11 November 2023

ಅನುಭವಾತ್ಮಕ ಕಲಿಕೆಯಲ್ಲಿ ನಿರತರಾದ ಕ್ಯಾತ್ಸಂದ್ರ ಶಾಲೆಯ ಮಕ್ಕಳು.


 

ಅನುಭವಾತ್ಮಕ ಕಲಿಕೆಯಲ್ಲಿ ನಿರತರಾದ ಕ್ಯಾತ್ಸಂದ್ರ ಶಾಲೆಯ ಮಕ್ಕಳು.


ಅಂದು  ನಾಲ್ಕು ಗೋಡೆಗಳ ಮಧ್ಯೆ ಕಲಿಕೆಯ ಬದಲಾಗಿ ಕ್ಯಾತ್ಸಂದ್ರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅನುಭವಾತ್ಮಕ ಕಲಿಕೆಗೆ ಸಿದ್ದವಾಗಿ  ಹಾಲು ಸಂಸ್ಕರಣಾ ಘಟಕದೊಳಗೊಂದು ಸುತ್ತು ಹಾಕಿ ಕ್ಷೇತ್ರ ಭೇಟಿ ಮಾಡಿ ತಮ್ಮ ಜ್ಞಾನಾರ್ಜನೆ ಮಾಡಿಕೊಂಡರು.

ಆಯ್ದ ಮಾದರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಂಸ್ಥೆಗಳ ಭೇಟಿಗಾಗಿ  ಶಿಕ್ಷಕರ ಕಲ್ಯಾಣ ನಿಧಿಯ ಪ್ರಾಯೋಜಕತ್ವದಲ್ಲಿ ಕ್ಯಾತ್ಸಂದ್ರ ಪ್ರೌಢಶಾಲೆಯ ಆಯ್ದ ವಿದ್ಯಾರ್ಥಿಗಳು   ತುಮಕೂರು ಬಳಿಯ ಮಲ್ಲಸಂದ್ರದ ಹಾಲು ಸಂಸ್ಕರಣಾ ಘಟಕಕ್ಕೆ ತರಳಿದ್ದರು.

ಪ್ರಧಾನ ಡೇರಿ ಪ್ರವೇಶಿಸಿದ ಮಕ್ಕಳಿಗೆ ಅಧಿಕಾರಿಗಳು ಮೊದಲಿಗೆ ಹಿತವಚನ ಹೇಳಿ ಮಕ್ಕಳು ಹಾಲು ಸಂಸ್ಕರಣಾ ಘಟಕ ನೋಡಿ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಕರೆ ನೀಡಿದರು.
ನಳಿನ ಎಂಬ ಸಿಬ್ಬಂದಿ ಮಕ್ಕಳಿಗೆ ಹಾಲಿನ ಕೇಂದ್ರದ ಬಗ್ಗೆ ಹಾಲಿನ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡುವಾಗ  ಕೇಳಿಸಿಕೊಂಡು ನೋಡುತ್ತಾ    ಮಕ್ಕಳು ತಮ್ಮ ನೋಟ್ ಪುಸ್ತಕದಲ್ಲಿ ನೋಟ್ ಮಾಡಿಕೊಂಡರು.

        ತುಮಕೂರು ಹಾಲು ಒಕ್ಕೂಟವು 30ನೇ ಮಾರ್ಚ್ 1977 ರಂದು ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಾಯ್ದೆಯಡಿಯಲ್ಲಿ "ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್" ಎಂದು ನೋಂದಾಯಿಸಲ್ಪಟ್ಟಿದೆ. ಡೈರಿ ಸಹಕಾರಿಗಳನ್ನು ಮೂರು ಹಂತದ ವ್ಯವಸ್ಥೆಯಲ್ಲಿ ಆನಂದ್ ಮಾದರಿಯಲ್ಲಿ ಸ್ಥಾಪಿಸಲಾಯಿತು. ಹಾಲಿನ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟವನ್ನು ನೋಡಿಕೊಳ್ಳಲು ಗ್ರಾಮ ಮಟ್ಟದಲ್ಲಿ ಗ್ರಾಮ ಮಟ್ಟದ ಡೈರಿ ಸಹಕಾರ ಸಂಘಗಳು ಅಸ್ತಿತ್ವಕ್ಕೆ ಬಂದಿವೆ.  





     2574 ಕಂದಾಯ ಗ್ರಾಮಗಳನ್ನು ಒಳಗೊಂಡಿರುವ 10 ತಾಲ್ಲೂಕುಗಳಾದ   ತುಮಕೂರು, ಗುಬ್ಬಿ, ಸಿಎನ್‌ಹಳ್ಳಿ, ತಿಪಟೂರು, ತುರುವೇಕೆರೆ, ಕುಣಿಗಲ್, ಕೊರಟಗೆರೆ, ಸಿರಾ, ಮಧುಗಿರಿ, ಪಾವಗಡ ಇವುಗಳಲ್ಲಿ
ಜೂನ್-2022 ರಂತೆ ಒಟ್ಟು ಸದಸ್ಯರು 2,85,061 ಸದಸ್ಯರನ್ನು ಹೊಂದಿದೆ.

     1975-76ರಲ್ಲಿ ದಿನಕ್ಕೆ ಸರಾಸರಿ 1035 ಕೆಜಿ ಹಾಲು ಸಂಗ್ರಹವಾಗುತ್ತಿತ್ತು. ಒಕ್ಕೂಟದ ನೋಂದಣಿ ಸಮಯದಲ್ಲಿ, ಹಾಲು ಸಂಗ್ರಹಣೆಯು ದಿನಕ್ಕೆ 9,486 ಕೆಜಿಗೆ ಏರಿತು. ಅಂದಿನಿಂದ, ವಿವಿಧ ಇನ್‌ಪುಟ್ ಚಟುವಟಿಕೆಗಳ ಪರಿಣಾಮಕಾರಿ ಅನುಷ್ಠಾನದಿಂದಾಗಿ ಹಾಲಿನ ಸಂಗ್ರಹವು ಅನೇಕ ಪಟ್ಟು ಹೆಚ್ಚಾಗಿದೆ. ಪ್ರಸ್ತುತ ದಿನವೊಂದಕ್ಕೆ 8.94 ಲಕ್ಷ ಕೆಜಿ ಹಾಲು ಸಂಗ್ರಹವಾಗುತ್ತಿದೆ. ಜೂನ್ 29, 2022 ರಂದು, ಒಕ್ಕೂಟವು 9,31,684 ಕೆಜಿಗಳನ್ನು ಸಂಗ್ರಹಿಸಿದೆ ಮತ್ತು ಇದು ಪ್ರಾರಂಭದಿಂದಲೂ ಅತಿ ಹೆಚ್ಚು ಹಾಲು ಸಂಗ್ರಹಣೆಯಾಗಿದೆ.

ಒಕ್ಕೂಟವು ವಿವಿಧ ರೀತಿಯ ಹಾಲುಗಳನ್ನು ಮಾರಾಟ ಮಾಡುತ್ತದೆ ಅಂದರೆ ಟೋನ್ಡ್ ಮಿಲ್ಕ್, ಹೋಮೋಜೆನೈಸ್ಡ್ ಟೋನ್ಡ್ ಹಾಲು, ಹೋಮೊಜೆನೈಸ್ಡ್ ಹಸುವಿನ ಹಾಲು, ವಿಶೇಷ ಹಾಲು ಮತ್ತು ಶುಭಂ ಹಾಲು. ತಯಾರಿಸಿದ ಮತ್ತು ಮಾರಾಟ ಮಾಡಲಾಗುವ ಉತ್ಪನ್ನಗಳ ಇತರ ಶ್ರೇಣಿಯು ಮೊಸರು, UHT-FP ಹಾಲು, ತುಪ್ಪ, ಬೆಣ್ಣೆ ಹಾಲು, ಮೈಸೂರು ಪಾಕ್, ಗೋಡಂಬಿ ಬರ್ಫಿ ಮತ್ತು ಪೇಡಾವನ್ನು ಒಳಗೊಂಡಿದೆ. ಇದಲ್ಲದೆ, ಒಕ್ಕೂಟವು ನಂದಿನಿ ಹಾಲಿನ ಉತ್ಪನ್ನಗಳಿಂದ ಉತ್ಪತ್ತಿಯಾಗುವ ಎಲ್ಲಾ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ, ಕೆಎಂಎಫ್ ಘಟಕವು ತನ್ನ ಮಾರುಕಟ್ಟೆ ಪಾಲನ್ನು ಸ್ಥಿರವಾಗಿ ಹೆಚ್ಚಿಸುತ್ತಿದೆ. ಪ್ರಸ್ತುತ ದಿನಕ್ಕೆ 2.88 ಲಕ್ಷ ಲೀಟರ್‌ ಮಾರಾಟ ಮಾಡುತ್ತಿದ್ದೇವೆ. ಎಂದು ನಳಿನ ರವರು ಮಾಹಿತಿ ನೀಡಿದರು.

ಮಾಹಿತಿಯನ್ನು ಕೇಳುತ್ತಾ ಬೆಣ್ಣೆ ತಯಾರಿಸುವ ಘಟಕ, ತುಪ್ಪ ,ಮತ್ತು 6 ರೀತಿಯ ಹಾಲು ಪ್ಯಾಕ್ ಮಾಡುವ ಘಟಕಗಳನ್ನು ಸ್ವತಃ ನೋಡುತ್ತಾ ಅಚ್ಚರಿ ಪಡುತ್ತಾ ಮುಂದೆ ಸಾಗುತ್ತಿದ್ದರು.







ಹೊಸ ಜ್ಞಾನವನ್ನು ಪಡೆದ ಮಕ್ಕಳು ಖುಷಿಪಡುವಾಗಲೇ ಮಕ್ಕಳಿಗೆ ಮತ್ತು ಮಾರ್ಗದರ್ಶಿ ಶಿಕ್ಷಕರಿಗೆ  ಉಚಿತವಾಗಿ ಪೇಡ ನೀಡಿದರು. ಜೊತೆಗೆ ಕೆಲ ಮಕ್ಕಳ ಅಪೇಕ್ಷೆಯಂತೆ ಉಚಿತವಾಗಿ ಹಾಲನ್ನು ಸಹ ನೀಡಿದರು. ಮಕ್ಕಳ ಗುಂಪಿನಲ್ಲಿ ಬಹುತೇಕ ರೈತರ ಮಕ್ಕಳು ಇದ್ದರು ತಮ್ಮ ಪೋಷಕರು ಡೈರಿ ಗಳಲ್ಲಿ ಹಾಕಿದ ಹಾಲು ಹೇಗೆ ಸಂಸ್ಕರಣೆ ಹೊಂದಿ ವಿವಿಧ   ನಂದಿನಿ ಉತ್ಪನ್ನ ಆಗುತ್ತವೆ  ಎಂಬುದನ್ನು ತಿಳಿಸುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಇಂತಹ ಡೈರಿಗಳ ಸ್ಥಾಪನೆಯ ಹಿಂದಿನ ಶಕ್ತಿ ಬಿಳಿ ಕ್ರಾಂತಿಯ ಪಿತಾಮಹ ,ಮಿಲ್ಕ್ ಮ್ಯಾನ್ ಆಪ್ ಇಂಡಿಯಾ ವರ್ಗಿಸ್ ಕುರಿಯನ್ ಅವರ ಬಗ್ಗೆ ಮಕ್ಕಳು ಮಾಹಿತಿ ಪಡೆದರು.
         
ಕಡೆಯಲ್ಲಿ  ಮಕ್ಕಳು  ಇಂತಹ ಅನುಭವಾತ್ಮಕ ಕಲಿಕೆಗೆ ಅವಕಾಶ ಕಲ್ಪಿಸಿದ ಶಿಕ್ಷಕರ ಕಲ್ಯಾಣ ನಿಧಿ, ಮುಖ್ಯ ಶಿಕ್ಷಕರು, ಮಾರ್ಗದರ್ಶಿ ಶಿಕ್ಷಕರು, ಡೈರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಕ್ಕಳು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.ಮುಂದಿನ ದಿನಗಳಲ್ಲಿ ಇನ್ನೂ ಇಂತಹ ಸಂಸ್ಥೆಗಳಿಗೆ ನಮ್ಮನ್ನು ತಿಂಗಳಲ್ಲಿ ಒಂದು ಬಾರಿಯಾದರೂ ಕರೆದುಕೊಂಡು ಹೋಗಿ ಸರ್ ಎಂದು ಪ್ರೀತಿಪೂರ್ವಕವಾಗಿ ಮನವಿ ಮಾಡಿದರು.

ಸಿಹಿಜೀವಿ ವೆಂಕಟೇಶ್ವರ
ಸಮಾಜ ವಿಜ್ಞಾನ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ
ತುಮಕೂರು


No comments: