10 May 2024

ಮರೆಯಲಾಗದ ಎಲಿಪೆಂಟಾ ಬೀಚ್ ನ ಪ್ಯಾರಾ ಸೈಲಿಂಗ್

 



ಅಂಡಮಾನ್11


ಮರೆಯಲಾಗದ ಎಲಿಪೆಂಟಾ ಬೀಚ್  ನ ಪ್ಯಾರಾ ಸೈಲಿಂಗ್ 


ನನ್ನ ಜೀವನದಲ್ಲಿ ಮೊದಲ ಬಾರಿಗೆ ಪ್ಯಾರಾ ಸೈಲಿಂಗ್ ಮಾಡಿದ ಅನುಭವ ನನಗೆ  ಬಹಳ ಮುದ ನೀಡಿತು.ಅದರ ಜೊತೆಯಲ್ಲಿ ಜೆಟ್ ಸ್ಕಿ, ಬನಾನಾ  ರೈಡ್ ,ಸ್ನಾರ್ಕಲಿಂಗ್ ಮುಂತಾದ ಜಲ ಕ್ರೀಡೆಗಳಲ್ಲಿ ಮೈಮರೆತ ದಿನವೆಂದರೆ  ಅಂಡಮಾನ್ ನ ಎಲಿಫೆಂಟಾ ಬೀಚ್ ಗೆ ಬೇಟಿ ನೀಡಿದ ದಿನ.

ಸ್ವರಾಜ್ ದ್ವೀಪ್ ನಿಂದ ಜೆಟ್ಟಿಯಲ್ಲಿ  ಸಾವಿರ ರೂಗಳ ಟಿಕೆಟ್ ಪಡೆದು ಬೋಟ್ ಮೂಲಕ ಸುಮಾರು ಇಪ್ಪತ್ತು ನಿಮಿಷಗಳ ಮತ್ತೊಂದು ಸೀ ಜರ್ನಿಗೆ ನಾವು ಸಾಕ್ಷಿಯಾದೆವು.ಎಂದಿನಂತೆ ಸಮುದ್ರದ ಸೌಂದರ್ಯ ನಮ್ಮನ್ನು ಮೂಕವಾಗಿಸಿದರೂ ಕ್ಯಾಮರಾಗಳು ಮಾತ್ರ  ಪಟ ಪಟ   ಸದ್ದು ಮಾಡುತ್ತಾ ದೃಶ್ಯಗಳ ಸೆರೆಹಿಡಿಯುವಲ್ಲಿ ಬ್ಯುಸಿಯಾಗಿದ್ದವು.


ಹ್ಯಾವ್ಲಾಕ್ ದ್ವೀಪದಲ್ಲಿರುವ ಎಲಿಫೆಂಟಾ ಬೀಚ್ ಅಂಡಮಾನ್ ದ್ವೀಪಗಳಲ್ಲಿನ ಅತ್ಯಂತ ವಿಶಿಷ್ಟವಾದ ಕಡಲತೀರಗಳಲ್ಲಿ ಒಂದಾಗಿದೆ. ಇದು ನೀರಿನ ಚಟುವಟಿಕೆಗೆ ಹೆಸರುವಾಸಿಯಾದ ಬೆರಗುಗೊಳಿಸುವ ಬೀಚ್ ಆಗಿದೆ. ಎಲಿಫೆಂಟಾ  ಬೀಚ್ ಅಂಡಮಾನ್ ದ್ವೀಪಸಮೂಹದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಬೀಚ್ ಆಗಿದೆ. ಒಂದಾನೊಂದು ಕಾಲದಲ್ಲಿ ಈ ದ್ವೀಪದಲ್ಲಿ ಆನೆಗಳು ಇದ್ದವಂತೆ  ಅವುಗಳು ಕಡಲತೀರದ ತೀರದಲ್ಲಿ ತಿರುಗಾಡುತ್ತಿದ್ದವಂತೆ  ಆದ್ದರಿಂದ ಈ    ಕಡಲತೀರಕ್ಕೆ ಅದರ ಹೆಸರು ಬಂದಿದೆ. ಆದರೆ ನಾವು ಹೋದಾಗ ಅಲ್ಲಿ ಒಂದೂ ಆನೆ ಕಂಡುಬರಲಿಲ್ಲ.ಅದರ ಬದಲಾಗಿ ಮಳೆರಾಯ ನಮ್ಮನ್ನು ಸ್ವಾಗತಿಸಿದ! ಮುರ್ನಾಲ್ಕು ದಿನ ಬಿಸಿಯಿಂದ ಬಸವಳಿದ ನಾವು ವರ್ಷಾಧಾರೆಗೆ ಸಂತಸ ವ್ಯಕ್ತಪಡಿಸುತ್ತಾ ಸಮುದ್ರದ ಆಟಗಳನ್ನು ಆಡಲು ಇದು ಪೂರ್ವ ಸಿದ್ದತೆ ಎಂದು ಭಾವಿಸಿ ಎಂಜಾಯ್ ಮಾಡಿದೆವು. ವರುಣದೇವ ಕೃಪೆ ಮಾಡಿದ ಪರಿಣಾಮ ಮೊದಲು ನಮ್ಮೆಲ್ಲಾ ಸಹ ಪ್ರವಾಸಿಗರು ಬೋಟ್ ಕಂಪನಿಯವರು ನೀಡಿದ ಕಾಂಪ್ಲಿಮೆಂಟರಿ  ಸ್ನಾರ್ಕಲಿಂಗ್ ಮಾಡಲು ಸಿದ್ದರಾಗಿದ್ದೆವು.ಸ್ನಾರ್ಕಲಿಂಗ್ ಎಂದರೆ ನಮ್ಮ ಮುಖದ ಭಾಗಕ್ಕೆ ಹೆಲ್ಮೆಟ್ ರೀತಿಯಲ್ಲಿ ಕಾಣುವ ಟ್ರಾನ್ಸ್ಪರೆಂಟ್  ಸಾಧನ ಅಳವಡಿಸಿ ನುರಿತ ಮುಳುಗುಕಾರರು ನಮ್ಮನ್ನು ಸಮುದ್ರದ ಒಳಭಾಗ ತೋರಿಸುವ ಒಂದು ಜಲ ಕ್ರೀಡೆ. ಇದು  ಎಲ್ಲಾ ವಯೋಮಾನದವರು ಮಾಡಬಹುದಾದ ಜಲ ಕ್ರೀಡಾ ಚಟುವಟಿಕೆ. ನಾನೂ ಕೂಡಾ ಸ್ನಾರ್ಕಲಿಂಗ್ ಮಾಡಿದೆ ಸಾಗರದ ಆಳದ ಜಲಜೀವಿಗಳ ದರ್ಶನವಾಯಿತು  ಆದರೆ ಈ ಮೊದಲೇ ಸೀ ವಾಕಿಂಗ್ ಮಾಡಿದ ನನಗೆ ಇದೇನು ಅಷ್ಟು ಖುಷಿ ನೀಡಲಿಲ್ಲ.


ಮತ್ತೆ ಸಮುದ್ರದ ದಂಡೆಗೆ ಬಂದಾಗ ಒಣಗಿದ ದೊಡ್ಡದಾದ ಮರಗಳ ದಿಮ್ಮಿಗಳು ಕಂಡು ಅಚ್ಚರಿಯಿಂದ ವಿಚಾರಿಸಿದಾಗ 

 ಇವುಗಳು 2004 ರಲ್ಲಿ ದ್ವೀಪಕ್ಕೆ ಅಪ್ಪಳಿಸಿದ ಸುನಾಮಿಯ  ಅಲೆಗಳ ಹೊಡೆತಕ್ಕೆ ಸಿಲುಕಿ ಧರೆಗುರುಳಿದ ಮರದ  ಅವಶೇಷಗಳಾಗಿವೆ ಎಂಬ ಮಾಹಿತಿ ಲಭ್ಯವಾಯಿತು.

ಮತ್ತೆ ಹಸಿರು ನೀರಿನೆಡೆಗೆ ಹೊರಟ ನಾನು ವಿವಿಧ ಜಲ ಸಾಹಸ ಕ್ರೀಡೆಯಲ್ಲಿ ಭಾಗವಹಿಸಲು ಸಿದ್ದನಾದೆ.ಚಲನಚಿತ್ರಗಳಲ್ಲಿ ಹೀರೋಗಳು ನೀರಿನ ಮೇಲೆ ಬೈಕ್ ಓಡಿಸುವ ಸಾಹಸ ನೋಡಿ ವಾವ್ .. ಎಂದಿದ್ದ ನಾನು ಅಂದು ಜೆಟ್ ಸ್ಕಿ ಯಲ್ಲಿ ವ್ರೂಂ ವ್ರೂಂ ಎಂದು ಎಕ್ಸಿಲೇಟರ್ ನೀಡಲು ಸಿದ್ದನಾಗಿದ್ದೆ.ಆದರೆ ನನ್ನ ಆಸೆಯನ್ನು ನಮ್ಮ ಜಲ ಮಾರ್ಗದರ್ಶಕ ಪೂರಾ ಈಡೇರಿಸದಿದ್ದರೂ ಕೊನೆಯಲ್ಲಿ ಒಂದು ರೌಂಡ್ ನನ್ನ ಕೈಗೆ ಕೊಟ್ಟಾಗ ಮೊದಲು ಸೈಕಲ್ ಹೊಡೆದ, ಮೊದಲ ಬಾರಿಗೆ ಬೈಕ್ ಹೊಡೆದ, ಮೊದಲ ಬಾರಿಗೆ ಕಾರ್ ಚಲಾಯಿಸಿದ ಆನಂದ ಅನುಭವಿಸಿದೆ.ನನ್ನ ಈ ಸಾಹಸವನ್ನು ದಡದಿಂದ  ಜಲ ಆಟದ ನಿರ್ವಾಹಕರು  ಪೋಟೋ ಮತ್ತು ವೀಡಿಯೋ ಮೂಲಕ ಸೆರೆಹಿಡಿದಿದ್ದರು.ಈಗಲೂ ಆಗಾಗ್ಗೆ ಆ ವೀಡಿಯೋ ಮತ್ತು ಪೋಟೋ ನೋಡಿ ಪುಳಕಿತಗೊಳ್ಳುತ್ತೇನೆ.


ಜೆಟ್ ಸ್ಕಿ ಗುಂಗಿನಿಂದ ಹೊರಬಂದು ಸಮುದ್ರದ ಇನ್ನಿತರ ಕ್ರೀಡೆಗಳಾದ 90 ಡಿಗ್ರಿ ಕಪಲ್ ಡ್ರೈವ್, ಬನಾನ ರೈಡ್, ಆಕ್ಟೋಪಸ್ ರೈಡ್ , ಹೀಗೆ ಜಲ ಕ್ರೀಡೆಯಲ್ಲಿ ಮಗ್ನನಾಗಿ ಬಿಟ್ಟಿದ್ದೆ.

ಸಾಗರದ ಮೇಲಿನ ಆಗಸದಲ್ಲಿ ತೇಲುವ ಪ್ಯಾರಾಚ್ಯೂಟ್ ನೋಡಿ ನಾನೂ ಪ್ಯಾರಾ ಸೈಲಿಂಗ್ ಮಾಡಲು ಸಿದ್ದನಾದೆ. ಬೆಲೆ ಕೇಳಿ ಮೊದಲು ಸ್ವಲ್ಪ ಹಿಂಜರಿದರೂ ಮತ್ತೆ ಮನಸ್ಸು ಮಾಡಿ ಪ್ಯಾರಾಗ್ಲೈಡಿಂಗ್ ಮಾಡಲು ಹೊರಟೆ. ನನ್ನ ಸಹಪ್ರವಾಸಿಗರು ಕೆಲವರು ಈ ಕ್ರೀಡೆಯಲ್ಲಿ ಭಾಗವಹಿಸಲು ಆಸೆ ವ್ಯಕ್ತಪಡಿಸಿ ದುಬಾರಿ ಹಣ ತೆರಲು ಅಂದರೆ ಮೂರೂವರೆ ಸಾವಿರ ರೂಪಾಯಿ ಪಾವತಿಸಲು ಸಿದ್ದವಿದ್ದರೂ ಅವರ ವಯಸ್ಸು ಮತ್ತು ಆರೋಗ್ಯದ ಕಾರಣ ಹೇಳಿ ಅನುಮತಿ ನಿರಾಕರಿಸಿದರು. ನೀವೂ ಸಹ ಇಂತಹ ಸಾಹಸ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಆಸೆಯಿದ್ದರೆ ನಿಮ್ಮ ವಯಸ್ಸು  ಐವತ್ತರ ಒಳಗಿದ್ದಾಗಲೇ  ಮಾಡಿ ಬಿಡಿ.


ಪ್ಯಾರಾಸೈಲಿಂಗ್ ಅನ್ನು ಪ್ಯಾರಾಸೆಂಡಿಂಗ್, ಪ್ಯಾರಾಸ್ಕಿಯಿಂಗ್ ಅಥವಾ ಪ್ಯಾರಾಕೈಟಿಂಗ್ ಎಂದೂ ಕರೆಯುತ್ತಾರೆ. ಇದು ಜಲಮನರಂಜನಾ  ಚಟುವಟಿಕೆಯಾಗಿದ್ದು ಪ್ಯಾರಾಸೈಲ್ ವಿಂಗ್ ಎಂದು ಕರೆಯಲ್ಪಡುವ ಧುಮುಕುಕೊಡೆಯನ್ನು ಹೋಲುವ ವಿಶೇಷವಾಗಿ ವಿನ್ಯಾಸಗೊಳಿಸಿದ ಮೇಲಾವರಣ ರೆಕ್ಕೆಗೆ ಲಗತ್ತಿಸಿ ಯಂತ್ರ ಚಾಲಿತವಾದ  ದೋಣಿಯ  ಹಿಂದೆ ವ್ಯಕ್ತಿಯನ್ನು ಎಳೆಯಲಾಗುತ್ತದೆ . 

ಮೊದಲು ನಾನು ಅವರ ದೋಣಿ ಏರಿ ಸಮುದ್ರ ತೀರದಿಂದ ಎರಡು ಕಿಲೋಮೀಟರ್ ಆಳ ಸಮುದ್ರದ ಕಡೆ ಹೊರಟೆ. ಅಲ್ಲಿ ಪ್ಯಾರಾ ಸೈಲಿಂಗ್ ತಂಡ ನನಗಾಗಿ ಕಾದಿತ್ತು. ವಿಶೇಷವಾದ ವಿನ್ಯಾಸದ ದೊಡ್ಡ ಕೊಡೆಗೆ ಕೆಳಗಿನಿಂದ ನನ್ನ ಬಂಧಿಸಿ ನಿಧಾನವಾಗಿ ದೋಣಿ ಚಲಿಸಲು ಆರಂಭಿಸಿದರು. ನಾನು ದೋಣಿಯಿಂದ ಬೇರ್ಪಟ್ಟು ಕ್ರಮೇಣವಾಗಿ ನೀರಿನ ಮೇಲಿನ ಆಗಸದ ಕಡೆ  ಮೇಲಕ್ಕೆ ಮೇಲಕ್ಕೆ ಚಲಿಸುತ್ತಿದ್ದೆ.ಕೆಳಗಿನ ಹಸಿರಾದ ಸಾಗರ ,ದೂರದಲ್ಲಿ ಕಾಣುವ ಸ್ವರಾಜ್ ದ್ವೀಪ, ಅನತಿದೂರದಲ್ಲಿ  ಅತಿ ಚಿಕ್ಕದಾಗಿ ಕಾಣುವ ಜನರು ಕಂಡು ಬಹಳ ಸಂತಸ ಪಟ್ಟೆ. ಯಂತ್ರಚಾಲಿತ ದೋಣಿ ಸಾಗುತ್ತಲೇ ಇತ್ತು ನಾನು ಮೇಲೇರುತ್ತಲೇ ಇದ್ದೆ. ಅಂದು ನಾನು ಗರಿಷ್ಟ ಮುನ್ನೂರಾ ಅರವತ್ತು ಅಡಿ ಎತ್ತರದಲ್ಲಿ ಹಾರಾಡಿದ್ದೆ! ಹತ್ತು ನಿಮಿಷಗಳ ಹಾರಾಟದ ನಂತರ ಕ್ರಮೇಣವಾಗಿ ನಾನು   ಆಗಸದ  ಕಡೆಯಿಂದ ಇಳಿಯಲು ಆರಂಬಿಸಿದ್ದೆ.ಏರಿದವನು ಇಳಿಯಲೇ ಬೇಕಲ್ಲವೇ? 

ಮತ್ತೆ ದೋಣಿಗೆ ಇಳಿದು ಅಲ್ಲಿಂದ ಇನ್ನೊಂದು ದೋಣಿಯೇರಿ ತೀರ ಸೇರಿದೆ.ನನಗಾಗಿ ನನ್ನ ಸಹ ಪ್ರವಾಸಿಗರು ಕಾಯುತ್ತಿದ್ದರು. ಅವರ ಜೊತೆಗೂಡಿ ಮತ್ತೊಂದು ದೋಣಿಯೇರಿ  ಮತ್ತೆ ಮೂವತ್ತು ಕಿಲೋಮೀಟರ್ ಪಯಣ ಬೆಳೆಸಿ ಹ್ಯಾವ್ ಲಾಕ್ ದ್ವೀಪದ ನಮ್ಮ ರೆಸಾರ್ಟ್ ತಲುಪಿದೆವು. ಜಲ ಸಾಹಸಕ್ರೀಡೆಗಳಲ್ಲಿ ತೊಡಗಿದ ಪರಿಣಾಮವಾಗಿ ಹೊಟ್ಟೆ ತಾಳ ಹಾಕುವಾಗ ಪುಷ್ಕಳ ಭೋಜನ ನಮ್ಮ ಸ್ವಾಗತಿಸಿತು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


No comments: