14 November 2023

ದೇವರೊಂದಿಗೆ ಮಾತುಕಥೆ...

 


ದೇವರೊಂದಿಗೆ ವಾಗ್ವಾದ..

ದೇವರು ಪ್ರತ್ಯಕ್ಷನಾಗುವುದೇ ವಿರಳವಾದ ಸಂಧರ್ಭದಲ್ಲಿ ಒಬ್ಬನಿಗೆ ದೇವರು ಪ್ರತ್ಯಕ್ಷನಾದಾಗ ವರ ಕೇಳುವ ಬದಲಿಗೆ ಅವನು ದೇವರ ಮುಂದೆ ದೇವರು ಅವನಿಗೆ ಕೆಡುಕನ್ನೇ ಮಾಡಿದ ಬಗ್ಗೆ ಇಷ್ಟುದ್ದ ಪಟ್ಟಿ ನೀಡುತ್ತಾ ತನ್ನ ಆಕ್ಷೇಪಣೆ ಸಲ್ಲಿಸಿದ.  "ಬೆಳಗ್ಗೆ ಬೇಗ ಎಚ್ಚರವಾಗಲಿಲ್ಲ. ಕಾರುಸ್ಟಾರ್ಟ್ ಆಗಲು ಬಹಳ ತಡವಾಯಿತು. ಮಧ್ಯಾಹ್ನದ ಊಟದ ಡಬ್ಬಿ ಬದಲಾಗಿ, ತೊಂದರೆಯಾಯಿತು. ಸಂಜೆ ಮೊಬೈಲ್ ಕಾಲ್ ರಿಸೀವ್ ಮಾಡುತ್ತಿದ್ದಂತೆ ಹ್ಯಾಂಗ್ ಆಗಿ, ಡೆಡ್ ಆಯಿತು. ಮನೆಗೆ ಬಂದು ಕಾಲು ನೋವು ಪರಿಹರಿಸಿಕೊಳ್ಳಲು ಫುಟ್ ಮಸಾಜರ್ ನಲ್ಲಿ ಕಾಲಿಡುತ್ತಿದ್ದಂತೆ ಅದು ಕೆಟ್ಟು ನಿಂತಿತು. ಇಂದಿನ ಎಲ್ಲ ಕೆಲಸಗಳಲ್ಲೂ ವಿಘ್ನ ಹಾಗೂ ಆತಂಕಗಳು ಕಾಡಿದವು ಏಕೆ ? ಇದೇ ಏನು ನಿನ್ನ ಪೂಜೆ ಮಾಡಿದ್ದಕ್ಕೆ ಜಪ ತಪ ಮಾಡಿದ್ದಕ್ಕಾಗಿ ನೀನು ನನಗೆ ಕೊಡುವ ಬಹುಮಾನ?" ಎಂದು ಒಂದೇ ಸಮನೆ ಬಡಬಡಾಯಿಸಿದ. ಶಾಂತ ಚಿತ್ತದಿಂದ ಆಲಿಸಿದ ದೇವರು ನಗುತ್ತಾ ಉತ್ತರ ನೀಡಿದ.

ಭಕ್ತ " ಬೆಳಗ್ಗೆ ನಿನ್ನ ಜೀವಹರಣ ಮಾಡಲು ಮೃತ್ಯದೂತನೊಬ್ಬ ನಿನ್ನ ಹಾಸಿಗೆ ಬದಿಯಲ್ಲಿಕಾಯುತ್ತಿದ್ದ. ಅವನೊಂದಿಗೆ ಹೋರಾಡಿ ನಿಮ್ಮಜೀವ ಕಾಪಾಡಲು ದೇವದೂತನೊಬ್ಬನನ್ನು ಕಳುಹಿಸಿದ್ದೆ. ಇದು ನಿನಗೆ ಗೊತ್ತಾಗದಂತೆ ಹೆಚ್ಚು ಹೊತ್ತು ನಿದ್ದೆ ಮಾಡುವಂತೆ ಮಾಡಿದೆ.

ನೀನು ಸಂಚರಿಸುವ ದಾರಿಯಲ್ಲಿ ಕುಡಿದಮತ್ತಿನಲ್ಲಿ ಚಾಲಕನೊಬ್ಬ ಡ್ರೈವಿಂಗ್ ಮಾಡಿಕೊಂಡು ಬರುತ್ತಿದ್ದ, ಅವನಿಂದ ನಿನಗೆ ಅಪಘಾತವಾಗದಿರಲಿ ಎಂದು ನಿನ್ನ ಕಾರು ತಡವಾಗಿ ಸ್ಟಾರ್ಟ್ ಆಗುವಂತೆ ಮಾಡಿದೆ.

ನಿನಗೆ ಅಡುಗೆ ಮಾಡಿಕೊಡುತ್ತಿದ್ದ, ಬಾಣಸಿಗ ರೋಗಪೀಡಿತನಾಗಿದ್ದ. ಆತನ ರೋಗ ನಿನಗೆ ಹರಡದಂತೆ ಮಾಡಲು ನಿನ್ನ ಊಟದ ಡಬ್ಬ ಬದಲಿಸಿದೆ.

ಸಂಜೆ ನಿನ್ನ ಸ್ನೇಹಿತ ನಿನಗೆ ಕರೆ ಮಾಡಿ, ಸುಳ್ಳು ಸಾಕ್ಷಿ ಹೇಳಲು ಒಪ್ಪಿಸಲು ಬಯಸಿದ್ದ, ಅದಕ್ಕಾಗಿ ನಿನ್ನ ಮೊಬೈಲ್ ಹ್ಯಾಂಗ್ ಆಗುವಂತೆ ಮಾಡಿದೆ.

ನಿನ್ನ ಮನೆಯಲ್ಲಿದ್ದ ಫುಟ್ ಮಸಾಜರ್ನಲ್ಲಿ ನೀರು ಸೇರಿಕೊಂಡು ಶಾರ್ಟ್ ಆಗಿತ್ತು. ಅದು ಕಾರ್ಯ ನಿರ್ವಹಿಸಿದ್ದರೆ, ನಿನಗೆ ವಿದ್ಯುತ್ ಶಾಕ್ ತಗಲುವ ಸಾಧ್ಯತೆ ಇತ್ತು. ಅದಕ್ಕಾಗಿ ನಾನು, ಫುಟ್ ಮಸಾಜರ್ ಕಾರ್ಯನಿರ್ವಹಿಸದಂತೆ ನಿಷ್ಕ್ರಿಯೆಗೊಳಿಸಿದೆ ". ದೇವರ ಮಾತು ಕೇಳಿದ ಭಕ್ತನ ಕಣ್ಣಲ್ಲಿ ಪಶ್ಚಾತ್ತಾಪದ ನೀರಿತ್ತು.

ಅದಕ್ಕೆ ಹೇಳುವುದು ಆಗುವುದೆಲ್ಲ  ಒಳ್ಳೆಯದಕ್ಕೆ ಎಂದು.ಕೆಲವು ಬಾರಿ ನಾವಂದುಕೊಂಡಂತೆ ಆಗದಿದ್ದರೆ ಚಡಪಡಿಸುತ್ತೇವೆ. ಗುರಿ ಮುಟ್ಟಲಾಗದಿದ್ದರೆ ಖನ್ನತೆಗೆ ಜಾರುತ್ತೇವೆ. ಯಾವುದೇ ಒಂದು ನಮ್ಮ ಕೈ ತಪ್ಪಿದರೆ ನಮ್ಮ ಪ್ರಯತ್ನ ನಿರಂತರವಾಗಿದ್ದರೆ ಅದಕ್ಕಿಂತ ದೊಡ್ಡ ಕೊಡುಗೆ ನಮ್ಮದಾಗುವುದರಲ್ಲಿ ಸಂದೇಹವಿಲ್ಲ.

ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
9900925529

No comments: