04 May 2024

ನಮ್ಮುಳಿವಿಗಾಗಿ ಬೆಳೆಸೋಣ ಮರ ಗಿಡ.


 


ನಮ್ಮುಳಿವಿಗಾಗಿ ಬೆಳೆಸೋಣ ಮರ ಗಿಡ.


ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ಒಂದು ಚಿತ್ರ ನನ್ನ ಗಮನ ಸೆಳೆಯಿತು. ಬಹುಶಃ ನೀವೂ ಅದನ್ನು ಗಮನಿಸಿರಬಹುದು. ಆ ಚಿತ್ರದಲ್ಲಿ  ರಸ್ತೆಗಳಲ್ಲಿ ಬೀದಿ ದೀಪಗಳ ಕಂಬಗಳ ಮೇಲೆ ಬೀದಿ ದೀಪದ ಜೊತೆಯಲ್ಲಿ ದೊಡ್ಡ ಫ್ಯಾನ್ ಅಳವಡಿಸಲಾಗಿತ್ತು.ಆ  ಚಿತ್ರದ ಅಡಿಬರಹ ಹೀಗಿತ್ತು.  ಮರಗಳ ಕಡಿದ  ತಪ್ಪಿಗೆ  ಇನ್ನೂ ಕೆಲವೇ ದಿನಗಳಲ್ಲಿ ಈ ಪರಿಸ್ಥಿತಿ ಬರುತ್ತದೆ ಎಚ್ಚರ!


ಕೃತಕವಾಗಿ ಭುವಿಯನು  ತಂಪುಮಾಡಲು ಸಾಧ್ಯವೇನು?|

ಎಲ್ಲಿ ತರುವಿರಿ ಈ ಧರೆಗೆ 

ದೊಡ್ಡದಾದ  ಫ್ಯಾನು?||


ಹೌದಲ್ಲವಾ ಇದ್ದ ಬದ್ದ ಮರಗಿಡ ಕಡಿದು ರಸ್ತೆ, ರೈಲು, ಕಟ್ಟಡ ಕಟ್ಟಲು ನಾವು ಮಾರಣ ಹೋಮ ಮಾಡಿದ ಮರಗಳ ಸಂಖ್ಯೆಗೆ ಲೆಕ್ಕವೇ ಇಲ್ಲ.ಅದರ ಪರಿಣಾಮ ಈಗ ಅನುಭವಿಸುತ್ತಿದ್ದೇವೆ.


ಕೆಲ ದೇಶಗಳಲ್ಲಿ ಪರಿಸರ

ಸಮತೋಲನದಲ್ಲಿದೆ ಕಾರಣ

ಅಲ್ಲಿ ಸಾಕಷ್ಟು ಕಾಡಿದೆ|

ನಮ್ಮ ದೇಶದಲ್ಲಿ ಮರ ಗಿಡ

ಕಡಿದ ಪರಿಣಾಮವಾಗಿ 

ಬಿಸಿಗಾಳಿ ನಮ್ಮ ಕಾಡಿದೆ||


ಈ ಬಿರು ಬೇಸಿಗೆಯ  ಇಂದಿನ ದಿನಗಳಲ್ಲಿ ಕೂಲರ್‌ಗಳು, ಫ್ಯಾನ್‌ಗಳು ಇತ್ಯಾದಿಗಳ ಸಹಾಯದಿಂದ ಜನರು ತಮ್ಮ ಜೀವನವನ್ನು ಕಳೆಯುತ್ತಿದ್ದೇವೆ.  ಇದು ನಾವೇ ಮಾಡಿದ  ತಪ್ಪಿಗೆ ಪ್ರಾಯಶ್ಚಿತ್ತ.  ಇನ್ನೂ ಬರುವ ಸಮಯವು ತುಂಬಾ ಭಯಾನಕವಾಗಿರುತ್ತದೆ.  ಇದು ಊಹಿಸಲು ಅಸಾಧ್ಯವಾಗಿದೆ. ಆದ್ದರಿಂದ ಮುಂಬರುವ ಮಳೆಗಾಲದಲ್ಲಿ ನಾವೆಲ್ಲರೂ ನಮ್ಮ ಸುತ್ತಮುತ್ತ 2 ಸಸಿಗಳನ್ನು  ನೆಡೋಣ ಬರೀ ಸಸಿ ನೆಟ್ಟರೆ ಸಾಲದು ಅದು ಮರವಾಗುವವರೆಗೆ ನಮ್ಮ ಮಕ್ಕಳಂತೆ ಹಾರೈಕೆ ಮಾಡಬೇಕಿದೆ.


ಮರಗಿಡ ಕಡಿದು

ಕಟುಕರಾಗದೆ

ಪರಿಸರ ಉಳಿಸಲು

ಕಟಿಬದ್ದರಾದರೆ

ಭುವಿಯೆ ಸ್ವರ್ಗವು

ನೋಡು ಶ್ರೀದೇವಿತನಯ.





  ಇಂದು  ಭಾರತದ ಜನಸಂಖ್ಯೆಗೆ ಅನುಗುಣವಾಗಿ ಸುಮಾರು 400 ರಿಂದ 500 ಕೋಟಿ ಮರಗಳ ಅಗತ್ಯವಿದೆ. ಪರಿಸರ ತಜ್ಞರ ಪ್ರಕಾರ ನಮ್ಮ ದೇಶದಲ್ಲಿ ಶೇಕಡಾ 3೦ ರಷ್ಟಾದರೂ ಕಾಡಿರಬೇಕು.ಆದರೆ ಅದು ಪ್ರಸ್ತುತ ಇಪ್ಪತ್ತರ ಆಸುಪಾಸಿನಲ್ಲಿದೆ ಅದರ ಪರಿಣಾಮ ಅತಿಯಾದ ಬಿಸಿಲು ಅಕಾಲಿಕ ಮಳೆ ಋತುವಿನಲ್ಲಿ ಏರುಪೇರು. ತಂತ್ರಜ್ಞಾನದ ಬಳಕೆಯಿಂದ ಸಂಪತ್ತಿನ ವಿವೇಚನಾರಹಿತ ಬಳಕೆಯಿಂದ   ಬದುಕನ್ನು ಹುಡುಕುತ್ತಾ ನಾವು ಸಾವಿಗೆ ಎಷ್ಟು ಹತ್ತಿರ ಬಂದಿದ್ದೇವೆ?  ಪರಿಸ್ಥಿತಿ ಹೀಗೆ ಮುಂದುವರೆದರೆ   45 °C ನಿಂದ 50 °C ತಾಪಮಾನ ಸಾಮಾನ್ಯವಾಗುತ್ತದೆ.ಮುಂದೆ ಇದು 55 °C ನಿಂದ 60 °C ಗೆ ಏರಲು  ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮಾನವರು 56 ರಿಂದ 57 °C ನಲ್ಲಿ ಬದುಕುವುದಿಲ್ಲ. ಆದ್ದರಿಂದ ಇದನ್ನು ಅರ್ಥಮಾಡಿಕೊಳ್ಳೋಣ  ಮತ್ತು ಈಗಿನಿಂದ ಸಸ್ಯಗಳನ್ನು ನೆಡಲು ಪ್ರಾರಂಭಿಸೋಣ. 


ಸಮಯ ಕಳೆದದ್ದು ಸಾಕು

ಬೇಗ ಬಾರ|

ನಮ್ಮುಳಿವಿಗಾಗಿ ಬೆಳೆಸೋಣ

ಗಿಡ ಮರ||


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಹಾಗೂ ಸಾಹಿತಿಗಳು

ತುಮಕೂರು

9900925529


No comments: