ಅಂಡಮಾನ್ ೯
ನಾರ್ಥ್ ಬೇ ಐಲ್ಯಾಂಡ್ ನಲ್ಲಿ ಸೀ ವಾಕಿಂಗ್
ಭಾರತದ ಒಂದೊಂದು ಕರೆನ್ಸಿ ನೋಟಿನ ಹಿಂದೆ ನಮ್ಮ ದೇಶದ ಸಂಸ್ಕೃತಿ ಪರಂಪರೆಯನ್ನು ಸಾರುವ ಮಹತ್ವದ ಚಿತ್ರಗಳನ್ನು ಮುದ್ರಿಸಿರುವರು.ಇಪ್ಪತ್ತು ರೂಪಾಯಿಯ ನೋಟಿನ ಹಿಂದೆ ಅಂಡಮಾನ್ ನ ನಾರ್ಥ್ ಬೇ ದ್ವೀಪದ ಚಿತ್ರ ಪ್ರಿಂಟ್ ಆಗಿದೆ.ಅಂತಹ ನೀರಿನ ಮೇಲಿನ ಸ್ವರ್ಗಕ್ಕೆ ಭೇಟಿ ನೀಡಲು ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ.
ಪೋರ್ಟ್ ಬ್ಲೇರ್ ನ ಅಂಡಮಾನ್ ವಾಟರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ತಲುಪಿದ ನಾವು ಅಲ್ಲಿ ಒಂದು ಗುಂಪು ಪೋಟೋ ಹಾಗೂ ಸೆಲ್ಪಿಗಳನ್ನು ತೆಗೆದುಕೊಂಡು ಮುಂದೆ ಸಾಗಿದಾಗ ಒಂದು ಸ್ಮಾರಕ ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ನೋಡಿದಾಗ ಸುನಾಮಿ ಮೆಮೋರಿಯಲ್ ಎಂಬ ಬೋರ್ಡ್ ಕಣ್ಣಿಗೆ ಬಿತ್ತು. ಸುನಾಮಿಯ ಪ್ರಾಕೃತಿಕ ಹೊಡೆತಕ್ಕೆ ತತ್ತರಿಸಿ ಪ್ರಾಣ ತೆತ್ತವರ ನೆನಪಿಗಾಗಿ ಆ ಸ್ಮಾರಕ ನಿರ್ಮಿಸಲಾಗಿದೆ. ಅಲ್ಲಿ ಒಂದು ಕ್ಷಣ ನಿಂತು ಅಗಲಿದ ಆತ್ಮಗಳಿಗೆ ನಮನ ಸಲ್ಲಿಸಿ ಮುಂದೆ ಸಾಗಿದೆವು.
ಪೋರ್ಟ್ ಬ್ಲೇರ್ ನಿಂದ ಜೆಟ್ಟಿ ಮೂಲಕ ನಾರ್ತ್ ಬೇ ದ್ವೀಪ ತಲುಪಬೇಕು. ಮಹೇಶ್ವರಿ ಎಂಬ ಜೆಟ್ಟಿ ಏರಿ ನಾರ್ಥ್ ಬೇ ಕಡೆಗೆ ಜಲಪಯಣ ಆರಂಬಿಸಿದೆವು.
ಆ ಜರ್ನಿಯೇ ಒಂದು ರೋಮಾಂಚನಕಾರಿ ಅನುಭವ ಸುತ್ತಲೂ ನೀರು ಅಲ್ಲಲ್ಲಿ ದೂರದಲ್ಲಿ ಕಾಣುವ ದ್ವೀಪಗಳು ಅದಕ್ಕೆ ಪೂರಕವಾಗಿ ನಮ್ಮ ಗೈಡ್ ಹಿನ್ನೆಲೆಯಲ್ಲಿ ಆ ಪ್ರದೇಶದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು. ನಮ್ಮ ಜೆಟ್ಟಿ ಸಾಗುತ್ತಿರುವಾಗ "ದೋಣಿ ಸಾಗಲಿ ಮುಂದೆ ಹೋಗಲಿ ..ದೂರ ತೀರವ ಸೇರಲಿ.." ಎಂಬ ಹಾಡು ನೆನಪಾಗಿ ನಾರ್ತ್ ಬೇ ಐಲ್ಯಾಂಡ್ ಸೇರಲು ನನ್ನ ಮನ ಹಾತೊರೆಯುತ್ತಿತ್ತು.
ನಮ್ಮ ಜೆಟ್ಟಿ ನಾರ್ತ್ ಬೇ ದ್ವೀಪ ತಲುಪಿದಾಗ ಅಲ್ಲಿ ನಮಗೆ ಒಂದೂವರೆ ಗಂಟೆ ಸಮಯವಿದೆ ಎಂಬುದನ್ನು ನೆನೆಪಿಸಿ ಆ ದ್ವೀಪದ ಸೌಂದರ್ಯ ಸವಿಯಲು ನಮ್ಮ ಗೈಡ್ ಹೇಳಿದರು.
ಸಮಯ ಒಂದು ಗಂಟೆಯಾದ್ದರಿಂದ ಒಂದು ಗುಡಿಸಲ ಕೆಳಗೆ ಕುಳಿತು ಉಪಾಹಾರ ಸೇವಿಸಿದೆವು.
ನಾರ್ತ್ ಬೇ ಐಲ್ಯಾಂಡ್
ಅಂಡಮಾನ್ ಸುಂದರ ದ್ವೀಪಗಳಲ್ಲಿ ಒಂದಾಗಿದೆ. ಹವಳದ ಬಂಡೆಗಳು ಮತ್ತು ಹರ್ಷದಾಯಕ ಸಾಹಸ ಚಟುವಟಿಕೆಗಳಾದ
ಸ್ಕೂಬಾ ಡೈವಿಂಗ್, ಸ್ನಾರ್ಕೆಲಿಂಗ್, ಸಮುದ್ರ ವಾಕಿಂಗ್ ಮತ್ತು ಗಾಜಿನ ದೋಣಿ ಸವಾರಿಯಂತಹ ಚಟುವಟಿಕೆಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ. ಅಂಡಮಾನ್ ನ ನೀಲ್ ಐಲ್ಯಾಂಡ್ ಮತ್ತು ಹ್ಯಾವ್‌ಲಾಕ್ ನಲ್ಲಿ ಇಂತಹ ಸಮುದ್ರ ಆಟಗಳಿಗೆ ಅವಕಾಶವಿದೆ.
ಈ ದ್ವೀಪದಲ್ಲಿ ಸ್ನಾರ್ಕ್ಲಿಂಗ್ ಮತ್ತು ಸ್ಕೂಬಾ ಡೈವಿಂಗ್ ಆಪರೇಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ವಿವಿಧ ಸಮುದ್ರ ಆಟಗಳ ವಿವರ ಮತ್ತು ಬೆಲೆಯನ್ನು ನಮಗೆ ಅರ್ಥ ಮಾಡಿಸುತ್ತಾರೆ. ನಮ್ಮ ಪ್ರವಾಸದ ಗುಂಪಿನ ಬಹುತೇಕ ಸಹಪಾಠಿಗಳು ಸ್ನಾರ್ಕ್ಲಿಂಗ್ ಮಾಡಲು ತೆರಳಿದರು. ಆದರೆ ನಾನು ಸೀ ವಾಕ್ ಮಾಡಲು ತೀರ್ಮಾನಿಸಿ ಸಮುದ್ರದ ಸಾಹಸಕ್ಕೆ ಸಿದ್ದನಾದೆ. ಮೂರು ಸಾವಿರ ಶುಲ್ಕ ನೀಡಿ ಸುಮಾರು ಎರಡು ಕಿಲೋಮೀಟರ್ ಸಮುದ್ರದಲ್ಲಿ ದೋಣಿಯ ಮೂಲಕ ಹೋಗಿ ಅಲ್ಲಿ ಸೀ ವಾಕಿಂಗ್ ಗೆ ಮೀಸಲಾದ ಸ್ಥಳವನ್ನು ತಲುಪಿದೆ. ಅಲ್ಲಿ ಸುಮಾರು ಹದಿನೈದು ನಿಮಿಷಗಳ ಕಾಲ ಸೀ ವಾಕಿಂಗ್ ಗೆ ತರಬೇತಿ ನೀಡಿದರು. ಸಮುದ್ರದ ಆಳದಲ್ಲಿ ನಾವು ಸನ್ನೆಯ ಮೂಲಕ ಸಂಭಾಷಣೆ ಮಾಡುವುದನ್ನು ಹೇಳುತ್ತಾರೆ.ಪಾರದರ್ಶಕ ಮುಂಬಾಗವನ್ನು ಹೊಂದಿರುವ ಹೆಲ್ಮೆಟ್ ಮಾದರಿಯ ಬ್ರೀಟರ್ ನ್ನು ನನ್ನ ತಲೆಯ ಮೇಲೆ ಅಳವಡಿಸಿ ಅದಕ್ಕೆ ಆಕ್ಸಿಜನ್ ಸಂಪರ್ಕ ನೀಡಿ ನನ್ನ ಜೊತೆಯಲ್ಲಿ ಒಬ್ಬ ನುರಿತ ಮುಳುಗುಗಾರರು ಬಂದರು ಆಗ ನಮ್ಮ ಸಮುದ್ರದಾಳದ ಪಯಣ ಆರಂಭವಾಯಿತು. ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲ್ ನಲ್ಲಿ ನಾನು ನೋಡಿದ ಚಿತ್ರಣವು ನನ್ನ ಅನುಭವ ಆಗುತ್ತಿರುವುದಕ್ಕೆ ಥ್ರಿಲ್ ಆಗಿದ್ದೆ.
ಮೊದಲು ಏಣಿಯ ಸಹಾಯದಿಂದ ನಿಧಾನವಾಗಿ ನೀರಿಗಿಳಿದೆ ನನ್ನ ಪಕ್ಕದಲ್ಲೇ ನನ್ನೊಂದಿಗೆ ತಜ್ಞ ಮುಳುಗುಗಾರ ನೀರಿನ ಆಳಕ್ಕೆ ಇಳಿಯುತ್ತಿದ್ದ ಸನ್ನೆಯ ಮೂಲಕ ಸಂವಹನ ಮಾಡುತ್ತಿದ್ದ ಸುಮಾರು ಇಪ್ಪತ್ತು ಅಡಿ ಆಳಕ್ಕೆ ಇಳಿದಾಗ ನನ್ನ ಕಿವಿಯಲ್ಲಿ ಏನೋ ತುಂಬಿದಂತೆ ಭಾರವಾದಂತಾಯಿತು ನನ್ನ ಜೊತೆಗಾರನಿಗೆ ಸನ್ನೆಯ ಮೂಲಕ ಆತಂಕದಿಂದ ಹೇಳಿದೆ.
ಆತ ಸನ್ನೆಯ ಮೂಲಕವೇ ಮೂಗು ಹಿಡಿದುಕೊಂಡು ಬಾಯಲ್ಲಿ ಉಸಿರಾಡಲು ಪ್ರಯತ್ನ ಮಾಡಿ ಉಸಿರು ಹೊರ ಹಾಕಲು ಪ್ರಯತ್ನ ಮಾಡಿ ಎಂದು ಸನ್ನೆ ಮಾಡಿದ ಅದರಂತೆ ಮಾಡಿದೆ ಕಿವಿ ಪ್ರೀಯಾಯಿತು.ಮತ್ತೂ ಆಳಕ್ಕೆ ಇಳಿದೆವು.ಅಲ್ಲಿ ನೀರ ಜೀವ ವೈವಿಧ್ಯತೆ ಅನಾವರಣವಾಯಿತು ಬಣ್ಣ ಬಣ್ಣದ ಮೀನುಗಳು ಹವಳ, ಮತ್ತು ಇತರ ಮೀನುಗಳು ನಮ್ಮ ಕೈ ಮೈ ಮುಟ್ಟಿ ಸಾಗುತ್ತಿದ್ದವು. ಈ ಮಧ್ಯ ನಮ್ಮ ಮುಂದೆ ಬಂದ ಮತ್ತೊಬ್ಬ ಮುಳುಗುಕಾರ ನಮ್ಮ ಪೋಟೋ ಮತ್ತು ವೀಡಿಯೋ ಚಿತ್ರಿಸಿಕೊಂಡು ಹೋದ.
ಆಗ ನಾವು ಸಮುದ್ರದ ತಳಭಾಗ ತಲುಪಿ ನಿಜವಾದ ಸೀ ವಾಕ್ ಮಾಡಿದೆವು.ನಾನು ನೋಡಿರದ. ವೈವಿಧ್ಯಮಯ ಜಲಚರರಾಶಿಯನ್ನು ಅಲ್ಲಿ ಕಂಡೆ. ಹವಳದ ವಿವಿಧ ರೂಪಗಳು ನನ್ನ ಕಣ್ಣಿಗೆ ಹಬ್ಬವನ್ನು ಉಂಟು ಮಾಡಿದವು.ನನಗೆ ಇನ್ನೂ ಸಂತೋಷದ ಅಚ್ಚರಿಯ ಘಟನೆ ಆಗ ಜರುಗಿತು. ನನ್ನ ಸಹಮುಳುಗುಗಾರ ಕೈಯಲ್ಲಿ ಏನೋ ತಂದು ನನ್ನ ಕೈಗೆ ಕೊಟ್ಟು ನಿಧಾನವಾಗಿ ಬಿಡಲು ಸನ್ನೆ ಮಾಡಿದ.ಅದು ಮಣ್ಣಿನಂತಹ ವಸ್ತು ನಾನು ಕೈಯಲ್ಲಿ ಬಿಗಿಯಾಗಿ ಹಿಡಿದು ನಿಧಾನವಾಗಿ ಸ್ವಲ್ಪ ಸ್ವಲ್ಪ ಕೈಯಿಂದ ಹೊರ ಬಿಡುವಾಗ ಬಣ್ಣ ಬಣ್ಣದ ಮೀನುಗಳು ಜೀವಿಗಳು ಬಂದು ನನ್ನ ಕೈಗೆ "ಮುತ್ತಿ"ಗೆ ಹಾಕಿದವು.
ಸಾಗರದಾಳದಲ್ಲಿ ನನ್ನ ಕೈಗಳಿಗೆ
ಜಲಚರ ಪ್ರಾಣಿಗಳು ಹಾಕಿದವು ಮುತ್ತಿಗೆ|
ನನ್ನ ಕೈಗಳು ರೋಮಾಂಚನಗೊಂಡವು
ಜಲಚರಗಳ ಸವಿ ಮುತ್ತಿಗೆ||
ಈ ವಿದ್ಯಮಾನ ಕಂಡು ಒಮ್ಮೆ ಖುಷಿ ಮತ್ತೊಮ್ಮೆ ಭಯ ಒಟ್ಟಿಗೆ ಆಯಿತು. ನನ್ನ ಆತಂಕ ಕಂಡ ಅವನು ಕೈಸನ್ನೆಯ ಮೂಲಕ ಧೈರ್ಯ ತುಂಬಿದ.ಸುಮಾರು ಮೂವತ್ತು ನಿಮಿಷಗಳ ಸೀ ವಾಕ್ ನ ಅದ್ಭುತ ಅನುಭವ ಪಡೆದ ನನಗೆ ಮೇಲ್ಮುಖವಾಗಿ ಚಲಿಸಲು ಅವನು ಸನ್ನೆ ಮಾಡಿದ ಒಲ್ಲದ ಮನಸ್ಸಿನಿಂದ ನಿಧಾನವಾಗಿ ಮೇಲ್ಮುಖ ಚಲನೆ ಮಾಡಿದೆವು. ನೀರಿನಿಂದ ಮೇಲೆ ಬಂದು ಬಟ್ಟೆಗಳನ್ನು ಬದಲಾಯಿಸಿಕೊಂಡು ನನ್ನ ಪೋನ್ ಗೆ ಸೀ ವಾಕಿಂಗ್ ನ ಪೋಟೋ ಮತ್ತು ವೀಡಿಯೋಗಳನ್ನು ಹಾಕಿಸಿಕೊಂಡು ಮತ್ತೆ ದೋಣಿಯೇರಿ ನಮ್ಮ ಸಹಪ್ರವಾಸಿಗರನ್ನು ಸೇರಿಕೊಂಡೆ.ಅವರೆಲ್ಲರೂ ಒಮ್ಮೆಗೇ ಕುತೂಹಲದಿಂದ ಕೇಳಿದರು ಹೇಗಿತ್ತು ಸೀ ವಾಕ್? ನಾನು ಒಂದೇ ಮಾತಲ್ಲಿ ಹೇಳಿದೆ ವರ್ಣಿಸಲಸದಳ!
ಅದಕ್ಕೆ ಪೂರಕವಾಗಿ ಪೋಟೋ ಮತ್ತು ವೀಡಿಯೋ ತೋರಿಸಿದೆ.ಅವರು ಬಹಳ ಖುಷಿಪಟ್ಟರು.
ಇತ್ತೀಚಿಗೆ ನಮ್ಮ ಮಾನ್ಯ ಪ್ರಾಧಾನಿಗಳು ಗುಜರಾತ್ ನಲ್ಲಿ ಸ್ಕೂಬಾ ಡೈವಿಂಗ್ ಮಾಡಿದ ದೃಶ್ಯಗಳನ್ನು ನೋಡಿದ ನನಗೆ ನನ್ನ ಅಂಡಮಾನ್ ನ ನಾರ್ಥ್ ಬೇ ಯ ಸೀ ವಾಕಿಂಗ್ ನೆನಪಾಗಿ ಮತ್ತೊಮ್ಮೆ ರೋಮಾಂಚಿತನಾದೆ ನೀವು ಇಂತಹ ಅನುಭವ ಪಡೆಯಲು ಅಂಡಮಾನ್ ನ ನಾರ್ಥ್ ಬೇ ದ್ವೀಪಕ್ಕೆ ಒಮ್ಮೆ ಭೇಟಿ ಕೊಡಬಹುದು.
ಸಿಹಿಜೀವಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
9900925529
No comments:
Post a Comment