31 October 2017

ಹಿತ (ಹನಿಗವನಗಳು)

 *೧*
*ಸಕ್ಕರೆ*

ವೈದ್ಯರು ಹೇಳುವರು ಹಿತಮಿತವಾಗಿ
ಸೇವಿಸಿ ಉಪ್ಪು ಸಕ್ಜರೆ
ಹೇಗೆ ಕಡಿಮೆ ಮಾಡಲಿ ಹೇಳಿ
ನನ್ನವಳ ಅಧರದ ಸಕ್ಕರೆ?

*೨*
*ಸ್ವಾಗತ*

ರಾಜಕಾರಣಿಗಳು ಚುನಾವಣಾ ಸಮಯದಲ್ಲಿ
ಹೇಳುವರು ನಮ್ಮ ಗುರಿ ಜನಹಿತ
ಗೆದ್ದಾಗ ಮರೆಯದೇ ಕೋರುವರು
ಕುಟುಂಬ ಕಲ್ಯಾಣಕ್ಕೆ ಸ್ವಾಗತ

*೩*
*ಕೊತ ಕೊತ*

ಸಂಸಾರದಲ್ಲಿ ಮಾತಿನಲ್ಲಿರಲಿ
ಹಿತ ಮಿತ
ಮಿತಿಮೀರಿದರೆ  ಮನಸುಗಳ ಜ್ವಾಲಾಮುಖಿ
ಕೊತ ಕೊತ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 October 2017

ನೀನಿರದೆ(ಕವನ)

*ಮನವಿ*


ಕಾಲ್ತೆಗೆದು ಹೋಗದಿರು ನಲ್ಲೆ
ಕೈಬಿಡೆನು ವರಿಸುವೆ ನಿನ್ನ ಇಲ್ಲೆ
ತೆರೆದು ತೋರಲಾರೆ ನನ್ನ ಹೃದಯ
ಹೇಳಿ ಹೋಗದಿರು ನನಗೆ ವಿದಾಯ//

ತಿರಸ್ಕರಿಸದಿರು ನನ್ನ ಪ್ರೀತಿಯ
ಪುರಸ್ಕರಿಸಿ ನೀಡು ಸಿಹಿಯ
ಮರೆತಿಲ್ಲ ನಾನು  ಸಿಹಿಘಳಿಗೆಯ
ಮರೆತು ಬಿಡು ವಿಷಘಳಿಗೆಯ //

ಬಡವ ನಾನೆಂದು ಚಿಂತಿಸದಿರು
ಹೃದಯ ಶ್ರೀಮಂತ ಮರೆಯದಿರು
ನೀನಿರದೆ ನನಗೆ  ಬದುಕಿಲ್ಲ
ನೀನೇಕೆ  ಇದನ  ಅರಿತಿಲ್ಲ //


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 October 2017

ಮನವಿ (ಹನಿಗವನ) ರಾಜ್ಯಮಟ್ಟದ ಆನ್ಲೈನ್ ಹನಿಗವನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಹನಿ

     
 ಹನಿಗವನ 
*ಮನವಿ*

ಕಾಲ್ತೆಗೆದು ಹೋಗದಿರು ನಲ್ಲೆ
ಕೈಬಿಡೆನು ವರಿಸುವೆ ನಿನ್ನ ಇಲ್ಲೆ
ತೆರೆದು ತೋರಲಾರೆ ನನ್ನ ಹೃದಯ
ಹೇಳಿ ಹೋಗದಿರು ನನಗೆ ವಿದಾಯ
ತಿರಸ್ಕರಿಸದಿರು ನನ್ನ ಪ್ರೀತಿಯ
ಪುರಸ್ಕರಿಸಿ ನೀಡು ಸಿಹಿಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನೆರಳಾಗು (ಕವನ)

           *ನೆರಳಾಗು*

ನಾ ನೀಡುವೆನೀಗ ಮೊಲೆ ಹಾಲ
ನೀ ಬೆಳಗು ಮುಂದೆ ಜಗವೆಲ್ಲ /

ತಾಯಿಯ ಎದೆ ಹಾಲು ಅಮೃತ
ಭುವಿಯಲೆಲ್ಲೂ ಸಿಗದ ಪಂಚಾಮೃತ
ಈಗ ನಾ ನೀಡುವೆ ಹಾಲನ್ನ
ಉಜ್ವಲವಾಗಲಿ ನಿನ್ನ ಜೀವನ //


ನೀ ನನ್ನ ಹೊಟ್ಟೆಯಲುದಿಸಿದ ಸಸಿ
ಚಿಗುರೊಡಿಸಿ ಬೆಳೆಸುವೆ ಇರುವಂತೆ ಹಸಿ
ಈ ಹಳೆಬೇರು ಮರೆಯದಿರು ಮಂದೆ
ಹೊಸ ಚಿಗುರೊಡೆದ ಮದದಿಂದ //

ಹರಿ ಹರರು ಕುಡಿದರು ದೇವಿ ಹಾಲ
ಅಮ್ಮನ ಋಣ ಅವರು ಮರೆಯಲಿಲ್ಲ
ತಾಯಿಯ ಹಾರೈಕೆ ನಿನಗಿದೆ ಸದಾ ಕಾಲ  ಹೆಮ್ಮರವಾಗಿ ನೆರಳಾಗು ಅನುಗಾಲ//

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

28 October 2017

ಎದ್ದೇಳು (ಗಜಲ್)

       *ಗಜಲ್*

ಸೋತ ಹತಾಶೆಯಲಿ ಬೀಳದಿರು ಎದ್ದೇಳು/
ಗೆಲುವು ಕಾದಿದೆ ನಿನಗೆ ಬಳಲದಿರು ಎದ್ದೇಳು /


ಮೋಡ ಮುಸುಕಿದ ರವಿಯು ಬೆಳಗದಿರುವನು/
ಕತ್ತಲು ಮುಗಿದ ಮೇಲೆ ಬೆಳಕು ಬರುವಂತೆ ಎದ್ದೇಳು/

ಪಕ್ಷಿಗಳ ಗೂಡು ಎನಿತು ಸಾರಿ ಬಿದ್ದರು ಮತ್ತೆ ಕಟ್ಟುವವು/
ಜೇಡ ತನ್ನ ಬಲೆ ಹರಿದರೂ ಛಲ ಬಿಡದೆ       ಅನವರತ ನೇಯುವಂತೆ   ಎದ್ದೇಳು/


ನಡೆವರೆಡಹದೆ ಕುಳಿತವರೆಡಹರೆ ಎಡವಿದರು ನಿಲ್ಲದಿರು/
ಕಷ್ಟಗಳ  ಮಳೆಸುರಿಯೆ ಹೆಬ್ಬಂಡೆಯಂತೆ  ಎದ್ದೇಳು /

ಅದೃಷ್ಟವನು ನಂಬಿ ಬದುಕದಿರು ಅದೃಷ್ಟ ದೈರ್ಯವಂತರ ಪರ /
ನಿನ್ನ ಅಂಜುಬುರುಕನೆಂದವರು ಕರುಬುವಂತೆ ಎದ್ದೇಳು /

ಕಷ್ಟಗಳು ನಿರಂತರವಲ್ಲ ಸುಖವು ಬರದಿರವುದಿಲ್ಲ/
ವೆಂಕಟೇಶ್ವರನ ದಯೆ ಪಡೆದು   ಪರಮಶಕ್ತಿಯಂತೆ ಎದ್ದೇಳು /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 October 2017

ನವೆಂಬರ್ ಕನ್ನಡಿಗರು(ಕವನ)



*ನವೆಂಬರ್ ಕನ್ನಡಿಗರು*


ನಾವು ನವೆಂಬರ್‌ ಕನ್ನಡಿಗರು
ಕನ್ನಡದ ಬೆಳೆಸುವ ಕಟ್ಟಾಳುಗಳು /

ಬೇರೆ ಭಾಷೆಯ ವ್ಯಾಮೋಹಿಗಳು
ನಮ್ಮ ಭಾಷೆಯ ಮರೆತವರು
ಹೊರನಾಡಿಗರಿಗೆ ಔದಾರ್ಯ ತೋರುವೆವು
ಕನ್ನಡಮ್ಮನ ಸೌಂದರ್ಯ ಮರೆವೆವು //

ಕನ್ನಡ ಚಿತ್ರಗಳು ನಮಗೆ ನಗಣ್ಯ
ಇತರೆ  ಭಾಷೆ ಚಿತ್ರಗಳು ಅಗ್ರಗಣ್ಯ
ಕನ್ನಡದಲ್ಲಿ ಮಾತಾಡಿದರೆ ಅವಮಾನ
ಇತರೆ ಭಾಷಿಕರಿಗೆ  ರತ್ನ ಸಿಂಹಾಸನ //

ಕನ್ನಡ ಹಾಡುಗಳುಗೆ ಬೆಲೆಯಿಲ್ಲ
ಆಂಗ್ಲ ಹಿಂದಿಗಳಿಗೆ ನೆಲೆ ಇಲ್ಲಿ
ವರ್ಷ ಪೂರ್ತಿ ಕನ್ನಡ ನೆನೆಪಿರಲ್ಲ
ನವೆಂಬರ್‌ ತೋರಿಕೆ  ಮರೆಯಲ್ಲ //

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 October 2017

ಕಾಲ್ಗೆಜ್ಜೆ (ಹನಿಗವನಗಳು)

ಹನಿಗವನಗಳು
"೧*
*ಮನದನ್ನೆ*

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ಬಂದಳು ನನ್ನ ಮನದನ್ನೆ
ಲಜ್ಜೆಯ ಆಭರಣತೊಟ್ಟು
ಕದ್ದಳು  ನನ್ನ ಮನಸನ್ನೆ


*ಸದ್ದು*

ಅಮವಾಸ್ಯೆ ದಿನ ಪಾಳುಬಂಗಲೆ
ಬಳಿ ಕೇಳಿತು ಗೆಜ್ಜೆ ಸದ್ದು
ಎದ್ದೆನೋ ಬಿದ್ದೆನೋ ಎಂದು
ಓಡಿದೆನು ಎದ್ದು ಬಿದ್ದು

*ನಾಗವಲ್ಲಿ*

ಆಪ್ತ ಮಿತ್ರ ಚಿತ್ರದಲ್ಲಿನ ಗೆಜ್ಜೆ ಸದ್ದಿಗೆ
ಹೆದರಿರಲಿಲ್ಲ ಚಿತ್ರಮಂದಿರದಲ್ಲಿ
ಏಕೆಂದರೆ ನಮ್ಮನೆಯಲ್ಲಿ
ದಿನವೂ ನೋಡಿದ್ದೆನಲ್ಲ ನಾಗವಲ್ಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

25 October 2017

ಓ ಬಾಲ್ಯವೇ ಮತ್ತೆ ಬರಬಾರದೆ (ಲೇಖನ)

ಲೇಖನ*
*ಓ ಬಾಲ್ಯವೇ ಮತ್ತೆ ಬರಬಾರದೆ ?*

ಈ ಸಂಜೆ ಯಾಕಾಗಿದೆ ನೀನಿಲ್ಲದೆ ....ಎಂಬ ಹಾಡು ಕೇಳಿದ ಕೂಡಲೆ ಮನವು ನನ್ನ ಬಾಲ್ಯ ಕ್ಕೆ ಜಾರಿತು
ನಮ್ಮ ಹಳ್ಳಿಯಲ್ಲಿ ಸಂಜೆಯನ್ನು ಸಂಭ್ರಮಿಸುತ್ತಿದ್ದೆವು .ದನ ಕರುಗಳ ಆಗಮನ .ಕುರಿಮರಿಗಳ ಬ್ಯಾ..ಸದ್ದು, ಹಸು ಎಮ್ಮೆಗಳ ಹಾಲು ಕರೆವುದು.ಮನೆಯಂಗಳ ಗುಡಿಸಿ ಸ್ವಚ್ಛ ಮಾಡುವುದು, ನೀರು ತರುವುದು ಈಗೆ ಸಂಜೆಯ ನಮ್ಮ ಸಂಭ್ರಮ ವರ್ಣಿಸಲಸದಳ .
ಸೂರ್ಯ ನೆತ್ತಿಯಿಂದ ಕೊಂಚ ಓರೆಯಾದರೆ ನಮ್ಮ ಕೆಲಸಗಳ ಕಾರ್ಯ ಆರಂಭ ಬೀದಿಯಲ್ಲಿ ಬಿದ್ದ ದನಕರುಗಳ ಸಗಣಿ ತಂದು ನಮ್ಮ ತಿಪ್ಪೆಗಳಿಗೆ ಹಾಕಲು ಗೆಳೆಯರ ಜೊತೆ ಸ್ವಲ್ಪ ದೂರ ಸಾಗಿ ಬರುವಾಗ ತೀಟೇ ಸೊಪ್ಪು ಪರಸ್ಪರ ತೀಡಿ ಪ್ರತಿಯೊಬ್ಬರೂ ಸರ್ವಾಂಗ ಕೆರೆದುಕೊಂಡು ಬರುವ ಪಾಡು ನೋಡಿ ಊರವರು ಬಿದ್ದು ಬಿದ್ದು ನಗುತ್ತಿದ್ದರು  .
ಮನೆಗೆ ತಲುಪಿ  ಬಂದ್ರೆ ಗಿಡದಿಂದ.ಮತ್ತು ಅಡಿಕೆ ಎಲೆಗಳಿಂದ ಮಾಡಿದ ಪರಕೆಗಳಿಂದ ನಮ್ಮ ಮನೆಯಂಗಳ ಸ್ವಚ್ಛ ಮಾಡಿ  ನೀರು ತರಲು ಒಂದು ಕಿಲೋಮೀಟರ್ ದೂರದ ಗೌಡರ ತೋಟದ ಬಾವಿಗೆ ಹೋಗಿ ಬಾವಿಗಿಳಿದು ಪೈಪೋಟಿ ಮೇಲೆ  ಅಡ್ಡೆಗಳನ್ನು ಬಳಸಿ ನೀರು ತಂದು ನಮ್ಮ ಗುಡಾಣಗಳನ್ನು ತುಂಬಿಸಿ ಅವ್ಯಕ್ತ ಆನಂದ ಅನುಭವಿಸುತ್ತಿದ್ದೆವು .ಈ ವೇಳೆಗಾಗಲೇ ಗುಡ್ಡಕ್ಕೆ ಮೇಯಲು ಹೋದ ದನಕರು. ಕುರಿ ಮೇಕೆ .ಸಾಲುಗಟ್ಟಿ ಊರಕಡೆ ಗೋಧೂಳಿ ಸಮಯದಲ್ಲಿ ದೂಳೆಬ್ಬಿಸಿ ಬರುವ ದೃಶ್ಯ ನಯನಮನೋಹರ .ಕುರಿಕಾಯುವವರು ಅವರ ಕೈಯಲ್ಲಿ ತಲೆ ಕೆಳೆಗಾಗಿಹಿಡಿದ ಆಗ ತಾನೆ ಜನಿಸಿದ ಕುರಿಮರಿ ನೋಡಿ ಖುಷಿ ಪಡುತ್ತಿದ್ದೆವು.
ಈ ವೇಳೆಗಾಗಾಲೇ ಅಮ್ಮ ಹೊಲದಿಂದ ಬಂದು  ದೀಪ ಬೆಳಗಿಸಿ   ಅಡುಗೆ ತಯಾರಿಸಿ ನಮಗೆ ಸಂಜೆ ಆರುವರೆ ಏಳು ಗಂಟೆಗೆ ಊಟ ಬಡಿಸಿದರೆ ನಮಗೆ ಹಾಸಿಗೆ ಹಾಸಿ ಮಲಗುವ ಸಿದ್ದತೆ ಆಗ ಕರೆಂಟ್ ಇಲ್ಲ ಸೀರಿಯಲ್ ಇಲ್ಲ ಬೇಗ ಮಲಗಿ ಬೇಗ ಏಳುವ ತತ್ವ ಪಾಲನೆ .
ಈಗಿನ ಯಾಂತ್ರಿಕ ವಾಕ್, ಜಾಗ್ ಆರೋಗ್ಯ ಕಾಳಜಿಯನ್ನು ಅಂದು ನಮಗರಿವಿಲ್ಲದೆ ಪಾಲಿಸಿದ್ದೆವು ಅದಕ್ಕೆ ಹೇಳುವೆ ಓ ಬಾಲ್ಯವೇ ಮತ್ತೊಮ್ಮೆ ಬರಬಾರದೆ ನಾನು ಕಳೆದ ಸಂಜೆಯ ಕೊಡಬಾರದೆ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜಲ್ (ಕಲಿಗಾಲ)



*ಗಜಲ್*


ಡೋಂಗಿಗಳ ಬಾಬಾ, ದೇವರೆಂಬರು ಇದು ಕಲಿಗಾಲ/
ದೇವರ ಹೆಸರಲ್ಲಿ ಕಚ್ಚಾಡಿ ಕೊನೆಗೆ ದೇವರಿಲ್ಲವೆನ್ನುವರು ಇದು ಕಲಿಗಾಲ/


ಅಮ್ಮನಾಗುವ ಅಮಿತ ಆನಂದ ಅನುಭವಿಸದೇ/ ಬಾಡಿಗೆ ತಾಯ್ತನಕ್ಕೆ ಶರಣಾದ ಮಾತೆಯರು ಹೇಳುವರು  ಇದು ಕಲಿಗಾಲ /


ಮಕ್ಕಳನು ಬಾಲ್ಯದಲ್ಲೇ ಮನೆಬಿಟ್ಟು ಓದಿಸಿದ್ದಕ್ಜೆ
ಸೇಡೇನೋ ಎಂಬಂತೆ /ಪೋಷಕರ ಇಳಿಗಾಲದಲ್ಲಿ
ಅನಾಥಾಶ್ರಮ ಸೇರಿಸಿ ಹೇಳುವರು  ಇದು ಕಲಿಗಾಲ /


ಒಬ್ಬರ ತುಳಿದು ಮತ್ತೊಬ್ಬ ಮೇಲೇರಿ ಅನ್ಯಾಯದಿ
ಅಕ್ರಮವೆಸಗಿ  /ಮೆರೆವ ನಾಯಕರು  ದರ್ಪದಿಂದ ಹೇಳುವರು ಇದು ಕಲಿಗಾಲ


ನರರು ಹಾದಿಯೊಳಗೆ ಕಚ್ಚಾಡಿ ಕೊಚ್ಚಿಹಾಕುತಿಹರು/
ಅಧರ್ಮದಿ ನಡೆದು ಧರ್ಮದ ಬುಡಮೇಲುಮಾಡಿ  ಹೇಳುವರು ಇದು ಕಲಿಗಾಲ /


ಪ್ರಕೃತಿಯ ಮೇಲೆ ವಿಕೃತಿ ತೋರಿ ವಿಚಿತ್ರವಾಗಿ ವರ್ತಿಸಿ/
ಅನಿಷ್ಟಕ್ಕೆಲ್ಲಾ ವೆಂಕಟೇಶ್ವರನೇ ಕಾರಣವೆಂದು ಹೇಳುವರು ಇದು ಕಲಿಗಾಲ /

ಸಿ ಜಿ ವೆಂಕಟೇಶ್ವರ
ಗೌರಿಬಿದನೂರು

23 October 2017

ಮೋಡಿ (ಹನಿಗವನಗಳು)

ಹನಿಗಳ ವಿಮರ್ಶೆ

*೧*
*ಮೋಡಿ*

ನಾನೂ ನೀನೂ ಜೋಡಿ
ಮುಗಿಯದು ನಮ್ಮ ಮೋಡಿ
ಹಿಡಿದೆವು ಕೈ ಅಂದು
ಬಿಡುವುದಿಲ್ಲ ಎಂದು
ವಯಸ್ಸಾಗಿದೆ ನಮ್ಮ ದೇಹಕ್ಕೆ
ವಯಸ್ಸಾಗೋಲ್ಲ ಆತ್ಮಗಳಿಗೆ


*೨*

ಬಿಲ್ಲು

ನನ್ನವಳು ನಡೆದಾಡುವ
ಕಾಮನಬಿಲ್ಲು
ಶಾಪಿಂಗ್ ಹೋದರೆ
ಕಟ್ಟಲಾಗದು  ಬಿಲ್ಲು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಭರವಸೆ (ಕವನ ೧೦೦ರ ಸಂಭ್ರಮ)

*ಭರವಸೆ*

ಮೋಡವಿಲ್ಲದಿದ್ದರೂ ಉತ್ತು ಬಿತ್ತಿ
ಭರ್ಜರಿ ಬೆಳೆ ತೆಗೆವೆನೆಂಬ ರೈತನಿಗೆ
ಮಳೆ ಬಂದೇ ಬರುವುದೆಂಬ ಭರವಸೆ

ಆಗಸದಲ್ಲಿ ತೂರಿದ ಮಗುವು ಕಿಲ
ಕಿಲ ನಗುವುದು ನನ್ನ ತಾಯಿ ನನ್ನ
ಕೈಬಿಡಲಾರಳೆಂಬ ಭರವಸೆ

ಕಲಿಕೆಯಲ್ಲಿ ಹಿಂದಿದ್ದರೂ ಕಲಿಯಲು
ಆಸಕ್ತಿ ಇಲ್ಲದಿದ್ದರೂ ನನ್ನ ಮಕ್ಕಳು
ಸಾಧಿಸುವರೆಂಬುದು ತಾಯಿ ಭರವಸೆ

ಸಾಕಿ ಸಲುಹಿದ ಮಕ್ಕಳು ನಮ್ಮ
ಇಳಿಗಾಲಗಲಿ ಊರುಗೋಲಾಗುವರು
ಎಂಬುದು ಪೋಷಕರ ಭರವಸೆ

*ಸಿ.ಜಿ. ವೆಂಕಟೇಶ್ವರ*
*ಗೌರಿಬಿದನೂರು*

22 October 2017

ಸುಂದರ (ಚಿತ್ರ ಕವನ)

*ಸುಂದರ*

ನನ್ನ ನಗುವಿನ ಗುಟ್ಟು
ಈ ನನ್ನ ಪುಟ್ಟು
ನೀ ನನ್ನ ಉಸಿರು
ನೀನಿದ್ದರೆ ಹಸಿರು
ನೀನು ನಗಲು
ನನ್ನ ನಗು ಜಗದಗಲ
ನೀನೀಗ ಬರಿ ಮೈ ಪೋರ
ಆದರೂ ನೋಡಲು ಸುಂದರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಸಾಲು ದೀಪಾವಳಿ

*ಸಾಲು ದೀಪಾವಳಿ*

ನೂರು ಹೆಜ್ಜೆ ದೂರದಲಿಹರು ನಮ್ಮ ಸ್ನೇಹಿತರು/
ಮೂರು ಚಿಕ್ಕ ಗುಡಿಸಲು ನಮ್ಮ ವಾಸದ ತಾಣವು/
ಕಾರು ಬಂಗಲೆ ಮಹಲು ಅವರೆ ಕುಬೇರರು/
ಗುಡಿಸಲು ಜೋಪಡಿಗಳೇ ನಮ್ಮ ಮಹಾಲಯವು/

ಹಬ್ಬದ ಸಡಗರಕೆ ತಂದರವರು ಪಟಾಕಿಯ /
ಕಾಯುತಿಹೆವು ನಾವು ನೋಡಲು ಚಟಾಕಿಯ/
ತಂದಿಹರು ಆನೆ ಪಟಾಕಿ ಸುರ್ ಸುರ್ ಬತ್ತಿ‌/
ಹಚ್ಚುವರು ಬೆಳಗುವರು ಸಾಲು ದೀಪಾವಳಿಯ /

ಅದೋ ಹಚ್ಚಿದರು ಆನೆ ಪಟಾಕಿಯ ನೋಡು/
ಡಂ ಎಂದಿತು ಬಂದು ನಮ್ಮ ಮನೆಯಂಗಳದಿ/
ಇದೋ ಬಂತು ಭೂಚಕ್ರ ಸುತ್ತುತ್ತಾ ಬೀದಿಯ /
ಸುತ್ತಿ ಸುಳಿದು ಬೆಳಕು ನೀಡಿತು ಹೃದಯದಾಳದಿ /

ಅವರ ರಾಕೆಟ್ ನಮ್ಮಂಗಳದಿ ನಿಲ್ಲುವುದು/
ಸೂರೆಗೊಳ್ಳುವುದು ನಮ್ಮ ಕಣ್ಣುಗಳ /
ಅವರ ಮನೆಯಲ್ಲಿ ಕಟ್ಟಿದ ಆಕಾಶ ಬುಟ್ಟಿ/
ಬೆಳಗುವುದು ನಮ್ಮ ಮನೆ ಮೈ  ಮನಗಳ /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

21 October 2017

ಕೋರಿಕೆ (ನ್ಯಾನೋ ಕಥೆ)

       
*ನ್ಯಾನೋ ಕಥೆ*
*ಕೋರಿಕೆ*
ಕ್ಷುಲ್ಲಕ ಕಾರಣಕ್ಕೆ ರವಿಯ ಅತ್ತೆ ರವಿಯನ್ನು ಅಂದು ವಾಚಾಮಗೋಚರವಾಗಿ ಬೈದು ಹಬ್ಬಕ್ಕೆ ಬಂದ ಅಳಿಯ ಮಗಳನ್ನು ಮನೆಯಿಂದ ಓಡಿಸಿದ್ದರು .
ಅವರ ಊರಿಗೆ ಬಂದು,   ಅಂದು ಸಂಜೆ ಅದೇ ಬೇಸರ ದಲ್ಲಿ ರವಿ ಮತ್ತು ಚಂದ್ರಿಕಾ ಊಟವಾದ ಬಳಿಕ ಮನೆಯ ಅಂಗಳದಲ್ಲಿ ಆಕಾಶ ನೋಡುತ್ತ ಮಲಗಿದ್ದರು ಇದ್ದಕ್ಕಿದ್ದಂತೆ ಒಂದು ನಕ್ಷತ್ರ ದೂರದವರೆಗೆ ಚಲಿಸಿ ಬಿದ್ದು ಹೋಯಿತು "ನಕ್ಷತ್ರ ಬೀಳುವುದು ಅಶುಭ ಸೂಚನೆಯಂತೆ" ಎಂದಳು ಚಂದ್ರಿಕಾ .ಅವಳ ಮಾತನ್ನು ಅಲ್ಲಗಳೆದ ರವಿ ."ನಕ್ಷತ್ರಗಳು ಬೀಳುವುದು ನೋಡುವುದು ಶುಭವಂತೆ ಅವುಗಳು ಬೀಳುವಾಗ ನಾವೇನಾದರೂ ಕೋರಿಕೊಂಡರೆ ಅದು ಈಡೇರುವುದಂತೆ "ಎಂದನು
ಬೆಳಿಗ್ಗೆ ಯಾರೋ ಬಂದು ಮನೆಬಾಗಿಲ ಬಡಿದಾಗ ಎಚ್ಚರವಾದ ದಂಪತಿಗಳಿಗೆ ದೂರದೂರಿನಿಂದ ಬಂದ ಯುವಕ  ರವಿಯ ಅತ್ತೆಯ ಸಾವಿನ ವಿಷಯ ತಿಳಿಸಿದ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

20 October 2017

ಬಂಧ (ಚಿತ್ರ ಕವನ)

         

*ಬಂಧ*

ನಮ್ಮ ಬದುಕು ನಮ್ಮದು
ಸುಂದರ ಲೋಕ ನಮ್ಮದು

ಅಪ್ಪ ಅಮ್ಮ ನಮಗಿಲ್ಲ
ತಪ್ಪು ಮಾಡೋದು ತಿಳಿದಿಲ್ಲ
ನಮ್ಮ ಬದುಕು ಬಣ್ಣದ ಚಿತ್ರ
ದೇವರಿಗೆ ಬರೆವೆವು ಪತ್ರ

ನಾವ್ಯಾರಿಗೂ ಕಡಿಮೆ ಇಲ್ಲ
ಅನ್ನಕೆ ಯಾರಿಗು ಕೈಯೊಡ್ಡಲ್ಲ
ಸ್ವಾಭಿಮಾನವ ಮರೆಯೋದಿಲ್ಲ
ನಮ್ಮಿಬ್ಬರ ಬಂಧ ಸಡಿಲವಾಗಲ್ಲ

ಶಾಲೆಯ ದಾರಿಯ ತುಳಿದಿಲ್ಲ
ಜೀವನ ಶಾಲೆಯ ಬಿಟ್ಟಿಲ್ಲ
ಕತ್ತಲೆ ಕೂಪದಿ  ನಾವಿಲ್ಲ
ಪ್ರತಿದಿನ ಬೆಳಕು ನಿಂತಿಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಆಸೆ (ನ್ಯಾನೋ ಕಥೆ)

             *  ನ್ಯಾನೊಕಥೆ*

*ಆಸೆ*


ಸಂಧ್ಯಾವಂದನೆ ಮುಗಿಸಿ ಊಟಕ್ಕೆ ಸಿದ್ದವಾದ ಸತೀಶ್ "ಎಲ್ಲಿ ಮಗಳು ಎರಡು ದಿನವಾದರೂ ಬರಲಿಲ್ಲ "ಎಂದು‌  ಮಮತಗೆ ಕೇಳಿದ ಈ ಪ್ರಶ್ನೆಗೆ ತಡವರಿಸಿ ಬರುವಳು ಸ್ನೇಹಿತೆ ಮನೆಗೆ ಹೋಗಿರುವುದಲ್ಲ  ಇನ್ನೇನು ಬರಬಹುದು ಎಂದಳು .
ಆದರೆ ಪೂಜಾಳ ಅಂದಿನ ದಿನಚರಿಯೇ ಬೇರೆಯಾಗಿರುತ್ತು ಸಾಂಪ್ರದಾಯಿಕ ಕುಟುಂಬದ ಹುಡುಗಿಯಾದ ಗೀತಳಿಗೆ ನಿರೀಕ್ಷೆಯಂತೆ ಮನೆಯಲ್ಲಿ ಕೆಲ ನಿರ್ಬಂಧಗಳನ್ನು ಹೇರಲಾಗಿತ್ತು ಅದು ಉಡುಗೆ ತೊಡುಗೆ ಆಚಾರ ವಿಚಾರಗಳಲ್ಲೂ ಮುಂದುವರೆದಿತ್ತು. ಹುಚ್ಚುಕೋಡಿ ಮನಸ್ಸು ಈ ನಿರ್ಬಂಧಗಳನ್ನು ದಾಟಲು ಕಾಯುತ್ತಿತ್ತು ಅವರ ಕಾಲೇಜಿನ ಕೆಲ ಯವಕ ಯವತಿಯರು ಗೋವಾ ಪ್ರವಾಸ ಗೊರಟಾಗ ಪೂಜಾಳ ಕನಸಿಗೆ ರೆಕ್ಕೆ ಮೂಡಿ ತಾನೂ ಗೋವಾ ಪ್ರವಾಸಕ್ಕೆ ಅಣಿಯಾದಳು ಆದರೆ ಅಪ್ಪ ಒಪ್ಪಬೇಕಲ್ಲ .ಇರುವುದೊಂದೇ ದಾರಿ ಅಮ್ಮನ ಮನವೊಲಿಸುವುದು .ಅಮ್ಮನಿಗೆ ವಿಷಯ ತಿಳಿದಾಗ ಕೆಂಡಾಮಂಡಲವಾದರೂ ಒಪ್ಪಿಗೆ ಸೂಚಿಸಿದಳು .ಕೊನೆಗೆ ಅಪ್ಪನಿಗೆ ತಿಳಿಯದಂತೆ ಗೋವಾ ಪ್ರವಾಸಕ್ಕೆ ನಡದೇ ಬಿಟ್ಟಳು .ಅವಳಿಗಿಷ್ಟದ ಉಡುಪು ಧರಿಸಿ. ಅವಳಿಷ್ಟದ ಸಂಗೀತವನ್ನು ಆಸ್ವಾದಿಸಿ ಮೈಮರೆತಿದ್ದಳು.
ಊಟ ಮುಗಿಸಿ ಹಜಾರದಲ್ಲಿ ಕುಳಿತ ಸತೀಶ್ ಮೊಬೈಲ್ "ತಿರುಮಲವಾಸ....ಶ್ರೀ ವೆಂಕಟೇಶ..." ಎಂದು ರಿಂಗಣಿಸಿತು .ಹಲೋ ಎಂದವನೆ ಒಂದು ಕ್ಷಣ ಮೌನವಾದ ಹೆಂಡತಿ ಏನೆಂದು ಕೇಳಿದರೆ ಮಾತನಾಡದೆ ಗಾಡಿ ಹತ್ತಿಸಿಕೊಂಡು ಹೊರಟೇಬಿಟ್ಟ .ಹತ್ತು ಕಿಲೋಮೀಟರ್ ಅಂತರದಲ್ಲಿ ರಸ್ತೆಯ ಮದ್ಯ ಜನಜಂಗುಳಿ. ಜನರ ಸರಿಸಿ ಮುಂದೆ ದಂಪತಿಗಳಿಗೆ ಕಂಡಿದ್ದು ಘೋರ ದೃಶ್ಯ. ಮಗಳು ಮಾಡ್ ಡ್ರೆಸ್ ನಲ್ಲಿ ಶವವಾಗಿ ಬಿದ್ದಿದ್ದಾಳೆ ಮಗಳ ಸ್ಥಿತಿ ನೋಡಿದ  ಸತೀಶ್ ಅಲ್ಲೇ ಕುಸಿದು ಕಣ್ಮುಚ್ಚಿದ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 October 2017

ದಂತಭಗ್ನಂ (ಹನಿಗವನಗಳು)

*೧*
*ಚುಂಬನ*

ಉಲ್ಲಸಿತವಾಗುವುದು ನನ್ನ
ಮೈಮನ
ಕೇಳದೇ  ನೀ ನೀಡಿದರೆ
ಚುಂಬನ
*೨*

*ಬೆನ್ನುಡಿ*

ನಿನ್ನ ಚುಂಬನ ನಮ್ಮ ಪ್ರೇಮಕ್ಕೆ
ಮುನ್ನಡಿ
ಈಗಿರುವ ಇಬ್ಬರು ಮಕ್ಕಳು
ಬೆನ್ನುಡಿ

*೩*

*ದಂತಭಗ್ನಂ*

ನೀನಿತ್ತ ಮೊದಲ ಚುಂಬನದಿಂದ
ನಾನು ಪ್ರೀತಿಯಲಿ ಮಗ್ನ
ನೀನೆಂದು ತಿಳಿದು ಅದೇ ಹುರುಪಲ್ಲಿ
ಅವಳಿಗೆ ಚುಂಬಿಸಿದೆ ದ್ವಿತೀಯ ಚುಂಬನದಲ್ಲಿ
ಎರಡು ದಂತಭಗ್ನ

*೪*

*ಸ್ಯಾರಿ*

ಚುಂಬಿಸಲು‌ ಆತುರದಿ ಹೋದೆ
ನಲ್ಲೆಯ ಬಳಿಸಾರಿ
ಅವಳು ಕೇಳೇ ಬಿಟ್ಟಳು
ಎಲ್ಲಿ ಇಳಕಲ್ ಸ್ಯಾರಿ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಪ್ರಶ್ನೆ (ಕವನ)


*ಪ್ರಶ್ನೆ*

ಸತಿ ಸುತರನ್ನು ಪೊರೆದಿದ್ದೆ
ಪ್ರೀತಿಯ ಧಾರೆಯರೆದಿದ್ದೆ
ಕೇಳಿದೆಲ್ಲವ  ನಾನುನೀಡಿದ್ದೆ
ಹೇಳಿ ನಾನೇನು ತಪ್ಪು ಮಾಡಿದ್ದೆ?

ಸತಿಯೆಂದು ಅತಿ ಪ್ರೀತಿಮಾಡಿ
ಮಿತಿಯಿರದ ಕಾಳಜಿ ಮಾಡಿ
ಪ್ರತಿನಿಮಿಷ ಜೊತೆಗಿದ್ದ ನನ್ನ ಸತಿಯಿಲ್ಲ
ಹೇಳಿ ನಾನೇನು ತಪ್ಪು ಮಾಡಿದ್ದೆ?

ಸುತನೆಂದು ಹೊತ್ತು ಸಾಕಿದ್ದೆ
ಅತಿಸವಲತ್ತು ನೀಡಿದ್ದೆ
ಮದುವೆ ಮಾಡಿದ ಮೇಲೆ ಸುತನಿಲ್ಲ
ಹೇಳಿ ನಾನೇನು ತಪ್ಪು ಮಾಡಿದ್ದೆ?

ದೇಹಾರೋಗ್ಯ ನೋಡಲು ಯಾರಿಲ್ಲ
ಮನಕೆ ಸಾಂತ್ವನ ಹೇಳಲು ದಿಕ್ಕಿಲ್ಲ
ಸತಿ ಸುತರ ಪ್ರೀತಿ ಬಯಸಿದ್ದು ತಪ್ಪೇ
ಹೇಳಿ ನಾನೇನು ತಪ್ಪು ಮಾಡಿದ್ದೆ?

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

17 October 2017

ಸಂಗೀತ(ಹನಿಗವನಗಳು)

             *೧*

*ಸಂಗೀತ*

ನಿನಗಾಗಿ ಹಾಡುವೆನು ದಿನವೂ
ಸಂಗೀತ
ಬಾರೆ ನನ್ನ ದಿನವೂ
ಪ್ರೀತಿಸು ಗೀತ

*೨*

*ತಾತ*

ನಿನಗೋಸ್ಕರ ಹಾಡುವೆ ದಿನವೂ
ಸಂಗೀತ|
ನಿನಗೋಸ್ಕರ ಬರೆಯವೆ ದಿನವೂ
ಗೀತ
ನನಗೊಲಿದು ಬಿಡು  ನಾನಾಗುವ ಮುನ್ನ
ತಾತ||

*೩*

*ಪ್ರಪಾತ*

ಸಂಸಾರ ಸರಿ ಇದ್ದರೆ
ಸರಿಗಮ ಸಂಗೀತ|
ಹೆಚ್ಚು ಕಡಿಮೆ ಆದರೆ
ಆಳ ಕಂದಕದ
ಪ್ರಪಾತ||


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು(ರಸ್ತೆ ಗುಂಡಿ)

            *ಹನಿಗವನಗಳು*

*ಗುಂಡಿಗೆ*

ನಮ್ಮ ಬೆಂಗಳೂರು ರಸ್ತೆಯಲ್ಲಿ
ವಾಹನ ಚಲಾಯಿಸುವ ಮೊದಲು
ನನಗಿದ್ದವು ಎರಡು ಗುಂಡಿಗೆ
ಆಮೇಲೆ ಬಿದ್ದೆ ಗುಂಡಿಗೆ

*ಗಂಡಾಗುಂಡಿ*

ಕವಿಗಳು ಹೇಳಿದರು ಸಯೋತನಕ
ಸಂಸಾರದೊಳಗೆ ಗಂಡಾಗುಂಡಿ
ಸಾಯೋದು ಗ್ಯಾರಂಟಿ ಬಿದ್ದರೆ
ಈ ರಸ್ತೆ ಗುಂಡಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

16 October 2017

ಯಾರನ್ನು ದೂರಲಿ (ಕವನ)

               *೧*
*ಯಾರನ್ನು ದೂರಲಿ*

ಗುರುತು ಸಿಗದಾಗಿವೆ ನನ್ನೂರಿನ ರಸ್ತೆಗಳು
ಎಡೆ ಬಿಡದೆ ಸುರಿದ ಜಡಿ ಮಳೆಗೆ
ಯಾರ ದೂರಲಿ ನಾವು
ತಡೆದು ಸುರಿದ ವರುಣನಿಗೋ
ರಸ್ತೆ ಮಾಡಿದ ಕಂಟ್ರಾಕ್ಟರ್ ಗೋ

ರಸ್ತೆಯಲಿ ಗುಂಡಿ ಇವೆಯೋ
ಗಂಡಿಯಲಿ ರಸ್ತೆಯಿವೆಯೋ
ಅರಿಯದಾಗಿದೆ  ರಸ್ತೆ ಗುಂಡಿಗಳಿಗೆ
ದಿನದಿನವೂ ಬಲಿಗಳಾಗುತಿವೆ
ಯಾರನ್ನು ನಾವು ದೂರಲಿ

ಗುಂಡಿಗೆ ಅದುರುತಿದೆ ಗುಂಡಿ ರಸ್ತೆಗೆ
ಗಂಡಾಂತರದ ಗುಂಡಿಗಳು
ಗುರಿಮುಟ್ಟಲು ತಡೆಯುತಿವೆ
ಗುಂಡಿಗೆ ಇನ್ನೆಷ್ಟು ಬಲಿ ಬೇಕೋ
ಯಾರನ್ನು ನಾವು ದೂರಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಅನಿಕೇತನ( ಕವನ)

       *ಅನಿಕೇತನ*


ನನ್ನ ಲೇಖನಿ ಖಡ್ಗಕ್ಕಿಂತ ಹರಿತವಲ್ಲ
ನನ್ನ ಲೇಖನಿ ಬಾಂಬಿಗಿಂತ ದೊಡ್ಡದಲ್ಲ
ಕಾರಣ ನನ್ನ ಲೇಖನಿ ಶಾಂತಿಪ್ರಿಯ
ಕೋರುತ್ತದೆ ಸರ್ವಜನಹಿತಾಯ /

ನನ್ನ ಲೇಖನಿ ಸಮಾಜವನ್ನು ಒಡೆಯಲ್ಲ
ಸಣ್ಣ ಮನಸ್ಸಿನವರ ಜರಿಯುವುದಿಲ್ಲ
ದೊಡ್ಡ ಮನದವರ ಮರೆಯುವುದಿಲ್ಲ
ಸಮಾನತೆಯನ್ನು ಎಂದೂ  ಸಾರುವುದಲ್ಲ /

ನನ್ನ ಲೇಖನಿ ಪೂರ್ವಾಗ್ರಹ ಪೀಡಿತವಲ್ಲ
ಸರಿ ತಪ್ಪುಗಳ ಲೆಕ್ಕದಲಿ ತನ್ನ ಮರೆತಿಲ್ಲ
ದೇಶವಿರೋಧಿಗಳ  ಇದು ಸಹಿಸುವುದಿಲ್ಲ
ದೇಶಭಕ್ತರ ಹಾಡಿಹೊಗಳುವುದ ಮರೆಯಲ್ಲ  /

ನನ್ನ ಲೇಖನಿಗೆ ಮಾನ ಸಮ್ಮಾನ ಬೇಕಿಲ್ಲ.
ಎಲ್ಲರ ದುಃಖ ದುಮ್ಮಾನ ಮರೆಯಲ್ಲ
ಮೇಲು ಕೀಳು ಬಡವ ಬಲ್ಲಿದ  ಭೇದವಿಲ್ಲ
 ಅನಿಕೇತನ ತತ್ವ ಪಾಲಿಸುವುದ ಮರೆಯಲ್ಲ/

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 October 2017

ಸುಂದರ ಬಂದನು ಸುಂದರಿ ಮನೆಗೆ (ರಾಯರು ಬಂದರು ಮಾವನ ಮನೆಗೆ ದಾಟಿಯಲ್ಲಿ)ಕೆ..ಎಸ್ .ನ ಅವರ ಕ್ಷಮೆ ಕೋರಿ

   *ಭಾವಗೀತೆ*

ಸುಂದರ ಬಂದನು ಸುಂದರಿ ಮನೆಗೆ ರಾತ್ರಿಯಾಗಿತ್ತು /
ಒಂಭತ್ತು ಗಂಟೆ ಸೀರಿಯಲ್ ಮುಗಿದು ಕತ್ತಲೆಯಾಗಿತ್ತು/
ಕವ ಕವ ಕತ್ತಲು ಕವಿದಿತ್ತು/

ಮಾವನ ಮನೆಯಲಿ ಬಾಡೂಟದ ಘಮಲು ಮೂಗಿಗೆ ಬಡಿದಿತ್ತು/
ಮನಸಲೆ ಮಂಡಿಗೆ ತಿನ್ನುತ ಸುಂದರನ ಕಣ್ಣು ಸುಂದರಿ ಹುಡುಕಿತ್ತು /
ಸುಂದರಿ ಸುಳಿವೆ ಇರಲಿಲ್ಲ/

ತಂಬಿಗೆ ನೀರನು ತಂದರು ಅತ್ತೆ ಅಳಿಯಗೆ ಕುಡಿಯೆನಲು/
ಸುಂದರ ಕಣ್ಗಳು ಹುಡುತಲಿದ್ದವು ಸುಂದರಿ
ಎಲ್ಲೆನೆಲು/
ಅತ್ತೆಯ ಉತ್ತರವೇ ಇಲ್ಲ/

ಊಟವು ಉಪಚಾರವಾಯಿತು ಸುಂದರಗೆ ಖುಷಿಯಿಲ್ಲ/
ಒಳಹೊರಗೆಲ್ಲಾ ಹುಡುಕಾಡಿದರೂ ಸುಂದರಿ ಸುಳಿವಿಲ್ಲ/
ಅವಳ ಬಳೆಗಳ ಸದ್ದಿಲ್ಲ/

ಸಿಟ್ಟಿನಲೆದ್ದನು ಸುಂದರ ಹೊರಡಲು ಆಗಲೆ ಕತ್ತಲಿನಲಿ/
ಪಕ್ಕದ ಕೋಣೆಯಿಂದಲಿ ಬಂದಳು ಸುಂದರಿ
ವದನದಲಿ/
ಕೋಣೆಯು ಮುಳುಗಿತು ಕೇಕೆಯಲಿ

(ಕೆ .ಎಸ್ .ನ.ಅವರ ಕ್ಷಮೆ ಕೋರಿ)
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

14 October 2017

ಆನಂದಭಾಷ್ಪ ( ನ್ಯಾನೋ ಕಥೆ)

         
*ಆನಂದಭಾಷ್ಪ* (ನ್ಯಾನೋ ಕಥೆ)

ಅಲ್ಲೆಲ್ಲ ಸ್ಪರ್ದೆಯ ವಾತಾವರಣ ಜನರಲ್ಲಿ ಕುತೂಹಲ ಯಾರು ಬಹುಮಾನ ಗಳಿಸಬಹುದು ಎಂಬ ಚರ್ಚೆ ,ಸುರೇಶನ ತಾಯಿಯು ಆತಂಕದಿಂದ ಕುಳಿತು ಇರೋ ಬರೋ ದೇವರನ್ನೆಲ್ಲಾ ಪ್ರಾರ್ಥನೆ ಮಾಡುತ್ತಿದ್ದರು ಕಾರಣ ಇಷ್ಟೇ ಮಗ ರಾಜ್ಯ ಮಟ್ಟದ ಗಾಯನ ಸ್ಪರ್ಧೆಯಲ್ಲಿ ನನ್ನ ಮಗ ಗೆಲ್ಲಲೇ ಬೇಕು ಏಕೆಂದರೆ ೧೫ ವರ್ಷಗಳ ಹಿಂದೆ ಶಾಲೆಯ ಸಂಗೀತ ಶಿಕ್ಷಕರಾದ ತಿಪ್ಪೇಸ್ವಾಮಿ ರವರು " ನಿನ್ನ ಮಗನಿಗೆ ಸಂಗೀತ ಬಾರದು ಸುಮ್ಮನೆ ಯಾಕೆ ಸಂಗೀತ ಪಾಠ ನಿಲ್ಲಸಿ ಬೇರೆ ಓದಿನ ಕಡೆ ಗಮನ ಹರಿಸಲು ಹೇಳಿ ಡಾಕ್ಟರ್ ಅಥವಾ ಇಂಜಿನಿಯರ್ ಆಗಬಹುದು "ಎಂದಿದ್ದು ಕಿವಿಯಲ್ಲಿ ಗುಯ್ ಗುಟ್ಟಿತು." ಈ ಸಾಲಿನ ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆವರು ಸರಸ್ವತಿ " ಎಂದು ಧ್ವನಿವರ್ಧಕದಲ್ಲಿ ಬಂದಾಗ ತಾಯಿಗೆ ಅತೀವ ನಿರಾಸೆ .ಮುಂದುವರೆದು "ದ್ವಿತೀಯ ಬಹುಮಾನ ಸುರೇಶ್ "ಎಂದಾಗ ಆ ತಾಯಿಯ ಆನಂದ ತಾಳಲಾರದೇ ಆನಂದಭಾಷ್ಪ ಉಕ್ಕಿ  ಅಲ್ಲೇ ಕಣ್ಮುಚ್ಚಿದರು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 October 2017

ಸಮರಸವೇ ಜೀವನ (ಕವನ)

   

  *ಸಮರಸವೇ ಜೀವನ*


ಬಾಳ ಪಯಣದಲಿ ನೂರಾರು ತಿರುವುಗಳು
ಜೀವಿಸಬೇಕು  ನೀನು ಸಂತಸದಿ ಹಗಲಿರುಳು

ನಿಂದಕರಿಹರು ಹಂದಿಯಂತೆ ಜಗದಿ
ಅವರ ನಿಂದನೆ ಸ್ವೀಕರಿಸು ಮುದದಿ
ಕಾಲೆಳೆವರು ನೀ ಮೇಲೇರಿದರೆ ಇಲ್ಲಿ
ಸಾಧಿಸಿ ತೋರಿಸವರಿಗೆ  ಜೀವನದಲ್ಲಿ

ಕಷ್ಟ ಕೋಟಲೆಗಳು ನೂರು ಇರಲಿ
ಇಷ್ಟ ಪಟ್ಟು ಬದುಕುವುದು  ನೀ ಕಲಿ
ಎಲ್ಲರೊಳಗೊಂದಾಗಿ ಬಾಳಬೇಕು
ಸಮರಸವೇ ಜೀವನ ತಿಳಿಯಬೇಕು

ಮಿಡಿತವಿರಲಿ ಅಶಕ್ತ ಮನಗಳಿಗೆ
ತುಡಿತವಿರಲಿ ಹೊಸ ಕಲಿಕೆಗಳಿಗೆ
ದಯೆಯಿರಲಿ  ಸಕಲ ಜೀವಗಳಲಿ
ಪರಿಸರದ ಬಗ್ಗೆ ಕಾಳಜಿಯಿರಲಿ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 October 2017

ನಾಲ್ಕು ಹನಿಗವನಗಳು.

               
              *ಹನಿಗವನಗಳು*

*೧*

*ತಾ*

ನನ್ನವಳೆಂದರೆ ನನಗೆ ಅದೇನೋ ಸೆಳೆತ
ನನ್ನವಳೆಂದಳು ಮೊದಲು ಎ.ಟಿ.ಎಮ್ ನಿಂದ ಹಣ ಸೆಳೆ
ನಂತರ ತಾ

*೨*

*ಇಳಿತ*

 ಮೊದಲು ನನ್ನವಳ ಕಂಡರೆ
ಆಯಸ್ಕಾತದಂತೆ ಸೆಳೆತ
ಈಗೀಗ ಏಕೋ ಆಕರ್ಷಣೆಯಲ್ಲಿ
ಬಹಳ ಇಳಿತ

*೩*

*ಅಲೆತ*


ಸರ್ಕಾರಿ ನೌಕರಿ ಪಡೆಯಲು
ಎಲ್ಲರ ಅಲೆತ
ಅವರಿಗೆ ಗೊತ್ತು ಮುಂದೆ ಇದ್ದೇಇದೆ
ಲಂಚದ ಸೆಳೆತ

*೪*

*ಬೇಕಿತ್ತಾ*

ಮೊದಲು
ಅವಳೆಂದರೆ ಇವನಿಗೆ ಸೆಳೆತ
ಇವಳೆಂದರೆ ಅವನಿಗೆ ಸೆಳೆತ
ನಂತರ
ಇವಳ ಮಾತು ಅವನಿಗೆ ಕೊರೆತ
ಅವನ ಮಾತು ಇವಳಿಗೆ ಕೊರೆತ
ಕೊನೆಗೆ
ಇದೆಲ್ಲಾ ನಮಗೆ ಬೇಕಿತ್ತಾ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

11 October 2017

ಮೋಡಬಿತ್ತನೆ (ಹನಿ)

            *ಸಮಯಸಾಧಕತನ*

ಕರ್ನಾಟಕದ ಮಳೆಗೆ ಕಾರಣ
ನಮ್ಮ ಮೋಡ ಬಿತ್ತನೆ!
ನಾವಂತೂ ಕಾರಣವಲ್ಲ ರಸ್ತೆ
ಗುಂಡಿ ಬಿತ್ತನೆಗೆ !

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಗಜಲ್

             

         *ಗಜಲ್*


ಪ್ರೀತಿ ಪ್ರೇಮದ ನಾಟಕವನ್ನು ನಂಬಿದ್ದು ನನ್ನ ತಪ್ಪೆ?
ಗೋಮುಖವ್ಯಾಘ್ರತನವನ್ನು ಗುರುತಿಸದಿದ್ದು ನನ್ನ ತಪ್ಪೆ?


ನಿನ್ನ ಕಷ್ಟಗಳಲಿ ಹೆಗಲು ಕೊಟ್ಟು ಇಷ್ಟ ಪಟ್ಟ ನಿನ್ನ
ಕಷ್ಟಸುಖದಲಿ ಜೊತೆಗಿರಲು ಆಣೆ ಮಾಡಿದ್ದು ನನ್ನ ತಪ್ಪೆ?


ಜೀವನವೆಲ್ಲಾ ಪ್ರೀತಿಸಿ ಒಲವ ಧಾರೆಯೆರೆದು
ಸಂಸಾರ ಸಾಗಿಸಲು ಕನಸ ಕಂಡಿದ್ದು ನನ್ನ ತಪ್ಪೆ?


ಸೋಲರಿಯದ ನನಗೆ ಸೋಲ ರುಚಿ ತೋರಿಸಿದೆ
ಜಾಲಿಯ ಮರದ ನೆರಳನ್ನು ನಂಬಿದ್ದು ನನ್ನ ತಪ್ಪೆ?


ವಂಚಕಿಯೆಂದು ತಿಳಿದು ನನ್ನ ಬಳಿ ಸಾರಲು ನಿನ್ನ ಕಳುಹಿಸಿ ಕೊಟ್ಟ ವೆಂಕಣ್ಣನು ಮಾಡಿದ್ದು ನನ್ನ ತಪ್ಪೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 October 2017

ನಗು(ಚುಟುಕು ಗಳು)

              *೧*

*ಮಗು*

ಮರೆತು ಬಿಡಿ  ಕೆಟ್ಟಹಗೆ
ಬೀರಿ ಒಂದು ಪುಟ್ಟನಗೆ
ಮೂಡಲಿ ಮುಖದಲಿ ನಗು
ನಾವಾಗೋಣ ಮಗು

*೨*

*ನಗುತಿರಬೇಕು*

ಬಿಟ್ಟು ಬಿಡಿ ಮನದ ಬೇಗುದಿ
ಕೊಡಿ ನಗುವಿನ ಔಷಧಿ
ಆತಂಕ ನಮಗೆ ಏಕೆ ಬೇಕು?
ಸದಾಕಾಲವೂ ನಗುತಿರಬೇಕು

*೩*

*ನೊಗ ಮತ್ತು ನಗು*

ಸಂಸಾರದ  ಬಂಡಿಯ ನಾವಿಬ್ಬರು
ಎಳೆಯಲು ನೊಗವಿರಬೇಕು
ಸಂಸ್ಕಾರದ ಜೀವನದಿ ನಮ್ಮೆಲ್ಲರ
ಸೆಳೆಯಲು ನಗುವಿರಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ವಿಧುರಾಶ್ವತ್ಥ (ಲೇಖನ)ವಿಶ್ವವಾಣಿ ದೀಪಾವಳಿ ವಿಶೇಷಾಂಕ 2017 ರಲ್ಲಿ ಪ್ರಕಟಿತ ಲೇಖನ


                 





            ನೋಡಲೇ ಬೇಕಾದ ಕರ್ನಾಟಕದ ಪ್ರವಾಸಿ ತಾಣ
ಗೌರಿಬಿದನೂರು ಬಳಿಯ  ವಿಧುರಾಶ್ವತ್ಥ.
ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಕರೆಯುವ ವಿದುರಾಶ್ವತ್ಥ ಒಂದು ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾಗಿದೆ.
ಬೆಂಗಳೂರಿನಿಂದ 80 ಕಿಮೀ ದೂರವಿರುವ ಈ ಪ್ರದೇಶ ಭಾರತದ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.
*ಸ್ಥಳ ಮಹಿಮೆ*
ಆಸ್ಥಿಕರ ಪಾಲಿಗೆ ವಿದುರಾಶ್ವತ್ಥ ಒಂದು ಪ್ರಮುಖವಾದ ಯಾತ್ರಾ ಸ್ಥಳವಾಗಿದೆ. ಪ್ರತೀತಿಯ ಪ್ರಕಾರ ಹಿಂದೆ ಮಹಾಭಾರತದ ಕಾಲದಲ್ಲಿ *ವಿಧುರ* ಬಂದು ಇಲ್ಲಿ ಅಶ್ವಥ ಮರ ನೆಟ್ಟ ಪರಿಣಾಮ ಅದರ ಕೆಳಗೆ ಅಶ್ವತ್ಥ ನಾರಾಯಣ ಸ್ವಾಮಿ ವಿಗ್ರಹ ಪ್ರತಿಷ್ಟಾಪಿಸಿ ಇಂದಿಗೂ ಪೂಜಾ ಕೈಂಕರ್ಯಗಳು ನಡೆಯುತ್ತವೆ.
ವರ್ಷಕ್ಕೊಮ್ಮೆ  ಏಪ್ರಿಲ್ ನಲ್ಲಿ ನಡೆಯುವ ಜಾತ್ರೆಗೆ
ಹೊರರಾಜ್ಯಗಳ ಭಕ್ತರು ಬಂದು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ.
ಇಲ್ಲಿನ ಮತ್ತೊಂದು ಆಕರ್ಷಣೆ ಸಾವಿರಾರು ನಾಗರ ವಿಗ್ರಹ ಗಳು ರಾಹು ಕೇತು ಶಾಂತಿಗಾಗಿ ರಾಜ್ಯದ ಮತ್ತು ಹೊರರಾಜ್ಯ ಭಕ್ತಾದಿಗಳು ಬಂದು ತಮ್ಮ ಶಕ್ತಾನುಸಾರ ನಾಗರ ವಿಗ್ರಹ ಪ್ರತಿಷ್ಟಾಪನೆ ಮಾಡುತ್ತಿದ್ದಾರೆ .ಇಲ್ಲಿ ಹಲವಾರು ಚಲನಚಿತ್ರದ ಚಿತ್ರೀಕರಣ ನಡೆದಿದೆ
*ಐತಿಹಾಸಿಕ ಹಿನ್ನೆಲೆ*
ದೇಶಾದ್ಯಂತ ಬ್ರಿಟೀಷರ ವಿರುದ್ಧ ನಡೆದ ಸ್ವಾತಂತ್ರ್ಯ ಸಮರದ ಕಾಲದಲ್ಲಿ 1938 ರಲ್ಲಿ ಕರ್ನಾಟಕದ ಶಿವಪುರ ಧ್ವಜಸತ್ಯಾಗ್ರಹ ಯಶಸ್ವಿಯಾಗಿ ನಡೆಯಿತು. ಇದರಿಂದಾಗಿ ಪ್ರೇರೇಪಣೆ ಪಡೆದು ಗೌರಿಬಿದನೂರು ಸಮೀಪದ ವಿದುರಾಶ್ವತ್ಥದಲ್ಲಿ ಏಪ್ರಿಲ್25 1938 ರಂದು ಧ್ವಜದ ಸತ್ಯಾಗ್ರಹ ಹಮ್ಮಿಕೊಂಡು ಬ್ರಿಟಿಷ್ ವಿರುದ್ಧದ ಹೋರಾಟ ಬಿರುಸುಗೊಳಿಸಿದರು ಇದರಿಂದ ಕೋಪಗೊಂಡ ಬ್ರಿಟಿಷ್ ಅಧಿಕಾರಿಗಳು ಗೋಲಿಬಾರ್ ಮಾಡಿದ ಪರಿಣಾಮ ಕೆ.ಸಿ.ನಾಗಯ್ಯರೆಡ್ಡಿ.ಎನ್.ಸಿ‌.ತಿಮ್ಮಾರೆಡ್ಡಿ ಸೇರಿ ಹಲವರು ಹುತಾತ್ಮರಾದರು ಅವರ ಸ್ಮರಣಾರ್ಥ ಸತ್ಯಾಗ್ರಹ ಸ್ಮಾರಕ ನಿರ್ಮಿಸಿದ್ದಾರೆ .
ಅದೇ ಸ್ಥಳಗಳಲ್ಲಿ ಒಂದು ಉದ್ಯಾನವನ ನಿರ್ಮಿಸಿ ಅಲ್ಲಿ ಭಾರತದ ಸ್ವಾತಂತ್ರ್ಯ ಸಮರ ಸಾರುವ ಚಿತ್ರ ಕಲಾ ಪ್ರದರ್ಶನ ಗ್ಯಾಲರಿ ಎಲ್ಲರೂ ನೋಡಲೆ ಬೇಕು.
ಇದೇ ಪ್ರಾಂಗಣದಲ್ಲಿ ವಿದುರಾಶ್ವತ್ತ ಸ್ವತಂತ್ರ ಸಂಗ್ರಾಮ ಬಿಂಬಿಸುವ ದೃಕ್ ಶ್ರವಣ ಭವನ ನಿರ್ಮಿಸಿ ಅಲ್ಲಿ ಪ್ರತಿ ದಿನ ಪ್ರದರ್ಶನ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಧಾರ್ಮಿಕ ಆಸಕ್ತಿ ಇರುವವರು ವಿದುರಾಶ್ವತ್ಥಸ್ವಾಮಿ ದರ್ಶನ ಪಡೆಯಬಹುದು. ಹಾಗೂ ದೇಶ ಭಕ್ತಿ ಮತ್ತು ನಮ್ಮ ಪರಂಪರೆಯ ಬಗ್ಗೆ ತಿಳಿಯುವ ವರಿಗೆ ಸ್ವಾತಂತ್ರ್ಯ ಸ್ವಾರಕ ಕೈ ಬೀಸಿ ಕರೆಯುತ್ತದೆ .ಇನ್ನೇಕೆ ತಡ ಇಂದೇ ವಿಧುರಾಶ್ವತ್ತ ನೋಡಲು ಪ್ಲಾನ್ ಮಾಡಿ
ತಲುಪಲು ಮಾರ್ಗ:
ಬೆಂಗಳೂರಿನಿಂದ ಬಸ್ ಸೌಲಭ್ಯವಿದೆ. ಬೆಂಗಳೂರು ಹಿಂದೂಪುರ ಮಾರ್ಗದ ಎಲ್ಲಾ ಬಸ್ ಇಲ್ಲಿ ನಿಲಗಡೆ ಇದೆ ದೂರ 76 ಕಿಮಿ
ರೈಲು ಪ್ರಯಾಣ ಮಾಡುವವರು ಬೆಂಗಳೂರು. ಹಿಂದೂಪುರ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸಿ ವಿಧುರಾಶ್ವತ್ಥ ಬಳಿ ಇಳಿದು ಒಂದು ಕಿ.ಮಿ ಆಟೋದಲ್ಲಿ ತೆರಳಬಹುದು
ಸಿ.ಜಿ.ವೆಂಕಟೇಶ್ವರ
ಸಮಾಜ ವಿಜ್ಞಾನ ಶಿಕ್ಷಕರು
ಎಸ್ ಎಸ್. ಇ.ಎ.ಸರ್ಕಾರಿ ಪ್ರೌಢಶಾಲೆ
ಗೌರಿಬಿದನೂರು.
ಚಿಕ್ಕಬಳ್ಳಾಪುರ ಜಿಲ್ಲಾ

09 October 2017

ಸರಿಯೇ? (ಕವನ)

           

*ಸರಿಯೇ?*

ನಿನಗಾಗಿ
ಎಲ್ಲೆಲ್ಲೋ ಹುಡುಕಾಡಿದೆ
ತಡಕಾಡಿದೆ
ಮನಚಡಪಡಿಸಿದೆ ./


ನೀನು ನನ್ನ ಭಾವನೆಗಳಿಗೆ
ಅಕ್ಷರವಾಗಲು ನೆರವಾದವಳು
ನೀನು ನನ್ನ ಜೀವನದ ಎಲ್ಲಾ
ಪರೀಕ್ಷೆಯಲ್ಲಿ ಕೈ ಹಿಡಿದವಳು /


ಸದಾ ಕಾಲ ನನ್ನ ಎದೆ ಏರಿದವಳು
ಕೈ ಕೈ ಹಿಡಿದು ನಡೆದವಳು
ನನ್ನ ಸಂಬಂಧಗಳನ್ನು ಬೆಸೆದವಳು
ನನ್ನ ಚಿಂತನೆಗೆ  ಮಾದ್ಯಮವಾದವಳು /


ಹೇಗಿರುವೆಯೋ?  ನಾನರಿಯೇ
ನನ್ನ ನೀ ಬಿಟ್ಟಿರುವುದು ಸರಿಯೇ?
ಪ್ರತೀ ಕ್ಷಣ ಹುಡುಕುತ್ತಿರುವೆ ನಿನ್ನೇ
ಓ ನನ್ನ ಆತ್ಮೀಯ ಪೆನ್ನೇ /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 October 2017

ಹನಿ ಗಳು (ಸ್ವಚ್ಛತೆ ಕುರಿತ ಹನಿಗವನಗಳು)

              ಹನಿಗವನಗಳು
*೧*
*ಸ್ವಚ್ಛ ಭಾರತ*

ಎತ್ತನೋಡಿದರತ್ತ ಕಸ
ತುಂಬಿದೆ ನದಿತೊರೆಗಳಲಿ ವಿಷ
ಇಂದೇ ಪಣ ತೊಡೋಣ
ಸ್ವಚ್ಛ ಭಾರತ ಮಾಡೋಣ .

*೨*

*ಬೆಳಕು*

ಇನ್ನೆಷ್ಟು   ದಿನ ಕೊಳಕು ?
ಮೂಡಲಿ ಈದಿನವೆ  ಬೆಳಕು
ಮರೆಯಾಗಲಿ ಕೊಳೆ
ಮೆರೆಯಲಿ ಎಲ್ಲೆಲ್ಲೂ ಕಳೆ
*೩*

*ಹಾಸ್ಯ ಚಟಾಕಿ*

ಕಡಿಮೆ ಮಾಡೋಣ ಪಟಾಕಿ
ಹಾರಿಸೋಣ ಹಾಸ್ಯ ಚಟಾಕಿ
ಮಾಡದಿರೋಣ ಮಾಲಿನ್ಯ
ಹಣತೆಯ ಬೆಳಕೇ  ಅನನ್ಯ.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 October 2017

ಸಮಯವಿಲ್ಲ (ಕವನ)

           
                *ಸಮಯವಿಲ್ಲ*

ಯಾರನ್ನೆ ಕೇಳಿ ಸಿದ್ದ ಉತ್ತರ ಸಮಯವಿಲ್ಲ!
ಸಮಯದ ಮಹತ್ವ ಅವರಿಗಿನ್ನೂ ತಿಳಿದಿಲ್ಲ !


ಗಂಟೆಗಟ್ಟಲೆ ಮೋಬೈಲ್ ಲೋಕದಲ್ಲಿ ಮುಳುಗಿರುವಿರಲ್ಲ/
ಹಿತವಚನ,ಪ್ರವಚನ ಕೇಳಲು ಸಮಯವಿಲ್ಲ/
ಬದುಕುವ ಬದುಕಿಸುವ  ಮಾತುಗಳಿಗೆ ಬೆಲೆಯಿಲ್ಲ /
ಚಾಡಿ ಮಾತು,ಕೆಟ್ಟಮಾತುಗಳಿಗೆ ಕಿವಿ ಕೊಡುವಿರಲ್ಲ /

ದೀರ್ಘಾವಧಿಯ ಸಿನಿಮಾ ಸೀರಿಯಲ್ ನೋಡಲು ತಪ್ಪಿಸಲ್ಲ/
ಆತ್ಮಕ್ಕೆ ಬೆಳಕುನೀಡುವ ಕಿರು ಪ್ರಾರ್ಥನೆಗೆ ಸಮಯವಿಲ್ಲ/
ದಾನ ಮಾಡಲು ನಿಮಗೆ ಹತ್ತು ರೂ ಸಿಗಲಿಲ್ಲ/
ಲಕ್ಷಾಂತರ ಮೌಲ್ಯದ ಶಾಪಿಂಗ್ ಮರೆಯುವುದಿಲ್ಲ/

ಗಂಟೆಗಟ್ಟಲೆ ಒಣ ಹರಟೆ ಹೊಡೆಯುವಿರಲ್ಲ /
ಧ್ಯಾನ ಮಾಡಲು ನಿಮಗೆ ಸಮಯವೇ ಇಲ್ಲ/
ಜಾತಿ ಮತ ಧರ್ಮವೆಂದು ಕಚ್ಚಾಡುವಿರಲ್ಲ
ನೀಲಾಕಾಶವ ನೋಡಿ ವಿಶಾಲತೆಯ ಅರಿಯಲಿಲ್ಲ/

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 October 2017

ನಾವು ಶಿಕ್ಷಕರು (ಕವನ)

               *ನಾವು ಶಿಕ್ಷಕರು*

ನಾವು ಶಾಲೆಯ  ಶಿಕ್ಷಕರು
ಮಕ್ಕಳ ಮಾರ್ಗದರ್ಶಕರು

ಬೆಳೆಸುವೆವು ಸವಿ ಗುಣಗಳ
ಇಳಿಸುವೆವು  ಅನಕ್ಷರತೆಯ
ಸಾರುವೆವು ಸಮರಸದ ಮಂತ್ರ
ಕಲಿಸುವೆವು ಬಳಸಿ ಹೊಸ  ತಂತ್ರ

ಪರಂಪರೆಯ ರಕ್ಷಿಸುವೆವು
ನಿರಂತರವು ಕಲಿಸುವೆವು
ಮಾದರಿ ನಾವು ಸಮಾಜಕ್ಕೆ
ತೋರುವೆವು ದಾರಿ ಜೀವನಕ್ಕೆ

ಮಕ್ಕಳನು ಶಾಲೆಗೆ ಕರೆಯುವೆವು
ತೋರಣವ ಕಟ್ಟಿ ಸ್ವಾಗತಿಸುವೆವು
ಭಾರತಾಂಬೆಗೆ ಬಾಗಿ ನಮಿಸುವೆವು
ವಿಶ್ವಶಾಂತಿಗೆ ಕರೆ ನೀಡುವೆವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 October 2017

ಗಜಲ್( ಬೆಳಕು ನೀಡು ) ಮಾತು ಕತೆ ಪತ್ರಿಕೆಯಲ್ಲಿ ಪ್ರಕಟಿತ ಗಜಲ್

   



ಗಜಲ್*,ಬೆಳಕು ನೀಡು


ಕತ್ತಲಲಿಹುದು ಜಗ ಬೆಳಗಲು  ಬೆಳಕು ನೀಡು
ನಮ್ಮೆದೆಯ ಹೃದಯಗಳು ನಲಿಯಲು ಬೆಳಕು ನೀಡು /

ಲೋಕದಲಿ ಶೋಕ ಹೆಚ್ಚಾಗುತಿದೆ ನೋಡು/
ಶೋಕತಪ್ತ ಮನಗಳು ಕುಣಿಯಲು  ಬೆಳಕು ನೀಡು /

ಜನಮನಗಳಲಿ ಪ್ರೀತಿಯಿಲ್ಲ ನೀತಿ ನಿಯಮಗಳ ಭಯವಿಲ್ಲ
ಸಕಲರೂ   ನೀತಿವಂತರಾಗಲು ಬೆಳಕು‌ ನೀಡು /

ಹಸುಳೆಗಳ ಲೆಕ್ಕಿಸದೇ ಅತ್ಯಾಚಾರ ಮಾಡುತಿಹರು/
ಕೆಟ್ಟವರ, ಕಾಮಾಂಧರ ಮನ ಕರಗಲು  ಬೆಳಕು ನೀಡು/

ಧರ್ಮದ ಹೆಸರಿನಲಿ ಅಧರ್ಮದ ಆಟಗಳು
ದೇಶ ಒಡೆವ ದುಷ್ಟಶಕ್ತಿಅಡಗಲು  ಬೆಳಕು ನೀಡು /

ಭ್ರಷ್ಟಾಚಾರವ ಬೆಳೆಸಿ ರಾಷ್ಟ್ರ ಮಾರುವ ಹಂತಕ್ಕಿಳಿದಿಹರು
ಕೆಟ್ಟ ಶಕ್ತಿಗಳ  ಹುಟ್ಟಡಗಿಸಲು ಬೆಳಕು ನೀಡು /

ಪ್ರಾಣಿ ಪಕ್ಷಿಗಳಿಗೆ ದಯೆಯಿಲ್ಲ ಹಿಂಸೆಗೆ ಕೊನೆಯಿಲ್ಲ/
 ಶ್ರೀ ದೇವಿತನಯನೇ ಅಹಿಂಸೆಪಾಲಿಸಲು  ಬೆಳಕು ನೀಡು/

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

04 October 2017

ದುಃಖ ನನಗಿರಲಿ (ಚಿತ್ರ ಕವನ)

           
  *ದುಃಖ ನನಗಿರಲಿ*


ನೀ ನನಗೆ ಭಾರವಲ್ಲ ಮಗಳೆ
ನಾನಿರುವುದು ಇಳೆಯ ಮೇಲೆ

ಬಿಸಿಲು ಮಳೆ ಚಳಿ ಇರಲಿ
ನಿನ್ನ ಕಾಪಾಡದೆ ಹೇಗಿರಲಿ
ನನಗಾವ ಕಷ್ಟಗಳ ಪರಿವಿಲ್ಲ
ನನ್ನೊಡನೆ ನೀನಿರುವೆಯಲ್ಲ

ನಿನ್ನ ಸವಿ ಮಾತೇ ಪ್ರೇರಣೆ
ನೀನಿದ್ದರೆ ಬರುವುದು ಸಹನೆ
ನೀ ನನ್ನ ಬಲವಾದ ಕನಸು
ನಿನ್ನ ಪ್ರತಿ ಮಾತು ಸೊಗಸು

ನನ್ನ ಹಿತ ಬೇಕಿಲ್ಲ
ನಿನ್ನ ಸುಖ ಮರೆತಿಲ್ಲ
ಜಗದ ದುಃಖ ನನಗಿರಲಿ
ಇರುವ ಸುಖವೆಲ್ಲಾ ನಿನಗಿರಲಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

03 October 2017

ಗಾಡ್ ಪಾದರ್ (ಹನಿಗವನ)

           *ಗಾಡ್ ಪಾದರ್*

ನಾಯಿಯಂತೆ ನಿಯತ್ತಿನಿಂದ
ಇದ್ದರೆ ನಮಗೆ ಸಿಗಬಹುದು
ಗಾಡ್ ಪಾದರ್
ನಾಯಿಯನ್ನು ನಿಯತ್ತಿನಿಂದ
ಸಾಕಿ ಹಾರೈಕೆ ಮಾಡಿದರೆ ನಾವೇ
ಡಾಗ್ ಪಾದರ್

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನಲ್ಲೆ (ಹನಿಗವನ)

                ನಲ್ಲೆ (ಹನಿಗವನ)
                 
*ಎಲ್ಲೆ*

ನಲ್ಲೆ
ಮೊದಲು ನೀನಾಗಿದ್ದೆ
ಮಲ್ಲೆ (ಹೂ)
ನಂತರ ರೂಪಾಂತರ
ಕಬ್ಬಿನ ಜಲ್ಲೆ
ಈಗ ಮಿತಿಮೀರಿದೆ ನಿನ್ನ
ಸುತ್ತಳತೆಯ ಎಲ್ಲೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕನ್ನಡ (ಹನಿಗವನಗಳು)

              *೧*
*ನಮ್ಮಮ್ಮ ಕನ್ನಡ*

ಹೇ ತಮ್ಮ ಇಲ್ನೊಡ
ಮಾತಾಡೊ ನೀ ಕನ್ನಡ
ಯಾಕೋ  ಎನ್ನಡ ಎಕ್ಡಡ
ಹೇಳೋ ನಮ್ಮಮ್ಮ ಕನ್ನಡ

*೨*

*ಕನ್ನಡ ಮಾತಾಡಿ*
ಗಾಂಚಾಲಿ ಬಿಡಿ
ಕನ್ನಡ ಮಾತಾಡಿ
ಮೊದಲು ನಮ್ಮ ಕನ್ನಡಮ್ಮನಿಗೆ
ರೇಷ್ಮೆ ಸೀರೆ
ಕನ್ನಡ ಮಾತಾಡಲು ಕಲಿಯಿರಿ
ಚಿತ್ರ ರಂಗದ ನೀರೆಯರೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಬಂದು ನೋಡು (ಕವನ)

             ೧
       *ಬಂದು ನೋಡು*

ಓ ಬಾಪು ನೀ ಬಂದು ನೋಡು
ಸತ್ಯ ಧರ್ಮ ಅಹಿಂಸೆಯ ಪಾಡು

ಸತ್ಯಕ್ಕೆ ಇಂದು ಬೆಲೆ ಇಲ್ಲ
ಅಸತ್ಯವೆ ನೋಡು ಎಲ್ಲೆಲ್ಲೂ
ಸತ್ಯವನು  ಮಿಥ್ಯೆ ಮಾಡಿ
ಸತ್ಯ ಹರಿಶ್ಚಂದ್ರರೆನುತಿಹರು

ಧರ್ಮವು ಓಟಿನ ಸರಕಾಗಿ
ಅಧರ್ಮದ  ಕೈ ಮೇಲಾಗಿ
ಕಚ್ಚಾಟವಾಡುವರು ತಮ್ಮೋಳಗೆ
ಸ್ವಚ್ಛಮನಸಿನವರೆಂದು ಉಲಿವರು

ಅಹಿಂಸೆಯ ಅರ್ಥ ಕಳೆದುಕೊಂಡಿದೆ
ಹಿಂಸೆಯು ಎಲ್ಲೆಡೆ  ರಾರಾಜಿಸುತಿದೆ
ಪರಸ್ಪರ   ಹಿಂಸಾಚಾರದಲ್ಲಿ‌ ತೊಡಗಿ
ಅಹಿಂಸಾವಾದಿಗಳೆಂದು ಬೀಗುವರು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

02 October 2017

ತಲೆ ತಿರುಗು (ನ್ಯಾನೋ ಕಥೆ)

       ತಲೆ ತಿರುಗು
ನ್ಯಾನೋ ಕಥೆ

ಯು.ಕೆ.ಜಿ ಬಾಲಕಿಗೆ ಗಾಂದೀಜಿಯವರ ಕುರಿತು ಪ್ರಾಜೆಕ್ಟ್ ಮಾಡಲು ಶಿಕ್ಷಕರು ಹೇಳಿದ್ದರು .ಆ ಬಾಲಕಿ ಮನೆಗೆ ಬಂದು ತನ್ನ ಅಪ್ಪನ ಜೇಬಲ್ಲಿದ್ದ ೨೦೦೦ ನೋಟಿನಲ್ಲಿದ್ದ ಗಾಂಧೀಜಿಯವರ ಚಿತ್ರ ಕತ್ತರಿಸಿ .ಅಂಟಿಸಿ  ಪ್ರಾಜೆಕ್ಟ್  ಮುಗಿಸಿದಳು .ಮಗಳ
ಪ್ರಾಜೆಕ್ಟ್ ನೋಡಿ ಅಪ್ಪ ತಲೆ ತಿರುಗಿ ಬಿದ್ದರು

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು.