ಕೈಲಾಸಪತಿಯನ್ನು ಜಯಿಸಿದ ನಕ್ಕೀರ
ಅವನ ಹೆಸರು ನಕ್ಕೀರ ಯಾವಾಗಲೂ ಸಮುದ್ರದ ತಡಿಯಲ್ಲೇ ಇರುವವನು. ಅವನ ಕೆಲಸವೆಂದರೆ ಸಮುದ್ರದ ಆಳಕ್ಕೆ ಮುಳುಗಿ ಅಲ್ಲಿದ್ದ ಮುತ್ತುಗಳನ್ನು ಆಯ್ದು ತರುವುದು. ಅದು ಅವನಿಗೆ ದೈಹಿಕ ಕೆಲಸವಾದರೂ ಅವನ ಪ್ರತಿ ಉಸಿರಿನಲ್ಲಿ ಶಿವನಿದ್ದ. ಅವನು ನೀರಿನಲ್ಲಿ ಮುಳುಗುವಾಗ, ಮುತ್ತುಗಳನ್ನು ಆಯುವಾಗ, ನೀರಿನಿಂದ ಹೊರಬಂದು ಅವುಗಳನ್ನು ಬೇರ್ಪಡಿಸುವಾಗ ಪ್ರತಿಕ್ಷಣವೂ ಶಿವಧ್ಯಾನ. ಅವನಿಗೆ ಶಿವಭಕ್ತನೆಂದು ಅಷ್ಟು ದೊಡ್ಡ ಹೆಸರು ಬಂದದ್ದನ್ನು ಕಂಡು ಶಿವನಿಗೂ ಅಸೂಯೆಯಾಯಿತಂತೆ. ಅವನನ್ನು ಕಂಡು ಪರೀಕ್ಷಿಸಬೇಕೆಂದು ಶಿವ ಸಮುದ್ರ ದಂಡೆಗೆ ಬಂದು ಪ್ರತ್ಯಕ್ಷನಾದ. ನಕ್ಕೀರ ತನ್ನ ಕಾಯಕದಲ್ಲಿ ಎಷ್ಟು ತನ್ಮಯನಾಗಿದ್ದನೆಂದರೆ ಮುಂದೆ ಶಿವ ನಿಂತದ್ದು ಕಾಣಲಿಲ್ಲವಂತೆ! ಅವನನ್ನು ಗಮನಿಸದೇ ನೀರಿನಲ್ಲಿ ಮುಳುಗು ಹಾಕಿದ. ಶಿವನಿಗೆ ಕೋಪ ಬಂತು. ತನ್ನ ಭಕ್ತನೆಂದು ಜನ ಈತನನ್ನು ಕೊಂಡಾಡುತ್ತಿದ್ದರೆ ಈತ ಸಾಕ್ಷಾತ್ ತಾನೇ ಮುಂದೆ ಬಂದು ನಿಂತರೂ ಗಮನಿಸುತ್ತಿಲ್ಲ. ಶಿವನ ಕೋಪ ಹೆಚ್ಚಾಯಿತು.
ನಕ್ಕೀರ ನೀರಿನಿಂದ ಮೇಲೆ ಬಂದೊಡನೆ ಕ್ರುದ್ಧನಾಗಿ ತನ್ನ ಮೂರನೆಯ ಕಣ್ಣನ್ನು ತೆರೆದ! ಶಿವನ ಹಣೆಗಣ್ಣು ತೆರೆದರೆ ಪ್ರಪಂಚವೇ ಭಸ್ಮವಾಗಿ ಹೋಗುತ್ತದೆ. ನಕ್ಕೀರ ಹೇಗೆ ಬದುಕಿ ಉಳಿದಾನು? ಆದರೆ ಆಶ್ಚರ್ಯ! ಶಿವನ ತೆರೆದ ಕಣ್ಣೀರಿನ ಬೆಂಕಿಯ ಉರಿ ನಕ್ಕೀರನಿಗೆ ತಗುಲಲಿಲ್ಲ. ಅವನು ತನ್ನ ಕೆಲಸದಲ್ಲೇ ತೊಡಗಿದ್ದ. ಶಿವ ಆಶ್ಚರ್ಯದಿಂದ ನಕ್ಕೀರನನ್ನು ಕೇಳಿದ, ‘ಅಲ್ಲಯ್ಯ, ನನ್ನನ್ನು ಕಾಣಲೆಂದು ಅನೇಕಾನೇಕ ಶರಣರು ನೂರಾರು ವರ್ಷ ತಪಸ್ಸು ಮಾಡಿದರೂ ದೊರೆಯದ ನಾನು, ನಿನ್ನ ಮುಂದೆಯೇ ನಿಂತಿದ್ದರೂ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತೀದ್ದೀಯಾ. ಇದಕ್ಕೆ ಏನು ಕಾರಣ?’ ಆಗ ನಕ್ಕೀರ, ‘ದೇವಾ, ನಾನು ನನ್ನ ಕೆಲಸದಲ್ಲಿ ತನ್ಮಯನಾಗಿದ್ದೆ. ನನಗೆ ಕಾಯಕವೇ ಪೂಜೆ. ಆ ಕಾಯಕ ನೀನೇ.ನೀನೇ ನನ್ನ ಕಾಯಕದ ಉದ್ದೇಶ’ ಎಂದಾಗ ಶಿವ, ‘ಹೌದು, ಆದರೆ ನನ್ನ ಉರಿಗಣ್ಣಿನ ಬೆಂಕಿ ನಿನ್ನನ್ನು ಯಾಕೆ ಸುಡಲಿಲ್ಲ?’ ಎಂದು ಕೇಳುತ್ತಾನೆ.
ಅದಕ್ಕೆ ನಕ್ಕೀರ, ‘ದೇವಾ, ನಾನು ದುಡಿದು ತಿನ್ನುವವನು, ನೀನು ತಿರಿದು ತಿನ್ನುವವನು. ದುಡಿದು ತಿನ್ನುವವನು ತಿರಿದು ತಿನ್ನುವವನಿಗಿಂತ ದೊಡ್ಡವನು. ನಿನ್ನ ಉರಿಗಣ್ಣಿಗಿಂತ ನನ್ನ ಕಾಯಕದ ಶಕ್ತಿ ಹೆಚ್ಚು’ ಎನ್ನುತ್ತಾನೆ. ಈ ಮಾತಿಗೆ ಶಿವ ಮೆಚ್ಚುತ್ತಾನೆ, ನಕ್ಕೀರನ ಕಾಯಕದ ಶಕ್ತಿಯನ್ನು ಹೊಗಳುತ್ತಾನೆ, ಆಶೀರ್ವದಿಸುತ್ತಾನೆ.
ಕಾಯಕವೇ ಕೈಲಾಸ ಎಂದ ಶರಣರ ಚಿಂತನೆಯು ಇದೇ ಆಶಯವನ್ನು ಹೊಂದಿದೆ.ನಮ್ಮ ಕರ್ತವ್ಯವೇ ನಮಗೆ ದೇವರಾಗಲಿ ಎಲ್ಲರೂ ದುಡಿದು ತಿನ್ನುವ ಗುಣವನ್ನು ಬೆಳೆಸಿಕೊಳ್ಳೋಣ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment