21 November 2023

ಪ್ರಾಮಾಣಿಕತೆ ಗೆ ಯಶಸ್ಸು ಖಚಿತ.

 



ಪ್ರಾಮಾಣಿಕತೆ ಗೆ ಯಶಸ್ಸು ಖಚಿತ.

ಚಕ್ರವರ್ತಿಯೊಬ್ಬರಿಗೆ ಸ್ವಂತ ಮಕ್ಕಳಿರಲಿಲ್ಲ.ಮುಂದಿನ ಚಕ್ರವರ್ತಿಯಾಗಿ ಯಾರನ್ನು ಮಾಡಬೇಕೆಂಬುದೇ ಅವರ ಚಿಂತೆ!ಅವರೊಮ್ಮೆ ಸಾಮ್ರಾಜ್ಯದ ಗಣ್ಯರನ್ನೆಲ್ಲ ತಂತಮ್ಮ ಮಕ್ಕಳನ್ನು ಕರೆದುಕೊಂಡು ಅರಮನೆಗೆ ಬರಬೇಕೆಂದು ಆಹ್ವಾನಿಸಿದರು. ಅಂದು ಗಣ್ಯಾತಿಗಣ್ಯರೆಲ್ಲ ಅರಮನೆಗೆ ತಂತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಚಕ್ರವರ್ತಿಯವರ ಅಂಗರಕ್ಷಕನೂ ತನ್ನ ಮಗನನ್ನು ಕರೆದುಕೊಂಡು ಬಂದಿದ್ದ.ಚಕ್ರವರ್ತಿಯವರು ನಾನೀಗ ಮುದುಕ ಆಗುತ್ತಿದ್ದೇನೆ.ನನಗೆ ಮಕ್ಕಳಿಲ್ಲ.ನಿಮ್ಮೆಲ್ಲರ ಮಕ್ಕಳಲ್ಲಿ ಒಬ್ಬರನ್ನು ಮುಂದಿನ ಚಕ್ರವರ್ತಿಯಾಗಿ ನೇಮಿಸಬೇಕೆಂದಿದ್ದೇನೆ. ಅದಕ್ಕಾಗಿ ಪರೀಕ್ಷೆಯೊಂದನ್ನು ಏರ್ಪಡಿಸು  ತ್ತಿದ್ದೇನೆ.ಎಲ್ಲ ಮಕ್ಕಳಿಗೆ ಒಂದೊಂದು ಹೂವಿನ ಬೀಜವನ್ನು ಕೊಡುತ್ತೇನೆ. ಮಕ್ಕಳು ತಂತಮ್ಮ ಮನೆಯಲ್ಲಿ ಬಿತ್ತಲಿ. ಅದರಿಂದ ಹುಟ್ಟುವ ಗಿಡವನ್ನು ಮುಂದಿನ ವರ್ಷದ ಮೊದಲನೆಯ ದಿನದಂದು ಅರಮನೆಗೆ ತರಲಿ.ಯಾರ ಗಿಡ ಅತ್ಯುತ್ತಮವಾಗಿರುತ್ತದೋ ಅಂತಹ ಮಗು ಮುಂದಿನ ಚಕ್ರವರ್ತಿಯಾಗುತ್ತಾನೆ ಎಂದು ಘೋಷಿಸಿದರು. ಅಲ್ಲಿದ್ದವರೆಲ್ಲರಿಗೂ ತಮ್ಮ ಮಗನೇ ಮುಂದಿನ ಚಕ್ರವರ್ತಿ ಯಾಕಾಗಬಾರದು ಎನ್ನುವಾಸೆ!ಎಲ್ಲರೂ ನಾಮುಂದು-ತಾಮುಂದು ಎಂದು ಬೀಜಗಳನ್ನು ಪಡೆದು ಕೊಂಡು ಹೋದರು.

ಅಂದಿನಿಂದ ಎಲ್ಲರ ಬಾಯಲ್ಲೂ ಇದೇ  ಮಾತು.ನಮ್ಮ ಮನೆಯಲ್ಲಿ ಬೀಜ ಸಸಿಯಾಗಿದೆ, ಗಿಡವಾಗಿದೆ,ಗಿಡದಲ್ಲೊಂದು ಕಾಯಾಗಿದೆ,ಹೂ ಬಿಟ್ಟಿದೆ ಎಂದೆಲ್ಲ ಹೇಳಿ ಕೊಳ್ಳುತ್ತಿದ್ದರು. ಆದರೆ ಚಕ್ರವರ್ತಿಗಳ ಅಂಗರಕ್ಷಕನ ಮನೆಯಲ್ಲಿ ನಿರಾಸೆ ತುಂಬಿತ್ತು.ಆತನ ಮಗ ಬಿತ್ತಿದ ಬೀಜ ಸಸಿಯಾಗಲೇ  ಇಲ್ಲ!ಇಂದು ಸಸಿಯೊಡೆದೀತು, ನಾಳೆ ಸಸಿಯೊಡೆದೀತು ಎಂಬ ನಿರೀಕ್ಷೆಯಲ್ಲಿದ್ದರೂ,ವರ್ಷ ಕಳೆಯುತ್ತಾ ಬಂದರೂ  ಕುಂಡ ಖಾಲಿಯಾಗೇ  ಇತ್ತು!

ಆ ದಿನ ಬಂದೇ ಬಿಟ್ಟಿತು! ವರ್ಷದಾರಂಭದ ದಿನ ಅರಮನೆಯಲ್ಲಿ ತಾಯ್ತಂದೆಯರ-ಮಕ್ಕಳ  ದೊಡ್ಡ ಗುಂಪೇ ಸೇರಿತ್ತು. ಎಲ್ಲರ ಕೈಯಲ್ಲೂ ಸುಂದರವಾದ ಹೂ-ಹಣ್ಣುಗಳ ಗಿಡಗಳು!ಸಂಭ್ರಮವೋ ಸಂಭ್ರಮ! ಚಕ್ರವರ್ತಿಗಳು ಬಂದರು. ಎಲ್ಲರ ಗಿಡಗಳನ್ನು ನೋಡುತ್ತಾ ಶಹಬಾಷ್! ವಾರೆವ್ಹಾ!ಎಂದೆಲ್ಲ ಹೇಳುತ್ತಾ ಮುಂದೆ ಮುಂದೆ ಸಾಗಿದರು. ಒಂದನ್ನೂ   ಆಯ್ಕೆಮಾಡಲಿಲ್ಲ . ಕೊನೆಯ ಮೂಲೆಯಲ್ಲಿ ಜೋಲುಮುಖದೊಂದಿಗೆ ಅಂಗರಕ್ಷಕನ ಮಗ ನಿಂತಿದ್ದ. ಆತನ ಕೈಯಲ್ಲಿ ಖಾಲಿ ಕುಂಡ!ಚಕ್ರವರ್ತಿಗಳು ಏನಾಯಿತು ಎಂದು ಕೇಳಿದರು.ಆತ ಮಹಾಪ್ರಭು!ತಾವು ಕೊಟ್ಟಿದ್ದ ಬೀಜವನ್ನು ಬಿತ್ತಿದೆ,ಬಹಳ ಜತನ ಮಾಡಿದೆ.ಆದರೆ ಅದು ಸಸಿಯೊಡೆಯಲೇ ಇಲ್ಲ.ಖಾಲಿ ಕುಂಡವನ್ನೇ ತಂದಿದ್ದೇನೆ ಎನ್ನುತ್ತಾ ಬಿಕ್ಕಳಿಸಿ ಅಳತೊಡಗಿದ.ಚಕ್ರವರ್ತಿಗಳು ಆತನಿಗೆ ಸಮಾಧಾನ ಹೇಳಿದರು.ಆತನೇ ಮುಂದಿನ ಚಕ್ರವರ್ತಿಯೆಂದು ಘೋಷಿಸಿಬಿಟ್ಟರು.

ಅಲ್ಲಿದ್ದವರೆಲ್ಲ ಇದೆಂತಹ ಅನ್ಯಾಯ ?ಸುಂದರವಾದ ಗಿಡಗಳನ್ನು ಬೆಳೆದಿರುವ ಮಕ್ಕಳನ್ನು ಬಿಟ್ಟು ಖಾಲಿ ಕುಂಡದ ಹುಡುಗನನ್ನು ಚಕ್ರವರ್ತಿಯಾಗಿ ಘೋಷಿಸುವುದೇ?ಎಂದು ಗದ್ದಲವೆಬ್ಬಿಸಿದಾಗ,ಚಕ್ರವರ್ತಿಯವರು ಏರುದನಿಯಲ್ಲಿ ನಾನು ಅಂದು ಎಲ್ಲರಿಗೂ  ಕೊಟ್ಟಿದ್ದು ಬೇಯಿಸಿದ ಬೀಜಗಳನ್ನು!ಅವು ಸಸಿಯೊಡೆಯಲು ಸಾಧ್ಯವೇ ಇಲ್ಲ.ನೀವೆಲ್ಲಾ ಬೀಜವನ್ನು ಬಿತ್ತಿರುವಿರಿ,ಅದು ಸಸಿಯೊಡೆಯದಿದ್ದಾಗ ಮತ್ಯಾವುದೋ ಸಸಿಯನ್ನು ಬೆಳೆಸಿ ಇಲ್ಲಿಗೆ ತಂದಿದ್ದೀರಿ. ಆದರೆ ಈ ಬಾಲಕ ಪ್ರಾಮಾಣಿಕವಾಗಿ ಇಲ್ಲಿಗೆ ಬಂದಿದ್ದಾನೆ.ನನಗೆ ನಂಬಿಕಸ್ಥ ವ್ಯಕ್ತಿ ಬೇಕಾಗಿದ್ದುದರಿಂದ ನಾನು ಈತನನ್ನೇ ಆಯ್ಕೆ ಮಾಡುತ್ತಿದ್ದೇನೆ.ನೀವೆಲ್ಲ ಆತ್ಮಸಾಕ್ಷಿಯಾಗಿ ನಿಜವನ್ನೇ ಹೇಳಿ.ನೀವು ತಂದಿರುವ ಗಿಡಗಳು ನಾನು ಕೊಟ್ಟ ಬೀಜದ್ದೇ ?ಎಂದಾಗ ಎಲ್ಲರು ತಲೆತಗ್ಗಿಸಿದರು.

ಇಂದಿನ ಜಗದಲ್ಲೂ ಪ್ರಾಮಾಣಿಕತೆ ಕಡಿಮೆಯಾಗಿ ಅಪ್ರಮಾಣಿಕರು ವಿಜೃಂಭಿಸುವುದನ್ನು ಕಾಣಬಹುದು. ಆದರೆ ಅದು ಕ್ಷಣಿಕ.
ಪ್ರಾಮಾಣಿಕತೆಗೆ ಎಂದಿದ್ದರೂ  ಜಯವಿದ್ದೇ ಇರುತ್ತದೆ.ಸತ್ಯವಾಗಿ ನಡೆಯೋಣ ನಿಧಾನವಾದರೂ ಜಯ ನಮ್ಮದೆ.

ಸಿಹಿಜೀವಿ ವೆಂಕಟೇಶ್ವರ.
ಶಿಕ್ಷಕರು
ತುಮಕೂರು
9900925529

No comments: