬಾಟಿಕ್ ಮತ್ತು ಕೃತಕ ಬುದ್ಧಿಮತ್ತೆಯ ಕಾಲದಲ್ಲಿ ಮಕ್ಕಳು ಶಿಕ್ಷಕರಿಗಿಂತ ಒಂದು ಹೆಜ್ಜೆ ಮುಂದೆ ಇರುವುದು ನೋಡಬಹುದು. ಶಿಕ್ಷಕರಾದವರು ಅಪ್ಡೇಟ್ ಆಗುತ್ತ ಇರಬೇಕು ಹೊಸ ತಂತ್ರಜ್ಞಾನದ ತಿಳುವಳಿಕೆ, ಬೋಧನಾ ಕ್ಷೇತ್ರದಲ್ಲಿ ನಾವೀನ್ಯತೆಯ ಅಳವಡಿಸಿಕೊಂಡು ಬೋಧನೆ ಮಾಡಿದರೆ ಮಕ್ಕಳು ಶಿಕ್ಷಕರನ್ನು ಆರಾಧಿಸುತ್ತಾರೆ. ಆಗ ಶಿಕ್ಷಕರಿಗಾಗುವ ಆನಂದ ಅನುಭವಿಸಿಯೇ ತಿಳಿಯಬೇಕು ಆ ಅನುಭವ ನನಗಾಗಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಶಿಕ್ಷಕರಾದವರು ಅಪ್ಡೇಟ್ ಆಗಲಿಲ್ಲ ಎಂದರೆ ಔಟ್ ಡೇಟ್ ಆಗಿಬಿಡುತ್ತೇವೆ ನಮ್ಮ ನಮ್ಮ ಬೋಧನಾ ವಿಷಯಗಳಲ್ಲಿ ಪ್ರಾವೀಣ್ಯತೆ ಪಡೆಯಲು ಸದಾ ನಾವು ಕಲಿಯುತ್ತಲೇ ಇರಬೇಕು.ಇದರ ಜೊತೆಯಲ್ಲಿ ಶಿಕ್ಷಕರಾದವರು "teachers must know something about everything and everything about something" ಎಂಬಂತೆ ನಮಗೆ ಇತರೆ ವಿಷಯಗಳ ಜ್ಞಾನವು ಅಗತ್ಯ . 2020 ರ ಹೊಸ ಶಿಕ್ಷಣ ನೀತಿಯು ಸಹ ಇದೇ ಆಧಾರದ ಮೇಲೆ ಶಿಕ್ಷಕರಾದವರು ಕಲಿಯುತ್ತಾ ಕಲಿಸಬೇಕು ಎಂಬುವ ಆಶಯ ಹೊಂದಿದೆ. ಈ ನಿಟ್ಟಿನಲ್ಲಿ ಶಿಕ್ಷಕರಾದ ನಾವು ಕಲಿಯುತ್ತಾ ಕಲಿಸೋಣ, ಕಲಿಸುತ್ತಾ ಕಲಿಯೋಣ .
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
ಕನ್ನಡ ದೀಪ ಹಚ್ಚಿದ ಡಿ ಎಸ್ ಕರ್ಕಿ..
ಹೆಚ್ಚೇವು ಕನ್ನಡ ದೀಪ.. ಕರುನಾಡ ದೀಪ...ಸಿರಿನುಡಿಯ ದೀಪ...
.ಎಂಬ ಗೀತೆಯನ್ನು ನಾಡಿಗೆ ನೀಡಿ
ಕನ್ನಡಿಗರ ಮನೆ ಮನಗಳಲ್ಲಿ ಕನ್ನಡ ದೀವಿಗೆ ಬೆಳಗಿಸಿದ ಕವಿ ಯಾರಿಗೆ ಗೊತ್ತಿಲ್ಲ ಹೇಳಿ? ಹೌದು ಅವರೇ ನಮ್ಮ ಹೆಮ್ಮೆಯ ಡಿ ಎಸ್ ಕರ್ಕಿ ರವರು. ಅವರು ಸಹಜ ಮಾಧುರ್ಯ ದ ಸಂವೇದನಾಶೀಲ ಮತ್ತು ರಮ್ಯ ಕವನಗಳ ಮೂಲಕ ಕನ್ನಡ ನಾಡು ನುಡಿ ಸಂಸ್ಕೃತಿಯ ಉನ್ನತಮೌಲ್ಯಗಳನ್ನು ಉದಾತ್ತ ಆದರ್ಶಗಳನ್ನು ಹೃದ್ಯವಾಗಿ ಹಾಡಿದ ಭಾವಗೀತೆಯ ಕವಿ ಎಂದೇ ಪ್ರಸಿದ್ಧರಾಗಿದ್ದರು ಪ್ರತಿ ವರ್ಷ ನವೆಂಬರ್ 15 ರಂದು ಅವರ ಜನ್ಮ ದಿನ ಆಚರಿಸುತ್ತೇವೆ.
ಡಿ.ಎಸ್.ಕರ್ಕಿಯವರು ಬೆಳಗಾವಿ ಜಿಲ್ಲೆಯ ಹಿರೇಕೊಪ್ಪ ಗ್ರಾಮದಲ್ಲಿ 1907 ನವೆಂಬರ್ 15ರಂದು ಜನಿಸಿದರು. ಇವರ ತಾಯಿ ದುಂಡವ್ವ ತಂದೆ ಸಿದ್ದಪ್ಪ.ದುಂಡಪ್ಪ ಸಿದ್ದಪ್ಪ ಕರ್ಕಿ ಎಂಬುದು ಇವರ ಪೂರ್ಣ ನಾಮ.ಚಿಕ್ಕಂದಿನಲ್ಲಿಯೆ ತಾಯಿಯನ್ನು ಕಳೆದುಕೊಂಡ ಇವರ ಪ್ರಾಥಮಿಕ ಶಿಕ್ಷಣ ತಾಯಿಯ ತವರೂರಾದ ಬೆಲ್ಲದ ಬಾಗೇವಾಡಿಯಲ್ಲಿ ಆಯಿತು. ಬೆಳಗಾವಿಯ ಗಿಲಗಂಜಿ ಅರಟಾಳ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದ ಕರ್ಕಿಯವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಅಭ್ಯಾಸದ ನಂತರ 1935ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಕೊಲ್ಲಾಪುರದ ರಾಜಾರಾಮ ಕಾಲೇಜು, ಪುಣೆಯ ಫರ್ಗ್ಯೂಸನ್ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜುಗಳಲ್ಲಿ ಓದಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1940ರಲ್ಲಿ ಬಿ.ಟಿ. ಪದವಿಯನ್ನು ಪಡೆದು ಗಿಲಗಂಜಿ ಅರಟಾಳ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. 1949ರಲ್ಲಿ "ಕನ್ನಡ ಛಂದಸ್ಸಿನ ವಿಕಾಸ" ಮಹಾಪ್ರಬಂಧಕ್ಕಾಗಿ ಪಿ.ಎಚ್‍ಡಿ. ಪಡೆದರು. ಕೆಲಕಾಲದಲ್ಲಿ ಕೆ.ಎಲ್.ಇ. ಸೊಸೈಟಿ ಸೇರಿದರು. ಜಿ.ಎ. ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾದರು. ಅನಂತರ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕೆ.ಎಲ್.ಇ. ಸೊಸೈಟಿಯ ಹುಬ್ಬಳ್ಳಿಯ ಕಲಾ ಕಾಲೇಜಿನ ಉಪಪ್ರಾಚಾರ್ಯರಾಗಿ, ಪ್ರಾಂಶುಪಾಲರಾಗಿ, ಕೆಲಕಾಲ ನರೇಗಲ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ ಹುಬ್ಬಳ್ಳಿಗೆ ಹಿಂದಿರುಗಿದರು. ದಕ್ಷ ಆಡಳಿತಗಾರರೆಂದೂ ಇವರು ಹೆಸರುಗಳಿಸಿದರು. ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಕಾಣುತ್ತಿದ್ದರು. ನಿವೃತ್ತಿಯ ನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾಗಿ ಅನೇಕ ವರ್ಷಗಳವರೆಗೆ ವಿದ್ಯಾರ್ಥಿಗಳ ಸಂಶೋಧನೆಗೆ ನೆರವಾದರು.
ಕರ್ಕಿಯವರು ಭೂಮಿಯ ಸಂಗೀತದ ನಾದದೊಂದಿಗೆ ಭುವನದ ಭಾಗ್ಯರಾಗಿ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದವರು. ಅಧ್ಯಾತ್ಮಿಕತೆ, ಪ್ರಕೃತಿ ಪ್ರೀತಿ, ಸೌಂದರ್ಯದ ಒಲವು ಅವರ ಕಾವ್ಯದ ಜೀವಾಳಗಳಾಗಿವೆ. ಡಿ.ಎಸ್. ಕರ್ಕಿ ಅವರಿಗೆ ಕಾವ್ಯ ಕೃಷಿ ವಿಶೇಷ ಕ್ಷೇತ್ರವಾದರೂ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ಜನಪರ ವಿಚಾರಗಳನ್ನು ನೀಡಿದ್ದಾರೆ. ನಾಡಗೀತೆಗಳನ್ನು ಬರೆದು ನಾಡಿನಾದ್ಯಂತ ಪ್ರಸಿದ್ದಿಯನ್ನು ಪಡೆದ ಅವರು ಬೆಳಗಾವಿಯಲ್ಲಿ ಎಸ್.ಡಿ. ಇಂಚಲ, ಬ.ಗಂ. ತುರಮರಿಯರೊಂದಿಗೆ ಸೇರಿ ಕನ್ನಡ ಜೀವಂತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಈ ಮೂವರೂ ಸೇರಿ 'ಕನ್ನಡದ ಕಿಟ್' ಎಂದೇ ಹೆಸರುವಾಸಿಯಾಗಿದ್ದರು” ಎಂದು ಪ್ರೊ. ಎಂ. ಎಸ್. ಇಂಚಲ ಅಭಿಪ್ರಾಯ ಪಡುತ್ತಾರೆ.
ಪ್ರಕೃತಿ ಮತ್ತು ಜೀವನದ ಸಾತ್ವಿಕ ಸತ್ವ ಸೌಂದರ್ಯದಿಂದ ಅಗಾಧವಾಗಿ ಪ್ರಭಾವಿತರಾದ ಇವರು ಗದ್ಯಪದ್ಯವೆರಡರಲ್ಲೂ ತಮ್ಮ ವ್ಯಕ್ತಿ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾವ್ಯ, ಪ್ರಬಂಧ, ಮಕ್ಕಳಸಾಹಿತ್ಯ ಮತ್ತು ಸಂಪಾದನೆ, ಸಂಶೋಧನೆಗೆ ಸಂಬಂಧಿಸಿದ ಒಟ್ಟು ಹನ್ನೊಂದು ಕೃತಿಗಳನ್ನು ಪ್ರಕಟಿಸಿದ್ದಾರೆ. ಆಧ್ಯಾತ್ಮಿಕ ಚಿಂತನೆಗಳನ್ನು ಸೌಂದರ್ಯಪ್ರಜ್ಞೆ ಮತ್ತು ಜೀವನಸಂಸ್ಕೃತಿ ಕುರಿತಾದ ಆರೋಗ್ಯಪೂರ್ಣ ವಿಚಾರಗಳನ್ನು ಬದುಕಿನ ಶುಚಿ ರುಚಿ ಮತ್ತು ಒಲವು ಚೆಲವನ್ನು ಕಲಾತ್ಮಕ ವಿನ್ಯಾಸದಲ್ಲಿ ಸುಕುಮಾರ ಶೈಲಿಯಲ್ಲಿ ಪಡಿಮೂಡಿಸಿರುವ ಇವರ ಕಾವ್ಯಪ್ರತಿಭೆ ಅನನ್ಯವಾದುದು. ನಕ್ಷತ್ರಗಾನ (1949), ಭಾವತೀರ್ಥ (1953), ಗೀತಗೌರವ (1968), ಕರಿಕೆ ಕಣಗಿಲು (1976), ನಮನ (1977) ಇವು ಇವರ ಕವನ ಸಂಕಲನಗಳು. "ಹಚ್ಚೇವು ಕನ್ನಡದ ದೀಪ, ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವ ದೀಪ" ಎಂದು ಕನ್ನಡಿಗರ ಎದೆಯಾಳದ ಮಿಡಿತವನ್ನು ಕಾವ್ಯದ ಕೊರಳಲ್ಲಿ ಮಿಡಿದ ನಾಡಕವಿ ಇವರು. ಕವಿಯ ಜೀವನ ಪ್ರೀತಿ, ಪ್ರಕೃತಿ, ಕಲೆ ಮತ್ತು ಸಾಹಿತ್ಯ ಚಿಂತನೆಯ ಚತುರ್ಮುಖ ದರ್ಶನ ನೀಡುವ ಗದ್ಯಕೃತಿ ನಾಲ್ದೆಸೆಯನೋಟ (1952), ಸಾಹಿತ್ಯ ಸಂಸ್ಕೃತಿ ಶೃತಿ (1974) ಇವರ ಗದ್ಯಶೈಲಿಯ ಸೊಗಸು ಪ್ರಬಂಧ ಪ್ರತಿಭೆ ಮತ್ತು ಅನುವಾದ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆ. ಮಕ್ಕಳ ಶಿಕ್ಷಣ (1956) ಶಿಕ್ಷಣತಜ್ಞನೊಬ್ಬನ ಶೈಕ್ಷಣಿಕ ಕಾಳಜಿಗಳನ್ನು ಪ್ರಕಟಿಸಿರುವ ಕೃತಿ. ಬಣ್ಣದ ಚೆಂಡು, ತನನತೋಂನಂ ಶಿಶುಗೀತೆಗಳ ಸಂಕಲನಗಳು. ಕರ್ನಾಟಕದ ಅನುಭಾವಿ ಕವಿ ಶಿಶುನಾಳ ಶರೀಫರ ತತ್ವಪದಗಳ ಸಂಗ್ರಹ ಜನಪ್ರಿಯ ಪದಗಳು. ಇದು ಶರೀಫರ ಗೀತೆಗಳ ಆನುಭಾವಿಕ ಸಾಮಾಜಿಕ, ತಾತ್ತ್ವಿಕ ನೆಲೆಗಳ ಗಂಭೀರ ಪ್ರತಿಪಾದನೆ ಯನ್ನೊಳಗೊಂಡಿದೆ. ಕನ್ನಡ ಛಂದೋವಿಕಾಸ (1956) ಕನ್ನಡ ಛಂದಸ್ಸಿನ ಚರಿತ್ರೆ ಮತ್ತು ಸ್ವರೂಪವನ್ನು ಪ್ರಾಚೀನ ಮತ್ತು ಆಧುನಿಕ ಕಾವ್ಯ ಭಾಗಗಳ ಮೂಲಕ ವಿಶ್ಲೇಷಿಸುವ ಸಂಶೋಧನ ಮಹಾ ಪ್ರಬಂಧ. ಛಂದಶ್ಶಾಸ್ತ್ರದ ಗಂಭೀರ ಅಧ್ಯಯನಗಳು ವಿರಳವಾಗಿದ್ದ ಸಂದರ್ಭದಲ್ಲಿ ಛಂದಶ್ಶಾಸ್ತ್ರದ ಅಧ್ಯಯನಕ್ಕೆ ಅಧಿಕೃತ ಆಕರ ಗ್ರಂಥವಾಗಿದ್ದ ಕನ್ನಡ ಛಂದೋವಿಕಾಸ ಅಚ್ಚಗನ್ನಡದ ದೇಸಿ ಛಂದಸ್ಸನ್ನು ಕುರಿತು ನಡೆಸಿರುವ ವಿವೇಚನೆ ಮೌಲಿಕವಾದುದಾಗಿದೆ. ತ್ರಿಪದಿ, ಕಂದ, ರಗಳೆ, ಸಾಂಗತ್ಯ, ಷಟ್ಪದಿ, ಅಕ್ಕರ, ಚೌಪದಿ, ಏಳೆ ಇತ್ಯಾದಿ ಅಚ್ಚಗನ್ನಡ ಛಂದೋಲಯಗಳ, ಚಾರಿತ್ರಿಕ ಮತ್ತು ಕಲಾತ್ಮಕ ನೆಲೆಯ ಚರ್ಚೆ ಕರ್ಕಿಯವರ ವಿದ್ವತ್ ಪರಿಶ್ರಮ ಮತ್ತು ಸದಭಿರುಚಿಯ ಪ್ರತೀಕವಾಗಿದೆ.
ಪ್ರೊ. ಕರ್ಕಿ ಅವರ ಕೃತಿ 'ಗೀತ ಗೌರವ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಇವರ ಸಾಹಿತ್ಯಕ ಸಾಧನೆಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ (1972). ಕಾವ್ಯಗೌರವ ಎಂಬ ಸಂಭಾವನಾ ಗ್ರಂಥವನ್ನು ಇವರಿಗೆ ಅರ್ಪಿಸಲಾಗಿದೆ (1991)
ಕರ್ಕಿಯವರು ಏಳು ಕವನಸಂಕಲನಗಳನ್ನು, ಎರಡು ಮಕ್ಕಳ ಕವನಸಂಕಲನಗಳನ್ನು ಹಾಗು ಎರಡು ಪ್ರಬಂಧಸಂಕಲನಗಳನ್ನು ನೀಡಿದ್ದಾರೆ. ಕನ್ನಡ ದೀಪ ಹಚ್ಚಿದ ಕರ್ಕಿಯವರು 1984 ಜನೆವರಿ 16ರಂದು ಆರಿತು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು. ಭಾಗ 1
1.ಆಸ್ಕರ್ ಪ್ರಶಸ್ತಿಗಳನ್ನು ಯಾವ ಕ್ಷೇತ್ರದಲ್ಲಿ ವಿತರಿಸಲಾಗುತ್ತದೆ?
2. ಪ್ರಪಂಚದ ಅತಿ ದೊಡ್ಡ ಮರುಭೂಮಿ ಯಾವುದು?
3.ತಾಪಮಾನವು ವಾಯುಗೋಳದ ಯಾವ ವಲಯದಲ್ಲಿ ವೇಗವಾಗಿ ಹೆಚ್ಚಾಗುತ್ತದೆ ?
4. ಭಾರತದ ರಾಷ್ಟ್ರೀಯ ಹಣ್ಣು ಯಾವುದು?
5. ಟೈಫಾಯಿಡ್ ಜ್ವರವು _____ ನಿಂದ ಉಂಟಾಗುತ್ತದೆ.
6. ಯಾವ ಸಂವಿಧಾನದ ತಿದ್ದುಪಡಿಗಳು ಪಂಚಾಯತ್ ರಾಜ್ ಸಂಸ್ಥೆಯನ್ನು ಸ್ಥಾಪಿಸಿವೆ?
7. ಸೋಡಿಯಂ ಕಾರ್ಬೋನೇಟ್ ಅನ್ನು ಸಾಮಾನ್ಯವಾಗಿ ಕರೆಯಲಾಗುತ್ತದೆ?
8 .ಎರಡು ಪರಮಾಣುಗಳ ನಡುವೆ ಬಂಧವು ರೂಪುಗೊಂಡಾಗ, ವ್ಯವಸ್ಥೆಯ ಶಕ್ತಿಯು ______.ಆಗುತ್ತದೆ
9 .ನೀರು _____ ಉಷ್ಣತೆಯಲ್ಲಿ ಗರಿಷ್ಠ ಸಾಂದ್ರತೆಯನ್ನು ಹೊಂದಿದೆ.
10. ನೀಪ್ ಟೈಡ್ಸ್ ಎಂದರೆ._________
11. ಅತಿ ದೊಡ್ಡ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುವ ಸಾಗರವು_______ ಆಗಿದೆ.
12.ದೂರವಾಣಿಯನ್ನು ಕಂಡುಹಿಡಿದವರು ಯಾರು?
13.ಏಷ್ಯನ್ ಗೇಮ್ಸ್ ಅನ್ನು ಮೊದಲು ಆಯೋಜಿಸಿದ ದೇಶ ಯಾವುದು?
14."ಪಂಚತಂತ್ರ" ಕಥೆಗಳನ್ನು ಸಂಕಲಿಸಿದವರು ಯಾರು?
15.ಯಾವ ರಾಜವಂಶದ ಅವಧಿಯಲ್ಲಿ ಅಜಂತಾ ಗುಹೆಗಳನ್ನು ನಿರ್ಮಿಸಲಾಯಿತು?
16.'ಭಾರತಮಾತಾ' ಎಂಬ ಪ್ರಸಿದ್ಧ ವರ್ಣಚಿತ್ರದ ವರ್ಣಚಿತ್ರಕಾರ ಯಾರು?
17.ಫ್ರಾನ್ಸ್ನ ರಾಜಧಾನಿ ಯಾವುದು?
18."ಟು ಕಿಲ್ ಎ ಮೋಕಿಂಗ್ ಬರ್ಡ್" ಕಾದಂಬರಿಯನ್ನು ಬರೆದವರು ಯಾರು?
19.ನಮ್ಮ ಸೌರವ್ಯೂಹದ ಅತಿದೊಡ್ಡ ಗ್ರಹ ಯಾವುದು?
20. "ದಿ ಮೋನಾಲಿಸಾ" ಎಂಬ ಪ್ರಸಿದ್ಧ ಕಲಾಕೃತಿಯನ್ನು ಚಿತ್ರಿಸಿದವರು ಯಾರು?
ಸರಿ ಉತ್ತರಗಳು ...
1ಸಿನಿಮಾ
2 ಸಹರಾ
3ಆಯಾನುಗೋಳ
4 ಮಾವು
5 ಬ್ಯಾಕ್ಟೀರಿಯಾ
6 73 ನೇ ತಿದ್ದುಪಡಿ
7 ವಾಶಿಂಗ್ ಸೋಡಾ
8 ಇಳಿಕೆ
9 4 ಡಿಗ್ರಿ ಸೆಲ್ಸಿಯಸ್
10 ದುರ್ಬಲ ಅಲೆಗಳು
11 ಪೆಸಿಫಿಕ್ ಸಾಗರ
12 ಅಲೆಕ್ಸಾಂಡರ್ ಗ್ರಹಾಂಬೆಲ್
13 ಭಾರತ
14 ವಿಷ್ಣು ಶರ್ಮ
15 ಗುಪ್ತರು
16 ಅಬನೀಂದ್ರ ನಾಥ್ ಟ್ಯಾಗೋರ್
17 ಪ್ಯಾರಿಸ್
18 ಹಾರ್ಪರ್ ಲೀ
19 ಗುರು
20 ಲಿಯೋನಾರ್ಡೋ ಡಾ ವಿಂಚಿ
ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ
ತುಮಕೂರು
9900925529