11 November 2023

ಓದೋಣ ಓದಿಸೋಣ..

 


ಓದೋಣ ಓದಿಸೋಣ..



ಒಂದು   ಭಾನುವಾರ ಸಂಜೆ ತುಮಕೂರಿನ ಬಾಯರ್ಸ್ ಕಾಪೀ ಹೌಸ್ ನಲ್ಲಿ ಟೀ ಕುಡಿಯುತ್ತಾ  ಸಮಾನ ಮನಸ್ಕ ಗೆಳೆಯರ ಜೊತೆ ಕುಳಿತು ಟೀ ಕುಡಿಯುವಾಗ ಸಾಹಿತ್ಯ, ಸಮಾಜ ,ಶಿಕ್ಷಣ ಹೀಗೆ ನಮ್ಮ ಮಾತುಕತೆ ಸಾಗುವಾಗ ಓದುವ ಹವ್ಯಾಸ ಕ್ರಮೇಣ ಕಡಿಮೆಯಾಗಿರುವ ಬಗ್ಗೆ ಚರ್ಚೆ ನಡೆಯುವಾಗ   ಸ್ಟೂಡೆಂಟ್ ಬುಕ್ ಹೌಸ್ ಮಾಲೀಕರು ಪ್ರಕಾಶಕರಾದ ಸದಾಶಿವ್ ರವರು ಒಂದು ಘಟನೆ ಹೇಳಿದರು .ಒಮ್ಮೆ ನನ್ನ ಪುಸ್ತಕದ ಅಂಗಡಿಗೆ ನಾಲ್ಕು ಜನ ಕಾರಿನಲ್ಲಿ ಬಂದು ಶಿಕ್ಷಕರು ಎಂದು ಪರಿಚಯ ಮಾಡಿಕೊಂಡು ಓರ್ವ ಶಿಕ್ಷಕರು ಸುಮಾರು ಎಂಟತ್ತು ಉತ್ತಮ ಅಭಿರುಚಿಯ ಪುಸ್ತಕಗಳನ್ನು ಕೊಂಡರು .ಅವರ ಜೊತೆಯಲ್ಲಿ ಇದ್ದ ಶಿಕ್ಷಕರೊಬ್ಬರು "ಸಾಕು ಬಾರಪ್ಪ ಅದೇನ್ ಪುಸ್ತಕ ಓದ್ತಿಯಾ ನೀನು " ಎಂದು ವ್ಯಂಗ್ಯವಾಗಿ ಹೇಳಿದರು ಇದರಿಂದ ನನಗೆ ಬಹಳ ಬೇಸರ ವಾಯಿತು ಎಂದರು.. ಅವರು ಮುಂದುವರೆದು ನಾನು ಪುಸ್ತಕ ಅಂಗಡಿಯಿಟ್ಟು ಹದಿನೈದು ವರ್ಷಗಳಾದವು ಶಿಕ್ಷಕರು ಪುಸ್ತಕ ಕೊಳ್ಳುವುದು ಬಹಳ ಕಡಿಮೆ ಎಂದರು ಅದಕ್ಕೆ ನಾನು ಆಕ್ಷೇಪಿಸಿ ನಾನು ಈ ವರ್ಷ ಹದಿನೈದು ಪುಸ್ತಕ ಕೊಂಡು ಓದಿರುವೆ ಎಂದೆ .ನೀವು ಹಾಗೂ ನಿಮ್ಮಂತವರು ಕೆಲವೇ ಮಂದಿ ಸರ್ ನಮ್ಮ ಮನೆಯ ಪಕ್ಕ ಎರಡು ಶಿಕ್ಷಕರ ಕುಟುಂಬ ಇವೆ ಅವರ ಮನೆಯಲ್ಲಿ ಒಂದು ನ್ಯೂಸ್ ಪೇಪರ್ ಸಹ ತರಿಸಲ್ಲ   ಅವರು ನ್ಯೂಸ್ ಪೇಪರನ್ನೇ  ಓದಲ್ಲ ಎಂದರೆ  ಪುಸ್ತಕ ಓದುವ ಮಾತೆಲ್ಲಿ ಬಂತು?     ಅಂದು ನನ್ನ ಬಾಯಿ ಮುಚ್ಚಿಸಿದರು.

ರವೀಂದ್ರನಾಥ ಟಾಗೋರ್ ರವರು ಒಂದು ದೀಪ ತಾನು ಉರಿಯದೇ ಮತ್ತೊಂದು ದೀಪ ಹಚ್ಚಲಾಗದು ಎಂದಂತೆ ಶಿಕ್ಷಕರಾದವರು ಮೊದಲು ತಾವು  ಓದಿ ಜ್ಞಾನವನ್ನು ಪಡೆದರೆ ಮಾತ್ರ ಮಕ್ಕಳಿಗೆ ಜ್ಞಾನ ನೀಡಲು ಸಾದ್ಯ. ಸಾಧಾರಣ ಶಿಕ್ಷಕ ಪಾಠ ಮಾಡುತ್ತಾನೆ ಉತ್ತಮ ಶಿಕ್ಷಕ ಅರ್ಥ ಮಾಡಿಸುತ್ತಾನೆ ಅತ್ಯುತ್ತಮ ಶಿಕ್ಷಕ ಪ್ರೇರಣೆ ನೀಡುತ್ತಾನೆ ಅಂತಹ ಪ್ರೇರಣೆ ನೀಡುವ ಶಿಕ್ಷಕ ಮೊದಲು ಕಲಿಕಾರ್ಥಿಯಾಗಿ ಕಲಿತಿರಬೇಕು.ಬಹುತೇಕರು ನಂಬಿದಂತೆ ಶಿಕ್ಷಕ ವೃತ್ತಿ ಸಿಕ್ಕಿದ ಮೇಲೆ ಕಲಿಯಲು ಏನೂ ಇಲ್ಲ ಎಂಬುದು ಸುಳ್ಳು. ಕಲಿಕೆಯು ವರ್ಷದಿಂದ ಗೋರಿಯವರೆಗೆ ನಡೆವ ನಿರಂತರ ಪ್ರಕ್ರಿಯೆಯಾಗಿದೆ. ಅದರಲ್ಲೂ ಈ ಇಪ್ಪತ್ತೊಂದನೇ ಶತಮಾನದ  ರೋಬಾಟಿಕ್ ಮತ್ತು  ಕೃತಕ ಬುದ್ಧಿಮತ್ತೆಯ ಕಾಲದಲ್ಲಿ ಮಕ್ಕಳು ಶಿಕ್ಷಕರಿಗಿಂತ ಒಂದು ಹೆಜ್ಜೆ ಮುಂದೆ ಇರುವುದು ನೋಡಬಹುದು. ಶಿಕ್ಷಕರಾದವರು ಅಪ್ಡೇಟ್ ಆಗುತ್ತ ಇರಬೇಕು ಹೊಸ ತಂತ್ರಜ್ಞಾನದ ತಿಳುವಳಿಕೆ, ಬೋಧನಾ ಕ್ಷೇತ್ರದಲ್ಲಿ ನಾವೀನ್ಯತೆಯ ಅಳವಡಿಸಿಕೊಂಡು ಬೋಧನೆ ಮಾಡಿದರೆ ಮಕ್ಕಳು ಶಿಕ್ಷಕರನ್ನು ಆರಾಧಿಸುತ್ತಾರೆ. ಆಗ ಶಿಕ್ಷಕರಿಗಾಗುವ ಆನಂದ ಅನುಭವಿಸಿಯೇ ತಿಳಿಯಬೇಕು ಆ ಅನುಭವ ನನಗಾಗಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ.  ಶಿಕ್ಷಕರಾದವರು ಅಪ್ಡೇಟ್ ಆಗಲಿಲ್ಲ ಎಂದರೆ ಔಟ್ ಡೇಟ್ ಆಗಿಬಿಡುತ್ತೇವೆ ನಮ್ಮ ನಮ್ಮ ಬೋಧನಾ   ವಿಷಯಗಳಲ್ಲಿ ಪ್ರಾವೀಣ್ಯತೆ ಪಡೆಯಲು ಸದಾ ನಾವು ಕಲಿಯುತ್ತಲೇ ಇರಬೇಕು.ಇದರ ಜೊತೆಯಲ್ಲಿ ಶಿಕ್ಷಕರಾದವರು  "teachers must know something about everything and everything about something" ಎಂಬಂತೆ ನಮಗೆ ಇತರೆ ವಿಷಯಗಳ ಜ್ಞಾನವು ಅಗತ್ಯ . 2020 ರ ಹೊಸ ಶಿಕ್ಷಣ ನೀತಿಯು ಸಹ ಇದೇ ಆಧಾರದ ಮೇಲೆ ಶಿಕ್ಷಕರಾದವರು ಕಲಿಯುತ್ತಾ ಕಲಿಸಬೇಕು ಎಂಬುವ ಆಶಯ ಹೊಂದಿದೆ. ಈ ನಿಟ್ಟಿನಲ್ಲಿ ಶಿಕ್ಷಕರಾದ ನಾವು ಕಲಿಯುತ್ತಾ ಕಲಿಸೋಣ, ಕಲಿಸುತ್ತಾ ಕಲಿಯೋಣ .


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

No comments: