14 November 2023

ಒಂದಾಗಿ ಬಾಳೋಣ .


 


ಒಂದಾಗಿ ಬಾಳೋಣ

ಒಮ್ಮೆ ಸ್ವರ್ಗಕ್ಕೆ ಯಾರು ಹೋಗಬಹುದು ಎಂಬ ಚರ್ಚೆ ಬಂದಾಗ ಕನಕದಾಸರು ಸೂಕ್ಷ್ಮವಾಗಿ "ನಾನು ಹೋದರೆ ಹೋದೇನು" ಎಂದಿದ್ದರು. ಹೌದು ನಾನು ಎಂಬ ಅಹಂ ನಿಂದ ಇಂದು ಏನೆಲ್ಲಾ ಅನಾವುತಗಳಾಗುತ್ತಿವೆ ಎಂಬುದು ನಮ್ಮ ಕಣ್ಣಮುಂದಿದೆ ಆದರೂ ನಾನತ್ವ ಬಿಡುತ್ತಿಲ್ಲ ವಿಶಾಲ ಮನೋಭಾವ ಬೆಳೆಯುತ್ತಿಲ್ಲ

ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ "ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.

ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ "ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು. 

ಇದನ್ನು ಕೇಳಿದ ಬತ್ತಿ "ನಾನು ಉರಿಯುತ್ತಿರುವುದರಿಂದಲೇ ದೀಪ ಉರಿಯುತ್ತಿದೆ ಆದ್ದರಿಂದ ನ್ಯಾಯವಾಗಿ ಬೆಳಕು ನನ್ನದೇ" ಎಂದಿತು.

ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ "ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು.

ನಾನು ನನ್ನಿಂದ ಎಂಬ ಕಚ್ಚಾಟದಲ್ಲಿ ಹಣತೆ ಒಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !

ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿತ್ತು. "ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನಿಧ್ಯವಿಲ್ಲ"
ಕುವೆಂಪುರವರು ಅದಕ್ಕೆ ಹೇಳಿದ್ದು "ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ" ಎಲ್ಲರೂ ಒಬ್ಬನಿಗಾಗಿ ಒಬ್ಬ ಎಲ್ಲರಿಗಾಗಿ ಎಂಬ ಸಹಕಾರ ತತ್ವ ಪಾಲಿಸುತ್ತಾ ಸಹಬಾಳ್ವೆ ಮಾಡಿದರೆ ಈ ಧರೆ ನಾಕವಾಗುವುದು.

ಹಮ್ಮಿನಿಂದ ಬ್ರಹ್ಮನೂ ಕೆಟ್ಟ ನಮ್ ಮನೇಲಿ ಒಬ್ಬ ಸುಮ್ ಸುಮ್ ನೆ ಕೆಟ್ಟ  ಎಂಬ ಗಾದೆಯಂತೆ ಇಂದು ಸಾಮರಸ್ಯದ ಕೊರತೆ ಕಾಡುತ್ತಿದೆ."ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಂ ನ ಕೋಟೆಯಲ್ಲಿ " ಎಂಬ ಕವಿವಾಣಿಯು ಇದನ್ನೇ ನೆನಪಿಸುತ್ತದೆ. "ಐದು ಬೆರಳು ಕೂಡಿದರೆ ಒಂದು ಮುಷ್ಟಿ, ಹಲವು ಮಂದಿ ಸೇರಿದರೆ ಈ ಸಮಷ್ಟಿ" ಆದ್ದರಿಂದ ಕತ್ತರಿಯಂತೆ ಹರಿಯುವ ಕಾರ್ಯ ಮಾಡದೇ ಸೂಜಿಯಂತೆ ಹೊಲಿಯುವ ಕೆಲಸ ಮಾಡುತ್ತಾ ಏಕತೆಯ ಮಂತ್ರ ಪಠಿಸುತ್ತಾ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನೆನಯುತ್ತಾ ನಾವೆಲ್ಲರೂ ಒಂದಾಗಿ ಬಾಳೋಣ...

ಸಿಹಿಜೀವಿ ವೆಂಕಟೇಶ್ವರ
ತುಮಕೂರು

No comments: