26 November 2023

ವಿಶ್ವದ ಎಂಟನೆಯ ಅದ್ಭುತ

 


ವಿಶ್ವದ ಎಂಟನೆಯ ಅದ್ಭುತ

ಪ್ರಪಂಚದ ಏಳು ಅದ್ಭುತಗಳನ್ನು ತಿಳಿದ ನಮಗೆ ಎಂಟನೆಯ ಅದ್ಭುತ ಯಾವುದು ಎಂಬ ಕುತೂಹಲವಿತ್ತು ಈ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.ಇಟಲಿಯ ಪೋಂಪು ವನ್ನು ಹಿಂದಿಕ್ಕಿ  ಕಾಂಬೋಡಿಯಾದ  ಆಂಕೋರ್ ವಾಟ್ ದೇವಾಲಯ ಸಂಕೀರ್ಣ ಈ ಕೀರ್ತಿಗೆ ಭಾಜನವಾಗಿದೆ.  

ನಮ್ಮ ಭಾರತದ ತಾಜ್ ಮಹಲ್ ಸೇರಿದಂತೆ  ಚೀನಾದ ಗ್ರೇಟ್ ವಾಲ್, ಜೋರ್ಡಾನ್ನ ಪೆಟ್ರಾ, ಇಟಲಿಯ ಕೊಲೋಸಿಯಮ್, ಬ್ರೆಜಿಲ್ನ ಕ್ರೈಸ್ಟ್ ದಿ ರಿಡೀಮರ್, ಮೆಕ್ಸಿಕೋದ ಷಿಚೆನ್ ಇಟ್ಜಾ, ಪೆರುವಿನ ಮಾಚು ಪಿಚು ಇವು ಪ್ರಪಂಚದ ಏಳು ಅದ್ಭುತಗಳು.

ಆಂಕೋರ್ ವಾಟ್ ಕಾಂಬೋಡಿಯಾ ದೇಶದಲ್ಲಿರುವ ಹಿಂದೂ ದೇವಾಲಯ ಸಮುಚ್ಛಯ. ಕಾಂಬೋಡಿಯಾ ದೇಶದ ಖ್ಮೇರ್(Khmer) ಸಾಮ್ರಾಜ್ಯದ ರಾಜಧಾನಿಯಾಗಿದ್ದ 'ಆಂಗ್ಕರ್' ಎಂಬಲ್ಲಿದೆ. ಇದನ್ನು ಸಾಮ್ರಾಟ ಎರಡನೆಯ ಸೂರ್ಯವರ್ಮ 12ನೆಯ ಶತಮಾನದಲ್ಲಿ ಕಟ್ಟಿಸಿದನು.ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಸಮುಚ್ಛಯವಾಗಿದೆ.ಇದು ಆಯತಾಕಾರದಲ್ಲಿ 2800 ಆಡಿ ಅಗಲ ಮತ್ತು 3800 ಅಡಿ ಉದ್ದವಾಗಿದೆ. ಮರಳುಕಲ್ಲು ಹಾಗೂ ಇತರೆಕಲ್ಲು ಉಪಯೋಗಿಸಿ ಕಟ್ಟಲಾಗಿದೆ. ಮೇರುಪರ್ವತ ವನ್ನು ಹೋಲುವಂತೆ ಖ್ಮೇರ್ ಹಾಗೂ ದಕ್ಷಿಣ ಭಾರತೀಯ ವಾಸ್ತುಶಿಲ್ಪದಂತೆ ಇದನ್ನು ಕಟ್ಟಲಾಗಿದೆ. ಇದರ ನಿರ್ಮಾಣಕ್ಕೆ 3೦ ವರ್ಷಗಳಿಗಿಂತಲೂ ಹೆಚ್ಚಿನ ಸಮಯ ಬೇಕಾಯಿತು.

2 ನೆಯ ಸೂರ್ಯವರ್ಮ  ತನ್ನ ರಾಜಧಾನಿಯಾಗಿದ್ದ ಯಶೋಧರಪುರದ ಪಕ್ಕದಲ್ಲೇ ಈ ಅಗಾಧ, ಅನುಪಮ ದೇವಾಲಯವನ್ನು ನಿರ್ಮಿಸಿದ. 

ಗೊಂಡಾರಣ್ಯದ ಮಧ್ಯದಲ್ಲಿ ಮರಗಳನ್ನು ಕಡಿದು ಕಟ್ಟಡಕ್ಕೆ ಅಣಿಮಾಡಿಕೊಂಡ ವಿಶಾಲ ಪ್ರದೇಶ; ಅದನ್ನು ಸುತ್ತುಗಟ್ಟಿರುವ ನೀರು ತುಂಬಿದ ರಚನೆಗಳನ್ನು  ದಾಟಿ ದ್ವಾರಮಂಟಪಕ್ಕೆ ಹೋಗುವಂತೆ ಎತ್ತರಿಸಿ ಕಲ್ಲಿನಿಂದ ಕಟ್ಟಿರುವ ಒಡ್ಡುದಾರಿ, ನೀರಿನಿಂದಲೇ ಎದ್ದು ನಿಂತಿರುವಂತೆ ನಿರ್ಮಿತವಾಗಿ ಆ ಪ್ರದೇಶವನ್ನು ಸುತ್ತುವರಿದಿರುವ ಮೊಗಸಾಲೆ, ಪಕ್ಕದಲ್ಲಿ ಸುತ್ತುವರಿದಿರುವ ಹೊರಾಂಗಣ, ಅದರ ಸುತ್ತ ಒಂದು ತಗ್ಗುಗೋಡೆ ಮತ್ತು ಒಳಾಂಗಣ, ಮಧ್ಯದಲ್ಲಿ ಇಡೀ ಪ್ರದೇಶವನ್ನಾಕ್ರಮಿಸಿರುವ, ಪರಸ್ಪರಾನುರೂಪತೆಯನ್ನು ಹೊಂದಿ ವಾಸ್ತುಶಿಲ್ಪಕಲಾವೈಭವವನ್ನು ಮೆರೆಸುತ್ತಲಿರುವ, ಕಟ್ಟಡಗಳ ನಡುವೆ ನಿಂತಿರುವ ದೇವಸ್ಥಾನ. ಚಚ್ಚೌಕವಾದ ಈ ಪ್ರದೇಶದ ಸುತ್ತುಗೋಡೆಗಳು ಒಂದೊಂದೂ ಒಂದು ಮೈಲಿನಷ್ಟು ಉದ್ದವಿದೆ. ಒಳಗೆ ಸುತ್ತಲೂ ಬಂದಿರುವ ಹೊರಾಂಗಣ ಮತ್ತು ಒಳಾಂಗಣಗಳು, ಸಾವಿರಾರು ಜನರು ಸಭೆ ಸೇರಲು ಅನುಕೂಲವಾಗುವಷ್ಟು ವಿಶಾಲವಾದ ಪ್ರದೇಶಗಳು. ಒಳಾವರಣದ ಕಟ್ಟಡ ಪ್ರದೇಶದ ಸುತ್ತಳತೆಯೇ ಅರ್ಧ ಮೈಲಿಗಿಂತ ಹೆಚ್ಚಾಗಿದೆ. ಗೋಪುರಾಕೃತಿಯಲ್ಲಿ ನಿರ್ಮಿತವಾಗಿರುವ ಈ ಕಟ್ಟಡ ಸಮುದಾಯದಲ್ಲಿ ಮೂರು ಹಂತಗಳು, ಕೊನೆಯ ಹಂತದ ಮೇಲೆ ಐದು ಗೋಪುರಗಳನ್ನೊಳಗೊಂಡ ಮುಖ್ಯ ಪೂಜಾಗಾರ. ಈ ಗೋಪುರಗಳಲ್ಲಿ ನಡುವಿನದು ಸುತ್ತಣ ಅರಣ್ಯಪ್ರದೇಶಕ್ಕಿಂತ ಇನ್ನೂರಹದಿನೈದು ಅಡಿ ಎತ್ತರ.ಇಂಥ ಬೃಹದಾಕೃತಿಯ ಕಟ್ಟಡದಲ್ಲೂ ಅಲಂಕಾರ ಚೆಲುವಿದೆ. ಸೂಕ್ಷ್ಮತೆ ಇದೆ. ಅರೆಯುಬ್ಬು ಚಿತ್ರಗಳಲ್ಲಿ ಕಂಡುಬರುವ ಕಲಾಪ್ರೌಢಿಮೆ ಪ್ರೇಕ್ಷಕರನ್ನು ವಿಸ್ಮಯಗೊಳಿಸುತ್ತದೆ. ಆದರೆ ಅಲಂಕಾರ ಅತಿಯಾಗಿ ಎಲ್ಲೂ ಕಟ್ಟಡದ ಭವ್ಯತೆ ಘನತೆಗಳಿಗೆ ಕುಂದು ತಂದಿಲ್ಲ. ರಾಮಾಯಣ ಮಹಾಭಾರತಗಳಿಂದ ಆಯ್ದ ಚಿತ್ರಗಳು ವಿಶೇಷವಾಗಿವೆ.ಕೆಲವೆಡೆ ಎಂಟು ಅಡಿಗಳ ಎತ್ತರ ಇರುವ ಈ ಚಿತ್ರಗಳು ಅರ್ಧ ಮೈಲಿಯಷ್ಟು ದೂರ ಹಬ್ಬಿವೆ. ಭಾರತದ ಸಂಸ್ಕೃತಿ ಆ ಜನರ ಮೇಲೆ ಎಂಥ ಪರಿಣಾಮವನ್ನುಂಟುಮಾಡಿತ್ತು ಎನ್ನುವುದಕ್ಕೆ ಈ ಚಿತ್ರಗಳೇ ನಿದರ್ಶನ. ಅಲ್ಲಲ್ಲೇ ಕಾಣಬಹುದಾದ ದೇವತೆಗಳ ಮತ್ತು ಅಪ್ಸರೆಯರ ಚಿತ್ರಣವಂತೂ ರಮ್ಯವಾಗಿದೆ. ಮುಖದಲ್ಲಿ ಪ್ರಶಾಂತತೆ, ಪ್ರಸನ್ನತೆ, ತುಟಿಯಲ್ಲಿ ಹುಸಿನಗೆ, ಮೋಹಕವಾದ ಕುಡಿನೋಟ, ಆಭರಣ ತೊಡಿಗೆಯಲ್ಲಿ ಹಿತ ಮಿತ.ಆಂಗ್ಕೋರ್‍ವಾಟ್‍ನ ವಾಸ್ತುಶಿಲ್ಪದ ಉತ್ಕಷ್ಟತೆಯನ್ನು ನೋಡಿದವರಿಗೆ, ಅದನ್ನು ನಿರ್ಮಿಸಿದ ವಾಸ್ತುಶಿಲ್ಪಿಗಳು ಅನೇಕ ಶತಮಾನಗಳ ಕಾಲ ವಂಶಪಾರಂಪರ್ಯವಾಗಿ ಆ ಕಲೆಯನ್ನು ರೂಢಿಸಿಕೊಂಡು ಬಂದು ಕೊನೆಗೆ ಪರಾಕಾಷ್ಠತೆ ಪಡೆದಿದ್ದ ಕಲಾವಿದರು ಎಂಬುದು  ವ್ಯಕ್ತವಾಗುತ್ತದೆ. ಈ ಬೆಳೆವಣಿಗೆ ಒಂದು ಸಾವಿರ ವರ್ಷಗಳ ಹಿಂದೆಯೇ ಆರಂಭವಾಗಿರಬೇಕು. ಅನಂತರ ಕೊಂಚ ಕೊಂಚವಾಗಿ ವಿಕಾಸಗೊಳ್ಳುತ್ತ ಎರಡನೆಯ ಜಯವರ್ಮನು ಕಾಂಭೋಜ ರಾಜ್ಯಸ್ಥಾಪನೆ ಮಾಡಿದ ಕಾಲಕ್ಕೆ ಒಂದು ನಿರ್ದಿಷ್ಟನೆಲೆಗೆ ಬಂದು ಗೋಪುರಾಕೃತಿಯ ದೊಡ್ಡ ಕಟ್ಟಡಗಳ ನಿರ್ಮಾಣ ಪ್ರಾರಂಭವಾಯಿತು. ಅದು ತುತ್ತತುದಿಯನ್ನೇರಿದ್ದು ಆಂಗ್ಕೋರ್‍ವಾಟ್‍ನಲ್ಲಿ. ಇಂದಿಗೂ ಆಂಗ್ಕೋರ್‍ಥಾಮ್ ನಗರದ ಹಾಗೂ ಆಂಗ್ಕೋರ್‍ವಾಟ್‍ನ ಅವಶೇಷಗಳು ಪ್ರಾಕ್ತನ ಶಾಸ್ತ್ರಜ್ಞರನ್ನೂ ಪ್ರೇಕ್ಷಕರನ್ನೂ ಆಕರ್ಷಿಸುತ್ತಿವೆ.   
ಅಂಕೋರ್ ವಾಟ್ನಲ್ಲಿನ ಅತ್ಯಂತ ಅಪ್ರತಿಮ ಅನುಭವವೆಂದರೆ ಅದರ ಭವ್ಯವಾದ ಗೋಪುರಗಳ ಮೇಲೆ ಸೂರ್ಯೋದಯವನ್ನು ವೀಕ್ಷಿಸುವುದು.  ಮುಂಜಾನೆ, ದೇವಾಲಯವು ಗುಲಾಬಿ, ಕಿತ್ತಳೆ ಮತ್ತು ಚಿನ್ನದ ಛಾಯೆಗಳಲ್ಲಿ ನೆನೆಸಿ, ಮನಮೋಹಕ  ದೃಶ್ಯವನ್ನು ಸೃಷ್ಟಿಸುತ್ತದೆ.
ಈ ತಾಣವನ್ನು ವಿಶ್ವ ಸಂಸ್ಥೆಯ ಯುನೆಸ್ಕೊ ವಿಶ್ವ ಪಾರಂಪರಿಕ ತಸಣವೆಂದು ಘೋಷಿಸಿದೆ.
ವಾಸ್ತುಶಿಲ್ಪದ ವೈಭವವನ್ನು ಮೀರಿ, ಅಂಕೋರ್ ವಾಟ್ ಅಪಾರವಾದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಈ  ದೇವಾಲಯ ಸಂಕೀರ್ಣವು  ಸಕ್ರಿಯ ಧಾರ್ಮಿಕ ತಾಣವಾಗಿ ಉಳಿದಿದೆ ಬೌದ್ಧ ಸನ್ಯಾಸಿಗಳು ಮತ್ತು ಭಕ್ತರು ತಮ್ಮ ಗೌರವವನ್ನು ಸಲ್ಲಿಸಲು ಮತ್ತು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ತೊಡಗಿಸಿಕೊಳ್ಳಲು ಇಲ್ಲಿಗೆ  ಬರುತ್ತಾರೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು


No comments: